ಬಾಲಕನ ಖಿನ್ನತೆಯ ಹಿಂದೆ...; ಆ ಕ್ಷಣ...

Aa kshana
Published on
ಕಿತ್ತೂರು ಕರ್ನಾಟಕದ ನಗರವೊಂದರಲ್ಲಿ ರಾಜು ಎಂಬ ಕಂಟ್ರಾಕ್ಟರ್ ಇದ್ದ. ಆತ ಸಾರ್ವಜನಿಕರ ಮನೆ ನಿರ್ವಣ, ರಿಪೇರಿ ಕೆಲಸದ ಜತೆ ಮುನಿಸಿಪಾಲಿಟಿಯ ಕೆಲಸಗಳನ್ನೂ ನಿರ್ವಹಿಸುತ್ತಿದ್ದ. ಸಾಕಷ್ಟು ಸ್ಥಿತಿವಂತನಾಗಿದ್ದ ರಾಜು ಸ್ವಂತ ಮನೆಯಲ್ಲಿ ಪತ್ನಿ ಲಕ್ಷಿ ್ಮ ಪುತ್ರರಾದ ಸಂತೋಷ್, ಸುಹಾಸ್ ಹಾಗೂ ಪುತ್ರಿ ನೀತಿ ಇವರೊಡನೆ ವಾಸಮಾಡುತ್ತಿದ್ದ. ದೂರದ ಬಡಾವಣೆಯಲ್ಲಿದ್ದ ಶಾಲೆಯೊಂದರಲ್ಲಿ ಸಂತೋಷ್ 9ನೆಯ ತರಗತಿಯಲ್ಲಿದ್ದರೆ, ಮನೆಗೆ ಹತ್ತಿರದ ಶಾಲೆಗಳಲ್ಲಿ ಸುಹಾಸ್ 7ನೆಯ ತರಗತಿಯಲ್ಲೂ ನೀತಿ 5ನೆಯ ತರಗತಿಯಲ್ಲೂ ಓದುತ್ತಿದ್ದರು. ರಾಜು ಪ್ರತಿವಾರ ತನ್ನ ಕೂಲಿಕಾರರ ವಾರದ ಕೂಲಿ ಹಾಗೂ ಸರಬರಾಜುದಾರರ ಬಿಲ್ಲುಗಳನ್ನು ಪಾವತಿಸಲು ಒಂದೆರಡು ಲಕ್ಷ ರೂ.ಗಳನ್ನು ಬ್ಯಾಂಕಿನಿಂದ ತಂದು ಮನೆಯಲ್ಲಿಡುತ್ತಿದ್ದ. ಒಂದು ಶನಿವಾರ ಕೂಲಿಕಾರರಿಗೆ ಬಟವಾಡೆ ಮಾಡಿ ಉಳಿದ ಹಣ ಎಣಿಸಿದಾಗ 10 ಸಾವಿರ ರೂ.ಗಳು ಕಡಿಮೆಯಾದದ್ದನ್ನು ಕಂಡು ಹೌಹಾರಿದ. ಪತ್ನಿಯನ್ನು ವಿಚಾರಿಸಿದಾಗ, ‘ನನಗೆ ಹಣ ಬೇಕಾದರೆ ನಿಮ್ಮನ್ನೇ ಕೇಳಿ ಪಡೆಯುವುದಿಲ್ಲವೇ? ನೀವೇ ಬ್ಯಾಂಕಿನಿಂದ ಕಡಿಮೆ ಹಣ ತಂದಿರಬಹುದೇನೋ? ಇಲ್ಲವೇ ಲೆಕ್ಕ ತಪ್ಪು ಮಾಡಿರುವಿರೇನೋ ನೋಡಿ’ ಎಂದಳು. ಎಷ್ಟು ಯೋಚಿಸಿದರೂ ರಾಜುವಿಗೆ ಹಣ ಹೇಗೆ ಕಡಿಮೆಯಾಯಿತೆಂದು ತಿಳಿಯಲಿಲ್ಲ. ಲೆಕ್ಕಾಚಾರದಲ್ಲಿ ಏನೋ ತಪ್ಪು ಮಾಡಿರಬೇಕೆಂದು ಸುಮ್ಮನಾದ. ಮುಂದಿನ ವಾರ ಲಕ್ಷ್ಮಿ ಅಡುಗೆಮನೆಯ ಡಬ್ಬಿಯೊಂದರಲ್ಲಿ ಕೂಡಿಟ್ಟಿದ್ದ ಒಂದು ಸಾವಿರ ರೂ. ಕಾಣೆಯಾಯಿತು. ಆಕೆ ಈ ವಿಷಯವನ್ನು ರಾಜುವಿಗೆ ತಿಳಿಸಿದಾಗ ಇಬ್ಬರೂ ಗಾಬರಿಗೊಂಡರು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸೇವಕರನ್ನು ವಿಚಾರಿಸಿದರು. ‘ನಾವು ಹತ್ತು ವರ್ಷದಿಂದ ನಿಯತ್ತಿನಿಂದ ಇದ್ದೇವೆ, ಇದುವರೆಗೆ ಅಪವಾದ ಹೊರಿಸದ ನೀವು ಈಗೇಕೆ ನಮ್ಮನ್ನು ಕಳ್ಳರೆಂದು ಪ್ರಶ್ನಿಸುತ್ತಿರುವಿರಿ? ಬೇಕಾದರೆ ಪೊಲೀಸರನ್ನೇ ಕರೆಸಿ ವಿಚಾರಣೆ ನಡೆಸಿ’ ಎಂದರು ಅವರಿಬ್ಬರೂ. ಮುಂದಿನ ಶನಿವಾರವೂ ರಾಜುವಿನ ಹಣದ ಕಂತೆಯಿಂದ 7 ಸಾವಿರ ರೂ. ಮಾಯವಾದಾಗ ರಾಜು ಮತ್ತು ಲಕ್ಷಿ ್ಮ ಮನೆಕೆಲಸದವರ ಮೇಲೆ ಹೆಚ್ಚಿನ ನಿಗಾವಹಿಸತೊಡಗಿದರು. ತಮ್ಮ ಕೋಣೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕೆಂದು ಯೋಚಿಸಿದರು.

ಏತನ್ಮಧ್ಯೆ ಹಿರಿಯ ಮಗ ಸಂತೋಷ್ ಖಿನ್ನನಾಗಿ ಇರುತ್ತಿದ್ದುದನ್ನು ರಾಜು ಮತ್ತು ಲಕ್ಷಿ ್ಮ ಗಮನಿಸಿದರು. ಏಕೆ ಮಂಕಾಗಿರುವೆಯೆಂದು ಲಕ್ಷಿ ್ಮ ವಿಚಾರಿಸಿದಾಗ ಆತ ತನಗೇನೂ ಆಗಿಲ್ಲ, ಸರಿಯಾಗಿಯೇ ಇದ್ದೇನೆ ಎಂದ. ಶಾಲೆಯ ಪಾಠ ಅವನ ತಲೆಗೆ ಹತ್ತುತ್ತಿಲ್ಲವೇನೋ ಎಂದು ರ್ತಸಿದ ಲಕ್ಷ್ಮಿ ಶಾಲೆಗೆ ಹೋಗಿ ವಿಚಾರಿಸಲು ಗಂಡನಿಗೆ ಹೇಳಿದಳು. ‘ಕಳೆದ ಎರಡು-ಮೂರು ವಾರಗಳಿಂದ ಅಣ್ಣ ಸದಾಕಾಲ ಚಿಂತೆಯಿಂದಿರುತ್ತಾನೆ, ರಾತ್ರಿ ಮಲಗಿರುವಾಗ ಏನೇನೋ ಕನವರಿಸುತ್ತಿರುತ್ತಾನೆ’ ಎಂದು ಸುಹಾಸ್ ಹೇಳಿದಾಗ ಮತ್ತೊಮ್ಮೆ ಪತಿ-ಪತ್ನಿಯರಿಬ್ಬರೂ ಸಂತೋಷ್​ನ ಜೊತೆ ಸಮಾಲೋಚಿಸಿದರು.

