

ಸಾಮಾನ್ಯವಾಗಿ ಪ್ರಚಲಿತವಾಗಿರುವ ಅಭಿಪ್ರಾಯದಂತೆ ಗೋಹತ್ಯಾ ನಿಷೇಧ ಯಾವುದೇ ಧರ್ಮ ಅಥವಾ ಪಂಗಡದ ನಂಬಿಕೆಗಳನ್ನು ಪುರಸ್ಕರಿಸುವುದಕ್ಕಾಗಿ ಅಲ್ಲ. ನಮ್ಮ ಸಂವಿಧಾನ ಈ ಬಗ್ಗೆ ಒತ್ತು ಕೊಟ್ಟಿರುವುದು ರಾಜ್ಯನೀತಿಗೆ ನಿರ್ದೇಶನ ಸೂತ್ರಗಳನ್ನು (Directive Principles of State Policy) ಒಳಗೊಂಡ ನಾಲ್ಕನೇ ಅಧ್ಯಾಯದಲ್ಲಿ. ಕೃಷಿ ಮತ್ತು ಪಶುಸಂಗೋಪನಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಿ ಆಧುನಿಕ ಹಾಗೂ ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಸಂವಿಧಾನದ ಅನುಚ್ಛೇದ 48 ಸರ್ಕಾರಕ್ಕೆ ಆಗ್ರಹ ಮಾಡುತ್ತದೆ. ಉತ್ತಮ ತಳಿಗಳನ್ನು ಸಂರಕ್ಷಿಸಿ ಗೋವು, ಕರುಗಳನ್ನು ಮತ್ತು ಹಾಲು ಕೊಡುವಂಥ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುವಂಥ ಜಾನುವಾರುಗಳ ವಧೆಯನ್ನು ನಿಷೇಧಿಸುವ ಜವಾಬ್ದಾರಿಯನ್ನು ಸಂವಿಧಾನ ಸರ್ಕಾರದ ಹೆಗಲಿನ ಮೇಲೆ ಹಾಕಿದೆ. ಸಂವಿಧಾನದ ನಾಲ್ಕನೆಯ ಅಧ್ಯಾಯದಲ್ಲಿ ರಾಜ್ಯ ತನ್ನ ನೀತಿಯನ್ನು ರೂಪಿಸುವ ದಿಶೆಯಲ್ಲಿ ಅನುಸರಿಸಬೇಕಾದ ಅಂಶಗಳ ಬಗ್ಗೆ ನಿರ್ದೇಶನ ನೀಡಲಾಗಿದೆ. ಈ ನಿರ್ದೇಶನಗಳನ್ನು ಯಾವುದೇ ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಅವಕಾಶವಿಲ್ಲದಿದ್ದರೂ ಈ ನಿರ್ದೇಶನಗಳನ್ನು ಸರ್ಕಾರ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯನ್ನು, ಇವನ್ನು ಮೂಲಭೂತವೆಂದು ಪರಿಗಣಿಸಿ ಅಳವಡಿಸಿಕೊಳ್ಳಲೇಬೇಕು ಎಂಬ ಆಗ್ರಹವನ್ನು ಸಂವಿಧಾನ ಸ್ಪಷ್ಟಪಡಿಸಿದೆ.
ಗೋಹತ್ಯೆಯನ್ನು ನಿಷೇಧಿಸುವ ಬಗ್ಗೆ ಸಂವಿಧಾನದ ನಾಲ್ಕನೇ ಅಧ್ಯಾಯದಲ್ಲಿ ಪ್ರಸ್ತಾಪ ಮಾಡಿರುವುದರ ಹಿಂದೆಯೂ ಸ್ವಾರಸ್ಯಕರ ಇತಿಹಾಸವಿದೆ. ಸಂವಿಧಾನ ರಚನಾ ಸಮಿತಿಯ ಕಲಾಪಗಳಲ್ಲಿ ಈ ಬಗ್ಗೆ ಚರ್ಚೆ ನಡೆದಿದು, ಆಂಗ್ಲೋ ಇಂಡಿಯನ್ ಸಮುದಾಯದ ಪ್ರತಿನಿಧಿಯಾದ ಫ್ರಾಂಕ್ ಆಂಥೋನಿ ಮತ್ತು ನಮ್ಮವರೇ ಆದ ಕೆಂಗಲ್ ಹನುಮಂತಯ್ಯನವರ ಮಧ್ಯೆ ವಾಗ್ಯುದ್ಧ ಏರ್ಪಟ್ಟಿತ್ತು. 1949 ನವೆಂಬರ್ 25ರಂದು ನಡೆದ ಸಮಿತಿಯ ನಡಾವಳಿಗಳಲ್ಲಿ ಇದನ್ನು ಕಾಣಬಹುದು. ‘ಗೋಹತ್ಯೆ ಹಿಂದೂ ಧಾರ್ವಿುಕ ನಂಬಿಕೆಗಳಿಗೆ ಅಪಚಾರವೆಸಗುತ್ತದೆ. ಹಾಗಾಗಿ ಹಿಂದೂಗಳನ್ನು ಸಂತೈಸಲು ಸಂವಿಧಾನದಲ್ಲಿ ಈ ರೀತಿ ಪ್ರಸ್ತಾಪ ಮಾಡಿದೆ, ಪಶುಸಂಗೋಪನಾ ಅಭಿವೃದ್ಧಿಗೂ ಗೋಹತ್ಯೆ ನಿಷೇಧಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಕುತಂತ್ರದಿಂದ ಇದರ ಪ್ರಸ್ತಾಪ ಸೇರಿಸಲಾಗಿದೆ’ ಎಂದು ವಾದಿಸಿದ ಫ್ರಾಂಕ್ ಆಂಥೋನಿಯವರನ್ನು ಕೆಂಗಲ್ ಹನುಮಂತಯ್ಯನವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸಂವಿಧಾನದ ರಚನೆಯ ಮಹತ್ಕಾರ್ಯದಲ್ಲಿ ತೊಡಗಿರುವ ಸಮಿತಿಯಲ್ಲಿ ದೀರ್ಘವಾದ ಆಲೋಚನೆ ಹಾಗೂ ಚರ್ಚೆ ನಡೆಯುತ್ತದೆ. ಇಂತಹ ಮಹತ್ತರವಾದ ಸಮಿತಿಯ ಸದಸ್ಯರು ಕುತಂತ್ರ ಮಾಡಿದರು ಎಂಬ ಆರೋಪ ಖಂಡನೀಯ ಎಂದು ಹನುಮಂತಯ್ಯ ಗುಡುಗಿದ್ದರು. ನಂತರ ಫ್ರಾಂಕ್ ಆಂಥೋನಿ ವಿಷಾದ ವ್ಯಕ್ತಪಡಿಸಿದರು.
