

ಭಜನೆ, ನಾಮಸ್ಮರಣೆ ಮಾಡುವಾಗ ಋಣಾತ್ಮಕ ವಿಚಾರಗಳು ದೂರವಾಗಿ ಧನಾತ್ಮಕ ಚಿಂತನೆಗಳೆಡೆಗೆ ಮನಸ್ಸು ವಾಲುತ್ತದೆ. ಕೋಪ-ತಾಪಗಳು ಕಡಿಮೆಯಾಗಿ ಮನಸ್ಸು ತಿಳಿಯಾಗಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗುತ್ತದೆ. ಹಾಗಾಗಿ ಬಾಲ್ಯದಿಂದಲೇ ಬಾಲ ಸಂಸ್ಕಾರದ ಮೂಲಕ ಭಜನೆಯ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸಬೇಕು.
ಕೆಲವು ದಶಕಗಳ ಹಿಂದೆ ಭಜನೆಯೂ ತನ್ನ ಪ್ರಾಧಾನ್ಯ, ಮೌಲ್ಯವನ್ನು ಕಳೆದುಕೊಂಡು ನಿರ್ಲಕ್ಷಿ ್ಯವಾಗಿತ್ತು. ದಿನದಿಂದ ದಿನಕ್ಕೆ ಮನೆಗಳಲ್ಲಿ ಭಜನೆ ಹೇಳುವ ಅಭ್ಯಾಸ ಮರೆಯಾಗಿ ಟಿ.ವಿ ಧಾರಾವಾಹಿ, ಚಲನಚಿತ್ರಗಳನ್ನು ನೋಡುವುದರಲ್ಲಿ ಜನರು ತಲ್ಲೀನರಾಗತೊಡಗಿದರು. ಆದರೆ ಇದೀಗ ಬದಲಾವಣೆಯ ಗಾಳಿ ಬೀಸಿದೆ. ಭಜನೆಯಂತಹ ಆಚರಣೆಗಳತ್ತ ಜನರು ಹೆಚ್ಚು ಒಲವು ತೋರುತ್ತಿದ್ದಾರೆ.
ನಾನು ಸಣ್ಣವನಿದ್ದಾಗ ಮನೆಯಲ್ಲಿ ಭಜನೆಯನ್ನು ನಮಗೆ ಕಟ್ಟುನಿಟ್ಟಾಗಿ ಕಲಿಸುತ್ತಿದ್ದರು. ಮಾರ್ನಾಡು ವರ್ಧಮಾನ ಶಾಸ್ತ್ರಿಯವರು ನಮಗೆ ನಿತ್ಯ ಭಜನೆಯನ್ನು ರಾಗವಾಗಿ ಹೇಳಿಕೊಡುತ್ತಿದ್ದರು. ನಾವೆಲ್ಲ ಅವರನ್ನು ಮಾವ ಶಾಸ್ತ್ರೀ ಎಂದೇ ಕರೆಯುತ್ತಿದ್ದೆವು. ಗುಣಪಾಲ ಎಂಬುವವರೂ ನಮಗೆ ಭಜನೆಯನ್ನು ಹೇಳಿ ಕೊಡುತ್ತಿದ್ದರು. ನಾವೆಲ್ಲ ಅವರ ಎದುರಿಗೆ ಕುಳಿತಾಗ ಎದುರಿಗೆ ಕೈ ಚಾಚಿ ನಮ್ಮನ್ನು ಮುಟ್ಟಿ ನೋಡಿ ಅವರಿಂದ ಎಷ್ಟು ಅಂತರದಲ್ಲಿ ಇದ್ದೇವೆ ಎಂದು ಗಮನಿಸುತ್ತಿದ್ದರು. ಕಾರಣ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ಕೈಯಳತೆ ದೂರದಲ್ಲಿ ಕುಳಿತುಕೊಳ್ಳಲೇ ಬೇಕಿತ್ತು. ಜೊತೆಗೆ ಭಜನೆಯನ್ನು ತಪ್ಪಾಗಿ ಹಾಡಿದವರು ಅವರಿಂದ ಪೆಟ್ಟನ್ನೂ ತಿನ್ನಬೇಕಾಗುತ್ತಿತ್ತು. ಕಣ್ಣು ಕಾಣದಿದ್ದರೂ ಅವರು ಕರಾರುವಕ್ಕಾಗಿ ತಪ್ಪಾಗಿ ಹಾಡಿದವರಿಗೆಯೇ ಏಟು ಕೊಡುತ್ತಿದ್ದರು. ಆಗಿನ ಕಾಲದಲ್ಲಿ ಪ್ರಚಲಿತವಾಗಿದ್ದ ಭಜನಾ ಸಂಸ್ಕೃತಿ-ಭಕ್ತಿಗೆ ಹೊಂದುವ ಸಿನಿಮಾ ಹಾಡುಗಳನ್ನು ಅನುಕರಿಸಿ ಅವುಗಳ ಧಾಟಿಯಲ್ಲೇ ಭಜನೆ ಹಾಡುಗಳ ಸಾಹಿತ್ಯವನ್ನು ಬರೆದು ಹಾಡುತ್ತಿದ್ದರು. ಇದರಿಂದ ರಾಗವಾಗಿ ಹಾಡಲು ಸುಲಭವಾಗುತ್ತಿತ್ತು.
