ಗಾಝಾ ಕದನಗತ್ತಲ ಸುರಂಗದಂಚಿನಲ್ಲಿ ಶಾಂತಿಬೆಳಕು

ವಿಜಯವಾಣಿ (3)
Published on
ಮಹಾಶಕ್ತಿ ಅಮೆರಿಕದ ಅಧ್ಯಕ್ಷರಾಗಿ (2017-21ರಲ್ಲಿ) ಡೊನಾಲ್ಡ್ ಟ್ರಂಪ್ ಅವರ ಒಂದು ಮಹತ್ವದ ದಾಖಲೆ ಇದೆ. ಅದೆಂದರೆ ದ್ವಿತೀಯ ಜಾಗತಿಕ ಸಮರಾನಂತರ ಹೊಸದೊಂದು ಯುದ್ಧವನ್ನು ಆರಂಭಿಸದ ಏಕೈಕ ಅಧ್ಯಕ್ಷ ಎಂದು. ಇದಕ್ಕೆ ಪೂರಕವಾಗಿ ಕಾಣುವ ಇನ್ನೆರಡು ದಾಖಲೆಗಳೆಂದರೆ ಬರಾಕ್ ಒಬಾಮರ ನೀತಿಗಳಿಂದಾಗಿ ತಲೆಯೆತ್ತುವ ಅವಕಾಶ ಪಡೆದು, ಪಶ್ಚಿಮ ಏಷ್ಯಾವನ್ನು ಅತಿ ಘೊರ ಮತಾಂಧತೆ, ಕರಾಳ ರಕ್ತಪಾತ ಮತ್ತು ವಿನಾಶದತ್ತ ವೇಗವಾಗಿ ಕೊಂಡೊಯ್ಯತೊಡಗಿದ್ದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ (ಐಎಸ್​ಐಎಸ್, ಐಸಿಸ್) ಅನ್ನು ತಾವು ಅಧಿಕಾರಕ್ಕೆ ಬಂದ ತಿಂಗಳೊಳಗೆ ನಿಗ್ರಹಿಸಿದ್ದು ಮತ್ತು 2001ರ ಅಕ್ಟೋಬರ್​ನಿಂದ ಅವ್ಯಾಹತವಾಗಿ ನಡೆಯುತ್ತ ಬಂದಿದ್ದ ಅಫ್ಘನ್ ಯುದ್ಧವನ್ನು ನಿಲುಗಡೆಗೆ ತರುವ ಒಪ್ಪಂದವನ್ನು 2020ರ ಫೆಬ್ರವರಿಯಲ್ಲಿ ಮಾಡಿಕೊಂಡದ್ದು.

ಅಷ್ಟಕ್ಕೇ ನಿಲ್ಲದ ಟ್ರಂಪ್ ಅರಬ್ ರಾಷ್ಟ್ರಗಳು ಮತ್ತು ಇಸ್ರೇಲ್ ನಡುವೆ ಶಾಶ್ವತ ಶಾಂತಿ ಸ್ಥಾಪಿಸುವತ್ತಲೂ ಮನಸ್ಸು ಮಾಡಿದರು. ಪ್ರಮುಖ ಅರಬ್ ರಾಷ್ಟ್ರಗಳಾದ ಯುಎಇ ಮತ್ತು ಬಹರೈನ್ ಹಾಗೂ ಇಸ್ರೇಲ್ ನಡುವೆ ಮಧ್ಯಸ್ಥಿಕೆ ವಹಿಸಿ ಆ ಮೂರೂ ದೇಶಗಳು ಅಬ್ರಹಾಂ ಒಪ್ಪಂದಕ್ಕೆ ಸಹಿಹಾಕುವಂತೆ ಮಾಡಿದ್ದು ಟ್ರಂಪ್​ರ ಐತಿಹಾಸಿಕ ಸಾಧನೆ. ಅಬ್ರಹಾಂ ಒಪ್ಪಂದಕ್ಕೆ ಅರಬ್ ಹಾಗೂ ಮುಸ್ಲಿಂ ಜಗತ್ತಿನ ನಾಯಕ ಸೌದಿ ಅರೇಬಿಯಾದ ಸಹಮತಿ ಮತ್ತು ಬೆಂಬಲವಿತ್ತು ಎನ್ನುವುದು ಗಮನಿಸಬೇಕಾದ ಅಂಶ. ಹಳೆಯ ಯುದ್ಧಗಳನ್ನು ನಿಲುಗಡೆಗೆ ತರುವ, ಹೊಸ ಯುದ್ಧಗಳನ್ನು ಆರಂಭಿಸದ, ಪರಂಪರಾಗತ ಶತ್ರುಗಳ ನಡುವೆ ಶಾಂತಿ ಸ್ಥಾಪಿಸುವ ಧನಾತ್ಮಕ ಕೃತ್ಯಗಳಿಗಾಗಿ ಟ್ರಂಪ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಿಶ್ಚಯವಾಗಿಯೂ ಅರ್ಹ ವ್ಯಕ್ತಿ.

