

ಲಾಲ್ಕೃಷ್ಣ ಆಡ್ವಾಣಿ ಪ್ರಧಾನ ಕಾರ್ಯದರ್ಶಿಯಾದರು. 1951ರ ಅ. 21ರಂದು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ‘ಭಾರತೀಯ ಜನಸಂಘ’ವನ್ನು ಮತ್ತು 1980ರಲ್ಲಿ ವಾಜಪೇಯಿ ‘ಬಿಜೆಪಿ’ಯನ್ನು ಪ್ರಾರಂಭಿಸಿದ ದಿನದಿಂದ, ಪಕ್ಷವು ಮತ್ತು ಅದರ ಎರಡೂ ಸಂಘಟನೆಗಳು ರಾಷ್ಟ್ರೀಯತೆಯ ಎಲ್ಲಾ ಮಜಲುಗಳಲ್ಲಿ ರಾಷ್ಟ್ರೀಯತೆಯನ್ನು ಬಿತ್ತುವಲ್ಲಿ, ದೇಶಭಕ್ತಿಯನ್ನು ಬೆಳೆಸುವಲ್ಲಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ, ದೇಶಕ್ಕೆ ನಾವು ಮಾಡಬೇಕಾದ ಕರ್ತವ್ಯಗಳನ್ನು ಮೊದಲು ಮಾಡಬೇಕೆಂಬ ನೀತಿಯನ್ನು ಪ್ರತಿಪಾದಿಸುವಲ್ಲಿ ದೃಢ ಹೆಜ್ಜೆಗಳನ್ನಿಡುತ್ತಾ ಸಾಗಿದೆ.
ದೇಶ ಮೊದಲು ಎಂಬುದು ನಮ್ಮ ಧ್ಯೇಯವಾಕ್ಯ ಮತ್ತು ನಂಬಿಕೆ. ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಮತ್ತು ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಸ್ಥಾಪಿಸುವ ಹೋರಾಟದ ಪರಿಣಾಮವಾಗಿ ಜನತಾ ಪಕ್ಷವೂ ಅಸ್ತಿತ್ವಕ್ಕೆ ಬಂತು. ಈ ಎಲ್ಲಾ ಅಂಶಗಳಲ್ಲಿ ಜನಸಂಘದ ಕೊಡುಗೆ ಅಪಾರ.
1980ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಗತಕಾಲದ ಘಟನೆಗಳನ್ನು ನೆನಪಿಸಿಕೊಳ್ಳುವುದು ಅತ್ಯಂತ ಅವಶ್ಯಕ. ಕರಾಳ ತುರ್ತು ಪರಿಸ್ಥಿತಿಯ ವಿರುದ್ಧದ ಐತಿಹಾಸಿಕ ಹೋರಾಟದ ಪರಿಣಾಮವಾಗಿ 1977ರಲ್ಲಿ ಜನತಾ ಪಕ್ಷದ ನೇತೃತ್ವದಲ್ಲಿ ಮೊದಲ ಕಾಂಗ್ರೆಸೇತರ ಸರ್ಕಾರ ರಚನೆಯಾಯಿತು. ಮೂರೇ ವರ್ಷಗಳಲ್ಲಿ ಸರ್ಕಾರ ಪತನಗೊಂಡಿದ್ದರಿಂದ ದೇಶದಲ್ಲಿ ವಿರೋಧ ಪಕ್ಷಗಳು ತಮ್ಮ ಪ್ರತಿಷ್ಠೆ-ಖ್ಯಾತಿ ಕಳೆದುಕೊಂಡಿದ್ದವು. ಜನತಾ ಪಕ್ಷದ ಪ್ರಯೋಗದ ಪತನದ ಲಾಭ ಪಡೆದ ಇಂದಿರಾ ಗಾಂಧಿ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು.
ಇದಕ್ಕೂ ಮೊದಲು ಜನತಾ ಪಕ್ಷದ ಕೆಲವು ನಾಯಕರು ಆ ಪಕ್ಷದಲ್ಲಿದ್ದ ಮೂಲ ಜನಸಂಘದ ನಾಯಕರ ಬಗ್ಗೆ ದ್ವಿಸದಸ್ಯತ್ವ ಸಮಸ್ಯೆಯನ್ನು ಎತ್ತಿದರು. ಜನಸಂಘದ ಸದಸ್ಯರು ಜನತಾ ಪಕ್ಷದಲ್ಲಿ ಮುಂದುವರಿಯಲು ಬಯಸಿದರೆ ಆರ್ಎಸ್ಎಸ್ ಜತೆಗಿನ ಸಂಬಂಧ ಕಡಿದುಕೊಳ್ಳಬೇಕೆಂದು ಆಗ್ರಹಿಸಿದರು. ಆದರೆ ಜನತಾ ಪಕ್ಷದಲ್ಲಿದ್ದ ಜನಸಂಘದ ನಾಯಕರು ಆರ್ಎಸ್ಎಸ್ ಜತೆಗಿನ ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದರು. ಈ ನಾಯಕರು ಏ. 4ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಭೆ ಸೇರಿ 3 ದಿನಗಳ ಕಾಲ ರ್ಚಚಿಸಿದರು. ಈ ಎಲ್ಲ ಘಟನೆಗಳು ಬಿಜೆಪಿ ಹುಟ್ಟಿಗೆ ಕಾರಣವಾದವು. ಅಂತಿಮವಾಗಿ 1980ರ ಏ. 6ರಂದು ಬಿಜೆಪಿ ಸ್ಥಾಪನೆಯಾಯಿತು.