ತಾನು ಸರಿಯಾಗಿಯೇ ಇದ್ದೇನೆ, ಏನೂ ಆಗಿಲ್ಲವೆಂದು ಸಂತೋಷ್ ಹೇಳಿದ. ಹದಿಹರೆಯದ ವಯಸ್ಸಿನಲ್ಲಿ ಯುವಕ-ಯುವತಿಯರ ಮೂಡ್​ಗಳು ಬದಲಾಗುತ್ ಇರುತ್ತವೆ, ಕ್ರಮೇಣ ಸಂತೋಷ್ ಸಾಮಾನ್ಯ ಸ್ಥಿತಿಗೆ ಮರಳಬಹುದೆಂದು ಊಹಿಸಿ ಸುಮ್ಮನಾದರು. ಇದಾದ ಕೆಲದಿನಗಳ ನಂತರ ರಾಜು ತನಗೆ ಬೇಕಾದ ವಸ್ತುವೊಂದನ್ನು ಹುಡುಕುತ್ತಿದ್ದಾಗ ಸಂತೋಷ್​ನ ಚೀಲದಿಂದ ಮೊಬೈಲ್ ಫೋನ್ ರಿಂಗಾಯಿತು. ಮನೆಯಲ್ಲಿ ತನ್ನ ಹೊರತಾಗಿ ಯಾರ ಹತ್ತಿರವೂ ಮೊಬೈಲ್ ಇಲ್ಲದಿರುವಾಗ ಸಂತೋಷ್​ನ ಶಾಲೆಯ ಚೀಲದಿಂದ ಮೊಬೈಲ್ ಹೇಗೆ ರಿಂಗಣಿಸುತ್ತಿದೆ ಎಂಬ ಕುತೂಹಲದಿಂದ ರಾಜು ಮಗನ ಬ್ಯಾಗ್ ತೆರೆದಾಗ ಅದರಲ್ಲೊಂದು ಅತಿ ಸಾಧಾರಣ ಮೊಬೈಲ್ ಫೋನ್ ಇತ್ತು.

‘ನಿನ್ನ ಕೈಗೆ ಮೊಬೈಲ್ ಹೇಗೆ ಬಂದಿತು? ನಾನಿಟ್ಟಿದ್ದ ಹಣವನ್ನು ಕದ್ದು ಈ ಫೋನ್ ಖರೀದಿಸಿದೆಯಾ?’ ಎಂದು ರಾಜು ಪ್ರಶ್ನಿಸಿದಾಗ, ಸಂತೋಷ್ ತಂದೆಯ ಎರಡೂ ಕಾಲುಗಳನ್ನು ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದ. ಲಕ್ಷಿ ್ಮ ಸಮಾಧಾನಮಾಡಿ ಫೋನ್ ಹೇಗೆ ಬಂತೆಂದು ಪ್ರಶ್ನಿಸಿದಾಗ, ಅಳುತ್ತಲೇ ಸಂತೋಷ್ ಹೀಗೆಂದ: ‘ಎರಡು ತಿಂಗಳ ಹಿಂದೆ ಎಂದಿನಂತೆ ಶಾಲೆಗೆ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಚಹಾ ಅಂಗಡಿಯ ಮುಂದೆ ನಾಲ್ಕೆ ೖದು ಜನ ದಾಂಡಿಗರು ನಿಂತಿದ್ದರು. ನನ್ನನ್ನು ಕರೆದು ನೀನು ಯಾರು? ಏನು ಮಾಡುತ್ತಿರುವೆ? ಎಂದು ವಿಚಾರಿಸಿದರು. ನಾನು ಗುತ್ತಿಗೆದಾರ ರಾಜು ಅವರ ಮಗ ಎಂದ ಕೂಡಲೇ ಕುಳಿತಿದ್ದ ರೌಡಿಗಳಲ್ಲೊಬ್ಬ ಇವನು ಸ್ಥಿತಿವಂತರ ಮನೆಯವನು. ಇವನನ್ನು ಕಿಡ್ನಾಪ್ ಮಾಡಿದರೆ ನಮಗೆ ಲಕ್ಷ ಲಕ್ಷ ರೂ.