ಇದು ಪರೀಕ್ಷೆ ಸಮಯ ಇರಲಿ ಆರೋಗ್ಯ ಸುರಕ್ಷೆ

EXAM JWARA
Published on

ಹವಾಮಾನ ವೈಪರೀತ್ಯ ಕಾರಣದಿಂದ ಹಾಗೂ ಈಗ ಬೇಸಿಗೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ವೈರಲ್ ಫೀವರ್​ಗಳು ಹೆಚ್ಚುವ ಸಂಭವ ಇದೆ. ಪರೀಕ್ಷೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಹಾಗಿದ್ದರೆ ನೀವು ಯಾವೆಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಬಿಸಿಲ ಕಾಲದಲ್ಲಿ ಮಳೆ, ಮಳೆ ಬರಬೇಕಾದಾಗ ಚಳಿ, ಚಳಿಗಾಲದಲ್ಲಿ ಬೆಂದುಹೋಗುವಷ್ಟು ಉರಿ... ಹೀಗೆ ತಾಪಮಾನದಲ್ಲಿ ವಿಪರೀತ ವ್ಯತ್ಯಾಸವಾಗುತ್ತದೆ. ಇಂಥ ಅನಾಹುತಗಳನ್ನು ಸೃಷ್ಟಿಸಿರುವುದು ಮನುಷ್ಯರೇ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ ಅಲ್ಲವೆ? ನಗರೀಕರಣ, ಹೊಸ ಹೊಸ ಆವಿಷ್ಕಾರ ಎಂದೆಲ್ಲಾ ಪರಿಸರವನ್ನು ನಾಶ ಮಾಡುವ ಪರಿಣಾಮವಿದು.

ಈಗ ವಾತಾವರಣದಲ್ಲಿ ಅಲ್ಲೋಲ, ಕಲ್ಲೋಲ ಆಗಿರುವುದು ನಿಜ. ನಾವು ಪ್ರಕೃತಿಯನ್ನು ನಾಶ ಮಾಡುತ್ತಿರುವ ಕಾರಣ, ಪ್ರಕೃತಿ ತಿರುಗೇಟು ನೀಡುತ್ತಿದ್ದು, ಹಿಂದೆಂದೂ ಕೇಳಿರದ ಚಿತ್ರ-ವಿಚಿತ್ರ ಸೋಂಕು, ರೋಗಗಳು ಮನುಷ್ಯರಿಗೆ ತಟ್ಟುತ್ತಿವೆ. ಆದ್ದರಿಂದ ನಾವು ಸ್ವಲ್ಪ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ ಇಂಥ ಸೋಂಕಿನಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಹೇಳಿ ಕೇಳಿ ಇದು ಪರೀಕ್ಷೆಯ ಸಮಯ. ಇನ್ನೊಂದು ತಿಂಗಳಾದರೂ ನೀವು ಆರೋಗ್ಯ ಕಾಪಾಡಿಕೊಳ್ಳಬೇಕು. ವರ್ಷಪೂರ್ತಿ ಕಲಿತದ್ದನ್ನು ಇನ್ನೊಮ್ಮೆ ಓದಲು, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು ತುಂಬಾ ಅವಶ್ಯವಲ್ಲವೆ? ಅಪ್ಪ-ಅಮ್ಮ ಅಷ್ಟೇ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಸಾಕಾಗುವುದಿಲ್ಲ. ನೀವೂ ಅಷ್ಟೇ ಜಾಗರೂಕರಾಗಿರಬೇಕು.ನಿಮಗಾಗಿ ಒಂದಿಷ್ಟು ಸಲಹೆ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

