ದೊಡ್ಡಣ್ಣ ಅಂದರೆ ಸುಮ್ಮನೆಯೇ!

fea
Published on
ಇರಾನ್-ಇರಾಕ್ ಸಮರದ ದಿನಗಳಲ್ಲಿ (1980-88) ಸದ್ದಾಂ ಹುಸೇನ್​ಗೆ ವಿವಿಧ ಸಮರಸಾಮಗ್ರಿಗಳ ಜತೆ ರಾಸಾಯನಿಕ ಅಸ್ತ್ರಗಳ ಪೂರೈಕೆಯೂ ಅಮೆರಿಕದಿಂದಲೇ ಆಗಿತ್ತು. ಇದಾದದ್ದು ಜಗತ್ತಿನ ಕಣ್ಣುತಪ್ಪಿಸಿ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆ ರಾಸಾಯನಿಕ ಅಸ್ತ್ರಗಳನ್ನು ಆತ ಇರಾನ್​ನ ವಿರುದ್ಧವಲ್ಲದೆ ತನ್ನದೇ ಕುರ್ದ್ ಜನರ ಮೇಲೂ ಪ್ರಯೋಗಿಸಿ ಸಹಸ್ರಾರು ಜನರನ್ನು ಕೊಂದಿದ್ದ. ಅವನ ಅಣ್ವಸ್ತ್ರದ ಬಯಕೆಯನ್ನು ಇಸ್ರೇಲ್ 1981ರ ಜೂನ್ 7ರಂದು ಒಸಿರಾಕ್ ನ್ಯೂಕ್ಲಿಯರ್ ರಿಯಾಕ್ಟರ್ ಮೇಲೆ ದಾಳಿಯೆಸಗುವುದರ ಮೂಲಕ ಹೊಸಕಿಹಾಕಿತ್ತು. ಆನಂತರ ಅವನು ಯುರೇನಿಯಂ ಸಂಸ್ಕರಣೆಯನ್ನು ರಹಸ್ಯವಾಗಿ ಕೈಗೊಂಡ ಬಗ್ಗೆ ವಿವರಗಳು ಲಭ್ಯವಿಲ್ಲ. ಆತ ಹಾಗೆ ಮಾಡಿದ್ದೇ ಆದರೆ ಅದು ಅಮೆರಿಕಕ್ಕೆ ಗೊತ್ತಿರುವ ಹಾಗೂ ರೊನಾಲ್ಡ್ ರೀಗನ್ ಸರ್ಕಾರ ಅದರ ಬಗ್ಗೆ ಬೆನ್ನು ತಿರುಗಿಸಿರುವ ಸಾಧ್ಯತೆ ಖಂಡಿತ ಇದೆ. ಸೋವಿಯತ್ ವಿರುದ್ಧದ ಅಫ್ಘನ್ ಸಮರದಲ್ಲಿ ಪಾಕಿಸ್ತಾನವನ್ನು ತನ್ನ ಕಡೆಯೇ ಇರಿಸಿಕೊಳ್ಳುವ ಒಂದೇ ಉದ್ದೇಶದಿಂದ ಆ ದೇಶದ ಅಣ್ವಸ್ತ್ರ ಕಾರ್ಯಯೋಜನೆಗಳ ಬಗ್ಗೆ ಅಮೆರಿಕ ಮೌನಸಮ್ಮತಿ ತೋರಿ ಆ ದೇಶ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳಲು ಪರೋಕ್ಷವಾಗಿ ಕಾರಣವಾದ ಉದಾಹರಣೆ ನಮ್ಮ ಮುಂದೇ ಇದೆ.

ಈಗ ನಮ್ಮ ವಿಶ್ಲೇಷಣೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಿ 2001ಕ್ಕೆ ತರೋಣ. ಕೇವಲ ಪ್ರಯಾಣಿಕರ ವಿಮಾನಗಳನ್ನೇ ಭಯಾನಕ ಅಸ್ತ್ರಗಳನ್ನಾಗಿ ಬಳಸಿ ಹಿಂದಿನ ಭಾರಿ ಶತ್ರುಗಳಾದ ಜಪಾನ್, ಜರ್ಮನಿ ಮತ್ತು ಸೋವಿಯತ್ ಯೂನಿಯನ್​ಗಳು ಎಸಗಲಾಗದಿದ್ದಷ್ಟು ಹಾನಿಯನ್ನು ಅಮೆರಿಕಕ್ಕೆ ಎಸಗಿ ಅದರ ಅಧ್ಯಕ್ಷ ಹಲವು ಗಂಟೆಗಳ ಕಾಲ ಅಡಗಿಕೊಳ್ಳುವಂತೆ ಮಾಡಿದ ಅಲ್-ಖಯೀದಾಗೆ ಇರಾಕ್​ನಲ್ಲಿರುವ ರಾಸಾಯನಿಕ ಅಸ್ತ್ರಗಳು ಹಾಗೂ ಬಹುಶಃ ಅಣ್ವಸ್ತ್ರಗಳು ಅಥವಾ ಅದರ ತಂತ್ರಜ್ಞಾನ ಸಿಕ್ಕಿಬಿಟ್ಟರೆ ಅದರ ವಿಧ್ವಂಸಕ ಸಾಮರ್ಥ್ಯ ಅದೆಷ್ಟು ಉಗ್ರವಾಗಬಹುದು? ಇರಾಕ್​ನಲ್ಲಿ ಯಾವುದೇ ಸಮೂಹನಾಶಕ ಶಸ್ತ್ರಾಸ್ತ್ರಗಳಿಲ್ಲ ಎಂದು ವಿಶ್ವಸಂಸ್ಥೆಯ ಆಯೋಗವೇ ಹೇಳಿದರೂ ಅಮೆರಿಕ ಆ ದೇಶದ ಮೇಲೆ ದಾಳಿ ಎಸಗಿ ಇಂಚಿಂಚನ್ನೂ ಶೋಧಿಸಲು ಇದು ಕಾರಣ. ಎರಡು ದಶಕಗಳ ಹಿಂದೆ ಸದ್ದಾಂ ಹುಸೇನ್​ಗೆ ತಾವೇನು ಕೊಟ್ಟಿದ್ದೆವೆಂದು ಅಮೆರಿಕನ್ನರಿಗೆ ಮರೆತುಹೋಗಿರಲಾರದು ಅಲ್ಲವೇ? ಅಂದರೆ ಅಮೆರಿಕದ ಇರಾಕ್ ಆಕ್ರಮಣ ಮುಂದೊಂದು ದಿನ ಇಸ್ಲಾಮಿಕ್ ಮೂಲಭೂತವಾದಿಗಳಿಂದ ಬರಬಹುದಾದ ರಾಸಾಯನಿಕ ಹಾಗೂ ಅಣ್ವಸ್ತ್ರ ದಾಳಿಯನ್ನು ತಡೆಗಟ್ಟುವ ಉದ್ದೇಶ ಹೊಂದಿತ್ತು ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಆಲೋಚಿಸಿದಾಗ ಅದೆಲ್ಲವೂ ಅಮೆರಿಕ ತಾನೇ ಕೈಯಾರೆ ತಂದುಕೊಂಡ ಅಪಾಯವಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಒಬ್ಬ ಶತ್ರುವನ್ನು ನಿರ್ನಾಮಗೊಳಿಸುವ ಭರದಲ್ಲಿ ತನ್ನ ಸೀಮಿತ ದೃಷ್ಟಿಕೊನದಿಂದಾಗಿ ಹತ್ತುಪಟ್ಟು, ನೂರುಪಟ್ಟು ಉಗ್ರ ವೈರಿಯನ್ನು ಸೃಷ್ಟಿಸಿಕೊಳ್ಳುವುದು ಅಮೆರಿಕದ ಜಾಯಮಾನವೇ ಆಗಿಹೋಗಿದೆ ಎಂಬ ಆಲೋಚನೆಯೂ ನಮಗೆ ಸಹಜವಾಗಿಯೇ ಬರುತ್ತದೆ. ಇರಾನ್​ನಲ್ಲಿನ ಪಶ್ಚಿಮ-ವಿರೋಧಿ ಇಸ್ಲಾಮಿಕ್ ಮೂಲಭೂತವಾದವನ್ನು ಮೊಳಕೆಯಲ್ಲೇ ಚಿವುಟಿಹಾಕುವ ಪ್ರಯತ್ನದಲ್ಲಿ ಅಮೆರಿಕ ಸದ್ದಾಂ ಹುಸೇನ್ ಎಂಬ ಕಂಟಕವನ್ನು ಸೃಷ್ಟಿಸಿತು. ಸೋವಿಯತ್ ಸೇನೆಯನ್ನು ಅಫ್ಘಾನಿಸ್ತಾನದಿಂದ ಕಾಲ್ತೆಗೆಸುವ ಲೆಕ್ಕಾಚಾರದಲ್ಲಿ ಅಮೆರಿಕ ಕೊನೆಗೆ ಸೃಷ್ಟಿಸಿಕೊಂಡದ್ದು ಅಲ್-ಖಯೀದಾ ಮತ್ತು ತಾಲಿಬಾನ್​ಗಳೆಂಬ ಫ್ರಾ್ಯಂಕೆನ್​ಸ್ಟೈನ್ ಮಾನ್​ಸ್ಟರ್​ಗಳನ್ನು. ನಂತರ ಅವೆರಡನ್ನೂ ಅಡಗಿಸುವ ಪ್ರಯತ್ನದಲ್ಲಿ ಇರಾಕ್ ಮತ್ತು ಪಾಕಿಸ್ತಾನಗಳೆರಡರಲ್ಲೂ ನೂರೊಂದು ರಕ್ತಬೀಜಾಸುರರನ್ನು ಅದು ಸೃಷ್ಟಿಸಿಕೊಂಡಿದೆ.

ಇದು ಕಣ್ಣೆದುರಿನ ವಾಸ್ತವವಾದರೂ, ಅಮೆರಿಕ ಏನೇನು ಮಾಡಿತೋ ಅದನ್ನು ಮಾಡದೇ ಹೋಗಿದ್ದರೆ ಏನಾಗುತ್ತುತ್ತಿತ್ತು, ಅಮೆರಿಕ ಅಷ್ಟೇ ಅಲ್ಲ ನಾವೂ ಸೇರಿದಂತೆ ಈ ಜಗತ್ತು ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಿಕೊಳ್ಳುವುದರ ಒಂದು ಪ್ರಯತ್ನ ಮಾಡುವುದು ನಿಷ್ಪಕ್ಷಪಾತಿ ವಿಶ್ಲೇಷಣೆಗೆ ಅತ್ಯಗತ್ಯ. ಇದನ್ನು ಅಫ್ಘಾನಿಸಾನದಿಂದಲೇ ಆರಂಭಿಸೋಣ.

1979ರ ಡಿಸೆಂಬರ್ ಅಂತ್ಯದಲ್ಲಿ ಸೋವಿಯತ್ ಸೇನೆ ಕಾಬೂಲ್​ನಲ್ಲಿನ ಕಮ್ಯೂನಿಸ್ಟ್ ಸರ್ಕಾರವನ್ಜು ಉಳಿಸಿಕೊಳ್ಳುವ ಗಂಭೀರ ಪ್ರಯತ್ನವಾಗಿ ಅಫ್ಘಾನಿಸ್ತಾನವನ್ನು ಪ್ರವೇಶಿಸಿತು. ಅದನ್ನು ಅಲ್ಲಿಂದ ಹೊರಗಟ್ಟುವ ಕೆಟ್ಟ ಆಲೋಚನೆ ಅಮೆರಿಕಕ್ಕೆ ಏಕೆ ಬಂತು? ಮಧ್ಯ ಏಷ್ಯಾದ ಕಝಾಖ್​ಸ್ತಾನ್, ತುರ್ಕ್​ವೆುನಿಸ್ತಾನ್,

ಉಝೆ್ಬೕಕಿಸ್ತಾನ್, ತಾಜಿಕಿಸ್ತಾನ್ ಹಾಗೂ ರ್ಕಿಘಿಸ್ತಾನ್​ಗಳನ್ನು ರಷ್ಯನ್ನರು ಶತಮಾನದ ಹಿಂದೆಯೇ ತಮ್ಮದಾಗಿಸಿಕೊಂಡಿದ್ದರು. ಆ ಐದು ಸ್ತಾನ್​ಗಳೊಂದಿಗೆ ಇಂದು ಆರನೆಯದೊಂದೂ ರಷ್ಯನ್ನರ ಕೈ ಸೇರಿದರೆ ನನ್ನ ಗಂಟೇನು ಹೋಯಿತು ಎಂದು ಅಮೆರಿಕ ತೆಪ್ಪಗಿರಬಾರದಿತ್ತೇ?

