

ಆ ಗಡಿ ಪ್ರದೇಶದಲ್ಲಿ ಸಾಕಷ್ಟು ಹಳ್ಳಕೊಳ್ಳಗಳು ಇರುವುದರಿಂದಲೂ ಮತ್ತು ಮುಳ್ಳಿನ ಬೇಲಿ ಹಾಕಿರದ ಕಾರಣದಿಂದಲೂ ಈ ಭಾಗದಿಂದಲೇ ಬಾಂಗ್ಲಾದೇಶದಿಂದ ಭಾರತಕ್ಕೆ ಖೋಟಾನೋಟುಗಳಿಂದ ಹಿಡಿದು ಹಲವಾರು ವಸ್ತುಗಳ ಕಳ್ಳಸಾಗಣೆಯಾಗುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಬಾಂಗ್ಲಾದೇಶೀಯರೂ ನಮ್ಮ ದೇಶಕ್ಕೆ ನುಸುಳಿ ಬರುತ್ತಾರೆ. ಈ ಕಾರಣದಿಂದ ಬಿಎಸ್ಎಫ್ ಹೆಚ್ಚಿನ ನಿಗಾ ವಹಿಸಿತ್ತು. ಬಂಧಿತ ಚೀನೀಯ ತನ್ನ ಹೆಸರನ್ನು ಹಾನ್ ಜುನ್ವೇಯಿ ಎಂದು ಹೇಳಿ 36 ವರ್ಷದ ತಾನು ಹೆಬೈ ಪ್ರಾಂತದವನಾಗಿದ್ದು ಉದ್ಯಮಿಯೆಂದ. ವಾರದ ಹಿಂದೆ ಚೀನಾದಿಂದ ಬಾಂಗ್ಲಾದೇಶದ ಢಾಕಾಗೆ ಬಂದು ಕೆಲವು ಕಳ್ಳಸಾಗಾಣಿಕೆದಾರರ ಸಹಾಯದಿಂದ ಭಾರತಕ್ಕೆ ನುಸುಳಿ ಬರುತ್ತಿರುವುದಾಗಿ ತಿಳಿಸಿದ. ಆತ ಉತ್ತಮವಾಗಿ ಇಂಗ್ಲಿಷ್ ಮಾತನಾಡಬಲ್ಲವನಾಗಿದ್ದ.
ಮಾಲಿಕ್ ಸುಲ್ತಾನಪುರದ ಬಿಎಸ್ಎಫ್ ಗಡಿ ಚೆಕ್ಪೋಸ್ಟ್ನಲ್ಲಿ ಹಾನ್ನನ್ನು ತಪಾಸಣೆ ಮಾಡಿದಾಗ ಆತನ ಬಳಿ ಚೀನಾದ ಪಾಸ್ಪೋರ್ಟ್ ಇದ್ದು ಅದರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಹೋಗಲು ವೀಸಾ ಇತ್ತು. ಆತನ ಚೀಲದಲ್ಲಿ ಒಂದು ಲ್ಯಾಪ್ಟಾಪ್, ಎರಡು ಸೆಲ್ ಫೋನ್ಗಳು, ಎರಡು ಪೆನ್ ಡ್ರೈವ್ಗಳು, ಅಂಗಡಿಯಲ್ಲಿ ಕ್ರೆಡಿಟ್ ಕಾರ್ಡ್ಗಳನ್ನು ಓದುವಂತಹ ಐದು ಮಷಿನ್ಗಳು, ಎರಡು ಎಟಿಎಂ ಕಾರ್ಡ್ಗಳು ಇದ್ದವು. ಆತ ಎಸೆದಿದ್ದ ಚೀಲದಲ್ಲಿ 1400 ಡಾಲರ್, ಬಾಂಗ್ಲಾದೇಶದ ಒಂದು ಲಕ್ಷ ಟಕಾ, ಭಾರತದ 3900 ರೂ.ಗಳು ಇದ್ದವು. ಇವಲ್ಲದೆ ಭಾರತ, ಬಾಂಗ್ಲಾದೇಶ ಹಾಗೂ ಚೀನಾದ ಹಲವಾರು ಸಿಮ್ ಕಾರ್ಡ್ಗಳು ಇದ್ದವು.
