ಕಚ್ಚದ ಜೇನ್ನೊಣ; ಮುಜಂಟಿ ಜೇನಿನ ಬಗೆಗಿನ ಮಾಹಿತಿ

JENU F
Published on

ಜೇನುಹುಳುಗಳು ಎಂದೊಡನೆ ಜನಸಾಮಾನ್ಯರಿಗೆ ಹೊಳೆಯುವುದು ಅವು ಉತ್ಪಾದಿಸುವ ರುಚಿಕರ ಹಾಗೂ ಅಮೂಲ್ಯ ಜೇನುತುಪ್ಪ ಮತ್ತು ಅವು ಆಗಾಗ ನಮ್ಮನ್ನು ಕಚ್ಚಿ ನೋವನ್ನುಂಟುಮಾಡುವ ವಿಷಯ. ಕೆಲವೊಮ್ಮೆ ಹೆಜ್ಜೇನು ಕಚ್ಚುವಿಕೆಯಿಂದ ಮರಣವೂ ಸಂಭವಿಸಿದ್ದು ಇದೆ. ಆದರೆ ಕಚ್ಚದೇ ಇರುವಂಥ ಜೇನ್ನೊಣ ನಮ್ಮ ಪರಿಸರದಲ್ಲಿದೆ ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಇಂತಹ ಜೇನ್ನೊಣಗಳೂ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಔಷಧೀಯ ಗುಣಗಳನ್ನು ಒಳಗೊಂಡ ಜೇನುತುಪ್ಪವನ್ನು ಉತ್ಪಾದಿಸುತ್ತವೆ ಎಂಬುದು ಗಮನಾರ್ಹ ವಿಚಾರ.

ನಮ್ಮ ಮನೆಗಳ ಆವರಣ, ಕೈತೋಟ, ಹೊಲ-ಗದ್ದೆ, ಎಸ್ಟೇಟ್ ಹಾಗೂ ಕಾಡು-ಮೇಡುಗಳಲ್ಲಿ ಇಂತಹ ಕಿರುಜೇನುಗಳು ಇದ್ದೂ ಇಲ್ಲದಂತೆ, ಸದ್ದಿಲ್ಲದೇ ಕಾರ್ಯನಿರ್ವಹಿಸುತ್ತ ತಮ್ಮಅಮೂಲ್ಯ ಕೊಡುಗೆಯನ್ನು ಮನುಷ್ಯರಿಗೆ, ಕೃಷಿಕ್ಷೇತ್ರಕ್ಕೆ ಹಾಗೂ ಪರಿಸರಕ್ಕೆ ನೀಡುತ್ತಿವೆ. ಈ ಕಚ್ಚದ ಜೇನಿಗೆ ಹಲವು ಹೆಸರುಗಳಿವೆ. ಮುಜಂಟಿ, ಮೊಜೆಂಟಿ, ಮಿಸ್ರಿ, ನುಸ್ರಿ, ನಸರಿ, ನಸ್ರಿ, ನಿಸ್ರಿ, ರಾಳಜೇನು, ಮೂಲಿಜೇನು, ಕಿರುಜೇನು, ನುಸಿಜೇನು ಇತ್ಯಾದಿ.

ನಮಗೆಲ್ಲ ತಿಳಿದಿರುವಂತೆ ಜೇನು ಕುಟುಂಬಗಳಲ್ಲಿ ಪ್ರಮುಖವಾಗಿ ಐದು ವಿಧಗಳಿವೆ. ಹೆಜ್ಜೇನು, ಕೋಲ್ಜೇನು, ತೊಡುವೆ, ಇಟಾಲಿಯನ್ ಮತ್ತು ಮುಜಂಟಿ. ಈ ಪೈಕಿ ಅತ್ಯಂತ ಸಣ್ಣವೆಂದರೆ ಮುಜಂಟಿ. ಸೊಳ್ಳೆ ಗಾತ್ರ. ಆದರೆ ಸೊಳ್ಳೆಯಂತೆ ಸಣಕಲು ಅಲ್ಲ. ತುಸು ಗುಂಡಗೆ.

