ಹೆದರದಿರು ಕಂದ; ಎದುರಿಸು ಧೈರ್ಯದಿಂದ

ವಿಜಯವಾಣಿ (7)
Published on

| ಡಾ. ಶ್ರೀಲತಾ ಪದ್ಯಾಣ

‘ಮೇಡಂ..ಆಕೆಗಿನ್ನೂ 8 ವರ್ಷ ಪೂರ್ಣಗೊಂಡಿಲ್ಲ. ಆದರೆ ದೇಹದಲ್ಲಿ ಬದಲಾವಣೆ ಕಾಣುತ್ತಿದೆ. ವಯಸ್ಸಲ್ಲದ ವಯಸ್ಸಿನಲ್ಲಿ ವಯಸ್ಸಿಗೆ ಬಂದಿದ್ದಾಳೆ. ಗುಪ್ತ ಕೂದಲಿನ ಬೆಳವಣಿಗೆ ಕಂಡು ಹೆದರಿದ್ದಾಳೆ..’ ಇದು ಒಬ್ಬ ತಾಯಿಯ ದುಗುಡವಲ್ಲ, ಇಂತಹ ನೂರಾರು ಅಮ್ಮಂದಿರು ವೈದ್ಯರ ಮುಂದೆ ಕಣ್ಣೀರಿಡುತ್ತಿದ್ದಾರೆ. ಮಗಳ ಭವಿಷ್ಯವೇನೆಂಬ ಚಿಂತೆಗೆ ಸಿಲುಕಿದ್ದಾರೆ. ಇವರ ಸಮಸ್ಯೆಗೆ ಪರಿಹಾರ ನೀಡುವ ಆಶಯ ಈ ಲೇಖನದಲ್ಲಿದೆ..

ಮುಟ್ಟು ಎಂದರೆ ಹೆಣ್ಣಿಗೆ ಹರೆಯದಲ್ಲಿ ಗರ್ಭಾಶಯದಿಂದಾಗುವ ರಕ್ತಸ್ರಾವ. ಅಂದರೆ ಗರ್ಭಾಶಯದ ಒಳಪಸೆಯನ್ನು ರಕ್ತಸ್ರಾವದ ಮೂಲಕ ಹೊರ ಹಾಕುವ ಒಂದು ಪ್ರಕ್ರಿಯೆ. ಮುಟ್ಟು ಸಾಮಾನ್ಯವಾಗಿ ಹನ್ನೊಂದರಿಂದ ಹನ್ನೆರಡು ಪ್ರಾಯದ ಹೆಣ್ಮಕ್ಕಳಲ್ಲಿ ಆರಂಭವಾಗುತ್ತದೆ. ಇದು ಆರೋಗ್ಯವಂತ ಪ್ರೌಢಾವಸ್ಥೆ. ಅಂಡಾಶಯಗಳು ಈಸ್ಟ್ರೋಜನ್ ಮತ್ತು ಪೊ›ಜೆಸ್ಟರಾನ್ ಹಾರ್ವೇನುಗಳನ್ನು ಬಿಡುಗಡೆ ಮಾಡುವಾಗ ಆಗುವಂತಹ ಬದಲಾವಣೆಗಳಿಂದಾಗಿ ಮುಟ್ಟು ಸಂಭವಿಸುತ್ತದೆ. ಈ ಸಮಯದಲ್ಲಿ ಹರಯದ ಹುಡುಗಿಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಹಾಗೆಯೇ ಸರಾಸರಿ ಹದಿನೈದರಿಂದ ಹದಿನೇಳನೇ ವಯಸ್ಸಾಗುವಾಗ ಪೂರ್ಣ ಪ್ರೌಢಾವಸ್ಥೆಯ ಹಂತ ತಲುಪುತ್ತಾರೆ. ಇವಿಷ್ಟು ನಮಗೆಲ್ಲರಿಗೂ ತಿಳಿದಿರುವಂತಹುದೇ ಆದರೂ ಮುಟ್ಟಿನ ಕುರಿತಾದ ಇನ್ನಷ್ಟು ವಿಚಾರಗಳ ಕಡೆಗೆ ಗಮನಹರಿಸಲೇಬೇಕಾಗಿದೆ..