ಆದರೆ ಅವರಂತಹವರಿಗೆ ಪ್ರಶಸ್ತಿಗಳು ಸಿಗುವುದಿಲ್ಲ. ಅದು ಸಿಗುವುದೇನಿದ್ದರೂ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲಿ ಅದ್ಯಾವ ಸಾಧನೆಗೆಂದು ಸ್ಪಷ್ಟವಿಲ್ಲದೇ ಸಿಕ್ಕಿದ ಶಾಂತಿ ಪುರಸ್ಕಾರವನ್ನು ಕೈಯಲ್ಲಿ ಹಿಡಿದುಕೊಂಡೇ ಹಸ್ತಕ್ಷೇಪ, ದಾಳಿ ಮತ್ತು ಯುದ್ಧಗಳ ಸರಣಿಯನ್ನಾರಂಭಿಸಿ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಆರು ದೇಶಗಳನ್ನು ಅರಾಜಕತೆ, ಅಸ್ಥಿರತೆ ಮತ್ತು ವಿನಾಶಗಳೆಡೆಗೆ ದೂಡಿದ ಬರಾಕ್ ಒಬಾಮ ಅವರಂತಹವರಿಗೆ. ಅಂತಹ ಮಾನವ-ವಿರೋಧಿ ಹರಕತ್​ಗಳನ್ನು ಮಾಡಲೆಂದೇ ಅವರಿಗೆ ಪ್ರಶಸ್ತಿ ಕೊಟ್ಟಿರಬೇಕು. ಅಂತಹದೇನನ್ನೂ ಮಾಡಲಿಲ್ಲದ್ದಕ್ಕೇ ಟ್ರಂಪ್​ಗೆ ಪ್ರಶಸ್ತಿ ಸಿಗದೇಹೊಗಿರಬೇಕು. ಪ್ರಶಸ್ತಿಗಳ ಹಿಂದಿನ ರಾಜಕೀಯದ ಎರಡು ಪರಸ್ಪರ ವಿರೋಧಿ ಮುಖಗಳಿಗೆ ಒಬಾಮ ಮತ್ತು ಟ್ರಂಪ್ ಉದಾಹರಣೆಗಳಾಗಿ ನಮ್ಮ ಮುಂದೆ ನಿಂತಿದ್ದಾರೆ.

ಅತ್ತ ಆಗ್ನೇಯ ಯೂರೋಪ್ ಬಗೆಗೂ ಟ್ರಂಪ್​ರ ನೀತಿಗಳು ಶಾಂತಿಯ ಪರವಾಗಿಯೇ ಇದ್ದವು. ರಷ್ಯಾಗೆ ವಿರುದ್ಧವಾಗಿ ಪಶ್ಚಿಮದ ನ್ಯಾಟೋ ಸೇನಾಕೂಟಕ್ಕೆ ಸೇರುವ ಯೂಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆನ್​ಸ್ಕಿಯವರ ಹುಚ್ಚು ಬಯಕೆಗೆ ಟ್ರಂಪ್ ಸೊಪ್ಪುಹಾಕಲಿಲ್ಲ. ನ್ಯಾಟೋ ಗಡಿಯನ್ನು ರಷ್ಯಾದ ಮೃದುಹೊಟ್ಟೆಯ ಕೆಳಕ್ಕೇ ಕೊಂಡೊಯ್ಯುವುದು ಆ ಮಹಾಶಕ್ತಿಯನ್ನು ಕೆರಳಿಸುತ್ತದೆ ಮತ್ತು ಅದರಿಂದಾಗಿ ಯೂರೋಪ್ ಅಶಾಂತಿ ಮತ್ತು ಅಭದ್ರತೆಯನ್ನು ಅನುಭವಿಸಬೇಕಾಗುತ್ತದೆ ಎಂದು ಟ್ರಂಪ್ ಸರಿಯಾಗಿಯೇ ತರ್ಕಿಸಿದ್ದು ಮತ್ತು ಅಂತಹದೇನೂ ಆಗದಂತೆ ನೋಡಿಕೊಳ್ಳುವುದು ಅಮೆರಿಕದ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಎಂದೂ ಅರಿತಿದ್ದರು.

