

ಹವಾಮಾನ ವೈಪರೀತ್ಯ, ನಗರೀಕರಣ, ಪರಿಸರ ಮಾಲಿನ್ಯ ಇತ್ಯಾದಿಗಳಿಂದಾಗಿ ಕೆರೆಗಳು ಬತ್ತಿಹೋಗುತ್ತಿರುವುದು ಎಲ್ಲರಿಗೂ ತಿಳಿದ ಮಾತೇ. ಆದರೆ ಕೆರೆಗಳನ್ನು ಪುನಶ್ಚೇತನ ಮಾಡಬೇಕು, ಅದರಲ್ಲಿರುವ ಹೂಳುಗಳನ್ನು ಎತ್ತಿ ಕೆರೆಯನ್ನು ಸುಂದರಗೊಳಿಸಬೇಕು ಎಂಬ ಮಾತು ಬಂದಾಗ ಎಲ್ಲರ ಚಿತ್ತವೂ ಸರ್ಕಾರ ಇಲ್ಲವೇ ಸಂಘ ಸಂಸ್ಥೆಗಳತ್ತ ಹೋಗುತ್ತದೆ.
ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿ ಬೆಂಗಳೂರಿನ ಕೆರೆಯೊಂದರ ಜೀವ ಉಳಿಸಲು ಪ್ರಯತ್ನಿಸಿದ ಈ ಬಾಲಕನಿಗೆ ಈಗ ಅಮೆರಿಕದಲ್ಲಿರುವ ವಿಶ್ವಸಂಸ್ಥೆಯಿಂದ ಬುಲಾವ್ ಬಂದಿದೆ. ಕೆರೆಗಳ ಪುನರುಜ್ಜೀನದ ಕುರಿತು ಈತ ರೂಪಿಸಿರುವ ಯೋಜನೆ ಹಾಗೂ ಮಾಸ್ಟರ್ ಪ್ಲಾನ್ಗೆ ತಜ್ಞರು ತಲೆದೂಗಿದ್ದು, ಆತನ ಮಾಸ್ಟರ್ ಪ್ಲಾ್ಯನ್ ಅಮೆರಿಕದ ನ್ಯೂಯಾರ್ಕ್ನಲ್ಲಿ ಮಂಡನೆ ಆಗಲಿದೆ.
ಈ ಸಾಧಕ ವಿದ್ಯಾರ್ಥಿಯ ಹೆಸರು ತನುಷ್ ಗೌಡ. ಬೆಂಗಳೂರಿನ ವಿದ್ಯಾಶಿಲ್ಪ ಅಕಾಡೆಮಿಯಲ್ಲಿ ಓದುತ್ತಿದ್ದಾನೆ. ಮೊದಲಿನಿಂದಲೂ ಕೆರೆಗಳ ನಾಶದ ಬಗ್ಗೆ ಓದುತ್ತಲೇ ಇದ್ದ ತನುಷ್ಗೆ, ತನ್ನಿಂದ ಚಿಕ್ಕ ಸೇವೆಯಾದರೂ ಆಗಲೇಬೇಕು ಎಂದು ಎನಿಸುತ್ತಿತ್ತು. ಅದಕ್ಕೆ ಕಾಲ ಕೂಡಿ ಬಂದದ್ದು ವರ್ಲ್ಡ್ ಫೆಡರೇಷನ್ ಆಫ್ ಯುನೈಟೆಡ್ ನೇಷನ್ಸ್ ಅಸೋಷಿಯೇಷನ್ ವತಿಯಿಂದ ಬಂದ ಕರೆ. ‘ಸುಸ್ಥಿರ ಅಭಿವೃದ್ಧಿ’ ಕುರಿತಂತೆ ಪ್ರಾಜೆಕ್ಟ್ ರೂಪಿಸಲು ಈತನ ಶಾಲೆಗೆ ವಿಶ್ವಸಂಸ್ಥೆಯಿಂದ ಪತ್ರ ಬಂದಿತ್ತು.
ಆ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡ ತನುಷ್ ಕೆರೆ ಉಳಿವಿಗಾಗಿ ಏನೇನು ಮಾಡಬಹುದು ಎಂಬ ಬಗ್ಗೆ ಇನ್ನಷ್ಟು ಅಧ್ಯಯನದಲ್ಲಿ ತೊಡಗಿಕೊಂಡ. ಆಗ ಆತನ ಗಮನ ಸೆಳೆದದ್ದು ಬೆಂಗಳೂರಿನ ತರಬನಹಳ್ಳಿ ಕೆರೆ. ಈ ಕೆರೆ 53 ಎಕರೆಗಳಿಷ್ಟಿದ್ದು, 30 ಎಕರೆಗಳ ಪುನಶ್ಚೇತನದ ಕಾರ್ಯವನ್ನು ಕೆಲವರು ಕೈಗೆತ್ತಿಕೊಂಡಿದ್ದರು. ಉಳಿದ ಪ್ರದೇಶದ ಶುಚಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ತನುಷ್ ರೆಡಿಯಾದ.
