ವಿಶ್ವಕಪ್ ಸುವರ್ಣಪಥದಲ್ಲಿ ಭಾರಥಯಾತ್ರೆ

team India
Published on

ರೋಹಿತ್ ಶರ್ಮ ಹುಟ್ಟು ಶ್ರೀಮಂತರೇನಲ್ಲ. ಕ್ರಿಕೆಟಿಗನಾಗಲೆಂದೇ ಹುಟ್ಟಿದವರೂ ಅಲ್ಲ. ಬದುಕಿನ ಕಷ್ಟಗಳು ಅವರನ್ನು ಕ್ರಿಕೆಟ್ ಕಡೆ ದೂಡಿದವಷ್ಟೇ. ರೋಹಿತ್ ತಾಯಿ ಪೂರ್ಣಿಮಾ ವಿಶಾಖಪಟ್ಟಣ ಮೂಲದವರು. ತಂದೆ ಗುರುನಾಥ ಶರ್ಮ ಸಾರಿಗೆ ಸಂಸ್ಥೆಯೊಂದರ ಉಗ್ರಾಣದ ಮೇಲ್ವಿಚಾರಕರಾಗಿದ್ದರು. ದೊಂಬಿವಿಲಿಯಲ್ಲಿ ಒಂದು ಕೊಠಡಿಯ ಸಣ್ಣ ಮನೆಯಲ್ಲಿ ವಾಸ. ಗುರುನಾಥರಿಗೆ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಇಬ್ಬರು ಮಕ್ಕಳನ್ನು ಸಾಕುವುದು ಕಷ್ಟ ಎಂಬ ಕಾರಣಕ್ಕೆ ರೋಹಿತ್ ಬೊರಿವಿಲಿಯ ಅಜ್ಜನ ಮನೆಯಲ್ಲಿದ್ದರು. ಅಲ್ಲಿರುವಾಗಲೇ ಅವರ ಚಿಕ್ಕಪ್ಪ 12 ವರ್ಷದ ರೋಹಿತ್​ರನ್ನು 1999ರಲ್ಲಿ ದಿನೇಶ್ ಲಾಡ್​ರ ಕ್ರಿಕೆಟ್ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು.

savyasachi
ಇದು 2006ರ ಕಥೆ..
ಶ್ರೀಲಂಕಾದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್​ಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಆ ಹುಡುಗ ಪ್ರವಾಸಕ್ಕೆ ತೆರಳುವ ಮುನ್ನ ಶಾಲಾ ಕೋಚ್ ದಿನೇಶ್ ಲಾಡ್ ಮನೆಗೆ ಓಡಿ ಬಂದಿದ್ದ. ’ಸರ್, ತುಂಬಾ ಟೆನ್ಷನ್​ನಲ್ಲಿದ್ದೇನೆ’ ಎಂದು ಕಣ್ಣೀರು ಹಾಕಿದ್ದ. ‘ಯಾಕಪ್ಪ, ಏನಾಯ್ತು’ ಎಂದು ಲಾಡ್ ಕಕ್ಕುಲಾತಿಯಿಂದ ಕೇಳಿದ್ದರು. ‘ಅಪ್ಪನಿಗೆ ಕೆಲಸ ಹೋಗಿದೆ. ಇರುವುದಕ್ಕೆ ಮನೆಯಿಲ್ಲ. ನನಗೆ ತುಂಬಾ ಯೋಚನೆಯಾಗಿದೆ’ ಎಂದು ಬಿಕ್ಕಳಿಸಿದ್ದ. ತಕ್ಷಣ ಲಾಡ್ ಸಾಂತ್ವನ ಹೇಳಿದ್ದರು. ಆ ಹುಡುಗನ ತಂದೆಗೆ ಕರೆ ಮಾಡಿ, ‘ನಿಮಗೆ ಏನೇ ನೆರವು ಬೇಕಿದ್ದರೂ ನನ್ನ ಬಳಿ ಕೇಳಿ, ಮಗನ ಮೇಲೆ ಒತ್ತಡ ಹಾಕಬೇಡಿ’ ಎಂದು ಸಮಾಧಾನ ಹೇಳಿದ್ದರು.