ಟ್ರಂಪ್​ರ ಯುದ್ಧವಿರೋಧಿ ಮತ್ತು ಶಾಂತಿಪರ ನಡೆಗಳು ಮಾನವಕುಲವನ್ನು ಒಳ್ಳೆಯ ದಾರಿಯತ್ತ ಕೊಂಡೊಯ್ಯತೊಡಗಿದವೇನೋ ನಿಜ. ಆದರೆ ಹೀಗೆ ಯುದ್ಧಗಳೆಲ್ಲ ನಿಂತುಹೋಗಿ, ಹೊಸ ಯುದ್ಧಗಳೂ ಆರಂಭವಾಗದೇಹೋದರೆ ಶಸ್ತ್ರಾಸ್ತ್ರಗಳ ಮಾರಾಟದಿಂದಲೇ ಬದುಕುವ ಅದೇ ಅಮೆರಿಕದ ಮಿಲಿಟರಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್​ನ ಗತಿಯೇನು? ಅವುಗಳ ಲಾಭಕೋರತನ ಎಗ್ಗಿಲ್ಲದೆ ಮುಂದುವರಿಯುವುದಾದರೂ ಹೇಗೆ? ಅಧ್ಯಕ್ಷರ ಹಿಂದೆ ನಿಂತು ಸದಾ ಅವರ ಕೈ ತಿರುಚುತ್ತ ತಮಗೆ ಅನುಕೂಲಕರವಾದ ನೀತಿಗಳನ್ನು ಶ್ವೇತಭವನ ಜಾರಿಗೆ ತರುವಂತೆ ಮಾಡುವ ‘ಡೀಪ್​ಸ್ಟೇಟ್’ ಅಂದರೆ ‘ಸರ್ಕಾರ ಹಿಂದಿನ ಸರ್ಕಾರ’ದ ಪ್ರಮುಖ ಅಂಗವಾದ ‘ಆರ್ಮಸ್ ಲಾಬಿ’ ತೆರೆಯ ಹಿಂದೆಯೇ ಕುಟಿಲ ಕಾರಸ್ಥಾನಗಳನ್ನು ರಚಿಸಿದ್ದರಿಂದಾಗಿ ಟ್ರಂಪ್ ನಾಲ್ಕು ವರ್ಷಗಳ ಹಿಂದೆ ಶ್ವೇತಭವನವನ್ನು ತೊರೆಯಬೇಕಾಯಿತು.

ಆಮೇಲೆ ಜೊ ಬೈಡೆನ್ ಎಂಬ ಡೀಪ್​ಸ್ಟೇಟ್ ಕೈಗೊಂಬೆ ಅಧಿಕಾರಕ್ಕೆ ಬಂದ ಮೇಲೆ ಏನಾಗುತ್ತಿದೆಯೆನ್ನುವುದನ್ನು ನಾವು ನೋಡುತ್ತಲೇ ಇದ್ದೇವೆ. ಪಶ್ಚಿಮದ ಸೇನಾಕೂಟ ನ್ಯಾಟೋಗೆ ಸೇರುವ ಕನಸನ್ನು ಯೂಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಅವರಲ್ಲಿ ಬಿತ್ತಿ, ಆ ಮೂಲಕ ರಷ್ಯಾದ ಅಧ್ಯಕ್ಷ ಪುತಿನ್ ಅವರನ್ನು ಕೆರಳಿಸಿ ಅವರು ಯೂಕ್ರೇನ್ ಮೇಲೆ ಯುದ್ಧ ಆರಂಭಿಸುವಂತೆ ಪ್ರಚೋದಿಸಿದ್ದು ಬೈಡೆನ್ ಸಾಧನೆ. ಅವರ ಸರ್ಕಾರ ಯೂಕ್ರೇನ್​ಗೆ ಇದುವರೆಗೆ 174 ಬಿಲಿಯನ್ ಡಾಲರ್ ಸೇನಾ ನೆರವು ನೀಡಿದೆ. ಅದಕ್ಕನುಗುಣವಾಗಿ 2021ರ ಅಂತ್ಯದಿಂದೀಚೆಗೆ ಯೂಕ್ರೇನ್​ಗೆ ಅಮೆರಿಕ ಎಪ್ಪತ್ತು ಬಾರಿ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ! ಇದರರ್ಥ ಬೈಡೆನ್ ಆಡಳಿತ ಹಣವೆಲ್ಲವೂ ಅಮೆರಿಕದ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಿಗೇ ಹಿಂತಿರುಗಿ ಬಂದಿದೆ.! ಅದರ ಜತೆಗೆ ಯೂರೋಪಿಯನ್ ರಾಷ್ಟ್ರಗಳು ಯೂಕ್ರೇನ್​ಗೆ ನೀಡಿದ 132 ಬಿಲಿಯನ್ ಡಾಲರ್​ಗಳ ಸೇನಾ ನೆರವಿನ ಬಹುಭಾಗವೂ ಅಮೆರಿಕದ ಆರ್ಮ್ಸ್​ ಲಾಬಿಯ ಕೈಗೇ ಬಿದ್ದಿದೆ.

