

ನಾನು ಎಡಬಲ ಲೆಕ್ಕಿಸುವುದರಲ್ಲಿ ಕಕ್ಕಾಬಿಕ್ಕಿ ಆಗಿದ್ದು ಹೌದು. ಜೊತೆಗೆ ಈಚೆಯಿಂದ ಆಚೆಗೆ ಅಗಲವಾದ ರಸ್ತೆ ದಾಟಿ ಹೋಗೋಣ ಎಂದರೆ ಮಧ್ಯ ಮಜಬೂತಾದ ಬ್ಯಾರಿಕೇಡು ನಮ್ಮಲ್ಲಿ ರಸ್ತೆ ಹಾರಿದಂತೆ ಹಾರುವ ಅವಕಾಶವನ್ನೇ ಕೊಡುವುದಿಲ್ಲ. ಅದಕ್ಕಾಗಿ ಕಣ್ಣು ದೂರದವರೆಗೆ ಹರಿಸಿ, ಅಲ್ಲಿ ರಸ್ತೆ ಕ್ರಾಸಿಂಗ್ಗೆ ನಿರ್ವಿುಸಲಾದ ಸೇತುವೆ ಹತ್ತಬೇಕು. ಇಲ್ಲೊಂದು ಖುಷಿಯ ವಿಚಾರ ಎಂದರೆ ಇಲ್ಲಿ ಪ್ರತಿ ಹಂತದಲ್ಲೂ ರಸ್ತೆ, ಮನೆ, ಸಿನಿಮಾ, ಮಾಲ್ ಏನೇ ಇರಲಿ ಕೊನೆಗೆ ಮಸೀದಿಯಲ್ಲೂ ಹತ್ತಡಿಗಿಂತ ಹೆಚ್ಚಿಗೆ ಏರಿಳಿಯುವ ಜಾಗವಾದರೆ, ಅಲ್ಲೆಲ್ಲ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಎಸ್ಕಲೇಟರ್ ಕಡ್ಡಾಯ.
ಬಹುಶಃ ಚೊಕ್ಕವಾದ ಮತ್ತು ನಿರಂತರ ಎಸ್ಕಲೇಟರ್ ಮತ್ತು ಲಿಫ್ಟ್ಗಳನ್ನು ಲಂಡನ್ನಲ್ಲಿ ಮಾತ್ರವೇ ಗಮನಿಸಿದ್ದೆ. ಹಾಗಾಗಿ ದೂರದ ರಸ್ತೆ ದಾಟುವ ಚೆಂದದ ಸೇತುವೆ ಮೇಲೆ ಹತ್ತಿಳಿದು ಅಂತೂ ಬಲಭಾಗದ ಬಸ್ ಶೆಲ್ಟರ್ ಸೇರಿ, ಕಾಯುತ್ತ ಅಲ್ಲೆ ನಿಂತಿದ್ದವನೊಬ್ಬನನ್ನು ವಿಚಾರಿಸಿಕೊಂಡು ನಂಬರ್ ನೋಡುತ್ತಿದ್ದರೆ ಕೆಲವು ನಿಮಿಷದ ನಂತರ ಅವನಾಗಿಯೇ, ‘ಹಲೋ.. ಬಸ್ ಅಥವಾ ಬೇರೆ ಸರ್ವೀಸ್ಗಳಿಗೆ ಟರ್ಕಿಯಲ್ಲಿ ಕ್ಯಾಶ್ ನಡೆಯುವುದಿಲ್ಲ’ ಎನ್ನಬೇಕೆ? ಬಹುಶಃ ಪೌಂಡ್ ಅಥವಾ ಡಾಲರ್ ಅಥವಾ ನಾವು ಇಂಡಿಯನ್ಸು ರೂಪಾಯಿ ಕೊಡುತ್ತೇವೆ ಎಂದು ಹಾಗಂದನಾ ಎಂದು ವಿಚಾರಿಸಿದರೆ ಬಿಲ್ಕುಲ್ ಅಲ್ಲವೇ ಅಲ್ಲ. ಅಲ್ಲಿನ ಯಾವುದೇ ಸಾರ್ವಜನಿಕ ಸೇವೆಗಳಲ್ಲಿ ನೇರ ಕ್ಯಾಶ್ ಬಳಕೆ ಇಲ್ಲವೇ ಇಲ್ಲ. ಎಲ್ಲ ಕ್ಯಾಶ್ಲೆಸ್ ಬಿಜಿನೆಸ್ಸು. ಹೆಚ್ಚಿನ ಹೋಟೆಲ್, ತಿನಿಸು, ಮಾರ್ಟ್, ಮಾಲ್, ಬಾರ್ ಎಲ್ಲೆಡೆ ಕಾರ್ಡ ಉಜ್ಜುವುದೇ ಹೊರತು, ನನ್ನ ಹತ್ತಿರ ಇರುವ ನಿಮ್ಮ ಟರ್ಕೀಶ್ ಲಿರಾ (ಟಿ.ಎಲ್) ಇದನ್ನೇ ಕೊಡಲೇ ಎಂದರೆ ಬಸ್ನವನು ಕೆಳಗೆ ಇಳಿಸುವುದು ನಿಶ್ಚಿತ. ಆದ್ದರಿಂದ ಇಲ್ಲಿ ವ್ಯವಹಾರಕ್ಕೆ ಮೊದಲು ಕಾರ್ಡ್ ತೆಗೆದುಕೊಳ್ಳಬೇಕಿತ್ತು. ನಾವು ಹೇಗಿದ್ದರೂ ಅಂತಾರಾಷ್ಟ್ರೀಯ ಕಾರ್ಡ್ ಇಲ್ಲೂ ಉಜ್ಜಿದರಾಯ್ತು ಎಂದುಕೊಂಡಿದ್ದೇವಲ್ಲ. ಅದರೆ ಬಸ್ ಇತ್ಯಾದಿ ಸರ್ವೀಸ್ ಸೆಕ್ಟರ್ನಲ್ಲಿ ಆ ಕಾರ್ಡ ನಡೆಯುತ್ತಿರಲಿಲ್ಲ. ಏನಿದ್ದರೂ ಕಿಯಾಕ್ಸ್ ತರಹದ ಅಲ್ಲಲ್ಲಿ ಜೋಡಿಸಿದ ವೆಂಡಿಂಗ್ ಮಶೀನ್ಗಳಲ್ಲಿ ಟಿ.ಎಲ್. ಹಾಕಿದರೆ ಆ ಮೊತ್ತಕ್ಕೆ ಸಮನಾದ ಕಾರ್ಡ ಹೊರಕ್ಕೆ ಬೀಳುತ್ತದೆ. ಅದನ್ನೇ ಎಲ್ಲೆಡೆ ಬಳಸಬೇಕು. ಅಂದರೆ ಮೊದಲು ಅನಾಲ್ಯಾ ಹೋಗುವ ಬದಲಿಗೆ ಎಲ್ಲಿ ಕಿಯಾಸ್ಕ್ ಇಟ್ಟಿದ್ದಾರೆ ಎಂದು ಹುಡುಕಿ ಕಾರ್ಡ್ ಪಡೆಯಬೇಕು. ಪುಣ್ಯಕ್ಕೆ ಹಿಂದಿನ ದಿನ ಏರ್ಪೋರ್ಟ್ನಲ್ಲಿ ಒಂದಷ್ಟು ಟಿ.ಎಲ್.ಗೆ ಹಣವನ್ನು ಬದಲಾಯಿಸಿಕೊಂಡಿದ್ದು ಉಪಯೋಗಕ್ಕೆ ಬಂದಿತ್ತು. ಆದರೆ ಬೆಳಗ್ಗೆ ಸಣ್ಣ ಹೋಟೆಲ್ವೊಂದರಲ್ಲಿ ಕಡುಕಪ್ಪು ಟರ್ಕೀಶ್ ಚಹಾ ಮತ್ತು ಬ್ರೆಡ್ಡು ತಿಂದು ಬಿಲ್ ಕೊಡುವಾಗ ಮಾತ್ರ ಟಿ.ಎಲ್. ಕೊಟ್ಟು ಬಂದಿದ್ದೆವು.
ಹಾಗೆ ಮತ್ತೊಮ್ಮೆ ಎದುರಿಗಿನ ರಸ್ತೆಯಲ್ಲಿ ಕಿಯಾಸ್ ಇದೆ ಎಂದು ನೋಡಿಕೊಂಡು, ಅದಕ್ಕಾಗಿ ಹತ್ತಿಳಿದು, ನೂರು ಟಿ.ಎಲ್. ರೂಪಾಯಿ ಸಮನಾದ ಕಾರ್ಡ್ ಪಡೆದು ಬಸ್ ಹಿಡಿಯಲು ಹೊರಡುವ ಹೊತ್ತಿಗೆ ಮಧ್ಯಾಹ್ನ ಸಮಯ ನೆತ್ತಿಗೇರಿತ್ತು. ಆದರೂ ಬಿಡದೆ ಊರೆಲ್ಲ ಸುತ್ತಿ ನಗರ ದರ್ಶನ ಮಾಡಿಸುತ್ತಿದ್ದ ಬಸ್ಸನ್ನೇರಿ ಕೊನೆಯ ಸ್ಟಾಪಿನಲ್ಲಿ ಇಳಿದರೆ ಸಂಪೂರ್ಣ ಹಾಳೂರಿನಂತಹ ಹೊರಾವರಣದ ಬಸ್ಸ್ಟಾಪು. ಮಾಹಿತಿ ಬಿಡಿ ಏನಾದರೂ ಕೇಳೋಣ ಎಂದರೂ ಒಬ್ಬೇಒಬ್ಬ ವ್ಯಕ್ತಿ ಕಾಣದ ಜಾಗ ಅದು. ಅಂತೂ ಇಂತೂ ಅನಾಲ್ಯಾದ ಮಾಹಿತಿ ಪಡೆದು ಹೊರಡಲು ಬಸ್ ಪತ್ತೆ ಮಾಡಿಕೊಂಡು ನಿಂತರೆ, ಅಲ್ಲಿ ಗಂಟೆಗೆ ನಲವತ್ತೇ ಸ್ಪೀಡ್ ಲಿಮಿಟ್ಟು ಎಂದು ಗೊತ್ತಾಗಿ ಅನಲ್ಯಾ ತಲುಪುವ ವಿಚಾರ ಕೈ ಬಿಟ್ಟು, ಮೂರ್ನಾಲ್ಕು ತಾಸಿನಿಂದ ನಗರ ಸುತ್ತಿ ಬಸವಳಿದ ಹೊಡೆತಕ್ಕೆ ಮೊದಲು ಒಂದೆಡೆ ಕೂತು ಚಹಾ ಕುಡಿದು, ಊಟ ತಿಂದಿದ್ದಾಯ್ತು.
