ಅಭ್ಯಂಜನಕ್ಕಾಗೇ ಇರುವ ಅದ್ಭುತ ನಗರ ಬಾತ್

Bath
Published on

ನಿಖರ ಖರ್ಚು, ವೆಚ್ಚಗಳ ಲೆಕ್ಕಾಚಾರ ಇದ್ದಿದ್ದರಿಂದ ತುಂಬ ಕಡಿಮೆ ವೆಚ್ಚದಲ್ಲಿ ಇಂಥ ಸಂದರ್ಶಿಸಲೇಬೇಕಾದ ಒಳನಾಡ ಪ್ರವಾಸ ಸಾಧ್ಯವಾಗುತ್ತದೆ. ಇಲ್ಲವಾದರೆ ವಿದೇಶಿ ಪಯಣ ದುಬಾರಿ ಎನ್ನುವ, ಅದರಲ್ಲೂ ತುಂಬ ದುಬಾರಿ ಪ್ರವಾಸಿ ದೇಶವೆಂದೇ ಹೆಸರಾದ ಬ್ರಿಟನ್ ಕೈಗೆಟುಕುವುದೇ ಇಲ್ಲ. ನೆಟ್​ನಲ್ಲಿ ನೋಡಿ, ಸ್ಥಳೀಯ ಸ್ನೇಹಿತರ ಮೂಲಕ ಮಾಹಿತಿ ಮೊದಲೇ ಪಡೆದರೆ ಸುಲಭ.

ಅಲೆಮಾರಿಯ ಡೈರಿ
ಯುನೆಸ್ಕೊ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸಾಮರ್​ಸೆಟ್ ಕೌಂಟಿಯ, ನೆಲದಾಳಕ್ಕೆ ಸುಮಾರು ಮೂವತ್ತು ಅಡಿ ಹೂತು ಹೋಗಿದ್ದ ಕ್ರಿಶ. ಒಂದರಿಂದಲೇ ಆಸ್ತಿತ್ವದಲ್ಲಿದ್ದ ಮೋಹಕ ನಗರಿ ಬಾತ್. ಇನ್ಯಾವುದೋ ಕಾರಣಕ್ಕೆ ಪುರಾತತ್ವ ಇಲಾಖೆಯ ಕೈಗೆ ಸಿಕ್ಕು, ಇತಿಹಾಸ ಹೊರಕ್ಕೆ ಬಂತು ನೋಡಿ. ಈ ಪಟ್ಟಣದ ನಸೀಬೇ ಬದಲಾಗಿ ಹೋಯಿತು. ಬಾತ್ ಪಟ್ಟಣದಲ್ಲಿ ಪತ್ತೆಯಾದ ಈ ಪುರಾತನ ಸ್ನಾನದ ಗೃಹದಲ್ಲಿ ಈಗಲೂ ನೀರು ಮತ್ತು ಬಿಸಿನೀರ ಬುಗ್ಗೆ ಕಾಯ್ದುಕೊಂಡಿದ್ದು ಆಳಕ್ಕಿಳಿದು ನೋಡಲು ಏನಿಲ್ಲ ಎಂದರೂ ಎರಡು-ಮೂರು ಸಾವಿರ ರೂಪಾಯಿ ಪೀಕುತ್ತಾರೆ. 1987ರಲ್ಲಿ ಯೊನೆಸ್ಕೊ ‘ಗ್ರೇಟ್ ಸ್ಪಾ ಟೌನ್ ಆಫ್ ಯುರೋಪ್’ ಎಂದು ಕರೆದಿದ್ದೇ ತಡ ‘ಆವನ್’ ನದಿಯ ಸುತ್ತಲಿನ ಕಣಿವೆ ಪ್ರದೇಶವನ್ನು ಸಂಪೂರ್ಣ ಲಂಡನ್ ಒಮ್ಮೆ ತಿರುಗಿ ನೋಡಿತ್ತು.