ರಷ್ಯಾ-ಯೂಕ್ರೇನ್ ಯುದ್ಧ ಆರಂಭವಾದಾಗ ಗೋಧಿ ಮತ್ತು ಅಡುಗೆ ಎಣ್ಣೆಯ ಪೂರೈಕೆಯಲ್ಲಾದ ಇಳಿಕೆಯಿಂದ ಹಲವು ದೇಶಗಳು ಕಂಗೆಟ್ಟರೆ ಹರ್ಷದಿಂದ ಮುಖವರಳಿಸಿಕೊಂಡದ್ದು ಅಮೆರಿಕದ ಶಸ್ತ್ರಾಸ್ತ್ರ ತಯಾರಕರು; ಜಾಗತಿಕ ಷೇರುಮಾರುಕಟ್ಟೆ ಕುಸಿದರೆ ಮೌಲ್ಯವನ್ನು ಗಗನದೆತ್ತರಕ್ಕೆ ಏರಿಸಿಕೊಡದ್ದು ಶಸ್ತ್ರಾಸ್ತ್ರ ತಯಾರಿಕಾ ಕಂಪನಿಗಳ ಷೇರುಗಳು. ದೂರದ ಯಾರದೋ ಅಮಾಯಕರ ರಕ್ತವನ್ನು ತಮ್ಮ ಕೈಯಲ್ಲಿ ಝುಣಝುಣ ಹಣವನ್ನಾಗಿಸಿಕೊಳ್ಳುವುದನ್ನು ಈ ಮಾರಕಾಸ್ತ್ರ ತಯಾರಕರಿಂದ, ಅವರಿಗನುಕೂಲವಾದ ನೀತಿ ರೂಪಿಸುವ ಬೈಡೆನ್​ರಂತಹ ರಾಷ್ಟ್ರನಾಯಕರಿಂದ ಕಲಿಯಬೇಕು. ಈ ಮೇಲಿನ ವಿವರಗಳು ನಮಗೆ ಮನಗಾಣಿಸುವುದು ಟ್ರಂಪ್ ಮತ್ತು ಬೈಡೆನ್ ಹಿಡಿದ ಹಾದಿಗಳ ನಡುವಿನ ಅಗಾಧ ಅಂತರವನ್ನು ಹಾಗೂ ಅದರಿಂದಾಗಿ ಜಾಗತಿಕ ರಾಜಕಾರಣದ ಸ್ಥಿರತೆ ಮತ್ತು ವಿಶ್ವಶಾಂತಿಯ ಮೇಲಾದ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು. ಇವುಗಳನ್ನು ಯಾರಲ್ಲದಿದ್ದರೂ ಅಮೆರಿಕದ ಮತದಾರ ಇಂದು ಗುರುತಿಸಿದ್ದಾನೆ. ಪರಿಣಾಮವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಅಧ್ಯಕ್ಷರಾಗಿ ಶ್ವೇತಭವನ ಪ್ರವೇಶಿಸಲಿದ್ದಾರೆ.

