

ನಿತ್ಯಾ ಸದ್ಯ ಗೋಕಾಕನ ಶೆಫರ್ಡ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಾಳೆ. ಈಕೆ ಐದು ವರ್ಷದ ಪುಟ್ಟ ಮಗುವಿದ್ದಾಗಿನಿಂದಲೂ ನೃತ್ಯ ಕಾರ್ಯಕ್ರಮ ನೀಡಲು ವೇದಿಕೆ ಹಂಚಿಕೊಳ್ಳುವುದು, ಯಾವ ಭಯವೂ ಇಲ್ಲದೆ ಕೈಯಲ್ಲಿ ದೀಪ ಹಿಡಿದು ಮಣ್ಣಿನ ಬಿಂದಿಗೆಯ ಮೇಲೆ ನಿಂತು ಸುಂದರ ಹಾವಭಾವಗಳಿಂದ ಡಾನ್ಸ್ ಮಾಡುತ್ತಾಳೆ. ಇವಳ ನೃತ್ಯವನ್ನು ಪ್ರೇಕ್ಷಕರು ಮಂತ್ರಮುಗ್ಧರಾಗಿ ವೀಕ್ಷಿಸುತ್ತಾರೆ.
ಐದು ವರ್ಷಗಳಲ್ಲಿ 50 ಪದಕ: ನಿತ್ಯಾ ಕಳೆದ ಐದು ವರ್ಷಗಳಿಂದ ನೃತ್ಯದಲ್ಲಿ ತೊಡಗಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅದ್ಭುತ ಸಾಧನೆ ಮಾಡಿದ್ದಾಳೆ. ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿ ಈವರೆಗೆ 50ಕ್ಕೂ ಹೆಚ್ಚು ಪದಕಗಳು ಮತ್ತು 60 ಟ್ರೋಫಿಗಳನ್ನು ಪಡೆದಿದ್ದಾಳೆ. ಭರತನಾಟ್ಯದೊಂದಿಗೆ ಕಥಕ್, ಲಾವಣಿ, ಜಾನಪದ, ಚಲನಚಿತ್ರ ನೃತ್ಯ, ಲಂಬಾನಿ, ದಾಂಡಿಯಾ ಹಾಗೂ ಗುಜರಾತಿ, ರಾಜಸ್ತಾನಿ ನೃತ್ಯಗಳನ್ನು ಸುಂದರವಾಗಿ ಪ್ರದರ್ಶಿಸುತ್ತಾಳೆ. ಮೈಸೂರು ದಸರಾ, ಧಾರವಾಡ ಸಾಹಿತ್ಯ ಸಮ್ಮೇಳನ, ಬೆಳಗಾವಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ, ಸತೀಶ ಶುಗರ್ಸ್ ಅವಾರ್ಡ್, ‘ಟ್ಯಾಲೆಂಟ್ ಆಫ್ ಗೋಕಾಕ’ ಅವಾರ್ಡ್, ಅಥಣಿಯ ಶರಣ ಸಂಸ್ಕೃತಿ ಉತ್ಸವ, ಸುವರ್ಣ ಹಾಗೂ ಝೀ ಕನ್ನಡ ಟಿವಿಯ ಡಾನ್ಸ್ ಕಾರ್ಯಕ್ರಮ, ಶಿವಮೊಗ್ಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ‘ಸುಗ್ಗಿ ಹುಗ್ಗಿ’ ಕಲಾ ಸಂಭ್ರಮ, ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನದೊಂದಿಗೆ ಬೆಸ್ಟ್ ಡಾನ್ಸರ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾಳೆ.