

ಮೇಷ: ಶರದ್ರುತುವಿನ ಶಾರ್ವರಿನಾಮ ಸಂವತ್ಸರದ ನಿಜ ಆಶ್ವಿಜ ಶುದ್ಧ ಬಿದಿಗೆ ಚಂದ್ರನು ಉದಯಿಸುತ್ತಾನೆ. ಹಾಗೂ 17.10.2020ರಿಂದ ತುಲಾರಾಶಿಯಲ್ಲಿ ಸೂಯರ್åಸಂಚಾರ ಆರಂಭವಾಗಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಅಂತ್ಯ ಹಾಡುತ್ತಾನೆ. ಆದಿಪರಾಶಕ್ತಿಯನ್ನು ಆರಾಧಿಸಿ. ಷಣ್ಮುಖನನ್ನು ಭಜಿಸಿ, ಪೂಜಿಸಿ.
ವೃಷಭ: ವೃಷಭರಾಶಿಯ ಅಧಿಪತಿ ಶುಕ್ರನು 21.10.2020ರಂದು ಕನ್ಯಾರಾಶಿ ತಲುಪುವ ವೇಳೆ ಆರ್ಥಿಕ ಸಂಕಷ್ಟ, ಮನಸ್ಸು ಕೂಡ ಭಾರವಾಗುತ್ತದೆ. ಶುಕ್ರನು ಮುಂದೆ ಒಳ್ಳೆಯದನ್ನು ಮಾಡುತ್ತಾನೆ. ಒಂಬತ್ತರ ಶನಿ ನಿಮ್ಮನ್ನು ಕಾರ್ಯದೆಡೆಗೆ ಕೊಂಡೊಯ್ದು ಕೆಲವೊಂದು ಕೆಲಸ ಮಾಡಿಕೊಡುತ್ತಾನೆ. ಅನಂತ ಪದ್ಮನಾಭನನ್ನು ಪೂಜಿಸಿ.
ಮಿಥುನ: ರಾಶ್ಯಾಧಿಪತಿ ಬುಧನು ಸೂರ್ಯನ ಸಂಯೋಗದಲ್ಲಿ 17.10.2020ರಿಂದ ಇದ್ದುಕೊಂಡು ಕೆಲವು ಮಹತ್ಕಾರ್ಯಗಳನ್ನು ಮಾಡಿಸುತ್ತಾನೆ. ಧನದ ಕೊರತೆಯಿಂದ ಹೊರಬರಲು ಶ್ರೀ ಸೂಕ್ತ ಪಾರಾಯಣವನ್ನು ಮಾಡಿ. ಹಿರಿಯರಿಗೆ ಗೌರವದಿಂದ ನಡೆದುಕೊಳ್ಳಿ. ಶುಭವಾಗುತ್ತದೆ.
ಕಟಕ: ಆರನೇ ಗುರು ಹಾಗೂ ಸಪ್ತಮ ಶನಿಯು ವಿಶೇಷ ಫಲ ಕೊಡದಿದ್ದರೂ ಸುಖ, ನೆಮ್ಮದಿಯನ್ನು ಕಡಿಮೆ ಮಾಡುವುದಿಲ್ಲ. ಕೂಡಿಟ್ಟ ಹಣ ಕೈ ಸೇರದಿದ್ದರೂ, ಮಾಡಿದ ಪುಣ್ಯಕ್ಕೆ ಕೊರತೆಯಿರುವುದಿಲ್ಲ. ನ.20ರಿಂದ ಸಪ್ತಮದಲ್ಲಿ ಗುರು ಸಂಚಾರದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುತ್ತೀರ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
ಸಿಂಹ: ಸಿಂಹ ರಾಶಿಯ ಅಧಿಪತಿ ರವಿಯು ತುಲಾ ರಾಶಿಯಲ್ಲಿ ಬುಧನೊಂದಿಗೆ ಬಂದು ಸೇರಿ ಸ್ಪಷ್ಟತೆ, ಶುದ್ಧವಾದ ಬೆಳಕನ್ನು ನೀಡುತ್ತಾನೆ. ಮಾಡಿಟ್ಟ ಪುಣ್ಯವನ್ನು ಕೊಡುವುದು ದೇವರೊಬ್ಬನೇ. ಸೂರ್ಯನನ್ನು ಆರಾಧಿಸಿ. ಗ್ರಹಗಳು ಶುಭಾಂಶದಲ್ಲಿರುವುದರಿಂದ ಎಲ್ಲವೂ ಶುಭವೇ ಆಗುತ್ತದೆ.