ಆಮೇಲೆ ನೆಟ್ನಲ್ಲಿ ಹುಡುಕಿ ಕೊನ್ಯಾಲ್ತಿ ಮತ್ತು ಕಲೇಸಿಯಾದಂತಹ ಏರಿಯಾ ತಲುಪುವ ಬಸ್ ನಂಬರ್ ಬಿಎನ್117 ನೋಡಿಕೊಂಡು ಅದನ್ನು ಹಿಡಿಯಲು ಅರ್ಧ ಕಿ.ಮೀ. ದೂರದ ಬಸ್ಸ್ಟಾಪ್ ಹತ್ತಿಕೊಂಡು ಹೊರಟರೆ ಸಂಜೆಯ ರಂಗಿಗೆ ಅಂಟಾಲ್ಯಾ ನಗರ ತೆರೆದುಕೊಳ್ಳುವ ರೀತಿಯೇ ಬೇರೆ. ಪ್ರತಿ ಬಾರ್ ಆಂಡ್ ರೆಸ್ಟುರಾಗಳು ಇಲ್ಲಿ ಕಲರ್ಫುಲ್. ಜೋಡಿಗಳು ಅದೆಲ್ಲಿಂದ ಹಕ್ಕಿಗಳಂತೆ ಉದುರುತ್ತವೆಯೋ ಗೊತ್ತೇ ಆಗುವುದಿಲ್ಲ. ಸಂಸಾರಿಗಳಿಗಿಲ್ಲ ಜಾಗವಿಲ್ಲ. ಏನಿದ್ದರೂ ಬರಿದಾದ ಹಾರು ಹೊಡೆದ ಬಾವಲಿಯಂತೆ ಢಾಳಾಗಿ ತೆರೆದೆದೆಯ ಕೆಳಗೆ ಮುಕ್ಕಾಲು ಭಾಗ ತೆರೆದೆ ಇರುವ ಸೊಂಟದ ಮೇಲೆ ಕೈಯ್ಯಾಡಿಸುತ್ತ ತೆಕ್ಕೆಗೆ ತೆಗೆದುಕೊಂಡು ನಡೆಯುತ್ತಿರುವ, ಕೂರುವ, ಅಲ್ಲಲ್ಲೆ ಚುಟುಕು ರೋಮಾನ್ಸ್ ಮಾಡುವವರಿಗೆ ಪ್ರಾಶಸ್ತ್ಯ. ಜಗತ್ತಿನ ರೊಮ್ಯಾಂಟಿಕ್ ಎನ್ನುವ ಅಭಿದಾನಕ್ಕೆ ಟಾಪ್ 5ರಲ್ಲಿ ಅಂಟಾಲ್ಯಾ ಜಾಗ ಗಿಟ್ಟಿಸಿರುವುದೇ ಇದರಿಂದ.
ತೀರಾ ವೈಬ್ರಾಂಟ್ ಅಂಟಾಲ್ಯದ ರಂಗಿನ ರಾತ್ರಿಗಳ ಆರ್ಭಟವೇ ಬೇರೆ. ಅದರಲ್ಲೂ ನಾನು ಕುಳಿತಿದ್ದುದು ರೋಸ್ ಶಿಶಾ ಕೇಂದ್ರದಲ್ಲಿ. ಅದರ ಪಕ್ಕದಲ್ಲೇ ಕ್ಲಿಯೋಪಾತ್ರ. ಹೊರಭಾಗದಲ್ಲಿ ದೊಡ್ಡ ಗಾರ್ಡನ್ ರೋಸ್ ಪ್ಲೆವರ್. ಅದರಲ್ಲಿ ಅಲ್ಲಲ್ಲಿ ಜೋಡಿಗಳು ಕುಳಿತು ಒಂದು ಕೈಯ್ಯಲ್ಲಿ ಬಿಯರು, ಮತ್ತೊಂದು ಕೈಯಲ್ಲಿ ಆಕರ್ಷಕ ಶಿಶಾ ಪೈಪು ಹಿಡಿದು ಎಳೆಯುತ್ತ ಕೂತು ಆಗೀಗ ಜತೆಗಿದ್ದವ ಕೀಟಲೆ ಮಾಡುತ್ತಿದ್ದರೂ ಮರೆಯದೆ ಅಲ್ಲಲ್ಲಿ ಅಳವಡಿಸಿದ್ದ ಟಿ.ವಿ. ಪರದೆ ಮೇಲೆ ಕಣ್ಣಾಡಿಸುತ್ತ ಸಮಯಕ್ಕೆ ತಲೆ ತಿರುಗಿಸುತ್ತಿದ್ದರು. ಆ ದಿನ ಫೈನಲ್ ಫುಟ್ಬಾಲ್ ಆಟದ ದಿನ ಬೇರೆ. ಜಗತ್ತೇ ಆ ಆಟಕ್ಕೆ ಸಾಕ್ಷಿಯಾಗಲು ಕಾಯ್ದಿತ್ತಲ್ಲ. ಮೊದಲೇ ಇಷ್ಟಗಲ ಬಾಯ್ದೆರೆದು ನಿಲ್ಲುವ ನಗರಿಗೆ ಆವತ್ತು ದೊಡ್ಡ ಹಬ್ಬ.