ಆ ಹಾದಿಯಲ್ಲಿ ಅವರು ಇಂದು ಜಗತ್ತನ್ನು ಕಾಡುತ್ತಿರುವ ಯುದ್ಧಗಳನ್ನು ತುರ್ತಾಗಿ ನಿಲುಗಡೆಗೆ ತರುವ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ. ಅವರು ಹೇಳಿದಂತೇ ಮಾಡುವವರು ಎನ್ನುವುದು ಅವರ ಮೊದಲ ಅಧ್ಯಕ್ಷಾವಧಿಯಲ್ಲೇ ಜಗತ್ತಿಗೆ ಅರಿವಾಗಿದೆ. ಈ ಅರಿವು ಇಂದಿನ ಎರಡು ಸಮರಗಳಿಗೆ ‘ಸಂಬಂಧಪಟ್ಟವರ’ ಮೇಲೆ ಬೀರುತ್ತಿರುವ ಪರಿಣಾಮಗಳಂತೂ ಅಚ್ಚರಿ ಹುಟ್ಟಿಸುವ ಮಟ್ಟಿಗೆ ಪರಸ್ಪರ ವಿರುದ್ಧವಾಗಿವೆ. ಮೊದಲಿಗೆ ಪಶ್ಚಿಮ ಏಷ್ಯಾದ ಸಮರವನ್ನೇ ಗಮನಿಸೋಣ. 2006ರಿಂದಲೂ ಗಾಝಾದಲ್ಲಿ ಅಧಿಕಾರದಲ್ಲಿದ್ದ ಹಮಾಸ್ ಒಂದು ಉಗ್ರ ಭಯೋತ್ಪಾದಕ ಸಂಘಟನೆ ಎನ್ನುವುದು ಸರ್ವವಿದಿತ. ಆದರೆ ಅದಕ್ಕೊಂದು ರಾಜಕೀಯ ಕಚೇರಿಯ ‘ಅಗತ್ಯ’ವನ್ನು ಕಂಡು, ಅದನ್ನು ಒದಗಿಸುವಂತೆ ಕತಾರ್​ಗೆ ಹೇಳಿದ್ದು ಬರಾಕ್ ಒಬಾಮ ಆಡಳಿತ, 2012ರಲ್ಲಿ.

ಅದೇ ವರ್ಷ ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಸೇನೆ ಹಣಿಯಲು ಹೆಣಗುತ್ತಿದ್ದ ತಾಲಿಬಾನ್​ಗೂ ಒಂದು ರಾಜಕೀಯ ಕಚೇರಿ ತೆರೆಯುವ ಅವಕಾಶವನ್ನು ನೀಡುವಂತೆ ಅದೇ ಕತಾರ್​ಗೆ ಅದೇ ಒಬಾಮ ಆಡಳಿತ ಹೇಳಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅದರಂತೆ ಎರಡೂ ಮೂಲಭೂತವಾದಿ ಸಂಘಟನೆಗಳ ರಾಜಕೀಯ ಕಚೇರಿಗಳು ಕತಾರ್​ನ ರಾಜಧಾನಿ ದೋಹಾದಲ್ಲಿ, ಅಮೆರಿಕದ ಅಲ್ ಉದೇದ್ ವಾಯುನೆಲೆಗೆ ನಿಮಿಷಗಳ ಹಾದಿಯಷ್ಟು ಹತ್ತಿರದಲ್ಲೇ ತೆರೆಯಲ್ಪಟ್ಟವು. ಕತಾರ್ ಅರಬ್ ದೇಶವಾದರೂ ಅದರ ಪ್ರೀತಿ ಇರಾನ್​ನತ್ತ. ಇದು ಸೌದಿ ಅರೇಬಿಯಾ, ಯುಎಇ ಸೇರಿದಂತೆ ಸುತ್ತಲಿಗ ಅರಬ್ ರಾಷ್ಟ್ರಗಳಿಗೆ ಇಷ್ಟವಾಗದ ವಿಚಾರ. 2017ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಸಮಾವೇಶವೊಂದಕ್ಕೆ ಉತ್ತೇಜನ ನೀಡಿದರು. ಜಾಗತಿಕ ಹಾಗೂ ಪ್ರಾದೇಶಿಕ ಶಾಂತಿಗೆ ಒತ್ತುನೀಡುವ ಧ್ಯೇಯವನ್ನೊಳಗೊಂಡ ಆ ಸಮಾವೇಶ ಜರುಗಿದ್ದು 2017ರ ಮೇ 20ರಂದು. ಆದರೆ ಇರಾನ್​ನ ಮೂಲಭೂತವಾದಿ ನಾಯಕರನ್ನು ಹೊಗಳುವ ಹಾಗೂ ಅರಬ್ ನಾಯಕರನ್ನು ತೆಗಳುವ ಮಾತುಗಳನ್ನು ಕತಾರ್​ನ ಅರಸ (ಅಮೀರ್) ಶೇಖ್ ತಮೀಂ ಬಿನ್ ಹಮದ್ ಅಲ್ ತಾನಿ ಹೇಳಿದರೆಂದು ಸಮಾವೇಶವಾದ ಮೂರು ದಿನಕ್ಕೆ ಅಂದರೆ ಮೇ 23ರಂದು ರಾತ್ರಿ 11:35ಕ್ಕೆ ಕತಾರ್​ನ ಅಲ್ ಜಝೀರಾ ವಾರ್ತಾವಾಹಿನಿ ಪ್ರಸಾರಮಾಡಿತು.