ಆ ವರ್ಷ 19 ವಯೋಮಿತಿ ವಿಶ್ವಕಪ್​ನಲ್ಲಿ ಸತತ 3 ಅರ್ಧ ಶತಕ ಬಾರಿಸಿ ದಾಖಲೆ ನಿರ್ವಿುಸಿದ, ಒಟ್ಟಾರೆ 6 ಇನಿಂಗ್ಸ್​ಗಳಿಂದ 205 ರನ್ ಗಳಿಸಿ ಗಮನ ಸೆಳೆದ ಆ ಬಾಲಕನೇ ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ರೋಹಿತ್ ಶರ್ಮ.

ಹಣ ಗಿಡದಲ್ಲಿ ಬೆಳೆಯುವುದಿಲ್ಲ. ಕಷ್ಟಪಟ್ಟು ಸಂಪಾದನೆ ಮಾಡಬೇಕು. ಸಾಧನೆ ಕೂಡ ಅಷ್ಟೇ. ಕಷ್ಟಗಳ ಬೆಂಕಿಯಲ್ಲಿ ಬೆಂದು, ಪೆಟ್ಟು ತಿಂದ ಕಬ್ಬಿಣ ಹದವಾಗುವಂತೆ, ಉಳಿಯಿಂದ ಕೆತ್ತಿದ ಕಲ್ಲು ಶಿಲೆಯಾಗುವಂತೆ ಒಬ್ಬ ಸಾಮಾನ್ಯ ವ್ಯಕ್ತಿ ಅಸಾಮಾನ್ಯನಾಗಿ ಬೆಳೆಯುವುದರ ಹಿಂದೊಂದು ಅಸಾಧಾರಣ ಕಥೆಯಿರುತ್ತದೆ.

ರೋಹಿತ್ ಶರ್ಮ ಕೂಡ ಹುಟ್ಟು ಶ್ರೀಮಂತರೇನಲ್ಲ. ಕ್ರಿಕೆಟಿಗನಾಗಲೆಂದೇ ಹುಟ್ಟಿದವರೂ ಅಲ್ಲ. ಬದುಕಿನ ಕಷ್ಟಗಳು ಅವರನ್ನು ಕ್ರಿಕೆಟ್ ಕಡೆ ದೂಡಿದವಷ್ಟೇ. ರೋಹಿತ್ ತಾಯಿ ಪೂರ್ಣಿಮಾ ವಿಶಾಖಪಟ್ಟಣ ಮೂಲದವರು. ತಂದೆ ಗುರುನಾಥ ಶರ್ಮ ಸಾರಿಗೆ ಸಂಸ್ಥೆಯೊಂದರ ಉಗ್ರಾಣದ ಮೇಲ್ವಿಚಾರಕರಾಗಿದ್ದರು. ದೊಂಬಿವಿಲಿಯಲ್ಲಿ ಒಂದು ಕೊಠಡಿಯ ಸಣ್ಣ ಮನೆಯಲ್ಲಿ ವಾಸ. ಗುರುನಾಥರಿಗೆ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಇಬ್ಬರು ಮಕ್ಕಳನ್ನು ಸಾಕುವುದು ಕಷ್ಟ ಎಂಬ ಕಾರಣಕ್ಕೆ ರೋಹಿತ್ ಬೊರಿವಿಲಿಯ ಅಜ್ಜನ ಮನೆಯಲ್ಲಿದ್ದರು. ಅಲ್ಲಿರುವಾಗಲೇ ಅವರ ಚಿಕ್ಕಪ್ಪ 12 ವರ್ಷದ ರೋಹಿತ್​ರನ್ನು 1999ರಲ್ಲಿ ದಿನೇಶ್ ಲಾಡ್​ರ ಕ್ರಿಕೆಟ್ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ವಿವೇಕಾನಂದ ಇಂಟರ್​ನ್ಯಾಷನಲ್ ಸ್ಕೂಲ್​ನಲ್ಲಿ ಕ್ರಿಕೆಟ್ ಕೋಚ್ ಆಗಿದ್ದ ಲಾಡ್, ಅದೇ ಶಾಲೆಗೆ ಸೇರುವಂತೆ ರೋಹಿತ್​ಗೆ ಸೂಚಿಸಿದ್ದರು. ಆ ಶಾಲೆಯ ಫೀಸ್ ಕಟ್ಟುವುದು ಹೇಗೆಂಬ ಪ್ರಶ್ನೆ ಬಂದಾಗ ಸ್ಕಾಲರ್​ಷಿಪ್ ಕೊಡಿಸಿದ್ದರು. ಆರಂಭದಲ್ಲಿ ಆಫ್​ಸ್ಪಿನ್ ಬೌಲಿಂಗ್ ಮಾಡಿಕೊಂಡು 8-9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದ ರೋಹಿತ್​ಗೆ ಬ್ಯಾಟರ್ ಆಗುವಂತೆ ಉತ್ತೇಜಿಸಿ ಇನಿಂಗ್ಸ್ ಆರಂಭಿಸಲು ಕಳುಹಿಸಿದ್ದು ಅದೇ ದಿನೇಶ್ ಲಾಡ್. ಶಾಲಾ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ಆಗಿ ಬೆಳೆದ ರೋಹಿತ್ ಮುಂಬೈ ಮತ್ತು ಪಶ್ಚಿಮ ವಲಯದ ಪರ ಭರ್ಜರಿ ಬ್ಯಾಟಿಂಗ್ ಮಾಡಿ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆದಿದ್ದರು. 2006ರ 19 ವಯೋಮಿತಿ ಏಕದಿನ ವಿಶ್ವಕಪ್​ಗೆ ರೋಹಿತ್ ಆಯ್ಕೆಯಾಗಿದ್ದರು.