ನನ್ನ ತಾಯಿ ರತ್ನಮ್ಮ ಹಾಗೂ ಮನೆಯ ಹಿರಿಯರೆಲ್ಲ ಭಜನೆಯ ಬಗ್ಗೆ ಒಲವು ಹೊಂದಿದ್ದರು. ನಾನು, ನನ್ನ ತಮ್ಮಂದಿರು, ತಂಗಿಯರೆಲ್ಲ ಭಜನೆ ಕಲಿಯಬೇಕೆಂಬ ಕಾರಣದಿಂದ ಮಾ.ವ. ಶಾಸ್ತ್ರಿಗಳನ್ನು ನೇಮಿಸಿದ್ದರು. ಹೀಗೆ ನನಗೆ ಬಾಲ್ಯದಿಂದಲೇ ಭಜನೆಯ ಬಗ್ಗೆ ಆಸಕ್ತಿಯಿತ್ತು. ನಾನು ಕ್ಷೇತ್ರದ ಧರ್ವಧಿಕಾರಿಯಾದ ಬಳಿಕ ಅನೇಕ ಊರು, ಗ್ರಾಮೀಣ ಪ್ರದೇಶಗಳಿಗೆಲ್ಲ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದೆ. ಆಗ ಅಲ್ಲೆಲ್ಲ ಜನರಲ್ಲಿ ಒಗ್ಗಟ್ಟು, ಸೌಹಾರ್ದತೆ, ಧಾರ್ವಿುಕ ಚಿಂತನೆಗಳ ಕೊರತೆ, ಮನಃಸ್ತಾಪ ಎದ್ದು ಕಾಣುತ್ತಿತ್ತು. ಜೊತೆಗೆ ಊರುಗಳಲ್ಲಿ ಭಜನಾ ಮಂದಿರಗಳಿದ್ದರೂ ಭಜನೆಗಳು ನಡೆಯುತ್ತಿರಲಿಲ್ಲ. ಮೇಲಾಗಿ ಭಜನಾ ಮಂದಿರಗಳು ಭಜನೆಯನ್ನು ಹೊರತುಪಡಿಸಿ ಇನ್ನಿತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದದ್ದೇ ಹೆಚ್ಚು. ಭಜನಾ ಮಂದಿರ ಆಡಳಿತ ಮಂಡಳಿಗಳಿದ್ದರೂ, ಅವರಲ್ಲಿ ಅಸಹಕಾರ, ಒಳಜಗಳ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು. ಹಾಗಾಗಿ ಭಜನಾ ಮಂದಿರಗಳಿದ್ದರೂ ಇಲ್ಲದಂತಿತ್ತು. ಕೆಲವೊಂದು ಕಡೆ ಭಜನಾ ಮಂದಿರಗಳಲ್ಲಿ ನಡೆಯುತ್ತಿದ್ದ ಭಜನೆಗಳಿಗೆ ತಾಳವೂ ಇರಲಿಲ್ಲ, ಲಯವೂ ಇರಲಿಲ್ಲ. ದೈವತ್ವದ ಮೇಲೆ ನಂಬಿಕೆ ಇರದೆ ಭಜನೆ ಮಾಡಲು ಉದಾಸೀನ ತೋರುತ್ತಿದ್ದುದು ಗಮನಕ್ಕೆ ಬರುತ್ತಿತ್ತು.
ಇಂತಹ ಅನೇಕ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇದು ಹೀಗೆಯೇ ಮುಂದುವರಿದರೆ ಸಮಾಜ ಖಂಡಿತ ಹಳಿ ತಪ್ಪುವುದು ಎಂದೆನಿಸಿತು. ಹಾಗಾಗಿ ಸಮಾಜದಲ್ಲಿ ಒಗ್ಗಟ್ಟು, ಜನರಲ್ಲಿ ಧಾರ್ವಿುಕ ಮನೋಭಾವನೆ ಹೆಚ್ಚಿಸಿ ಪ್ರಜ್ಞಾವಂತ ಸಮಾಜ ರೂಪಿಸುವ ಸಲುವಾಗಿ ಏನಾದರೂ ಮಾಡಬೇಕೆಂದು ಆಲೋಚಿಸಿದಾಗ ಭಜನೆಯನ್ನು ಸದೃಢಗೊಳಿಸಿ ಆ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕೆಂಬ ಪರಿಕಲ್ಪನೆ ಮನದಲ್ಲಿ ಮೂಡಿಬಂತು.
1999ರಲ್ಲಿ ಭಜನಾ ತರಬೇತಿ ಕಮ್ಮಟ ಕಾರ್ಯಕ್ರಮವನ್ನು ಶ್ರೀಕ್ಷೇತ್ರದಲ್ಲಿ ಪ್ರಾರಂಭಿಸಿದೆವು. ಮೊದಲಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿದ್ದ ಭಜನಾ ಮಂಡಳಿಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ಚದುರಿ ಹೋಗಿದ್ದ ಅಲ್ಲಿನ ಸದಸ್ಯರುಗಳನ್ನು ಒಟ್ಟುಗೂಡಿಸಿ ಜನರಲ್ಲಿ ಭಜನಾ ಸಂಪ್ರೀತಿ ಹೆಚ್ಚಿಸಲು ಸಂಘಟನೆಯಲ್ಲಿ ಶಿಸ್ತು, ಸೌಹಾರ್ದ ಮತ್ತು ಧಾರ್ವಿುಕ ಭಾವನೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕಮ್ಮಟದ ಮೂಲಕ ತರಬೇತಿ ನೀಡಲು ಆರಂಭಿಸಿದೆವು. ಕೇವಲ 60 ಶಿಬಿರಾರ್ಥಿಗಳಿಂದ ಪ್ರಾರಂಭವಾದ ಈ ತರಬೇತಿ ಕಮ್ಮಟ ಇಂದು ರಾಜ್ಯಾದ್ಯಂತ ವಿಸ್ತರಿಸಿದೆ. ಕಳೆದ 25 ವರ್ಷಗಳಿಂದ ಇದುವರೆಗೂ 2400ಕ್ಕೂ ಹೆಚ್ಚು ಭಜನಾ ಮಂಡಳಿಯ 4500ಕ್ಕೂ ಹೆಚ್ಚು ಸದಸ್ಯರಿಗೆ ತರಬೇತಿ ನೀಡಲಾಗಿದೆ.
ಭಜನೆ ಎಂಬ ಮೂರಕ್ಷರದಲ್ಲಿ ಭಜಿಸು, ಜಪಿಸು ಹಾಗೂ ನೆನೆಯು ಎಂಬ ಮೂರು ತತ್ವಗಳಿವೆ. ಭಗವಂತನನ್ನು ಭಕ್ತಿಯಿಂದ ಭಜಿಸಬೇಕು. ಈ ಮೂಲಕ ಭಗವಂತನನ್ನು ಸುಲಭ ಮತ್ತು ಸರಳವಾಗಿ ಒಲಿಸಿಕೊಳ್ಳಬಹುದು. ಭಕ್ತಿ, ಶುದ್ಧ ಮನಸ್ಸಿನಿಂದ ಭಜನೆ ಹಾಡಬೇಕು. ಅಹಂಕಾರವನ್ನು ದೂರ ಮಾಡಿ ಸಾತ್ವಿಕತೆಯನ್ನು ಭಜನೆ ಪ್ರೇರೇಪಿಸುತ್ತದೆ. ನಮ್ಮನ್ನು ನಾವು ಸಂಸ್ಕಾರವಂತರನ್ನಾಗಿಸುವ ಕ್ರಿಯೆ ಭಜನೆಯಾಗಿದೆ. ಭಜನೆ, ನಾಮಸ್ಮರಣೆ ಮಾಡುವಾಗ ಋಣಾತ್ಮಕ ವಿಚಾರಗಳು ದೂರವಾಗಿ ಧನಾತ್ಮಕ ಚಿಂತನೆಗಳೆಡೆಗೆ ಮನಸ್ಸು ವಾಲುತ್ತದೆ. ಕೋಪ-ತಾಪಗಳು ಕಡಿಮೆಯಾಗಿ ಮನಸ್ಸು ತಿಳಿಯಾಗಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗುತ್ತದೆ. ಹಾಗಾಗಿ ಬಾಲ್ಯದಿಂದಲೇ ಬಾಲ ಸಂಸ್ಕಾರದ ಮೂಲಕ ಭಜನೆಯ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸಿದಾಗ ಅವರಲ್ಲಿ ಮಾನವೀಯತೆ, ಪ್ರೀತಿ, ಪ್ರೇಮ ಆದರ್ಶಗಳು ತುಂಬಿಕೊಳ್ಳುತ್ತವೆ. ವ್ಯಕ್ತಿಗತ ಮತ್ತು ಸಾಮಾಜಿಕವಾಗಿರುವ ಮೂಢನಂಬಿಕೆಗಳನ್ನು ಭಜನೆಯಿಂದ ದೂರಮಾಡಿ ಧರ್ಮದ ಬಗೆಗೆ ಮೂಲನಂಬಿಕೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ಭಜನೆಯಾಗಿದೆ.
ವಿದೇಶಗಳಲ್ಲೂ ಅವರದೇ ಆದ ಅನೇಕ ಸಂಸ್ಕೃತಿ, ಸಂಪ್ರದಾಯಗಳಿವೆ. ನನಗೆ ವಿಶೇಷ ಎನಿಸಿದ್ದು ಎಂದರೆ ಆಫ್ರಿಕಾ ದೇಶದ ಒಂದು ಆಚರಣೆ. ಅಲ್ಲಿ ಜನರು ತಮ್ಮ ಅಭಿಪ್ರಾಯ, ಆಕ್ರೋಶ, ಒಮ್ಮತ, ಖಂಡನೆ, ಮಂಡನೆಗಳನ್ನು ಹಾಡುವ-ನೃತ್ಯ ಮಾಡುವ ಮೂಲಕ ಅಭಿವ್ಯಕ್ತಿಗೊಳಿಸುತ್ತಾರೆ. ವ್ಯಕ್ತಿ, ವ್ಯವಸ್ಥೆಯ ವಿರುದ್ಧ ಅಥವಾ ಪರವಾಗಿ ಜನರೆಲ್ಲ ಒಟ್ಟು ಸೇರಿ ಹಾಡಿ, ನೃತ್ಯ ಮಾಡುವ ಮೂಲಕ ತಮ್ಮೊಳಗೆ ಒಮ್ಮತ-ಒಗ್ಗಟ್ಟು ಸಾರುತ್ತಾರೆ. ಹೀಗೆ ಜನರೆಲ್ಲ ಒಟ್ಟಾಗಿ ಸೇರಿ ಹಾಡು, ನೃತ್ಯಗಳನ್ನು ಮಾಡುವುದರಿಂದ ಒಗ್ಗಟ್ಟು ಮೂಡುತ್ತದೆ ಎಂಬುದು ಅಲ್ಲಿಯವರ ನಂಬಿಕೆ. ಹೀಗೆಯೇ ಭಜನೆಯೂ ನಮ್ಮೆಲ್ಲರ ಒಗ್ಗಟ್ಟಿಗೆ ರಹದಾರಿಯಾಗಿದೆ.
