

ರಹಸಿಸ್ಥಿತಃ: ಬೇರೆಯವರಿಗೆ ಗೊತ್ತಾಗದಂತೆ ಧ್ಯಾನ ಮಾಡುವುದು. ಶ್ರೀ ರಾಮಕೃಷ್ಣ ಪರಮಹಂಸರು, ‘ರಾತ್ರಿ ದೀಪ ಆರಿಸಿ ಸೊಳ್ಳೆಪರದೆಯೊಳಗೆ ಕುಳಿತು ಧ್ಯಾನ ಮಾಡಬೇಕು’ ಎನ್ನುತ್ತಿದ್ದರು. ಇತರರಿಗೆ ತಿಳಿದರೆ ಮಾತನಾಡಿಸಿ ತೊಂದರೆ ಕೊಡಬಹುದು.
ಏಕಾಕಿ: ನಾಲ್ಕೈದು ಜನ ಸಾಮೂಹಿಕವಾಗಿ ಧ್ಯಾನ ಮಾಡಲು ಸಾಧ್ಯವಾಗದು. ಒಮ್ಮೆ ನಾಲ್ವರು ಬೌದ್ಧ ಸಂನ್ಯಾಸಿಗಳು ಮೌನವಾಗಿ ಒಟ್ಟಿಗೆ ಧ್ಯಾನ ಮಾಡಲು ನಿರ್ಧರಿಸಿ ಧ್ಯಾನಕ್ಕೆ ಕುಳಿತರು. ಒಬ್ಬನಿಗೆ ಕೆಮ್ಮು ಬಂದಿತು. ಆಗ ಎರಡನೆಯವನು, ‘ಏಕೆ ಕೆಮ್ಮಿ ಶಬ್ದ ಮಾಡಿದೆ?’ ಎಂದ. ಮೂರನೆಯವನು, ‘ನಾವು ಮಾತನಾಡಬಾರದು. ತಿಳಿದಿಲ್ಲವೇ?’ ಎಂದ. ನಂತರ ನಾಲ್ಕನೆಯವನು, ‘ನೀವೆಲ್ಲ ಮಾತನಾಡಿದಿರಿ, ನಾನೊಬ್ಬನೇ ಮಾತಾಡದೆ ಇದ್ದವನು’ ಎಂದ. ಇಲ್ಲಿಗೆ ಧ್ಯಾನದ ಸಮಾರೋಪವಾಯಿತು.
ಮನುಷ್ಯನ ಪ್ರವೃತ್ತಿ ಹೀಗಿರುವುದರಿಂದ ಏಕಾಕಿಯಾಗಿರಬೇಕು. ಏಕಾಂತ ಸ್ಥಾನದಲ್ಲಿ ಕೂರಬೇಕು. ಶರೀರದ ಆಸನ ಭಂಗಿ ಒಂದೇ ರೀತಿ ಇರಬೇಕು. ಮನಸ್ಸು ಧ್ಯೇಯವಸ್ತುವಾದ ಭಗವಂತನೆಡೆಗೆ ಸಾಗಬೇಕು. ಧ್ಯಾನದ ನೆನಪಿದ್ದು ಉಳಿದ ಯಾವ ಆಸೆ ಆಕಾಂಕ್ಷೆಗಳೂ ಯೋಚನೆಗಳೂ ಇರಬಾರದು. ಕೇವಲ ಸಾಧನೆ ಹಾಗೂ ಶರೀರ ಪೋಷಣೆಗೆ ಬೇಕಾದ್ದನ್ನು ಮಾತ್ರ ಪಡೆಯಬಹುದೇ ಹೊರತು, ಬೇರೆ ಯಾವುದನ್ನೂ ಸ್ವೀಕರಿಸಬಾರದು.
