ಬುಡಕಟ್ಟು ಜನರಿಗೆ ಹೊಸ ಬದುಕು ಕಲ್ಪಿಸಿದ ಬಿರಸಾ ಮುಂಡಾ

Birsa Munda
Published on
ಬಿರಸಾ ಮುಂಡಾ ಪ್ರಖರ ದೇಶಭಕ್ತ, ಅವರು ಮುಂಡಾ ಬುಡಕಟ್ಟಿನ ಬಹುದೊಡ್ಡ ಹೋರಾಟಗಾರ. ಆ ಕಾಲದ ಬಿಹಾರದಲ್ಲಿ ಬುಡಕಟ್ಟು ಜನರ ಶೋಷಣೆ, ಅವರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಗಳು, ಅವರ ಸ್ವಾಭಾವಿಕ ಹಕ್ಕುಗಳನ್ನು ಹೇಗೆ ಭೂಮಾಲೀಕರು, ಬಡ್ಡಿ ಸಾಹುಕಾರರು, ಸರ್ಕಾರದ ಪ್ರತಿನಿಧಿಗಳು ಮುಖ್ಯವಾಗಿ ಬ್ರಿಟಿಷರು ಕಸಿದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿ ಸಿಡಿದೆದ್ದವರು.

ಬಿರಸಾ ರಾಂಚಿ ಹತ್ತಿರ, 15-11-1875ರಂದು ಹುಟ್ಟಿದರು. ಅವರ ಸಹೋದರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದನ್ನು ಕಂಡು ಅವರೂ ಅದೇ ದಾರಿ ಹಿಡಿದರು. ನಂತರ ಅವರು ವೈಷ್ಣವ ಧರ್ಮವನ್ನು ಸ್ವೀಕರಿಸಿದರು. ಮಾಂಸಾಹಾರ ತ್ಯಜಿಸಿದರು. ಜನಿವಾರ ಧರಿಸಿದರು. ಅರಿಶಿಣದಲ್ಲಿ ಶುದ್ಧಿಗೊಂಡ ಧೋತರವನ್ನು ಧರಿಸಿದರು. ಅದೂ ವೈಷ್ಣವರ ರೀತಿಯಲ್ಲಿ. ಹೀಗೆ ಮಾಡುತ್ತ ಅವರು ತಮ್ಮದೇ ಬುಡಕಟ್ಟು ಧರ್ಮದ ವಿರುದ್ಧ ಬಂಡೆದ್ದರು. ಅಷ್ಟೇ ಅಲ್ಲ, ತಾವೇ ಒಪ್ಪಿಕೊಂಡ ವೈಷ್ಣವ ಧರ್ಮದ ವಿರುದ್ಧವೂ ಬಂಡೆದ್ದರು. ತಾವು ಬುಡಕಟ್ಟು ಜನ, ಹೊಸ ರೀತಿಯಲ್ಲಿ, ಹೊಸದಾರಿಯಲ್ಲಿ ಬದುಕಬೇಕು ಎಂದು ಅವರಿಗೆ ಅನಿಸಿರಬೇಕು. ಅದಕ್ಕೆ ಬಿರಸಾ ಧರ್ಮವನ್ನು ಸ್ಥಾಪಿಸಿದರು. ಬಿರಸಾ ಧರ್ಮದಲ್ಲಿ ವಿಶ್ವಾಸವಿಟ್ಟವರಿಗೆ ವಿಶೇಷ ಆಚರಣೆಗಳು, ರೀತಿ-ನೀತಿಗಳನ್ನು ಮಾಡಲಾಗಿತ್ತು. ಮದ್ಯ ಕುಡಿಯುವುದನ್ನು ಹಾಗೂ ದೇವರ ಸಂಪ್ರೀತಿಗಾಗಿ ಪ್ರಾಣಿಗಳ ಬಲಿ ಕೊಡುವುದನ್ನು ಬಿರಸಾ ನಿಷೇಧಿಸಿದ್ದರು. ಅವರು ಶಿಕ್ಷಣವನ್ನು ಬುರ್ಜಿ ಎನ್ನುವ ಊರಿನ ಜರ್ಮನ್ ಮಿಶನ್ ಸ್ಕೂಲಿನಲ್ಲಿ ಪೂರೈಸಿದರು. 1895ರ ಹೊತ್ತಿಗೆ ಅಂದರೆ ಅವರ 20ನೇ ವಯಸ್ಸಿಗೆ ಬುಡಕಟ್ಟು ಜನರ ಹಕ್ಕಿಗಾಗಿ ಹೋರಾಟ ಮಾಡುವ ಆಂದೋಲನಕಾರಿಯಾಗಿ ಪರಿವರ್ತನೆಗೊಂಡರು. ‘ಬುಡಕಟ್ಟು ಜನರ ಕಾಡಿನ ಮೇಲಿರುವ ಹಕ್ಕುಗಳು, ನದಿಯ ನೀರಿನ ಮೇಲಿರುವ ಹಕ್ಕುಗಳು, ಅದು ದೇವರು ಕೊಟ್ಟ ಹಕ್ಕು. ಕಾಡನ್ನು ರಕ್ಷಣೆ ಮಾಡುವವರು ಬುಡಕಟ್ಟು ಜನರು. ಅವರ ಈ ಸ್ವಾಭಾವಿಕ ಹಕ್ಕುಗಳನ್ನು ಇಂಗ್ಲಿಷರು ಕಸಿದುಕೊಳ್ಳುತ್ತಿದ್ದಾರೆ. ಕಾಡಿನ ಜನರನ್ನು ಕಾಡಿನಿಂದ ದೂರ ಮಾಡುತ್ತಿದ್ದಾರೆ. ನಾವು ಇದರ ವಿರುದ್ಧ ಸಿಡಿದೇಳಬೇಕು’ ಎಂದು ಬಿರ್ಸಾ ಮುಂಡಾ ಕರೆ ಕೊಟ್ಟರು.

