ಆಂತರ್ಯದ ಕತ್ತಲು ಕಳೆದ ಮಹಾನ್ ಸಂತ ಭಗವಾನ್ ಶ್ರೀಧರ ಸ್ವಾಮಿ

Shridhara Shree
Published on

(ರೊನಾ ಎರಡನೇ ಅಲೆಯ ಆರ್ಭಟ ಜೋರಾಗಿದೆ. ಜನತಾ ಕರ್ಫ್ಯೂವಿನ ಪರಿಣಾಮ ಎಲ್ಲ ದೇಗುಲಗಳು, ಪ್ರಾರ್ಥನಾ ಮಂದಿರಗಳು ಬಾಗಿಲು ಹಾಕಿವೆ. ಹಾಗಾಗಿ, ಈ ವರ್ಷ ಭಗವಾನ್ ಶ್ರೀಧರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಮನೆಯಲ್ಲೇ ಆಚರಿಸಬೇಕಿದೆ. ವರದಪುರ, ವಸಂತಪುರ, ಲಾಡಚಿಂಚೋಳಿಯ ಶ್ರೀಧರ ಆಶ್ರಮಗಳಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಭಕ್ತಿ, ಕಾರುಣ್ಯದ ಸವಿಯನ್ನು ಶ್ರೀಸಾಮಾನ್ಯನಿಗೂ ಉಣಿಸಿದ ಶ್ರೀಧರಸ್ವಾಮಿಗಳ ಅದ್ಭುತ ಬದುಕು ಮತ್ತು ಸಂದೇಶ ವರ್ತಮಾನದ ತಲ್ಲಣಗಳನ್ನೂ ಕಳೆಯಲಿ.)

ಭಗವಾನ್ ಶ್ರೀಧರ ಸ್ವಾಮಿಗಳು ಅಧ್ಯಾತ್ಮದ ಎತ್ತರಕ್ಕೆ ತಲುಪಿದರೂ, ಭಕ್ತಿಯ ಸವಿಯನ್ನು ಎಲ್ಲರಿಗೂ ಉಣಬಡಿಸಿದರು. ಮೋಕ್ಷದತ್ತ ಸಾಗುವ ಹಕ್ಕು ಮತ್ತು ಅರ್ಹತೆ ಎಲ್ಲರಿಗೂ ಇದೆ ಎಂದು ಸಾರುತ್ತಲೇ, ರಾಮನಾಮದ ಮಹತ್ವವನ್ನು ಮಾನವನ ಜಡಮನಸುಗಳಿಗೆ ತಲುಪಿಸಿ, ಅಧ್ಯಾತ್ಮ ಚೈತನ್ಯವನ್ನು ಜಾಗೃತಗೊಳಿಸಿದರು. ಅವರ ಪ್ರವಚನಗಳು, ಭಕ್ತರಿಗೆ ಬರೆದ ಪತ್ರಗಳು ಅಧ್ಯಾತ್ಮದ ಸಂದೇಶದ ಜತೆಗೆ ನೈತಿಕ ಬದುಕಿನ, ಸಾರ್ಥಕ ಬದುಕಿನ ಹೊಸದಿಕ್ಕನ್ನು ಅನಾವರಣಗೊಳಿಸುತ್ತವೆ. ಅಧ್ಯಾತ್ಮ ಎಂದರೆ ಯಾವುದೋ ಬಹು ಎತ್ತರದಲ್ಲಿ ಇರುವ ಸಾಧನವಲ್ಲ. ನಮ್ಮಲ್ಲಿ ಅಡಗಿರುವ ದೈವತ್ವವನ್ನು ಜಾಗೃತಗೊಳಿಸುತ್ತ, ಮಾನವ ಮಾಧವನಾಗಿ ಬದಲಾಗುವುದೇ ಅಧ್ಯಾತ್ಮ ಎಂಬ ಅವರ ಸರಳ ಸಂದೇಶ ಲಕ್ಷೋಪಲಕ್ಷ ಮನಸ್ಸುಗಳನ್ನು ತಟ್ಟಿತು. ನಾಸ್ತಿಕರೂ ಆಸ್ತಿಕರಾದರು. ಭಾರತೀಯ ಸಂಸ್ಕೃತಿ, ಜೀವನಮೌಲ್ಯವನ್ನು ಪ್ರೀತಿಸತೊಡಗಿದರು.