ಎಲ್ಲೆಲ್ಲೂ ಕಲರ್ಫುಲ್ ಪಾರದರ್ಶಕ ಹುಕ್ಕಾಗಳದ್ದೆ ಸಂತೆ. ರುಚಿಕರವಾದ ಮತ್ತು ಅತಿ ಹೆಚ್ಚು ಹುಕ್ಕಾ ವೆರೈಟಿಗಳು ಸಿಗುವುದೇ ಇಲ್ಲಿಯೇ. ಹತ್ತಾರು ಮಾದರಿಯ ರುಚಿಶುಚಿ ಶಿಶಾಗಳನ್ನು ಡಿಸೈನ್ ನೋಡಿಯೇ ಒಮ್ಮೆಯಾದರೂ ಎಳೆದು ಬಿಡೋಣ ಎನ್ನಿಸಬೇಕು ಹಾಗಿರುತ್ತವೆ. ಪ್ರತಿಯೊಂದು ಶಿಶಾ ಏನಿಲ್ಲವೆಂದರೂ ಎರಡು ತಾಸು ಸಮಯದವರೆಗೂ ಬಾಳಿಕೆಯಾಗಬಲ್ಲ ಅಗಾಧ ಸೈಜಿನ ಬಕೆಟ್ ಹೊಂದಿರುತ್ತವೆ. ಬಹುಶಃ ಇಲ್ಲಿನಷ್ಟು ಉತ್ತಮ ಸೈಜಿನ ಮತ್ತು ಬಾಳಿಕೆ ಬರುವ ಶಿಶಾ ಬೇರೆ ಎಲ್ಲೂ ನಾನು ಕಂಡಿಲ್ಲ. ಅದರಲ್ಲೂ ಸ್ಯಾಂಡಲ್ ರೋಸ್ ಮತ್ತು ಲೈಟ್ಕಾರ್ಡ್ ಮಮ್ ಲೇಡಿ ನೈಂಟಿಗೇಲ್, ಕಾಟನ್ ವರ್ಡ್ ಎನ್ನುವ ಪ್ಯೂರ್ವೆಜ್ ಹುಕ್ಕಾಗಳ ಫ್ಲೇವರ್ರೇ ಅದ್ಭುತ. ಅದರಲ್ಲೂ ಅದೆಲ್ಲೂ ಯಾವ ರೀತಿಯಲ್ಲೂ ಟೆಕ್ನಿಕಲ್ ಪ್ರೊಸೀಜರು ಬೈಪಾಸ್ ಮಾಡುತ್ತಿಲ್ಲ ಎಂದು ಖಾತರಿಯ ಸಲುವಾಗಿ ಸಂಪೂರ್ಣ ಗಾಜಿನ ಬುಡದ ಶಿಶಾದಲ್ಲಿ ಅಲೆ ಅಲೆಯಾಗಿ ಹೊಗೆ ಕದಲುತ್ತಿದ್ದರೆ, ಊರಗಲದ ರಿಂಗುಗಳನ್ನು ಸೃಷ್ಟಿಸುತ್ತ, ಹಾಗೆ ಹೊರದಬ್ಬಿದ ರಿಂಗಿಗೆ ಮತ್ತೊಂದು ರಿಂಗನ್ನು ಸೇರಿಸುವ ಕಲಾತ್ಮಕತೆಗೆ ಹೆಚ್ಚಿನ ಮೆರುಗು ಮತ್ತು ಇನ್ನಿಷ್ಟು ಕ್ರಿಯೆಟಿವಿಟಿ ಏನಾದರೂ ಸಿಕ್ಕಿದರೆ ಅದು ಅಂಟಾಲ್ಯಾ ಶಿಶಾ ಬಾರ್ಗಳಲ್ಲಿ.