ಬಿರಸಾ ಧರ್ಮಕ್ಕಾಗಿ ಸ್ವಯಂಸೇವಕರನ್ನು ನೇಮಿಸಿಕೊಂಡರು. ವೈಯಕ್ತಿಕವಾಗಿ ಚರಿತ್ರವಂತರನ್ನಾಗಿ ಮಾಡುವುದು ಹಾಗೂ ಮಾನಸಿಕವಾಗಿ ಅವರನ್ನು ಬ್ರಿಟಿಷ್ ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಬಿರಸಾ ಮುಂಡಾ ಅವರ ಚಳವಳಿಗೆ ಬೆದರಿದ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿ ಹಜಾರಿಬಾಗ ಜೈಲಿನಲ್ಲಿ ಎರಡು ವರ್ಷ ಇರಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಸಭೆಗಳನ್ನು ಆರಂಭಿಸಿದರು. ಜನರನ್ನು ಹಗಲು-ರಾತ್ರಿ ಭೇಟಿ ಮಾಡಿ, ಬ್ರಿಟಿಷರನ್ನು ತೊಲಗಿಸಬೇಕು, ಬುಡಕಟ್ಟು ಜನರಿಗೆ ಹಕ್ಕುಗಳು ಸಿಗಬೇಕು ಎಂದು ಒತ್ತಾಯಿಸತೊಡಗಿದರು. ಬ್ರಿಟಿಷರಿಗೆ ಇವರ ಚಟುವಟಿಕೆಗಳು ದೊಡ್ಡ ಪ್ರಮಾಣದ ಕಿರಿಕಿರಿಗಳಾದವು. ಯುರೋಪಿಯನ್ ಅಧಿಕಾರಿಗಳನ್ನು ಇವರ ಹಿಂಬಾಲಕರು ಕೊಂದರು. ಸಿಂಗಭೂಮ್ಲ್ಲಿ, ರಾಂಚಿಯಲ್ಲಿ ಮಿಶನರಿಗಳನ್ನು ಅಟ್ಟಾಡಿಸಿಕೊಂಡು ಹೋದರು.

