

ದೇಶದ ಪ್ರಮುಖ ಐಟಿ ಕಂಪನಿಗಳಿರುವ 5ನೇ ದೊಡ್ಡ ಹಾಗೂ ದೇಶದ ರಿಯಾಲ್ಟಿ ಕ್ಷೇತ್ರದಲ್ಲಿ ಅತಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡಿರುವ ನಗರ ಬೆಂಗಳೂರು. ಐಟಿ ಮತ್ತು ಮೂಲಸೌಕರ್ಯಗಳಿಂದ ಸ್ಥಿರವಾದ ಪ್ರಗತಿ ಕಾಣುತ್ತಿರುವ ಇಲ್ಲಿಯ ರಿಯಾಲ್ಟಿ ಕ್ಷೇತ್ರ ಮತ್ತಷ್ಟು ವೇಗವಾಗಿ ಬೆಳೆಯುತ್ತಿದೆ. ಇದರಿಂದ ದಿನದಿಂದ ದಿನಕ್ಕೆ ಮನೆಗಳ ಬೇಡಿಕೆ ಕೂಡ ಹೆಚ್ಚುತ್ತಲೇ ಇದೆ. ನಗರ ಮಾತ್ರವಲ್ಲದೇ ಹೊರ ವಲಯಗಳಲ್ಲಿಯೂ ಸಾಕಷ್ಟು ಬೇಡಿಕೆ ಕಾಣುತ್ತಿದೆ. ಹೊರವಲಯಗಳಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶಿತ ನಿವೇಶನಗಳಿಗೆ ಬೇಡಿಕೆ ವ್ಯಕ್ತವಾಗುತ್ತವೆ. ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಡೆವಲಪರ್ಗಳು ಹೊಸ ಹೊಸ ಪ್ರಾಜೆಕ್ಟ್ಗಳನ್ನು ರೂಪಿಸುತ್ತಿದ್ದಾರೆ.
ಇಲೆಕ್ಟ್ರಾನಿಕ್ ಸಿಟಿ, ಬೇಗೂರು ಮುಖ್ಯ ರಸ್ತೆ, ವೈಟ್ಫೀಲ್ಡ್, ಬನ್ನೇರುಘಟ್ಟ ರಸ್ತೆ, ರಾಜಾಜಿನಗರ, ಮಲ್ಲೇಶ್ವರ, ಕೋರಮಂಗಲ, ರಾಜರಾಜೇಶ್ವರಿ ನಗರ, ಕೇಂಗೇರಿ, ಹೆಬ್ಬಾಳ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿ ಮತ್ತಿತರರ ಪ್ರದೇಶಗಳಲ್ಲಿ ಕೂಡ ರಿಯಾಲ್ಟಿ ಕ್ಷೇತ್ರ ವೇಗದ ಅಭಿವೃದ್ಧಿ ಕಾಣುತ್ತಿದೆ. ಇಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಗರದ ಬೇರೆ ಪ್ರದೇಶಗಳಿಗೂ ರಿಯಾಲ್ಟಿ ವಿಸ್ತರಣೆಯಾಗಿ ಎಲ್ಲೆಡೆ ಹೊಸ ಹೊಸ ಪ್ರಾಜೆಕ್ಟ್ಗಳು ಲಾಂಚ್ ಆಗುತ್ತಿವೆ.
ಈ ರೀತಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರದೇಶಗಳ ಪೈಕಿ ತುಮಕೂರು ವಲಯ ಕೂಡ ಒಂದಾಗಿದೆ. ಬೆಂಗಳೂರಿನ ಮಧ್ಯಭಾಗದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಇದು ನಗರದ ವಾಹನ ದಟ್ಟಣೆಗೆ ತಕ್ಕ ಮದ್ದು ಎಂದೇ ಹೇಳಬಹುದು. ಇಲ್ಲಿ ಸ್ವಂತ ವಾಸ್ತವ್ಯ ಮತ್ತು ಹೂಡಿಕೆ ಉದ್ದೇಶ ಎರಡನ್ನೂ ಹೊಂದಿದವರು ಮನೆ ಖರೀದಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿರುವ ಪ್ರದೇಶಗಳಲ್ಲಿ ಮನೆಗಳು ದೊರೆಯುತ್ತವೆ.