ಬಾಯಿಯನ್ನು ಕಟ್ಟಿಡಿ: ಕೊನೆಯ ಪಕ್ಷ ಪರೀಕ್ಷೆ ಮುಗಿಯುವವರೆಗಾದರೂ ಕಂಡಕಂಡದನ್ನೆಲ್ಲ ತಿನ್ನುವ ಪ್ರವೃತ್ತಿಗೆ ಕಡಿವಾಣ ಹಾಕಿ. ದಾರಿ ಬದಿಯಲ್ಲಿ ಹೋಗುವಾಗ ಪಾನೀಪುರಿ, ಮಸಾಲ್​ಪುರಿ... ಇತ್ಯಾದಿಗಳ ಪರಿಮಳ ಮೂಗಿಗೆ ಘಮ್ ಎಂದು ಬಡಿಯಲಿಕ್ಕೆ ಸಾಕು. ಆದರೆ ಮನಸ್ಸನ್ನು ಗಟ್ಟಿ ಮಾಡಿಕೊಂಡು ಪರೀಕ್ಷೆಯನ್ನು ನೆನೆದು ಅದರತ್ತ ನೋಡಬೇಡಿ. ಏಕೆಂದರೆ ಎಷ್ಟೋ ಸಲ ದಾರಿ ಬದಿಯ ಇಂಥ ಪದಾರ್ಥಗಳಿಗೆ ಅಶುದ್ಧ ನೀರನ್ನು ಉಪಯೋಗಿಸುತ್ತಾರೆ, ರಸ್ತೆಯ ಧೂಳು ಈ ತಿನಿಸುಗಳ ಮೇಲೆ ಸಹಜವಾಗಿ ಬಿದ್ದಿರುತ್ತವೆ.

ಇವುಗಳನ್ನು ತಯಾರಿಸುವವರು ಅದೆಷ್ಟು ಶುಚಿತ್ವವನ್ನು ಕಾಪಾಡಿಕೊಂಡಿರುತ್ತಾರೆಯೋ ಗೊತ್ತಿರುವುದಿಲ್ಲ. ಹಾಗೆಂದು ಹೋಟೆಲ್ ಒಳಗೆ ಇವುಗಳನ್ನು ತಿನ್ನಬಹುದು ಎಂದುಕೊಂಡರೆ ಅದು ಕೂಡ ಸರಿಯಲ್ಲ. ಹಲವು ಹೋಟೆಲ್​ಗಳ ಅಡುಗೆ ಕೋಣೆಗೆ ನೀವು ಇಣುಕಿ ಹಾಕಿದರೆ ಅಲ್ಲಿ ಆಹಾರಗಳನ್ನು ಹೇಗೆ ರೆಡಿ ಮಾಡುತ್ತಾರೆ ಎನ್ನುವುದು ತಿಳಿಯುತ್ತದೆ. ಅದನ್ನು ನೋಡಿದ ಮೇಲೆ ಅಲ್ಲಿಯ ತಿನಿಸುಗಳನ್ನು ತಿನ್ನಬೇಕೋ, ಬೇಡವೋ ಡಿಸೈಡ್ ಮಾಡಿ!

ಜಂಕ್​ಫುಡ್, ಸಾಫ್ಟ್​ಡ್ರಿಂಕ್ಸ್​ಗೆ ಹೇಳಿ ಬೈಬೈ: ಅಂಗಡಿಗಳಲ್ಲಿ ನೇತು ಹಾಕುವ ಕರುಂಕುರುಂ ಪ್ಯಾಕೆಟ್ ತಿನಿಸಿನ ಬಗ್ಗೆ ಹಾಗೂ ವಿಷಕಾರಕ ರಾಸಾಯನಿಕ ಬಳಸಿ ತಯಾರಿಸುವ ಸಾಫ್ಟ್​ಡ್ರಿಂಕ್ಸ್​ಗಳ ಬಗ್ಗೆ ಜಾಣರಾದ ನೀವು ಈಗಾಗಲೇ ಸಾಕಷ್ಟು ಕೇಳಿರುತ್ತೀರಿ. ಕ್ಯಾನ್ಸರ್​ನಂಥ ಭೀಕರ ಕಾಯಿಲೆ ತರಿಸುವ ರಾಸಾಯನಿಕ ಅಂಶಗಳುಳ್ಳ ಮಸಾಲಾ ಪದಾರ್ಥಗಳನ್ನು ಅವುಗಳಿಗೆ ಬಳಸಲಾಗುತ್ತದೆ.