ಆ ಹೊತ್ತಿಗೆ ತಂದೆ ಕೆಲಸ ಕಳೆದುಕೊಂಡ ಪರಿಣಾಮ ಕುಟುಂಬ ಒತ್ತಡದಲ್ಲಿತ್ತು. ಆಗ ನೆರವಿಗೆ ಬಂದಿದ್ದ ಲಾಡ್ ತಮ್ಮ ಪಿಎಫ್ ಖಾತೆಯಲ್ಲಿದ್ದ 60 ಸಾವಿರ ರೂ. ನಿಧಿಯಲ್ಲಿ 50 ಸಾವಿರ ರೂ. ತೆಗೆದು ರೋಹಿತ್ ಕುಟುಂಬಕ್ಕೆ

ತಮ್ಮದೇ ಅಪಾರ್ಟ್​ವೆುಂಟ್ ಕಟ್ಟಡದಲ್ಲಿ ಮನೆ ಬಾಡಿಗೆಗೆ ಕೊಡಿಸಿದ್ದರು. ಮಾತ್ರವಲ್ಲ, ತಮ್ಮ ಪರಿಚಿತರಿಗೆ ಶಿಫಾರಸು ಮಾಡಿ ರೋಹಿತ್​ಗೆ ಇಂಡಿಯನ್ ಆಯಿಲ್ ಸಂಸ್ಥೆಯಲ್ಲಿ ಕೆಲಸ ಕೊಡಿಸಿದ್ದರು.

ಇದಾದ ಮಾರನೇ ವರ್ಷವೇ 2007ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರೋಹಿತ್ ಚೊಚ್ಚಲ ಟಿ20 ವಿಶ್ವಕಪ್​ಗೂ ಭಾರತ ತಂಡದಲ್ಲಿ ಸ್ಥಾನ ಪಡೆದು ವಿಶ್ವಕಪ್ ಗೆದ್ದ ಸಾಧನೆ ಮಾಡಿದರು. 2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗ ಅಂದಾಜು 3 ಕೋಟಿ ರೂ. ಮೌಲ್ಯಕ್ಕೆ ಡೆಕ್ಕನ್ ಚಾರ್ಜರ್ಸ್ ತಂಡದ ಸದಸ್ಯರಾದರು. ಐಪಿಎಲ್​ಗೆ ಸ್ವಲ್ಪ ಮುನ್ನ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಸಿಬಿ ಸರಣಿ ಗೆದ್ದಿದ್ದಕ್ಕೆ ಬಿಸಿಸಿಐ ತಂಡದ ಎಲ್ಲ ಆಟಗಾರರಿಗೆ ಬೋನಸ್ ನೀಡಿತ್ತು. ಆ ಹಣದಲ್ಲಿ ರೋಹಿತ್ ಶ್ಕೋಡಾ ಕಾರು ಬುಕ್ ಮಾಡಿದ್ದರು. ಸ್ವಲ್ಪ ಹಣ ಕೈಸೇರುತ್ತಿದ್ದಂತೆಯೇ ಮಗ ಹೀಗೆ ದುಂದುವೆಚ್ಚ ಮಾಡುತ್ತಿರುವುದಕ್ಕೆ ಅಪ್ಪ ಗುರುನಾಥ್ ಸಿಟ್ಟು ಮಾಡಿಕೊಂಡಿದ್ದರು. ‘ಶ್ರೀಶಾಂತ್, ಹರ್ಭಜನ್ ಸೇರಿದಂತೆ ತಂಡದ ಎಲ್ಲರೂ ಹೊಸ ಕಾರು ಬುಕ್ ಮಾಡಿದ್ದಾರೆ. ಹಾಗಾಗಿ ನಾನೂ ಮಾಡಿದೆ. ನೀವಾದರೂ ಅಪ್ಪನಿಗೆ ಸ್ವಲ್ಪ ಬುದ್ದಿಹೇಳಿ’ ಎಂದು ರೋಹಿತ್, ಕೋಚ್ ಲಾಡ್ ಬಳಿ ಮನವಿ ಮಾಡಿದ್ದರು.

