ಸಮಾಜದ ಏಳ್ಗೆಗಾಗಿ ದುಡಿದ ಮಹಾನ್ ಸುಧಾರಕ ಬಸವಣ್ಣ

ವಿಜಯವಾಣಿ (2)
Published on

(ಲೇಖಕರು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು)

ಇಡೀ ಜಗತ್ತು ಗೌರವಿಸುವ ಹಾಗೂ ಎಲ್ಲ ಜನಾಂಗದವರು ಒಪ್ಪಿಕೊಳ್ಳುವ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು, ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವಣ್ಣ ಅವರು ಬಾಲ್ಯದಿಂದಲೇ ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುತ್ತಿದ್ದ ಗುಣ ಹೊಂದಿದ್ದರು. ತನ್ನ ಸಮಾಜ ಕೂಡ ಹೀಗೆ ಇರಬೇಕೆಂದು ಸಮಾಜದ ಏಳ್ಗೆಗಾಗಿ ದುಡಿದ ಮಹಾನ್ ಸುಧಾರಕರು ಬಸವಣ್ಣ.

ಕಲಚೂರಿ ರಾಜವಂಶದ ದೊರೆ ಬಿಜ್ಜಳರ ಆಳ್ವಿಕೆಯಲ್ಲಿ ಬಸವಣ್ಣ ಅವರು 12ನೇ ಶತಮಾನದ ಭಾರತೀಯ ತತ್ವಜ್ಞಾನಿ, ರಾಜನೀತಿಜ್ಞ, ಶಿವ-ಕೇಂದ್ರಿತ ಭಕ್ತಿ ಚಳವಳಿಯಲ್ಲಿ ಕನ್ನಡ ಕವಿ ಮತ್ತು ಸಮಾಜ ಸುಧಾರಕರಾಗಿದ್ದರು. ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ವಚನಕಾರರ ಕೊಡುಗೆ ವಿಶಿಷ್ಟವಾದದ್ದು. ಅಲ್ಲಮಪ್ರಭು, ಅಕ್ಕಮಹಾದೇವಿ, ದಾಸಿಮಯ್ಯ, ಸಿದ್ದರಾಮ ಮುಂತಾದ ಶ್ರೇಷ್ಠ ವಚನಕಾರರಲ್ಲಿ ಅತಿ ಶ್ರೇಷ್ಠ ವಚನಕಾರರು ಬಸವಣ್ಣ. ಬಸವಣ್ಣ ಅವರು ತಮ್ಮ ಭಕ್ತಿಪ್ರಧಾನ ವಚನಗಳಲ್ಲಿ ಸಮಾಜದ ಅಂಕು-ಡೊಂಕುಗಳನ್ನು ಹಾಗೂ ಅಂದಿನ ಕಾಲದ ಸಮಾಜದಲ್ಲಿದ್ದ ಮೇಲು-ಕೀಳು, ಡಂಭಾಚಾರ, ಮೂಢನಂಬಿಕೆ ಮುಂತಾದವುಗಳ ವಿರುದ್ಧ ಧ್ವನಿ ಎತ್ತಿದ್ದನ್ನು ಅವರ ವಚನಗಳಲ್ಲಿ ಗಮನಿಸಬಹುದು.

ಬಸವಣ್ಣ ಅವರು ‘ವಚನ’ಗಳೆಂಬ ಹೊಸ ಸಾಹಿತ್ಯ ಪ್ರಕಾರವನ್ನೇ ಹುಟ್ಟುಹಾಕಿದರು. ಬಸವಣ್ಣ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂದು ಅವರು ವಚನಗಳ ಮೂಲಕ ನುಡಿದಿದ್ದ ಮಾತುಗಳನ್ನು ಪಾಲಿಸಿದರೆ ಇಡೀ ಸಮಾಜ ಶಾಂತಿಯ ನೆಲೆವೀಡಾಗುವುದರಲ್ಲಿ ಸಂಶಯವಿಲ್ಲ. ಬಸವೇಶ್ವರರು ಮಾನವೀಯ ಏಕತೆ, ಸಮಾನತೆ, ಸಹೋದರತ್ವವನ್ನು ಪ್ರತಿಪಾದಿಸಿದರು. ಬಸವಣ್ಣ ಅವರ ನೇತೃತ್ವದಲ್ಲಿ ಜಾತಿಭೇದವಿಲ್ಲದ ಮತ್ತು ಲಿಂಗತಾರಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ನಡೆಯಿತು. ಭಾರತದ ಸಂವಿಧಾನವು ಇದನ್ನೇ ಎತ್ತಿ ಹಿಡಿದಿದೆ.

