

ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ |
ಆತ್ಮೈವ ಹ್ಯಾತ್ಮನೋ ಬನ್ಧುರಾತ್ಮೈವ ರಿಪುರಾತ್ಮನಃ || 6.5
ಇಲ್ಲಿ ಬಳಸಿರುವ ಎರಡನೇ ಆತ್ಮ ಶಬ್ದಕ್ಕೆ ‘ಮನಸ್ಸು’ ಎಂದು ಅರ್ಥ. ಮನಸ್ಸು ನಮ್ಮನ್ನು ಹಾಳುಮಾಡಲು ಅವಕಾಶ ಕೊಡಬಾರದು. ಶ್ರೀ ರಾಮಕೃಷ್ಣ ಪರಮಹಂಸರು ಮುಂದಿನ ದೃಷ್ಟಾಂತ ಕೊಡುವರು. ಮಧ್ಯರಾತ್ರಿ ಧೂಮಪಾನ ಮಾಡಲಿಚ್ಛಿಸುವವನು ಲಾಟೀನಿನ ಬೆಳಕಿನಿಂದ ಪಕ್ಕದ ಮನೆಗೆ ಹೋಗಿ ಬೆಂಕಿಪೊಟ್ಟಣ ಕೇಳಿದ. ಆಗ ಪಕ್ಕದ ಮನೆಯವರು, ‘ನಿನ್ನ ಲಾಟಿನಲ್ಲಿ ಬೆಂಕಿಯಿದೆ. ಅದನ್ನೇ ಉಪಯೋಗಿಸಬಹುದಿತ್ತಲ್ಲ?’ ಎಂದಾಗ ಇವನಿಗೆ ಅರಿವಾಯ್ತು. ನಮ್ಮನ್ನು ಉದ್ಧಾರ ಮಾಡಿಕೊಳ್ಳಲು ಬೇಕಾದ್ದೆಲ್ಲವನ್ನೂ ಭಗವಂತ ನಮಗೆ ಕೊಟ್ಟಿದ್ದಾನೆ. ನಮಗದು ವಿಸ್ಮರಣೆಯಾಗಿ ಏನೂ ಇಲ್ಲವೆಂದು ಪರದಾಡುತ್ತೇವೆ. ಮನಸ್ಸು ಸರಿಯಾಗಿದ್ದಲ್ಲಿ ಉದ್ಧಾರ, ಕೆಟ್ಟದಾಗಿದ್ದಲ್ಲಿ ವಿನಾಶ. ಮನಸ್ಸೇ ನಮಗೆ ಬಂಧು, ಮನಸ್ಸೇ ನಮಗೆ ಶತ್ರು. ಇದು ಶಾಶ್ವತ ಜಗತ್ಸತ್ಯ. ನಮಗೆ ಬಹಳ ಹಸಿವಾದಾಗ ಮತ್ತೊಬ್ಬರು ಊಟ ಮಾಡಿದರೆ ಹೊಟ್ಟೆ ತುಂಬದು. ಹಸಿವಾದವನೇ ಊಟ ಮಾಡಿದಾಗ ಮಾತ್ರ ಹಸಿವು ನೀಗುವುದು. ಹಾಗೆಯೇ ನಮ್ಮ ಉದ್ಧಾರಕ್ಕಾಗಿ ನಾವೇ ಪ್ರಯತ್ನಿಸಬೇಕು. ಇದು ಜ್ಞಾನಕ್ಷೇತ್ರದ ವಿಚಾರ. ಮತ್ತೊಂದು ನೈತಿಕ ಕ್ಷೇತ್ರ. ಸತ್ಯವನ್ನು ಹೇಳು, ಧರ್ಮದಿಂದ ನಡೆ ಎನ್ನುವುದು ಶ್ರುತಿ. ಇದನ್ನು ಬೇರೆಯವರು ಮಾಡುವುದರಿಂದ ನಮ್ಮ ನೈತಿಕ ಉದ್ಧಾರವಾಗದು. ವಿಷಯ ತಿಳಿದು ನಾವೇ ಆಚರಣೆಗೆ ತಂದಾಗ ಮಾತ್ರ ಅದು ನಮಗೆ ಸಿದ್ಧಿಸುವುದೇ ಹೊರತು ಪರರಿಂದಲ್ಲ. ಹಾಗೆಯೇ ಆಧ್ಯಾತ್ಮಿಕ ಉನ್ನತಿ ಕೂಡ. ಗುರುಗಳು ಮಂತ್ರದೀಕ್ಷೆ ಕೊಟ್ಟು ಆಧ್ಯಾತ್ಮಿಕ ಜೀವನದ ವಿಷಯವನ್ನು ಸಂಗ್ರಹವಾಗಿ ತಿಳಿಸುವರು. ಸಣ್ಣಪುಟ್ಟ ತೊಂದರೆಗಳಾದಾಗ ನಿವಾರಿಸುವ ಉಪದೇಶವನ್ನು ಕೊಡುವರು. ಆದರೆ ಜಪ-ಸಾಧನೆ ಮೂಲಕ ಉದ್ಧಾರವಾಗುವುದು ನಮ್ಮ ಕೈಯಲ್ಲಿದೆ.