ಅದೇನೆಂದರೆ, ನಮ್ಮೆದುರು ನಾವೇ ನೋಡುತ್ತಿರುವ ಒಂದು ಆತಂಕಕಾರಿ ಪ್ರವೃತ್ತಿ ! ಅದುವೇ ಮುಂಚಿನ ಪ್ರೌಢಾವಸ್ಥೆ ಅಧ್ಯಯನಗಳ ಪ್ರಕಾರ ಶೇ.34 ರಷ್ಟು ಹೆಣ್ಮಕ್ಕಳು ತಮ್ಮ ಎಂಟನೇ ವಯಸ್ಸಿಗಿಂತಲೂ ಮುಂಚಿತವಾಗಿ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಅಂದರೆ ಸ್ತನಗಳ ಗಾತ್ರದಲ್ಲಿ ಬದಲಾವಣೆ, ಕಂಕುಳು ಹಾಗೂ ಗುಪ್ತ ಕೂದಲಿನ ಬೆಳವಣಿಗೆ, ಮುಟ್ಟಾಗುವಿಕೆ, ಮಾನಸಿಕ ಅಸಮತೋಲನಗಳು, ಹರಯಕ್ಕೂ ಮುನ್ನ ಈ ಪ್ರಕ್ರಿಯೆ ನಡೆಯುವುದನ್ನೇ Precious Puberty ಅಥವಾ ಮಹತ್ವದ ಪ್ರೌಢಾವಸ್ಥೆ ಎನ್ನಲಾಗುತ್ತದೆ. ಒಟ್ಟಾರೆಯಾಗಿ ಶೇ.10 ರಷ್ಟು, ನಗರ ಪ್ರದೇಶಗಳಲ್ಲಿ ಶೇ.12, ಗ್ರಾಮೀಣ ಪ್ರದೇಶಗಳಲ್ಲಿ ಶೇ.8 ಮಕ್ಕಳು ಈ ಘಟ್ಟ ತಲುಪುತ್ತಿದ್ದಾರೆ.

ಅರಿವು ಮೂಡಿಸುವುದ್ಹೇಗೆ?

ಪ್ರೌಢಾವಸ್ಥೆಗೆ ಬರುವುದು ಅಥವಾ ಮುಟ್ಟಾಗುವಿಕೆ ಸಹಜ ಪ್ರಕ್ರಿಯೆಯಾದರೂ, ತ್ವರಿತ ಋತುಮತಿಯಾಗುವ ಸಂಭವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಇದರಲ್ಲಿ ಯಾವುದೇ ಮುಜುಗರ ಪಡದೆ ಹೆಣ್ಮಕ್ಕಳು ಐದರಿಂದ ಆರರ ವಯಸ್ಸಿಗೆ ಬಂದಾಗ ಈ ಕುರಿತು ಅವರಿಗೆ ಸ್ವಲ್ಪ ಸ್ವಲ್ಪವೇ ಮಾಹಿತಿಯನ್ನು ನೀಡಬೇಕು. ಮುಟ್ಟು ಎಂದರೇನು? ಯಾಕಾಗುತ್ತದೆ? ಯಾವ ಹರೆಯದಲ್ಲಿ ಆರಂಭವಾಗುತ್ತದೆ? ಹಾಗೆಯೆ ಋತುಚಕ್ರದ ಅವಧಿ, ಹಾಗೂ ನೈರ್ಮಲ್ಯದ ಕುರಿತು ಅವಶ್ಯವಾಗಿ ಹೇಳಬೇಕು. ಮೊದಲ ಬಾರಿಗೆ ಮುಟ್ಟಾದಾಗ ಅವರೊಳಗೆ ಒಂದು ಭಯ ಆವರಿಸುವುದು ಸಹಜ. ಅರಿಯದ ವಯಸ್ಸಿನಲ್ಲಿ ಆದಾಗ ಅದನ್ನು ಹೇಗೆ ನಿಭಾಯಿಸಬಹುದು ಎಂಬುದನ್ನು ಹೇಳಿಕೊಡಬೇಕು. ಅದಕ್ಕೂ ಮುಂಚಿತವಾಗಿ ಸೂಚನೆಗಳನ್ನು ನೀಡಿದಲ್ಲಿ ಅವರಿಗೆ ಧೈರ್ಯ ಬರುವುದು. ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ತಮ್ಮ ಆಪ್ತರು ಅಥವಾ ಆಪ್ತ ಸಲಹೆಗಾರರು, ವೈದ್ಯರು, ಮಕ್ಕಳ ತಜ್ಞರು ಅಥವಾ ಆಸ್ಪತ್ರೆಗಳಲ್ಲಿ ಈ ವಿಚಾರಗಳನ್ನು ತಿಳಿಹೇಳಲು ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳಬೇಕು.

ಹರೆಯದ ಹುಡುಗಿಯರಿಗೆ ಮುಟ್ಟಿನ ಕುರಿತಾಗಿ ವಿವರಿಸಿ ಧೈರ್ಯ ಹೇಳಬೇಕು. ಅವರಲ್ಲಿ ಶರೀರಾರೋಗ್ಯವನ್ನು ಕಾಪಾಡಿಕೊಳ್ಳುವಂತಹ ಪ್ರಜ್ಞೆಯನ್ನು ತುಂಬುವುದು, ಅವರೊಳಗಿನ ವೇದನೆಯನ್ನು ಅರ್ಥ ಮಾಡಿಕೊಂಡು ಸಂತೈಸುವ ಕೆಲಸವನ್ನು ಮಾಡಬೇಕು. ಯಾವೆಲ್ಲಾ ಆಹಾರಗಳನ್ನು ತಿಂದರೆ ಹಾಗೂ ಚಟುವಟಿಕೆಗಳಿಂದ ಇದ್ದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಆರೋಗ್ಯದ ಏರುಪೇರುಗಳಿಂದ, ಅಶುಚಿತ್ವದಿಂದ, ಮಾನಸಿಕ- ದೈಹಿಕ ಆರೋಗ್ಯದ ಅಸಮರ್ಪಕ ಬೆಳವಣಿಗೆಯಿಂದ ಮುಂದಾಗುವ ಅಪಾಯಗಳ ಕುರಿತು ಪೋಷಕರು ಬೆಂಬಲಿಗರಾಗಬೇಕು. ತಮ್ಮಮಕ್ಕಳ ಬಳಿ ಅವಶ್ಯವಾಗಿ ವಿಷಯಗಳನ್ನು ಹಂಚಿಕೊಳ್ಳಬೇಕು.

ಕಾರಣಗಳೇನು?

ಈಗಿನ ಮಕ್ಕಳು ತ್ವರಿತ ಮುಟ್ಟಾಗುವುದಕ್ಕೆ ಕಾರಣಗಳೇನು, ಅದರ ಪರಿಣಾಮಗಳೇನೆಂಬ ವಿಚಾರವನ್ನು ಪಾಲಕರಂತೂ ಗಮನಿಸಲೇಬೇಕು. ಕಳಪೆ ಪೋಷಣೆ ಅಥವಾ ಅಪೌಷ್ಟಿಕತೆ ಆಹಾರದ ಅಸಮತೋಲನ ದೇಹದ ಅಧಿಕ ತೂಕ ವಂಶವಾಹಿ ಕಾರಣಗಳು ವ್ಯಾಯಾಮದ ಕೊರತೆ ಸಮರ್ಪಕ ನಿದ್ರೆ ರಾಸಾಯನಿಕ ಅಂಶಗಳಿಗೆ ಒಡ್ಡುವಿಕೆ.

ಪರಿಣಾಮಗಳೇನು?

