

ಕನಸಿನ ಮನೆ ಸಿದ್ಧಗೊಳ್ಳುವಾಗ ವರಂಡಾದಿಂದ ಹಿಡಿದು ಲಿವೀಂಗ್ ರೂಂ, ಅಡುಗೆ ಮನೆ, ಡೈನಿಂಗ್ ಹಾಲ್ , ರೀಡಿಂಗ್ ರೂಂ... ಹೀಗೆ ಇರಬೇಕು ಎಂದು ಹಲವರು ಯೋಚಿಸುತ್ತಾರೆ. ಇವೆಲ್ಲಕ್ಕಿಂತ ಪೂಜಾ ಕೋಣೆ ಬಗ್ಗೆ ಯೋಚಿಸುವುದು ಮುಖ್ಯವಾಗುತ್ತದೆ.
ಭಾರತೀಯ ಸಂಸ್ಕೃತಿ ಸಂಪ್ರದಾಯಗಳ ಪ್ರಕಾರ ಪೂಜಾ ಕೋಣೆ ಮನೆಯೊಂದರ ಅವಿಭಾಜ್ಯ ಅಂಗ.ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿ ಎಲ್ಲ ಮನೆಗಳಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಇದು ಒಂದು ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ಕೆಲಸಮಾಡುತ್ತದೆ. ಮನೆಯನ್ನು ಕಟ್ಟುವಾಗ ಪೂಜೆ ಕೋಣೆಯನ್ನು ಸಹ ನಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ದೇವರ ಮನೆಯನ್ನು ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲದೇ ನಿತ್ಯ ಅಲಂಕಾರವಾಗಿ ಇಟ್ಟುಕೊಳ್ಳಬಹುದು.
ಸಾಮಾನ್ಯವಾಗಿ ಲಿವಿಂಗ್ ಏರಿಯಾ ಅಥವಾ ಡೈನಿಂಗ್ ಹಾಲ್ನಲ್ಲಿ ಪೂಜಾ ಕೋಣೆಗಳು ಇರುತ್ತವೆ. ಯಾವಾಗಲೂ ಇಡೀ ಮನೆಗೆ ಧನಾತ್ಮಕ ಶಕ್ತಿಯನ್ನು ಪಸರಿಸುತ್ತಾ ಇರಲು ದೇವರ ಮನೆಯನ್ನು ಮನೆ ಮಧ್ಯ ಭಾಗದಲ್ಲಿ ನಿರ್ವಿುಸುತ್ತಾರೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ.
ಕಲಾಕೃತಿಗಳ ಕೆತ್ತನೆ: ಗೋಡೆಗಳು ಆಕರ್ಷಕ ಬಣ್ಣಗಳಿಂದ ಕೂಡಿದ್ದರೆ , ದೇವರ ಕೋಣೆಯ ಅಂದ ಹೆಚ್ಚಿಸುತ್ತದೆ. ಗೋಡೆಗೆ ಗಾಢವಾದ ಬಿಳಿ ಅಥವಾ ಹಳದಿ ಬಣ್ಣಗಳು ಕಣ್ಮನ ಸೂರೆಗೊಳ್ಳುತ್ತದೆ. ಪೂಜೆ ಕೊಠಡಿಯ ಬಾಗಿಲುಗಳ ಮೇಲೆ ವಿವಿಧ ಕಲಾಕೃತಿಗಳ ಕೆತ್ತನೆ ಈಗಿನ ಟ್ರೆಂಡ್ ಆಗಿದೆ.