ಇದರಿಂದಾಗಿ ಕುಪಿತಗೊಂಡ ಸುತ್ತಲಿನ ಅರಬ್ ದೇಶಗಳೆಲ್ಲವೂ ಕತಾರ್ ಜತೆಗಿನ ಸಂಬಂಧಗಳನ್ನು ಕಡಿದುಕೊಂಡವು. ಜತೆಗೆ ಕತಾರ್​ನ ಸರ್ಕಾರಿ ವಿಮಾನಯಾನ ಸಂಸ್ಥೆಯ ವಿಮಾನಗಳು ತಮ್ಮ ವಾಯುಪ್ರದೇಶವನ್ನು ಪ್ರವೇಶಿಸದಂತೆ ನಿರ್ಬಂಧವನ್ನೂ ಹೇರಿದವು. ಕಂಗೆಟ್ಟ ಕತಾರ್ ಸರ್ಕಾರ ಅಲ್ ಜಝೀರಾ ವರದಿ ನಕಲಿ ಎಂದು ಅದೆಷ್ಟೇ ಸಮಜಾಯಿಷಿ ನೀಡಿದರೂ ಅದನ್ನು ನಂಬಲು ಯಾರೂ ತಯಾರಿರಲಿಲ್ಲ. ಅದು ಸಹಜವೇ. ಕತಾರ್ ಸರ್ಕಾರದ ಹಣದಲ್ಲಿ ನಡೆಯುವ ಅಲ್ ಜಝೀರಾ ಮುಸ್ಲಿಮೇತರ ದೇಶಗಳಲ್ಲಿ ಮುಸ್ಲಿಮರ ‘ದಯನೀಯ’ ಸ್ಥಿತಿಯ ಕುರಿತಾಗಿ ಪುಂಖಾನುಪುಂಖ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದರೂ ಕತಾರ್​ನ ಸವೋಚ್ಚ ನಾಯಕನ ಕುರಿತಾಗಿ ನಕಲಿ ಸುದ್ದಿ ಪ್ರಸಾರ ಮಾಡುವುದು ಸಾಧ್ಯವೇ ಇಲ್ಲ.

ಅಂತಹ ಪ್ರತಿಕೂಲ ಸನ್ನಿವೇಶದಲ್ಲಿ ಕತಾರ್​ಗೆ ಸಹಾಯಹಸ್ತ ಚಾಚಿದ್ದು ಟ್ರಂಪ್. ಕುಪಿತ ಅರಬ್ ರಾಷ್ಟ್ರಗಳು ಮತ್ತು ಕತಾರ್ ನಡುವೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಪರಿಹಾರವನ್ನು ಟ್ರಂಪ್ ಸಾಧಿಸಿದರು. ಪರಿಣಾಮವಾಗಿ ಅರಬ್ ರಾಷ್ಟ್ರಗಳು ಕತಾರ್ ಅನ್ನು ಮತ್ತೆ ತಮ್ಮ ಗುಂಪಿಗೆ ಸೇರಿಸಿಕೊಂಡದ್ದಲ್ಲದೆ ಕತಾರ್ ವಿಮಾನಗಳ ಮೇಲೆ ಹೇರಿದ್ದ ವಾಯುನಿರ್ಬಂಧವನ್ನೂ ತೆಗೆದುಹಾಕಿದವು. ಹೀಗಾಗಿಯೇ 2022ರಲ್ಲಿ ವಿಶ್ವ ಫುಟ್​ಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಕತಾರ್​ಗೆ ಸಾಧ್ಯವಾದದ್ದು. ಟ್ರಂಪ್​ರ ಆ ಉಪಕಾರಕ್ಕೆ ಪ್ರತ್ಯುಪಕಾರ ಒದಗಿಸಲು ಇಂದು ಕತಾರ್ ತುದಿಗಾಲಲ್ಲಿ ನಿಂತಂತಿದೆ. ಟ್ರಂಪ್​ರ ಚುನಾವಣಾ ವಿಜಯದ ಘೊಷಣೆಯಾದ ಮೂರು ದಿನಗಳಲ್ಲಿ ತನ್ನ ರಾಜಕೀಯ ಕಚೇರಿಯನ್ನು ಬಂದ್ ಮಾಡುವಂತೆ ಹಮಾಸ್​ಗೆ ಕತಾರ್ ಅಪ್ಪಣೆ ನೀಡಿತು.