ಇವು ಯಾವತ್ತಿಗೂ ಅಪಾಯಕಾರಿಯೇ. ಪರೀಕ್ಷೆಯ ಈ ದಿನಗಳಂದು ಇಂಥ ತಿನಿಸು, ಡ್ರಿಂಕ್ಸ್​ಗಳತ್ತ ನೋಡಲೂ ಹೋಗಬೇಡಿ. ಯಾರಾದರೂ ನಿಮ್ಮ ಸಮೀಪವೇ ಅದನ್ನು ಸವಿಯುತ್ತಿದ್ದರೆ ಅವರಿಗೂ ಬುದ್ಧಿ ಹೇಳಿ, ಅವರು ಕೇಳದೇ ಹೋದರೆ ನೀವು ಅಲ್ಲಿಂದ ದೂರ ಬಂದುಬಿಡಿ.

ತೆರೆದಿಟ್ಟ ತಿನಿಸುಗಳತ್ತ ಇರಲಿ ಎಚ್ಚರ: ಹಣ್ಣುಗಳ ಸೇವನೆ ಒಳ್ಳೆಯದೇ. ಹಾಗೆಂದು ರಸ್ತೆಯ ಬದಿಯಲ್ಲಿ ಕತ್ತರಿಸಿಟ್ಟಿರುವ ಹಣ್ಣುಗಳ ಸೇವನೆ ಒಳ್ಳೆಯದಲ್ಲ. ಏಕೆಂದರೆ ಈ ಹಣ್ಣುಗಳನ್ನು ಎಷ್ಟು ಶುಚಿ ಮಾಡಲಾಗಿದೆ, ಇವುಗಳಲ್ಲಿ ರಸ್ತೆಯ ಧೂಳುಗಳು ಎಷ್ಟು ಸೇರಿವೆ, ಸಮೀಪವೇ ಇರುವ ಚರಂಡಿಯ ಬಳಿ ಓಡಾಡುವ ಎಷ್ಟು ನೊಣಗಳು ಈ ಹಣ್ಣಿನ ಮೇಲೆ ಕುಳಿತಿವೆ ಎಂದೆಲ್ಲಾ ನೀವು ನೋಡಿರುವುದಿಲ್ಲವಲ್ಲ, ಆದ್ದರಿಂದ ಇಡೀ ಹಣ್ಣುಗಳನ್ನು ಖರೀದಿಸಿ, ಮನೆಗೆ ಹೋಗಿ ಚೆನ್ನಾಗಿ ತೊಳೆದು ಆಮೇಲೆ ತಿನ್ನಿ.

ನೀರಿನತ್ತ ಗಮನವಿರಲಿ: ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ನೀರು ಕುಡಿಯಬೇಕು ಎನ್ನುವುದನ್ನು ನೀವೆಲ್ಲಾ ಕೇಳಿರುತ್ತೀರಿ. ಆದರೆ ನೋಡಲು ಶುಚಿಯಂತೆ ಕಂಡರೂ ನೀರಿನ ಶುದ್ಧತೆ ತಿಳಿಯುವುದು ಬಲು ಕಷ್ಟವೇ. ನಮ್ಮ ನಲ್ಲಿಗಳಲ್ಲಿ ಬರುವ ನೀರುಗಳು ಕೂಡ ಶುದ್ಧವಾಗಿರುವುದಿಲ್ಲ. ಆದ್ದರಿಂದ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯಿರಿ. ಇದರಿಂದ ವಿಷಕಾರಕ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಸತ್ತುಹೋಗುತ್ತವೆ.

