ಮನುಸ್ಮೃತಿ  ಕುರಿತು ಸ್ವರ, ಅಪಸ್ವರದ ನಡುವೆ...

4-68374f77ef6ff
Published on
‘ಮನುವಾದ ಬೇಡ ನಮಗೆ; ನಮಗೆ ಮನುಷ್ಯವಾದ ಬೇಕು, ಮನುವಾದಿಗಳು ನಮ್ಮನ್ನು ಬೆಳೆಯುವುದಕ್ಕೆ ಬಿಟ್ಟಿಲ್ಲ ಅದು ಪುರೋಗಾಮಿ’. ಇನ್ನೂ ಇದೇ ರೀತಿಯ, ಈ ಅರ್ಥದ ಮಾತುಗಳನ್ನು ಕಳೆದ ಇಪ್ಪತ್ತು, ಮೂವತ್ತು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದೇವೆ. ದುರಂತ ಮತ್ತು ದುರದೃಷ್ಟವೆಂದರೆ ಈ ಮಾತುಗಳನ್ನು ಆಡುವ ಜನ ಮನುಸ್ಮೃತಿಯನ್ನು ತಮ್ಮ ಜೀವಮಾನದಲ್ಲಿ ಇಲ್ಲಿಯವರೆಗೂ ಒಮ್ಮೆಯೂ ಓದಿಲ್ಲ. ಹಾಗಾದರೆ ಅವರಿಗೆ ಇಷ್ಟೆಲ್ಲ ಅಧಿಕಾರವಾಣಿಯಿಂದ ಒಂದು ಪುಸ್ತಕವನ್ನು ಹೀಗಳೆಯುವುದಕ್ಕೆ ಹೇಗೆ ಸಾಧ್ಯವಾಯಿತು? ಇದಕ್ಕೆ ನನ್ನ ಉತ್ತರ, ‘ನಿಮಗೆ ಆ ಧೈರ್ಯ ಇಲ್ಲದಿರಬಹುದು. ಆದರೆ ಅವರಿಗಲ್ಲ. ಏಕೆಂದರೆ ಆ ಮೌಲ್ಯಗಳನ್ನೆಲ್ಲ ಅವರು ನಿಮಗೇ ಬಿಟ್ಟುಬಿಟ್ಟಿದ್ದಾರೆ. ಅವರು ತಮ್ಮದೇ ಆದ ಮೌಲ್ಯ ಪದ್ಧತಿಗಳನ್ನು ಸೃಷ್ಟಿಸಿಕೊಂಡುಬಿಟ್ಟಿದ್ದಾರೆ. ಆ ಮೌಲ್ಯಗಳಲ್ಲಿ ಒಂದು ವಿಷಯವೊಂದರ ಬಗ್ಗೆ ಮಾತನಾಡಬೇಕಾದರೆ ಅದರ ಬಗ್ಗೆ ಆಮೂಲಾಗ್ರವಾದ ಜ್ಞಾನ, ಅಧ್ಯಯನ ಇರಬೇಕೆಂದೇನೂ ಇಲ್ಲ’.