ತತ್ತ್ವಜ್ಞಾನದ ದರ್ಶನ: ಶ್ರೀಧರರ ಪ್ರವಚನಗಳು ಪ್ರಖರ ಮತ್ತು ತತ್ತ್ವಜ್ಞಾನದ ದರ್ಶನದಿಂದ ಕೂಡಿರುತ್ತಿದ್ದವು. ಸ್ವರ್ಗ ಮತ್ತು ನರಕಗಳ ಬಗ್ಗೆ ಅವರು ವಿವರಿಸುತ್ತ-‘ಫಲಾಭಿ ಸಂಧಾನದಿಂದ ವಿಧ್ಯುಕ್ತ ಕಾಮ್ಯ ಕರ್ಮ ಮಾಡುವವರಿಗೆ ವಿಷಯ ಭೋಗ ರೂಪ ಸ್ವರ್ಗದ ಪ್ರಾಪ್ತಿಯಾಗುವುದು. ಫಲಾಪೇಕ್ಷಾ ರಹಿತ ರಾಗಿ ನಿಷ್ಕಾಮದಿಂದ ವಿಧ್ಯುಕ್ತ ಅನುಷ್ಠಾನ ತಪವನ್ನು ಮಾಡುವ ವನವಾಸಿ ವಿರಕ್ತರಿಗೆ ಜ್ಞಾನರೂಪ ಬ್ರಹ್ಮಲೋಕದ ಪ್ರಾಪ್ತಿಯಾಗು ವುದು. ಸ್ವೆರವೃತ್ತಿಯಿಂದ ಪಶುವಿನಂತಾಗಿ ನಿಷಿದ್ಧ ಕರ್ಮವನ್ನು ಮಾಡುವವರಿಗೆ ಶಿಕ್ಷಾತ್ಮಕವಾದ ಯಾವುದಾದರೊಂದು ಲೋಕ ಇರಬೇಕಾಯಿತು. ಆ ಲೋಕಕ್ಕೆ ನರಕ ಎನ್ನುವರು’. ರಾಮನಾಮದ ಮಹತ್ವವನ್ನೂ ಅತ್ಯಂತ ಮಾರ್ವಿುಕ ಮತ್ತು ಅಷ್ಟೇ ಸುಂದರವಾಗಿ ನಿರೂಪಿಸುತ್ತಿದ್ದರು. ಅವರ ಪ್ರವಚನಗಳನ್ನು ಕೇಳಲು ಭಕ್ತವರ್ಗ ದೊಡ್ಡಸಂಖ್ಯೆಯಲ್ಲಿ ಜಮಾಯಿಸುತ್ತಿತ್ತು.

ಲೌಕಿಕ ಕಾಮನೆಗಳಲ್ಲಿ ಜೀವನ ದಿಕ್ಕು ತಪ್ಪಿ ಹೋಗುತ್ತಿರುವಾಗ ಸಾಗಬೇಕಾದ ಪಥವನ್ನು ಹೇಳಿಕೊಟ್ಟರು. ‘ಪರಮಾತ್ಮ ಪ್ರಾಪ್ತಿಯೇ ನಿಜವಾದ ಸುಖ; ಪರಮಾತ್ಮವೊಂದೇ ಸತ್ಯವಾದದ್ದು. ಈ ಜಗತ್ತಿನಲ್ಲಿ ಯಾವುದೇ ಉಪಭೋಗದಿಂದ ಚಿತ್ತ ಶಾಂತಿ ಲಭಿಸುವುದಿಲ್ಲ. ಜಗತ್ತಿನ ಪದಾರ್ಥಗಳಲ್ಲಿ ಸುಖ ಇದ್ದಿದ್ದರೆ ಆ ಸುಖ ಅದರ ಪ್ರಾಪ್ತಿಯ ನಂತರವೂ ಅದೇಕೆ ದೊರೆಯುವುದಿಲ್ಲ? ಇದರಿಂದ ಅದರಲ್ಲಿ ಸುಖವಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ. ಮಾನವಜೀವನದ ಪರಮ ಗುರಿಯಾಗಿರುವ ಶಾಶ್ವತ ಸುಖರೂಪ ಪರಮಾತ್ಮ ಪ್ರಾಪ್ತಿಯ ಮಾರ್ಗವೆಂದರೆ ಧರ್ಮದ ಶಾಸನ. ಆ ಮಾರ್ಗ ಬಿಟ್ಟು ಬೇರೆ ಮಾರ್ಗ ಹಿಡಿದರೆ, ‘ನಾವು ದಾರಿ ತಪ್ಪಿದ್ದೇವೆ’ ಎಂದರ್ಥ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಕೊಡುವ ಮೂಲಕ, ಆಂತರ್ಯದ ಕತ್ತಲು ಕಳೆದರು.