ಸಾಕ್ಷಾತ್ಕಾರವನ್ನು ಗುರುಗಳು ತೆಗೆದುಕೊಡಲಾಗುವುದಿಲ್ಲ. ಅರ್ಥಾತ್ ಜೀವನದ ಪ್ರತಿಯೊಂದು (ಊಟದಿಂದ ಮೋಕ್ಷದವರೆಗೆ) ಕ್ಷೇತ್ರದಲ್ಲಿ ಪ್ರತಿಯೊಂದು ಹಂತದಲ್ಲಿ ನಾವು ಕಷ್ಟಪಟ್ಟು ಸಾಧನೆ ಮಾಡಿದರೆ ಮಾತ್ರ ಸಿದ್ಧಿಯಾಗುವುದು, ಇಲ್ಲವಾದಲ್ಲಿ ಇಲ್ಲ. ಅನೇಕ ಬಾರಿ ಮಂತ್ರದೀಕ್ಷೆಯಾದವರು ಗುರುಗಳೇ ಆತ್ಮಜ್ಞಾನ ಕೊಡಲೆಂದು ಭಾವಿಸುವರು. ಆದರೆ ಇದು ಸಾಧ್ಯವಿಲ್ಲ ಎನ್ನುವರು ಸ್ವಾಮಿ ವಿರಜಾನಂದರು. ನಮ್ಮನ್ನು ನಾವು ಕುಗ್ಗಿಸಿಕೊಳ್ಳಬಾರದು. ಉದ್ಧರಿಸುವ ಮನಸ್ಸೇ ನಮ್ಮನ್ನು ಕುಗ್ಗಿಸಬಲ್ಲದು. ಒಳ್ಳೆಯ ಹಾಗೂ ಕೆಟ್ಟ ಮಾರ್ಗಗಳೆರಡೂ ಕಣ್ಮುಂದೆ ಇದ್ದಾಗ ಮನಸ್ಸು ದುರ್ಬಲವಾಗಿದ್ದಲ್ಲಿ ಮೆಲ್ಲನೆ ಕೆಟ್ಟ ಮಾರ್ಗದಲ್ಲಿ ಹೋಗುವುದು. ಇದರಿಂದ ಕಾಲಕ್ರಮೇಣ ವ್ಯಕ್ತಿಯ ಅವನತಿಯಾಗುವುದು. ಇಲ್ಲಿ ಸ್ನೇಹಿತನಾಗಬೇಕಿದ್ದ, ಮಿತ್ರನಾಗಿ ಉದ್ಧಾರ ಮಾಡಬೇಕಿದ್ದ ಮನುಷ್ಯನ ಮನಸ್ಸೇ ಶತ್ರುವಾಗಿದೆ. ನಾವು ಕೆಳಗೆ ಬೀಳಲು ಅವಕಾಶ ಕೊಡದಿರುವುದು ನಮ್ಮ ಕೈಯಲ್ಲೇ ಇದೆ. ಬುದ್ಧಿ ತಿಳಿಯುವ ಸಮಯದಿಂದಲೇ ಮನಸ್ಸನ್ನು ಜೋಪಾನವಾಗಿ ಬೆಳೆಸಬೇಕು. ಸ್ವಲ್ಪಮಟ್ಟಿಗೆ ತಂದೆ-ತಾಯಿ, ಗುರುಹಿರಿಯರು ಸಹಾಯ ಮಾಡುವರು, ದಾರಿ ತೋರಿಸುವರು. ಅಂತಿಮವಾಗಿ ನಾವು ಉದ್ಧಾರವಾಗಲು ನಾವೇ ಕಷ್ಟದಿಂದ ಸಾಧನೆ ಮಾಡಬೇಕು. ಇಲ್ಲವಾದಲ್ಲಿ ನಮಗೆ ನಾವೇ ಶತ್ರುಗಳಾಗುತ್ತೇವೆ.
ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈವಾತ್ಮನಾ ಜಿತಃ | ಅನಾತ್ಮನಸ್ತು ಶತ್ರುತ್ವೇ ವತ್ವೇತಾತ್ಮೈವ ಶತ್ರುವತ್ || 6.6 ‘ಯಾವ ಆತ್ಮನಿಂದ (ಮನಸ್ಸಿನಿಂದ) ತನ್ನ ಮನಸ್ಸೇ ಜಯಿಸಲ್ಪಟ್ಟಿದೆಯೋ ಅಂಥ ಆತ್ಮನಿಗೆ (ಮನುಷ್ಯನಿಗೆ) ಅವನ ಮನಸ್ಸೇ ಬಂಧುವಾಗಿರುತ್ತದೆ. ಆದರೆ ಅಜಿತೇಂದ್ರಿಯನಿಗೆ ಅವನ ಮನಸ್ಸೇ ಶತ್ರುವಿನಂತೆ ದ್ವೇಷಭಾವದಲ್ಲಿರುತ್ತದೆ.’
ತನ್ನ ಮನಸ್ಸಿನ ಮೂಲಕ ದೇಹೇಂದ್ರಿಯಗಳ ಮೇಲೆ ಸ್ವಾಮಿತ್ವ ಸಂಪಾದಿಸಿದವನಿಗೆ ಅವನ ಮನಸ್ಸೇ ಮಿತ್ರ. ತನ್ನ ಮನಸ್ಸನ್ನು ಗೆಲ್ಲದಿರುವವನಿಗೆ ಅವನ ಮನಸ್ಸೇ ಶತ್ರು. ಶ್ರೀರಾಮಕೃಷ್ಣ ಪರಮಹಂಸರು ಉಪದೇಶಿಸುವಾಗ ಅತ್ಯುತ್ತಮ ಶಬ್ದವನ್ನು ಬಳಸುತ್ತಿದ್ದರು. ಅವರು, ನಮ್ಮಲ್ಲಿ ಎರಡು ರೀತಿಯ ಮನಸ್ಸುಗಳಿವೆ (ಅಹಂಕಾರ). ಒಂದು ರೀತಿಯದ್ದು ಪಕ್ವ ಮನಸ್ಸು (ಅಹಂಕಾರ). ಮತ್ತೊಂದು ಅಪಕ್ವ ಮನಸ್ಸು (ಅಹಂಕಾರ). ಎರಡಕ್ಕೂ ಬಹಳ ವ್ಯತ್ಯಾಸಗಳಿವೆ. ಕಾಮಕಾಂಚನಗಳ ಪ್ರಭಾವಕ್ಕೆ ಒಳಗಾಗಿರುವ ಮನಸ್ಸು, ಅಹಂಕಾರ ಮಮಕಾರಗಳ ಪ್ರಭಾವಕ್ಕೆ ಸಿಲುಕಿರುವ ಮನಸ್ಸು ಅಪಕ್ವವಾದ ಅಹಂಕಾರ. ಇದು ಕ್ರಮೇಣ ಮನಸ್ಸನ್ನು ಕೆಳಗಿಳಿಸುವುದು. ದೈವೀಸಂಪತ್ ಗುಣಗಳಿಂದ ಪಕ್ವ ಮನಸ್ಸು ಬರುವುದು. ಆಸುರೀಸಂಪತ್ತು ಅಧೋಗತಿಗೆ ತಳ್ಳಿದರೆ ದೈವೀಸಂಪತ್ತು ಉದ್ಧರಿಸುವುದು. ಆದ್ದರಿಂದ ಈ ಉದ್ಧರಿಸುವ ಗುಣವನ್ನು ಪಡೆದು, ಅಭ್ಯಾಸ ಮಾಡಲು ಪ್ರಯತ್ನಿಸಬೇಕು. ಮನಸ್ಸು ವಿವೇಕದಿಂದಿದ್ದಲ್ಲಿ ದೇಹಾದಿಗಳನ್ನು ಜಯಿಸಿ ವಶದಲ್ಲಿಟ್ಟುಕೊಳ್ಳಲು ಸಹಾಯಮಾಡುವುದು. ದೇಹೇಂದ್ರಿಯಗಳ ವಶಕ್ಕೆ ಶಸ್ತ್ರಾದಿಗಳು ಅನುಪಯೋಗಿ. ಶಸ್ತ್ರದಿಂದ ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು ಮನಸ್ಸನ್ನು ನಿಗ್ರಹಿಸಲು ಅಸಾಧ್ಯ. ಮನಸ್ಸಿನ ಮತ್ತೊಂದು ಭಾಗದಲ್ಲಿ ನಿಗ್ರಹ ಪ್ರಕ್ರಿಯೆ ಆಗಬೇಕು. ವಿಚಿತ್ರ ಸ್ವಭಾವದ ಮನಸ್ಸು ಎರಡಾಗಬಹುದು. ಕೆಟ್ಟದ್ದು ಕೆಳಗೆಳೆದರೆ, ಒಳ್ಳೆಯದು ಮೇಲಕ್ಕೆಳೆಯುವುದು. ಕಾಡಿಗೆ ಹೋದ ಮನುಷ್ಯ ಕಾಲು ಜಾರಿ ಸರೋವರದಲ್ಲಿ ಬಿದ್ದಾಗ ಜೀವ ಉಳಿಸಿಕೊಳ್ಳಲು ದಂಡೆಯಲ್ಲಿದ್ದ ಮರದ ಹತ್ತಿರ ಕಷ್ಟದಿಂದ ಬಂದು ಅದರ ರೆಂಬೆಕೊಂಬೆಯನ್ನೋ, ಬಳ್ಳಿಯನ್ನೋ ಹಿಡಿದು ಜೀವ ಉಳಿಸಿಕೊಳ್ಳುವನು. ಹಾಗೆಯೇ ಭಗವಂತ ಕೊಟ್ಟಿರುವ ನಮ್ಮೊಳಗಿನ ಶಕ್ತಿಯನ್ನು ನಾವೇ ಗುರುತಿಸಿ, ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಬೇಕು. ಅಪಕ್ವ ಮನಸ್ಸಿನಲ್ಲಿರುವ ಅಪಕ್ವ ಅಹಂಕಾರವನ್ನು ನಿಮೂಲಗೊಳಿಸಬೇಕು. ಅರಿಷಡ್ವರ್ಗಗಳೆಡೆಗೆ ಎಳೆಯುವ ಮನಸ್ಸನ್ನು ಶಿಕ್ಷಿಸಿ, ದೈವೀಗುಣಗಳೆಡೆಗೆಳೆಯುವ ಮನಸ್ಸನ್ನು ಪೋಷಿಸಬೇಕು. ಒಟ್ಟಿನಲ್ಲಿ ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ಇತರರಿಂದ, ಶಾಸ್ತ್ರ, ಗುರುಹಿರಿಯರು, ಪೂರ್ವಪುಣ್ಯಗಳಿಂದ ಸಿಗುವ ಸಹಾಯ ಅತ್ಯಲ್ಪ. ಸಾಧನೆಗೆ ಮನಸ್ಸು ಮಾಡಿದರೆ ಭಗವಂತ ಕೊಟ್ಟ ಶಕ್ತಿಯನ್ನು ಇಚ್ಛಾಶಕ್ತಿಯಾಗಿ ಪರಿವರ್ತಿಸಿದರೆ ಕ್ರಿಯಾಶಕ್ತಿ ಉದ್ಭವಿಸುವುದು.
ಜಿತಾತ್ಮನಃ ಪ್ರಶಾಂತಸ್ಯ ಪರಮಾತ್ಮಾ ಸಮಾಹಿತಃ | ಶೀತೋಷ್ಣಸುಖದುಃಖೇಷು ತಥಾ ಮಾನಾಪಮಾನಯೋಃ || 6.7 ‘ಜಿತೇಂದ್ರಿಯನಾಗಿ ಜಯಿಸಿದ ಮನಸ್ಸುಳ್ಳವನಿಗೆ, ಪ್ರಶಾಂತನಾದವನಿಗೆ ಪರಮಾತ್ಮ ಹತ್ತಿರವಾಗಿರುವನು. ಅವನು ಶೀತ-ಉಷ್ಣ, ಸುಖ-ದುಃಖ, ಮಾನ-ಅಪಮಾನ ಎಲ್ಲದರಲ್ಲೂ ಸಮನಾಗಿರುವನು.’