1965ರಲ್ಲಿ ಶಿವರಾತ್ರಿಯಂದು ಮೈಸೂರಿನಲ್ಲಿ ನಡೆದದ್ದು. ಆಶ್ರಮದ ಇಬ್ಬರು ಸಂನ್ಯಾಸಿಗಳು ಚಾಮುಂಡೇಶ್ವರಿ ದರ್ಶನಮಾಡಿ, ಸಂಪ್ರದಾಯದಂತೆ ದೇವಾಲಯದ ಮೂಲೆಯಲ್ಲಿ ಏಕಾಂತ ಸ್ಥಾನದಲ್ಲಿ ಕಣ್ಣುಮುಚ್ಚಿ ಜಪ, ಧ್ಯಾನಕ್ಕೆ ಕುಳಿತರು. ಮೂವತ್ತು ನಿಮಿಷದ ನಂತರ ನೋಡಿದರೆ ಅವರ ಮುಂದೆ ನಾಣ್ಯಗಳ ರಾಶಿ. ಭಿಕ್ಷುಕರು ಎಂದು ತಿಳಿದು ಭಕ್ತರು ದುಡ್ಡು ಹಾಕಿದ್ದರು. ಇವರು ಅದರಿಂದ ಕಲ್ಲಂಗಡಿ ಹಣ್ಣು ಖರೀದಿಸಿ, ಪಾನಕ ಮಾಡಿ ಶ್ರೀ ರಾಮಕೃಷ್ಣರಿಗೆ ನೈವೇದ್ಯ ಮಾಡಿ ಹಂಚಿದರು. ಅಪರಿಗ್ರಹವ್ರತವಿದ್ದರೂ ಭಗವಂತ ನಮ್ಮನ್ನು ಪರೀಕ್ಷಿಸುವನು. ಶ್ರೀ ರಾಮಕೃಷ್ಣ ಪರಮಹಂಸರು, ‘ಗೃಹಸ್ಥ ಭಕ್ತರು ತಿಂಗಳಿಗೆ ಒಂದೆರಡು ದಿನ ಏಕಾಂತಕ್ಕೆ ಹೋಗಬೇಕು. ಸಂಸಾರದಿಂದ ದೂರವಾಗಿ ಭಗವಂತನ ನಾಮದಲ್ಲಿ ಕಣ್ಣೀರು ಸುರಿಸಬೇಕು’ ಎನ್ನುವರು. ಯೋಗಸೂತ್ರದಂತೆ ಈ ಸಾಧನೆ ಮಾಡಿ ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು. ಏಕಾಂತವಾಸೋ ಲಘುಭೋಜನಾದಿ ಮೌನಂ ನಿರಾಶಾಕರಣೌ ಅವರೋಧಃ | ಮುನೇಃ ಅಸೋಃ ಸಂಯಮನಂ ಷಡೇತೇ ಚಿತ್ತಪ್ರಸಾದಂ ಜನಯಂತಿ ಶೀಘ್ರಂ ||
1) ಏಕಾಂತವಾಸ, 2) ಲಘುಭೋಜನಾದಿ ಅಲ್ಪ ಆಹಾರ. ಅತಿ ಉಪವಾಸದಿಂದ ಹಸಿವು, ಯಾತನೆ. ಅತಿ ಆಹಾರದಿಂದ ನಿದ್ದೆ. ಇವೆರಡರ ನಡುವೆ ಎಪ್ಪತ್ತು ಪ್ರತಿಶತ ಆಹಾರ ಸ್ವೀಕರಿಸಬೇಕು, 3) ಮೌನ - ಹೊರಗಿನ ಮಾತು ಮಾತ್ರವಲ್ಲ, ಒಳಗಿನ ಮಾತನ್ನೂ ನಿಲ್ಲಿಸಬೇಕು. ಶಾಂತ ಮನಸ್ಸಿದ್ದು, ಯೋಚನೆ, ಭಾವನೆಗಳು ಕುದಿಯಬಾರದು, 4) ನಿರಾಶೆ, 5) ಇಂದ್ರಿಯಗಳ ನಿಯಂತ್ರಣ, 6) ಪ್ರಾಣಾಯಾಮ- ಈ ಆರರಿಂದ ಮನಸ್ಸು ಶಾಂತಿಯನ್ನು ಅನುಭವಿಸುವುದು ಎನ್ನುವರು ಶಂಕರಾನಂದರು.