ಮುಂದೆ ಹೆಚ್ಚು ಹೆಚ್ಚು ಹಣ ಕೈಸೇರಿದಂತೆಲ್ಲ ರೋಹಿತ್ ಬಾಂದ್ರಾದಲ್ಲಿ ಹೊಸ ಮನೆಯನ್ನೂ ಖರೀದಿಸಿದರು. ಆದರೆ, ಕುಟುಂಬದ ಕೆಲಸಕಾರ್ಯಕ್ಕೆ ಬಾಂದ್ರಾ ದೂರ ಎಂಬ ಕಾರಣಕ್ಕೆ ಮನೆಯಲ್ಲಿ ಯಾರಿಗೂ ಅದು ಇಷ್ಟವಿರಲಿಲ್ಲ. ಹಾಗಾಗಿ ಅಪ್ಪ-ಅಮ್ಮ, ತಮ್ಮ ಹಳೆಯ ಒಂದು ಕೊಠಡಿ ಬಾಡಿಗೆ ಮನೆಯಲ್ಲೇ ಉಳಿದರು. ಹೊಸ ಮನೆಯಲ್ಲಿ ರೋಹಿತ್ ಒಬ್ಬರೇ ವಾಸ್ತವ್ಯ ಹೂಡಿದರು. ಅದರ ಪರಿಣಾಮವೂ ಅವರ ವೃತ್ತಿಜೀವನದ ಮೇಲಾಯಿತು. ಹೊಸ ಮನೆಯಲ್ಲಿ ಸ್ನೇಹಿತರು, ಪಾರ್ಟಿ, ಮೋಜುಮಸ್ತಿಯಲ್ಲಿ ಮೈಮರೆತ ರೋಹಿತ್ ಅಭ್ಯಾಸ ನಿರ್ಲಕ್ಷಿಸಿದರು. ಇದರ ಪರಿಣಾಮ ಆಟದ ಮೇಲಾಯಿತು. 2010ರಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಸತತ 2 ಶತಕ ಬಾರಿಸಿದ ಬಳಿಕ ಸತತ 16 ಇನಿಂಗ್ಸ್​ಗಳಲ್ಲಿ ವಿಫಲರಾಗಿದ್ದರಿಂದ 2011ರ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ರೋಹಿತ್​ಗಿಂತ ತಡವಾಗಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದ ವಿರಾಟ್ ಕೊಹ್ಲಿ ವಿಶ್ವಕಪ್ ತಂಡದಲ್ಲಿದ್ದರು. ಆದರೆ, ರೋಹಿತ್ ತಾವೇ ತಮ್ಮ ಕಾಲಮೇಲೆ ಕಲ್ಲು ಹಾಕಿಕೊಂಡಿದ್ದರು. ಈ ತಪ್ಪಿನಿಂದ ಪಾಠ ಕಲಿತ ಅವರು ನಿರಂತರ ಅಭ್ಯಾಸದ ಶಿಸ್ತು ರೂಢಿಸಿಕೊಂಡು ಹಳಿಗೆ ಮರಳಿದರು. ಅದರಲ್ಲೂ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದಲ್ಲಿ ಸಚಿನ್ ತೆಂಡುಲ್ಕರ್ ಮಾರ್ಗದರ್ಶನ ವರದಾನವಾಯಿತು. 2011ರ ಏಕದಿನ ವಿಶ್ವಕಪ್​ನಲ್ಲಿ ಸ್ಥಾನ ವಂಚಿತರಾದ ನಿರಾಸೆಯ ಬಳಿಕ ತ್ರಿವಿಕ್ರಮನಂತೆ ಪುಟಿದೆದ್ದ ರೋಹಿತ್ ಆನಂತರ 42 ಅಂತಾರಾಷ್ಟ್ರೀಯ ಶತಕ ಬಾರಿಸಿದ್ದಾರೆ. 10 ಟೆಸ್ಟ್ ಶತಕ, 4 ಟಿ20 ಶತಕ, 28 ಏಕದಿನ ಶತಕ, 3 ಏಕದಿನ ದ್ವಿಶತಕ 2011ರ ನಿರಾಸೆ ಬಳಿಕ ಅವರ ಬ್ಯಾಟ್​ನಿಂದ ಸಿಡಿದಿವೆ. 2015ರ ವಿಶ್ವಕಪ್ ಕ್ವಾರ್ಟರ್​ಫೈನಲ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿ ಭಾರತಕ್ಕೆ ಸೆಮಿಫೈನಲ್​ಗೆ ಬಡ್ತಿ ಕೊಡಿಸಿದ್ದ ರೋಹಿತ್, ಇಂಗ್ಲೆಂಡ್​ನಲ್ಲಿ ನಡೆದ 2019ರ ವಿಶ್ವಕಪ್​ನಲ್ಲಿ 5 ಶತಕ ಬಾರಿಸುವ

