

ಇಂಗ್ಲಿಷ್ ಆಲ್ಪಾಬೆಟ್ಸ್, ಸಾಮಾನ್ಯ ಜ್ಞಾನ, ವಚನ ಪ್ರಸ್ತುತಿ, ಹಣ್ಣುಗಳು, ತರಕಾರಿ, ಪ್ರಾಣಿ-ಪಕ್ಷಿಗಳ ಬಗೆಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದರೆ ಸಾಕು ಫಟಾಫಟ್ ಉತ್ತರಿಸುವ ಬಾಲಕನೊಬ್ಬ ಹುಬ್ಬಳ್ಳಿಯಲ್ಲಿದ್ದಾನೆ. ಆತನ ಹೆಸರು ಮಾಸ್ಟರ್ ವಿರಾಟ್ ಬೇವೂರ. ವಯಸ್ಸು 2 ವರ್ಷ 11 ತಿಂಗಳು. ಈ ಪುಟಾಣಿಯ ಅಪ್ರತಿಮ ಜ್ಞಾನದಿಂದಾಗಿ ಈತನ ಹೆಸರೀಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸೇರ್ಪಡೆಗೊಂಡಿದೆ.
ವಿರಾಟ್ನ ತಂದೆ ಡಾ. ಚರಣ್ ಬೇವೂರ, ತಾಯಿ ಡಾ. ಮೇಘಶ್ರೀ ಬೇವೂರ ದಂತ ವೈದ್ಯರು. ತಂದೆ-ತಾಯಿ ಹೇಳುವ ಪ್ರತಿ ಪ್ರಶ್ನೋತ್ತರಗಳಿಗೆ ಕಿವಿಯಗಲಿಸಿ ಕೇಳುತ್ತಾನೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಮಿತಿ ಆನ್ಲೈನ್ ಮೂಲಕ ಕೇಳಿದ ಪ್ರಶ್ನೆಗೆ ಉತ್ತರಿಸಿದಾಗ ವಿರಾಟ್ಗೆ ಆಗ 2 ವರ್ಷ 8 ತಿಂಗಳು.
ಈತನಿಗೆ ವಚನಗಳೆಂದರೂ ಅಚ್ಚುಮೆಚ್ಚು. ಕೆಲ ವಚನಗಳನ್ನು ಹೇಳಿ ಅವುಗಳನ್ನು ವಿಶ್ಲೇಷಿಸುವುದರಲ್ಲಿ ಈತ ನಿಸ್ಸೀಮ. ಇದರ ಜತೆಗೆ, ಹಲವು ಶ್ಲೋಕಗಳನ್ನು ಹಾಡುತ್ತಾನೆ ಕೂಡ. ರೈಲು, ವಿಮಾನ, ಮೊಬೈಲ್ ಹೀಗೆ ಹಲವು ವಸ್ತುಗಳನ್ನು ಕಂಡು ಹಿಡಿದವರ ಹೆಸರುಗಳನ್ನು ಕೂಡ ಕ್ಷಣ ಮಾತ್ರದಲ್ಲಿ ಹೇಳುತ್ತಾನೆ. ಮತ್ತೆ ಮತ್ತೆ ಪ್ರಶ್ನೆ ಕೇಳಿದರೆ ಅಲ್ಪ ವಿರಾಮ ನೀಡುವಂತೆ ತನ್ನದೇ ಮುದ್ದು ನುಡಿಯಲ್ಲಿ ಹೇಳುವ ವಿರಾಟ್, ಮತ್ತೆ ಉತ್ತರ ಹೇಳಲು ಅಣಿಯಾಗುತ್ತಾನೆ.
‘ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಮುಂದೆ ಜನರು ನೋಡಲೆಂದು ಸಣ್ಣ ರೈಲು ನಿಲ್ಲಿಸಲಾಗಿತ್ತು. ಅದನ್ನು ನೋಡಿದ ವಿರಾಟ್, ಈ ರೈಲು ಹೋಗಲು ಟ್ರ್ಯಾಕ್ ಇಲ್ಲಲ್ಲ ಎಂದು ಪ್ರಶ್ನಿಸಿದಾಗ ನನಗೆ ಅಚ್ಚರಿಯಾಯಿತು. ಈ ರೈಲು ಹೋಗಲ್ಲ. ಜನರು ನೋಡೋದಕ್ಕೆ ನಿಲ್ಲಿಸಿದ್ದಾರೆ. ಓಡಾಡುವ ರೈಲಿಗೆ ಟ್ರ್ಯಾಕ್ ಇರುತ್ತದೆ ಎಂದು ಹೇಳಿ ವಿರಾಟ್ಗೆ ಸಮಾಧಾನ ಪಡಿಸಿದ್ದೆ’ ಎಂದು ಚರಣ್ ಸ್ಮರಿಸುತ್ತಾರೆ.
ಮಗುವಿನ ಐಕ್ಯೂ ಪ್ರಮಾಣ ಹೆಚ್ಚಿಗೆ ಇದ್ದರೆ ಹೀಗಾಗುತ್ತದೆ. ವಂಶವಾಹಿನಿಯೂ ಕಾರಣವಾಗುವುದರಿಂದ ಮಗುವಿನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಒಂದು ವಿಷಯ ಮತ್ತು ವಸ್ತುವಿನ ಮೇಲೆ ಏಕಾಗ್ರತೆ ಮೂಡಿಸುತ್ತ ಹೋದಂತೆ ಮಗುವಿನ ಜ್ಞಾನ ವೃದ್ಧಿಯಾಗುತ್ತ ಹೋಗುತ್ತದೆ. ಇಂಥ ಪ್ರಕರಣ ಕಡಿಮೆ. | ಡಾ. ಪ್ರಕಾಶ ವಾರಿ ಕಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಚಿಕ್ಕಂದಿನಿಂದಲೇ ವಿರಾಟ್ಗೆ ಕುತೂಹಲ ಜಾಸ್ತಿ. ಪ್ರತಿಯೊಂದನ್ನು ಆಲಿಸುವ, ತಿಳಿಯುವ, ಮಾತನಾಡುವ ಬಯಕೆ. ಹಾಗಾಗಿಯೇ ಅವನಿಗೆ ಸಾಮಾನ್ಯ ಜ್ಞಾನ ಕಲಿಸಲು ಆರಂಭಿಸಲಾಯಿತು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಒಲಿದು ಬಂದಿದ್ದರಿಂದ ಮತ್ತಷ್ಟು ಖುಷಿ ಹೆಚ್ಚಿಸಿತು. | ಡಾ. ಚರಣ್ ಬೇವೂರ, ಡಾ. ಮೇಘಶ್ರೀ ಬೇವೂರ ವಿರಾಟ್ನ ಪಾಲಕರು
| ಮರಿದೇವ ಹೂಗಾರ ಹುಬ್ಬಳ್ಳಿ