ಗಳು ಸಿಗುತ್ತವೆ ಎಂದ. ಎಲ್ಲರೂ ಹೂಗುಟ್ಟಿದರು. ನಂತರ ಅವರು ನನ್ನನ್ನು ಬೈಕಿನಲ್ಲಿ ಕೂರಿಸಿಕೊಂಡು ಪಕ್ಕದ ಬಡಾವಣೆಯಲ್ಲಿದ್ದ ಒಂದು ಮನೆಗೆ ಕರೆದೊಯ್ದರು. ಅಲ್ಲಿ ನನ್ನ ಜೇಬು ತಪಾಸಣೆ ಮಾಡಿದರು, ಹತ್ತು ರೂಪಾಯಿಯ ನೋಟೊಂದರ ಹೊರತಾಗಿ ಬೇರೇನೂ ಸಿಗಲಿಲ್ಲ. ನಂತರ ಅವರು ನನ್ನನ್ನು ಸಂಪೂರ್ಣವಾಗಿ ವಿವಸ್ತ್ರ ಮಾಡಿ ಫೋಟೋಗಳನ್ನು ತೆಗೆದರು. ತಂದೆ-ತಾಯಿಯರ ಮೊಬೈಲ್ ನಂಬರ್​ಗಳನ್ನು ಕೊಡೆಂದರು. ತಾಯಿಯ ಬಳಿ ಫೋನಿಲ್ಲ ಎಂದು ಉತ್ತರಿಸಿ ಅಪ್ಪನ ಮೊಬೈಲ್ ನಂಬರ್ ಕೊಟ್ಟೆ. ಅವರು ಕಾಲ್ ಮಾಡಿದರು. ಆದರೆ ಅಪ್ಪ ಉತ್ತರಿಸಲಿಲ್ಲ. ಅಷ್ಟರಲ್ಲಿ ಅವರಲ್ಲೊಬ್ಬ ತನ್ನ ತಂದೆ ಇನ್ನರ್ಧ ಗಂಟೆಯಲ್ಲಿ ಮನೆಗೆ ವಾಪಸಾಗುತ್ತಿದ್ದಾರೆ ಎಂದು ಹೇಳಿ ನನ್ನನ್ನು ಬಿಟ್ಟುಬಿಡಲು ಸೂಚಿಸಿದ. ಆಗ ಅವರ ನಾಯಕ ಇತರರೊಡನೆ ಸೇರಿ ನನ್ನನ್ನು ಹಿಗ್ಗಾಮುಗ್ಗಾ ಥಳಿಸಿ ನಾಳೆ ಬೆಳಗ್ಗೆ ಮನೆಯಿಂದ ಒಂದು ಲಕ್ಷ ರೂ. ತಂದುಕೊಟ್ಟರೆ ಸರಿ, ಇಲ್ಲವಾದರೆ ನಿನ್ನನ್ನು ಬೇರೊಂದು ಜಾಗದಲ್ಲಿ ಬಂಧಿಸಿಟ್ಟು ಕೊಲೆ ಮಾಡುತ್ತೇವೆ ಎಂದು ಬೆದರಿಸಿ ನನ್ನನ್ನು ಬಿಟ್ಟ. ನಾನು ತೀವ್ರ ಆಘಾತಕ್ಕೆ ಒಳಗಾಗಿ ಆ ದಿನ ಶಾಲೆಗೆ ಹೋಗಲಿಲ್ಲ. ಮನೆಗೆ ಬಂದ ನಂತರ ನಡೆದ ವಿಷಯವನ್ನು ನಿಮಗೆ ಹೇಳಲು ಧೈರ್ಯವಾಗಲಿಲ್ಲ. ಮುಂದೆ ಏನು ಮಾಡುವುದೆಂದು ಯೋಚಿಸತೊಡಗಿದೆ. ಆ ಸಂಜೆ ಅಪ್ಪ ಮನೆಗೆ ಬಂದು ನಾಳಿನ ಬಟವಾಡೆಗಾಗಿ ಹಣ ತಂದ ಬಗ್ಗೆ ಅಮ್ಮನಿಗೆ ಹೇಳುತ್ತಿದ್ದುದನ್ನು ಕೇಳಿಸಿಕೊಂಡೆ. ಅಪ್ಪ ರಾತ್ರಿಯ ಊಟಕ್ಕೆ ಕುಳಿತಾಗ ಅವರ ಕೋಣೆಗೆ ಹೋಗಿ 10 