

ಬಸವಣ್ಣ ಹನ್ನೆರಡನೇ ಶತಮಾನದವರು ಎಂದು ನಮಗೆ ಅನ್ನಿಸುವುದೇ ಇಲ್ಲ. ನಿತ್ಯ ಅವರು ನಮ್ಮನ್ನು ಕೈಡಿದು ನಡೆಸುತ್ತಾರೆ, ಆಪ್ತನಂತೆ. ಬಸವಣ್ಣ ಒಬ್ಬ ಕಾಲಾತೀತ, ದೇಶಾತೀತ ಜೀವನಮೌಲ್ಯ. ಅಣ್ಣ ಹೇಗೆ ಬದುಕಿರಬಹುದೆಂದು ತಿಳಿಯಲು, ಅವರ ಡೈರಿ, ಆತ್ಮಕತೆ ಓದಬೇಕೆನಿಸಿದರೆ, ನಾನು ಅವರ ವಚನಗಳನ್ನು ಓದುತ್ತೇನೆ. ಒಂದೊಂದು ವಚನವೂ ಅವರ ದಿನಚರಿ, ಆತ್ಮಕಥನ. ವಚನಗಳ ಆಚೆಗಿನ ಬಸವಣ್ಣನನ್ನು ಕಲ್ಪಿಸುವುದು, ಅವರ ವ್ಯಕ್ತಿತ್ವವನ್ನು ಕಟ್ಟುವುದು ಕೇವಲ ಕಲ್ಪನೆ ಅಲ್ಲವೆ? ‘ನೀವೇಕೆ ನಿಮ್ಮ ಆತ್ಮಕತೆ ಬರೆಯೋದಿಲ್ಲ’ ಎಂದು ಒಬ್ಬ ಪತ್ರಕರ್ತ ನೊಬೆಲ್ ಪುರಸ್ಕೃತ ಸಾಹಿತಿ ಅರ್ನೆಸ್ಟ್ ಹೆೆಮಿಂಗ್ವೆ ಅವರನ್ನು ಕೇಳಿದನಂತೆ. ‘ನನ್ನ ಬರಹವೆಲ್ಲ ಅದಲ್ಲದೆ, ಇನ್ನೇನು’ ಎಂದು ಹೆಮಿಂಗ್ವೆ ಮರುಪ್ರಶ್ನಿಸಿದರಂತೆ. ಬಸವಣ್ಣನವರ ವಚನಗಳು ಹೀಗೆಯೇ ನಮ್ಮನ್ನು ಪ್ರಶ್ನಿಸುತ್ತವೆ. ‘ನೋಡಿಲ್ಲಿ ಬಸವಣ್ಣ ತಂತಾನೆ ಕಾಣುತ್ತಾನೆ ಎಂದು’. ಭಾರತದ ಜ್ಞಾನ ಪರಂಪರೆಯಲ್ಲಿ ಬಸವಣ್ಣನವರದು ಬಹು ಮುಖ್ಯವಾದ ಕಾಲಘಟ್ಟ. ಕಬೀರದಾಸ, ತುಳಸಿದಾಸರಂಥವರು ರಾಜಾಶ್ರಯವನ್ನು ಧಿಕ್ಕರಿಸಿ ಬದುಕಿದಂಥ ನಾಡಿದು. ಬಸವಣ್ಣ ಒಂದು ರಾಜ್ಯದ ಕೋಶಾಧಿಕಾರಿಯಾಗಿದ್ದವರು. ರಾಜ್ಯಾಡಳಿತದ ಮುಖ್ಯ ಭಾಗವಾಗಿದ್ದವರು. ಆದರೆ ಅವರ ವ್ಯವಹಾರ, ಆಚರಣೆ, ಬದುಕಿನಲ್ಲಿ ಯಾವುದೇ ಕೋಶ, ಅಧಿಕಾರ ಕಾಣಸಿಗುವುದಿಲ್ಲ. ‘ಅನುಭವ ಮಂಟಪ’ ಎಂಬ ವೇದಿಕೆಯನ್ನು ಕಟ್ಟಿ, ನಿಯಮಿತವಾಗಿ ಚರ್ಚೆ, ವಾದ-ವಿವಾದಗಳಿಗೆ, ಸಂಶಯ ನಿವಾರಣೆಗೆ, ಹೊಸ ಯೋಚನೆಯ ಮಂಡನೆಗೆ ಅವಕಾಶ ಮಾಡಿಕೊಟ್ಟವರು ಬಸವಣ್ಣನವರು. ಬರೀ ಮಾತು ಚರ್ಚೆಗೆ ಬದುಕಲ್ಲ. ತಾವು ನಂಬಿದ ಕಾಯಕವನ್ನು ಮಾಡಿ, ತಮ್ಮ ದೈನಂದಿನ ಕರ್ತವ್ಯಗಳನ್ನು ಪೂರೈಸಿದ ನಂತರ ’ಅನುಭವ ಮಂಟಪ’ ಎಂಬ ಅತ್ಯಂತ ಆಧುನಿಕ ಅಭಿವ್ಯಕ್ತಿ ಮಂಟಪಕ್ಕೆ ಸ್ವಾಗತ ಎಂಬ, ‘ಕರ್ತವ್ಯ ಮೊದಲು’ ನಂತರ ‘ಮಾತು’ ಎಂಬ ಜೀವನ ಸಿದ್ಧಾಂತವನ್ನು ಮಂಡಿಸಿ, ಸಿದ್ಧ ಮಾಡಿ ತೋರುವ ಮೂಲಕ ಮೌನವಾಗಿ ‘ಮೂರ್ತಿ ಮೆರವಣಿಗೆ’ಯ ವಿರುದ್ಧ ‘ಕಾಯಕ ಪರಂಪರೆ’ ಸಾಧ್ಯ ಎಂದು ತೋರಿದರು. ಅಧಿಕಾರವಿದ್ದರೂ ಅದರ ಪ್ರದರ್ಶನ ಸಲ್ಲ, ಅಧಿಕಾರದ ಉಪಯೋಗ ಕೇವಲ ಸತ್ಕಾರ್ಯಕ್ಕೆ ಮಾತ್ರ ಎಂಬ ಉದಾಹರಣೆಯನ್ನು ನೀಡಿದರು. ಅನುಭವ ಮಂಟಪದ ವಿವಿಧ ಕಾಯಕದ ಜನ, ಅನೇಕ ಆರ್ಥಿಕ, ಧಾರ್ವಿುಕ ಸ್ತರಗಳ ಜನ ಮುಕ್ತವಾಗಿ ಮಾತನಾಡಿರುವುದು, ಬರೆದಿರುವುದನ್ನು ಓದಿದ ನನ್ನಂಥವರಿಗೆ ಪ್ರತಿಯೊಬ್ಬ ಶರಣನೂ ಕಬೀರದಾಸರೆಂದು ಅನ್ನಿಸುತ್ತದೆ. ನಿರ್ಭೀತ, ಸ್ವತಂತ್ರ ವಿಚಾರಗಳನ್ನು ತಮ್ಮ ತಮ್ಮ ನುಡಿಗಟ್ಟಿನಲ್ಲೂ ಮಂಡಿಸುವ ಧೈರ್ಯವನ್ನು ಅನುಭವ ಮಂಟಪ ನೀಡಿತ್ತು. ಕೇವಲ ವೈಚಾರಿಕ ಸ್ವಾತಂತ್ರ್ಯವಷ್ಟೇ ಅಲ್ಲ ಅದನ್ನು ಮಂಡಿಸುವ ಭಾಷಾ ಸ್ವಾತಂತ್ರ್ಯ ಕೂಡಾ ಮುಕ್ತವಾಗಿತ್ತು. ಬಸವಣ್ಣನ ಈ ಮುಕ್ತ ವೈಚಾರಿಕ ಬದುಕಿನ, ಸಾಮಾಜಿಕ, ಮನೋವೈಜ್ಞಾನಿಕ, ಎಂಥ್ರೋಪಾಲಜಿಕಲ್ ಅಧ್ಯಯನ ಮಾಡಬೇಕಾದ ನಾವುಗಳೆಲ್ಲ ಹೊಗಳುವುದು ಮಾತ್ರ ಬಸವಣ್ಣನವರಿಗೆ ಸಲ್ಲುವ ಭಕ್ತಿ, ಗೌರವ ಎಂಬ ಹುಸಿನಂಬಿಕೆಯಲ್ಲಿದ್ದೇವೆ.