ಈ ಹಿಂದೆ 2010 ರಲ್ಲಿ ಹೈದರಾಬಾದಿಗೆ ಬಂದು ಅಲ್ಲಿ ಬಿಸಿನೆಸ್ ಮಾಡುತ್ತಿದ್ದು ಆನಂತರ ತನ್ನ ದೇಶಕ್ಕೆ ವಾಪಸಾಗಿ 2018ರ ಆದಿಯಲ್ಲಿ ಭಾರತಕ್ಕೆ ಮತ್ತೆ ಬಂದೆ. ಹರಿಯಾಣದ ಗುರುಗ್ರಾಮ ನಗರದಲ್ಲಿ ಹೋಟೆಲ್ ನಡೆಸುತ್ತಿದ್ದೆ. ಎರಡು ತಿಂಗಳ ಹಿಂದೆ ಸ್ವದೇಶಕ್ಕೆ ಮರಳಿ ಹೋದೆನೆಂದೂ ಪುನಃ ಭಾರತಕ್ಕೆ ಬರಲು ವೀಸಾಗೆ ಅರ್ಜಿ ಸಲ್ಲಿಸಿದಾಗ ಅದು ತಿರಸ್ಕೃತಗೊಂಡಿತೆಂದೂ ಹಾನ್ ಹೇಳಿದ. ಅರ್ಜಿ ಏಕೆ ತಿರಸ್ಕೃತವಾಯಿತೆಂದು ಕೇಳಿದಾಗ, ತನ್ನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದಾಗಿ ತಿಳಿಸಿದ. ಅಕ್ರಮವಾಗಿ ಭಾರತ ಗಡಿಯನ್ನು ಪ್ರವೇಶಿಸಿದ್ದರಿಂದ ಹಾನ್ನನ್ನು ಬಂಧಿಸಿ ಪಶ್ಚಿಮ ಬಂಗಾಳದ ಪೊಲೀಸರಿಗೆ ಒಪ್ಪಿಸಲಾಯಿತು.
ಪಶ್ಚಿಮ ಬಂಗಾಳದ ಪೊಲೀಸರ ಜತೆಗೆ ಭಾರತದ ಗೂಢಚರ ದಳದ ಸದಸ್ಯರು, ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಜಂಟಿಯಾಗಿ ಹಾನ್ನ ವಿಚಾರಣೆ ನಡೆಸಿದರು. ಹಾನ್ ಗುರುಗ್ರಾಮದಲ್ಲಿ ತಾನು ನಡೆಸುತ್ತಿರುವ ನೂರು ಹಾಸಿಗೆಗಳಿರುವ ಹೋಟೆಲ್ ಬಗ್ಗೆ ವಿವರಗಳನ್ನು ನೀಡಿದ. ತಾನು ಹುವಾ ಟೊಂಕ್ ಬೆಹತ್ ವಿಶ್ವ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ‘ಸ್ಟಾರ್ ಸ್ಟ್ರೀಕ್’ ಎನ್ನುವ ಹೋಟೆಲ್ ನಡೆಸುತ್ತಿದ್ದು, ಸಂಸ್ಥೆಗೆ ಪ್ರಶಾಂತ್ ಕುಮಾರ್ ಎನ್ನುವ ಹೈದರಾಬಾದ್ ನಿವಾಸಿ ಪಾಲುದಾರನೆಂದು ತಿಳಿಸಿದ.
ಈ ಹೋಟೆಲ್ ಬಗ್ಗೆ ಹರಿಯಾಣ ಪೊಲೀಸರನ್ನು ವಿಚಾರಿಸಿದಾಗ, ಹಾನ್ ಹೋಟೆಲಿನ ಕಟ್ಟಡವನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದ್ದು ಪ್ರತಿ ತಿಂಗಳೂ 15 ಲಕ್ಷ ರೂ.ಗಳ ಬಾಡಿಗೆ ಕೊಡುತ್ತಿದ್ದ. ಒಪ್ಪಂದದ ಕರಾರುಪತ್ರಕ್ಕೆ ಐದೂವರೆ ಲಕ್ಷ ರೂ. ನೋಂದಣಿ ಶುಲ್ಕ ಕಟ್ಟಿದ್ದ. ಈ ಹೋಟೆಲಿನ ಬಹುತೇಕ ಸಿಬ್ಬಂದಿ ಭಾರತದವರೇ ಆಗಿದ್ದರೂ ನಾಲ್ಕು ಜನರು ಚೀನೀಯರಾಗಿದ್ದರು ಎಂದು ತಿಳಿಯಿತು. ಹೋಟೆಲ್ ಒಪ್ಪಂದದ ನೋಂದಣಿ ಮಾಡಿಸುವಾಗ ಹಾನ್ ತಾನು ಭಾರತದ ಪ್ರಜೆಯೆಂದು ತಿಳಿಸಿ ಆಧಾರ್ ಕಾರ್ಡ್ ಕೊಟ್ಟಿದ್ದ ಎಂದು ತಿಳಿದಾಗ ತನಿಖಾಧಿಕಾರಿ ಗಾಬರಿಗೊಂಡ.