ಕನ್ಯಾ: 20.11.2020ರಿಂದ ಕನ್ಯಾ ರಾಶಿಗೆ ಶುಕ್ರನು ಬಂದು, ಒಂಬತ್ತರ ರಾಹು ಸುಖ ಸೌಕರ್ಯ ಕೊಡುತ್ತಾನೆ. ಸತ್ಯಮಾರ್ಗದಲ್ಲಿ ನಡೆಯಿರಿ. ಬಚ್ಚಿಟ್ಟ ಹಣ ಹಳಸಿದ ಅನ್ನದಂತೆ. ಧನಕ್ಕಾಗಿ ಮನುಷ್ಯನಿರಬಾರದು. ದೇವರು ಧನವನ್ನು ಕೊಟ್ಟಾಗ ಉಪಕಾರ, ಔದಾರ್ಯ ತೋರಿ.
ತುಲಾ: ತುಲಾ ರಾಶಿಗೆ ಬರುವ ಸೂರ್ಯನು ನಿಮಗೆ ಒಳ್ಳೆಯ ಕಾಲವನ್ನು ತರುತ್ತಾನೆ. ಸೂರ್ಯನನ್ನು ಆರಾಧಿಸಿ. ಸಂಕ್ರಮಣ ಕಾಲ ಒಂದು ತಿಂಗಳಿದ್ದು, ಕಾವೇರಿ ನದಿಯಲ್ಲಿ ಸ್ನಾನಮಾಡಿ, ಪಾಪವನ್ನು ಕಳೆದುಕೊಂಡು ಮುಖಕಾಂತಿಯನ್ನು ವೃದ್ಧಿಮಾಡಿಕೊಂಡು ಮುಂದೆ ಸಾಗಿರಿ. ನಿಮಗೆ ಯಾವ ಕೊರತೆಯೂ ಇಲ್ಲ. ಮನುಷ್ಯ ಮಾಡಿದ್ದು ಅಲ್ಪಕಾಲ. ದೇವರು ಕೊಟ್ಟಿದ್ದು ಕೊನೆಯವರೆಗೆ ಎಂಬುದನ್ನು ನೆನಪಿಡಿ.
ವೃಶ್ಚಿಕ: ನಿಮಗೆ ಧನದ ಕೊರತೆ ಇದೆ. ವೃಥಾ ಆಲಸ್ಯ, ಖರ್ಚು ಯಾವುದೂ ನಿಂತಿಲ್ಲ. ನಿಮ್ಮ ಸಮಯ, ಒಳ್ಳೆಯ ಕೆಲಸ ನಿಮ್ಮನ್ನು ಕಾಪಾಡುತ್ತದೆ. ಧೈರ್ಯಂ ಸರ್ವತ್ರ ಸಾಧನಂ. ನಿಮಗೆ ಬುದ್ಧಿಯು ವೃದ್ಧಿಯಾಗುವ ಕಾಲ. ಸರಸ್ವತಿಯನ್ನು ಪೂಜಿಸಿ, ಪ್ರಾರ್ಥಿಸಿ.
