ಚಿತ್ರ- ವಿಚಿತ್ರ ಉದ್ಯೋಗಗಳ ಬಗ್ಗೆ ನಿಮಗಿದೆಯೇ ಮಾಹಿತಿ..

Odour tester 15 FEB 20
Published on

ಉದ್ಯೋಗ ಎಂದರೆ ನಿಮ್ಮ ಕಣ್ಣಮುಂದೆ ಕೆಲವೇ ಕೆಲವು ಕೆಲಸಗಳು ಬರುತ್ತವಲ್ಲವೆ? ಆದರೆ ವಿದೇಶಗಳಲ್ಲಿ ನೀವು ನಂಬಲಸಾಧ್ಯವಾಗಿರುವ, ಕೇಳಿದರೆ ನಗು ತರಿಸುವಂಥ ಉದ್ಯೋಗಗಳೂ ಇವೆ. ಅವುಗಳ ಪೈಕಿ ಕೆಲವು ಚಿತ್ರ- ವಿಚಿತ್ರ ಉದ್ಯೋಗಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ನಿದ್ದೆ ಮಾಡಿ, ಹಣ ಗಳಿಸಿ!: ನಿದ್ದೆ ಮಾಡಿದಷ್ಟೂ ಹೆಚ್ಚು ಹೆಚ್ಚು ಹಣ ಗಳಿಸುವ ಕೆಲಸವೊಂದಿದೆ. ಆಹಾ! ಎಷ್ಟು ಒಳ್ಳೆಯ ಕೆಲಸ, ಶಾಲೆಗೆ ಹೋಗೋದೇ ಬೇಡ ಎಂದು ನೀವು ಅಂದುಕೊಂಡಿರಲಿಕ್ಕೆ ಸಾಕು. ಆದರೆ ಮುಂದೆ ಓದಿ... ನಿದ್ರೆಯ ಸಮಸ್ಯೆಗಳಿಗೆ (ಸರಿಯಾಗಿ ನಿದ್ದೆ ಬರದೇ ಇರುವುದು, ನಿದ್ರೆಯಲ್ಲಿ ಬಡಬಡಿಸುವುದು, ಬೆಡ್​ವೆಟ್ ಇತ್ಯಾದಿ) ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ‘ಸ್ಲೀಪರ್’ಗಳನ್ನು ದುಡ್ಡು ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿಗೆ ದಿನಪೂರ್ತಿ ನಿದ್ದೆ ಬರುವ ಔಷಧ ಕೊಟ್ಟು ಅವರ ಮೇಲೆ ಪ್ರಯೋಗ ಮಾಡಲಾಗುತ್ತದೆ. ತಮಗೆ ಬೇಕಿರುವ ಫಲಿತಾಂಶ ಬರುವವರೆಗೂ ಅವರು ಏಳುವ ಹಾಗೆಯೇ ಇಲ್ಲ. ಈಗ ಹೇಳಿ... ಇಂಥ ನಿದ್ದೆ ಬೇಕಾ?

ದಿನವೂ ತಳ್ಳುತ್ತಲೇ ಇರಬೇಕು!: ಬಸ್ಸು, ಟ್ರೇನುಗಳಲ್ಲಿ ರಶ್ ಇದ್ದರೆ ಜನರನ್ನು ತಳ್ಳಿಕೊಂಡು ಹೋಗುತ್ತೀರಿ ಅಲ್ವಾ? ಆದರೆ ಜಪಾನ್​ಗಳಲ್ಲಿ ಇದಕ್ಕೆಂದೇ ‘ಪುಶರ್​ವ್ಯಾನ್’ ಇರುತ್ತಾರೆ. ಬಸ್, ಟ್ರೇನ್​ಗಳು ವಿಪರೀತ ರಶ್ ಆದಾಗಲೆಲ್ಲ ಸಾಧ್ಯವಾದಷ್ಟು ಜನರನ್ನು ಅವುಗಳಲ್ಲಿ ತುಂಬಿಸಿಕೊಳ್ಳುವಲ್ಲಿ ಈ ಮನುಷ್ಯ ನಿಪುಣ ಆಗಿರಬೇಕು. ಇದಕ್ಕಾಗಿ ಸಂಬಳ ನೀಡಲಾಗುತ್ತದೆ.