ಅಫ್ಘಾನಿಸ್ತಾನ ಆಧುನಿಕ ಜಾಗತಿಕ ಭೂ-ರಾಜಕೀಯದಲ್ಲಿ ಮುಂಚೂಣಿಗೆ ಬಂದದ್ದು ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ. ಭೌಗೋಳಿಕವಾಗಿ ರಷ್ಯಾ ಜಗತ್ತಿನ ಅತಿ ಬೃಹತ್ ದೇಶವಾದರೂ, ಅತಿ ದೀರ್ಘ ಸಾಗರತೀರವನ್ನದು ಹೊಂದಿದ್ದರೂ ಅದೆಲ್ಲವೂ ಇದ್ದದ್ದು ಶೀತವಲಯದಲ್ಲಿ. ಸಮುದ್ರ ಹಿಮಗಟ್ಟುವ ಕಾರಣ ಅಲ್ಲಿನ ರೇವುಪಟ್ಟಣಗಳು ವರ್ಷವಿಡೀ ಸಕ್ರಿಯವಾಗಿರಲು ಸಾಧ್ಯವಿರಲಿಲ್ಲ. ಸಮಶೀತೋಷ್ಣ ವಲಯದಲ್ಲಿದ್ದ ಪಶ್ಚಿಮ ಯುರೋಪಿನ ಸಣ್ಣಪುಟ್ಟ ದೇಶಗಳೆಲ್ಲ ಬೃಹತ್ ನೌಕಾಪಡೆಗಳನ್ನು ಕಟ್ಟಿ ಗೋಳದ ಉದ್ದಗಲಕ್ಕೂ ಹರಿದಾಡಿ ವಿಶಾಲ ವಸಾಹತುಗಳನ್ನು ಕಟ್ಟಿಕೊಂಡದನ್ನು ನೋಡಿ ರಷ್ಯಾಗೆ ಸಹಜವಾಗಿಯೇ ಹೊಟ್ಟೆಕಿಚ್ಚು. ತಾನೂ ಸಮಶೀತೋಷ್ಣವಲಯದಲ್ಲಿ ಒಂದು ಬಂದರನ್ನು ಗಳಿಸಿಕೊಳ್ಳಬೇಕು ಎಂದು ತೀರ್ವನಿಸಿದ ರಷ್ಯಾ ಮೊದಲಿಗೆ ತುರ್ಕಿಗೆ ಸೇರಿದ್ದ ಕಪ್ಪುಸಮುದ್ರದ ಉತ್ತರ ತೀರಪ್ರದೇಶವನ್ನು ಆಕ್ರಮಿಸಿಕೊಂಡಿತು. ದಕ್ಷಿಣಕ್ಕೆ ಬಂದು ಅಂದು ತುರ್ಕಿಯ ಆಟೋಮಾನ್ ಸಾಮ್ರಾಯದ ಭಾಗಗಳಾಗಿದ್ದ ರುಮೇನಿಯಾ, ಬಲ್ಗೇರಿಯಾ, ಗ್ರೀಸ್​ಗಳ ಮೂಲಕ ಮೆಡಿಟರೇನಿಯನ್ ಸಮುದ್ರತೀರ ತಲುಪುವ ಬಯಕೆ ರಷ್ಯಾಗೆ. ಆದರೆ ಇದನ್ನು ತಮಗೆ ಅಪಾಯಕಾರಿಯಾಗಿ ಪರಿಗಣಿಸಿದ್ದು ಬ್ರಿಟನ್ ಮತ್ತು ಫ್ರಾನ್ಸ್. ರಷ್ಯಾ ಮೊದಲಿಗೆ ಮೆಡಿಟರೇನಿಯನ್ ಮತ್ತು ನಂತರ ಅದರಾಚೆಯ ಅಟ್ಲಾಂಟಿಕ್​ಗೆ ದಾರಿ ಮಾಡಿಕೊಂಡುಬಿಟ್ಟರೆ ತಮ್ಮ ವಸಾಹತುಗಳ ಮೇಲೆ ಅದು ಕಣ್ಣುಹಾಕುತ್ತದೆ ಎಂದು ಶಂಕಿಸಿದ ಅವೆರಡು ದೇಶಗಳು ರಷ್ಯಾವನ್ನು ಕಪ್ಪುಸಮುದ್ರದ ದಕ್ಷಿಣಕ್ಕೆ

ಬಾರದ ಹಾಗೆ ತಡೆಯುವ ಉದ್ದೇಶದಿಂದ ತುರ್ಕಿಗೆ ಬೆಂಬಲವಾಗಿ ನಿಂತು 1853-56ರ ಕ್ರಿಮಿಯಾ ಯುದ್ಧದಲ್ಲಿ ರಷ್ಯಾವನ್ನು ಸೋಲಿಸಿ ಅದರ ದಕ್ಷಿಣಾಭಿಮುಖಿ ದಾಪುಗಾಲನ್ನು ತಡೆದುಬಿಟ್ಟವು. ಬೇರೆ ದಾರಿ ಹುಡುಕಿದ ರಷ್ಯಾಗೆ ಕಂಡದ್ದು ಪರ್ಶಿಯನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರ. ಕ್ರಿಮಿಯಾ ಯುದ್ಧದ ನಂತರ ಕೇವಲ ಮೂರೇ ದಶಕಗಳಲ್ಲಿ ರಷ್ಯಾ ಇಡೀ ಮಧ್ಯ ಏಷ್ಯಾವನ್ನು ಅಂದರೆ ಮೇಲೆ ಉಲ್ಲೇಖಿಸಿದ ಐದು ‘ಸ್ತಾನ್’ಗಳನ್ನು ತನ್ನದಾಗಿಸಿಕೊಂಡು