ಇಸ್ರೇಲ್ ಮೇಲೆ ಬರ್ಬರ ದಾಳಿಯ ಯೋಜನೆ ರೂಪಿಸಿ, ಇಸ್ರೇಲ್​ನ ಪ್ರತಿದಾಳಿಗೆ ಗಾಝಾದ ಅಮಾಯಕ ಜನರನ್ನು ಬಲಿಯಾಗಲು ಬಿಟ್ಟು ತಾವು ದೋಹಾದಲ್ಲಿ ಸುರಕ್ಷಿತ ಹಾಗೂ ಐಷಾರಾಮಿ ಬದುಕು ಸಾಗಿಸುತ್ತಿದ್ದ ಹಮಾಸ್ ನಾಯಕರನ್ನು ದೇಶ ಬಿಟ್ಟುಹೋಗುವಂತೆ ಕತಾರ್ ಹೇಳಿತು. ಹೀಗೆ ಮಾಡುವುದರ ಮೂಲಕ ಟ್ರಂಪ್​ರ ಕದನನಿಲುಗಡೆ ಕ್ರಮಕ್ಕೆ ತಾನು ಸಹಾಯ ಮಾಡುತ್ತಿರುವುದಾಗಿ ಕತಾರ್ ತಿಳಿದಿರಬಹುದು. ಆದರೆ ಅದನ್ನು ಮರೆಮಾಚಲು ಹಮಾಸ್ ಅನ್ನು ಉಚ್ಛಾಟಿಸುವ ನಿರ್ಧಾರವನ್ನು ಅಮೆರಿಕದ ಚುನಾವಣೆಗಳಿಗೆ ಎರಡು ವಾರಗಳಿಗೂ ಮುನ್ನವೇ ತಾನು ತೆಗೆದುಕೊಂಡಿರುವುದಾಗಿ ಕತಾರ್ ಸರ್ಕಾರ ಹೇಳಿಕೊಂಡಿತು. ಜತೆಗೆ ಬೈಡೆನ್​ರ ಮಾನ ಉಳಿಸುವ ಉದ್ದೇಶದಿಂದಲೋ ಏನೋ, ಹಮಾಸ್ ಕುರಿತ ನಿರ್ಧಾರದ ಹಿಂದೆ ಬೈಡೆನ್ ಆಡಳಿತದ ‘ಕೈ ಮತ್ತು ಬಾಯಿ’ ಸಹ ಇವೆ ಎಂದೂ ಹೇಳಿತು. ಸತ್ಯ ಏನೆಂಬುದು ಸ್ಪಷ್ಟವಾಗಬೇಕಷ್ಟೇ.

ಸರಿ, ಭಯೋತ್ಪಾದಕ ಹಮಾಸ್ ನಾಯಕರ ಹೊಸ ನೆಲೆ ಯಾವುದು? ವರದಿಗಳ ಪ್ರಕಾರ ಅವರಿಗೆ ಟರ್ಕಿಯೇ ಆಶ್ರಯ ನೀಡಿದೆಯಂತೆ. ಅಲ್ಲಿನ ಐಲುದೊರೆ ರೆಸೆಪ್ ತಯ್ಯಿಬ್ ಎದೋಗೇನ್ ಇಸ್ರೇಲ್​ನ ಕಟ್ಟಾ ವಿರೋಧಿ ಎನ್ನುವುದಂತೂ ಜಗಜ್ಜಾಹೀರು. ಹೀಗಾಗಿ ಆತ ಹಮಾಸ್​ಗೆ ಸಹಕಾರ ನೀಡುವುದು ಸಹಜವೇ. ಆದರೆ ಪ್ರಶ್ನೆಯೆಂದರೆ ಈ ಟರ್ಕಿಯೇ ಒಂದು ನ್ಯಾಟೋ ದೇಶ. ಅಮೆರಿಕ ನೇತೃತ್ವದ ಸೇನಾಕೂಟದ ಸದಸ್ಯರಾಷ್ಟ್ರವೊಂದು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಬೈಡೆನ್ ಆಡಳಿತ ಒಪ್ಪಿಕೊಳ್ಳುತ್ತದೆಯೇ? ಯಾವುದೇ ಕಾರಣದಿಂದ ಬೈಡೆನ್ ಸಮ್ಮತಿಸಿದ್ದರೆ ಟ್ರಂಪ್ ಅದನ್ನು ಮುಂದುವರಿಸುವರೇ? ಅದು ಅಸಂಭವ. ಸದ್ಯಕ್ಕೆ ಕತಾರ್​ನ ನಡವಳಿಕೆಯನ್ನಷ್ಟೇ ನಮ್ಮ ವಿಶ್ಲೇಷಣೆಗಾಗಿ ಪರಿಗಣಿಸುವುದಾದರೆ ಅದು ಟ್ರಂಪ್​ರ ನೀತಿಗೆ ಅನುಕೂಲಕರವಾಗಿದೆ ಎನ್ನುವುದನ್ನು ಗುರುತಿಸಬಹುದು. ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಬೈಡೆನ್ ಆಡಳಿತದ ನೀತಿ ಒತ್ತುಕೊಡುವುದು ಕದನವಿರಾಮಕ್ಕೆ.