1899-1900ರ ಕ್ರಾಂತಿಯಲ್ಲಿ ಬಿರಸಾ ಮುಂಡಾ ಮುಖ್ಯ ಮುಖಂಡರಾಗಿ ಮೇಲೆ ಬಂದರು. ದಿನಂಪ್ರತಿ ಬ್ರಿಟಿಷರು ಇವರಿಗಾಗಿ ಶೋಧ ಆರಂಭಿಸಿದರು. ಅನೇಕ ಹೋರಾಟಗಳು ನಡೆದವು. ಆದರೂ ಅವರು ಹೇಗೋ ತಪ್ಪಿಸಿಕೊಂಡರು. ಮುಂಡಾ ಬುಡಕಟ್ಟು ಜನ ಈ ನಾಡಿನ ಮಣ್ಣಿನ ಧಣಿಗಳು. ದಲ್ಲಾಳಿಗಳನ್ನು ಎಂದೂ ಸಹಿಸುವುದಿಲ್ಲ ಎಂಬುದನ್ನು ಬಿರಸಾ ಸ್ಪಷ್ಟಪಡಿಸಿದರು. ಅವರ ಹಿಂಬಾಲಕರೆಲ್ಲರೂ ಬಿರಸಾ ಅವರನ್ನು ದೇವರ ಪ್ರತಿನಿಧಿ ಎಂದು ಬಲವಾಗಿ ನಂಬಿದ್ದರು. ಸೂರ್ಯದೇವರ ಪ್ರತಿನಿಧಿ ಅಂತಲೂ ನಂಬಿದ್ದರು. ಜನರನ್ನು ಆಕರ್ಷಣೆಗೊಳಿಸುವ, ಅವರ ರೋಗರುಜಿನಗಳನ್ನು ದೂರಮಾಡುವ ಬಹಳ ದೊಡ್ಡ ದೈವಿಶಕ್ತಿ ಅವರಲ್ಲಿತ್ತು. ಮುಂಡಾ ಧರ್ಮದಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಭೂಮಿ, ಕಾಡು, ನೀರು, ಕಾಡಿನ ಉತ್ಪನ್ನಗಳ ಮೇಲೆ ಸಮಾನವಾದ ಹಕ್ಕಿದೆ ಎಂದು ಪ್ರತಿಪಾದಿಸುತ್ತಿದ್ದರು. ಬುಡಕಟ್ಟು ಜನರ ದೇಶಪ್ರೇಮ, ತ್ಯಾಗ ಬಹುದೊಡ್ಡದು ಎಂಬುದನ್ನು ಬಿರಸಾ ಎತ್ತಿ ತೋರಿಸಿದರು.

ಛೋಟಾ ನಾಗಪೂರದ ಬುಧು ಬಗತ್​ರ ಥರಾ, ಕೋಲ್, ಗಂಗಾ ನಾರಾಯಣ, ಭುವೇಜ್ ಬುಡಕಟ್ಟುಗಳ ಪರವಾಗಿ ಹೋರಾಟ ಮಾಡಿದರು. ಮುಂಡಾ ಬುಡಕಟ್ಟು ಜನರಲ್ಲದೇ ಎಲ್ಲ ಬುಡಕಟ್ಟು ಜನಾಂಗದ ಪರವಾಗಿ ಧಾರ್ವಿುಕ, ಆರ್ಥಿಕ, ಶೈಕ್ಷಣಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರು. ಜಮೀನ್ದಾರರ ಶೋಷಣೆ ವಿರುದ್ಧ ಬುಡಕಟ್ಟು ಜನರು ಏನೂ ಮಾಡದ ಸ್ಥಿತಿಯಲ್ಲಿದ್ದರು. ಹೀಗಾಗಿ ತೆರಿಗೆ ಪಾವತಿಸದಂತೆ ಬಿರಸಾ ಜನರಿಗೆ ಕೇಳಿಕೊಂಡರು. ಜಮೀನ್ದಾರರ ಮನೆಗಳಿಗೆ ಘೕರಾವ್ ಹಾಕಲು ಆರಂಭಿಸಿದರು. ಬಿರಸಾ ಸ್ಥಾಪಿಸಿದ ಹೊಸ ಧರ್ಮದಲ್ಲಿ ಶೋಷಣೆಗಳಿರಲಿಲ್ಲ. ಸಮಾನತೆ ಹಾಸುಹೊಕ್ಕಾಗಿತ್ತು. ಕಾಡಿನ ಹಕ್ಕುಗಳಿಗಾಗಿ 1894ರ ಅಕ್ಟೋಬರ್​ನಲ್ಲಿ ದೊಡ್ಡ ಆಂದೋಲನ ಮಾಡಿದ ಬಿರಸಾ, ಇಂಗ್ಲೆಂಡಿನ ಮಹಾರಾಣಿ ಇವರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಿದರು. ಛೋಟಾ ನಾಗಪೂರದ ಸುತ್ತಮುತ್ತ ಎಲ್ಲ ಬುಡಕಟ್ಟು ಜನರನ್ನು ಒಂದು ಮಾಡುವ ಕೆಲಸವನ್ನು ಬಿರಸಾ ಮಾಡಿದರು.