ಸಣ್ಣ ಸ್ಥಳದಲ್ಲೂ ದೇವರ ವಿಗ್ರಹ: ಮನೆಯಲ್ಲಿ ಸ್ಥಳಾವಕಾಶ ಇಲ್ಲದಿರುವವರು ಅಡುಗೆ ಮನೆಯ ಒಂದು ಗೋಡೆಯಲ್ಲೇ ಸಣ್ಣ ಕ್ಯಾಬಿನೆಟ್ನಲ್ಲಿ ಗಾಜಿನ ಶೆಲ್ಪ್ಗಳ ಮೇಲೆ ದೇವರ ವಿಗ್ರಹವನ್ನು ಇಡುತ್ತಾರೆ. ಬಿಳಿ ಪ್ರಭಾವಳಿಯಂತಹ ರಚನೆ ಮತ್ತು ಅದರ ಮೇಲಿನ ಗಂಟೆ ಹಾಗು ಸ್ವಸ್ತಿಕಗಳು ವಾಸ್ತುಶಾಸ್ತ್ರದ ಆಧಾರದ ಮೇಲೆ ರಚಿಸಬಹುದಾಗಿದೆ.
ವಾಸ್ತುಶಿಲ್ಪಿಗಳ ಸಲಹೆ ಪಡೆಯಿರಿ : ಸಾಂಪ್ರದಾಯಿಕ ಶೈಲಿಯಲ್ಲಿ ಮನೆ ನಿರ್ವಿುಸುವವರು ವಾಸ್ತು ತಜ್ಞರ ಸಲಹೆ ಪಡೆದು, ಯಾವ ಕೊಠಡಿ ಎಲ್ಲಿ ಬರಬೇಕು ಎಂದು ತಿಳಿಯುವುದು. ಅದರಲ್ಲೂ ದೇವರ ಕೋಣೆಯ ಬಗ್ಗೆ ವಾಸ್ತುಶಿಲ್ಪಿಗಳ ಸಲಹೆ ಪಡೆಯುವುದು ಉತ್ತಮ.
ಗೋಡೆಗಳಿಗೆ ಟೈಲ್ಸ್: ದೇವರ ಕೋಣೆಯ ಗೋಡೆಗಳ ಮೇಲೆ ವಿವಿಧ ಕಲಾಕೃತಿಗಳು ಅಲ್ಲಲ್ಲಿ ಇದ್ದರೆ , ಗೋಡೆಯ ಹಿನ್ನೆಲೆಯಲ್ಲಿರುವ ಟೈಲ್ಸ್ಗಳು ಕಣ್ಣಿಗೆ ಆಕರ್ಷಕವಾಗಿ ಎದ್ದು ಕಾಣುವ ವಿನ್ಯಾಸವಿದ್ದರೆ ಕೋಣೆಯ ಅಂದವನ್ನು ಹೆಚ್ಚುತ್ತದೆ. ಇದನ್ನು ಮತ್ತೆ ಮತ್ತೆ ಸ್ವಚ್ಛಗೊಳಿಸುವುದು ಸುಲಭವಾಗಿರುತ್ತದೆ.
ಎಲ್ಇಡಿ ಬಲ್ಪ್ಗಳು
ದೇವರ ಕೋಣೆಯ ಮಂದ ಬೆಳಕಿನ ಬಲ್ಬ್ ಗಳನ್ನು ಹಾಕಬಾರದು. ಪ್ರಕಾಶಮಾನವಾದ ಎಲ್ಇಡಿ ಬಲ್ಬ್ಗಳಿಂದ ದೇವರ ಕೋಣೆ ಸದಾ ಪ್ರಕಾಶಮಾನವಾಗಿರುತ್ತದೆ. ದೇವರ ಪೋಟೊ, ಮೂರ್ತಿಗಳು ಸ್ಪಷ್ಟವಾಗಿ ಕಾಣುತ್ತವೆ. ದಸರಾ , ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ದೇವರ ಕೋಣೆಯ ಬಾಗಿಲುಗಳಿಗೆ ಮಾಡುವ ದೀಪಾಲಂಕಾರ ನೋಡುಗರನ್ನು ಆಕರ್ಷಿಸುತ್ತದೆ.
| ದ್ವಾರಾಕಾನಾಥ್