ಮೂಲಕ ಒಂದೇ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಮಾಡಿದರು. ಮಾತ್ರವಲ್ಲ ವಿಶ್ವಕಪ್ ಟೂರ್ನಿಗಳಲ್ಲಿ ಅತೀ ಹೆಚ್ಚು 6 ಶತಕ ಸಿಡಿಸಿದ ದಾಖಲೆಯನ್ನು ಸಚಿನ್ ತೆಂಡುಲ್ಕರ್ ಜತೆ ಹಂಚಿಕೊಂಡರು.

ಹಿರಿಯ ಕ್ರೀಡಾಪತ್ರಕರ್ತರಾದ ವಿಜಯ್ ಲೋಕಪಲ್ಲಿ ಮತ್ತು ಜಿ. ಕೃಷ್ಣನ್ ರಚಿಸಿರುವ ‘ಹಿಟ್​ವ್ಯಾನ್- ದಿ ರೋಹಿತ್ ಶರ್ಮ ಸ್ಟೋರಿ’ ಜೀವನ ಕೃತಿ ಟೀಮ್ ಇಂಡಿಯಾದ ಹಾಲಿ ಕ್ಯಾಪ್ಟನ್ ರೋಹಿತ್ ಕ್ರಿಕೆಟ್ ಜೀವನದ ಪ್ರಾರಂಭಿಕ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ಜೀವನದಲ್ಲಿ ಕಷ್ಟ-ಸುಖ, ವೈಫಲ್ಯ- ಯಶಸ್ಸು ಎಲ್ಲವನ್ನೂ ಕಂಡಿರುವ ರೋಹಿತ್ ಇದೀಗ 1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಭಾರತಕ್ಕೆ 3ನೇ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕನೆನಿಸಿ ಇತಿಹಾಸದಲ್ಲಿ ಅಜರಾಮರರಾಗುವ ಸುವರ್ಣಾವಕಾಶ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕರಾಗಿ 5 ಐಪಿಎಲ್ ಟ್ರೋಫಿ, ಭಾರತದ ನಾಯಕರಾಗಿ ಇತ್ತೀಚೆಗೆ ಏಷ್ಯಾ ಕಪ್ ಗೆದ್ದಿರುವ ರೋಹಿತ್ ನಾಯಕತ್ವ ಹಾಗೂ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಗುರುವಾರ ಆರಂಭಗೊಂಡಿರುವ ಏಕದಿನ ವಿಶ್ವಕಪ್ ಬಹುದೊಡ್ಡ ಅಗ್ನಿಪರೀಕ್ಷೆ ಆಗಲಿದೆ.