ಸಾವಿರ ರೂಗಳನ್ನು ಎಗರಿಸಿದೆ. ಮಾರನೆಯ ದಿನ ಶಾಲೆಗೆ ಹೋಗುವಾಗ ಆ ರೌಡಿಗಳು ಮತ್ತೆ ನನ್ನನ್ನು ಅಡ್ಡಹಾಕಿ ಹಣ ತಂದೆಯಾ ಎಂದು ಕೇಳಿದರು. ನೀವು ಕೇಳಿದಷ್ಟು ಹಣ ಸಿಗಲಿಲ್ಲ ಎಂದು ಹೇಳಿ ಅವರಿಗೆ 10 ಸಾವಿರ ರೂ. ಕೊಟ್ಟೆ. ಅವರೆಲ್ಲ ಸಂತಸಗೊಂಡು ಹೋಟೆಲ್ಲಿಗೆ ಕರೆದೊಯ್ದು ಚಹಾ ಕುಡಿಸಿದರು. ಒಂದು ವಾರದ ನಂತರ ಆ ಪುಂಡರು ಮತ್ತೊಮ್ಮೆ ಅಡ್ಡಗಟ್ಟಿ ತಮ್ಮ ಮೊಬೈಲ್ ಫೋನಿನಲ್ಲಿದ್ದ ನನ್ನ ನಗ್ನ ಫೋಟೋಗಳನ್ನು ತೋರಿಸಿ ಮಾರನೆಯ ದಿನ ಹಣ ತಂದುಕೊಡದೇ ಹೋದರೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದರು. ಆ ಬಾರಿ ನಾನು ಅಮ್ಮ ಅಡುಗೆಮನೆಯಲ್ಲಿಟ್ಟಿದ್ದ ಡಬ್ಬಿಯಿಂದ ಹಣ ಕದ್ದು ಅವರಿಗೆ ಕೊಟ್ಟೆ. ಆನಂತರ ಅವರಿಂದ ತಲೆಮರೆಸಿಕೊಂಡು ಬೇರೆ ಹಾದಿಯಲ್ಲಿ ಶಾಲೆಗೆ ಹೋಗಿಬರತೊಡಗಿದೆ. ಆದರೆ ಕೆಲ ದಿನಗಳ ನಂತರ ಅವರು ನಮ್ಮ ಮನೆಯ ಎದುರಿಗೇ ಬಂದಾಗ ತುಂಬ ಹೆದರಿಕೆಯಾಯಿತು. ‘ನೀನು ನಮ್ಮಿಂದ ತಪ್ಪಿಸಿಕೊಂಡು ಹೋಗದಂತೆ ವ್ಯವಸ್ಥೆ ಮಾಡಿದ್ದೇವೆ’ ಎಂದು ಹೇಳಿದ ಅವರ ನಾಯಕ ನನಗೆ ಒಂದು ಮೊಬೈಲ್ ಕೊಟ್ಟು ‘ನಮಗೆ ಹಣ ಬೇಕಾದಾಗ ಈ ಮೊಬೈಲ್​ನಲ್ಲಿ ಮಿಸ್ಡ್ ಕಾಲ್ ಕೊಡುತ್ತೇವೆ, ನೀನು ಚಹಾ ಅಂಗಡಿ ಬಳಿಗೆ ಬಂದು ನಮಗೆ ಹಣ ತಂದುಕೊಡಬೇಕು’ ಎಂದ. ಅವರ ಕಾಲ್ ಬಂದಾಗ ಎರಡನೆಯ ಬಾರಿಯೂ ಅಪ್ಪನ ಹಣ ಕದ್ದು ಅವರಿಗೆ ನೀಡಿದೆ. ಅವರು ಕಾಲ್ ಮಾಡಿದಾಗ ಉತ್ತರಿಸದಿದ್ದರೆ ನನಗೆ ಹೊಡೆಯುತ್ತಾರೆ. ಹೀಗಾಗಿ ನನಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಡಿಮೆಯಾಗಿ ಜೀವನದಲ್ಲಿ ಜಿಗುಪ್ಸೆಯಾಗಿದೆ’.