ಆತ್ಮದ ಅರಿವು ಇರಲಿ: ಎಷ್ಟೋ ಬಾರಿ ಈ ಜೀವನದ ಉದ್ದೇಶ ಏನು ಎಂಬ ಅನುಮಾನ, ಗೊಂದಲ ಬಹುತೇಕರಿಗೆ ಕಾಡುತ್ತದೆ. ಶ್ರೀಧರ ಸ್ವಾಮಿಗಳು ಈ ಬಗ್ಗೆಯೂ ಬೆಳಕು ಬೀರಿ ಮಾರ್ಗದರ್ಶನ ಮಾಡಿದ್ದಾರೆ. ‘ದೇಹದಲ್ಲಿನ ಚೈತನ್ಯ ಒಮ್ಮೆ ಹೊರಟು ಹೋದರೆ ಅಲ್ಲಿ ಬಾಕಿ ಏನು ಉಳಿಯುತ್ತದೆ? ಮಣ್ಣು-ಮೃಣ್ಮಯ ಶರೀರ. ಹೀಗಿದ್ದರೂ ಮೂರ್ಖ ಮನುಷ್ಯ ದಿವ್ಯಚೈತನ್ಯಕ್ಕಾಗಿ ಪ್ರಯತ್ನಶೀಲನಾಗದೆ, ಚೈತನ್ಯದ ಅರಿವನ್ನೂ ಇಟ್ಟುಕೊಳ್ಳದೆ, ಮೃಣ್ಮಯ ಶರೀರಕ್ಕಾಗಿ ಹಗಲು-ರಾತ್ರಿ ಪರಿತಪಿಸುತ್ತಿದ್ದಾನೆ. ಶರೀರ ಸುಖಕ್ಕಾಗಿ ಕಷ್ಟ ಪಡುತ್ತ, ಅದರಲ್ಲೇ ಸಮಾಧಾನ ಪಟ್ಟುಕೊಳ್ಳುತ್ತಾನೆ. ಕೊನೆಗೆ ಮೃತ್ಯುವಿಗೆ ಬಲಿಯಾಗುತ್ತಾನೆ’ ಎಂದು ಹೇಳುತ್ತ ಆತ್ಮದ ಅರಿವು ಹೊಂದಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಹಾಗಾಗಿಯೇ ಶ್ರೀಧರ ಸ್ವಾಮಿಗಳನ್ನು ಅನುಸರಿಸುವ ಭಕ್ತಸಮೂಹ ಅಪಾರ ಸಂಖ್ಯೆಯಲ್ಲಿದ್ದು, ನಿಜವಾದ ‘ಪರಿವರ್ತನೆ’ ಹೊಂದಿದ್ದಾರೆ. ‘ಮಾನವನು ಬುದ್ಧಿಜೀವಿಯಾಗಿರುವ ಕಾರಣದಿಂದಾಗಿ ಅವನೇ ಧರ್ಮದ ಅಧಿಕಾರಿಯೂ ಆಗಿದ್ದಾನೆ. ತನ್ನ ವಿಚಾರ ಶಕ್ತಿಯಿಂದ ಶಾಶ್ವತ ಸುಖ ಮತ್ತು ಕ್ಷಣಿಕ ಸುಖ ಇವುಗಳಲ್ಲಿನ ವ್ಯತ್ಯಾಸ ತಿಳಿಯಲೂ ಶಕ್ತನಾಗಿದ್ದಾನೆ. ಜಗತ್ತಿನಲ್ಲಿ ಎಲ್ಲ ಪದಾರ್ಥಗಳಿಂದ ಪ್ರಾಪ್ತವಾಗುವ ಸುಖವೆಲ್ಲವನ್ನೂ ಒಂದು ಗೂಡಿಸಿದರೂ ಅದು ಪರಮಾತ್ಮನ ದಿವ್ಯ ಸುಖದ ಲೇಶಮಾತ್ರಕ್ಕೂ ಸಮನಾಗುವುದು ಸಾಧ್ಯವಿಲ್ಲ, ಆ ಶಾಶ್ವತ ಸುಖಪ್ರಾಪ್ತಿಯ ಮಾರ್ಗವೇ ಧರ್ಮ ಮತ್ತು ಧರ್ಮಪಾಲನೆ ಮಾಡುವುದೇ ನಿಜವಾದ ಸುಖ’ ಎಂದು ತಿಳಿಸುತ್ತ ಶ್ರೀಧರರು ಮಾನವನ ತೊಳಲಾಟಗಳನ್ನು ದೂರ ಮಾಡಿದ್ದಾರೆ. ಅವರ ದಿವ್ಯಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದರೆ, ಲೌಕಿಕ ದುಃಖ ಮರೆಯಾಗಿ ಸತ್ಯ ಗೋಚರಿಸುವುದರಲ್ಲಿ ಸಂಶಯವಿಲ್ಲ.