ಇನ್ನೇನು ನಾಳೆ ಭಾನುವಾರ ಬಂದರೆ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸಮರದೊಂದಿಗೆ ಭಾರತದ ಅಭಿಯಾನ ಆರಂಭ. ಈ ಬಾರಿ ಭಾರತವೇ ಪ್ರಶಸ್ತಿ ಗೆಲ್ಲುವುದಕ್ಕೆ ಸಾಕಷ್ಟು ಅನುಕೂಲಗಳಿವೆ. ತವರಿನ ವಾತಾವರಣ, 140 ಕೋಟಿ ದೇಶವಾಸಿಗಳ ಬೆಂಬಲ ಎಲ್ಲಕ್ಕಿಂತ ಮಹತ್ವದ್ದು. 10 ತಂಡಗಳ ಕಣದಲ್ಲಿ ಎಲ್ಲ 9 ಎದುರಾಳಿಗಳ ವಿರುದ್ಧ ಆಡುವ ರೌಂಡ್​ರಾಬಿನ್ ಅವಕಾಶ ಟೂರ್ನಿಯ ಹಾದಿಯಲ್ಲಿ ಲೋಪ-ದೋಷ ಸರಿಪಡಿಸಿಕೊಂಡು ಯಶಸ್ಸಿನತ್ತ ಸಾಗಲು ನೆರವಾಗಲಿದೆ. ಕಳೆದ ಎರಡು ವರ್ಷಗಳಿಂದ ತಂಡದ ಪ್ರದರ್ಶನದ ಬಗ್ಗೆ ಶಂಕೆ-ಕಳವಳ ಇದ್ದರೂ, ಟೂರ್ನಿ ಹತ್ತಿರ ಬಂದಂತೆ ಸಕಾರಾತ್ಮಕ ಪ್ರಭಾವಳಿ ತಂಡದ ಸುತ್ತ ಗೋಚರಿಸಲಾರಂಭಿಸಿದೆ. ಇತ್ತೀಚಿನ ಏಷ್ಯಾ ಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಪ್ರದರ್ಶನದ ಆಧಾರದ ಮೇಲೆ ಹೇಳುವುದಾದರೆ, ತಂಡದಲ್ಲಿರುವ ಎಲ್ಲ ಆಟಗಾರರು ಉತ್ತಮ ಲಹರಿಯಲ್ಲಿರುವಂತಿದೆ. ಏಕದಿನ ವಿಶ್ವಕಪ್​ನ ಸರ್ವಶ್ರೇಷ್ಠ ಚಾಂಪಿಯನ್ ಆಸ್ಟ್ರೇಲಿಯಾ ತಾನು ಗೆದ್ದ ಅಷ್ಟೂ ವಿಶ್ವಕಪ್​ಗಳನ್ನು ಒಬ್ಬ ಬ್ಯಾಟರ್, ಒಬ್ಬ ಬೌಲರ್ ಮೇಲೆ ನೆಚ್ಚಿಕೊಳ್ಳದೆ ಸಾಂಘಿಕ ಆಟವಾಡಿ ಗೆದ್ದಿದೆ. ಭಾರತ ಸಹ ಈ ಟೂರ್ನಿಯಲ್ಲಿ ಅದೇ ರೀತಿ ತಂಡವಾಗಿ ಗೆಲ್ಲಬೇಕಿದೆ. ಇಲ್ಲಿ ಓರ್ವ ರೋಹಿತ್, ವಿರಾಟ್, ಬುಮ್ರಾ ಅಥವಾ ಹಾರ್ದಿಕ್ ಹೀರೊಗಿರಿಗಿಂತ ಪ್ರತೀ ಪಂದ್ಯದಲ್ಲಿ ಒಬ್ಬರಲ್ಲದಿದ್ದರೆ ಇನ್ನೊಬ್ಬರು ಚಾಂಪಿಯನ್ ಆಟ ಮೆರೆದು ಫೈನಲ್ ಪಂದ್ಯದ ಕೊಟ್ಟಕೊನೆಯ ಎಸೆತದವರೆಗೂ ಗೆಲುವಿನ ಕೆಚ್ಚು, ಉಮೇದು, ಆತ್ಮವಿಶ್ವಾಸ ಕಾಯ್ದುಕೊಂಡರೆ ಭಾರತ 12 ವರ್ಷಗಳ ಬಳಿಕ ಕ್ರಿಕೆಟ್ ವಿಶ್ವಗುರುವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗದು.