ತಿಂದು ತಿಂದು ಉಗಿಯಬೇಕು: ಸಾಕು ಪ್ರಾಣಿ, ಪಕ್ಷಿಗಳಿಗೆಂದೇ ಇರುವ ಆಹಾರಗಳು ಅವುಗಳಿಗೆ ಸರಿಹೊಂದುತ್ತವೆಯೋ, ಇಲ್ಲವೋ ತಿಳಿಯುವುದು ಹೇಗೆ ಗೊತ್ತಾ? ಆ ಆಹಾರಗಳ ರುಚಿ ನೋಡುವುದಕ್ಕಾಗಿಯೇ ನೇಮಕಾತಿ ನಡೆಯುತ್ತದೆ. ಪ್ರಾಣಿ-ಪಕ್ಷಿಗಳ ಆಹಾರ, ಮನುಷ್ಯರಿಗೆ ತಿನ್ನಲು ಸಾಧ್ಯವೇ ಇಲ್ಲ. ಆದರೂ ರುಚಿ ನೋಡುವ ತಜ್ಞರು ಅವುಗಳನ್ನು ಬಾಯಿಗೆ ಹಾಕಿಕೊಳ್ಳಲೇಬೇಕು. ನಾಲ್ಕೈದು ಬಾರಿ ಚಪ್ಪರಿಸಿ ರುಚಿ ನೋಡಿ ನಂತರ ಉಗಿಯುತ್ತಾರೆ. ಚಪ್ಪರಿಸಿದಾಗ ಅವರಿಗೆ ಆ ಆಹಾರಗಳ ಟೇಸ್ಟ್ ಗೊತ್ತಾಗುತ್ತದೆ. ಅದರಿಂದ ಆಹಾರಗಳು ಪ್ರಾಣಿ- ಪಕ್ಷಿಗಳಿಗೆ ಅವು ಸರಿಹೊಂದುತ್ತವೋ ಇಲ್ಲವೋ ಎಂಬುದನ್ನು ನಿರ್ಧರಿಸುತ್ತಾರೆ. ದಿನಪೂರ್ತಿ ತಿನ್ನುವುದು, ಉಗಿಯುವುದು ಅಷ್ಟೇ ಇವರ ಕೆಲಸ.

ಕ್ಯೂನಲ್ಲಿ ನಿಲ್ಲುವ ಕೆಲಸ: ಯಾವುದಾದರೂ ಮಳಿಗೆಗಳಲ್ಲಿ ಭಾರಿ ಆಫರ್ ಇದೆ ಎಂದು ಗೊತ್ತಾದಾಗ ಇಲ್ಲವೇ ಹೊಸದೊಂದು ಪ್ರಾಡಕ್ಟ್ ಲಾಂಚ್ ಆದಾಗ, ಅಂಗಡಿ ಓಪನ್ ಆಗು ವ ಮೊದಲೇ ಕ್ಯೂ ನಿಲ್ಲುವುದನ್ನು ನೋಡಿರಬೇಕಲ್ಲವೆ? ಸ್ವಲ್ಪ ಲೇಟಾಗಿ ಹೋದರೂ ಸ್ಟಾಕ್ ಎಲ್ಲಿ ಮುಗಿದು ಬಿಡುವುದೋ ಎಂಬ ಆತಂಕ ಒಂದೆಡೆಯಾದರೆ, ಸಿಕ್ಕಾಪಟ್ಟೆ ರಶ್​ನಲ್ಲಿ ದೀರ್ಘ ಅವಧಿಯವರೆಗೆ ನಿಲ್ಲುವ ತಾಳ್ಮೆಯೂ ಹಲವರಿಗೆ ಇರುವುದಿಲ್ಲ. ಅಂಥವರಿಗೆಲ್ಲಾ ಅನುಕೂಲ ಆಗಲೆಂದೇ ‘ಲೈನ್ ಸ್ಟಾ್ಯಂಡರ್’ ಜಾಬ್ ಕೆಲವು ದೇಶಗಳಲ್ಲಿ ಇದೆ. ಇಷ್ಟು ಹೊತ್ತು ನಿಂತುಕೊಂಡರೆ, ಇಂತಿಷ್ಟು ಶುಲ್ಕ ನೀಡಬೇಕು ಎಂದು ಇವರು ಮೊದಲೇ ನಿಗದಿ ಮಾಡಿಕೊಂಡಿರುತ್ತಾರೆ.