ಹೋಟೆಲ್ ಕಟ್ಟಡವನ್ನು ಲೀಸ್ ಪಡೆದ ಸಂಸ್ಥೆಯ ಇನ್ನೊಬ್ಬ ಪಾಲುದಾರನಾಗಿ ಜಿಹಾಕ್ ಸುನ್ ಎನ್ನುವ ಚೀನೀ ನಾಗರಿಕನಿದ್ದ. ಜಿಹಾಕ್ ಚೀನಾದ ಗೂಢಚಾರನಾಗಿದ್ದು ಭಾರತದ ವಿರುದ್ಧ ಗೂಢಚರ್ಯು ಮಾಡಿದ ಆರೋಪದ ಮೇರೆಗೆ ಅವನನ್ನು ಲಖನೌದಲ್ಲಿ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳವು ಬಂಧಿಸಿತ್ತು. ಆ ಸಮಯದಲ್ಲಿ ಆತ ಹಾನ್ ತನ್ನ ಜತೆಗಾರ ಎಂದು ಹೇಳಿದ ಮೇರೆಗೆ ಅಲ್ಲಿನ ಪೊಲೀಸರು ಹಾನ್ನಿಗಾಗಿ ಹುಡುಕಾಡುತ್ತಿದ್ದರು. ಅಷ್ಟರಲ್ಲಿ ಹಾನ್ ಚೀನಾಕ್ಕೆ ಹೊರಟುಹೋಗಿದ್ದ.
‘ಹೈದರಾಬಾದಿಗೂ ನಿನಗೂ ಇರುವ ಸಂಬಂಧವೇನು?’ ಎಂದು ಹಾನ್ನನ್ನು ಪ್ರಶ್ನಿಸಿದಾಗ, ತಾನು ಚೀನಾದ ಹಲವಾರು ಮೊಬೈಲ್ ಆಪ್ಗಳ ಮೂಲಕ ಹೆಚ್ಚಿನ ಬಡ್ಡಿ ನೀಡುವ ಆಸೆ ತೋರಿಸಿ ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವ ಸಂಸ್ಥೆ ನಡೆಸುತ್ತಿದ್ದೆ. ಇದೊಂದು ಪಿರಮಿಡ್ ಸ್ಕೀಂ ತರಹದ ಜಾಲ. ಮೊದಮೊದಲ ಠೇವಣಿದಾರರಿಗೆ ಕಾಲಕಾಲಕ್ಕೆ ಹೆಚ್ಚಿನ ಬಡ್ಡಿ ನೀಡಿ ಇನ್ನೂ ಹೆಚ್ಚಿನ ಹಣ ಹೂಡಲು ಹುರಿದುಂಬಿಸಿ ಹೆಚ್ಚು ಮೊತ್ತ ಸಂಗ್ರಹವಾದ ಕೂಡಲೇ ಸಂಸ್ಥೆಯನ್ನೇ ಮುಚ್ಚಿದೆ. 8 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಹೈದರಾಬಾದಿನಿಂದ ಗುರುಗ್ರಾಮಕ್ಕೆ ಹೋಗಿ ಹೋಟೆಲ್ ತೆರೆದೆ ಎಂದ.