ಇವರ ಚಳವಳಿಯ ಕಾರಣದಿಂದ ಜಮೀನ್ದಾರರು, ಹಣವಂತರು, ಶೋಷಣೆಯನ್ನು ನಿಲ್ಲಿಸಿ, ಊರುಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿಯನ್ನು ಬಿರಸಾ ನಿರ್ಮಾಣ ಮಾಡಿದರು. ಬುಡಕಟ್ಟು ಜನರು ಎಂದೂ ಹಣಕ್ಕೆ ಕಿಮ್ಮತ್ತು ಕೊಟ್ಟವರಲ್ಲ. ಅವರಿಗೆ ನದಿಯ ನೀರು ಶುದ್ಧವಾಗಿರಬೇಕು. ಕಾಡಿನ ಪ್ರಾಣಿಗಳು ತಮ್ಮ ಪಾಡಿಗೆ ಬದುಕಬೇಕು. ಕಾಡಿನ ಜನರು ಜೇನನ್ನು, ಹಣ್ಣು-ಹಂಪಲಗಳನ್ನು, ಗೆಡ್ಡೆ-ಗೆಣಸುಗಳನ್ನು ತಿನ್ನುತ್ತ ಸ್ವಚ್ಛಂದವಾಗಿ ವಿಹರಿಸಬೇಕು. ಇದು ಕಾಡಿನ ಧರ್ಮ. ಈ ಕಾಡಿನ ಧರ್ಮವನ್ನು ಬಿರಸಾ ಧರ್ಮ ಎತ್ತಿ ಹಿಡಿಯುತ್ತದೆ.

ರೈಲ್ವೆ ಪ್ರವೇಶದ ಮೂಲಕ ಬ್ರಿಟಿಷರು ಛೋಟಾ ನಾಗಪೂರದ ಅರಣ್ಯಭಾಗವನ್ನು ನಾಶ ಮಾಡಿದರು. ರೈಲ್ವೆಗಾಗಿ ಬೇಕಾಗುವ ಮರದ ದಿಮ್ಮಿಗಳನ್ನು ಅವರು ಈ ಪ್ರಸಿದ್ಧ ಕಾಡುಗಳಿಂದ ಕೊಳ್ಳೆ ಹೊಡೆದು, ಇಡೀ ದೇಶಕ್ಕೆ ರವಾನಿಸಿದರು. ಬಿರಸಾ ತೀವ್ರವಾಗಿ ಪ್ರತಿಭಟಿಸಿದರು. ‘ಕಾಡು, ಜಲ ದೇವರ ಕೊಡುಗೆ, ಬುಡಕಟ್ಟು ಜನ ದೇವರ ಪ್ರತಿನಿಧಿಗಳು, ಈ ಬಡಜನರನ್ನು ನೀವು ಶೋಷಣೆ ಮಾಡಬೇಡಿ’ ಅಂತ ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟರು. ನೀವೆಲ್ಲ ಶಿಕ್ಷಣ ಪಡೆಯಬೇಕು ಎಂದು ಬುಡಕಟ್ಟು ಜನಾಂಗಕ್ಕೆ ಹೇಳಿದರು. ಬುಡಕಟ್ಟು ಜನರಿಗೆ ತಮ್ಮದೇ ಆದ ಜೀವನಧರ್ಮ, ಜೀವನಮೌಲ್ಯಗಳಿವೆ. ಅವುಗಳನ್ನು ಅರಿತುಕೊಂಡು ಪಾಲನೆ ಮಾಡಬೇಕು. ಹೊಸ ತಂತ್ರಜ್ಞಾನದ ಕೃಷಿಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಬುಡಕಟ್ಟು ಜನಾಂಗಕ್ಕೆ ಒತ್ತಾಯ ಮಾಡಿದರು. ‘ಈ ಬಡ ಬುಡಕಟ್ಟು ಜನರಿಗೆ ನೀವು ಯಾವ ಹಣ, ಸೌಕರ್ಯಗಳನ್ನು ಕೊಡುವ ಅವಶ್ಯಕತೆ ಇಲ್ಲ’ ಎಂದು ಬ್ರಿಟಿಷ್​ರಿಗೆ ಕರೆಕೊಟ್ಟರು. ‘ಈ ಕಾಡುಜನರನ್ನು ಅವರ ಪಾಡಿಗೆ ಅವರನ್ನು ಬಿಟ್ಟು ಬಿಡಿ’ ಎಂಬುದು ಅವರ ಕೊನೆಯ ಸಂದೇಶವಾಗಿತ್ತು.

ಬುಡಕಟ್ಟು ಜನರಿಗೆ ಅವರು ಹೇಳಿದ ಎರಡನೆಯ ಬಹುದೊಡ್ಡ ಸಂದೇಶವೆಂದರೆ- ‘ನೀವು ತಿಳಿವಳಿಕೆಯುಳ್ಳವರಾಗಿ, ಆಧುನಿಕ ಶಿಕ್ಷಣ ಪಡೆಯಿರಿ, ಬುಡಕಟ್ಟು ಧರ್ಮದ ಮೇಲೆ ವಿಶ್ವಾಸವಿಡಿ, ಕಾಡನ್ನು ಉಳಿಸಿ, ಕಾಡನ್ನು ಬೆಳೆಸಿ. ಅದು ನಮ್ಮನ್ನೆಲ್ಲ ಬೆಳಸಲಿದೆ’. ಅವರ ಕುರಿತು ಮಾತನಾಡುವುದು, ಬರೆಯುವುದು ಎಂದರೆ ದೇಶದ ಬಗ್ಗೆ ಚಿಂತಿಸಿದಂತೆ. ಬಡ ಬುಡಕಟ್ಟು ಜನರ, ದೇಶದ ಸಂಪತ್ತುಗಳಾದ ನೀರು, ನದಿ, ಖನೀಜಗಳ ಪರವಾಗಿ ಅವರು ಹೋರಾಟ ಮಾಡುತ್ತಲೇ ಜೀವನವನ್ನು ಕೊನೆಗೊಳಿಸಿದರು. ಸರ್ಕಾರಿ ದಾಖಲೆಗಳ ಪ್ರಕಾರ ಬಿರಸಾ ಕಾಲರಾದಿಂದ ರಾಂಚಿಯ ಜೈಲಿನಲ್ಲಿ ಮರಣಹೊಂದಿದರು. ಆದರೆ, ಬ್ರಿಟಿಷರು ಗುಪ್ತವಾಗಿ ಬಿರಸಾ ಅವರಿಗೆ ವಿಷವನ್ನು ಉಣ್ಣಿಸಿದ್ದರು ಎಂದು ಈಗಲೂ ಬುಡಕಟ್ಟು ಜನರು ನಂಬಿದ್ದಾರೆ.

(ಲೇಖಕರು ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net