ವಾಜಪೇಯಿ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ, ‘ಬಿಜೆಪಿಯೇ ಕಾಂಗ್ರೆಸ್ಗೆ ಏಕೈಕ ವಿಶ್ವಾಸಾರ್ಹ ಪರ್ಯಾಯ ಎಂಬುದನ್ನು ನಮ್ಮ ನಡವಳಿಕೆ ಮತ್ತು ಕಾರ್ಯಕ್ಷಮತೆ ಮೂಲಕ ನಾವು ಜಗತ್ತಿಗೆ ಸಾಬೀತುಪಡಿಸುತ್ತೇವೆ. ಸಾಂಸ್ಕೃತಿಕ ರಾಷ್ಟ್ರೀಯತೆ, ಶುದ್ಧ ದೇಶಭಕ್ತಿ, ಪ್ರಜಾಪ್ರಭುತ್ವಕ್ಕೆ ಬದ್ಧತೆ ಮತ್ತು ನಾಗರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕೇ ನಮ್ಮ ಒತ್ತು ಮತ್ತು ಗಮನ. ನಾವು ಜನಸಂಘದ ಸಿದ್ಧಾಂತ, ಸಾಂಸ್ಥಿಕ ತಂತ್ರಗಾರಿಕೆ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಿಕೊಳ್ಳಲಿದ್ದೇವೆ. ಆದರೆ ಭಾರತೀಯ ಜನತಾ ಪಕ್ಷವಾಗಿ ಹೊಸ ರೂಪದಲ್ಲಿ ಮುಂದುವರಿಯಲಿದ್ದೇವೆ. ಕಾರ್ಯಕರ್ತರಾಧಾರಿತ ಪಕ್ಷವಾಗಿ ಹೊರಹೊಮ್ಮಲು ಭಗವಂತನೇ ನಮಗೆ ನೀಡಿರುವ ಒಂದು ಅನನ್ಯ ಅವಕಾಶ ಇದು’ ಎಂದು ಘೊಷಿಸಿದರು. ನಂತರ ವಾಜಪೇಯಿ 3 ಬಾರಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದರು.
ವಾಜಪೇಯಿ ಅವರ ಆಶಯವನ್ನು ಬಿಜೆಪಿ ಅಕ್ಷರಶಃ ಪಾಲಿಸಿದೆ. ಪ್ರಜಾಪ್ರಭುತ್ವ ಮೌಲ್ಯಗಳು, ಸಾಂಸ್ಕೃತಿಕ ರಾಷ್ಟ್ರೀಯತೆ, ದೇಶಭಕ್ತಿ ಮತ್ತು ನಾಗರಿಕ ಮೌಲ್ಯಗಳ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. 1980ರಿಂದ ಬಿಜೆಪಿ ನಡೆಸಿರುವ ಪ್ರತಿಯೊಂದು ಆಂದೋಲನ, ಕಾರ್ಯಕ್ರಮವೂ ನಮ್ಮ ತಾಯ್ನಾಡಿನ ನೀತಿಗೆ ಅನುಗುಣವಾಗಿದೆ - ಅದು ಅಸ್ಪಶ್ಯತೆಯನ್ನು ನಿಮೂಲನೆ ಮಾಡಲು ಸಮತಾಯುಕ್ತ ಶೋಷಣೆ ಮುಕ್ತ ಸಮಾಜ ಆಗಿರಲಿ, ಪಂಜಾಬ್ನಲ್ಲಿ ಹಿಂಸಾಚಾರವನ್ನು ಪ್ರತಿಭಟಿಸಲು 1987ರ ಪಂಜಾಬ್ ಚಲೋ ಆಗಿರಲಿ, 1990ರಲ್ಲಿ ಸೋಮನಾಥ - ಅಯೋಧ್ಯಾ ರಾಮ ರಥಯಾತ್ರೆಯಾಗಿರಲಿ, 1991-92ರ ಕನ್ಯಾಕುಮಾರಿ - ಕಾಶ್ಮೀರ ಏಕತಾ ಯಾತ್ರೆಯಾಗಿರಲಿ, 1997ರ ಸ್ವರ್ಣ ಜಯಂತಿ ಯಾತ್ರೆಯಾಗಿರಲಿ, ಕೋವಿಡ್ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೊಷಿಸಿದ ಸೇವಾ ಹಿ ಸಂಘಟನ್ ಕಾರ್ಯಕ್ರಮವಾಗಿರಲಿ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಿರಲಿ, ಸಬ್ ಕಾ ವಿಶ್ವಾಸ್ ಆಗಿರಲಿ - ಪ್ರತಿಯೊಂದು ಯೋಜನೆ, ಪ್ರತಿಯೊಂದು ಕಾರ್ಯಕ್ರಮವು ನೆಲದ ಸಂಸ್ಕೃತಿ ಮತ್ತು ನೀತಿಗೆ ಅನುಗುಣವಾಗಿದೆ. ಎಲ್ಲರನ್ನೂ ಒಳಗೊಂಡಿರುತ್ತದೆ.