ಬಸವಣ್ಣ ತಮ್ಮ ಸಮಕಾಲೀನ ಭಾರತಕ್ಕಿಂತ ಒಂದು ಸಾವಿರ ವರ್ಷ ಮುಂದೆ ಇದ್ದರು. ಅವರು ವಚನಗಳನ್ನು ಕಟ್ಟುವ ಕಾಲಕ್ಕೆ ಹಿಂದೀ ಸಾಹಿತ್ಯ ಇನ್ನೂ ಕಣ್ಣು ತೆರೆದಿರಲಿಲ್ಲ. ‘ರಾಮಚರಿತ ಮಾನಸ’ ಈ ಭೂಮಿಗೆ ಇನ್ನೂ ಬಂದಿರಲಿಲ್ಲ. ಇಂಗ್ಲೀಷ್ ಸಾಹಿತ್ಯ ಓಡೆಸಿ ಕಾಲದಲ್ಲಿತ್ತು. ವಚನ ಸಾಹಿತ್ಯವನ್ನು ಜನರು ಮಾತನಾಡುವ ಗದ್ಯದಲ್ಲಿ ಬರೆದು ಚರ್ಚೆ ಮಾಡುತ್ತಿದ್ದರು. ಬಸವಣ್ಣ ಮಾಡಿದ ಭಾಷಿಕ ಬದಲಾವಣೆಯಿಂದ ಎಲ್ಲ ಕನ್ನಡಿಗರೂ ಕಾವ್ಯ ತಿಳಿಯುವಂತ, ಹೇಳುವಂತ, ಹಾಡುವಂತ ಆನಂದವನ್ನು ಕಂಡಂತಾಯಿತು. ಬಸವಣ್ಣ ಮನೆಯನ್ನು, ಸಂಸಾರವನ್ನು ಆನಂದದ ಪಾಠಶಾಲೆ ಎಂಬಂಥ ಜೀವನ ಮೌಲ್ಯವನ್ನು ಪ್ರತಿಪಾದಿಸಿದರು. ‘ಹಂಚಿ ಉಣ್ಣುವ ಆನಂದ’ದ ಕಲ್ಪನೆಯನ್ನು ‘ದಾಸೋಹ’ದ ಮೂಲಕ ತೋರಿಸಿಕೊಟ್ಟ ಅವರು, ಕೈಲಾಸಕ್ಕಾಗಿ, ನಾವು ಸಾಯಬೇಕಾಗಿಲ್ಲ, ‘ಕೆಲಸ ಮಾಡುತ್ತಲೇ ಕೈಲಾಸ’ ಬದುಕಬಹುದೆಂಬ ಸರಳ ಸಿದ್ಧಾಂತವನ್ನು ತೋರಿಸಿಕೊಟ್ಟರು, ಸಾಕ್ಷಿ ಪ್ರಮಾಣಗಳ ಮೂಲಕ. ಬಸವಣ್ಣ ಸಾಕ್ಷರ ಸಮಾಜವನ್ನು ಕಟ್ಟಿದ್ದಂತೂ ಸತ್ಯ. ಆ ಅಕ್ಷರಜ್ಞಾನಕ್ಕೊಂದು ಸವಾಲು ಸ್ವೀಕರಿಸುವ, ಎದುರಿಸುವ, ಸತ್ಯದ ದಾರಿಯ ಪಾಲನೆ ಮಾಡುತ್ತಲೇ, ಜಯಿಸುವ, ಜಯಿಸಿದಾಗ ಸಂಭ್ರಮಿಸದೆ ಅದನ್ನು ಸಹ ಸೇವೆ ಎಂಬಂತೆ ಸ್ವೀಕರಿಸುವ ವಿನಮ್ರತೆಯನ್ನು ಸಮಾಜದಲ್ಲಿ ಬಿತ್ತುತ್ತಾರೆ.
ಬಸವಣ್ಣನವರು ಆನಂದ ನಮ್ಮ ಸ್ವಭಾವ ಎಂಬ ಮಾನಸಿಕ ಸ್ತರವನ್ನು ತಾವು ಮುಟ್ಟಿ, ತಮ್ಮ ವಾರಿಗೆಯವರಲ್ಲೂ ಈ ಸ್ತರವನ್ನು ಕಂಡರು. ಹೀಗಾಗಿಯೇ ಬಿದ್ದ ಅಕ್ಕಿ ಆಯುವ ಕಾಯಕದವರು ಅಕ್ಕಮಹಾದೇವಿಗೆ ಸರಿಸಮಾನವಾಗಿ ಕುಳಿತು ಮಾತನಾಡುವ ಗೌರವವನ್ನು ಪಡೆದರು. ಸೂಳೆ ಸಂಕವ್ವೆ ಇವರೆಲ್ಲರ ಸರಿಕಳಾಗಿ ತನ್ನ ಜೀವನ ನೋವನ್ನು ಹಂಚಿಕೊಳ್ಳಲು ಸಾಧ್ಯವಾಯಿತು. ಈ ತರಹದ ಪ್ರಯೋಗ ಜಗತ್ತಿನ ಯಾವ ಧಾರ್ವಿುಕ, ಸಾಮಾಜಿಕ, ಅಕ್ಷರ ಚಳವಳಿಯಲ್ಲಿ ಸಿಗುತ್ತದೆ? ಇದನ್ನು ನಮ್ಮ ಸಂಶೋಧಕರು ಹುಡುಕಬೇಕು. ಇಂತಹ ಉದಾಹರಣೆ ಬೇರೆಯಲ್ಲಾದರೂ ಸಿಕ್ಕರೆ ಸಂತೋಷವೇ. ನನಗಂತೂ ಇಲ್ಲಿಯವರೆಗೆ ಸಿಕ್ಕಿಲ್ಲ.