ಅನಾಮತ್ತಾಗಿ 157 ಕಿ.ಮೀ. ಉದ್ದ ಹರಿವ ಈ ನದಿ ನೀರೇ ಬಾತ್​ನಲ್ಲಿ ಸ್ನಾನದ ಮನೆಗಳಿಗೆ ಪೂರೈಕೆಯಾಗುತ್ತದೆ. ಮೊದಲನೆಯ ಶತಮಾನದಲ್ಲಿಯೇ ಬಿಸಿನೀರ ಬುಗ್ಗೆಗಳು ಸಿಕ್ಕಿ, ಮಧ್ಯ ರೋಮನ್​ನ ರಾಜಮನೆತನಗಳು ಸ್ನಾನಗೃಹಗಳನ್ನು ನಿರ್ವಿುಸಿಕೊಂಡಾಗಿನಿಂದ ಆರಂಭವಾದ ಸ್ಪಾ ಕಲ್ಚರ್ ಈಗಲೂ ಮುಂದುವರಿದಿದೆ. ಪ್ರಸ್ತುತ ಇರುವ ನಿಯೋ ಕ್ಲಾಸಿಕಲ್ ಶೈಲಿಯ ಸ್ಪಾ ಮತ್ತು ಪುರಾತನ ಗೃಹದ ಮಾಡೆಲ್ಲುಗಳು ಏಳನೆಯ ಶತಮಾನದ್ದು. ಸುತ್ತಲೂ ಆಳ ಅಗಾಧ ಉದ್ದಾನುಉದ್ದದ ಅಂಕುಡೊಂಕಿನ ಹಸಿರು ಕಣಿವೆಯ ಮಧ್ಯದಲ್ಲಿರುವ ಬಾತ್​ನ್ನು ಪ್ರಕೃತಿಯ ಸೌಂದರ್ಯಕ್ಕೆ ಸ್ಪರ್ಧಿಸುವಂತೆ ಎತ್ತರೆತ್ತರ ಗೋಪುರ ಶೈಲಿ ಮನೆಗಳು ಪೂರ್ತಿ ನಗರಕ್ಕೆ ಅಲಂಕಾರವಾಗಿವೆ.

ಅಂಕುಡೊಂಕಿನ ಏರಿಳಿತದ ಕಲ್ಲಿನ ದಾರಿಗಳ ಪುರಾತನ ಶೈಲಿಯ ಗಲ್ಲಿಗಳು ಈಗಲೂ ಅದೇ ಐತಿಹಾಸಿಕ ಪಟ್ಟಣಕ್ಕೆ ಕಾಲಿಟ್ಟಂತೆ ಅನುಭವಕ್ಕೀಡು ಮಾಡುತ್ತ ದಂಗು ಬಡಿಸುತ್ತವೆ. 1979ರಲ್ಲಿ ಜಾರಿಗೆ ಬಂದ ‘ಮಾನ್ಯೊಮೆಂಟ್ಸ್ ಮತ್ತು ಆರ್ಕಿಯಾಲಜಿಕಲ್ ಆಕ್ಟ್ ಆಫ್ ಇಂಗ್ಲೆಂಡ’ ಪ್ರಕಾರ ಬಾತ್​ನಲ್ಲಿ ಖಾಸಗಿ ಮತ್ತು ಪುರಾತತ್ವ ಇಲಾಖೆ ಅಡಿಯಲ್ಲಿನ ಆಸ್ತಿಗಳು ಹೇಗೆ ನಿರ್ವಹಣೆ ಮಾಡಬೇಕು ಎಂದು ಕಾಯ್ದೆಯನ್ನೇ ಜಾರಿಗೊಳಿಸಲಾಗಿದೆ. ಹಾಗಾಗಿ ಹೊಸ ಕಟ್ಟಡಗಳು, ನಿರ್ವಣಗಳು ಬಂದರೂ, ವಿನ್ಯಾಸದ ಕಾರಣ ನಮಗೆ ವ್ಯತ್ಯಾಸವೇ ಗೊತ್ತಾಗುವುದಿಲ್ಲ.