ಕಾಯಕವೇ ಕೈಲಾಸ: ಬಸವಣ್ಣನವರು ಕಾಯಕ ತತ್ವವನ್ನು ಬಲವಾಗಿ ಪ್ರತಿಪಾದಿಸಿದರು. ‘ಕಾಯಕವಿಲ್ಲದೆ ಗುರು ಲಿಂಗ ಜಂಗಮರಿಗೂ ಮುಕ್ತಿಯಿಲ್ಲ’ ಎಂಬ ಹಾಗೂ ‘ಕಾಯಕವೇ ಕೈಲಾಸ’ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು. ಕಾಯಕದಲ್ಲಿ ಮೇಲು, ಕೀಳು ಎಂಬ ಭಾವ ಸಲ್ಲದು. ಶರಣರು ಮಾಡುವ ಕಾಯಕವು ಸತ್ಯ ಶುದ್ಧವಾಗಿರಬೇಕು, ಸಮಾಜಮುಖಿಯಾಗಿರಬೇಕು ಎಂಬುದು ಬಸವಣ್ಣನವರ ಅಚಲವಾದ ನಂಬಿಕೆ.

ಸ್ತ್ರೀ ಸಮಾನತೆ: ಬಸವಣ್ಣ ಅವರು ಶತ-ಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀ ಸಮುದಾಯದ ಧ್ವನಿಯಾಗಿದ್ದರು. ಲಿಂಗಬೇಧದ ವಿರುದ್ಧ ಸಿಡಿದೇಳುವ ಮೂಲಕ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದರು.

ಜಾತ್ಯತೀತ ಸಮಾಜದ ಕಲ್ಪನೆ: ಜಾತಿ ಜಾತಿಗಳ, ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು ನೊಂದು ನುಡಿದ ಬಸವಣ್ಣ ಅವರು, ಇವನಾರವ,/ ಇವನಾರವ,/ ಇವನಾರವ ನೆಂದೆನಿಸದಿರಯ್ಯಾ./ ಇವ ನಮ್ಮವ,/ ಇವ ನಮ್ಮವ,/ ಇವ ನಮ್ಮವನೆಂದೆನಿಸಯ್ಯಾ./ ಕೂಡಲಸಂಗಮದೇವಾ. ಎನ್ನುವ ಮೂಲಕ ಇಡೀ ವಿಶ್ವಕ್ಕೆ ದಿವ್ಯ ಸಂದೇಶ ನೀಡಿದರು. ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಸರಿ ಸಮಾನರೇ ಎಲ್ಲರೂ ನಮ್ಮವರೇ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂದು ಸಂದೇಶ ನೀಡಿದರು.

ಬಸವಣ್ಣ ಹಾದಿಯಲ್ಲಿ ಸರ್ಕಾರ: ಬಸವಣ್ಣ ಅವರು ‘ಕಾಯಕವೇ ಕೈಲಾಸ’ ಎಂಬ ಮಂತ್ರದ ಮೂಲಕ ಕಾಯಕದ ಶ್ರೇಷ್ಠತೆಯನ್ನು ಮನಗಾಣಿಸಿದವರು. ದಾಸೋಹದ ಪರಿಕಲ್ಪನೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಇದರ ಅನುಸಾರ ಶ್ರಮಪಟ್ಟು ಗಳಿಸಿದ ಸಂಪತ್ತು ತನ್ನೊಬ್ಬನಿಗಾಗಿ ಅಲ್ಲ; ಅದು ಸಮಾಜದ ಒಳಿತಿಗಾಗಿ ಬಳಕೆಯಾಗ ತಕ್ಕದ್ದು. ಅದಕ್ಕಾಗಿ, ಅನ್ನ ದಾಸೋಹ, ಜ್ಞಾನ ದಾಸೋಹ, ಕಾಯಕ ದಾಸೋಹ ನಡೆಸಬೇಕಂದು ಪ್ರಾದಿಪಾದಿಸಿದರು.