ಕೂಡಲೇ ರಾಜು ಸಂತೋಷ್​ನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವನಿಂದ ದೂರು ಕೊಡಿಸಿದ. ಸಂತೋಷ್​ನಿಗೆ ಕೊಟ್ಟಿದ್ದ ಮೊಬೈಲ್ ಫೋನ್ ಮೂಲಕ ಎಲ್ಲ ಐದು ರೌಡಿಗಳೂ ಪತ್ತೆಯಾದರು. ಅವರೆಲ್ಲ ವಿದ್ಯಾಭ್ಯಾಸವನ್ನು ತೊರೆದು ಗೂಂಡಾತನ ಮಾಡುವುದರಲ್ಲೇ ನಿರತರಾಗಿದ್ದರು. ಅವರನ್ನು ಬಂಧಿಸಿ ಪೋಕ್ಸೋ, ಐಪಿಸಿ, ಐ.ಟಿ. ಆಕ್ಟ್ ಮತ್ತಿತರ ಕಾಯಿದೆಗಳ ಮೇರೆಗೆ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯದಲ್ಲಿ ಒಂದು ತಿಂಗಳೊಳಗೇ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ಎಲ್ಲರಿಗೂ ಮೂರು ವರ್ಷಗಳ ಜೈಲುವಾಸವಾಯಿತು. ತಮ್ಮ ಮಕ್ಕಳು ಶಾಲೆಯಲ್ಲಿ ಹೇಗೆ ಕಲಿಯುತ್ತಿದ್ದಾರೆ ಎನ್ನುವುದನ್ನಷ್ಟೇ ಅಲ್ಲದೆ ಅವರು ಯಾರಿಂದಲೂ ಶೋಷಿತರಾಗುತ್ತಿಲ್ಲ, ಕೆಟ್ಟ ಸಹವಾಸಕ್ಕೆ ಬಿದ್ದಿಲ್ಲ, ಎನ್ನುವುದನ್ನು ಮಾತಾಪಿತರು ಖಾತ್ರಿ ಮಾಡಿಕೊಳ್ಳಬೇಕು. ಅವರು ಮನೆಯಿಂದ ಹೊರಗೆ ಹೋದಾಗ ಎಂತಹುದೇ ಪ್ರಮುಖ ಘಟನೆ ನಡೆದರೂ ತಮಗೆ ತಿಳಿಸುವಂತೆ ಹೇಳಬೇಕು. ಯಾರದೇ ದೌರ್ಜನ್ಯ, ಬಲವಂತ ಇತ್ಯಾದಿಗಳಿಗೆ ಬಲಿಯಾಗದಂತೆ ಮಕ್ಕಳಿಗೆ ಕಲಿಸಬೇಕು. ಏಕೆಂದರೆ ಒಮ್ಮೆ ಪೀಡನೆಗೆ ಈಡಾದವರೇ ಪದೇಪದೆ ಪೀಡೆಗೊಳಗಾಗುತ್ತಾರೆ. ಅಮೆರಿಕದ ಲೇಖಕ ಹಾಗೂ ಮಕ್ಕಳ ಹಕ್ಕುಗಳ ವಕೀಲ ಆಂಡ್ರೂ ವಾಕ್ಸ್ ಹೇಳುವಂತೆ, ‘ಜೀವನವೇ ಒಂದು ಹೋರಾಟ. ಆದರೆ ಪ್ರತಿಯೊಬ್ಬರೂ ಹೋರಾಟಗಾರರಲ್ಲ. ಎಲ್ಲರೂ ಹೋರಾಟಗಾರರಾಗಿದ್ದರೆ ಪೀಡಕರೇ ಇರುತ್ತಿರಲಿಲ್ಲ.’

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net