ಮುಂದಿನ ಎರಡು ಶ್ಲೋಕಗಳಲ್ಲಿ ಕುಳಿತುಕೊಳ್ಳುವ ಆಸನ, ಪ್ರದೇಶ, ಮನಸ್ಸನ್ನು ನಿಗ್ರಹಿಸುವ ವಿಧಾನಗಳನ್ನು ತಿಳಿಸಿದ್ದಾನೆ ಭಗವಂತ. ಮನಸ್ಸನ್ನು ನಿಗ್ರಹಿಸಲು ಕುಳಿತೇ ಧ್ಯಾನ ಮಾಡಬೇಕೆನ್ನುವುದು ಬ್ರಹ್ಮಸೂತ್ರ.
ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನಮಾತ್ಮನಃ |
ನಾತ್ಯುಚ್ಛಿ್ರಂ ನಾತಿನೀಚಂ ಚೈಲಾಜಿನಕುಶೋತ್ತರಮ್ || 6.11
ಮೊದಲಿಗೆ ನಾವು ಶುಚಿಯಾಗಿ, ಸ್ವಭಾವದಿಂದಾಗಲೀ, ಸಂಸ್ಕಾರದಿಂದಲಾಗಲೀ, ಶುಚಿಯಾದ ಏಕಾಂತ ಪ್ರದೇಶವನ್ನು ಧ್ಯಾನಕ್ಕೆ ಆರಿಸಿಕೊಳ್ಳಬೇಕು. ಸ್ವಚ್ಛ ಮಾಡಿ, ಊದುಬತ್ತಿ ಹಚ್ಚಿದರೆ ವಾತಾವರಣ ಶುದ್ಧವಾಗುವುದು. ಧ್ಯಾನಕ್ಕೆ ಕೂರುವ ಆಸನವನ್ನು ಸ್ಥಿರವಾದ ಜಾಗದಲ್ಲಿ ಹಾಕಬೇಕು. ಧ್ಯಾನಕ್ಕೆ ನಮ್ಮ ಆಸನವನ್ನೇ ಉಪಯೋಗಿಸಬೇಕು. ನಮ್ಮ ಆಸನವನ್ನು ಬೇರೆಯವರಿಗೆ ಕೊಡುವುದಾಗಲೀ, ಬೇರೆಯವರ ಆಸನವನ್ನು ಪಡೆಯುವುದಾಗಲೀ ಮಾಡಬಾರದು. ಧ್ಯಾನದ ಸ್ಥಾನವು ಅತಿ ಎತ್ತರ ಅಥವಾ ಅತಿ ತಗ್ಗು ಆಗಿರಬಾರದು. ಎತ್ತರವಾಗಿದ್ದಲ್ಲಿ ಬೀಳುವ, ತಗ್ಗಾಗಿದ್ದಲ್ಲಿ ಹುಳ ಹುಪ್ಪಟೆ ತೊಂದರೆ ಕೊಡುವ ಸಾಧ್ಯತೆಗಳಿರುತ್ತವೆ. ನೆಲದಿಂದ ಎರಡು ಮೂರು ಅಂಗುಲ ಎತ್ತರವಿರಬೇಕು. ಮೊದಲಿಗೆ ಕುಶ ಹುಲ್ಲನ್ನು ಹಾಕಿ (ಹರಡಿ) ದಪ್ಪವಾಗಿ ಅದರ ಮೇಲೆ ಅಜಿನ ಎಂದರೆ ಜಿಂಕೆ ಚರ್ಮ, ಅದರ ಮೇಲೆ ನಯವಾದ ಹತ್ತಿ ಬಟ್ಟೆ ಹಾಸಬೇಕು. ಈ ಕ್ರಮದಲ್ಲಿ ಧ್ಯಾನದ ಆಸನ ಸಿದ್ಧಪಡಿಸಿ, ಅದರ ಮೇಲೆ ಕುಳಿತುಕೊಳ್ಳಬೇಕು. ಕುಶಾ ಹಾಗೂ ಅಜಿನ ಪವಿತ್ರವಾದ್ದರಿಂದ ಮನಸ್ಸು ಪವಿತ್ರವೆಂಬ ಭಾವನೆ ಬರುವುದು. ಕುಳಿತುಕೊಳ್ಳಲೂ ಆರಾಮವಾಗಿ ಅನುಕೂಲವಾಗುವುದು.
ತತ್ರೈಕಾಗ್ರಂ ಮನಃ ಕೃತ್ವಾ ಯತಚಿತ್ತೇಂದ್ರಿಯಕ್ರಿಯಃ |
ಉಪವಿಶ್ಯಾಸನೇ ಯುಂಜ್ಯಾದ್ಯೋಗಮಾತ್ಮವಿಶುದ್ಧಯೇ || 6.12
‘ಆ ಆಸನದ ಮೇಲೆ ಕುಳಿತುಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಚಿತ್ತೇಂದ್ರಿಯಗಳನ್ನು ನಿಗ್ರಹಿಸಿದವನು, ಅಂತಃಕರಣ ಶುದ್ಧಿಗಾಗಿ ಯೋಗವನ್ನು ಮಾಡಬೇಕು.’ ಹೃದಯದಲ್ಲಿರುವ ಪರಮಾತ್ಮನ ದರ್ಶನಕ್ಕಾಗಿ ಮನಸ್ಸನ್ನು ಶುದ್ಧಗೊಳಿಸಬೇಕು. ಲಾಟೀನಿನ ದೀಪದ ಉದಾಹರಣೆಯನ್ನು ಹಿಂದೆ ನೋಡಿದ್ದೇವೆ. ಅದೇ ರೀತಿ ಮನಸ್ಸು ಎಂಬ ಚಿಮಣಿಯು ರಾಗದ್ವೇಷಾದಿ ಅರಿಷಡ್ವರ್ಗಗಳೆಂಬ ಮಸಿಯಿಂದ ಮೆತ್ತಿಕೊಂಡಿದೆ. ಇದನ್ನು ಶುಚಿಗೊಳಿಸಿದಾಗ ಅಂತರ್ಯಾಮಿ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಮನಸ್ಸು ಶುದ್ಧಗೊಳಿಸಲು ಈ ರೀತಿ ಕುಳಿತು ಧ್ಯಾನ ಮಾಡಬೇಕು. ಇದಕ್ಕೆ ಪೂರ್ವಭಾವಿಯಾಗಿ ಕೆಲಸದಲ್ಲಿರುವ ಮನಸ್ಸು, ಇಂದ್ರಿಯಗಳನ್ನು ಹತೋಟಿಗೆ ತರಬೇಕು. ಹರಿದು ಹಂಚಿಹೋಗುತ್ತಿರುವ ಇವುಗಳನ್ನು ಒಳಗೆ ಸೆಳೆದುಕೊಳ್ಳಬೇಕು. ನಂತರ ಅವುಗಳನ್ನು ಭಗವಂತನೆಡೆಗೆ ತಿರುಗಿಸಬೇಕು. ಇಲ್ಲಿಯೇ ಮನಸ್ಸನ್ನು ಹೃದಯ ಪ್ರದೇಶದಲ್ಲಿ ಆತ್ಮವಸ್ತು ಅಥವಾ ಇಷ್ಟದೇವತೆಯಲ್ಲಿ ಏಕಾಗ್ರಗೊಳಿಸಬೇಕು. ಇವೆಲ್ಲವನ್ನೂ ಕುಳಿತುಕೊಂಡೇ ಮಾಡಬೇಕೆಂದು ಭಗವಂತ ಆಗ್ರಹಪೂರ್ವಕವಾಗಿ ಎರಡನೇ ಬಾರಿ ನೆನಪಿಸುತ್ತಿದ್ದಾನೆ.
