

ಕಳೆದ ವರ್ಷ ಇದೇ ಸಮಯವನ್ನೊಮ್ಮೆ ನೆನಪಿಸಿಕೊಳ್ಳಿ. ಇಡೀ ವಿಶ್ವವೇ ಅಲ್ಲೋಲ ಕಲ್ಲೋಲವಾಗಿದ್ದ ದಿನಗಳವು. ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಇಡೀ ದೇಶದಲ್ಲಿ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದ ಸಮಯ ಅದು. ಈ ಒಂದು ವರ್ಷದಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಆಗಿರುವ ನಷ್ಟದ ಹೊಡೆತಕ್ಕೆ ಸಿಲುಕಿದವರು ಇನ್ನೂ ಚೇತರಿಸಿಕೊಂಡಿಲ್ಲ. ಆದರೆ ಇವರ ನಡುವೆಯೇ ಭಿನ್ನವಾಗಿ ಕಂಡವರು ವಿಭಾ ಹರೀಶ್. ಇದೇ ಕಾರಣಕ್ಕೆ ಇವರ ಹೆಸರು ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ದಾಖಲಾಗಿದೆ.
ಈಚೆಯವರೆಗೂ ಈ ಯುವತಿಯ ಹೆಸರನ್ನು ಕೇಳಿದವರು ಬಹಳ ಕಡಿಮೆಯೇ. ಆದರೆ ಇವರೀಗ ವಿಶ್ವದ ಗಮನ ಸೆಳೆದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ 30 ವರ್ಷಕ್ಕಿಂತ ಕಡಿಮೆ ವಯೋಮಾನದ ಸಾಧಕರ ಪಟ್ಟಿಯಲ್ಲಿ ಹೆಸರು ಪಡೆದಿದ್ದಾರೆ ವಿಭಾ. ಫೋರ್ಬ್ಸ್ ಸಂಸ್ಥೆ 30 ವರ್ಷ ವಯೋಮಾನದ ಏಷ್ಯನ್ ಉದ್ಯಮಿಗಳ ಟಾಪ್ 0 ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ವಿಭಾ ಟಾಪರ್ ಆಗಿದ್ದಾರೆ.
ಏನಿವರ ಸಾಧನೆ?: ಸ್ಟಾರ್ಟ್ಅಪ್ ಮೂಲಕ ‘ಕಾಸ್ಮಿಕ್ಸ್’ ಎಂಬ ಹರ್ಬಲ್ ಉತ್ಪನ್ನಗಳ ಕಂಪನಿಯನ್ನು ಆರಂಭಿಸಿದ್ದಾರೆ ವಿಭಾ. ಹಣ್ಣು, ಬೇರು, ಸಸ್ಯಗಳಿಂದ ಪೌಷ್ಟಿಕ ಪುಡಿ ಉತ್ಪನ್ನಗಳನ್ನು ತಯಾರಿಸುವ ಉದ್ಯಮವಿದು. ‘‘ಈ ಉತ್ಪನ್ನಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲದೆ ಇದು ನೆಮ್ಮದಿಯ ನಿದ್ರೆಗೆ ಸಹಕಾರಿ. ಅದಲ್ಲದೇ ಇವು ಕೂದಲು, ಚರ್ಮ, ಅಜೀರ್ಣತೆ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತವೆ’’ ಎನ್ನುತ್ತಾರೆ ಕಾಸ್ಮಿಕ್ಸ್ನ ಸಿಇಒ ಆಗಿರುವ ವಿಭಾ.
ವಿಭಾ ಹರೀಶ್ ಇಂಥದ್ದೊಂದು ಕಂಪನಿ ಶುರು ಮಾಡಬೇಕು ಎಂದು ಅಂದುಕೊಂಡಿರುವ ಹಿಂದಿನ ಉದ್ದೇಶವೂ ಕುತೂಹಲಕರವಾದದ್ದು. ಅವರು 12ನೇ ತರಗತಿಯಲ್ಲಿ ಇದ್ದಾಗ ಪಾಲಿಸಿಸ್ಟಿಕ್ ಓವರಿ ಸಿಂಡೊ್ರೕಮ್ (ಪಿಸಿಓಎಸ್) ಎಂಬ ಆರೋಗ್ಯ ಸಮಸ್ಯೆಗೆ ಒಳಗಾದರು. ಇದರ ಬಗ್ಗೆ ಅವರು ಅಧ್ಯಯನ ಮಾಡಿದಾಗ ಪೌಷ್ಟಿಕಾಂಶ ಕೊರತೆಯೇ ಇದಕ್ಕೆ ಕಾರಣವೆಂಬುದೂ, ಇಂಥ ಸಮಸ್ಯೆಯಿಂದ ಅನೇಕ ಮಹಿಳೆಯರು ಬಳಲುತ್ತಿರುವುದೂ ತಿಳಿಯಿತು. ಆಗ ಇವರು ತಾಯಿಯ ಸಲಹೆ ಮೇರೆಗೆ ಹರ್ಬಲ್ ಔಷಧ ತೆಗೆದುಕೊಳ್ಳಲು ಆರಂಭಿಸಿದರು.
