ಜಲಎಚ್ಚರ ಇರಲಿ

untitled-design-3-68bf0e4a0860a
Published on

ನದಿ, ಸಮುದ್ರ, ಕೆರೆ ಇತ್ಯಾದಿ ಜಲಮೂಲಗಳು ಮಾನವವನ್ನು ಸಹಜವಾಗಿ ಆಕರ್ಷಿಸುತ್ತವೆ. ನೀರನ್ನು ಕಂಡಾಗ ಇಳಿದು ಈಜಬೇಕೆಂಬ ಆಸೆ ಮೂಡುತ್ತದೆ. ಅದರಲ್ಲೂ ಮಕ್ಕಳು ಮತ್ತು ಯುವಜನರಲ್ಲಿ ಈ ಬಯಕೆ ತುಸು ಹೆಚ್ಚೇ ಇರುತ್ತದೆ. ಆದರೆ ಈ ಉತ್ಸಾಹವು ಪ್ರಾಣಾಪಾಯದ ಮಟ್ಟಕ್ಕೆ ಹೋಗದಂತೆ ಎಚ್ಚರ ಬೇಕಾಗುತ್ತದೆ. ಈಜಲು ನೀರಿಗಿಳಿದವರು ಸಾವನ್ನಪು್ಪವ ವರದಿಗಳು ಆಗೀಗ ವರದಿಯಾಗುತ್ತಿರುತ್ತವೆ.

ಇದಲ್ಲದೆ, ನೀರಿಗೆ ಬಿದ್ದವರನ್ನು ರಕ್ಷಿಸಲು ಹೋದವರು ಸಹ ಮುಳುಗಿ ಮೃತಪಡುವ ಘಟನೆಗಳೂ ಜರುಗುವುದಿದೆ. ಜಲತಾಣಗಳಿಗೆ ಹೋದವರು ಎಚ್ಚರಿಕೆ ವಹಿಸಿದರೆ ದುರ್ಘಟನೆಗಳ ಪ್ರಮಾಣವನ್ನು ಕೆಲಮಟ್ಟಿಗಾದರೂ ನಿಯಂತ್ರಿಸಲು ಸಾಧ್ಯವಿದೆ. ಕುಂದಾಪುರದ ಗೋಪಾಡಿ ರ್ಚಕಿಕಡು ಬೀಚಿಗೆ ತೆರಳಿದ್ದ ಬೆಂಗಳೂರಿನ ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲಾದ ಘಟನೆ ಮೊನ್ನೆ ಭಾನುವಾರ ನಡೆದಿದೆ. ಇನ್ನೊಂದು ಘಟನೆಯಲ್ಲಿ, ರಾಮನಗರದ ಕೈಲಾಂಚದ ಅವ್ವೇರಹಳ್ಳಿ ಹೊಸಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿದಾಗ ಆತನನ್ನು ರಕ್ಷಿಸಲು ಹೋದ ಇನ್ನೊಬ್ಬನೂ ನೀರುಪಾಲಾಗಿದ್ದಾನೆ. ಬಾಳಿ ಬದುಕಬೇಕಾದ ಮಕ್ಕಳು ಹೀಗೆ ದುರಂತ ಸಾವಿಗೆ ಈಡಾಗುವುದು ವಿಷಾದದ ಸಂಗತಿ.

ರಜಾದಿನಗಳಲ್ಲಿ ಪ್ರವಾಸ ಹೋಗುವ ಪ್ರವೃತ್ತಿ ಈಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಕುಟುಂಬ ಸಮೇತವಾಗಿ ಅಥವಾ ಕಚೇರಿ ಸಹೋದ್ಯೋಗಿಗಳು ಒಟ್ಟಾಗಿ ಅಥವಾ ವಿದ್ಯಾರ್ಥಿ ಗೆಳೆಯರು ಸೇರಿಕೊಂಡು ಬೇರೆ ಬೇರೆ ತಾಣಗಳಿಗೆ ಪ್ರವಾಸ ಹೋಗುವ ಪರಿಪಾಠವಿದೆ. ಇಂಥ ಪ್ರವಾಸಗಳು ದೈಹಿಕ-ಮಾನಸಿಕ ಚೈತನ್ಯಕ್ಕೆ ನೆರವಾಗುತ್ತವೆ ಎಂಬುದರಲ್ಲಿ ಎರಡುಮಾತಿಲ್ಲ. ಹಾಗೇ, ಪ್ರವಾಸವೆಂಬುದು ಈಗ ಉದ್ಯಮದ ಸ್ವರೂಪ ಪಡೆದುಕೊಂಡಿದ್ದು, ಆದಾಯ ಸೃಷ್ಟಿಮಾಡುವ ಜತೆಗೆ ದೊಡ್ಡ ಪ್ರಮಾಣದ ಉದ್ಯೋಗಗಳನ್ನೂ ಸೃಜಿಸುತ್ತಿದೆ. ಹೀಗಾಗಿ ಸರ್ಕಾರಗಳು ಕೂಡ ಪ್ರವಾಸೋದ್ಯಮಕ್ಕೆ ಪೂರಕವಾದ ನೀತಿಗಳನ್ನು ರೂಪಿಸಿ ಜಾರಿಗೆ ತರುತ್ತಿವೆ.

ಅದರಲ್ಲೂ ನಮ್ಮ ರಾಜ್ಯವು ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದಂತಿದ್ದು, ಅನೇಕ ಪ್ರಖ್ಯಾತ ತಾಣಗಳನ್ನು ಮಡಿಲಲ್ಲಿ ಇರಿಸಿಕೊಂಡಿದೆ. ಮಲೆನಾಡು, ಕರಾವಳಿ, ಬಯಲುಸೀಮೆ, ಅರೆಬಯಲುಸೀಮೆ ಇತ್ಯಾದಿ ಪ್ರಾದೇಶಿಕ ವೈವಿಧ್ಯಗಳು ಜಗತ್ತಿನ ನಾನಾ ದೇಶಗಳ ಜನರನ್ನು ಆಕರ್ಷಿಸುತ್ತಿವೆ. ಹೀಗೆ ಪ್ರವಾಸಕ್ಕೆ ಬಂದವರು ಅಲ್ಲಲ್ಲಿನ ವಾತಾವರಣ, ಸಂಪ್ರದಾಯ, ಜನಜೀವನ ಇತ್ಯಾದಿ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಅದಕ್ಕೆ ತಕ್ಕ ಹಾಗೆ ವರ್ತಿಸುವುದು ಅಪೇಕ್ಷಣೀಯ. ವಿಶೇಷವಾಗಿ, ನೀರಿಗೆ ಇಳಿಯುವಾಗ ಸ್ಥಳೀಯರ ಮಾರ್ಗದರ್ಶನ ಪಡೆಯುವುದು ಲೇಸು.

ಏಕೆಂದರೆ, ನೀರಿನ ಆಳಅಗಲಗಳ ಪರಿಚಯ ಸ್ಥಳೀಯರಿಗೆ ಚೆನ್ನಾಗಿ ಇರುತ್ತದೆ. ಸ್ಥಳೀಯರ ಎಚ್ಚರಿಕೆ ಮಾತನ್ನು ನಿರ್ಲಕ್ಷಿಸಿ ಜೀವಕ್ಕೆ ಅಪಾಯ ತಂದುಕೊಂಡ ಎಷ್ಟೋ ನಿದರ್ಶನಗಳಿವೆ. ಇದಲ್ಲದೆ, ಸೆಲ್ಪಿ ಗೀಳು ಸಹ ಈಗ ಜೋರಾಗಿದೆ. ಪ್ರವಾಸಿ ತಾಣಗಳಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಗಂಡಾಂತರ ತಂದುಕೊಂಡವರಿದ್ದಾರೆ. ಎಷ್ಟೋ ಕಡೆಗಳಲ್ಲಿ ಸ್ಥಳೀಯ ಆಡಳಿತಗಳು ಅಪಾಯಕಾರಿ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡುತ್ತವೆ. ಎಲ್ಲ ಕಡೆಯೂ ಇಂಥ ವ್ಯವಸ್ಥೆ ಆಗಬೇಕು. ಕೆಲವೆಡೆ ರಕ್ಷಣಾ ವ್ಯವಸ್ಥೆಯೂ ಇರುತ್ತದೆಯಾದರೂ ಎಲ್ಲೆಡೆಯೂ ಇರುವುದಿಲ್ಲ. ಇದೇ ವೇಳೆ, ಪ್ರವಾಸಿಗರು ಸಹ ಜವಾಬ್ದಾರಿ ಅರಿತು ವರ್ತಿಸಿ, ಎಚ್ಚರಿಕೆ ಸೂಚನೆಗಳನ್ನು ಅನುಸರಿಸಿದರೆ ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net