ಇನ್ನಿಷ್ಟು ರಂಗುರಂಗಿನ ಕಹಾನಿ ಇಲ್ಲಿ ಉತ್ಪನ್ನವಾಗುವುದರಲ್ಲಿ ಸಂಶಯವೇ ಇಲ್ಲ. ಅಪರೂಪದ ಧೂಪದ ವಾಸನೆಯ, ಮಲ್ಲಿಗೆಯ ಕಂಪಿನ, ಗುಲಾಬಿ ಪರಿಮಳದ ಹೀಗೆ ಹತ್ತು ಹಲವು ರೋಮಾಂಚನಗೊಳಿಸಬಲ್ಲ ಅರೆ ಬಿಸಿಯ ಹಬೆಯ ಶಿಶಾಗೆೆಂದೆ ಬರುವ ಹೆಣ್ಣುಗಳ ಹರಿವಿನ ಲಯವನೊಮ್ಮೆ ಇಲ್ಲಿ ನೋಡಬೇಕು. ಅದು ಅಂಟಾಲ್ಯಾದ ಖಾಸಿಯತ್ತು ಕೂಡ. ಕಾರಣ ರಾತ್ರಿ ಹನ್ನೆರಡು, ಒಂದು ಗಂಟೆಯಾದರೂ ಈ ಸ್ಥಳದಿಂದ ಬಸ್ಸಿನ ಸೌಲಭ್ಯ ಎಲ್ಲ ಮೂಲೆಗೆ ಮೂಲೆಗೆ ಇರಿಸಿರುವ ಆಡಳಿತ ವ್ಯವಸ್ಥೆ ಅಲ್ಲಲ್ಲಿ ಪೊಲೀಸ್ರನ್ನು ಕುಳ್ಳಿರಿಸಿ ಪ್ರವಾಸಿಗರಿಗೆ ರಕ್ಷಣೆ ಒದಗಿಸಿದೆ. ಅಪರಾತ್ರಿಯ ಒಂದು ಗಂಟೆ ಹೊತ್ತಲ್ಲಿ ಬಸ್ ಇದೆಯಾ ಎಂದು ನೋಡಿದರೆ ಸರಿಯಾಗಿ ಒಂದೂ ಹದಿನೈದಕ್ಕೆ ನಾನಿದ್ದ ಬಾರ್ನಿಂದ ಸುಮಾರು ಎಂಟು ನಿಮಿಷದ ನಡಿಗೆಯಲ್ಲಿ ಸ್ಟಾಪ್ ತಲುಪಬಹುದಿತ್ತು. ಸಣ್ಣಗೆ ಮಳೆ ಹಣಿಯಲು ಆರಂಭಿಸಿದ್ದು ಚಳಿ ಏರುತ್ತಿತ್ತು. ಕಣ್ ಕೊರೈಸುವ ಲೈಟುಗಳ ಸಾಲು ಸಾಲು ದೀಪದ ಮಧ್ಯೆ ಅಲ್ಲಲಿ ಜನರ ಓಡಾಟ, ಕಾರುಗಳ ಭರಾಟೆ. ಎಷ್ಟು ಹೊತ್ತಿಗೆ ಬಂದರೂ ಬಾಗಿಲು ಹಾಕದ ಅಂಟಾಲ್ಯಾ ಅಕ್ಷರಕ್ಕೆ ದಕ್ಕುವ ಮಾದಕ ನಗರಿಯಲ್ಲ. ನೋಡುತ್ತಿದ್ದರೆ ವಾರ ಸಾಲುವುದಿಲ್ಲ.
(ಲೇಖಕರು ಕತೆ, ಕಾದಂಬರಿಕಾರರು)
ವಿಶ್ವ ಪ್ರವಾಸೋದ್ಯಮ ದಿನವನ್ನು ಮೊದಲ ಬಾರಿಗೆ 1980ರಲ್ಲಿ ಆಚರಿಸಲಾಯಿತು. ಇದನ್ನು ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಸ್ಥೆ (ಖಿಘಗಖಣ) ಪ್ರಾರಂಭಿಸಿತು. ಈ ವಿಶೇಷ ದಿನವನ್ನು ಆಚರಿಸಲು ಸೆಪ್ಟೆಂಬರ್ 27ರ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ವಿಶ್ವ ವ್ಯಾಪಾರ ಸಂಸ್ಥೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮದ ಮಹತ್ವವನ್ನು ಎತ್ತಿ ತೋರಿಸುವುದು ವಿಶ್ವ ಪ್ರವಾಸೋದ್ಯಮ ದಿನದ ಪ್ರಾಥಮಿಕ ಉದ್ದೇಶವಾಗಿದೆ. ಅಂತರಾಷ್ಟ್ರೀಯ ಸಮುದಾಯದೊಳಗೆ ಪ್ರವಾಸೋದ್ಯಮದ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯಗಳ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪ್ರದರ್ಶಿಸುವುದು ಈ ದಿನದ ಉದ್ದೇಶವಾಗಿದೆ.
ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ.ಒಟ್ಟು ದೇಶೀಯ ಉತ್ಪಾದನೆಗೆ (ಜಿಡಿಪಿ), ಅಂದರೆ ದೇಶದ ಆರ್ಥಿಕತೆ ಇದರ ಕೊಡುಗೆ ಶೇಕಡ 6ಕ್ಕಿಂತ ಅಧಿಕ ಎಂಬುದು ಇದರ ಮಹತ್ವವನ್ನು ಸೂಚಿಸುತ್ತದೆ. ದೇಶದಲ್ಲಿ ಶೇಕಡ 8ಕ್ಕಿಂತ ಅಧಿಕ ಉದ್ಯೋಗಾವಕಾಶಗಳ ಸೃಷ್ಟಿಗೂ ಈ ವಲಯ ಕಾರಣವಾಗಿದೆ. ಕರ್ನಾಟಕದ ಒಟ್ಟು ಆರ್ಥಿಕತೆಗೆ ಪ್ರವಾಸೋದ್ಯಮ ವಯಲವು ಶೇಕಡ 14ರಷ್ಟು ಕೊಡುಗೆ ನೀಡುತ್ತಿರುವುದು ಹಾಗೂ ಇದರಿಂದ 30 ಲಕ್ಷಕ್ಕೂ ಅಧಿಕ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿರುವುದು ಮಹತ್ವದ ಸಂಗತಿಯಾಗಿದೆ. ಪ್ರವಾಸವೆಂದರೆ ಬರೀ ಐತಿಹಾಸಿಕ, ಪ್ರೇಕ್ಷಣಿಯ ಸ್ಥಳಗಳಿಗಷ್ಟೇ ಭೇಟಿ ನೀಡುವುದಲ್ಲ. ಕ್ಷೇತ್ರ ಈಗ ಪರಿಸರ, ಕೃಷಿ, ಧಾರ್ವಿುಕ, ಬಾಹ್ಯಾಕಾಶ, ವೈದ್ಯಕೀಯ, ಸಿನಿಮಾ, ಆಳಸಾಗರ ಪ್ರವಾಸೋದ್ಯಮ ಸೇರಿ ನಾನಾ ಮಜಲುಗಳಾಗಿ ವಿಸ್ತರಿಸಿಕೊಂಡಿದೆ. ಕರ್ನಾಟಕದಲ್ಲಿಯೂ ಕಡಲತೀರ, ದಟ್ಟ ಅರಣ್ಯ ಪ್ರದೇಶ, ವೈವಿಧ್ಯಮಯ ವನ್ಯಜೀವಿ, ನಿಸರ್ಗಧಾಮಗಳು, ಐತಿಹಾಸಿಕ ಸ್ಮಾರಕಗಳು, ಶಿಲ್ಪಕಲೆ, ಸಾಂಸ್ಕೃತಿಕ- ಧಾರ್ವಿುಕ ಹಿರಿಮೆಯುಳ್ಳ ಅತ್ಯಧಿಕ ಪ್ರವಾಸಿತಾಣಗಳಿವೆ.