ಹಿಂದೆಲ್ಲ ಮುಜಂಟಿ ಜೇನಿನ ತುಪ್ಪವನ್ನು ಯಾರೂ ತಿನ್ನಲು ಬಳಸುತ್ತಿರಲಿಲ್ಲ. ಅದರ ಬಳಕೆ ಔಷಧೀಯ ಉದ್ದೇಶಕ್ಕೆ ಸೀಮಿತವಾಗಿತ್ತು. ಆದ್ದರಿಂದ ಒಮ್ಮೆ ತೆಗೆದ ಜೇನು ಬಾಟಲಿಯಲ್ಲಿ ಅನೇಕ ವರ್ಷಗಳವರೆಗೆ ಉಳಿಯುತ್ತಿತ್ತು. ಜೇನುಕುಟುಂಬವೂ ಗೂಡಿನಲ್ಲಿ ತನ್ನ ನೆಲೆ ಭದ್ರಪಡಿಸಿಕೊಂಡು ಹಲವು ವರ್ಷ ಹಾಗೆಯೇ ಇರುತ್ತಿತ್ತು. ಮುಟ್ಟಹೋದವರಿಗೆ ಇವು ಕಚ್ಚುವುದಿಲ್ಲ. ಗೂಡಿನಿಂದ ರಪರಪನೆ ಹೊರಬಂದು ಮೈಮೇಲೆಲ್ಲ ದಾಳಿ ನಡೆಸಿ ತಲೆಗೂದಲಿಗೆ ಅಂಟಿಕೊಂಡು ರೇಜಿಗೆ ಹುಟ್ಟಿಸುತ್ತವೆ. ಹಾಗಾಗಿ ಯಾರೂ ಅವುಗಳ ಗೋಜಿಗೆ ಹೋಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅವುಗಳನ್ನು ಔಷಧೀಯ ಉಪಯೋಗದ ಜತೆಗೆ ತಿನ್ನುವುದಕ್ಕೂ ಬಳಸುತ್ತಿದ್ದಾರೆ. ಹಾಗಾಗಿ ಕೆಲವರು ಅದರ ವ್ಯಾಪಾರ ಆರಂಭಿಸಿದ್ದಾರೆ.

ಮೊನ್ನೆಮೊನ್ನೆಯ ವರೆಗೂ ಮಣ್ಣಿನ ಗೋಡೆಗಳ ಸಂದುಗಳಲ್ಲೋ, ಮರದ ದಿಮ್ಮಿ-ಬಿದಿರ ಮೆಳೆಗಳಲ್ಲೋ, ವಿದ್ಯುತ್ ಮೀಟರ್ ಬಾಕ್ಸಿನೊಳಗೋ ಅವಿತಿರುತ್ತಿದ್ದ ಈ ಕಚ್ಚದ ಜೇನ್ನೊಣಗಳಿಗಾಗಿ ಈಗ ವ್ಯವಸ್ಥಿತ ಗೂಡುಗಳು ಅವತರಿಸಿವೆ. ಐವತ್ತು-ನೂರರಿಂದ ಹಿಡಿದು ಸಾವಿರಕ್ಕೂ ಮಿಕ್ಕಿ ಮುಜಂಟಿ ಜೇನುಕುಟುಂಬಗಳನ್ನಿಟ್ಟು ಶಾಸ್ತ್ರೀಯವಾಗಿ ಸಾಕಣೆ ಮಾಡುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ.

ಬೆಳೆಯುವ ಅವಧಿ: ಸೆಪ್ಟೆಂಬರ್​ನಿಂದ ಡಿಸೆಂಬರ್​ವರೆಗೆ ಮುಜಂಟಿ ಜೇನಿನ ಕುಟುಂಬ ಬೆಳವಣಿಗೆಯ ಅವಧಿ; ಜನವರಿಯಿಂದ ಏಪ್ರಿಲ್​ವರೆಗೆ ಜೇನು ಲಭ್ಯವಾಗುವ ಅವಧಿ; ಮೇಯಿಂದ ಆಗಸ್ಟ್​ವರೆಗೆ ಅಭಾವ ಅವಧಿ.

ಜೇನು ಮಾರಾಟ: ಮುಜಂಟಿ ಜೇನಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಮುಖ್ಯವಾಗಿ ಆರೋಗ್ಯ ಮತ್ತು ಔಷಧೀಯ ಉದ್ದೇಶಕ್ಕಾಗಿ ಇದರ ಬಳಕೆ ಹೆಚ್ಚು. ಮುಜಂಟಿ ಜೇನಿನ ಇಳುವರಿ ತುಂಬ ಕಡಿಮೆ ಹಾಗೂ ಔಷಧೀಯ ಗುಣ ಅತಿ ಹೆಚ್ಚು ಎಂಬ ಕಾರಣಕ್ಕೆ ಅದು ತೊಡುವೆ ಜೇನಿಗಿಂತ ಐದಾರು ಪಟ್ಟು ಹೆಚ್ಚು ಬೆಲೆಯುಳ್ಳದ್ದು.

ಭಾರೀ ಬೇಡಿಕೆ: ಮುಜಂಟಿ ಜೇನುಗೂಡುಗಳಿಂದ ಕೆಲವರಿಗೆ ವಾರ್ಷಿಕ ಗರಿಷ್ಠ 65 ಕೆ.ಜಿ.ಯಷ್ಟು ಜೇನು ಸಿಕ್ಕಿದೆ. ಈ ಜೇನಿಗೆ ಭಾರಿ ಬೇಡಿಕೆಯಿದೆ. ಕ್ಯಾನ್ಸರ್ ಮತ್ತಿತರ ರೋಗಗಳ ಚಿಕಿತ್ಸೆಯಲ್ಲಿ ಮುಜಂಟಿ ಜೇನು ಬಳಕೆ ವ್ಯಾಪಕವಾಗಿದೆ. ಕಾಯಂ ಗ್ರಾಹಕರು ಅನೇಕರಿದ್ದಾರೆ. ಔಷಧ ಕಂಪನಿಗಳೂ ಖರೀದಿಸುತ್ತವೆ. ಆದರೆ ಬೇಡಿಕೆಗೆ ಅನುಗುಣವಾದ ಪೂರೈಕೆ ಇಲ್ಲ!

ಉತ್ತಮ ಬೆಲೆ: ಮಾರಾಟದ ತಲೆಬಿಸಿ ಇಲ್ಲ. ಜೇನು ತೆಗೆದೊಡನೆ ಕೆ.ಜಿ.ಗೆ 1500ರಿಂದ 4000 ರೂ.ವರೆಗಿನ ದರದಲ್ಲಿ ಬಿಕರಿಯಾಗುತ್ತದೆ. ಮುಜಂಟಿ ಗೂಡುಗಳನ್ನೂ ಮಾರಾಟ ಮಾಡಬಹುದು. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮುಜಂಟಿ ಗೂಡುಗಳನ್ನು ಜೇನ್ನೊಣಗಳ ಸಮೇತ ಕೊರಿಯರ್ ಮೂಲಕ ಸುರಕ್ಷಿತವಾಗಿ ಸಾಗಿಸಬಹುದು. ನಂತರ ತೋಟದಲ್ಲೋ, ಮನೆಯಲ್ಲೋ ಸ್ಥಾಪಿಸಬಹುದು.

ಹೂಗಿಡಗಳೂ ಮುಖ್ಯ: ಹೂಗಿಡಗಳನ್ನು ನೆಟ್ಟು ಬೆಳೆಸುವುದೂ ಮುಜಂಟಿ ಸಾಕಣೆಯಷ್ಟೇ ಮಹತ್ವದ್ದು. ಆದರೆ ಆಸಕ್ತರಿಗೆ ಅಂತಹ ಗಿಡಗಳು ಒಂದೇ ಕಡೆ ಸಿಗುವುದು ಕಷ್ಟ. ಯಾರಾದರೂ ಇಂತಹ ಗಿಡಗಳದ್ದೇ ನರ್ಸರಿ ಸ್ಥಾಪಿಸಿದರೆ ಅಥವಾ ಈಗಿರುವ ಯಾವುದಾದರೂ ನರ್ಸರಿಯಲ್ಲಿ ಜೇನು ಗಿಡಗಳ ವಿಭಾಗವನ್ನು ತೆರೆದರೆ ಹಲವರಿಗೆ ಪ್ರಯೋಜನವಾದೀತು. ಹಕ್ಕಿ, ಚಿಟ್ಟೆ ಮತ್ತು ಜೇನ್ನೊಣಗಳನ್ನು ಆಕರ್ಷಿಸುವ ಗಿಡಗಳನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡಲು ಖಂಡಿತ ಅವಕಾಶವಿದೆ.

ಕೇರಳದಲ್ಲಿ ಕ್ರಾಂತಿ: ಕಳೆದೊಂದು ದಶಕದಿಂದ ಕೇರಳದಲ್ಲಂತೂ ಮುಜಂಟಿ ಸಾಕಣೆಯಲ್ಲಿ ಒಂದು ಕ್ರಾಂತಿಯೇ ಆಗಿದೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಈ ಗೂಡುಗಳನ್ನಿಟ್ಟು ವೈಜ್ಞಾನಿಕ ರೀತಿಯಲ್ಲಿ ಪೋಷಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ‘ಮನೆಗೊಂದು ಮುಜಂಟಿ ಗೂಡು’ ಆ ರಾಜ್ಯದಲ್ಲಿ ಒಂದು ಅಭಿಯಾನದ ರೂಪ ಪಡೆದಿದೆ. ಕರ್ನಾಟಕದಲ್ಲೂ ಅಲ್ಲಲ್ಲಿ ಇದನ್ನು ಸಾಕಣೆ ಮಾಡುವವರಿದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ.