ಸಮಂ ಕಾಯಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ |
ಸಂಪ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್ || 6.13
ಪ್ರಶಾಂತಾತ್ಮಾ ವಿಗತಭೀಃ ವಿಗತಭೀಬರ್Åಹ್ಮಚಾರಿವ್ರತೇ ಸ್ಥಿತಃ ||
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ || 6.14
‘ ಶರೀರದ ಮಧ್ಯಭಾಗ, ಶಿರಸ್ಸು, ಕೊರಳುಗಳನ್ನು ಸಮನಾಗಿ ಹಾಗೂ ಅಚಲವಾಗಿಟ್ಟುಕೊಂಡು ಸ್ಥಿರವಾಗಿ ತನ್ನ ಮೂಗಿನ ತುದಿಯನ್ನು ನೋಡುತ್ತ (ಕಣ್ಣುಗಳ ದೃಷ್ಟಿಯನ್ನು ಒಳಕ್ಕೆ ಎಳೆಯಬೇಕು; ಎಂದರೆ ಮನಸ್ಸನ್ನು ಸಮಾಧಾನ ಮಾಡಬೇಕು) ದಿಕ್ಕುಗಳನ್ನು ನೋಡದೆ, ಪ್ರಶಾಂತಾತ್ಮನೂ, ನಿರ್ಭಯನೂ ಆಗಿ, ಬ್ರಹ್ಮಚಾರಿ ವ್ರತದಲ್ಲಿದ್ದು, ಮನಸ್ಸನ್ನು ಸಂಯಮಿಸಿ, ನನ್ನಲ್ಲಿಯೇ ಚಿತ್ರವುಳ್ಳವನಾಗಿ ನಾನೇ ಪರವೆಂದು ಭಾವಿಸಿ ಯುಕ(ಸರ್ವಹಿತ)ನಾಗಿರಬೇಕು.’ ಆಸನವೆಂದರೆ ಎರಡು ಅರ್ಥಗಳಿವೆ. ಒಂದು ಕುಳಿತುಕೊಳ್ಳಲು ಹಾಸಿರುವುದು, ಮತ್ತೊಂದು ಕುಳಿತುಕೊಳ್ಳುವ ಭಂಗಿ. ಪತಂಜಲಿ ‘ಸ್ಥಿರಂ ಸುಖಂ ಆಸನಂ’ ಎನ್ನುವರು. ಸ್ಥಿರವಾಗಿ ಶರೀರವನ್ನೇ ಮರೆಯುವಷ್ಟು ಸುಖವಾಗಿರಬೇಕು ಭಂಗಿ. ಇದಕ್ಕೆ ಉಪಾಯವಾಗಿ ಮುಂದಿನ ಸೂತ್ರದಲ್ಲಿ ‘ಪ್ರಯತ್ನಶೈಥಿಲ್ಯ ಅನಂತಸಮಾಪತ್ತಿಭ್ಯಾಂ’ ಎನ್ನುವರು. ಪ್ರಯತ್ನವನ್ನು ಶಿಥಿಲಗೊಳಿಸುವುದರಿಂದಲೂ, ಅನಂತದಲ್ಲಿ ಚಿತ್ತವನ್ನು ನೆಲೆಗೊಳಿಸಿರುವುದರಿಂದಲೂ ಆಸನವು ಸ್ಥಿರವೂ ಸುಖವೂ ಆಗುತ್ತದೆ. ಶರೀರದ ಅಂಗಾಂಗಗಳನ್ನು ಬಿಗಿಯಾಗಿ ಹಿಡಿಯದೆ, ಸಡಿಲವಾಗಿಡಬೇಕು. ಆರಾಮವಾಗಿ ಕಣ್ಮುಚ್ಚಿ ಕುಳಿತು ಆಕಾಶವನ್ನು ಕಲ್ಪಿಸಿಕೊಂಡಾಗ ಮನಸ್ಸು ಆಕಾಶದಂತೆ ವಿಶಾಲವಾಗುವುದು. ಇದರಿಂದ ಶರೀರದ ವಿಸ್ಮರಣೆಯಾಗಿ ಶರೀರ ಸ್ಥಿರವಾಗಿ ಆಸನದಲ್ಲಿರುವುದು. ಅಥವಾ ಅನಂತವೆಂದು ಹೇಳುವ ಆದಿಶೇಷ ತನ್ನ ಸಾವಿರ ಹೆಡೆಗಳ ಮೇಲೆ ಭೂಮಿಯನ್ನು ಧರಿಸಿದ್ದಾನೆ. (ಹದಿನಾಲ್ಕು ಲೋಕವೆಂದೂ ಹೇಳುವರು) ಅದು ಕೆಳಗೆ ಬೀಳದಿರಲು ಅವನು ತಲೆಯನ್ನು ಅಲುಗಾಡಿಸದೆ ಇದ್ದಂತೆ, ನಾವೂ ಅವನೆಂದೇ ಭಾವಿಸಿ ಆಸನವನ್ನು ಗಟ್ಟಿ ಮಾಡಿಕೊಳ್ಳಬಹುದು.
ಸಾಮಾನ್ಯರಿಗೆ ಎರಡನೇ ಉದಾಹರಣೆಯಾದರೆ, ಸಾಧಕನಿಗೆ ಆಕಾಶದ ಮೊದಲನೇ ಉದಾಹರಣೆ ಸೂಕ್ತ. ಶರೀರ, ಕೊರಳು, ಶಿರ - ಈ ಮೂರೂ ಒಂದೇ ಸರಳರೇಖೆಯಲ್ಲಿರಬೇಕು. ಕಾರಣವೆಂದರೆ ಕುಂಡಲಿನೀ ಶಕ್ತಿ ಸರಾಗವಾಗಿ ಮೇಲಕ್ಕೇರಬೇಕು. ಬಗ್ಗಿದಲ್ಲಿ ಅದಕ್ಕೆ ತೊಂದರೆಯಾಗುವುದು. ಹೀಗೆ ಶರೀರ ಅಲುಗಾಡದೆ ಗಟ್ಟಿಯಾಗಿರಬೇಕು. ನಂತರ ಎಲ್ಲೆಡೆಯಿಂದ ದೃಷ್ಟಿಯನ್ನು ಹಿಂದೆಗೆದುಕೊಂಡು, ಮೂಗಿನ ತುದಿಯಲ್ಲಿ ಕೇಂದ್ರೀಕರಿಸಬೇಕು. ಎಂದರೆ ಅಲ್ಲಿ ಧ್ಯಾನ ಮಾಡುವುದಲ್ಲ ಎನ್ನುವರು ಶ್ರೀ ಶಂಕರರು. ದೃಷ್ಟಿ ಕ್ಷಣಕಾಲ ಅಲ್ಲಿರುವುದರಿಂದ ಮನಸ್ಸಿಗೆ ಏಕಾಗ್ರತೆ ಬರುವುದು. ನಂತರ ನಿಧಾನವಾಗಿ ಕಣ್ಣು ಮುಚ್ಚಿ ಮನಸ್ಸಿನೆಡೆಗೆ ತಿರುಗಿಸಿದಾಗ (ಹೃದಯದೆಡೆಗೆ) ಪ್ರಶಾಂತತೆ, ಶಾಂತಿ ಬರುವುದು. ಗೊಂದಲಗಳಿಲ್ಲದ ಸ್ಥಿತಿ ಬರುವುದು.