‘ಈ ಕೆರೆ ಸುತ್ತಲಿನ ಐದು ಗ್ರಾಮಗಳಿಗೆ ಆಸರೆಯಾಗಿದೆ. ಇದು ಸಂಪೂರ್ಣ ಶುಚಿಗೊಂಡರೆ ಅಲ್ಲಿಯ ಹೊಲಗದ್ದೆಗಳಿಗೆ ನೀರಾವರಿ ಸೌಲಭ್ಯ ಸಿಗಲಿರುವ ಬಗ್ಗೆ ನನಗೆ ಅಧ್ಯಯನದಿಂದ ತಿಳಿದುಬಂತು. ಎರಡು ವರ್ಷಗಳ ಹಿಂದೆ ಬಂದ ಭಾರಿ ಮಳೆಗೆ ಕೆರೆ ತುಂಬಿ ರಸ್ತೆಯ ಮೇಲೆ ನೀರು ಹರಿದಿತ್ತು. ಇದಕ್ಕೆ ಕಾರಣ, ಇದರಲ್ಲಿ ತುಂಬಿರುವ ಕಳೆ.
ಅಷ್ಟೇ ಅಲ್ಲದೇ, ಈ ಕೆರೆ ಇರುವ ಪ್ರದೇಶ ತುಂಬಾ ಸುಂದರವಾಗಿದ್ದು, ಕಳೆ ತೆಗೆದು ಶುಚಿಗೊಳಿಸಿದರೆ ಇಲ್ಲಿ ಸುಂದರ ಉದ್ಯಾನ, ಬೋಟಿಂಗ್ ಎಲ್ಲವೂ ಸಾಧ್ಯ ಎಂಬುದು ತಿಳಿಯಿತು. ಆದ್ದರಿಂದ ಇದೇ ಯೋಜನೆ ಆಯ್ದುಕೊಂಡೆ’ ಎನ್ನುತ್ತಾನೆ ತನುಷ್.
ಆದರೆ ಕೆರೆ ಪುನಶ್ಚೇತನಕ್ಕೆ ಬೇಕಾಗುವಷ್ಟು ಹಣ ಸಂಗ್ರಹಣೆ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಈ ಕುರಿತಂತೆ ತಜ್ಞರ ಜತೆ ಸಮಾಲೋಚಿಸಿದ ಈತ, ಕೆಲವು ಕಂಪನಿಗಳಿಂದ ನಿಧಿ ಸಂಗ್ರಹ ಕಾರ್ಯದಲ್ಲಿ ತೊಡಗಿದ. ಈ ಪುಟ್ಟ ಬಾಲಕನ ಮಾತನ್ನು ದೊಡ್ಡ ದೊಡ್ಡ ಕಂಪನಿಗಳು ಕೇಳುವುದು ಸುಲಭದ ಮಾತೆ?
ಕೆರೆ ಪುನಶ್ಚೇತನ ಕುರಿತಂತೆ ರೂಪುರೇಷೆಗಳನ್ನು ತಯಾರಿಸಿ, ಅವುಗಳನ್ನು ಎಲ್ಲಾ ಕಂಪನಿಗಳ ಮುಂದೆ ಮಂಡಿಸಿ ಶಹಬ್ಬಾಸ್ಗಿರಿ ಗಿಟ್ಟಿಸುವ ಜತೆಗೆ, ಕೆರೆಗಳ ಶುಚಿ ಕಾರ್ಯಕ್ಕೆ ಬೇಕಾಗುವಷ್ಟು ಹಣವನ್ನೂ ಸಂಗ್ರಹಿಸಿದ ತನುಷ್. ಈ ಕಾರ್ಯಕ್ಕೆ ವಿಶ್ವಸಂಸ್ಥೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ.
ತನುಷ್ ಬದಲು ರಾಹುಲ್
ಫೆಬ್ರವರಿ 10ರವರೆಗೆ ನ್ಯೂಯಾರ್ಕ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೆರೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಪ್ರೊಜೆಕ್ಟ್ ಮಂಡನೆಗೆ ತನುಷ್ನನ್ನು ಆಹ್ವಾನಿಸಲಾಗಿತ್ತು. ಆದರೆ ಅನಾರೋಗ್ಯದ ನಿಮಿತ್ತ ತನುಷ್ ಹೋಗಲು ಸಾಧ್ಯವಾಗದ ಕಾರಣ, ಆತನ ಸ್ನೇಹಿತ ರಾಹುಲ್ ರೆಡ್ಡಿ ಪಿ. ಅಮೆರಿಕಕ್ಕೆ ತೆರಳಿದ್ದಾನೆ.