ಅಫ್ಘಾನಿಸ್ತಾನದ ಗಡಿಗೆ ಬಂದು ನಿಂತಿತು. ಆಗ ಎಚ್ಚತ್ತಿದ್ದು ಭಾರತದಲ್ಲಿದ್ದ ಬ್ರಿಟಿಷರು. ಅಫ್ಘಾನಿಸ್ತಾನ ಪ್ರವೇಶಿಸಲು ರಷ್ಯನ್ನರಿಗೆ ಅವಕಾಶ ನೀಡಿದರೆ ಮುಂದೆ ಅವರು ಅಂದು ಬ್ರಿಟಿಷ್ ಭಾರತದ ಭಾಗವಾಗಿದ್ದ ಬಲೂಚಿಸ್ತಾನ ಪ್ರವೇಶಿಸಿ ಅರಬ್ಬಿ ಸಮುದ್ರಕ್ಕೆ ದಾರಿಮಾಡಿಕೊಳ್ಳುತ್ತಾರೆ, ಅಲ್ಲಿಗೆ ಹಿಂದೂ ಮಹಾಸಾಗರದ ಮೇಲಿನ ತಮ್ಮ ಹಿಡಿತಕ್ಕೆ ಧಕ್ಕೆ ಬೀಳುತ್ತದೆ ಎಂದರಿತ ಬ್ರಿಟಿಷರು ರಷ್ಯನ್ನರ ಒಂದಕ್ಕಿಂತ ಹೆಚ್ಚು ತಂತ್ರಗಳನ್ನು ಅನುಸರಿಸಿದರು. ರಾಜತಂತ್ರ, ಸೇನಾಬೆದರಿಕೆ ಎಲ್ಲವನ್ನೂ ಒಳಗೊಂಡ ಈ ಹಣಾಹಣಿ ಇತಿಹಾಸದಲ್ಲಿ ಖಜಛಿ ಎಛಿಚಠಿ ಎಚಞಛಿ ಎಂದು ಹೆಸರಾಗಿದೆ. ಅಂತಿಮವಾಗಿ 1893 ಮತ್ತು 1895ರಲ್ಲಿ ಎರಡು ಒಪ್ಪಂದಗಳ ಮೂಲಕ ಅಫ್ಘಾನಿಸ್ತಾನಕ್ಕೆ ರಷ್ಯನ್ನರು ಪ್ರವೇಶಿಸದಂತೆ, ರಷ್ಯಾ ಮತ್ತು ಬ್ರಿಟಿಷ್ ಭಾರತಗಳ ನಡುವೆ ಅಫ್ಘಾನಿಸ್ತಾನ ಒಂದು ‘ಮೆತ್ತೆ ರಾಷ್ಟ್ರ’ (ಆfಛ್ಟಿ ಖಠಿಚಠಿಛಿ) ಆಗಿರುವಂತೆ ಬ್ರಿಟಿಷರು ವ್ಯವಸ್ಥೆ ಮಾಡಿದರು. ಅಲ್ಲಿಗೆ ಅರಬ್ಬಿ ಸಮುದ್ರಕ್ಕೆ ಮತ್ತು ಅಲ್ಲಿಂದಾಚೆಯ ಹಿಂದೂ ಮಹಾಸಾಗರಕ್ಕೆ ರಷ್ಯನ್ನರ ಹಾದಿ ಬಂದ್ ಆದಂತಾಯಿತು.

1979ರ ಡಿಸೆಂಬರ್​ನಲ್ಲಿ ರಷ್ಯನ್ ಸೇನೆ ಅಫ್ಘಾನಿಸ್ತಾನಕ್ಕೆ ಪ್ರವೇಶಿಸಿದಾಗ ಅಮರಿಕನ್ನರಿಗೆ ನೆನಪಾದದ್ದು ಶತಮಾನದ ಹಿಂದಿನ ಆ ಗ್ರೇಟ್ ಗೇಮ್ ಆಗ ಇಲ್ಲಿ ಬ್ರಿಟನ್ ನೆಲೆಯೂರಿತ್ತು. ಕಾಲಾನುಕ್ರಮದಲ್ಲಿ ಬ್ರಿಟಿಷ್ ಸಿಂಹ ಮುದಿಯಾಗಿ ಅದು ಇಲ್ಲಿಂದ ನಿಧಾನವಾಗಿ ಕಾಲ್ತೆಗೆದಿತ್ತು, ಹೊಸ ಜಾಗತಿಕ ಮಹಾಶಕ್ತಿ ಅಮೆರಿಕ ಇಲ್ಲಿ ಕಾಲೂರಿತು, ಹಿಂದೂ ಮಹಾಸಾಗರದಲ್ಲಿ ಅಮೆರಿಕದ ನೌಕಾಪ್ರಾಬಲ್ಯವಿತ್ತು, ಜತೆಗೆ ಅಂದಿನ ಬ್ರಿಟಿಷ್ ಭಾರತದ ಪಶ್ಚಿಮ ಭಾಗ ಪಾಕಿಸ್ತಾನವಾಗಿ ಅಮೆರಿಕದ ಪ್ರಭಾವದೊಳಗಿತ್ತು! ಹೀಗೆ ಬದಲಾದ ಈ ವಲಯದ ಭೂ-ರಾಜಕೀಯ ವಾಸ್ತವಗಳು ರಷ್ಯನ್ನರು ಅಫ್ಘಾನಿಸ್ತಾನದಿಂದ ಹೊರಹೋಗುವಂತೆ ಅಥವಾ ಅಫ್ಘಾನಿಸ್ತಾನವನ್ನು ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸದಂತೆ, ಆ ಮೂಲಕ ಗ್ವಾದಾರ್ ಬಂದರನ್ನು ತಮ್ಮದಾಗಿಸಿಕೊಳ್ಳದಂತೆ ತಡೆಯುವ ಜವಾಬ್ದಾರಿಯನ್ನು ಅಮೆರಿಕದ ಹೆಗಲಿಗೆ ಹಾಕಿದವು.

