

2000ದ ಫೆಬ್ರವರಿ 19. ರಾತ್ರಿ 8 ಗಂಟೆಯ ಸಮಯ. ಕಾರವಾರ ನಗರದ ದೈವ ಕಲ್ಯಾಣ ಮಂಟಪ ಚಟುವಟಿಕೆಗಳಿಂದ ಗಿಜಿಗಿಡುತ್ತಿತ್ತು. ಏಕೆಂದರೆ ಮಾರನೆಯ ದಿನವೇ, ಕಾರವಾರದ ಅಂದಿನ ಶಾಸಕ 42 ವರ್ಷ ವಯಸ್ಸಿನ ವಸಂತ ಅಸ್ನೋಟಿಕರ್ ಪುತ್ರಿಯ ವಿವಾಹದ ಆರತಕ್ಷತೆ ಸಮಾರಂಭ ಅಲ್ಲಿಯೇ ನಡೆಯಬೇಕಾಗಿತ್ತು. ಕಲ್ಯಾಣ ಮಂಟಪದ ವ್ಯವಸ್ಥೆ ಪರಿಶೀಲಿಸಲು ಶಾಸಕರು ಸಂಬಂಧಿಕರು ಮತ್ತು ಅನುಯಾಯಿಗಳೊಂದಿಗೆ ಅಲ್ಲಿಗೆ ಬಂದಿದ್ದರು. ನಂತರ ಅಸ್ನೋಟಿಕರ್ ಕಲ್ಯಾಣ ಮಂಟಪದ ಗೇಟಿನ ಬಳಿಗೆ ಹೋದರು. ಆ ಸಮಯಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡುವವನು ಅವರ ಬಳಿ ಹೋಗಿ ಏನೋ ಪ್ರಶ್ನೆ ಕೇಳುತ್ತಿದ್ದ. ಅಷ್ಟರಲ್ಲಿ ಕಲ್ಯಾಣ ಮಂಟಪದ ಗೇಟಿನ ಮುಂದೆ ಕೆಂಪು ಬಣ್ಣದ ಮೋಟರ್ ಬೈಕ್ ಸರ್ರನೆ ಬಂದು ನಿಂತಿತು. ಅದರಲ್ಲಿ ಇಬ್ಬರು ಕುಳಿತಿದ್ದರು.
ಗೇಟಿನ ಮುಂದೆ ಬಿದ್ದಿದ್ದ ಅಸ್ನೋಟಿಕರರನ್ನು ಅವರ ಕಾರಿನಲ್ಲಿಯೇ ಅವರ ಪುತ್ರ ಆನಂದ್ ಜತೆಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಏತನ್ಮಧ್ಯೆ ಗಣಪತಿಯನ್ನು ಆತನ ಜತೆಗಿದ್ದ ಬಲರಾಂ ನಾಯ್ಕ ಎನ್ನುವವರು ಅದೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅವರು ಮಾರ್ಗಮಧ್ಯದಲ್ಲಿ ಕಾರವಾರ ನಗರ ಪೊಲೀಸ್ ಠಾಣೆಗೆ ಹೋಗಿ ಟನೆ ಬಗ್ಗೆ ತಿಳಿಸಿದರು. ಕೂಡಲೇ ಪೊಲೀಸರು ಆಸ್ಪತ್ರೆಗೂ, ಕಲ್ಯಾಣ ಮಂಟಪಕ್ಕೂ ಧಾವಿಸಿದರು.
ಶಾಸಕರನ್ನು ಪರೀಸಿದ ವೈದ್ಯರು ಅವರಿಗೆ ಭಾರೀ ಗಾಯವಾಗಿರುವ ಕಾರಣ ಸರ್ಕಾರಿ ಆಸ್ಪತ್ರೆಗೆ ಸೇರಿಸಲು ಸೂಚಿಸಿದರು. ಅಂತೆಯೇ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಸೇರಿಸಬೇಕೆಂದು ಹೇಳಲಾಯಿತು. ಹೀಗಾಗಿ ಆಂಬುಲೆನ್ಸ್ನಲ್ಲಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಹೇಳಿಕೆ ಪಡೆಯಲು ಬಂದಿದ್ದ ಒಬ್ಬ ಪೊಲೀಸ್ ಅಧಿಕಾರಿಯೂ ಆಂಬುಲೆನ್ಸ್ನಲ್ಲಿ ಹೊರಟರು.
ಆನಂತರ ಅದೇ ಬಲರಾಂ ನಾಯ್ಕ ಪೊಲೀಸ್ ಠಾಣೆಗೆ ವಾಪಸಾಗಿ ಪ್ರಕರಣದ ವಿವರಗಳನ್ನು ನೀಡಿದರು. ಆ ಮೇರೆಗೆ ಎಫ್ಐಆರ್ ದಾಖಲಾಯಿತು. ಆಂಬುಲೆನ್ಸ್ ಮಣಿಪಾಲ ತಲುಪುವಷ್ಟರಲ್ಲಿ ಶಾಸಕರು ಅಸುನೀಗಿದರು. ಆಸ್ಪತ್ರೆಗೆ ಕರೆದುಕೊಂಡು ಹೋದ ಕೂಡಲೇ, "ಮರಣದ ನಂತರ ಕರೆತರಲಾಗಿದೆ' ಎಂದು ವೈದ್ಯರು ದಾಖಲೆಯಲ್ಲಿ ನಮೂದಿಸಿದರು. ಕೂಡಲೇ ಈ ಮಾಹಿತಿಯನ್ನು ಆಂಬುಲೆನ್ಸ್ನಲ್ಲಿದ್ದ ಪೊಲೀಸ್ ಅಧಿಕಾರಿ ಕಾರವಾರ ನಗರ ಪೊಲೀಸ್ ಠಾಣೆಗೆ ತಿಳಿಸಿದರು. ಈ ಮೇರೆಗೆ ದಾಖಲಾದ ಪ್ರಕರಣ ಕೊಲೆ ಪ್ರಕರಣವಾಗಿ ಮಾರ್ಪಾಟಾಯಿತು. ಮಾರನೆಯ ದಿನ ಅದೇ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀೆ ಮಾಡಲಾಯಿತು. ಬುಲೆಟ್ ಗಾಯಗಳಿಂದ ತೀವ್ರ ರಕ್ತಸ್ರಾವವಾದ ಕಾರಣ ಸಾವುಂಟಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟು ಮೃತದೇಹದಿಂದ ಹೊರತೆಗೆದ ನಾಲ್ಕು ಬುಲೆಟ್ಗಳನ್ನು ಪೊಲೀಸರಿಗೆ ಒಪ್ಪಿಸಿದರು. ಇವೆಲ್ಲವೂ 0.32 ಸುತ್ತಳತೆಯ ಬುಲೆಟ್ಗಳಾಗಿದ್ದವು.
ಬೆಳಗಾದ ನಂತರ ಪೊಲೀಸರು ಕಲ್ಯಾಣ ಮಂಟಪದ ಹೊರಗೆ ಬಿದ್ದಿದ್ದ ಒಂದು ಬುಲೆಟ್ ಮತ್ತು ಬುಲೆಟ್ ಕವಚವನ್ನಲ್ಲದೇ ಮೋಟರ್ ಸೈಕಲ್ಲಿನ ಹಿಂದಿನ ಲೈಟಿನ ಒಡೆದ ಚೂರುಗಳನ್ನು ವಶಪಡಿಸಿಕೊಂಡರು. ಆ ಸಮಯದಲ್ಲಿ ಸಿಸಿಟಿವಿಗಳನ್ನು ಇನ್ನೂ ಅಳವಡಿಸದಿದ್ದ ಕಾರಣ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಮೋಟರ್ ಸೈಕಲ್ಲಿನಲ್ಲಿ ಬಂದಿದ್ದ ಹಂತಕರು ಮಧ್ಯವಯಸ್ಕರಾಗಿದ್ದರು ಎಂದು ತಿಳಿಸಿದ ಪ್ರತ್ಯಕ್ಷದರ್ಶಿಗಳು ಅವರ ಚಹರೆ ಪಟ್ಟಿ ನೀಡಿದರು. ಆದರೆ ಅವರು ಸ್ಥಳಿಯರಾಗಿರಲಿಲ್ಲ ಎನ್ನುವುದೂ ರ್ನಿವಿವಾದವಾಗಿತ್ತು.