ಆಟಗಾರನಾಗಿ ಗೆಲ್ಲದೇ ಹೋದರೂ 19 ವಯೋಮಿತಿ ತಂಡದ ಕೋಚ್ ಆಗಿ ವಿಶ್ವಕಪ್ ಗೆದ್ದಿರುವ ಕೋಚ್ ರಾಹುಲ್ ದ್ರಾವಿಡ್, 2007ರಲ್ಲಿ ಚೊಚ್ಚಲ ಟಿ20 ವಿಶ್ವಚಾಂಪಿಯನ್ ತಂಡದಲ್ಲಿದ್ದ ನಾಯಕ ರೋಹಿತ್ ಶರ್ಮ, 2011ರಲ್ಲಿ 28 ವರ್ಷ ಬಳಿಕ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಕಿಂಗ್ ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, 2018ರಲ್ಲಿ 19 ವಯೋಮಿತಿ ವಿಶ್ವಕಪ್ ವಿಜೇತ ತಂಡದ ಉಪನಾಯಕರಾಗಿದ್ದ ಶುಭಮಾನ್ ಗಿಲ್ ಈ ಬಾರಿ ಮತ್ತೊಂದು ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಬೇಕಿದೆ. ಇವರ ಜತೆಗೆ ದ್ರಾವಿಡ್ ಪರಂಪರೆಯ ಉತ್ತರಾಧಿಕಾರಿ ಕೆಎಲ್ ರಾಹುಲ್, 360 ಡಿಗ್ರಿ ಬ್ಯಾಟರ್ ಸೂರ್ಯಕುಮಾರ್ ಯಾದವ್, ಮಧ್ಯಮ ಕ್ರಮಾಂಕದ ಭರವಸೆ ಶ್ರೇಯಸ್ ಅಯ್ಯರ್, ವಿಶ್ವ ನಂ.1 ಆಲ್ರೌಂಡರ್ ರವೀಂದ್ರ ಜಡೇಜಾ, ಭಾರತೀಯರ ನಂ.1

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವಿಶ್ವ ನಂ.1 ವೇಗಿ ಮೊಹಮದ್ ಸಿರಾಜ್, ಭಾರತೀಯರ ನಂ.1 ವೇಗಿ ಜಸ್​ಪ್ರೀತ್ ಬುಮ್ರಾ, ಸೀಮ್ ಮಾಂತ್ರಿಕ ಮೊಹಮ್ಮದ್ ಶಮಿ, ಸ್ಪಿನ್ ಜಾದೂಗಾರ ಕುಲ್​ದೀಪ್ ಯಾದವ್, ಇವರ ಜತೆಗೆ ದ್ವಿಶತಕ ವೀರ ಇಶಾನ್ ಕಿಶನ್, ಅಲ್ರೌಂಡರ್ ಶಾದೂಲ್ ಥಾಕುರ್ ಇವರೆಲ್ಲರೂ ತಂಡಕ್ಕೆ ಅಗತ್ಯ-ಅನಿವಾರ್ಯ ಒದಗಿದ ಸಂದರ್ಭದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿ. ಹಾಗಿದ್ದ ಮೇಲೆ ಹಾರೈಸುವುದಕ್ಕೆ ಮತ್ಯಾಕೆ ತಡ.. ಶುಭವಾಗಲಿ ಭಾರತ.. ಗೆದ್ದು ಬಾ ಭಾರತ...

ಚಾಂದ್ ತಾರೋ ಸೆ ಚಲನಾ ಹೈ ಆಗೆ | ಆಸಮಾನೋ ಸೆ ಬಡನಾ ಹೈ ಆಗೆ

ಪೀಛೆ ರಹ ಜಾಯೇಗಾ ಯೆ ಜಮಾನಾ | ಯಹಾಂ ಕಲ್ ಕ್ಯಾ ಹೋ ಕಿಸನೆ ಜಾನಾ

ಜಿಂದಗಿ ಎಕ್ ಸಫರ್ ಹೈ ಸುಹಾನಾ..

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net