ನರಗುಂದದಲ್ಲಿ ಔಷಧೀಯ ಗುಣವುಳ್ಳ ಕಪ್ಪು ಗೋಧಿ ಕೃಷಿ; ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಸಾಧನೆ

Vv Main lead
Published on

ರಾಜು ಹೊಸಮನಿ ನರಗುಂದ

ಕಪ್ಪು ಅಕ್ಕಿ, ಕಪ್ಪು ಕಡಲೆ ಬೆಳೆಯುವ ರೈತರು ನಮ್ಮಲ್ಲಿದ್ದಾರೆ. ಆದರೆ, ಇಲ್ಲೊಬ್ಬರು ಔಷಧೀಯ ಗುಣವುಳ್ಳ ಕಪ್ಪು ಗೋಧಿ ಬೆಳೆದು ಗಮನ ಸೆಳೆದಿದ್ದಾರೆ. ಕಪ್ಪು ಗೋಧಿಯನ್ನು ಉತ್ತರ ಪ್ರದೇಶ, ಹರಿಯಾಣ, ಬಿಹಾರ, ಉತ್ತರಾಖಂಡ, ಪಂಜಾಬ್ ಸೇರಿ ವಿವಿಧೆಡೆ ಕೆಲ ರೈತರು ಬೆಳೆಯುತ್ತಾರೆ. ಆದರೀಗ ಉತ್ತರ ಕರ್ನಾಟಕದ ನರಗುಂದ ತಾಲೂಕಿನ ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಕಪ್ಪು ಗೋಧಿ ಬೆಳೆದು ವಿಶೇಷ ಸಾಧನೆ ಮಾಡಿದ್ದಾರೆ. ಬಿಕಾಂ, ಎಲ್​ಎಲ್​ಬಿ ಪದವೀಧರರಾಗಿರುವ ಮೃತ್ಯುಂಜಯ, ವೃತ್ತಿಯಲ್ಲಿ ವಕೀಲರಾಗಿ, ಧಾರವಾಡ ಜೆಎಸ್​ಎಸ್ ಕಾಲೇಜ್​ನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿದ್ದ್ದಾರೆ. ತಮ್ಮ13 ಎಕರೆ ಕೃಷಿ ಜಮೀನಿನಲ್ಲಿ ಈಗಾಗಲೆ ಕಡಲೆ, ಮೆಣಸಿನಕಾಯಿ, ಗೋವಿನಜೋಳ, ವಿವಿಧ ತರಕಾರಿ ಬೆಳೆ ಬೆಳೆಯುತ್ತಿರುವ ಇವರು, ಲಾಕ್​ಡೌನ್ ಸಮಯದಲ್ಲಿ ಕಪ್ಪು ಗೋಧಿ ಬಗ್ಗೆ ಮಾಹಿತಿ ಪಡೆದು ಬೆಳೆಯಲಾರಂಭಿಸಿದರು. ಉತ್ತರ ಭಾರತದ ಶೀತವಲಯದಲ್ಲಿ ಬೆಳೆಯುವ ಕಪ್ಪು ಗೋಧಿಯನ್ನು ಪ್ರಾಯೋಗಿಕವಾಗಿ ತಮ್ಮ 7 ಗುಂಟೆ ಜಮೀನಿನಲ್ಲಿ ಬೆಳೆದಿದ್ದು, ಇದೀಗ ಕಟಾವಿಗೆ ಬಂದಿದೆ.

ವಿಶೇಷತೆ ಏನು?: ಕಪ್ಪು ಗೋಧಿಯಲ್ಲಿ ಸತು (ಜಿಂಕ್) ಪ್ರಮಾಣ ಅಧಿಕವಾಗಿರುತ್ತದೆ. ಸಾಮಾನ್ಯ ಗೋಧಿಗಿಂತ ಪ್ರತಿ ಮಿಲಿಯನ್​ಗೆ 149 ಹೆಚ್ಚು ಆಂತೋಸಯನಿನ್​ಗಳನ್ನು ಹೊಂದಿರುತ್ತದೆ. ಆಂತೋಸಯನಿನ್ ಕಾರಣದಿಂದ ಇದು ಶುಗರ್ ಫ್ರೀ ಸಹ ಆಗಿರುತ್ತದೆ. ಇದರಲ್ಲಿ ಪಿಷ್ಟ್ಟ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ಇದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚು ಲಾಭದಾಯಕ. ತಜ್ಞರ ಪ್ರಕಾರ ಈ ಗೋಧಿ ಕುರಿತು ಇನ್ನೂ ಸಂಶೋಧನೆ ನಡೆಯುತ್ತಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಅಧಿಕವಾಗಿರುತ್ತದೆ. ಕ್ಯಾನ್ಸರ್ ತಡೆಗಟ್ಟಲು ಸಹ ಸಾಕಷ್ಟು ಪ್ರಯೋಜನಕಾರಿ. ಕಡಿಮೆ ಕೊಬ್ಬಿನಾಂಶ ಹೊಂದಿರುವುದರಿಂದ ಬೊಜ್ಜು ಹೆಚ್ಚಿಸುವುದಿಲ್ಲ. ಹೀಗಾಗಿ ಕ್ಯಾನ್ಸರ್ ರೋಗಿಗಳಿಗೂ ತುಂಬಾ ಲಾಭದಾಯಕವಾಗಿದೆ. ಇದರಿಂದ ಅನ್ನದ ಪಚನಕ್ರಿಯೆ ಹೆಚ್ಚಾಗುತ್ತದೆ.