ಯಾವ್ಯಾವುದೋ ಸಂಸ್ಕಾರ, ಯಾವ್ಯಾವುದೋ ರೀತಿಯಲ್ಲಿ ಮೇಲೆ ಬರಬಹುದು. ಇದಕ್ಕಾಗಿ ಭಯ ಬರದಂತೆ ಮನಸ್ಸನ್ನು ಕಾಪಾಡಿಕೊಂಡು ನಿರ್ಭಯವಾಗಿರಬೇಕು. ಗುರುಗೃಹದಲ್ಲಿ ವ್ರತನಿಷ್ಠನಾಗಿರುವ ಬ್ರಹ್ಮಚಾರಿಯ ಮನೋಭಾವನೆ ಹೊಂದಿರಬೇಕು. ಗುರುಶುಶ್ರೂಷೆ, ಭಿಕ್ಷಾದಿಗಳನ್ನು ನೆನಪಿಗೆ ತಂದುಕೊಳ್ಳಬಹುದು. ಈ ಸ್ಥಿತಿಗೆ ತಂದುಕೊಂಡ ಮನಸ್ಸನ್ನು ಹಿಡಿದಿಟ್ಟುಕೊಂಡು, ಅದನ್ನು ನನ್ನ (ಪರಮಾತ್ಮನ) ಮೇಲೆ (ಹೃದಯದಲ್ಲಿ ಅಂತರ್ಯಾಮಿಯಾಗಿರುವ ಪರಮಾತ್ಮನಲ್ಲಿ) ಹರಿಸಿ, ನಾನೇ ಅತ್ಯಂತ ಪವಿತ್ರ ಪರಮವಸ್ತುವೆಂದು ಭಾವಿಸಿ ಯೋಗಾಭ್ಯಾಸಿಯಾದ ಯುಕ್ತನು ಯೋಗದಲ್ಲಿರಬೇಕು. ನದಿ ಸಮುದ್ರದೆಡೆಗೇ ಹರಿಯುವಂತೆ ಮನಸ್ಸಿನ ಪ್ರವಾಹವು ಭಗವಂತನೆಡೆಗೇ ಹರಿಯುತ್ತಿರಬೇಕು ಎನ್ನುವರು ಮಧುಸೂದನ ಸರಸ್ವತಿಗಳು.
ಮೂಗಿನ ತುದಿ ನೋಡುವುದೆಂದರೆ ಅರ್ಧ ನಿಮೀಲಿತನೇತ್ರ, ಅರೆತೆರೆದ ಕಣ್ಣು ಶ್ರೀ ರಾಮಕೃಷ್ಣ ಪರಮಹಂಸರು ಕುಳಿತಂತೆ. ಇದರಿಂದ ಮನಸ್ಸಿನ ನಿಗ್ರಹ ಸುಲಭ ಎನ್ನುವರು ಶ್ರೀಧರಾಚಾರ್ಯರು. ಪೂರ್ಣ ತೆರೆದರೆ ಹೊರಪ್ರಪಂಚ ಕಾಣುವುದು. ಮುಚ್ಚಿದರೆ ನಿದ್ದೆಯ ಸಂಭವವುಂಟು. ಒಬ್ಬರು ಯೋಗಸೂತ್ರದಲ್ಲಿನ ಯಮ ಎಂದರೆ ಅಹಿಂಸಾ-ಸತ್ಯ-ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ನಿಯಮ ಎಂದರೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನಗಳನ್ನು ಇಲ್ಲಿಗೆ ವ್ಯಾಖ್ಯಾನಿಸಿದ್ದಾರೆ. ಇದು ನಮಗೆ ಧ್ಯಾನಕ್ಕೆ ಸಹಾಯವಾಗುವುದು.