ಅಂದ ಹಾಗೆ ವಿಭಾ ಓದಿರುವುದು ಇಂಜಿನಿಯರಿಂಗ್. ಸಪ್ಲೈ ಚೈನ್ ಮ್ಯಾನೇಜ್ವೆುಂಟ್ ವಿಷಯದಲ್ಲಿ ಪದವಿ ಪೂರೈಸಿದ್ದಾರೆ. ಅದರೆ ಆಸಕ್ತಿ ತಳೆದಿದ್ದು ಹರ್ಬಲ್ ಲೋಕದ ಬಗ್ಗೆ. ‘‘ಮೊದಲು ಈ ಉತ್ಪನ್ನಗಳ ಬಗ್ಗೆ ವೖಜ್ಞಾನಿಕ ಮಾಹಿತಿ ಇರಲಿಲ್ಲ. ಆದ್ದರಿಂದ ಮಾರ್ಕೆಟಿಂಗ್ ಎಲ್ಲಾ ಕಷ್ಟ ಎನಿಸಿತು. ಹರ್ಬಲಿಸಂ ಕುರಿತು ಅಧ್ಯಯನ ಮಾಡಿದೆ. ನನ್ನ ಅಜ್ಜಿ, ಅಮ್ಮ ಕೂಡ ಕೆಲವು ಸಲಹೆ ಕೊಟ್ಟರು. ಇದರಿಂದ ನನಗೆ ಇಷ್ಟು ವ್ಯವಹಾರ ಮಾಡಲು ಸಹಾಯವಾಯಿತು’’ಎನ್ನುತ್ತಾರೆ ವಿಭಾ.
‘‘ಉದ್ಯಮವನ್ನು ಬರೀ ಲಾಭದತ್ತ ಕೊಂಡೊಯ್ಯುವುದು ನನ್ನ ಉದ್ದೇಶವಲ್ಲ. ಬದಲಿಗೆ ಗ್ರಾಮಾಂತರ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು ಎನ್ನುವುದು ನನ್ನ ಗುರಿ. ಈ ನಿಟ್ಟಿನಲ್ಲಿ ಈಗಾಗಲೇ ಕೆಲಸ ಶುರು ಮಾಡಿದ್ದೇನೆ’’ ಎನ್ನುವುದು ವಿಭಾ ಮಾತು. ಈ ಕುರಿತು ಫೋರ್ಬ್ಸ್ ಸಂಸ್ಥೆ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದು, ‘ವಿಭಾ ತಮಗೆ ಬಂದ ಲಾಭದಲ್ಲಿ ಪೌಷ್ಟಿಕ ಆಹಾರ ಯೋಜನೆಗೆ ಹಣ ಒದಗಿಸುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆಯಿಂದ ಬಳಲುವ ಮಕ್ಕಳಿಗೆ ಆಹಾರ ನೀಡುತ್ತಿದ್ದಾರೆ’ ಎಂದು ಪ್ರಶಂಸಿಸಿದೆ.
ಒಂದೇ ವರ್ಷದಲ್ಲಿ 2 ಕೋಟಿ ರೂಪಾಯಿ ವ್ಯವಹಾರ: ಕಳೆದ ವರ್ಷ ವಿಭಾ ಶುರು ಮಾಡಿರುವ ಕಾಸ್ಮಿಕ್ಸ್ ಕಂಪನಿ, ಈಗಾಗಲೇ ಎರಡು ಕೋಟಿ ರೂ. ವಹಿವಾಟು ನಡೆಸಿದೆ. ಈ ಮೂಲಕ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಉದ್ಯಮ ಸ್ಥಾಪಿಸಿದ, ಅದರಲ್ಲೂ ಕರೊನಾದಂಥ ಬಿಕ್ಕಟ್ಟಿನ ಕಾಲದಲ್ಲಿ ಅದನ್ನು ಅತ್ಯಂತ ಎತ್ತರದ ಮಟ್ಟಕ್ಕೆ ಕೊಂಡೊಯ್ದ ಕೀರ್ತಿಗೆ ವಿಭಾ ಹರೀಶ್ ಭಾಜನರಾಗಿದ್ದಾರೆ.
ತಮ್ಮ ಮೇಲೆಯೇ ಮೊದಲ ಪ್ರಯೋಗ!: ಯಾವುದಾದರೂ ಉತ್ಪನ್ನಗಳು ಸಹಸ್ರ ಸಹಸ್ರ ಮಂದಿಯ ಗಮನ ಸೆಳೆಯಬೇಕು ಎಂದರೆ ಅದರಲ್ಲಿ ಏನಾದರೂ ವಿಶೇಷ ಇರಬೇಕು. ಆದರೆ ಅದು ಗ್ರಾಹಕರ ಗಮನ ಸೆಳೆಯುತ್ತದೆಯೋ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡುವುದು ದೊಡ್ಡ ಸವಾಲೇ. ಈ ಸವಾಲನ್ನು ಸ್ವೀಕರಿಸಿದ್ದ ವಿಭಾ ಹರೀಶ್ ಮೊದಲು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡರು! ಹರ್ಬಲ್ ಸಂಬಂಧಿತ ಉದ್ಯಮ ಸ್ಥಾಪನೆ ಮಾಡುವ ಮುನ್ನ ಸಾಕಷ್ಟು ಅಧ್ಯಯನ ನಡೆಸಿದ ವಿಭಾ, ಇದು ಜನರ ಮೇಲೆ ಪರಿಣಾಮ ಬೀರುತ್ತದೆಯೋ ಇಲ್ಲವೋ ಎಂದು ನೋಡುವ ಸಲುವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಟ್ರೆಂಡಿಂಗ್ ಆಗಿರುವ ಹರ್ಬಲಿಸಂ ಹಾಗೂ ಭಾರತದ ಆಯುರ್ವೆದ ವಿಧಾನ ಬಳಸಿ ತಮ್ಮ ಮೇಲೆ ತಾವೇ ಪ್ರಯೋಗ ಮಾಡಿಕೊಂಡರು. ಇದು ಯಶಸ್ವಿಯಾದ ಬಳಿಕವಷ್ಟೇ ಉದ್ಯಮ ಸ್ಥಾಪನೆಗೆ ಮುಂದಾದರು.