ನಮ್ಮ ಭಾಗದಲ್ಲಿ ಕಪ್ಪು ಗೋಧಿ ಬೆಳೆ ಯುವುದು ತುಂಬಾ ಅಪರೂಪ. ಶಿರೋಳ ಗ್ರಾಮದ ಮೃತ್ಯುಂಜಯ ವಸ್ತ್ರದ ಈ ಗೋಧಿ ಬೆಳೆದಿದ್ದು, ಇದನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೋಧಿ ಸಂಶೋಧನಾ ವಿಭಾಗಕ್ಕೆ ಕಳುಹಿಸಿಕೊಡಲಾಗುವುದು. ಅಲ್ಲಿನ ತಜ್ಞರು ನೀಡುವ ಮಾಹಿತಿ ಆಧಾರದಡಿ ಈ ಬೆಳೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಚಿಂತಿಸಲಾಗುತ್ತದೆ. ಆದರೆ, ಸ್ಥಳೀಯವಾಗಿ ನಮ್ಮಲ್ಲಿ ಮುಕ್ತಮಾರುಕಟ್ಟೆ ವ್ಯವಸ್ಥೆ ಇಲ್ಲ.

| ರುದ್ರೇಶ ಪಿ.ಎಸ್. ಕೃಷಿ ಜಂಟಿ ನಿರ್ದೇಶಕ

ನಮ್ಮ ಭಾಗದ ರೈತರು ಪ್ರತಿವರ್ಷ ಬೆಳೆದಿದ್ದ ಬೆಳೆಯನ್ನೇ ಬೆಳೆಯುವುದು ವಾಡಿಕೆಯಾಗಿದೆ. ಹೊಸ ಪ್ರಯೋಗದ ಮೂಲಕ ಈ ಭಾಗದಲ್ಲಿ ಏನಾದರೂ ಮಾಡಬೇಕೆಂದು ಆನ್​ಲೈನ್​ನಲ್ಲಿ ಕೃಷಿ ಬಗ್ಗೆ ಮಾಹಿತಿ ಹುಡುಕಾಡಿದೆ. ಆಗ ಸಿಕ್ಕಿದ್ದೆ ಕಪ್ಪು ಗೋಧಿ ತಳಿ. ಈ ಗೋಧಿ ಆರೋಗ್ಯಕ್ಕೆ ಉತ್ತಮ. ಮಾರುಕಟ್ಟೆಯಲ್ಲಿ ಬೆಲೆಯೂ ಜಾಸ್ತಿ ಇದೆ. ಪ್ರತಿ ಕೆಜಿಗೆ 1,200 ರೂಪಾಯಿಯಂತೆ 4 ಕೆಜಿ ಕಪ್ಪು ಗೋಧಿ ಬೀಜ ಖರೀದಿಸಿ 7 ಗುಂಟೆ ಜಮೀನಿನಲ್ಲಿ ಪ್ರಾಯೋಗಿಕವಾಗಿ ಬೆಳೆದಿದ್ದೇನೆ. 4 ಕೆಜಿ ಗೋಧಿಗೆ 150 ಕೆಜಿ ಫಸಲು ನಿರೀಕ್ಷಿಸಿದ್ದೇವೆ. ನಮ್ಮ ಭಾಗದ ರೈತರು ಬಯಸಿದರೆ ಬಿತ್ತನೆಗೆ ಬೀಜ ನೀಡಲಾಗುವುದು. ಈ ಬೆಳೆ ಬೆಳೆದಿರುವುದರಿಂದ ಧಾರವಾಡ ಕೃಷಿ ವಿವಿಯ ಸಂಶೋಧಕರಿಗೂ ಆಶ್ಚರ್ಯವಾಗಿದೆ.

| ಮೃತ್ಯುಂಜಯ ವಸ್ತ್ರದ ಕಪ್ಪು ಗೋಧಿ ಬೆಳೆದವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net