ಸಾಧಕರಿಗೆ ಹೇಳಿದ ಮಾತುಗಳು: ಮಾಯೆ ಬಲು ಮೋಸಗಿತ್ತಿ. ಯಾವಾಗ ಹೇಗೆ ಮೋಸವನ್ನು ಬೀರಿ ಮೋಸ ಮಾಡುವಳೆಂದು ತಿಳಿಯದು. ಆದುದರಿಂದ ಯಾವಾಗಲೂ ಬಹಳ ಜಾಗ್ರತರಾಗಿ ಇರಬೇಕು. ಕರ್ತೃತ್ವ ಭೋಕ್ತೃ್ವದ ಸ್ಪರ್ಶ ಮಾಡಿಕೊಳ್ಳದೆ ಎಲ್ಲ ಅಭಿಮಾನ ಬಿಟ್ಟು ಕರ್ತವ್ಯಬುದ್ಧಿಯಿಂದ ನಿಷ್ಕಾಮ ಕರ್ಮಗಳನ್ನು ಮಾಡತಕ್ಕವನೇ ಸಾಧಕ.

ಪ್ರೇಮದ ಸಾಗರ

‘ಭಕ್ತಿ ಮತ್ತು ಅದರ ಸಾಧನೆ ಕಠಿಣವಲ್ಲ. ಏಕೆಂದರೆ ಭಕ್ತಿ ಎಂದರೆ ಪ್ರೇಮ ಹಾಗೂ ಪ್ರೇಮ ಮಾಡುವುದೇ ಭಕ್ತಿ. ಭಕ್ತಿ ಮತ್ತು ಪ್ರೇಮ ಇವು ತಾತ್ವಿಕ ದೃಷ್ಟಿಯಿಂದ ಒಂದೇ ಆಗಿವೆ’ ಎಂಬ ಅಮೃತವಾಕ್ಯದಿಂದ ನೊಂದವರ ದುಃಖ ನಿವಾರಣೆ ಮಾಡಿದರು. ಹಿಂದೆಲ್ಲ ನಮ್ಮ ಋಷಿಮುನಿಗಳು ಅಧ್ಯಾತ್ಮದ ಪ್ರಖರ ತೇಜಸ್ಸಿನಿಂದ ಜಗದೋದ್ಧಾರಗೈದ ನಿದರ್ಶನಗಳು ಬೇಕಾದಷ್ಟಿವೆ. ಆದರೆ, ಈ ಕಲಿ ಕಾಲದಲ್ಲಿ ಎಲ್ಲೆಲ್ಲೂ ಅನ್ಯಾಯ, ಸ್ವಾರ್ಥ, ಲೋಭಗಳೇ ತಾಂಡವವಾಡುತ್ತಿರುವಾಗ ಇಂಥ ಸಾಧನೆ ಸಾಧ್ಯವೇನು, ಅಂಥ ಋಷಿಸದೃಶ ಬದುಕು ಸಾಕಾರಗೊಳ್ಳುವುದೇನು ಎಂಬ ಕಳವಳ, ಪ್ರಶ್ನೆಗಳಿಗೆಶ್ರೀಧರ ಸ್ವಾಮಿಗಳ ಬದುಕೇ ಉತ್ತರವಾಯಿತು.

ಶ್ರೀಧರವಾಣಿ

ನನ್ನನ್ನು ದೇಹಾಕಾರದಿಂದ ನೋಡಬೇಡಿ. ನಿಮ್ಮ ಆನಂದ ಸ್ವರೂಪವೇ ನಾನೆಂದು ತಿಳಿದು ನನ್ನನ್ನು ಕಾಣುತ್ತಿರುವಾಗ ನಿಮ್ಮ ದೇಹದ ಭಾವನೆಯನ್ನೂ ಮರೆತು ಬಿಡಿ. ತರಂಗವು ಸಮುದ್ರದಲ್ಲಿ ಸೇರಿ ಅನಂತವಾದ ಸಮುದ್ರವೇ ಆಗುವಂತೆ ನಿಮ್ಮ ನಾನೆಂಬ ಅರಿವು ಕಳೆದು ಒಂದು ಅಪಾರ ಆನಂದವಾಗಿಯೇ ಉಳಿಯಿರಿ. ಇದು ತ್ರಿಕಾಲಾಬಾಧಿತ ಸತ್ಯ ಸ್ಥಿತಿ. ಅಂತಹ ಸ್ಥಿತಿ ನಮಗೆಲ್ಲರಿಗೂ ಉಂಟಾಗಲಿ. ? ನಿಷ್ಕಪಟ ಪ್ರೀತಿ ಮತ್ತು ಮೃದು ಮಧುರ ನಡೆ-ನುಡಿ ಇವು ಜಗದ್ವಶೀಕರಣದ ಮಹಾಮಂತ್ರಗಳಾಗಿರುವವು. ? ತನ್ನ ತಪ್ಪನ್ನು ನೋಡಿ ಅವುಗಳನ್ನು ತಿದ್ದಿಕೊಳ್ಳುತ್ತ ಪಶ್ಚಾತ್ತಾಪದಿಂದ ನೊಂದಿರುವವನೇ ತನ್ನ ಉದ್ಧಾರ ಮಾಡಿಕೊಳ್ಳುವನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net