ಬೆವರು ಮೂಸಿ ನೋಡಬೇಕು!: ಡಿಯೋಡ್ರೆಂಟ್ ಕಂಪನಿಗಳಲ್ಲಿ ‘ಡಿಯೋಡ್ರೆಂಟ್ ಟೆಸ್ಟರ್’ ಹೆಸರಿನ ಉದ್ಯೋಗವಿದೆ. ಇವರ ಕೆಲಸ ಎಂದರೆ ಹಲವರ ಕಂಕುಳನ್ನು ಮೂಸಿ ನೋಡಿ, ಯಾರ್ಯಾರ ಬೆವರು ಯಾವ ರೀತಿಯಲ್ಲಿ ವಾಸನೆಭರಿತವಾಗಿದೆ ಎಂಬುದನ್ನು ತಿಳಿದುಕೊಂಡು, ಅದಕ್ಕೆ ತಕ್ಕಂಥ ವರದಿ ರೆಡಿ ಮಾಡಬೇಕು. ವಾಸನೆಯನ್ನು ಹೋಗಲಾಡಿಸುವಂಥ ಡಿಯೊಡ್ರೆಂಟ್ ತಯಾರಿಕಾ ಕಂಪನಿಗಳಿಗೆ ಈ ವರದಿಯನ್ನು ಅವರು ನೀಡುತ್ತಾರೆ. ಆದ್ದರಿಂದ ದಿನಪೂರ್ತಿ ಇವರು ಬೆವರು ವಾಸನೆ ತೆಗೆದುಕೊಳ್ಳುತ್ತಲೇ ಇರಬೇಕು.

ದಿನಪೂರ್ತಿ ಟಿ.ವಿ ನೋಡಿದರೆ ದುಡ್ಡು ಸಿಗುತ್ತೆ!: ಹೆಚ್ಚು ಸಮಯ ಟಿ.ವಿ. ಮುಂದೆ ಕುಳಿತರೆ ನಿಮ್ಮ ಅಪ್ಪ-ಅಮ್ಮ ಬೈಯುತ್ತಾರಲ್ಲವೆ? ಆದರೆ ಕೆಲವು ದೇಶಗಳಲ್ಲಿ ಟಿ.ವಿ ನೋಡುವುದಕ್ಕಾಗಿಯೇ ಸಂಬಳ ಕೊಟ್ಟು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಯ ಹೆಸರು ಟಿ.ವಿ. ವಾಚರ್. ಇವರ ಕೆಲಸ ದಿನಪೂರ್ತಿ ಟಿ.ವಿ ನೋಡುವುದು. ಅವರಿಗೆ ಒಂದು ಲಕ್ಷ ರೂಪಾಯಿಯವರೆಗೂ ಸಂಬಳವಿದೆ! ಅದ್ಯಾಕೆ ಅಂತೀರಾ? ಇವರು ಟಿ.ವಿಯಲ್ಲಿ ಇರುವ ಎಲ್ಲಾ ಷೋಗಳನ್ನು ಹಾಗೂ ನ್ಯೂಸ್​ಗಳನ್ನು ನೋಡುತ್ತಾ ಇರಬೇಕು. ಅವುಗಳ ಪೈಕಿ ತುಂಬಾ ಇಂಟರೆಸ್ಟಿಂಗ್ ಎನ್ನಿಸಿರುವ ಕ್ಲಿಪ್ಪಿಂಗ್​ಗಳನ್ನು ಗುರುತು ಮಾಡಿಕೊಂಡು, ಅವುಗಳನ್ನು ಹೊಸ ಟಿ.ವಿ. ಷೋಗಳಿಗೆ ಅಥವಾ ನ್ಯೂಸ್ ರೀಡಿಂಗ್​ಗಳಿಗೆ ಬಳಸಿಕೊಳ್ಳಬಹುದೇ ಎಂದು ತೀರ್ವನಿಸಿ ಅವುಗಳನ್ನು ಮಾಲೀಕರಿಗೆ ನೀಡಬೇಕು. ರಿಯಾಲಿಟಿ ಷೋ ಅಥವಾ ನ್ಯೂಸ್​ಗಳು ಬೇರೆ ಬೇರೆ ಚಾನೆಲ್​ಗಳಲ್ಲಿ, ಬೇರೆ ಬೇರೆ ಭಾಷೆಗಳಲ್ಲಿ ಬರುತ್ತಿದ್ದರೂ, ಎಲ್ಲವುಗಳ ಸ್ಟೈಲ್ ಸರಿಸುಮಾರು ಒಂದೇ ರೀತಿ ಇರುವುದು ಇದೇ ಕಾರಣಕ್ಕೆ. ಒಂದು ಷೋನಲ್ಲಿ ಒಂದು ಕ್ಲಿಪ್ಪಿಂಗ್ ತುಂಬಾ ಸಕ್ಸಸ್ ಆದರೆ ಅದನ್ನೇ ಎಲ್ಲರೂ ಅನುಸರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net