ಇಸ್ರೇಲ್ ಅನ್ನು ಬೆಂಬಲಿಸುತ್ತಲೇ ಅದು ಹಮಾಸ್ ಅನ್ನೂ ಜೀವಂತವಾಗಿಟ್ಟುಕೊಳ್ಳುವುದಕ್ಕೆ ನೋಡುತ್ತದೆ. ಆದರೆ ಟ್ರಂಪ್​ರ ವಿಚಾರವೇ ಬೇರೆ. ಅವರು ಹೇಳುವುದು ಕದನಕ್ಕೆ ವಿರಾಮವೇನೂ ಬೇಡ, ಅದು ಪೂರ್ಣವಾಗಿ ನಿಲ್ಲಬೇಕು, ಶಾಂತಿಸ್ಥಾಪನೆ ಆಗಬೇಕು ಅಂತ. ಅದಕ್ಕಾಗಿ ಹಮಾಸ್​ನ ಸಂಪೂರ್ಣ ನಾಶ ಅವರಿಗೆ ಸಮ್ಮತ. ಇಸ್ರೇಲ್​ನ ಪ್ರಧಾನಮಂತ್ರಿ ಬೆಂಜಾಮಿನ್ ನೇತನ್ಯಾಹು ಅವರ ಲೆಕ್ಕಾಚಾರವೂ ಅದೇ. ಹೀಗಾಗಿ ಟ್ರಂಪ್ ಆಡಳಿತಾವಧಿಯಲ್ಲಿ ವಾಷಿಂಗ್​ಟನ್ ಮತ್ತು ತೆಲ್ ಅವೀವ್ ನಡುವೆ ಹೆಚ್ಚಿನ ಸಹಮತ, ಸಂಯೋಜನೆ ಇರುತ್ತದೆ. ಅದು ಗಾಝಾದಲ್ಲಿ ರಕ್ತಪಾತ ನಿಲ್ಲಲು ಸಹಾಯಕ. ಈಗ ತಾನಿರುವ ಸ್ಥಿತಿಯಲ್ಲಿ ಹಮಾಸ್ ಅದನ್ನು ಒಪ್ಪಿಕೊಳ್ಳದೇ ಇರಲಾರದು. ಈ ಸ್ಥಿತಿಯಲ್ಲಿ ಸದ್ಯಕ್ಕೆ ಅತಿ ಋಣಾತ್ಮಕವಾಗಿ ವರ್ತಿಸುತ್ತಿರುವುದು ಹೆಜ್ಬೊಲ್ಲಾ. ಆದರೆ ಅದು ಮತ್ತದರ ಹಿಂದಿರುವ ಇರಾನ್ ಬಗೆಗೂ ಟ್ರಂಪ್ ಕಠಿಣ ನೀತಿಯನ್ನೇ ಅನುಸರಿಸುತ್ತಾರೆ. ಹೀಗಾಗಿ ಇಸ್ರೇಲ್​ನ ಉತ್ತರದಲ್ಲೂ ನಿಧಾನವಾಗಿಯಾದರೂ ಶಾಂತಿ ಉಂಟಾಗುತ್ತದೆ.

ಹೀಗೆ ಪಶ್ಚಿಮ ಏಷ್ಯಾದ ಕತ್ತಲ ಸುರಂಗದಂಚಿನಲ್ಲಿ ಶಾಂತಿಯ ಬೆಳಕು ಗೋಚರಿಸುತ್ತಿದ್ದರೆ ಆಗ್ನೇಯ ಯೂರೋಪ್​ನಲ್ಲಿ ಸಮರಾಗ್ನಿಯ ತಾಂಡವ ತಾರಾಮಾರು ಏರುತ್ತಿದೆ. ಮತ್ತದನ್ನು ನಂದಿಸುವ ಶಕ್ತಿಯನ್ನು ಟ್ರಂಪ್ ಅವರಿಂದ ಕಿತ್ತುಕೊಳ್ಳುವ ಪ್ರಯತ್ನವೂ ದೊಡ್ಡದಾಗಿ ಆರಂಭವಾಗಿದೆ. ಇದನ್ನು ಮುಂದಿನವಾರ ಲೇಖನದ ಎರಡನೆಯ ಹಾಗೂ ಅಂತಿಮ ಭಾಗದಲ್ಲಿ ವಿಶ್ಲೇಷಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net