ಕೈ ತೊಳೆಯಲು ಮರೆಯಬೇಡಿ: ದಿನವೂ ಶಾಲೆಗೆ ಟಿಫನ್ ಬಾಕ್ಸ್ ಒಯ್ಯುತ್ತೀರಲ್ಲವೆ? ಊಟಕ್ಕೆ ಮೊದಲು ಹಾಗೂ ಊಟದ ನಂತರ ಚೆನ್ನಾಗಿ ಕೈಯನ್ನು ತೊಳೆದುಕೊಳ್ಳಿ. ನೀವು ದಿನವೂ ಅದೆಷ್ಟೋ ವಸ್ತುಗಳನ್ನು ಮುಟ್ಟಿರುತ್ತೀರಿ. ಆದ್ದರಿಂದ ಬರಿಯ ಕಣ್ಣಿಗೆ ಕಾಣದ ಕ್ರಿಮಿಗಳು ಕೈಗೆ ಅಂಟಿರುವ ಕಾರಣ, ಶುಚಿತ್ವ ತುಂಬಾ ಮುಖ್ಯ. ಸಿಪ್ಪೆ ಇರುವ ಹಣ್ಣುಗಳನ್ನು ತಿನ್ನುವಾಗ (ಉದಾ: ಕಿತ್ತಳೆ, ಬಾಳೆಹಣ್ಣು ಇತ್ಯಾದಿ) ಸಿಪ್ಪೆಯನ್ನು ತಿನ್ನುವುದಿಲ್ಲವಲ್ಲ, ಹಣ್ಣನ್ನು ಯಾಕೆ ಎನ್ನುವವರೇ ಹೆಚ್ಚು. ಆದರೆ ಅದೇ ಹಣ್ಣನ್ನು ಮುಟ್ಟಿ ಅದೇ ಕೈಯಿಂದ ಒಳಗಡೆಯ ತಿರುಳನ್ನು ನೀವು ತಿನ್ನುತ್ತೀರಲ್ಲವೆ? ಆದ್ದರಿಂದ ಇಂಥ ಸೂಕ್ಷ್ಮ ವಿಷಯಗಳನ್ನೂ ಗಮನಿಸಿ.

ಮೂಗು- ಬಾಯಿ ಮುಚ್ಚಿಕೊಳ್ಳಿ: ಒಂದು ವೇಳೆ ಕೆಮ್ಮು ಅಥವಾ ಸೀನು ಬಂದರೆ ಮುಖ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಇಲ್ಲದಿದ್ದರೆ ವೈರಾಣುಗಳು ಎಲ್ಲೆಡೆ ಸ್ಪ್ರೆಡ್ ಆಗುವುದರಿಂದ ನಿಮ್ಮ ಅಕ್ಕ-ಪಕ್ಕದವರಿಗೂ ಇದು ಹರಡುವ ಸಾಧ್ಯತೆ ಇರುತ್ತದೆ.

ಅನಾರೋಗ್ಯಪೀಡಿತರಿಂದ ಸ್ವಲ್ಪ ದೂರವಿರಿ: ನಿಮ್ಮ ಸಮೀಪದಲ್ಲಿ ಯಾರಿಗಾದರೂ ವಿಪರೀತ ಜ್ವರ ಬಂದಿದ್ದರೆ, ಅವರಿಂದ ಸಾಧ್ಯವಾದಷ್ಟು ದೂರವಿರಿ. ಇಲ್ಲದಿದ್ದರೆ ನಿಮಗೂ ಅದು ಹರಡುವ ಸಾಧ್ಯತೆ ಇರುತ್ತದೆ.

ಸೊಳ್ಳೆ ಪರದೆ ಹಾಕಿಕೊಳ್ಳಿ: ಡೆಂಘೇ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗಿರುವುದು ಸೊಳ್ಳೆಗಳು. ಆದ್ದರಿಂದ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಇದಕ್ಕೆ ಸೊಳ್ಳೆ ಪರದೆ ಉತ್ತಮ ಪರಿಹಾರ. ಸೊಳ್ಳೆಗಳಿಂದ ಕಾಪಾಡಬಹುದಾದ ಅನೇಕ ರಾಸಾಯನಿಕ ಲಿಕ್ವಿಡ್​ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ ಇವುಗಳ ಪೈಕಿ ಹೆಚ್ಚಿನವು ಆರೋಗ್ಯಕ್ಕೆ ಹಾನಿಕರವಾಗಿರುವ ಕಾರಣ, ಈ ಬಗ್ಗೆಯೂ ಎಚ್ಚರಿಕೆ ಇರಲಿ.