ಕನ್ನಡದಲ್ಲಿ ಮಾಹಿತಿ ಕೊರತೆ

ಮಲಯಾಳಂನಲ್ಲಿ ಮುಜಂಟಿ ಸಾಕಣೆ ಕುರಿತ ಪುಸ್ತಕಗಳು, ಯೂಟ್ಯೂಬ್ ವಿಡಿಯೋಗಳು ಸಾಕಷ್ಟಿವೆ. ಕನ್ನಡದಲ್ಲಿ ಇದಕ್ಕೆ ಸಂಬಂಧಿಸಿದ ಮಾಹಿತಿಯ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಲೇಖಕ ಶಿವರಾಂ ಪೈಲೂರು ಹಲವು ವರ್ಷಗಳ ಕಾಲ ಪ್ರವಾಸ ಕೈಗೊಂಡು, ಅಧ್ಯಯನ ನಡೆಸಿದ್ದಲ್ಲದೆ ಸ್ವತಃ ಮುಜಂಟಿ ಸಾಕಣೆ ಮಾಡಿ ಕನ್ನಡದಲ್ಲಿ ಪುಸ್ತಕ ಬರೆದಿದ್ದಾರೆ. ಸದ್ಯದಲ್ಲೇ ಅದು ಮಾರುಕಟ್ಟೆಗೆ ಬರಲಿದೆ. ಮುಜಂಟಿ ಸಾಕಣೆ ಬಗ್ಗೆ ಆಸಕ್ತಿ ಇರುವವರು 9483757707 ಮೂಲಕ ಅವರನ್ನು ಸಂರ್ಪಸಬಹುದು.

ವೈಶಿಷ್ಟ್ಯಗಳು, ಅನುಕೂಲಗಳು

  • ಮುಜಂಟಿ ರಾಣಿ ನೊಣಕ್ಕೆ ಹಾರಲು ಬರುವುದಿಲ್ಲ. ಆದ್ದರಿಂದ ತೊಡುವೆಯಂತೆ ರಾಣಿಯನ್ನನುಸರಿಸಿ ಇಡೀ ಜೇನ್ನೊಣ ಕುಟುಂಬ ಪರಾರಿಯಾಗುವ ಸಂಭವವಿಲ್ಲ.
  • ಭಪರಾಗ, ಮಕರಂದಕ್ಕಾಗಿ ಇವು ಕ್ರಮಿಸುವ ದೂರ 300ರಿಂದ 800 ಮೀಟರ್ ಮಾತ್ರ. ಆದ್ದರಿಂದ ನೀವು ಬೆಳೆಸುವ ಹಣ್ಣು, ತರಕಾರಿಗಳಲ್ಲಿ ಹೆಚ್ಚಿನ ಪರಾಗಸ್ಪರ್ಶವಾಗಿ ಇಳುವರಿ ಹೆಚ್ಚುತ್ತದೆ.
  • ತಾರಸಿ ತೋಟ ಮಾಡಿರುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನ. ತರಕಾರಿಗಳಲ್ಲಿ ಪರಾಗಸ್ಪರ್ಶ ಏರ್ಪಡಲು ಮುಜಂಟಿಯೆ ಪ್ರಮುಖ ಮಾಧ್ಯಮ.
  • ಆಗಾಗ ಜೇನಿನ ಕುಟುಂಬವನ್ನು ಪರೀಕ್ಷಿಸುವ ಅಗತ್ಯವಿಲ್ಲ. ಜೇನು ತೆಗೆಯುವ ಅಥವಾ ಪಾಲುಮಾಡುವ ಸಂದರ್ಭದಲ್ಲಷ್ಟೆ ಗೂಡನ್ನು ತೆರೆದರೆ ಸಾಕು. ತಲೆಬಿಸಿಯಿಲ್ಲದ ನಿರ್ವಹಣೆ!
  • ಮುಜಂಟಿ ಜೇನಿನ ಕುಟುಂಬವನ್ನು ನಿಸರ್ಗದಲ್ಲಿ ನಾವೇ ಹುಡುಕಿಕೊಳ್ಳಬಹುದು. ಗೂಡನ್ನು ನಾವೇ ತಯಾರಿಸಿಕೊಳ್ಳಬಹುದು. ಶೂನ್ಯ ವೆಚ್ಚದಲ್ಲಿ ಆರಂಭಿಸಬಹುದಾದ ಕಸುಬು ಇದು.
  • ತೊಡುವೆ ಜೇನಿನಂತೆ ಮುಜಂಟಿಗೆ ಮೇಣದ ಹಾಳೆ ಅಳವಡಿಸಬೇಕಿಲ್ಲ. ಗೂಡಿನಿಂದ ಜೇನು ತೆಗೆಯುವುದಕ್ಕೆ ಯಂತ್ರ ಅಗತ್ಯವಿಲ್ಲ.
  • ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ತೊಡುವೆಗಿಂತ ಮುಜಂಟಿ ಸಶಕ್ತವಾದುದು; ಇದಕ್ಕೆ ರೋಗಬಾಧೆ ಬಹುತೇಕ ಇಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net