ಬಸವಣ್ಣ, ಎತ್ತು ಮತ್ತು ಬ್ರಾಹ್ಮಣ...

edit 1
Published on

ಈಚೆಗೆ ಬಸವ ಜಯಂತಿ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪನವರು ಬಸವಣ್ಣನವರ ಭಾವಚಿತ್ರ ಮತ್ತು ಎತ್ತು ಪೂಜಿಸಿದ್ದು ಹಾಗೂ ಬಸವಣ್ಣನವರು ಬ್ರಾಹ್ಮಣರಾಗಿ ಹುಟ್ಟಿ ವೀರಶೈವವನ್ನು ಸ್ವೀಕರಿಸಿದರೆಂಬ ರಂಭಾಪುರಿ ಜಗದ್ಗುರುಗಳ ಹೇಳಿಕೆ ಬಗ್ಗೆ ಪರ ವಿರೋಧದ ನಿಲುವು, ಪ್ರಕಟಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ವೀರಶೈವ-ಲಿಂಗಾಯತ ಗೊಂದಲಗಳೆದ್ದು ಸಾರ್ವಜನಿಕರು ಸಾರಾಸಗಟಾಗಿ ಇವುಗಳ ತಿಕ್ಕಾಟವನ್ನು ತಿರಸ್ಕರಿಸಿ ಸಮಾಜವು ಪ್ರಶಾಂತವಾಗುತ್ತಿರುವ ಮತ್ತು ಕರೊನಾ ಸೋಂಕು ಜಗತ್ತಿನ ಮನುಷ್ಯಕುಲವನ್ನು ಹಿಂಡಿ ಹೈರಾಣ ಮಾಡುತ್ತಿರುವ ಇಂದಿನ ಸಂದರ್ಭದಲ್ಲಿ ‘ಧರ್ಮ, ಜಾತಿ’, ‘ಅದು ಸತ್ಯ, ಇದು ಮಿಥ್ಯ’ ಎಂಬ ಅಪ್ರಸ್ತುತ ವಿಷಯಗಳನ್ನು ಎತ್ತುತ್ತ ಮನುಷ್ಯರನ್ನು ವಿಭಜಿಸುವ ಇಂಥ ಜನರ ಮನಸ್ಥಿತಿಯನ್ನು ನೋಡಿ ಕನಿಕರ ಎನಿಸುತ್ತಿದೆ. ಜಗತ್ತು ಈ ಹೊತ್ತು ಜಾತಿಧರ್ಮ ಮೀರಿ ಒಂದಾಗುತ್ತಿದೆ. ಬಸವಣ್ಣನವರು ಹೇಳಿದ ಸಂದೇಶವನ್ನು ಮರೆತು ಅವರು ಕೇವಲ ಲಿಂಗಾಯತಕ್ಕೆ, ಕರ್ನಾಟಕಕ್ಕೆ ಮಾತ್ರ ಸೀಮಿತ ಎನ್ನುವಂತೆ ವರ್ತಿಸುತ್ತಿರುವುದು ಶೋಚನೀಯ.

ಈಚೆಗೆ ಎಸ್.ಎನ್. ಗೋಯಲ್ ಅವರು ವಿಶ್ವಧರ್ಮ ಸಮಾವೇಶದಲ್ಲಿ ತಮ್ಮ ಉಪನ್ಯಾಸದ ಆರಂಭದಲ್ಲಿ ಹೇಳಿದ-‘Religion is a religion only when it unites people. Religion is no more a religion when it divides the people’ ಎಂಬ ಮಾತನ್ನು ನೆನಪಿಸಿಕೊಳ್ಳಬೇಕು. ಮನುಷ್ಯರನ್ನು ಒಂದುಗೂಡಿಸುವುದೇ ನಿಜವಾದ ಧರ್ಮ, ಒಡೆಯುವುದೇ ಅಧರ್ಮ.