ಈ ಧೋರಣೆ ಅವರಿಗೆ ಬಂದದ್ದು ಹೇಗೆ? ಅವರು ಕೆಲವು ವ್ಯಕ್ತಿಗಳನ್ನು ದಿಗ್ಧಂತಿಗಳು, ಮಹಾಮಹೋಪಾಧ್ಯಾಯರು ಎಂದು ತಿಳಿದು, ಪ್ರಶಸ್ತಿಗಳನ್ನು ಕೊಟ್ಟು, ಪುರಸ್ಕರಿಸಿ, ಊರಲ್ಲೆಲ್ಲ ಮೆರೆಸಿದ್ದಾರಲ್ಲದೆ ಅವರ ಗುಣಲಕ್ಷಣಗಳನ್ನೆಲ್ಲ ಒಂದನ್ನೂ ಬಿಡದೆ ಸ್ವೀಕರಿಸಿಬಿಟ್ಟಿದ್ದಾರೆ. ಈ ಗುರುಶಿಷ್ಯ ಪರಂಪರೆ ಕಳೆದ ಕೆಲ ಮಿಲೆನಿಯಾಗಳಿಂದ ಕಾರ್ಯಪ್ರವೃತ್ತವಾಗಿದ್ದರೂ ಅದು ಅಸಹ್ಯ ಕುರೂಪವನ್ನು ತಳೆದಿದ್ದು ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿ ಮತ್ತು ಅದರ ಕಾರ್ಯಗಾರವೇ ಆದ ಕ್ರೖೆಸ್ತಮಿಷಿನರಿಗಳ ಶಾಲೆಗಳು ಕಾರ್ಯಪ್ರವೃತ್ತವಾದ ಮೇಲೆ. ಈಗಲೂ ನಾವು ಕಾಣುತ್ತಿರುವ ಇಂಥ ಅರ್ಥಹೀನ ಮಾತುಗಳ ಹಿಂದೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಕೆಲಸ ಮಾಡುತ್ತಿರುವ ಶಕ್ತಿಗಳು ಇವೇನೇ!

ಹೀಗೆಯೇ ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಹಗುರವಾಗಿ ಮಾತಾಡಿ ಉದ್ಧಟತನವನ್ನು ಪ್ರದರ್ಶಿಸಿದ ಬ್ರಿಟಿಷ್ ಪ್ರೊಫೆಸರ್​ನಿಗೆ ತರಗತಿಯ ಕೋಣೆಯಲ್ಲೇ ಕಪಾಳಮೋಕ್ಷ ಮಾಡಿದ್ದು ವಿದ್ಯಾರ್ಥಿ ಸುಭಾಷ್ ಚಂದ್ರ ಬೋಸ್! ಅದರಿಂದಾಗಿ ಸುಭಾಷರಿಗೆ ಪರೀಕ್ಷೆಗೆ ಕೂಡಲು ಅವಕಾಶವನ್ನೇ ಕೊಡಬಾರದು ಎಂದು ಕೊಲ್ಕತ್ತ ವಿಶ್ವವಿದ್ಯಾಲಯದ ಬ್ರಿಟಿಷ್ ಅಧಿಕಾರಶಾಹಿ ತೀರ್ವನಿಸಿದಾಗ ಅಂದಿನ ಕುಲಪತಿ ಮತ್ತು ಶ್ಯಾಂಪ್ರಸಾದ್ ಮುಖರ್ಜಿಯವರ ತಂದೆ ಆಶುತೋಷ್ ಮುಖರ್ಜಿ ಆ ಆರೋಪಗಳನ್ನೆಲ್ಲ ಪಕ್ಕಕ್ಕಿರಿಸಿ ಸುಭಾಷರಿಗೆ ಅವಕಾಶವನ್ನಿತ್ತಿದ್ದು ಮುಂದೆ ಅವರು ಪ್ರತಿಷ್ಠಿತ ಐ.ಸಿ.ಎಸ್ ಪರೀಕ್ಷೆಯಲ್ಲಿ 4ನೇ ರ್ಯಾಂಕ್ ಪಡೆದಾಗ ಇದೇ ಕೋಲ್ಕತ್ತ ವಿಶ್ವವಿದ್ಯಾಲಯ ಸಂಭ್ರಮಿಸಿದ್ದು ಇತಿಹಾಸ. ಅಂದು ಸುಭಾಷರ ಮೂಲಕ ಮಾಡಿದ ವಿವೇಕಾನಂದ ಠಟಜ್ಟಿಜಿಠಿ ಇಂದು ಮಲಗಿರುವುದೇ ಈ ಆಚಾರವಿಲ್ಲದ ನಾಲಿಗೆಗಳು ಹರಿಯತೊಡಗಲು ಕಾರಣವಾಗಿದೆ.