ಚೆಂದದ ರಸ್ತೆ ಪಕ್ಕದ ಬಿಯರ್ ಬಾರ್, ಹೋಟೆಲ್​ಗಳು ಇಲ್ಲಿನ ಆಕರ್ಷಣೆ. ವಿಪರೀತ ಎನ್ನುವಷ್ಟು ಸ್ವಚ್ಛತೆ ಮತ್ತು ಶಿಸ್ತು ಎದ್ದು ಕಾಣುತ್ತದೆ. ರಸ್ತೆಗಳಲ್ಲಿ ಚೆಂದದ ಕುಸುರಿ ಕಲ್ಲುಗಳನ್ನು ಜೋಡಿಸಿ ಪೂರ್ತಿ ಪಟ್ಟಣವನ್ನು ಸಿಂಗರಿಸಿದ್ದಾರೆ. ಎತ್ತರೆತ್ತರ ಗ್ರಿಕ್ ಮತ್ತು ರೋಮನ್ ಶೈಲಿಯ ಕಟ್ಟಡಗಳು ಬಾಥಿಕ್ ಮತ್ತು ಗೋಥಿಕ್ ಶೈಲಿಯ ಕಿಟಕಿಗಳ ವಿನ್ಯಾಸವನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಲು ನಿಂತುಕೊಂಡರೆ ಒಂದು ಟಿ.ಬಿ. ಮೆಮೊರಿ ಬೇಕಾದೀತು. ನಿಂತಲ್ಲಿ ಕೂತಲ್ಲಿ ಕ್ಯಾಮೆರಾ ಹಾಕಿ ಎನ್ನುವಂತಹ ಪಟ್ಟಣ ಇದು.

ನೀರಿನಲ್ಲಿ ಹಿತವಾದ ಅರಿಶಿಣ, ಲವಂಗ, ನೋವುನಿವಾರಕಎಣ್ಣೆ, ಶಾಂಪು, ಗುಲಾಬಿ, ಮಲ್ಲಿಗೆ, ಗಂಧ ಹೀಗೆ ನಿಮಗೆ ಹಿಡಿಸುವ ಅಥವಾ ನಿಮ್ಮ ಮೈ ಮನಸ್ಸಿಗೆ ಬೇಕಿರುವ ರೀತಿಯ ಎಣ್ಣೆ ನೀರು ಲಭ್ಯ. ಉಜ್ಜಿಸಿಕೊಳ್ಳಿ ಸ್ನಾನ ಮಾಡಿ ಹೊರಕ್ಕೆ ಬನ್ನಿ. ಪ್ರವಾಸಿಗರಿಗೆ ಬಟ್ಟೆ ಒದ್ದೆಯಾಗುವ ಅದನ್ನು ಒಣಗಿಸಬೇಕಲ್ಲ ಎಂಬಿತ್ಯಾದಿ ರಗಳೆಗಳಿಲ್ಲ. ಎಲ್ಲ ಶುದ್ಧಾನು ಶುದ್ಧ ಬಿಳಿಬಿಳಿ, ನೀಲಿ ರಂಗಿನ ಒಣಗಿರಿಸಿದ್ದ ಟವಲ್​ಗಳು, ಇನ್ನೊಂದೆರಡು ಸಲ ಸ್ನಾನ ಮಾಡೊಣ ಎನ್ನಿಸುವಷ್ಟು ಶುದ್ಧವಾದ ಬಾತ್​ರೂಮ್ಳೂ ಲಭ್ಯ. ತಿರುಗಾಡಿ ದಣಿದ ಮನಸ್ಸಿಗೂ ಮೈಗೂ ಹಿತಕಾರಿ. ಪ್ರವಾಸಿಗರು ಇಲ್ಲಿ ಸರಿಯಾದ ವಸತಿ ವ್ಯವಸ್ಥೆ ಮಾಡಿಕೊಂಡಿರಬೇಕು. ಇಲ್ಲ ಬೆಳ್​ಬೆಳಗ್ಗೆ ಬಾತ್​ನಗರ ಪ್ರವೇಶ ಮಾಡಿ ಸಂಜೆ ಮರಳುವ ಯೋಜನೆ ಇದ್ದರೆ ಮಜ್ಜನದ ಮಜ ದಕ್ಕೀತು ಆದರೆ ಬಾತ್ ಪಟ್ಟಣದ ಅದ್ಭುತ ಜೀವನವಿಧಾನವಲ್ಲ. ಅವಸರ ಮಾಡಿದರೆ ಬಾತ್ ಬಾತೋ ಮೇ ಮುಗಿದೇ ಹೋಗುತ್ತದೆ.

ಮಜ್ಜನ ಎಂದರೆ ಇದೇ ಇರ್ಬೇಕು ಎನ್ನುವ ಹಾಗೆ ವಿವಿಧ ರೀತಿಯ ಪೇಸ್ಟುಗಳಿಂದ ಉಜ್ಜಿ ನಯವಿನಯವಾಗಿ ಮಾತನಾಡಿಸುತ್ತ, ಕೇಳುವ ತವಕ, ಆಸಕ್ತಿ ಇದ್ದರೆ ಬಾತ್ ಪಟ್ಟಣದ ಕತೆ ಹೇಳುತ್ತ, ಎಲ್ಲೆಲ್ಲಿ ಏನೆಲ್ಲ ಮೆನು ಸಿಗುತ್ತದೆ, ಏನೆಲ್ಲ ತಿಂದಿರಿ ಎಂದೆಲ್ಲ ವಿಚಾರಿಸಿಕೊಂಡು ಬಾತ್ ನಗರವನ್ನು ಬಾತೋ ಬಾತೋಮೇ ತೋರಿಸಬಲ್ಲಷ್ಟು ಸಜ್ಜನ ಸರ್ವೀಸು ಇಲ್ಲಿದೆ. ಇದಕ್ಕೆಲ್ಲ ಸುಮಾರು ಅರ್ಧ ದಿನವಾದರೂ ಬೇಕೆಬೇಕು.

ವ್ಯವಧಾನ ಮತ್ತು ಅದೇ ರೀತಿ ವ್ಯವಹರಿಸುವ ಜಾಣ್ಮೆಯ ಜರೂರತ್ತು ಪ್ರವಾಸಿಗರಾದ ನಮಗೂ ಇರಬೇಕು. ಎಲ್ಲಕ್ಕಿಂತಲೂ ಮುಖ್ಯವಾಗಿ ಹೆಣ್ಣುಮಕ್ಕಳಿದ್ದರೆ ಅಲ್ಲಲ್ಲೆ ಕೈ ತಾಕಿಸುವ ಹರಾಮಿತನ ಇಲ್ಲದ, ಸೌಜನ್ಯಯುತವಾಗಿ ವರ್ತಿಸುವ ಜರೂರತ್ತೂ ಬೇಕೆ ಬೇಕು. ಕಾರಣ ಅವರ ದಿರಿಸುಗಳು ಎಗ್ಗಿಲ್ಲದೆ ಎದೆ, ತೊಡೆ, ಮೈ ಪ್ರದರ್ಶನ ಎಂದು ನಮಗನ್ನಿಸಿದರೂ, ಅದು ಅಶ್ಲೀಲ ಎನ್ನಿಸದ ರೀತಿಯಲ್ಲಿ ಬದುಕುವುದೇ ಅವರ ರೂಢಿಯೂ ಆಗಿರುವುದರಿಂದ, ಬಾತ್ ಪ್ರವೇಶಕ್ಕೂ ಮೊದಲು ಸಜ್ಜನಿಕೆಯ ವರ್ತನೆ ನಮ್ಮ ಕಡೆಯ ಪ್ರವಾಸಿಗರಿಗೆ ತುಂಬ ಮುಖ್ಯ. ನೆನಪಿರಲಿ ಹೊರದೇಶದಲ್ಲಿನ ನಮ್ಮ ವರ್ತನೆ ನಮ್ಮ ದೇಶದ ಅಂತಾರಾಷ್ಟ್ರೀಯ ವರ್ಚಸ್ಸಿನ ಮೇಲೆ, ಪಾಸ್​ಪೋರ್ಟುಗಳ ಜಾಗತಿಕ ರ‍್ಯಾಂಕಿಂಗ್ ಮೇಲೆ ಪರಿಣಾಮ ಬೀರುತ್ತದೆ.