ಸರಿ, ತನ್ನ ಗಂಟೇನು ಹೋಯಿತು ಎಂದು ಅಮೆರಿಕ ಸುಮ್ಮನಿದ್ದಿದ್ದರೆ ಏನಾಗುತ್ತಿತ್ತು? ರಷ್ಯನ್ನರು ನಿರಾಯಾಸವಾಗಿ ಅರಬ್ಬಿ ಸಮುದ್ರತೀರ ಪ್ರವೇಶಿಸುತ್ತಿದ್ದರು, ಹಿಂದೂ ಮಹಾಸಾಗರದಲ್ಲಿ ಅಮೆರಿಕನ್ ಮತ್ತು ಸೋವಿಯತ್ ನೌಕಾಪಡೆಗಳ ನಡುವೆ ಸ್ಪರ್ಧೆ ಆರಂಭವಾಗುತ್ತಿತ್ತು, ಈ ವಲಯದ ದೇಶಗಳು ಅದರಲ್ಲಿ ವಿಧಿಯಿಲ್ಲದೆ ಸಿಲುಕಿಹೋಗುತ್ತಿದ್ದವು, ಹಿಂದೂ ಮಹಾಸಾಗರ ಶಾಂತಿವಲಯವಾಗಬೇಕು ಎಂಬ ಭಾರತದ ಅಂದಿನ ಬಯಕೆ ಹಾಗೂ ನೀತಿ ಅರಣ್ಯರೋದನವಾಗುತ್ತಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನ ಎಂಬ ದೇಶ ಇಲ್ಲವಾಗಿ ಅಥವಾ ನಗಣ್ಯವೆನಿಸುವಸ್ಟು ಚಿಕ್ಕದಾಗಿ, ಭಾರತ ಮತ್ತು ಸೋವಿಯತ್ ಯೂನಿಯನ್​ಗಳ ನಡುವೆ ನೇರ ಗಡಿ ಸಂಪರ್ಕ ಏರ್ಪಡುತ್ತಿತ್ತು. ಅಂದಿನ ಸೋವಿಯತ್ ಯೂನಿಯನ್ ಮತ್ತು ಇಂದಿನ ರಷ್ಯಾ ಜತೆ ಭಾರತ ಸಾಕಷ್ಟು ಮಟ್ಟಿಗೆ ಒಳ್ಳೆಯ ಸಂಬಂಧಗಳನ್ನು ಹೊಂದಿರುವುದಕ್ಕೆ ಎರಡೂ ದೇಶಗಳು ಭೌಗೋಳಿಕವಾಗಿ ಒಂದನ್ನೊಂದು ರ್ಸ³ಸುತ್ತಿಲ್ಲ ಎನ್ನುವುದೂ ಮುಖ್ಯ ಕಾರಣ. ನಮ್ಮೆಲ್ಲ ನೆರೆನಾಡುಗಳ ಜತೆ ನಾವು ಹೊದಿರುವ ಸಮಸ್ಯೆಗಳು ಮತ್ತು ತನ್ನೆಲ್ಲ ನೆರೆನಾಡುಗಳ ಜತೆ ರಷ್ಯಾ ಹೊಂದಿರುವ ತಕರಾರುಗಳನ್ನು ನೋಡಿದರೆ ನನ್ನ ಮಾತಿನ ಅರ್ಥ ನಿಮಗಾದೀತು.