ರೆಸ್ಟ್ ತೆಗೆದುಕೊಳ್ಳುವ ಸಮಯ

ವೈರಲ್ ಫೀವರ್ ಬಂದಿರುವುದು ತಿಳಿದರೆ ಶಾಲೆಗೆ ಓಡುವ ಅಗತ್ಯವಿಲ್ಲ. ಏಕೆಂದರೆ ಇದು ರೆಸ್ಟ್ ತೆಗೆದುಕೊಳ್ಳುವ ಸಮಯ. ಶಾಲೆಯಲ್ಲಿ ರಜೆ ಕೊಡುವುದಿಲ್ಲ ಎಂಬ ಭಯವೂ ಬೇಡ. ಏಕೆಂದರೆ ಶೀತ, ಕೆಮ್ಮು, ಕಫ ಮತ್ತು ಜ್ವರದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ರಜೆ ನೀಡುವಂತೆ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ವಿದ್ಯಾರ್ಥಿ, ಸಿಬ್ಬಂದಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅವರಿಗೆ ರಜೆ ನೀಡಬೇಕು, ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ದೃಢೀಕರಿಸಿದ ಬಳಿಕವಷ್ಟೇ ಅವರು ಮರಳಿ ಶಾಲೆಗೆ ಬರಲು ಅನುಮತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಆದ್ದರಿಂದ ವೈದ್ಯಕೀಯ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾದ ಮೇಲೆ ಪರೀಕ್ಷೆ ಎದುರಿಸಲು ಸನ್ನದ್ಧರಾಗಿ. ವೈರಲ್ ಫೀವರ್​ಗಳಾಗಿದ್ದರೆ 2-3 ದಿನಗಳು ಸಂಪೂರ್ಣ ವಿಶ್ರಾಂತಿ ಮಕ್ಕಳಿಗೆ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಹಾಜರಾತಿ ಕಡಿಮೆಯಾಗಿಬಿಟ್ಟರೆ ಎಂಬ ಕಾರಣಕ್ಕೆ ಪಾಲಕರು ಸಂಪೂರ್ಣವಾಗಿ ಹುಷಾರಾಗದಿದ್ದರೂ ಕಳಿಸಿಬಿಡುತ್ತಾರೆ. ಆದ್ದರಿಂದ ಹೀಗೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ಮಕ್ಕಳಿಗೇಕೆ ಸೋಂಕು ಬೇಗ ತಗಲುತ್ತದೆ?

ನೀವು ತಿಂದದನ್ನೇ ಅಥವಾ ಕುಡಿದದ್ದನ್ನೇ ನಿಮ್ಮ ಪಾಲಕರು ಸೇವಿಸಿದರೂ ನಿಮಗೇ ಬೇಗ ಜ್ವರ, ನೆಗಡಿ, ಗಂಟಲುನೋವು ಎಲ್ಲಾ ಶುರು ಆಗುವುದನ್ನು ಗಮನಿಸಿದ್ದೀರಾ? ಇದು ಏಕೆಂದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅದರಲ್ಲಿಯೂ ಅನಾರೋಗ್ಯಕರ ಆಹಾರ ಸೇವನೆ ಮಾಡುತ್ತ ಇರುವವರ ದೇಹವನ್ನು ಸೋಂಕುಗಳು ಗಬಕ್ ಎಂದು ಕಬಳಿಸುತ್ತವೆ. ಆದ್ದರಿಂದ ಅವರಿಗೆ ಮೊದಲು ಅನಾರೋಗ್ಯ ಉಂಟಾಗುತ್ತದೆ. ನೆಗಡಿ, ಕೆಮ್ಮು, ಮೈ ಕೈ ನೋವಿನಿಂದ ಪ್ರಾರಂಭವಾಗಿ ನ್ಯೂಮೋನಿಯಾದವರೆಗೂ ಇದು ಸಾಗುತ್ತದೆ.

ಜ್ವರದ ಲಕ್ಷಣಗಳು

ತೀವ್ರ ಆಯಾಸ, ದಣಿವು, ಗಂಟಲು ಉರ್ಣಿಕೆಮ್ಮು ಮೈ ಕೈ ನೋವು ತಲೆನೋವು ನೆಗಡಿ, ಜ್ವರ ಮೂಗು ಕಟ್ಟುವುದು ಕಣ್ಣುಗಳು ಭಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net