ಬೇಗ ಕತ್ತಲೆಯಾಗುವ ಈ ನಗರಕ್ಕೆ ಅರಕ್ಕೆಲ್ಲ ಕೊನೆಯ ಬಸ್ಸು. ಬಸ್ ಸರ್ವೀಸ್ ಮಾತ್ರ ನಂಬಿಕೊಂಡಿರುವ ಬಾತ್​ಗೆ ಪ್ರವಾಸಿ ದೃಷ್ಟಿಯಿಂದ ಸಾರಿಗೆ ಸೌಲಭ್ಯ ತುರ್ತಾಗಿ ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ. ನಾನು ಕಾರ್ಡಿಫ್ ಸಹಿತ ಪ್ರವಾಸದಲ್ಲಿ ನಿಗದಿ ಮಾಡಿಕೊಂಡಿದ್ದರಿಂದ ಉದ್ದದ ಪಯಣ ಅನಿವಾರ್ಯವಾಗಿತ್ತು. ಕಾರಣ ಬಾತ್ ನಂತರ ಪಯಣಿಸಿ ರಾತ್ರಿ ಕಾರ್ಡಿಫ್ ನಗರದಲ್ಲಿ ರಾತ್ರಿ ವಸತಿಗೆ ಏ.ಆರ್.ಬಿ.ಎನ್.ಬಿ. ಕೇವಲ ಸಾವಿರದ ಮುನ್ನೂರು ರೂಪಾಯಿಗೆ ತೆಗೆದುಕೊಂಡಿದ್ದೆ.

ಹೀಗೆ ತಲುಪಲು ಆಸ್ಟರ್ಲೀ ಸ್ಟೇಷನ್​ನಲ್ಲಿ ಪಿಕಿಡಿಲ್ಲಿ ಲೈನ್​ನಿಂದ ಹೊರಟು, ಕಿಂಗ್ಸ್​ಕ್ರಾಸ್ ಅಂತಾರಾಷ್ಟ್ರೀಯ ರೈಲು ನಿಲ್ದಾಣ ಸೇರಿಕೊಂಡರೆ, ಅಲ್ಲಿಂದ ಪೆಡಿಂಗಟನ್ ಸ್ಟೇಶನ್ನು. ಕೆಲವೇ ಕೆಲವು ನಿಮಿಷದ ಗ್ಯಾಪ್​ಗಳಲ್ಲಿ ಬಂದ ಮತ್ತೊಂದು ರೈಲು ಹಿಡಿದು ಕಿಂಗ್​ಹ್ಯಾಮ್ ಎನ್ನುವ ನಿಲ್ದಾಣ ತಲುಪಿದರೆ ನಿಸರ್ಗ ಸ್ವರ್ಗದಲ್ಲಿ ಪ್ರವಾಸದ ಅನುಭವ ನಿಮ್ಮದು. ಅಲ್ಲಿಂದ ಪಯಣಕ್ಕೆ ಸಿಕ್ಕುವುದೇ (ಜಿ.ಡಬ್ಲು.ಆರ್)