ಅನುವಾದಗಳ ಮೂಲಕ ಬಸವಣ್ಣ ಮತ್ತು ವಚನ ಸಾಹಿತ್ಯ ಇಡೀ ಜಗತ್ತಿನಲ್ಲಿ ಸಾಹಿತ್ಯಾಸಕ್ತರ, ಸಂಶೋಧಕರ ಗಮನ ಸೆಳೆದಿದೆ. 2010ರಲ್ಲಿ ನಾನು ಹಂಗೇರಿ ದೇಶದ ಸ್ಕಾಲರ್ಶಿಪ್ ಪಡೆದು ಒಂದು ತಿಂಗಳು ಅದರ ರಾಜಧಾನಿ ಬುಡಾಫೆಸ್ಟ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಕೆಲಸ ಮಾಡಿದೆ. ವಾರದಲ್ಲಿ ಎರಡು ದಿನ ನನ್ನ ಲೆಕ್ಚರ್ಗೆ ವಿಶ್ವವಿದ್ಯಾಲಯದ ಹೊರಗಿನ ಆಸಕ್ತರು ಬರುತ್ತಿದ್ದರು. ಕನ್ನಡ ಭಾಷೆಯ ಮೇಲೆ ನನ್ನ ಒಂದು ಪ್ರಜಂಟೇಷನ್ ಆದ ಮೇಲೆ ಪ್ರಶ್ನೋತ್ತರ ವೇಳೆಯಲ್ಲಿ ಒಬ್ಬ ಯುವತಿ ಬಸವೇಶ್ವರರ ‘ಇಷ್ಟಲಿಂಗ’ದ ಪರಿಕಲ್ಪನೆಯ ಮೇಲೆ ಚರ್ಚೆಗಿಳಿದಳು. ನನಗೋ ಆಶ್ಚರ್ಯ, ಸಂತೋಷ ಏಕಕಾಲಕ್ಕೆ. ಅರ್ಧಗಂಟೆಯ ಆ ಚರ್ಚೆಯಲ್ಲಿ ವಿಷಯ ಕುರಿತ ಅವಳ ತೀವ್ರ ಆಸಕ್ತಿ, ಇಷ್ಟಲಿಂಗ ಪೂಜೆಯ ಕುರಿತ ಆಚರಣೆಯ ವಿವರದ ಜ್ಞಾನ ಕಂಡು ನಾನು ದಂಗಾದೆ. ಇದೆಲ್ಲ ನಿಮಗೆ ಹೇಗೆ ಗೊತ್ತು ಎಂದಾಗ ‘ನನಗೆ ಹಿಂದೀ ಅನುವಾದ ಸಿಕ್ಕಿದೆ, ಡಾ. ಅಂಬಲಗಿ ಅವರದು’ ಎಂದಳು. ನಾನು ತಕ್ಷಣ ಹೇಳಿದೆ ‘ಹೌದು ಡಾ. ಕಾಶೀನಾಥ ಅಂಬಲಗಿ, ಒಳ್ಳೆ ಅನುವಾದಕರು’. ಹೀಗೆ ಬಸವಣ್ಣ ನಿಜವಾದ ಅರ್ಥದಲ್ಲೂ ಜಗತ್ತಿನ ತುಂಬ ಬೆಳೆದಿದ್ದಾರೆ, ಆಕಾಶದ ಹಾಗೆ, ಸೂರ್ಯನ ಬೆಳಕಿನ ಹಾಗೆ.
ಬಸವಣ್ಣ ಬೆಚ್ಚಗಿನ ಹಚ್ಚಡದ ಹಾಗೆ ಅಮರಕಂಟಕದ ಥಂಡಿಯಲ್ಲಿ ತೆರೆದ ಕಿಟಕಿಯಿಂದ ಬರುವ ಬಿಸಿಲಿನ ಹಾಗೆ ಬಸವಣ್ಣನ ನೆನಪು ಹಚ್ಚಗೆ, ಬೆಚ್ಚಗೆ.
(ಲೇಖಕರು ಮಧ್ಯಪ್ರದೇಶ ಅಮರಕಂಟಕದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ)