

ಆಕೆ ಗದ್ದೆಗಿಳಿದರೆ ಕೆಲಸದಲ್ಲಿ ಹಿಮ್ಮೆಟ್ಟಿಸುವವರೇ ಇಲ್ಲ. ಅವರ ಆತ್ಮಸ್ಥೈರ್ಯದ ಮುಂದೆ ವಿಧಿಯಾಟವೂ ನಡೆಯುವುದಿಲ್ಲವೇನೋ. ದೃಷ್ಟಿದೋಷ ಅವರಿಗೆ ಲೆಕ್ಕಕ್ಕೇ ಇಲ್ಲ. ಬದುಕೆಂಬ ಸವಾಲನ್ನು ಹೇಗೆ ದಿಟ್ಟತನದಿಂದ ಎದುರಿಸಬೇಕು ಎಂಬುದಕ್ಕೆ ಅವರು ಅನ್ವರ್ಥ. ಅವರೇ 35 ವಯಸ್ಸಿನ ಅಂಧ ಮಹಿಳೆ ಶೋಭಾ ಮಲ್ಲಾಡದ.
ಎಷ್ಟೋ ಜನ ಎಲ್ಲ ಇದ್ದೂ ಏನೂ ಇಲ್ಲ ಎಂಬಂತೆ ನಿರುತ್ಸಾಹದಿಂದ ಬದುಕುತ್ತಾರೆ. ಕೆಲವರು ಸಣ್ಣಸಣ್ಣ ಸಮಸ್ಯೆ ಬಂದರೂ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ಎಂಥ ಕೊರತೆ, ವೈಕಲ್ಯದ ಮಧ್ಯೆಯೂ ಸ್ಥೈರ್ಯ ಕಳೆದುಕೊಳ್ಳದೆ ಬದುಕಿ, ಕಷ್ಟ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಧೈರ್ಯದಿಂದ ಮುನ್ನಡೆಯಬೇಕು ಎಂಬುದನ್ನು ತೋರಿಸುತ್ತಿದ್ದಾರೆ ಗದಗ ಜಿಲ್ಲೆ ಹೆಸರೂರ ಗ್ರಾಮದ ಶೋಭಾ ಮಲ್ಲಾಡದ.
ಹೂವಿನಹಡಗಲಿ ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದ ಹುಲಗಪ್ಪ ಮಲ್ಲಾಡದ ಹಾಗೂ ಲಕ್ಷ್ಮವ್ವ ಅವರ ಪುತ್ರಿ ಇವರು. ಹುಟ್ಟು ಅಂಧರಾದ ಹೆಸರೂರಿನ ದೇವಕ್ಕ ತಳವಾರ ಶೋಭಾರ ದೊಡ್ಡಮ್ಮ. ಅವರ ಬಳಿ ಮೂರು ವರ್ಷದವಳಿದ್ದಾಗಲೇ ಶೋಭಾಳನ್ನು ಬಿಡಲಾಗಿತ್ತು. ಆಗ ಶೋಭಾಗೆ ದೃಷ್ಟಿ ಚೆನ್ನಾಗಿಯೇ ಇತ್ತು. ದೊಡ್ಡಮ್ಮನನ್ನೇ ತಾಯಿಯೆಂದು ತಿಳಿದು ಅವರೊಂದಿಗೆ ವಾಸಿಸತೊಡಗಿದ್ದರು. 4ನೇ ತರಗತಿವರೆಗೆ ಶಾಲೆಗೆ ಹೋದ ಶೋಭಾ ನಂತರದಲ್ಲಿ ಶಾಲೆ ಬಿಟ್ಟು ಕೂಲಿ ಕೆಲಸ ಮಾಡತೊಡಗಿದರು. ಹೀಗೆ ದೊಡ್ಡಮ್ಮನ ಜೋಪಾನ ಮಾಡತೊಡಗಿದರು.
ಬಾಲ್ಯ ವಿವಾಹ: 9ನೇ ವಯಸ್ಸಿನಲ್ಲೇ ಶೋಭಾ ಅವರಿಗೆ ವಿವಾಹ ಮಾಡಿ, 18ನೇ ವಯಸ್ಸಿನಲ್ಲಿ ಅವರನ್ನು ಗಂಡನ ಮನೆಗೆ ಕಳಿಸಲಾಗಿತ್ತು. ಎರಡು ವರ್ಷ ಸಂಸಾರ ಮಾಡಿದ ನಂತರ ಕಾರಣಾಂತರಗಳಿಂದ ಶೋಭಾ ಗಂಡನಿಂದ ದೂರವಾದರು. ಗಂಡನ ಮನೆಯಿಂದ ಹೊರಬಂದ ಮೇಲೆ ಅವರು, ದೊಡ್ಡಮ್ಮನ ಮನೆಯಲ್ಲಿದ್ದು, ಅವರನ್ನು ಜೋಪಾನ ಮಾಡಿಕೊಂಡು ದಿನ ದೂಡುತ್ತಿದ್ದರು.
ಈ ಸಮಯದಲ್ಲಿ ಆಕಸ್ಮಿಕವಾಗಿ ಪೆಟ್ಟು ಬಿದ್ದು ನರ ದೌರ್ಬಲ್ಯದಿಂದ ಕಣ್ಣಿನ ದೋಷ ಪ್ರಾರಂಭವಾಯಿತು. ನರ ದೌರ್ಬಲ್ಯಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ, ಇವರ ಕಣ್ಣುಗಳು ಸಂಪೂರ್ಣ ಅಂಧವಾದವು. ಚಿಕಿತ್ಸೆ ಪಡೆದುಕೊಳ್ಳಲು ಹಣವಿಲ್ಲ. ಆ ವೇಳೆಗಾಗಲೇ ತಂದೆ- ತಾಯಿ ಕೂಡ ನಿಧನರಾದರು.
ವಿಧಿಯಾಟಕ್ಕೆ ಕುಗ್ಗಿ ಕೊರಗುತ್ತ ಕುಳಿತರೆ ಸಹಾಯಕ್ಕೆ ಯಾರೂ ಇಲ್ಲ. ಕೈಕಟ್ಟಿ ಕುಳಿತರೆ ಜೀವನದ ಬಂಡಿ ಎಳೆಯುವವರಿಲ್ಲ. ಜತೆಗೆ ಹುಟ್ಟು ಅಂಧರಾಗಿರುವ ದೊಡ್ಡಮ್ಮನಿಗೆ ತಾನೇ ಆಸರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೇ ದಿಟ್ಟತನದಿಂದ ವಿಧಿಯಾಟಕ್ಕೇ ಸವಾಲೊಡ್ಡಿ ಜೀವನ ಸಾಗಿಸಬೇಕು ಎಂದುಕೊಂಡರು ಶೋಭಾ. ಅಂದಿನಿಂದ ಇಂದಿನವರೆಗೆ ಕೂಲಿ ಕೆಲಸ ಮಾಡುತ್ತ ಅಂಧ ದೊಡ್ಡಮ್ಮನನ್ನು ಸಾಕಿಕೊಂಡು ಬಂದಿದ್ದಾರೆ.
ಶೋಭಾ ಕೆಲಸದಲ್ಲಿ ನಿಷ್ಠೆ ಇಟ್ಟುಕೊಂಡು ಬಂದವರು. ಅವರು ಗದ್ದೆಯಲ್ಲಿ ಕೂಲಿ ಕೆಲಸಕ್ಕಿಳಿದರೆ ತಾವು ಅಂಧರೆಂಬುದನ್ನೇ ಮರೆತುಬಿಡುತ್ತಾರೆ. ಕಣ್ಣಿದ್ದವರೂ ನಾಚುವಂತೆ ಕೆಲಸ ಮಾಡುತ್ತಾರೆ. ಇವರನ್ನು ಕೆಲಸದಲ್ಲಿ ಹಿಂದೆ ಹಾಕುವುದು ಅಷ್ಟು ಸುಲಭವಲ್ಲ. ಹೆಸರೂರ ಗ್ರಾಮದಲ್ಲಿ ಕೂಲಿ ಕೆಲಸ ಮಾಡುವ 19 ಮಹಿಳೆಯರ ತಂಡವಿದೆ. ಸುತ್ತಲಿನ ಊರಿನ ಜಮೀನುಗಳಲ್ಲಿ ಭತ್ತನಾಟಿ ಮಾಡುವುದು, ಗೋವಿನಜೋಳ ಕೀಳುವುದು, ಶೇಂಗಾ ಹರಿಯುವುದು... ಹೀಗೆ ಎಲ್ಲಾ ಕೃಷಿ ಕೆಲಸಗಳನ್ನು ಮಾಡುತ್ತಾರೆ. ಪ್ರತಿ ಎಕರೆಗೆ ಇಂತಿಷ್ಟು ಹಣ ನೀಡಲಾಗುತ್ತದೆ. ಈ ಮೂಲಕ, ದಿನಕ್ಕೆ ಕನಿಷ್ಠ 400 ರೂ. ಕೂಲಿ ಹಣ ಶೋಭಾರಿಗೆ ಸಿಗುತ್ತದೆ.
ಅಂಧರಾಗಿರುವ ಶೋಭಾ ಹಾಗೂ ದೊಡ್ಡಮ್ಮ ದೇವಕ್ಕ ಇಬ್ಬರಿಗೂ ಸರ್ಕಾರದಿಂದ ತಲಾ 1400 ರೂ. ಸಹಾಯಧನ ಬರುತ್ತದೆ. ವರ್ಷದ 6 ತಿಂಗಳು ಸುಗ್ಗಿ ಸಮಯದಲ್ಲಿ ಸರ್ಕಾರದ ಸಹಾಯಧನದ ಜತೆಗೆ ಕೂಲಿ ಹಣ ನೆರವಾಗುತ್ತದೆ. ಆದರೆ, ಸುಗ್ಗಿ ಇಲ್ಲದ ಆರು ತಿಂಗಳು ಸರ್ಕಾರದಿಂದ ಬರುವ ಅಲ್ಪ ಸಹಾಯಧನವೇ ಇವರ ಬದುಕಿಗೆ ಆಸರೆ.
14 ವರ್ಷಗಳಿಂದ ಎರಡೂ ಕಣ್ಣುಗಳು ಕಾಣುತ್ತಿಲ್ಲ. ತಾಯಿಗೂ (ದೊಡ್ಡಮ್ಮ) ಹುಟ್ಟಿನಿಂದ ಕಣ್ಣಿಲ್ಲ. ಮನೆ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಮನೆ ಕೆಲಸದ ಜತೆಗೆ ಕೂಲಿ ಕೆಲಸ ಮಾಡಿಕೊಂಡು ತಾಯಿ ಜೋಪಾನ ಮಾಡಿ ಬದುಕು ನಡೆಸುತ್ತಿದ್ದೇನೆ. ಕಣ್ಣುಸರಿಪಡಿಸಿ ಕೊಳ್ಳಲು ಹಣದ ಸಮಸ್ಯೆಯಿಂದಾಗಿ ಅದರ ಆಸೆ ಬಿಟ್ಟಿದ್ದೇನೆ. ನನಗೆ ಕಣ್ಣಿಲ್ಲವೆಂಬ ಕೊರಗು ಕಾಡಿಲ್ಲ. ಛಲದಿಂದ ಜೀವನ ನಡೆಸುತ್ತೇನೆ. | ಶೋಭಾ ಮಲ್ಲಾಡದ ಅಂಧ ಮಹಿಳೆ
ಶೋಭಾ ಅವರಿಗೆ ಸೂಕ್ತ ಚಿಕಿತ್ಸೆ ಪಡೆಯಲು ಆರ್ಥಿಕ ಅನುಕೂಲಗಳಿಲ್ಲ. ಕೂಲಿ ಹಣದಲ್ಲಿ ಬದುಕು ನಡೆಸೋದೇ ಕಷ್ಟ. ಸೂಕ್ತ ಚಿಕಿತ್ಸೆ ಪಡೆದು ಮೊದಲಿನಂತೆ ಜಗತ್ತನ್ನು ನೋಡಬೇಕು ಎಂಬುದು ಶೋಭಾ ಅವರ ಆಸೆ. ಇದಕ್ಕೆ ಸರ್ಕಾರ, ದಾನಿಗಳು ಮುಂದೆ ಬಂದು ಸಹಾಯ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
| ಸಂತೋಷ ಮುರಡಿ ಮುಂಡರಗಿ