ತನ್ನ ದೇಶದ ಇತರ ನಾಗರಿಕರೂ ಹೈದರಾಬಾದಿನಲ್ಲಿಯೇ ವಾಸಿಸುತ್ತಿದ್ದರು. ಅವರು ತ್ವರಿತವಾಗಿ ಸಾಲ ಸಿಗುವ ಮೊಬೈಲ್ ಆಪ್ಗಳನ್ನು ಡೆವಲಪ್ ಮಾಡಿದ್ದರು. ಕಡಿಮೆ ಮೊತ್ತದ ಸಾಲ ಬೇಕಾದವರಿಗೆ ಆಪ್ ಮೂಲಕವೇ ಸಾಲ ನೀಡುತ್ತಿದ್ದರು. ಸಾರ್ವಜನಿಕರು ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ಒದಗಿಸಿದರೆ ಸಾಕು, ಬೇಗನೆ ಸಾಲ ಸಿಗುವ ಹಾಗೆ ಮಾಡುತ್ತಿದ್ದರು. ಇಂತಹ ಆಧಾರ್ ಕಾರ್ಡಗಳ ಮಾಹಿತಿಯನ್ನು ಅವರು ಕಳ್ಳತನ ಮಾಡುತ್ತಿದ್ದರು ಎಂದ.
ಹೈದರಾಬಾದಿನ ಪೊಲೀಸರನ್ನು ಸಂರ್ಪಸಿದಾಗ ಅವರು ಹಾನ್ ಮತ್ತು ಅವನಂತಹ ಹಲವಾರು ಚೀನೀ ನಾಗರಿಕರು ಗುರುಗ್ರಾಮ, ಲಖನೌ, ಹೈದರಾಬಾದ್ಗಳಲ್ಲಿ ಸಂಸ್ಥೆಯ ಶಾಖೆಗಳನ್ನು ತೆರೆದಿದ್ದರು. ಆಪ್ಗಳ ಮೂಲಕ ಸಾಲ ಕೊಡುತ್ತಿದ್ದರು. ಸಂಸ್ಕರಣಾ ಶುಲ್ಕ ಮುಂತಾದವೆಂದು ಸಾಲದ ಶೇ. 5ರಷ್ಟನ್ನು ಮೊದಲೇ ಮುರಿದುಕೊಳ್ಳುತ್ತಿದ್ದರು. ನಿಗದಿತ ಸಮಯದಲ್ಲಿ ಬಡ್ಡಿಸಹಿತ ಸಾಲ ತೀರಿಸದೇ ಹೋದರೆ ದಿನಕ್ಕೆ ಸಾಲದ ಶೇ. 1 ರಂತೆ ಬಡ್ಡಿ ಪಡೆಯುತಿದ್ದರು. ಸಾಲ ತೆಗೆದುಕೊಂಡವರನ್ನು ಬೆದರಿಸುತ್ತಿದ್ದರು. ಬೆದರಿಕೆ ಹಾಕುವ ಸಲುವಾಗಿಯೇ ಹಲವಾರು ಕಾಲ್ ಸೆಂಟರ್ಗಳನ್ನು ಮಾಡಿಕೊಂಡಿದ್ದರು. ಇವುಗಳಲ್ಲಿ ಸುಮಾರು 100 ಜನರಿಗೆ ಉದ್ಯೋಗ ಕೊಟ್ಟಿದ್ದರು. ಇದಲ್ಲದೆ ಸಾಲಗಾರರು ಸಾಲ ಪಡೆಯಲು ನೀಡುತ್ತಿದ್ದ ಸಿಮ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ಕಾರ್ಡ್ಗಳನ್ನು ನಕಲಿ ಮಾಡಿ ತಮ್ಮ ಕ್ರಿಮಿನಲ್ ಚಟುವಟಿಕೆಗಳಿಗಾಗಿ ಬಳಸುತ್ತಿದ್ದರು. ಈ ಸಂಸ್ಥೆಗಳು ನೀಡಿದ ಕಿರುಕುಳದ ಫಲವಾಗಿಯೇ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿ ತಮ್ಮ ನಗರದಲ್ಲಿಯೇ ನಾಲ್ಕು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದರು.
ಆನಂತರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಹಿಸಿಕೊಂಡಿತು. ಹಾನ್ ಮತ್ತು ಅವನಂತಹ ಹಲವಾರು ಚೀನೀ ನಾಗರಿಕರು ಭಾರತದ ಮೊಬೈಲ್ ಸಿಮ್ ಕಾರ್ಡಗಳನ್ನು ಪಡೆದು ಅವನ್ನು ಚೀನಾಕ್ಕೆ ಸಾಗಿಸುತ್ತಿದ್ದರು. ಆ ದೇಶದ ಗೂಢಚರ ದಳಗಳು ಇವುಗಳನ್ನು ಬಳಸಿ ನಮ್ಮ ದೇಶದ ನಾಗರಿಕರ ಮಾಹಿತಿಗಳನ್ನು ಕಲೆಹಾಕುತ್ತಿದ್ದವು ಎನ್ನುವುದು ತಿಳಿಯಿತು. ಭಾರತದಿಂದ ಚೀನಾಕ್ಕೆ ಸುಮಾರು 1300 ಸಿಮ್ಾರ್ಡ್ಗಳನ್ನು ಒಯ್ದಿದ್ದರೆಂದು ತಿಳಿಯಿತು. ಇವರು ಒಳಉಡುಪುಗಳಲ್ಲಿ ಸಿಮ್ಳನ್ನು ಅಡಗಿಸಿ ಸ್ವದೇಶಕ್ಕೆ ಒಯ್ಯುತ್ತಿದ್ದರು. ಭಾರತದ ನಾಗರಿಕರ ಮಾಹಿತಿಯನ್ನು ಕಳ್ಳತನ ಮಾಡುವುದೇ ಇವರುಗಳ ಮೂಲ ಉದ್ದೇಶವಾಗಿತ್ತು. ದೆಹಲಿಯ ಆಸುಪಾಸಿನ ಪ್ರದೇಶಗಳು ಮತ್ತು ಹೈದರಾಬಾದ್ ಇವರ ಕಾರ್ಯಸ್ಥಾನಗಳಾಗಿದ್ದವು.
ಹಾನ್ನ ಬಂಧನವಾದ ನಂತರ 2020ರ ಜೂನ್ ತಿಂಗಳಾಂತ್ಯಕ್ಕೆ ಭಾರತ ಸರ್ಕಾರವು ಚೀನಾ ಮೂಲದ 59 ಮೊಬೈಲ್ ಮತ್ತಿತರ ಆಪ್ಗಳ ಮೇಲೆ ನಿಷೇಧ ಹೇರಿತು. ಭಾರತೀಯ ನಾಗರಿಕರ ಖಾಸಗಿ ಮಾಹಿತಿ ಸಂಗ್ರಹಿಸಿ ಭಾರತದ ಐಕ್ಯತೆಗೆ ಹಾಗೂ ಸಮಗ್ರತೆಗೆ ಧಕ್ಕೆ ನೀಡುವುದೇ ಈ ಆಪ್ಗಳ ಉದ್ದೇಶ ಎಂದಿತು ಸರ್ಕಾರ. ಸರ್ಕಾರದ ಈ ತೀರ್ವನದ ವಿರುದ್ಧ ಚೀನಾ ಭಾರೀ ಪ್ರತಿಭಟನೆ ದಾಖಲಿಸಿದ್ದನ್ನು ಕಂಡರೆ ಆ ದೇಶದ ಉದ್ದೇಶವೇನೆಂದು ಅರಿವಾಗುತ್ತದೆ.
ಬಾಂಗ್ಲಾ ಗಡಿಯಲ್ಲಿ ದಸ್ತಗಿರಿಯಾದ ಹಾನ್ ಮತ್ತು ಅವನ ಇತರ ಸಹಚರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ವಿದೇಶೀಯರ ಕಾನೂನು, ಭಾರತೀಯ ದಂಡ ಸಂಹಿತೆ ಮುಂತಾದ ಕಾನೂನುಗಳನ್ವಯ ಆರೋಪಪಟ್ಟಿ ಸಲ್ಲಿಸಲಾಗಿದೆ. ‘ಕಾಳಗವನ್ನೇ ಮಾಡದೆ ಶತ್ರುವನ್ನು ಸೋಲಿಸುವುದು ಯುದ್ಧದ ಅಪ್ರತಿಮ ಕಲೆ’ ಎಂದ ಕ್ರಿಪೂ 5ನೆಯ ಶತಮಾನದ ಚೀನೀ ಯುದ್ಧ ತಂತ್ರಜ್ಞ ಸನ್ ಸೂನ ಮಾತುಗಳನ್ನು ಆ ದೇಶ ಅಕ್ಷರಶಃ ಪಾಲಿಸುತ್ತಿದೆ. ಇದನ್ನು ವಿಫಲಗೊಳಿಸಬೇಕಾದರೆ ಚೀನೀ ಆಪ್ಗಳನ್ನು ಡೌನ್ಲೋಡ್ ಮಾಡದಿರುವುದು ಸೂಕ್ತ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)