ಆಳುವ ಪಕ್ಷದ ಶಾಸಕನ ಹತ್ಯೆ ರಾಜ್ಯವನ್ನು ಅಲ್ಲೊಲಕಲ್ಲೋಲಗೊಳಿಸಿತ್ತು. ಅದಕ್ಕೆ ಮುನ್ನ ನಾಲ್ಕು ವರ್ಷಗಳ ಹಿಂದೆ 1996ರ ಏಪ್ರಿಲ್ 10 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಭಟ್ಕಳ ಶಾಸಕ ಡಾ.ಚಿತ್ತರಂಜನ್ ಹತ್ಯೆಯಾಗಿದ್ದು ಅಲ್ಲಿಯವರೆಗೆ ಆ ಪ್ರಕರಣವು ಪತ್ತೆಯಾಗಿರಲಿಲ್ಲ. ಈ ಪ್ರಕರಣವನ್ನೂ ಹಾಗಾಗಲು ಬಿಡಬಾರದು ಎಂದು ಪೊಲೀಸ್ ಇಲಾಖೆಗೆ ತೀವ್ರ ಒತ್ತಡವಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ವರ್ಗಾಯಿಸಲಾಯಿತು. ಸಿಓಡಿ ತಂಡ ಕಾರವಾರಕ್ಕೆ ತೆರಳಿ ಸಾಕ್ಷ$್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು. ಆರೋಪಿಗಳು ಕೊಲೆ ಮಾಡಿದ ನಂತರ ಕಾರವಾರದ ಹೊರವಲಯದಲ್ಲಿರುವ ಸದಾಶಿವಗಢದಲ್ಲಿ ಮೋಟರ್ ಸೈಕಲನ್ನು ಬಿಟ್ಟರೆಂದೂ ಅಲ್ಲಿಂದ ಬಿಳಿಯ ಬಣ್ಣದ ಮಾರುತಿ ಕಾರಲ್ಲಿ ಗೋವಾ ಕಡೆಗೆ ಹೊರಟುಹೋದರೆಂದೂ ತಿಳಿಯಿತು.
ಮೇಲ್ನೋಟಕ್ಕೇ ಈ ಕೊಲೆಯಲ್ಲಿ ಶಾಸಕರ ವೈರಿಗಳ ಕೈವಾಡವಿರಬಹುದು ಎಂದು ಕಂಡುಬರುತ್ತಿದ್ದ ಕಾರಣ ಈ ಬಗ್ಗೆಯೇ ತನಿಖಾಧಿಕಾರಿ ಸತ್ಯನಾರಾಯಣರಾವ್ ಗಮನ ಹರಿಸಿದರು. ಆಗ ಅವರಿಗೆ ಕೇಳಿಬಂದ ಮೊದಲ ಹೆಸರೆಂದರೆ ದಿಲೀಪ್ ನಾಯಕ್ ಎನ್ನುವವನದು. ಈತ ಒಂದು ಕಾಲದಲ್ಲಿ ಶಾಸಕರಿಗೆ ಆಪ್ತನಾಗಿದ್ದ. ವಸಂತ ಅಸ್ನೋಟಿಕರ್ ಕಾರವಾರ ಬಂದರು ಕಾರ್ಮಿಕ ಸಂಟನೆಯ ಅಧ್ಯಕ್ಷರಾಗಿದ್ದಾಗ ದಿಲೀಪ್ ನಾಯಕ್ ಉಪಾಧ್ಯಕ್ಷನಾಗಿದ್ದ. ಅಸ್ನೋಟಿಕರ್ ಶಾಸಕರಾದ ನಂತರ ಬಂದರು ಸಂಟನೆಯ ನಾಯಕತ್ವವನ್ನು ತನಗೆ ಬಿಟ್ಟುಕೊಡಬೇಕೆಂದು ಆತ ಪದೇಪದೆ ಕೇಳುತ್ತಿದ್ದನೆಂದೂ ಇದಕ್ಕೆ ಶಾಸಕರು ಒಪ್ಪದ ಕಾರಣ ಇಬ್ಬರ ನಡುವೆ ವೈಮನಸ್ಸು ಬೆಳೆದಿತ್ತೆಂದೂ ತಿಳಿಯಿತು. ಒಮ್ಮೆ ವಸಂತ್ ಅಸ್ನೋಟಿಕರ್ಗೆ ದಿಲೀಪ್ ಕೊಲೆ ಬೆದರಿಕೆ ಹಾಕಿದ್ದನೆಂದೂ ತಿಳಿಯಿತು. ಈ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ಅಸ್ನೋಟಿಕರ್ ಆತನ ಮೇಲೆ ಹಲವು ದೂರುಗಳನ್ನು ಕೊಟ್ಟಿದ್ದು ಪೊಲೀಸರ ಗಮನಕ್ಕೆ ಬಂದಿತು. ಅವರಿಬ್ಬರ ಮನಸ್ತಾಪ ತಿಳಿಗೊಳಿಸಲು ಉತ್ತರ ಕನ್ನಡ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿದ್ದರೆಂದೂ ತಿಳಿಯಿತು. ಹೀಗಾಗಿ ತನಿಖಾಧಿಕಾರಿಯ ದೃಷ್ಟಿಯಲ್ಲಿ ಸಂಶಯದ ಸೂಜಿ ಮೊಟ್ಟಮೊದಲಿಗೆ ಹೊರಳಿದ್ದೇ ದಿಲೀಪ ನಾಯಕನತ್ತ.
ದಿಲೀಪ್ ನಾಯಕ ಮುಂಬೈನ ನಿವಾಸಿಯಾಗಿದ್ದನೆಂದೂ ಆತ ವರ್ಷದಲ್ಲಿ ಕೆಲ ಸಮಯ ಕಾರವಾರದಲ್ಲಿ ವಾಸಿಸಿದರೆ ಬಹಳ ಸಮಯ ಮುಂಬೈನಲ್ಲಿಯೇ ಕಳೆಯುತ್ತಿದ್ದನೆಂದೂ ತಿಳಿದು ಬಂದಿತು. ಆತ ಮುಂಬೈನ ಕುಖ್ಯಾತ ಡಾನ್ಗಳಲ್ಲಿ ಒಬ್ಬನಾಗಿದ್ದ ಆಶ್ವಿನ್ ನಾಯಕ್ನ ಸಮೀಪದಲ್ಲಿದ್ದು ಕುಖ್ಯಾತ ಭೂಗತ ಡಾನ್ ಛೋಟಾ ರಾಜನ್ ಜತೆಗೂ ಸ್ನೇಹದಿಂದಿದ್ದನೆಂದು ಪೊಲೀಸರ ಗಮನಕ್ಕೆ ಬಂದಿತು. ಶಾಸಕ ಮತ್ತು ದಿಲೀಪ್ ನಡುವೆ 1999ರಿಂದಲೇ ವೈಮನಸ್ಸು ಉಂಟಾಗಿತ್ತೆಂದು ಸಾಗಳು ತಿಳಿಸಿ, ಆ ವರ್ಷ ನಡೆದ ವಿಧಾನಸಭಾ ಚುನಾವಣೆಗಳೇ ಇದಕ್ಕೆ ಕಾರಣವೆಂದು ಹೇಳಿದರು. ಅಗ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂದು ವಸಂತ್ ಅಸ್ನೋಟಿಕರ್ ಬಯಸಿದ್ದು ದಿಲೀಪ್ ನಾಯಕ್ಗೆ ಇಷ್ಟವಾಗಿರಲಿಲ್ಲ. ತನ್ನ ಭಾವಮೈದುನನಾದ ಸೂರ್ಯಕಾಂತ ಮಂಜ್ರೇಕರ್ಗೆ ಪಕ್ಷದ ಟಿಕೆಟ್ ಸಿಗಬೇಕೆಂದು ಆತನ ಬಯಕೆಯಾಗಿತ್ತು. ಈ ಕಾರಣದಿಂದ ಆತ ಪಕ್ಷದ ವರಿಷ್ಠರಿಗೆ ಈ ಹಿಂದೆ ಅಸ್ನೋಟಿಕರ್ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿದ್ದು ಆನಂತರ ಅದನ್ನು ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಕಾರಣ ಪಾಂತರ ಮಾಡಿದ ವ್ಯಕ್ತಿಗೆ ಕಾರವಾರ ೇತ್ರದ ಟಿಕೆಟ್ ಕೊಡಬಾರದು ಎಂದು ಮನವಿ ಮಾಡಿದ್ದ. ಹೀಗಾಗಿ ಟಿಕೆಟ್ ಹಂಚಿಕೆ ವೇಳೆಯಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ವಸಂತ ಅಸ್ನೋಟಿಕರ್ ತಮ್ಮ ಪ್ರಭಾವ ಉಪಯೋಗಿಸಿ ಕಾಂಗ್ರೆಸ್ ಟಿಕೆಟನ್ನು ಪಡೆದಿದ್ದು ಆತನಿಗೆ ಮುಖಭಂಗವನ್ನುಂಟು ಮಾಡಿತ್ತು. ಅಸ್ನೋಟಿಕರ್ ಚುನಾವಣೆಯಲ್ಲಿ 45,000 ಮತಗಳನ್ನು ಗಳಿಸಿ ಗೆದ್ದದ್ದು ನಾಯಕ್ನನ್ನು ಇನ್ನಷ್ಟು ಹಿಮ್ಮೆಟ್ಟಿಸಿತ್ತು.
ಶಾಸಕನಾದ ನಂತರವೂ ತನಗೆ ಬಂದರು ಕಾರ್ಮಿಕ ಸಂಟನೆಯ ಅಧ್ಯಕ್ಷಗಿರಿಯನ್ನು ಬಿಟ್ಟುಕೊಡದಿದ್ದುದು ನಾಯಕ್ಗೆ ಇನ್ನಷ್ಟು ಕೋಪ ತರಿಸಿತ್ತು. ಹೇಗಾದರೂ ಮಾಡಿ ಅಸ್ನೋಟಿಕರ್ರನ್ನು ಮುಗಿಸಬೇಕೆಂದು ಆತ ಕಾಯುತ್ತಿದ್ದ ಎಂದು ಹಲವಾರು ಸಾಗಳು ಪೊಲೀಸರಿಗೆ ತಿಳಿಸಿದರು. ಕೊಲೆಯಾದ ಸಮಯದಲ್ಲಿ ದಿಲೀಪ್ ನಾಯಕ್ ಕಾರವಾರದಲ್ಲಿರಲಿಲ್ಲ ಎಂದು ಸಿಓಡಿ ತಂಡಕ್ಕೆ ತಿಳಿಯಿತು. 2000ದ ಫೆಬ್ರವರಿ 13 ರಂದು ಅಸ್ನೋಟಿಕರ್ ತಮ್ಮ ಹಿರಿಯ ಮಗಳ ಮದುವೆಯನ್ನು ಮುಂಬೈನಲ್ಲಿ ಅದ್ದೂರಿಯಾಗಿ ಮಾಡಿ ಆರತಕ್ಷತೆಯನ್ನು ಕಾರವಾರದಲ್ಲಿ ಇಟ್ಟುಕೊಂಡಿದ್ದ ವಿಷಯ ಎಲ್ಲರಿಗೂ ತಿಳಿದಿತ್ತು. ಈ ಸಮಯದಲ್ಲಿಯೇ ಮುಂಬೈ ಭೂಗತ ಲೋಕದ ಸಹಾಯದಿಂದ ವಸಂತ ಅಸ್ನೋಟಿಕರ್ರ ಕೊಲೆ ಮಾಡಿಸಿರಬಹುದು ಎನ್ನುವ ನಿಟ್ಟಿನಲ್ಲಿ ಪೊಲೀಸರ ತನಿಖೆ ಮುಂದುವರಿಯಿತು.
(ಸಶೇಷ)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)