ಬಸವಣ್ಣನವರು ತಾವೇ ಎತ್ತು (ವೃಷಭ) ಎಂದು ಸ್ವತಃ ಹೇಳಿಕೊಂಡಿದ್ದಾರಲ್ಲ ಅದಕ್ಕೇನಂತೀರಿ? ‘ಅಯ್ಯಾ ನೀನು ಆಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ’ (ವಚನ ಸಂಖ್ಯೆ 3) ‘ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮಗೆ ಏರಲು ವಾಹನವಾಗಲೆಂದಿರಿಸಿ ಕೊಂಡಿರ್ದಿರಯ್ಯ’(ವ.ಸಂ. 4), ‘ಅಯ್ಯ ನಿಮ್ಮ ಮುಟ್ಟಿದ ಗುಣದಿಂದಲಾನು ವೃಷಭನಾದೆನಯ್ಯಾ’ (ವ.ಸಂ.991) ಎಂದಿಲ್ಲವೇ? ಇವಲ್ಲದೆ ಅಲ್ಲಮಪ್ರಭು, ಚೆನ್ನಬಸವಣ್ಣನವರ ವಚನಗಳೂ ಬಸವಣ್ಣನವರ ವೃಷಭತ್ವವನ್ನು ಹೇಳುತ್ತವೆ. ಅಲ್ಲಮಪ್ರಭುಗಳು ‘ದ್ವಾಪರಯುಗದಲ್ಲಿ ನೀನು ವೃಷಭನೆಂಬ ಗಣೇಶನಾಗಿರ್ದುದ ಬಲ್ಲೆ ಕಲಿಯುಗದಲ್ಲಿ ನೀನು ಬಸವನೆಂಬ ಶರಣನಾಗಿರ್ದುದ ಬಲ್ಲೆ’ (437) ಎಂದರೆ ಚೆನ್ನಬಸವಣ್ಣನವರು ‘ದ್ವಾಪರ ಯುಗದಲ್ಲಿ ನೀನು ವೃಷಭನೆಂಬ ಗಣೇಶನಾಗಿ ಬಂದು ಆರಾಧಿಸುವಲ್ಲಿ’ (1129) ಎಂದು ಹೇಳಿದ್ದಾರೆ. ಸುಪ್ರಸಿದ್ಧ ‘ಬಸವಪುರಾಣ’ದಲ್ಲಿ, ‘ನಾನು ಭೂಲೋಕಕ್ಕೆ ಹೋಗಲಾರೆ, ನಿಮ್ಮ ವಾಹನವಾಗಿ ಇಲ್ಲಿ ಇರುವುದೇ ನನಗೆ ಪ್ರೀತಿ’ ಎಂದು ಶಿವನೊಡನೆ ವೃಷಭಗಣೇಶ್ವರನು ವಾದಿಸಿದ ಪ್ರಸಂಗವಿದೆ. ಬಸವಣ್ಣನವರ ತಾಯಿ ಮಾದಲಾಂಬಿಕೆ ‘ನಂದಿ’ಗೆ ನಡೆದುಕೊಂಡು ಗಂಡುಮಗ ಹುಟ್ಟಿದರೆ ನಂದಿಯ ಹೆಸರಿಡುವೆನೆಂದು ಶಪಥಮಾಡಿ ಬಸವಣ್ಣನನ್ನು ಹೆರುತ್ತಾಳೆ. ಇಂಗಳೇಶ್ವರ ಮತ್ತು ಬಾಗೇವಾಡಿಯಲ್ಲಿ ಈಗಲೂ ಆಗಿನ ನಂದಿ ದೇವಾಲಯಗಳಿವೆ. ಮಹಾಕವಿ ಹರಿಹರನೂ ಬಸವೇಶ್ವರ ರಗಳೆಯಲ್ಲಿ ಹೀಗೆಯೇ ವರ್ಣಿಸಿದ್ದಾನೆ.

ಮಹಾತ್ಮರು ದೇವಲೋಕದಿಂದ ಇಲ್ಲಿ ಹುಟ್ಟಿಬಂದವರೆಂಬ ಕಲ್ಪನೆ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಅಂಶ. ‘ಎತ್ತು ಹೇಗೆ ಮನುಷ್ಯನಾಗಿ ಹುಟ್ಟುತ್ತದೆ?’ ಎಂದು ಕೆಲವರು ಕೇಳುತ್ತಾರೆ. ಅಮೂರ್ತ ಅದ್ಭುತ ಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಕಾರ ರೂಪದಲ್ಲಿ ಕಾಣುವಂತೆ ಮಾಡಲು ಸಂಕೇತಗಳನ್ನು ಬಳಸಬೇಕಾಗುತ್ತದೆ. ಜಗತ್ತಿನಲ್ಲಿ ಪ್ರಾಚೀನಕಾಲದಿಂದಲೂ ಪ್ರಾಣಿಗಳನ್ನು ಇಂತಹ ಸಂಕೇತಗಳನ್ನಾಗಿ ಬಳಸುವ ರೂಢಿ ಇದೆ. ದತ್ತಾತ್ರೇಯನಿಗೆ ನಾಯಿಗಳು, ಹಯವದನನಿಗೆ ಕುದುರೆ ಮುಖ, ಹನುಮಂತನಿಗೆ ವಾನರ, ಗಣಪತಿಗೆ ಆನೆ ಹೀಗೆ. ಇದರಂತೆ ಪ್ರಾಣಿಗಳನ್ನು ತಮ್ಮ ರಾಷ್ಟ್ರದ ಚಿಹ್ನೆಯನ್ನಾಗಿಯೂ ಬಳಸುತ್ತಾರೆ. ಧಾರ್ವಿುಕ ಸಂಕೇತಗಳು ಸಂಕೀರ್ಣ ಅರ್ಥವಂತಿಕೆಯನ್ನು ಪಡೆದಿರುತ್ತವೆ. ಅವುಗಳನ್ನು ಸಾಮಾನ್ಯ ಅರ್ಥದಲ್ಲಿ ಅರ್ಥೈಸಲಾಗದು. ಬಸವಣ್ಣನವರನ್ನೂ ಎತ್ತನ್ನೂ ಸಮೀಕರಿಸಿದರೆ ಶಿವನ ವಾಹನವಾದ ವೃಷಭಗಣೇಶ್ವರನ ಸಂಕೇತವಾಗಿ ಸಮೀಕರಿಸಿದ ಭಕ್ತಿಭಾವ ಬರುತ್ತದೆಯೇ ಹೊರತು ಪ್ರಾಣಿ-ಮನುಷ್ಯ ಭೇದ ಕಲ್ಪನೆ ಬರುವುದಿಲ್ಲ. ಹಾಗೆ ಬರುವುದು ಸಾಂಕೇತಿಕ ಅರ್ಥ ತಿಳಿಯದ ಭಕ್ತಿಯಿಲ್ಲದ ಅಜ್ಞರಿಗೆ ಮಾತ್ರ.

ಇನ್ನು ಸ್ವತಃ ಬಸವಣ್ಣನವರೇ ಅನೇಕ ವಚನಗಳಲ್ಲಿ ತಾವು ಬ್ರಾಹ್ಮಣರಾಗಿದ್ದೆವೆಂದೇ ಹೇಳಿಕೊಂಡಿದ್ದಾರೆ. ‘ಕರ್ಮದ ಬಲೆಯಲ್ಲಿ ಸಿಲುಕಿ ವೃಥಾಯ ಬರುದೊರೆಹೋಹ ಕೆಡುಕ ಹಾರುವ ನಾನಲ್ಲ, ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ ಅಶುದ್ಧನ ಶುದ್ಧ ಮಾಡಿದನಾಗಿ’ (ವ.ಸಂ.716), ‘ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯ’ (345) ಇವು ಏನು ಹೇಳುತ್ತವೆ? ಹರಿಹರ ಮಹಾಕವಿಯು ಬಸವಣ್ಣನವರು ಲಿಂಗೈಕ್ಯರಾಗಿ 30-40 ವರ್ಷಗಳಲ್ಲೇ ಬಸವೇಶ್ವರದೇವರ ರಗಳೆಯನ್ನು ರಚಿಸಿದವ. ಅವನು ಹೇಳುವುದೇನೆಂದರೆ, ‘ಕಮ್ಮೆಕುಲದಿಂದೆ ಮೆರೆದಿರ್ಪ ವಿಪ್ರನಿರ್ಪಂ ಮಾದಿರಾಜನಾತನ ಸತಿಯು ಅಪ್ರತಿಮ ಮಾದಾಂಬೆ’ ಇವರ ಹೊಟ್ಟೆಯಲ್ಲಿ ಹುಟ್ಟಿ ‘ಕರ್ಮಲತೆಯಂತಿರ್ದ ಜನ್ನಿವಾರವಂ ಕಳೆದು ಬಿಸುಟು ಹೋತಿನ ಗಂಟಲಂ ಬಿಗಿದಂತಿರ್ದ ಮೌಂಜಿಯಂ ಪರಿದು ಬಿಸುಟು’ ಬಾಗೇವಾಡಿ ಬಿಟ್ಟು ಬಸವಣ್ಣನವರು ಕೂಡಲಸಂಗಮಕ್ಕೆ ಬರುತ್ತಾರೆ. ಬಸವಪುರಾಣದಲ್ಲಿಯಂತೂ ‘ದ್ವಿಜ ಮಾರ್ಗವನೆ ಹಿಡಿದಾಡಿದಡೆಮಗಾಗದು ವೀರಮಾಹೇಶ್ವರರೆ ಗತಿಯೆನಗೆ-ನಿಮ್ಮಾಚಾರ ನಿಮಗಿರಲಿ ಎಮ್ಮಾಚಾರದಲ್ಲಿ ನಾವಿಪ್ಪೆವಿನ್ನಾವಾರು ನೀವಾರು’ ಎಂದು ಬಾಗೇವಾಡಿ ಬಿಟ್ಟು ಹೊರಟು ಬಿಡುತ್ತಾರೆ. ಇಂಥ ಸಾಕಷ್ಟು ಆಧಾರಗಳನ್ನು ನೀಡಬಹುದು.