ಸರಿ, ಸೋವಿಯತ್ ಸೇನೆಯ ವಿರುದ್ಧ ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆ ಅಂತಿಮವಾಗಿ ಹಿಂದೂ ಮಹಾಸಾಗರ ಹೊತ್ತಿ ಉರಿಯದಂತೆ ತಡೆಯಿತು ಮತ್ತು ಒಂದು ಜಾಗತಿಕ ಮಹಾ ಸೇನಾಶಕ್ತಿ ಭಾರತದೊಂದಿಗೆ ನೇರ ಗಡಿ ಹೊಂದುವುದನ್ನು ತಡೆದು ಅಷ್ಟರ ಮಟ್ಟಿಗೆ ನಮ್ಮ ಹಿತಾಸಕ್ತಿಗಳನ್ನೂ ಕಾಪಾಪಾಡಿತು. ಆದರೆ, ವಿಷಯದ ಮತ್ತೊಂದು ಮಗ್ಗುಲಿಗೆ ಹೊರಳುವುದಾದರೆ, ಮೇಲೆ ಹೇಳಿದಂತೆ ಅಮೆರಿಕದ ಆ ನೀತಿ ಅಲ್-ಖಯೀದಾ ಮತ್ತು ತಾಲಿಬಾನ್​ಗಳೆಂಬ ತಲೆಬೇನೆಗಳನ್ನೂ ಸೃಷ್ಟಿಸಿತು ಮತ್ತು ಅದೇ ಸಮಯದಲ್ಲಿ ಇರಾನ್​ನಲ್ಲಿನ ಇಸ್ಲಾಮಿಕ್ ಮೂಲಭೂತವಾದವನ್ನು ನಿಗ್ರಹಿಸಹೊರಟ ಅಮೆರಿಕ ಸದ್ದಾಂ ಹುಸೇನ್ ಎಂಬ ಹೊಸ ಕಂಟಕವನ್ನೂ ಬೆಳೆಸಿತು.

ಸದ್ದಾಂ ಹುಸೇನ್ ಭಾರತದ ಸನ್ನಿತ್ರನಾಗಿದ್ದ ಎಂಬ ವಿಷಯವನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ಆತ ಪಶ್ಚಿಮ ಏಷ್ಯಾದ ಹಿಟ್ಲರ್ ಆಗತೊಡಗಿದ್ದ ಎಂಬುದನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡರೆ ಅವನನ್ನು ನಿಮೂಲನ ಮಾಡಿ ಅಮೆರಿಕ ಜಾಗತಿಕ ಶಾಂತಿಗೆ ನೀಡಿದ ಕಾಣಿಕೆಯನ್ನು ನಿರ್ಲಕ್ಷಿಸಲಾಗುವುದೇ ಇಲ್ಲ. ಜತೆಗೆ, ಸದ್ದಾಂ ಮತ್ತು ಅಲ್-ಖಯೀದಾ ಜತೆಗೂಡಿ ಜಗತ್ತನ್ನು ಅಣ್ವಸ್ತ್ರ ಅನಾಹುತಕ್ಕೆ ದೂಡುವುದನ್ನೂ ಅಮೆರಿಕ ತಡೆಯಿತು ಎಂಬುದನ್ನೂ ಗುರುತಿಸಬೇಕು. ಇದೆಲ್ಲ ಮಾಡುವಾಗ ಅಮೆರಿಕ ತಾನೂ ನೋವು, ನಷ್ಟ ಅನುಭವಿಸಿದೆ, ಈ ವಲಯವನ್ನೂ ನೋವು, ನಷ್ಟಗಳಿಗೆ ಗುರಿಮಾಡಿದೆ ಎನ್ನುವುದೂ ಸತ್ಯವೇ. ಆದರೆ ಅಮೆರಿಕ ಹೀಗೆ ಮಾಡದೇ ಹೋಗಿದ್ದರೆ ನಾವು ಇನ್ನೂ ಬೃಹತ್ತಾದ ನೋವು, ನಷ್ಟಗಳನ್ನು, ಬಹುಶಃ ಮತ್ತೆ ಸರಿಪಡಿಸಲಾಗದ ಪ್ರಮಾಣದಲ್ಲಿ ಅನುಭವಿಸುತ್ತಿದ್ದೆವು ಎನ್ನುವುದನ್ನು ಊಹಿಸಿಕೊಂಡರೆ ಅಮೆರಿಕದ ಬಗ್ಗೆ ಈಗ ಪ್ರಚಲಿತವಿರುವ ಋಣಾತ್ಮಕ ಅಭಿಪ್ರಾಯ ತುಸುವಾದರೂ ಧನಾತ್ಮಕಗೊಳ್ಳಬಹುದು. ಬೆಂಕಿ ದೊಡ್ಡದಾಗಲು ಬಿಟ್ಟು ಅದರಲ್ಲಿ ಉರಿದುಹೋಗುವುದರ ಬದಲು ಅದು ಚಿಕ್ಕದಾಗಿರುವಾಗಲೇ ಆತುರಾತುರವಾಗಿ ಕೈಗಳನ್ನು ತುಸು ಸುಟ್ಟುಕೊಂಡಾದರೂ ಅದನ್ನು ಆರಿಸುವುದು ಒಳ್ಳೆಯದಲ್ಲವೇ? ಕಾಣದೆ ಉಳಿದ ಕೆಂಡಗಳು ಮತ್ತೆ ಅಲ್ಲಲ್ಲಿ ಬೆಂಕಿಗೆ ಕಾರಣವಾಗುತ್ತಲೇಹೋಗುತ್ತವೆ. ಅವುಗಳನ್ನೂ ಆರಿಸುವ ಅಥವಾ ಅವು ಬೃಹತ್ತಾಗಿ ಬೆಳೆಯದಂತೆ ತಡೆಯುವ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಅದನ್ನು ಈ ದಿನಮಾನಗಳಲ್ಲಿ ಅಮೆರಿಕವೇ ಹೊರಬೇಕು. ದೊಡ್ಡಣ್ಣ ಅಂದರೆ ಸುಮ್ಮನೆಯೇ?

ದೊಡ್ಡಣ್ಣನ ಈ ಜವಾಬ್ದಾರಿ ನಿರ್ವಹಣೆ ಹೊರನೋಟಕ್ಕೆ ನಮಗೆ ತೋರಿಸುವುದು ಅಶಾಂತಿ ಅಫ್ಘಾನಿಸ್ತಾನದಲ್ಲಿ ಆರಂಭವಾಗಿ ಇರಾಕ್​ಗೆ ಹೋಗಿ ಮತ್ತೆ ಇತ್ತ ಬಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಆಹುತಿ ತೆಗೆದುಕೊಂಡು ಭಾರತದ ಬಾಗಿಲಿಗೆ ಬಂದು ನಿಂತಿದೆ ಎಂದು. ಇರಾಕ್ ಮತ್ತು ಅಫ್ಘಾನಿಸ್ತಾನಗಳ ಕಥೆಗಳ ಹಿಂದಿನ ಕಥೆಗಳನ್ನು ಈಗ ಹೇಳಿಯಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಹೂರಣವನ್ನು ನಿಮ್ಮ ಮುಂದೆ ತೆರೆದಿಟ್ಟು, ನಾವು ಭಾರತೀಯರ ಮುಂದಿರುವುದು ಮಾರಕ ಸಿಡಿಗುಂಡೋ ಅಥವಾ ಹಬ್ಬದ ತಂಬಿಟ್ಟೋ ಎನ್ನುವುದನ್ನು ಮುಂದಿನವಾರ ಲೇಖನಸರಣಿಯ ಕೊನೆಯ ಭಾಗದಲ್ಲಿ ನಿಮಗೆ ಬಿಡಿಸಿ ತೋರಿಸುತ್ತೇನೆ. ಅದನ್ನು ಓದುವಾಗ ನಿಮಗೆ ಅಗತ್ಯವಾಗಿ ನೆನಪಿರಲೇಬೇಕಾದ್ದು ಇಲ್ಲಿ ಮೇಲೆ ಉಲ್ಲೇಖಿತವಾಗಿರುವ ‘ದ ಗ್ರೇಟ್ ಗೇಮ್ ಎನ್ನುವುದನ್ನು ಈಗಲೇ ಹೇಳುತ್ತಿದ್ದೇನೆ. ಯಾಕೆಂದರೆ ಈ ವಲಯದಲ್ಲಿ ಇಂದು ನಡೆಯುತ್ತಿರುವುದೂ ಅದೇ ಆಟ ಅಥವಾ ಬೇಟೆ. ಪಾತ್ರಧಾರಿಗಳು ಮಾತ್ರ ಬೇರೆ. ಆದರೆ ಆಗಲೂ ಇಲ್ಲಿದ್ದವರು ನಾವೇ. ಈಗ ಇಲ್ಲಿರುವವರೂ ನಾವು ಭಾರತೀಯರೇ. ‘ಕೋಣಗಳೆರಡು ಹೋರೆ ಗಿಡಮಿಂತೆ ಮಿತ್ತು’ ಎಂಬ ಕವಿವಾಣಿಯಂತೆ ಎರಡೂ ಸಲವೂ ನಡುವೆ ಸಿಕ್ಕಿಕೊಂಡವರು ನಾವೇ. ನೆಮ್ಮದಿಯ ವಿಷಯವೆಂದರೆ ಇಂದು ಗಿಡ ಸ್ವತಂತ್ರವಾಗಿದೆ ಮತ್ತು ಅದಕ್ಕೆ ಸ್ವಂತಬುದ್ಧಿ ಇದೆ. ಉಳಿದದ್ದು ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net