ಒಂದಿಪ್ಪತೆôದು ಜನ ಉಪನ್ಯಾಸಕರನ್ನೊಳಗೊಂಡ ಒಂದು ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ಸುಮಾರು ಮೂರು ವರ್ಷಗಳ ಹಿಂದೆ ನನ್ನ ಪಾಲಿಗೊದಗಿಬಂದಿತ್ತು. ಆ ಎಲ್ಲ ಉಪನ್ಯಾಸಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಕೊಡುವಂತೆ ಸಭಿಕರಿಗೆ ಹೇಳಲಾಗಿತ್ತು. ಅತ್ಯಂತ ಕಳಪೆ ಉಪನ್ಯಾಸ ಬಂದಿದ್ದು ಆ ವಿಶ್ವವಿದ್ಯಾಲಯದ ಕುಲಪತಿಗಳಿಂದ ಎಂದು ಈ ಸಮೀಕ್ಷೆ ಹೇಳಿತು. ಕುಲಪತಿಗಳೇ ಈ ಮಟ್ಟದವರಾದರೆ ಇನ್ನು ಈ ಪಿ.ಎಚ್.ಡಿಗಳನ್ನು, ಈ ಎಂ.ಎ ಮತ್ತು ಎಲ್​ಎಲ್​ಬಿಗಳನ್ನು ಯಾವ ಸ್ತರದಲ್ಲಿಡುತ್ತೀರಿ.

ಮೇಲೆ ಪ್ರಸ್ತಾಪಿಸಿದ ಗುರು-ಶಿಷ್ಯ ಪರಂಪರೆ ನೂರಕ್ಕೆ ನೂರು ಈ ಜಾಯಮಾನದವರೇ! ಅಷ್ಟೇ ಅಲ್ಲ! ಇಂಥ ಪರಂಪರೆಗಳಿಗೆ ಸೇರುವುದು ಅವರ ಜನ್ಮಸಿದ್ಧ ಹಕ್ಕು. ಅವರು ಅದನ್ನು ಪಡೆದೇ ತೀರುತ್ತಾರೆ. ಏಕೆಂದರೆ ಮನುಸ್ಮೃತಿಯಾಗಲಿ ಮತ್ತಾವುದೇ ಸ್ಮೃತಿಯಾಗಲಿ ಸಾರ್ವಕಾಲಿಕ ಪ್ರಸ್ತುತವಲ್ಲ. ಸಾರ್ವಕಾಲಿಕ, ಸಾರ್ವತ್ರಿಕ ಪ್ರಸ್ತುತತೆ ಇರುವುದು ಶ್ರುತಿಗೆ ಮಾತ್ರ. ಶ್ರುತಿ ಎಂದರೆ ವೇದಗಳು. ಯಾರೂ ಯಾವಕಾಲದಲ್ಲೇ ಆಗಲಿ ಶ್ರುತಿಯ ಅಪ್ರಸ್ತುತತೆಯನ್ನು ಸಾಧಿಸಲಾರರು. ಇದರ ಸಾರವೇ ವೇದಾಂತ ಅಥವಾ ಉಪನಿಷತ್ತುಗಳು. ಈ ವೇದಾಂತವೇ ಇಂದಿನ ಜಗತ್ತಿನ, ಮುಂಬರುವ ಜಗತ್ತುಗಳ ಎಲ್ಲ ಕಾಲದ ಎಲ್ಲ ದೇಶದ ಧರ್ಮಗಳ ಸಾರ. ಉಪನಿಷತ್ತುಗಳನ್ನು ಅಥವಾ ವೇದಾಂತವನ್ನು ಆಧಾರವಾಗಿರಿಸದ ಧರ್ಮ ಇಲ್ಲಿಯವರೆಗೆ ಪ್ರಕೃತಿಯಲ್ಲೇ ಸೃಷ್ಟಿಯಾಗಿಲ್ಲ, ಎಂದು ಸ್ವಾಮಿ ವಿವೇಕಾನಂದರು ಸಂಶಯಕ್ಕೆಡೆಯಿಲ್ಲದಂತೆ ಸಾರಿದ್ದಾರೆ.