ಬಸವಣ್ಣ ಅವರ ತತ್ವದ ದಾರಿಯಲ್ಲಿ ನಮ್ಮ ಸರ್ಕಾರ ಸಾಗುತ್ತಿದೆ. ಅವರ ಅನ್ನ ದಾಸೋಹ ಕಲ್ಪನೆಯನ್ನು ಸಾಕಾರಗೊಳಿಸಲು ‘ಅನ್ನಭಾಗ್ಯ’ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದಾರೆ. ಜಾತೀಯತೆ ತಾಂಡವವಾಡುತ್ತಿರುವ ಕಲುಷಿತ ವಾತಾವರಣದಲ್ಲಿ ಬಸವಣ್ಣ ಅವರ ತತ್ವಗಳ ಪ್ರೇರಣೆ ಆಗುವಂಥ ವಾತಾವರಣ ನಿರ್ವಿುಸುವುದೇ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಉದ್ದೇಶ.

ಅನುಭವ ಮಂಟಪ ಮರುಸೃಷ್ಟಿ: ತಮ್ಮ ಎಲ್ಲ ಶರಣ ಸಮೂಹದೊಂದಿಗೆ ಅನುಭಾವದ ಬಗ್ಗೆ ಚಿಂತನೆ, ವಿಚಾರ ವಿನಿಮಯ ಮತ್ತು ಸಂವಾದಕ್ಕಾಗಿ ಬಸವಣ್ಣ ಅವರು ನಿರ್ವಿುಸಿಕೊಂಡಿದ್ದ ಚಿಂತನೆಯ ವೇದಿಕೆಯೇ ಅನುಭವ ಮಂಟಪ. ಇದು ಜಗತ್ತಿನ ಮೊದಲನೆಯ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಎಲ್ಲ ಚಟುವಟಿಕೆಗಳು ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲೇ ಜರಗುತ್ತಿದ್ದವು. ಯಾವುದೇ ಜಾತಿ, ಮತ, ಲಿಂಗ ಭೇದ ಭಾವವಿಲ್ಲದೆ, ಅಲ್ಲಿ ಎಲ್ಲ ಸಮುದಾಯವರು ಒಟ್ಟಿಗೆ ಸೇರಿ ಚಿಂತನೆ ಮತ್ತು ಚರ್ಚೆ ನಡೆಸುತ್ತಿದ್ದರು. ಇಂದು ಬಸವಣ್ಣ ಅವರು ಹಾಕಿಕೊಟ್ಟ ಮಾದರಿಯಲ್ಲೇ ನಾವು ನಡೆಯುತ್ತಿದ್ದೇವೆ. ಅಂದಿನ ಬಸವಣ್ಣ ಅವರ ಮಾದರಿಯ ಸಂಸತ್ತನ್ನು ದೇಶ ಹೊಂದಿದ್ದು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತಿದ್ದೇವೆ.

ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು,ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ,ಉಂಬ ಜಂಗಮ ಬಂದಡೆ ನಡೆಯೆಂಬರು,ಉಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ,ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.