1984ರ ಅ. 31ರಂದು ನಡೆದ ಇಂದಿರಾ ಗಾಂಧಿ ಹತ್ಯೆ ದೇಶವನ್ನೇ ತಲ್ಲಣಗೊಳಿಸಿದ ಒಂದು ದೊಡ್ಡ ದುರಂತ. ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತು. ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತು. ವಾಜಪೇಯಿ ಕೂಡ ಗ್ವಾಲಿಯರ್ನಲ್ಲಿ ಸೋತರು. ಆದರೆ ಬಿಜೆಪಿ ಧೈರ್ಯ ಕಳೆದುಕೊಳ್ಳಲಿಲ್ಲ. ಬದಲಾಗಿ, ಆಡ್ವಾಣಿ ಜೊತೆಗೆ ಬಿಜೆಪಿಯ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಪಕ್ಷನಿಷ್ಠರಾಗಿ ಹೋರಾಟಕ್ಕೆ ಸಮರ್ಪಿಸಿಕೊಂಡು ಪಕ್ಷ ಸಂಘಟನೆಗಾಗಿ ಶ್ರಮಿಸಿದರು. 1986ರ ಮೇ 9ರಂದು ಆಡ್ವಾಣಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದರು. ಅಪಾರ ಪರಿಶ್ರಮದ ಫಲವಾಗಿ ಪಕ್ಷ ಬಲವಾಗಿ ಬೇರೂರಿತು.
1989ರಲ್ಲಿ ಬಿಜೆಪಿ 86 ಸ್ಥಾನ ಗೆದ್ದಿತು. ಅಂದಿನಿಂದ ಹಿಂತಿರುಗಿ ನೋಡುವ ಅವಕಾಶವೇ ಬರಲಿಲ್ಲ. 45 ವರ್ಷಗಳ ನಂತರ ಇಂದು ನಾವು ನಮ್ಮ ಮಿತ್ರಪಕ್ಷಗಳೊಂದಿಗೆ ಸತತ ಮೂರನೇ ಅವಧಿಗೆ ಆಡಳಿತ ಪಕ್ಷವಾಗಿದ್ದೇವೆ. ಮೋದಿ ನಾಯಕತ್ವವು ಭಾರತವನ್ನು ಉನ್ನತವಾಗಿ ಕಾಣುವಂತೆ ಮಾಡಿದೆ. ಇಂದು ಇಡೀ ವಿಶ್ವವೇ ಭಾರತವನ್ನು ವಿಸ್ಮಯ ಮತ್ತು ಗೌರವದಿಂದ ನೋಡುವುದರ ಜೊತೆಗೆ ನಾವು ಐದು ಟ್ರಿಲಿಯನ್ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿದ್ದೇವೆ.
ಜನಸಂಘ ಮತ್ತು ಬಿಜೆಪಿಯಾಗಿ ನಾವು ನೀಡಿದ್ದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ- 370ನೇ ವಿಧಿ ರದ್ದುಪಡಿಸುವುದು, ಬಾಂಗ್ಲಾದೇಶದೊಂದಿಗಿನ ದೀರ್ಘಕಾಲದ ಗಡಿ ವಿವಾದವನ್ನು ಪರಿಹರಿಸುವುದು ಅಥವಾ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಿರುವುದು, ವಕ್ಪ್ ಕಾಯ್ದೆಗೆ ಸುಧಾರಣೆ ತಂದಿರುವುದು, ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದವನ್ನು (ನಕ್ಸಲರನ್ನು) ನಿಗ್ರಹಿಸುವುದು, ದೇಶದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಮುಂತಾದ ಹಲವಾರು ನಿರ್ಣಾಯಕ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವತ್ತ ವೇಗವಾಗಿ ಸಾಗುತ್ತಿದ್ದೇವೆ. ಹೇಳಿದಂತೆ ನಡೆದುಕೊಂಡಿದ್ದೇವೆ. ಲಕ್ಷಾಂತರ ಕಾರ್ಯಕರ್ತರ ತ್ಯಾಗದಿಂದ ಗೌರವ, ಪ್ರಭಾವ, ವಿಶ್ವಾಸಾರ್ಹತೆ ಮತ್ತು ಖ್ಯಾತಿಯನ್ನು ಗಳಿಸಿದ್ದೇವೆ. ಇಂದು, ರಾಜಕೀಯ ಪಕ್ಷಕ್ಕಿಂತ ಹೆಚ್ಚಾಗಿ ರಾಷ್ಟ್ರೀಯತೆಯ ಆಂದೋಲನವಾಗಿ ಬಿಜೆಪಿ ಮುಂದುವರಿಯುತ್ತಿದೆ. (ಲೇಖಕರು ವಿರೋಧಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನಪರಿಷತ್)