ಮನುಷ್ಯರು ಹುಟ್ಟಿದ ಧರ್ಮ, ಜಾತಿ, ಮತ, ಪಂಥಗಳು ಮಹತ್ವದ್ದಲ್ಲವೇ ಅಲ್ಲ. ಅವರು ಮಾಡಿದ ಸೇವೆ, ನೀಡಿದ ಸಂದೇಶ ಮಹತ್ವದ್ದಲ್ಲವೇ? ಶ್ರೀರಂಭಾಪುರಿ ಜಗದ್ಗುರುಗಳು ಹೇಳಿದ್ದೂ ಅದನ್ನೇ. ಬಸವಣ್ಣನವರು ಜನ್ಮತಃ ಬ್ರಾಹ್ಮಣರಾದರೂ ಬ್ರಾಹ್ಮಣರಾಗಿಯೇ ಉಳಿಯಲಿಲ್ಲವೆಂಬುದೂ ಅಷ್ಟೇ ಸತ್ಯ. ತಮ್ಮ ಬದುಕಿನುದ್ದಕ್ಕೂ ವೇದಬ್ರಾಹ್ಮಣರನ್ನು ಕಟುಶಬ್ದಗಳಲ್ಲಿ ಅವರು ಖಂಡಿಸಿದ್ದಾರೆ. ಬಸವಣ್ಣನವರ ವೇದಾಗಮಗಳ ಖಂಡನೆ ಏನಿದ್ದರೂ ವೈಷ್ಣವ ವೈದಿಕಬ್ರಾಹ್ಮಣರನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿದೆ. ಅಂತೆಯೇ ಇಷ್ಟಲಿಂಗವಿಲ್ಲದ ಶಿವಭಕ್ತರನ್ನೂ (63 ಪುರಾತನರು ಇತ್ಯಾದಿ) ಅವರು ಗೌರವದಿಂದಲೇ ಕಂಡಿದ್ದಾರೆ.

ದೇವ, ದೇವಾ ಬಿನ್ನಹ ಅವಧಾರು; ವಿಪ್ರ ಮೊದಲು, ಅಂತ್ಯಜ ಕಡೆಯಾಗಿ ಶಿವಭಕ್ತರಾದವರನೆಲ್ಲನೊಂದೆ ಎಂಬೆ. ಹಾರುವ ಮೊದಲು, ಶ್ವಪಚ ಕಡೆಯಾಗಿ ಭವಿಯಾದವರನೆಲ್ಲರನೊಂದೆ ಎಂಬೆ. ಹೀಂಗೆಂದು ನಂಬೂದೆನ್ನ ಮನ. ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ. (711)

ನಮಗಾಗದವರೂ ನಮ್ಮವರೇ ಎಂಬ ವಿಶಾಲ ಮಾನವತಾಭಾವ ಬಸವಣ್ಣನವರದ್ದು. ಅಂತಹ ಬಸವಣ್ಣನವರಿಗೆ ಕ್ಷುಲ್ಲಕರಾದ ನಾವು ‘ಅವರು ನಮ್ಮವರಲ್ಲ ಯಾಕೆಂದರೆ ಅವರು ವೇದಾಗಮಗಳನ್ನು ನಂಬುತ್ತಾರೆ’ ಎಂದು ಮಾನವ ಪ್ರತ್ಯೇಕತೆಯ ಜಪ ಎಣಿಸುತ್ತೇವೆ. ಇಂಥವರನ್ನು ನೋಡಿ ಬಸವಣ್ಣನವರು ನಗದೇ ಇರುವರೇ?

(ಲೇಖಕರು ಹಿರಿಯ ಸಾಹಿತಿ ಮತ್ತು ಭಾಷಾ ವಿಜ್ಞಾನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net