"There is no School of Philosophy, heterodox Buddhism included which is not rooted in the Upanishads' ಎಂದು ಸುಪ್ರಸಿದ್ಧ ಪಾಶ್ಚಾತ್ಯ ಚಿಂತಕ ತತ್ವಜ್ಞಾನಿ ಬ್ಲೂಮ್ ಫೀಲ್ಡ್ ಬರೆದಿದ್ದಾನೆ. ಇವನು ಧರ್ಮಗಳ ತುಲನಾತ್ಮಕ ಅಧ್ಯಯನ ಮತ್ತು ಧಾರ್ವಿುಕ ಸಾಹಿತ್ಯಗಳನ್ನು ಅರೆದು ಕುಡಿದಿದ್ದ. ಆದ್ದರಿಂದ ನಿಂತನೀರಲ್ಲದ, ಕ್ರಿಯಾಶೀಲ ಸಮಾಜವನ್ನು ಸರ್ವಕಾಲಕ್ಕೂ ಒಂದೇ ನೀತಿಸಂಹಿತೆಯಿಂದ ಕಟ್ಟಿಹಾಕುವುದು ಸಮಂಜಸವಲ್ಲ ಎಂದರಿತ ಋಷಿಪರಂಪರೆ ಕಾಲಕಾಲಕ್ಕೆ ಬದಲಾವಣೆಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಬಲ್ಲ ಸಂಹಿತೆಯನ್ನೇ ಸೃಷ್ಟಿಸಿ ಅದನ್ನು ಸ್ಮೃತಿ ಎಂದು ಕರೆದರು.

ಶ್ರುತಿ ಇರುವುದು ಅಧ್ಯಾತ್ಮಕ್ಕೆ; ಸ್ಮೃತಿ ಇರುವುದು ಸಮಾಜಕ್ಕೆ. ಆದ್ದರಿಂದಲೇ ಮನುಸ್ಮೃತಿಯ ಜೊತೆಗೇ ಯಾಜ್ಞ್ಯವಲ್ಕ್ಯ ಸ್ಮೃತಿ, ಪರಾಶರ ಸ್ಮೃತಿ ಇತ್ಯಾದಿಗಳನ್ನು ಬೇರೆ ಬೇರೆ ಕಾಲಕ್ಕೆ ರಚಿಸಿದರು ಕೂಡ. ಸ್ವಾಮಿ ವಿವೇಕಾನಂದರೂ ತಮ್ಮ ಶಿಷ್ಯ ಶರಚ್ಚಂದ್ರನಿಗೆ ಆಧುನಿಕಕಾಲಕ್ಕೆ ಮಾರ್ಗದರ್ಶನ ನೀಡಬಲ್ಲ ವಿಸ್ತೃತ ಸ್ಮೃತಿಯೊಂದನ್ನು ರಚಿಸುವಂತೆ ಹೇಳಿದ್ದರು ಮತ್ತು ಇನ್ನೊಂದು ಸಂದರ್ಭದಲ್ಲಿ ತಮ್ಮ ಮಾತುಗಳೇ ಭಾರತವರ್ಷಕ್ಕೆ ಭವಿಷ್ಯದ ಸ್ಮೃತಿ ಯಾಗುವುದೆಂದೂ ಹೇಳಿದ್ದರು.

ಯಾವುದೇ ಸ್ಮೃತಿ ಯ ತಾತ್ಕಾಲಿಕ ಪ್ರಸ್ತುತತೆ ಮನುವಿಗೂ ತಿಳಿಯದಿದ್ದಷ್ಟು ದಡ್ಡನೇನಲ್ಲ ಅವನು. ಆ ದಡ್ಡತನವನ್ನು ತನ್ನ ಟೀಕಾಕಾರರ ಸಂಪೂರ್ಣ ಸ್ವಾಧೀನಕ್ಕೆ ಅವನು ಅವತ್ತೇ ಬರೆದಿಟ್ಟುಬಿಟ್ಟಿದ್ದಾನೆ. ಏಕೆಂದರೆ ಅವನೇ ಸ್ಪಷ್ಟವಾಗಿ ತನ್ನ ಸ್ಮೃತಿ ಯಲ್ಲಿ ಒಂದು ಕಡೆ ದಾಖಲಿಸಿದ್ದಾನೆ ಏನೆಂದು?

‘ಅನ್ಯೇ ಕೃತಯುಗೇ ಧರ್ಮಃ | ತ್ರೇತಯಂ ದ್ವಾಪರೇಠಪರೇ | ಅನ್ಯೇ ಕಲಿಯುಗೇನೃಣಾಂ | ಯುಗಹ್ರಾಸಾನುರೂಪತಃ ||’ ಇದರರ್ಥ ಕೃತಯುಗಕ್ಕೆ ಅನ್ವಯಿಸುವ ನಿಯಮಗಳೇ ಬೇರೆ. ತ್ರೇತಾ, ದ್ವಾಪರಯುಗಗಳ ಮತ್ತು ಕಲಿಯುಗಕ್ಕೆ ಅನ್ವಯಿಸುವ ನಿಯಮಗಳೇ ಬೇರೆ. ಯುಗದ ಅವಶ್ಯಕತೆಯಂತೆ ನಿಯಮಗಳು ಬದಲಾಗುತ್ತವೆ ಅಥವಾ ಅನ್ವಯಗೊಳ್ಳುತ್ತವೆ ಎಂದು.

ಮನು ಏನೇ ಹೇಳಿರಲಿ; ಇವರೆಲ್ಲ ಬೊಬ್ಬೆಯಿಡುವಂತೆ ಎಷ್ಟೇ ಪುರೋಗಾಮಿಯೇ ಆಗಿರಲಿ, ತನ್ನ ಎಲ್ಲ ನಿಯಮಗಳೂ ಎಲ್ಲ ಕಾಲಕ್ಕೂ ಅನ್ವಯಿಸುವುದಿಲ್ಲ ಅಂತ ಸ್ಪಷ್ಟ ಮಾತುಗಳಲ್ಲಿ ಹೇಳಿಯೇಬಿಟ್ಟಿದ್ದಾನಲ್ಲ! ಕಾಲಕಾಲಕ್ಕೆ ನಿಮಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಿಕೊಳ್ಳಿ ಎಂದು ಹೇಳಿಯೇ ಇದ್ದಾನಲ್ಲ! ಕೃತಯುಗದಲ್ಲಿ ತಾನು ಬರೆದಿದ್ದನ್ನು ಕಲಿಯುಗದಲ್ಲೂ ಪಾಲಿಸಿಕೊಂಡು ಹೋಗಿ ಎಂದೇನೂ ಹೇಳಿಲ್ಲವಲ್ಲ. ಆದರೆ ಮನುಸ್ಮ ೃಯಲ್ಲೇ ಬಂದಿರುವ ಸ್ವಯಂ ಮನುವೇ ಹೇಳಿರುವ ಈ ಶ್ಲೋಕವನ್ನು ಅವನ ಟೀಕಾಕಾರರು ಗಮನಿಸಲೇ ಇಲ್ಲ! ಆ ಪುಸ್ತಕವನ್ನೇ ಮುಟ್ಟಿಲ್ಲ.

ಕೇವಲ ಮನುಸ್ಮೃತಿಯಲ್ಲ, ಸನಾತನ ಪರಂಪರೆಯ ಬಗ್ಗೆ ಈ ಗುಂಪು ಆಗಾಗ್ಗೆ ಬಿತ್ತರಿಸಹೊರಟ ಅದ್ಭುತ ಜ್ಞಾನಕಿರಣಗಳೆಲ್ಲ ಅಜ್ಞಾನ ಜನ್ಯವೇ! ಒಂದು ದೊಡ್ಡ ಟಗರು ಕೂಗಿದ್ದನ್ನು ಇಡೀ ಮಂದೆಯೇ ಕೂಗಲೇಬೇಕಲ್ಲ. ಅದೊಂದು ಅಲಿಖಿತ ಸಂವಿಧಾನ! ಅಂದ ಹಾಗೆ ಮನಸ್ಮೃತಿಯೂ ಸಂವಿಧಾನವೇ- ಯಾವುದೇ ಸಂವಿಧಾನ ಕಾಲಕಾಲಕ್ಕೆ ತಿದ್ದುಪಡಿಗಳನ್ನು ಸ್ವಾಗತಿಸಲೇಬೇಕು. ಅದು ಅದಕ್ಕಿರುವ ಇತಿಮಿತಿ. ಇಲ್ಲದಿದ್ದಲ್ಲಿ ಸಮಾಜ ಕೇವಲ ಬುದ್ಧಿಹೀನತೆ, ಚಿಂತನಹೀನತೆ, ಜ್ಞಾನಹೀನತೆ, ವಿವೇಕಶೂನ್ಯತೆಗಳಿಂದ ತುಂಬಿ ತುಳುಕುತ್ತದೆ.

ಈಗಾಗಲೇ ಪರಿವರ್ತನಾಶೀಲತೆಯನ್ನು ಅನುಮೋದಿಸದ ಕೆಲವು ಧರ್ಮಗಳು, ಸಮಾಜಗಳು ಅದನ್ನೇ ಮಾಡಹೊರಟಿವೆ. ಜವಾಹರ್ ಲಾಲ್ ನೆಹರು ಹೇಳುತ್ತಿದ್ದಂತೆ,"That which does not grow, grows backwards decays' ಅರ್ಥಾತ್ ‘ಯಾವುದು ಬೆಳೆಯುವುದಿಲ್ಲವೋ ಅವು ನಶಿಸುತ್ತವೆ ಮತ್ತು ಸಾಯುತ್ತವೆ’.

ಇದೇ ದಾರಿಯಲ್ಲಿ ಸಾಗುತ್ತಿದ್ದ ಮಧ್ಯಯುಗೀನ ಕ್ರೖೆಸ್ತಧರ್ಮವನ್ನು ಈ ದುಃಸ್ಥಿತಿಯಿಂದ ವೈಕ್ಲಿಫ್ ಮತ್ತು ಮಾರ್ಟಿನ್ ಲೂಥರ್​ಗಳು ಪಾರುಮಾಡದಿದ್ದಲ್ಲಿ ಮತ್ತು ಮುಂದೆ ಸಂಭವಿಸಿದ ಪುನರುತ್ಥಾನ ಮತ್ತು ಮಹಾನ್ ಚಿಂತಕರಾದ ವಾಲ್ಟೇರ್ ಇತ್ಯಾದಿಗಳು ತಮ್ಮ ತಮ್ಮ ಚಿಂತನೆಗಳನ್ನು ನಿರ್ಭಿಡೆಯಿಂದ ಪ್ರತಿಪಾದಿಸದಿದ್ದಲ್ಲಿ ಯುರೋಪ್ ನರಕಸದೃಶವಾಗುತ್ತಿತ್ತು. ಏಷ್ಯಾ, ಆಫ್ರಿಕಾಗಳಿಗಿಂತ ಬಹಳ ಹಿಂದೆ ಉಳಿಯುತ್ತಿತ್ತು. ಯುರೋಪಿನ ಮೊದಲ ವಿಶ್ವವಿದ್ಯಾಲಯವನ್ನು ಸ್ಪೇನ್ ದೇಶದಲ್ಲಿ ಆಫ್ರಿಕಾದ ಮೂರ್ ಜನಾಂಗ 13ನೇ ಶತಮಾನದಲ್ಲಿ ಸ್ಥಾಪಿಸಿದ್ದು ಎಂದರೆ ನಂಬುವಿರಾ? ಯುರೋಪಿಗೆ ನಾಗರಿಕತೆಯನ್ನು ಪರಿಚಯಿಸಿದ್ದು 13ರಿಂದ 16ನೇ ಶತಮಾನದ ಘಟನಾವಳಿಗಳು.

ಈ ಪುನರುತ್ಥಾನವೇ ಯುರೋಪಿನ ಮರುಜನ್ಮ. ಅಲ್ಲಿಯವರೆಗೆ ಅದೊಂದು ಅರೆನಾಗರಿಕರ ಗುಂಪು. ಇದನ್ನು ನಾನು ಹೇಳುತ್ತಿರುವುದಲ್ಲ ಭಾರತದಲ್ಲಿ ವೈಸರಾಯ್ ಆಗಿದ್ದ ಮತ್ತು ಅವರ ಕಾಲದಲ್ಲಿ ಅಷ್ಟೇನೂ ಜನಪ್ರಿಯರಾಗಿರದಿದ್ದ ಮುಂದೆ ಆಕ್ಸಫರ್ಡ್​ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾದ ಲಾರ್ಡ್ ಕರ್ಜನ್ ಹೀಗೆಂದು ಹೇಳುತ್ತಾನೆ.

ಯುರೋಪಿನ ಈ ಸ್ಥಿತಿಯನ್ನು ಮಹಾಭಾರತ ಕಾಲದ ಭಾರತಕ್ಕೆ ಹೋಲಿಸಿ! ಬುದ್ಧನ ಕಾಲದ ಭಾರತಕ್ಕೆ ಹೋಲಿಸಿ! ಮಹಾಭಾರತ ಯುದ್ಧದಲ್ಲಿ ನಡೆದ ವೈಪರೀತ್ಯಗಳ ವರ್ಣನೆಗಳು ಹೀರೋಶಿಮಾ, ನಾಗಾಸಾಕಿಗಳ ಮೇಲೆ ನಡೆದ ಅಣುಬಾಂಬಿನ ಅನಾಹುತಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಮೌಸಲಪರ್ವದಲ್ಲಿ ಬರುವ ವಿವರಗಳು ಇದನ್ನು ಸ್ಪಷ್ಟವಾಗಿ ಸಾಬೀತು ಪಡಿಸುತ್ತವೆ. ಕಾರಣವಿಷ್ಟೇ ಭಾರತ ಎಂದೂ ಚಿಂತನ ಜಗತ್ತಿನಲ್ಲಾಗಲಿ ಸಾಮಾಜಿಕ ಧೋರಣೆ ಸಾಮಾಜಿಕ ನಿಯಮಗಳಲ್ಲಾಗಲಿ,rigidity ಯನ್ನಾಗಲಿ, Water tight compartment ತತ್ವವನ್ನಾಗಲಿ ಅನುಸರಿಸಿಲ್ಲ. ಮನುಸ್ಮೃತಿಯೂ ಅನುಸರಿಸಿಲ್ಲ. ಹೀಗಿದ್ದರೂ ಕುಹಕ, ಟೀಕೆ ಏಕೆ? ತನಗರ್ಥವಾಗದ್ದರ ಬಗ್ಗೆ ಟೀಕೆ ಮಾಡುವುದು ನರಿ ಸಂಸ್ಕೃತಿ. ಜವಾಬ್ದಾರಿ ಸ್ಥಾನದಲ್ಲಿ ಇರುವವರು ಬೇಜವಾಬ್ದಾರಿ ಮಾತುಗಳನ್ನಾಡಬಾರದು ಎಂದು ಮನುಸ್ಮೃತಿ ಹೇಳುತ್ತದೆ. (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net