ಎಂಬ ಈ ವಚನದ ಮೂಲಕ ಮೌಢ್ಯತೆಯ ಹೆಸರಿನಲ್ಲಿ ನಡೆಯುತ್ತಿದ್ದ ಡಾಂಭಿಕ ಆಚರಣೆಗಳ ಬಗ್ಗೆಯೂ ಜನಸಮೂಹವನ್ನು ಎಚ್ಚರಿಸಿದವರು ಬಸವಣ್ಣನವರು. ಕಲ್ಲ ನಾಗರಕ್ಕೆ ಹಾಲೆರೆಯುವವರು ನಿಜವಾದ ಹಾವೇ ಪ್ರತ್ಯಕ್ಷವಾದಾಗ ಕೊಲ್ಲಲು ಪ್ರಯತಿಸುತ್ತಾರೆ. ಹಸಿದ ಜಂಗಮ ಬಂದರೆ ಅನ್ನ ನೀಡದೆ, ಉಣದಿರುವ ಲಿಂಗಕ್ಕೆ ಭಕ್ಷ್ಯ ಭೋಜನಗಳನ್ನಿಟ್ಟು ನೈವೇದ್ಯ ಮಾಡುತ್ತಾರೆ. ಇದೆಂತಹ ವಿಪರ್ಯಾಸ ಎಂದು ಪ್ರಶ್ನಿಸುವ ಮೂಲಕ ವೈಚಾರಿಕ ಚಿಂತನೆಗೆ ಆದ್ಯತೆ ನೀಡಿದವರು ಬಸವಣ್ಣ. ಹೀಗಾಗಿಯೇ ಅವರ ವ್ಯಕ್ತಿತ್ವ ವಿಶ್ವಮಾನ್ಯವಾಗಿ ಕಂಗೊಳಿಸುತ್ತಿದೆ.

ಇಂದು ನಾಳೆ ಬಸವಾದಿ ಶರಣರ ವೈಭವ

ಬಸವಣ್ಣ ಅವರು ಇಡೀ ಮಾನವ ಕುಲಕೋಟಿಗೆ ಸಲ್ಲುವ ವ್ಯಕ್ತಿ. ಹಾಗಾಗಿಯೇ ನಮ್ಮ ಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಹೊಂದಿರುವುದು ನನ್ನ ಸುದೈವ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೊಷಣೆ ಮಾಡಿದೆವು. ಸಾಂಸ್ಕೃತಿಕ ನಾಯಕ ಎಂದು ಏಕೆ ಘೊಷಣೆ ಮಾಡಿದೆವು ಎಂಬುದನ್ನು ಜನತೆಗೆ ತಿಳಿಸುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಬಸವಜಯಂತಿ ಅಂಗವಾಗಿ ಬಾಗಲಕೋಟೆಯ ಕೂಡಲಸಂಗಮದಲ್ಲಿ ‘ಅನುಭವ ಮಂಟಪ- ಬಸವಾದಿ ಶರಣರ ವೈಭವ’ ಕಾರ್ಯಕ್ರಮ ಏಪ್ರಿಲ್ 29, 30ರಂದು ನಡೆಯಲಿದೆ.

ಬಸವಣ್ಣ ಅವರೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್, ಭಗವಾನ್ ಬುದ್ಧನ ತತ್ವದ ಕುರಿತು ವಿಚಾರಗೋಷ್ಠಿಗಳು ನಡೆಯಲಿದ್ದು, ಸರ್ವಧರ್ಮದ ಸಂತರು ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಮುನ್ನ ವೈಭವದ ರಥಯಾತ್ರೆ ಬೆಂಗಳೂರಿನಿಂದ ಆರಂಭವಾಗಿ ರಾಜ್ಯ ವಿವಿಧ ಜಿಲ್ಲಾಕೇಂದ್ರಗಳ ಮೂಲಕ ಸಾಗಿ ಬಾಗಲಕೋಟೆ ತಲುಪಿದೆ. ರಥದಲ್ಲಿ ಅಕ್ಕಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ್, ಭಗವಾನ್ ಮಹಾವೀರ, ನಾರಾಯಣಗುರು, ಯೇಸು ಕ್ರಿಸ್ತರ ಪುತ್ಥಳಿಯನ್ನು ಅಳವಡಿಸಲಾಗಿದೆ. ಬೆಂಗಳೂರು ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ 1,177 ಕಿಮೀವರೆಗೆ ರಥ ಸಂಚರಿಸಿದೆ. ಎಲ್ಲರನ್ನೂ ಒಳಗೊಂಡ ಎಲ್ಲರ ಕಲ್ಯಾಣಕ್ಕಾಗಿ ದುಡಿದ ಬಸವಾದಿ ಶರಣರ ನೆನೆಯೋಣ ಬನ್ನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net