ಶ್ರೀಕ್ಷೇತ್ರದಲ್ಲಿ ಭಜನಾ ಕಮ್ಮಟದಲ್ಲಿ ಧಾರ್ವಿುಕತೆಯ ಉದ್ದೀಪನದ ಜೊತೆಗೆ ಸಮಾಜದ ಒಗ್ಗಟ್ಟಿಗೆ ಪ್ರಾಶಸ ್ಱ ನೀಡಲಾಗುತ್ತದೆ. ಹಾಗಾಗಿ ಶಿಬಿರಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತದೆ. ಕಮ್ಮಟದಲ್ಲಿ ನನಗಿಂತ ಹೆಚ್ಚಾಗಿ ನನ್ನ ಪತ್ನಿ ಹೇಮಾವತೀಯವರು ತೊಡಗಿಕೊಳ್ಳುತ್ತಾರೆ. ಭಜನೆ ಹಾಡುಗಳ ಆಯ್ಕೆ, ರಾಗ ಸಂಯೋಜನೆ, ಸಾಹಿತ್ಯ ಹೇಗಿರಬೇಕು? ಸಂಪನ್ಮೂಲ ವ್ಯಕ್ತಿಗಳು ಯಾರಾಗಬಹುದು ಎಂಬುದನ್ನು ಸಮಾಲೋಚಿಸಿ ಆಯ್ಕೆ ಮಾಡುತ್ತಾರೆ. ಮಾತ್ರವಲ್ಲದೆ ನೃತ್ಯ ಭಜನೆಯ ನಿರ್ದೇಶನದ ಬಗ್ಗೆ ಆಸಕ್ತಿ ಹೊಂದಿ ಕಮ್ಮಟವು ಯಶಸ್ವಿಯಾಗಿ ನಡೆಯಲು ಶ್ರಮವಹಿಸುತ್ತಾರೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಳೆದ ಹಲವು ವರ್ಷಗಳಿಂದ ಭಜನಾ ಕಮ್ಮಟದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳ ಜೊತೆ ಇದ್ದುಕೊಂಡು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸಹೋದರ ಡಿ. ಹಷೇಂದ್ರ ಕುಮಾರ್ ಕಮ್ಮಟಕ್ಕೆ ಮಾರ್ಗದರ್ಶನ ನೀಡಿ ಒಂದು ವಾರಗಳ ಕಾಲ ಶಿಬಿರಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಿ ಕಮ್ಮಟ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುತ್ತಾನೆ. ಭಜನಾ ಪರಿಷತ್ ಸದಸ್ಯರೂ ನಿರಂತರವಾಗಿ ಕಾರ್ಯನಿರ್ವಹಿಸುತ್ತ ಕಮ್ಮಟವು ಇನ್ನಷ್ಟು ಉತ್ತಮವಾಗಿ ಮೂಡಿಬರಲು ಕಾರಣರಾಗಿದ್ದಾರೆ.
ಮಹಿಳೆ ಸಾಮಾಜಿಕವಾಗಿ ಸಬಲೆಯಾಗಬೇಕು ಎಂಬ ಆಶಯದೊಂದಿಗೆ ಭಜನಾ ಕಮ್ಮಟದಲ್ಲೂ ಮಹಿಳಾ ಭಜಕರಿಗೆ ಪ್ರಾಧಾನ್ಯ ನೀಡಲಾಗುತ್ತದೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎನ್ನುವ ಉಕ್ತಿಯಂತೆ ಮಹಿಳಾ ಭಜಕರುಗಳೇ ಮಹಿಳಾ ಭಜನಾ ಮಂಡಳಿಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ತರಬೇತಿಯನ್ನೂ ಒದಗಿಸಲಾಗುತ್ತಿದೆ. ಕಮ್ಮಟದಲ್ಲಿ ಉಚಿತ ಊಟ-ವಸತಿಯೊಂದಿಗೆ ಪ್ರತಿದಿನ ಬೆಳಗ್ಗೆ ಒಂದು ಗಂಟೆ ಯೋಗ, ಪ್ರಾಣಾಯಾಮ ಹೇಳಿಕೊಡಲಾಗುತ್ತದೆ. ನಿತ್ಯಕರ್ಮ ಮತ್ತು ಉಪಾಹಾರದ ನಂತರ ಭಜನಾ ತರಬೇತಿಯ ವೇಳಾಪಟ್ಟಿಯಂತೆ ಭಜನೆ ಹಾಡುವ ಅಭ್ಯಾಸ ಪ್ರಾರಂಭ ಮಾಡಲಾಗುತ್ತದೆ. ಧಾರ್ವಿುಕ ಉಪನ್ಯಾಸ, ಪ್ರತಿದಿನ ಸಂಜೆ 5-30ರಿಂದ ನಗರ ಸಂಕೀರ್ತನೆ ಕಾರ್ಯಕ್ರಮ, ಕುಣಿತ ಭಜನಾ ತರಬೇತಿ ಮತ್ತು ಸಂಜೆ 7-30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಕಮ್ಮಟದಲ್ಲಿ ದಾಸಸಾಹಿತ್ಯ, ಹಳೆಯ ಭಜನೆ ಹಾಡುಗಳು, ಶ್ಲೋಕ, ವಚನ ಸಾಹಿತ್ಯಗಳ ಅಭ್ಯಾಸ ಕ್ರಮಗಳನ್ನು ನಡೆಸಲಾಗುತ್ತದೆ. ಶಿಬಿರಾರ್ಥಿಗಳಿಗೆ ಶೋಭಾನೆ, ಜೋಗುಳ ಹಾಡುಗಳನ್ನೂ ಕಲಿಸಲಾಗುತ್ತದೆ. ನೃತ್ಯ ಭಜನೆ ತರಬೇತಿ, ನಗರ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮಗಳು ಭಜನಾ ಕಮ್ಮಟದ ವಿಶೇಷತೆಗಳಾಗಿವೆ. ಇವುಗಳ ಜೊತೆಗೆ ಭಜನಾ ಮಂಡಳಿಗಳ ಕಾರ್ಯವೈಖರಿಯ ಬಗ್ಗೆ, ಸಂಘಟನೆಯ ಬಗ್ಗೆಯೂ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ತಮ್ಮ ಊರುಗಳಲ್ಲಿ ಭಜನಾ ಮಂಡಳಿಗಳ ಮೂಲಕ ಇತರರಿಗೂ ತರಬೇತಿ ನೀಡಿ ಭಜನಾ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುತ್ತಾರೆ. ಮನೆ-ಮನೆಯಲ್ಲೂ ಭಜನೆ ಸಂಸ್ಕೃತಿಯನ್ನು ಸಾರುವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ. ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಎಲ್ಲ ಕಾರ್ಯಕ್ರಮಗಳಲ್ಲಿ ಭಜನೆಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ.
ಹಿಂದೆ ಮದುವೆ, ಗೃಹಪ್ರವೇಶ, ಮತ್ತಿತರ ಕಾರ್ಯಕ್ರಮಗಳಲ್ಲಿ ಅಬ್ಬರದ ಆಧುನಿಕ ಡಿ.ಜೆ. ಕುಣಿತವಿದ್ದರೆ ಮಾತ್ರ ಕಾರ್ಯಕ್ರಮಕ್ಕೆ ಕಳೆ ಬರುವುದು ಎಂಬ ಭಾವನೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೆಹಂದಿ, ಪೂಜೆ, ಗೃಹಪ್ರವೇಶ ಮುಂತಾದ ಕಾರ್ಯಕ್ರಮಗಳಲ್ಲಿ ಭಜನೆ, ಕುಣಿತ ಭಜನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಜನೆಗೆ ಪ್ರೋತ್ಸಾಹ ದೊರೆಯುತ್ತಿರುವುದು ಸಂತಸದ ಸಂಗತಿ. ಪುರಂದರ ದಾಸರು ಹೇಳಿದ್ದಾರೆ- ‘ನಾ ಮಲಗಿ ಪಾಡಿದರೆ ತಾ ಕುಳಿತು ಕೇಳುವ, ನಾ ಕುಳಿತು ಹಾಡಿದರೆ ತಾ ನಿಲುವ, ನಾ ನಿಂತು ಪಾಡಿದರೆ ತಾ ನಲಿವ ಪುರಂದರ ವಿಠ್ಠಲ’ ಎಂದು ಎನ್ನುತ್ತ ಭಜನೆ ಮಾಡಲು ದಾಸರು ಹುರಿದುಂಬಿಸಿದ್ದಾರೆ. ಅವರಲ್ಲದೆ ಅನೇಕ ಸಂತರು, ದಾಸರು ಭಜನಾ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಪ್ರತಿವರ್ಷದ ಭಜನಾ ತರಬೇತಿ ಕಮ್ಮಟದ ಕೊನೆಯಲ್ಲಿ ನಡೆಯುವ ಭಜನೋತ್ಸವದಲ್ಲಿ ಸಹಸ್ರಾರು ಭಜನಾ ಪಟುಗಳು ಪಾಲ್ಗೊಳ್ಳುತ್ತಾರೆ. ಇಂದು ಸುಮಾರು 1800 ಭಜನಾ ಮಂಡಳಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇವೆ. 5000ಕ್ಕಿಂತ ಹೆಚ್ಚು ಭಜನಾಮಂಡಳಿ ಮತ್ತು ಒಂದು ಲಕ್ಷಕ್ಕಿಂತ ಹೆಚ್ಚು ಭಜಕರಿಗೆ ಧರ್ಮಸ್ಥಳ ಕ್ಷೇತ್ರದ ಭಜನಾ ತರಬೇತಿ ಕಮ್ಮಟ ಪ್ರೇರಣೆಯಾಗಿದೆ.
ಶ್ರೀಕ್ಷೇತ್ರ ಧರ್ಮಸ್ಥಳದ ಭಜನಾ ಪರಿಷತ್ತಿನ ಪ್ರೇರಣೆ, ಮಾರ್ಗದರ್ಶನದಿಂದ ಇಂದು ನಾಡಿನ ವಿವಿಧ ಭಜನಾ ಮಂದಿರಗಳು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿವೆ. ಸಾಕಷ್ಟು ದೈವಸ್ಥಾನ ಹಾಗೂ ದೇವಾಲಯಗಳ ಅಭಿವೃದ್ಧಿಗಳಿಗೆ ಭಜನಾ ಮಂದಿರಗಳು ಬೆನ್ನೆಲುಬಾಗಿ ನಿಂತಿವೆ. ಶಾರದಾ ಪೂಜೆ, ಶನೀಶ್ವರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ವಿುಕ ಕಾರ್ಯಕ್ರಮಗಳಲ್ಲದೆ ರಕ್ತದಾನ, ಪುಸ್ತಕ ವಿತರಣೆ, ಆರೋಗ್ಯ ಶಿಬಿರ, ಶ್ರಮದಾನ ಹೀಗೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನೂ ಭಜನಾ ಮಂಡಳಿಗಳು ನಡೆಸಿಕೊಂಡು ಬರುತ್ತಿವೆ. ಊರಲ್ಲಿ ಸಾರ್ವಜನಿಕ ಕಾರ್ಯಕ್ರಮ, ಆಚರಣೆ, ಶಾಲಾ ವಾರ್ಷಿಕೋತ್ಸವ ಇತ್ಯಾದಿಗಳಲ್ಲಿ ಭಜನಾ ಮಂಡಳಿಯ ಸದಸ್ಯರು ಕೈ ಜೋಡಿಸುತ್ತಾರೆ. ಭಜನಾ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳಾಗಿ ಸಾಮಾಜಿಕ ಧುರೀಣರಾಗಿ, ರಾಜಕೀಯ ನೇತಾರರಾಗಿ ಬೆಳೆದವರು ಅನೇಕರಿದ್ದಾರೆ. ಹೀಗೆ ಭಜನಾ ಮಂಡಳಿಯಲ್ಲಿರುವವರು ಊರಿನ ಅಭಿವೃದ್ಧಿಯ ಹರಿಕಾರರಾಗುತ್ತಿದ್ದಾರೆ ಎಂಬುದೇ ಸಂತೋಷ.
ಭಜನೆಯಲ್ಲಿ ಭಾಗವಹಿಸಿದರೆ ಕುಟುಂಬ, ಸಮಾಜ ವಿಭಜನೆ ಆಗುವುದಿಲ್ಲ ಎಂಬ ಮಾತಿದೆ. ಪರಸ್ಪರ ಸಾಮರಸ್ಯ-ಸಹಬಾಳ್ವೆಯ ಜೀವನವನ್ನು ಪ್ರೇರೇಪಿಸುತ್ತದೆ. ದುಶ್ಚಟ ಮುಕ್ತವಾದ ಆರೋಗ್ಯಪೂರ್ಣ ಸಮಾಜ ರೂಪಿಸುತ್ತದೆ. ನಾವು ಎಷ್ಟೇ ಮುಂದುವರಿದರೂ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಮರೆಯಬಾರದು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಸ್ಕೃತಿಯನ್ನು ತಿಳಿಸಿಕೊಡಬೇಕು. ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಪ್ರೇರಣೆಯಾಗುವ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ. ಈ ಮೂಲಕ ನಮ್ಮ ಸನಾತನ ನಂಬಿಕೆ, ಪರಂಪರೆ ಮುಂದುವರಿಯುತ್ತಿರಲಿ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)