ನಮ್ಮ ಹೃದಯದಲ್ಲಿರುವ ಭಗವಂತನ ಸಾನ್ನಿಧ್ಯ ಅನುಭವಿಸಲು ಈ ಸ್ಥಿತಿ ತಲುಪಿರಬೇಕು. ತಿಳಿಯಾದ ಸರೋವರದಂತೆ ಮನಸ್ಸು ಇರಬೇಕೆಂಬ ಸ್ವಾಮಿ ವಿವೇಕಾನಂದರ ಉದಾಹರಣೆಯನ್ನು ಅನೇಕ ಬಾರಿ ನೋಡಿದ್ದೇವೆ. ಇದರಿಂದ ಮನದ ಹಿಂದಿನ ಆತ್ಮವಸ್ತುವನ್ನು (ಪರಮಾತ್ಮವಸ್ತು) ಅನುಭವಕ್ಕೆ ತಂದುಕೊಳ್ಳಬಹುದು. ಇದೇ ಯೋಗ ಎನ್ನುವರು ಪತಂಜಲಿ. ಮನಸ್ಸಿನ ಅಲೆಗಳು ಶಾಂತವಾದಾಗ ತಾನಾಗಿಯೇ ಪರಮಾತ್ಮನ ದರ್ಶನವಾಗುವುದು. ಇಂಥ ಪ್ರಶಾಂತನಾದವನಿಗೆ ಎಲ್ಲರಂತೆ ಪ್ರಪಂಚದ ಶೀತ-ಉಷ್ಣ, ಸುಖ-ದುಃಖಗಳ ಅನುಭವವಾದಾಗ ಸಹಿಸಿಕೊಂಡರೂ, ಅವನ ಮನಸ್ಸಿನಲ್ಲಿ ಅವುಗಳ ಪ್ರಭಾವವಿರದು. ಕೆಲವೊಮ್ಮೆ ಸಮಸ್ಯೆ ಪರಿಹಾರದ ದಾರಿ ಕಾಣದಿದ್ದಾಗ ಸಹಿಸಬೇಕು. ಇದರಿಂದ ಮನಸ್ಸು ಸಮಾಧಾನದಲ್ಲಿರುವುದು. ಇದನ್ನೇ ಭಗವಂತ ಈ ಶ್ಲೋಕದಲ್ಲಿ ಹೇಳಿದ್ದಾನೆ. ಪ್ರಶಾಂತಾತ್ಮನ ಮನಸ್ಸು ಶರೀರಕ್ಕೆ ಸಂಬಂಧಿಸಿದ್ದನ್ನು (ಬಿಸಿ, ತಂಪು, ಸುಖ, ಕಷ್ಟ) ತಡೆದುಕೊಂಡಂತೆಯೇ, ಮನಸ್ಸಿಗೆ ಸಂಬಂಧಿಸಿದ ಮಾನ-ಅಪಮಾನಗಳ ಸಂದರ್ಭಗಳಲ್ಲಿ ಹಿಗ್ಗದು, ಕುಗ್ಗದು. ಇವನು ತನ್ನ ಮನಸ್ಸನ್ನು ಗೆದ್ದು ಅದನ್ನು ಪ್ರಶಾಂತವಾಗಿಟ್ಟಿರುವುದರಿಂದ, ಪರಮಾತ್ಮನ ಸಾನ್ನಿಧ್ಯವನ್ನು ಹೃದಯದಲ್ಲಿ ಅನುಭವಿಸುತ್ತಿರುವುದರಿಂದ ಬಂದಿರುವ ಶಕ್ತಿಯಿಂದ ಎಲ್ಲವನ್ನೂ ಸಹಿಸುತ್ತಿದ್ದಾನೆ. ಸುಖದುಃಖ, ಶೀತೋಷ್ಣಾದಿಗಳು ಮಾನ-ಅಪಮಾನಗಳನ್ನು ಕ್ರಮೇಣ ತಡೆಯುವ ಶಕ್ತಿಯನ್ನು ಹೆಚ್ಚಿಸಿಕೊಂಡಾಗ ನಾವು ಕೂಡ ಪ್ರಶಾಂತಿ ಪಡೆದು ಅಂತರಂಗದಲ್ಲಿ ಭಗವಂತ ಇರುವುದನ್ನು ಅನುಭವಿಸಬಹುದು. ಇದೇ ಸಾಧನೆ.
(ನಿರೂಪಣೆ: ರಾಮಾಯಣ ಸುರೇಶ್ಕುಮಾರ್)