ಗ್ರೇಟ್ ವೆಸ್ಟರ್ನ್ ರೈಲು. ಇದರಲ್ಲಿ ಆಕ್ಸ್ ಫರ್ಡ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಅದೇ ಲೈನ್​ನಲ್ಲಿ ಬರುವ ಇನ್ನೊಂದು ರೈಲಿನಲ್ಲಿ ಡಿಡಿಕಾಟ್ ಪಾರ್ಕ್​ವೇ ನಿಲ್ದಾಣ ತಲುಪುವಾಗ ಅಂದಾಜು ಹನ್ನೊಂದು ಗಂಟೆ. ಬಸ್ ಸೇವೆ ಮಾತ್ರ ಇರುವ ಬಾತ್​ಗೆ ಅರ್ಧಗಂಟೆ ಪಯಣ. ಐದೇ ಐದು ನಿಮಿಷ ನಡಿಗೆ ಕೇಳುವಷ್ಟು ಹತ್ತಿರದ ನಿಲ್ದಾಣವೇ ‘ರೋಮನ್ ಸ್ಪಾ.’ ಈ ಕೊನೆಯ ಬಸ್ ಇದೆಯಲ್ಲ, ಬಿಟ್ಟರೆ ಕೆಟ್ಟಿರಿ. ಇವೆಲ್ಲ ಸ್ಪಾ ನಗರಿಯ ನಿಯಂತ್ರಣದಲ್ಲಿದ್ದು ಓಡಾಟ ಮತ್ತು ಸಮಯಾವಧಿಯೂ ಕಮ್ಮಿ.

ನೆನಪಿರಲಿ ಇದೆಲ್ಲ ನಾವೇ ಮಾಡಿಕೊಂಡು ದಾರಿ ಮೂಲಕ ಸಂದರ್ಶಿಸಿ ಬಂದದ್ದಕ್ಕೆ ಬಸ್, ರೈಲುಗಳ ಎಲ್ಲ ವೆಚ್ಚ ಸರಿಯಾಗಿ ಎಣಿಸಿದರೆ ಒಂದೆರಡು ಸಾವಿರವೂ ದಾಟಿರಲಿಲ್ಲ. ಹೀಗೆ ನಿಖರ ಖರ್ಚು, ವೆಚ್ಚಗಳ ಲೆಕ್ಕಾಚಾರ ಇದ್ದಿದ್ದರಿಂದ ತುಂಬ ಕಡಿಮೆ ವೆಚ್ಚದಲ್ಲಿ ಇಂಥ ಸಂದರ್ಶಿಸಲೇಬೇಕಾದ ಒಳನಾಡ ಪ್ರವಾಸ ಸಾಧ್ಯವಾಗುತ್ತದೆ. ಇಲ್ಲವಾದರೆ ವಿದೇಶಿ ಪಯಣ ದುಬಾರಿ ಎನ್ನುವ, ಅದರಲ್ಲೂ ತುಂಬ ದುಬಾರಿ ಪ್ರವಾಸಿ ದೇಶವೆಂದೇ ಹೆಸರಾದ ಬ್ರಿಟನ್ ಕೈಗೆಟುಕುವುದೇ ಇಲ್ಲ. ಈ ವಿವರ ಓದುವಾಗ ಇಷ್ಟೆಲ್ಲ ರೈಲು ಬದಲಾವಣೆ ಬಸ್ ಇತ್ಯಾದಿ ಕಷ್ಟ ಎನ್ನಿಸುತ್ತದೇಯೇ? ಎಂಬ ಪ್ರಶ್ನೆ ಕಾಡಬಹುದು. ಆದರೆ ಅಲ್ಲಿನ ಅಚ್ಚುಕಟ್ಟು ಮತ್ತು ನಿಖರ ಸಮಯದ ವ್ಯವಸ್ಥೆಯಲ್ಲಿ ತುಂಬ ಸಲೀಸು. ಇದಾಗುವುದಿಲ್ಲ ಎಂದು ಬಾಡಿಗೆ ಕಾರು ತೆಗೆದುಕೊಂಡರೆ ಒಂದು ಸಾವಿರದ ಪಯಣಕ್ಕೆ ಹತ್ತಾರು ಸಾವಿರ ಕೈಬಿಡುತ್ತದೆ. ಇದೇ ನನ್ನ ಹೆಚ್ಚು ವೆಚ್ಚವಿಲ್ಲದ ವಿದೇಶಿ ಪ್ರವಾಸದ ಮೂಲ ರಹಸ್ಯವೂ ಹೌದು. ಆದರೆ ನೆಟ್​ನಲ್ಲಿ ನೋಡಿಕೊಂಡು, ಸ್ಥಳೀಯ ಸ್ನೇಹಿತರ ಮೂಲಕ ಎಲ್ಲ ಮಾಹಿತಿ ಮೊದಲೇ ನಿಗದಿಪಡಿಸಿಕೊಂಡಿದ್ದರೆ ಅರ್ಧ ಸುಲಭ. ಇನ್ನರ್ಧ ಅಲ್ಲಲ್ಲೇ ನಿರ್ಧಾರ. ಎಲ್ಲವೂ ನಿಖರ ಎಂದು ಏನೂ ಇರುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮತ್ತು ಚಲನೆ ಇರಬೇಕಷ್ಟೆ. ಎಲ್ಲಕ್ಕಿಂತಲೂ ಮುಖ್ಯ ನಮ್ಮ ಸಮಯ ಮಿತಿ ಮತ್ತು ಅದಕ್ಕೆ ತಕ್ಕ ವೇಗ ಅನಿವಾರ್ಯ ಇಲ್ಲಿ. ವಾರ್ಷಿಕ ಆರೇಳು ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ಈ ನಗರಿಯಲ್ಲಿ ಸ್ನಾನಗೃಹ ಮಾತ್ರವಲ್ಲ, ದೋಣಿವಿಹಾರಕ್ಕಾಗಿ ಕಾಲುವೆಗಳು, ರಾಯಲ್ ಕ್ರೆಸೆಂಟ್, ಪರೇಡ್ ಉದ್ಯಾನ, ರಾಯಲ್ ವಿಕ್ಟೋರಿಯಾ ಉದ್ಯಾನ ಜೊತೆ ಸಾಮರ್​ಸೆಟ್ ಶಾಪಿಂಗ್ ಕಾಂಪ್ಲೆಕ್ಸ್ ಅತಿ ದೊಡ್ಡ ಕೇಂದ್ರ. ಇದಾಗಿಯೂ ವಾಲ್ಕಾಟ್ ಮತ್ತು ಆರ್ಕಿಡ್ ಕಾರಿಡಾರ್, ವಿಲ್ಸೇಮ್ ಸ್ಟಾಲ್ ಹಾಗೂ ಯಾರ್ಕ್ ಸ್ಟ್ರೀಟ್ ಜೊತೆಗೆ ರಾಯಲ್ ಥಿಯೇಟರ್ ಕೂಡ ಬಕೇಟ್ ಲಿಸ್ಟ್ ಎನ್ನುವಷ್ಟರಲ್ಲಿ, ಅರ್ಟ್ ಮ್ಯೂಸಿಯಂ, ಏಷ್ಯನ್ ಆರ್ಟ್ ಸೆಂಟರ್, ಹ್ಯಾರ್ಷಲ್ ಮ್ಯೂಸಿಯಂ ಆಫ್ ಅಸ್ಟ್ರಾನಮಿ ಹಾಗೂ ಹಾಲ್ಬನ್ ಮ್ಯೂಸಿಯಂ ನಾವೂ ಇದ್ದೇವೆ ಎಂದು ಯಾದಿಗೆ ಸೇರ್ಪಡೆಯಾಗುತ್ತವೆ. ಹಾಗಾಗಿ ಬಾತ್ ಕೇವಲ ಒಂದು ದಿನದ ಮೋಜಿನ ಸ್ನಾನದ ಮನೆಯಾಗುವ ಮೊದಲು ಇವೂ ಸೇರಿದರೆ ನೆನಪಿಸಿಕೊಳ್ಳಬಹುದಾದ ಪ್ರವಾಸ ಮಾಡಿದಂತಾಗುತ್ತದೆ. ಬ್ರಿಟನ್ ಎಂದೊಡನೆ ಈ ಪನ್ನೀರ ಬಿಸಿನೀರ ಬುಗ್ಗೆಗಳ ಮಳೆಯಲ್ಲಿ ನೆನೆಯುವ ಅವಕಾಶ ಬಿಡದಿರಿ. ಆ ಬಿಸಿನೀರ ಬುಗ್ಗೆಗೆ ಬಿದ್ದವನಿಗೇ ಗೊತ್ತು ಅದರ ತುಂತುರು.

(ಲೇಖಕರು ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net