ಮುಂಚಿನ ಪ್ರೌಢಾವಸ್ಥೆಯಿಂದಾಗಿ ಹೆಣ್ಮಕ್ಕಳು ಮಾನಸಿಕ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಅವರು ಸಾಮಾನ್ಯಕ್ಕಿಂತ ಕಡಿಮೆ ತೂಕ ಹೊಂದುತ್ತಾರೆ. ಭಾವನಾತ್ಮಕ ಬದಲಾವಣೆಗಳಿಂದಾಗಿ ಖಿನ್ನತೆ ಉಂಟಾದಲ್ಲಿ ಮದ್ಯ ಸೇವನೆ, ಡ್ರಗ್ಸ್​ಗಳಂತಹ ದುಶ್ಚಟಗಳಿಗೆ ಬಲಿಯಾಗಬಹುದು. ಪರಿಣಾಮವಾಗಿ ಅವರಲ್ಲಿ ಲೈಂಗಿಕ ಪ್ರಚೋದನೆಗಳು ಹೆಚ್ಚುವ ಸಂಭವವಿರುತ್ತದೆ. ಇದು ಬಹಳ ಆಘಾತಕಾರಿ ಹಾಗೂ ಅಪಾಯಕಾರಿಯಾಗಿದೆ. ಏಕೆಂದರೆ ಹರೆಯದ ಹುಡುಗಿಯರ ಮನಸ್ಸು ಲಗಾಮಿಲ್ಲದ ಕುದುರೆಯಂತೆ ಓಡುತ್ತಿರುತ್ತದೆ. ಅಂತಹ ಸಮಯದಲ್ಲಿ ಅವರು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ ಹಾಗೂ ಪ್ರಚೋದನೆಯನ್ನು ರಚನಾತ್ಮಕವಾಗಿ ಬಗೆಹರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಸಾಂಕ್ರಾಮಿಕವಲ್ಲದ ರೋಗಪೀಡಿತರಾಗುವ ಸಂಭವವಿದೆ. ಬಂಜೆತನ , ಎಂಡೋಮೆಟ್ರಿಯೋಸಿಸ್, ತೀವ್ರ ನೋವು, ಅತಿಯಾದ ರಕ್ತ ಸ್ರಾವ, ಗರ್ಭಾಶಯದ ಗಡ್ಡೆಗಳು , ಸಂತಾನೋತ್ಪತ್ತಿಗೆ ಅಡಚಣೆಗಳು, ಕ್ಯಾನ್ಸರ್ ಮುಂತಾದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಚಿಕ್ಕ ಪ್ರಾಯದಲ್ಲೇ ಪ್ರೌಢಾವಸ್ಥೆಗೆ ಬರುವ ಅಪಾಯಗಳನ್ನು ಹೇಗೆ ಸರಿದೂಗಿಸಬಹುದು ಎಂಬುದನ್ನು ಪೋಷಕರು ಅರಿತು ತಮ್ಮ ಮಕ್ಕಳಿಗೂ ವಿವರಿಸಬಹುದು.

ಪಾಲಕರಿಗೆ ಟಿಪ್ಸ್

  • ಮಕ್ಕಳೊಂದಿಗೆ ಚೆನ್ನಾಗಿ ಬೆರೆಯಿರಿ, ಅವರ ಬೆಳವಣಿಗೆ ಗಳನ್ನು ಗಮನಿಸಿ
  • ಮನೋಕಾಂಕ್ಷೆಗಳನ್ನು ಪೂರೈಸಿ
  • ಆತ್ಮಸ್ಥೈರ್ಯ ತುಂಬಲೇಬೇಕು
  • ನಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ, ಉಲ್ಲಸಿತರಾಗಿರು ವಂತೆ ಮಾಡಿ
  • ನಿತ್ಯ ಸೂರ್ಯನ ಹದ ಬಿಸಿಲು ತಾಗಲಿ, ಎಣ್ಣೆ ತಿಂಡಿ, ಬೇಕರಿ ತಿನಿಸು ಹೆಚ್ಚು ಬೇಡ
  • ಆಹಾರ ಸೇವನೆ ಸಮತೋಲನವಾಗಿರಲಿ
  • ಪೋಟೀನ್, ಕ್ಯಾಲ್ಶಿಯಂ ಆಹಾರ ನೀಡಿ
  • ಹಸಿರು ತರಕಾರಿ, ಸೊಪು್ಪ ಹೆಚ್ಚು ಕೊಡಿ, ಹಾಲು, ಮಾಂಸಾಹಾರ ಮಿತಿಯಲ್ಲಿರಲಿ
  • ರಾಸಾಯನಿಕ ಶಾಂಪು, ಸೋಪು ಬೇಕಿಲ್ಲ
  • ಎಳೆ ತ್ವಚೆ ಕಾಪಾಡಿಕೊಳ್ಳಲು ನೆರವಾಗಿ, ಆರೋಗ್ಯಕರ ಜೀವನಶೈಲಿ ಬಹುಮುಖ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net