ಭವಿಷ್ಯದ ಲಾಭ
ಯಾವುದೇ ಪ್ರದೇಶವಾಗಲಿ ಬೆಳೆಯುತ್ತಿರುವ ಹಂತದಲ್ಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ. ಬೆಂಗಳೂರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದು ಸಹಜವಾಗಿಯೇ ಮನೆಯ ಬೇಡಿಕೆ ಏರುವಂತೆ ಮಾಡುತ್ತದೆ. ಸರ್ಕಾರದ ಹೊಸ ರೆರಾದಂತಹ ನಿಯಮಗಳು ನಿಗದಿತ ಸಮಯದಲ್ಲಿ ಪ್ರಾಜೆಕ್ಟ್ ಪೂರ್ಣಗೊಳ್ಳುವಂತೆ ಮಾಡಿದೆ. ಈ ಎಲ್ಲಾ ಅಂಶಗಳು ಈ ಭಾಗದಲ್ಲಿ ಹೂಡಿಕೆಗೆ ಭವಿಷ್ಯದಲ್ಲಿ ದೊಡ್ಡ ಲಾಭವನ್ನು ತಂದುಕೊಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.
ಮೂಲಸೌಕರ್ಯ
ಬೆಂಗಳೂರಿನ ಬೆಳವಣಿಗೆಗೆ ಕಾರಣವಾದ ಅಂಶಗಳ ಪೈಕಿ, ಮೂಲಸೌಕರ್ಯ ಅಭಿವೃದ್ಧಿ ಘೊಷಣೆಯಾದ ಪ್ರದೇಶಗಳಿಗೆ ಇದು ಸಮೀಪವಾಗಿರುವುದು ಕೂಡ ಒಂದು. ಆಲೂರು ಕ್ರಿಕೆಟ್ ಸ್ಟೇಡಿಯಂ, ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ, ನಮ್ಮ ಮೆಟ್ರೊ ಮೊದಲಾದ ಮೂಲಸೌಕರ್ಯಗಳಿಂದ ಮತ್ತು ಅಭಿವೃದ್ದಿ ಯೋಜನೆಗಳಿಂದ ತುಮಕೂರು ಹೆಚ್ಚು ಜನಪ್ರಿಯವಾಗಿದೆ. ಮೆಟ್ರೊ ಫೇಸ್ 1 ಮತ್ತು 2 ಮತ್ತು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯನ್ನು ಅರ್ಧದಷ್ಟು ಕವರ್ ಮಾಡುವ ಪೆರಿಫೆರಲ್ ರಿಂಗ್ ರಸ್ತೆ ಈ ಪ್ರದೇಶಕ್ಕೆ ಹೊಸ ಆಯಾಮ ಒದಗಿಸಲಿದೆ. ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಈ ಭಾಗದಲ್ಲಿ ವಾಣಿಜ್ಯ, ವಸತಿ ಮತ್ತು ಕೈಗಾರಿಕಾ ಬೆಳವಣಿಗೆಗೆ ಕಾರಣವಾಗಲಿದೆ. ಸಾಂಸ್ಕೃತಿಕವಾಗಿ, ಪ್ರಾಕೃತಿಕವಾಗಿ ಇದು ವಸತಿ ಸ್ವರ್ಗ ಎಂದೇ ಹೇಳಬಹುದು. ಇದಕ್ಕೆ ಪೂರಕವಾಗಿ ಪ್ರಮುಖ ಹೆದ್ದಾರಿಗಳು ಮತ್ತು ಸಾರಿಗೆ ಸೇವೆಗಳು ಇಲ್ಲಿಗೆ ಲಭ್ಯವಿರುವುದು ಒಟ್ಟಾರೆ ವಸತಿ ಆಕಾಂಕ್ಷಿಗಳನ್ನು ಕೈಬೀಸಿ ಕರೆಯುತ್ತಿದೆ. ಅಲ್ಲದೆ, ಬೆಂಗಳೂರಿನ ಇತರೆ ಕಡೆಗಳಲ್ಲಿ ಇರುವ ವಸತಿಗಳನ್ನು ಖರೀದಿಸಲು ಕೂಡ ಆಸಕ್ತಿ ತೋರುತ್ತಿದ್ದಾರೆ.
| ಬೇಲೂರು ಹರೀಶ