ಧನು: ಜನ್ಮ ಗುರುವು 20.11.2020ರಂದು ಮುಂದೆ ಹೋಗಲಿದ್ದು ನಿಮ್ಮ ಆಲೋಚನೆ, ಕಾರ್ಯ ವೈಖರಿ ಬದಲಾಯಿಸುತ್ತಾನೆ. ವಾಸುದೇವನು ನಿಮ್ಮನ್ನು ಕಾಪಾಡುವಲ್ಲಿ ಸಂದೇಹ ಬೇಡ. ಕೇತುವಿಗೆ ಗಣಪನನ್ನು ಪೂಜಿಸಿ. ಅ.20ರಂದು ಯಾವುದೇ ನಿರ್ಣಯ ತೆಗೆದುಕೊಳ್ಳಬೇಡಿ. ಬೇರೆ ದಿನಗಳಲ್ಲಿ ಶುಭವಿದೆ.
ಮಕರ: ಶನಿಯ ಬಲದಿಂದ ನಿಮ್ಮನ್ನು ಕುಗ್ಗಿಸಬಹುದು. ಈಸಬೇಕು ಇದ್ದು ಜಯಿಸಬೇಕು. ದ್ವಾದಶ ಗುರುವು ನ.20ರಿಂದ ಲಗ್ನಕ್ಕೆ ಬಂದು ಅಧೈರ್ಯವನ್ನು, ಕೆಲವೊಂದು ರೋಗಗಳಿಂದ ಮುಕ್ತರನ್ನಾಗಿ ಮಾಡಿ ನಿಮ್ಮ ಕೆಲಸಗಳನ್ನು ಮುನ್ನಡೆಸುತ್ತಾನೆ. ಗುರು ದತ್ತಾತ್ರೇಯರನ್ನು ಪೂಜಿಸಿ. ಶನಿ ಅಷ್ಟೋತ್ತರ ಪಠಿಸಿ.
ಕುಂಭ: ನವೆಂಬರ್ 20ರವರೆಗೆ 11ರಲ್ಲಿ ಗುರುವಿದ್ದು, ಅಲ್ಲಿಂದ ಶನಿಯೊಡನೆ ಹನ್ನೆರಡನೆಯ ಮನೆಯನ್ನು ಬಂದು ಸೇರುತ್ತಾನೆ. ನಿಮ್ಮ ಸುತ್ತಮುತ್ತಲ ಜನರಿಂದ ಎಚ್ಚರವಾಗಿರಬೇಕು. ಯಾವುದಾದರೂ ಕಲಹಗಳಲ್ಲಿ ಸಿಕ್ಕಿಸಬಹುದು. ಒಬ್ಬಂಟಿಯಾಗಿ ಓಡಾಡಬೇಡಿ. ಶನಿಯನ್ನು ಪೂಜಿಸಿ. ಇರುವುದರಲ್ಲೇ ಸತ್ಪಾತ್ರರಿಗೆ ವಸ್ತ್ರದಾನ ಮಾಡಿ.
ಮೀನ: ಗುರು ಸ್ವಕ್ಷೇತ್ರದಲ್ಲಿದ್ದು, ಸೂರ್ಯನು ಶುಕ್ರನ ಮನೆ ಸೇರುತ್ತಾನೆ. ಕಾರ್ಯೋನ್ಮುಖರಾಗಿ, ನಿಂತುಹೋಗಿರುವ ಕೆಲಸಗಳನ್ನು ಸರಿಪಡಿಸಿಕೊಂಡು ದೃಢಸಂಕಲ್ಪದಿಂದ ಏನನ್ನೂ ಸಂಪಾದಿಸಬಹುದು. ಎರಡನೇ ಮನೆಯ ಅಂಗಾರಕನಿಗೆ ವಿಭೂತಿಯಿಂದ ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ. ಬಂಧನಗಳನ್ನು ಕಟ್ಟಿಹಾಕಿ ನಿಮ್ಮ ಪ್ರಾವೀಣ್ಯವನ್ನು ತೋರುವ ಕಾಲ. ಧನ್ವಂತರಿಯನ್ನು ಪ್ರಾರ್ಥಿಸಿ. ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.