ಹಲವಾರು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸಲಾಗಿತ್ತು. ಬಿಹಾರ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿನ ಕಾನೂನುಗಳನ್ನು 1958ರಲ್ಲಿ ಇತ್ಯರ್ಥವಾದ ಮೊಹಮ್ಮದ್ ಹನೀಫ್ ಖುರೇಷಿ ಎನ್ನುವವರ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿದಾರರು ಧಾರ್ವಿುಕ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸುತ್ತ ಬಕ್ರೀದ್ ಸಂದರ್ಭದಲ್ಲಿ ಗೋವನ್ನು ಬಲಿಕೊಡುವುದು ತಮ್ಮ ಹಕ್ಕು ಎಂದು ವಾದಿಸಿದ್ದರು. ಈ ವಾದವನ್ನು ತಿರಸ್ಕರಿಸಿದ ಐವರು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠ, ಇಸ್ಲಾಂ ಧರ್ಮದಲ್ಲಿ ಗೋವನ್ನೇ ಬಲಿ ಕೊಡಬೇಕು ಎಂಬ ಯಾವುದೇ ಸಾಕ್ಷಾ್ಯಧಾರ ಇಲ್ಲ. ಹಾಗಾಗಿ ಬಲಿಕೊಡುವ ಕಾರಣಕ್ಕಾಗಿ ಗೋವನ್ನು ಹತ್ಯೆ ಮಾಡುವುದು ಧಾರ್ವಿುಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಅಡಕವಾಗಿಲ್ಲ ಎಂದು ತೀರ್ಪಿತ್ತಿತು. ಅರ್ಜಿದಾರರು ಎರಡನೆಯದಾಗಿ ಪ್ರತಿಪಾದಿಸಿದ್ದು ಸಮಾನತೆಯ ಹಕ್ಕನ್ನು. ಗೋವನ್ನು ಕೊಂದು ಅದರ ಮಾಂಸವನ್ನು ಮಾರಾಟ ಮಾಡುವ ಕಸಾಯಿ ಕಸುಬಿನವರು ಇಸ್ಲಾಂ ಧರ್ಮಕ್ಕೆ ಸೇರಿದವರು. ಹಾಗಾಗಿ ಗೋಹತ್ಯೆ ನಿಷೇಧದಿಂದ ಆ ಪಂಗಡದವರ ಸಮಾನತೆಯ ಹಕ್ಕನ್ನು ಚ್ಯುತಿಗೊಳಿಸಿದಂತಾಗುತ್ತದೆ ಎಂದು ವಾದಿಸಿದ್ದರು. ಈ ವಾದವನ್ನೂ ತಿರಸ್ಕರಿಸಿದ ನ್ಯಾಯಾಲಯ ಪ್ರಶ್ನಿತ ಕಾನೂನುಗಳನ್ನು ರೂಪಿಸಲು ಬಲವಾದ ಕಾರಣಗಳಿದ್ದು, ಸಮಂಜಸವಾದ ವರ್ಗೀಕರಣ ಮಾಡುವುದರಿಂದ ಸಮಾನತೆಯ ಹಕ್ಕಿನ ಚ್ಯುತಿ ಆಗುವುದಿಲ್ಲ ಎಂದು ವಿಶ್ಲೇಷಿಸಿತು. ಈ ಕಾರಣಗಳಿಗಾಗಿ ಪ್ರಶ್ನಿತ ಕಾನೂನುಗಳ ಮಾನ್ಯತೆಯನ್ನು ಎತ್ತಿಹಿಡಿದರೂ ಬೇರೊಂದು ಕಾರಣಕ್ಕೆ ನ್ಯಾಯಾಲಯ ಈ ಕಾನೂನುಗಳ ಒಂದು ಅಂಶ ಸಂವಿಧಾನಕ್ಕೆ ವಿರುದ್ಧವೆಂದು ಘೊಷಿಸಿತ್ತು. ಗೋವು ಮತ್ತು ಆ ಜಾತಿಯ ಜಾನುವಾರುಗಳ ವಯಸ್ಸು ಮತ್ತು ಉಪಯುಕ್ತತೆಯ ಬಗ್ಗೆ ವಿಚಾರ ಮಾಡದೇ ಅವುಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಅರ್ಜಿದಾರರ ವ್ಯಾಪಾರೋದ್ಯಮದ ಹಕ್ಕನ್ನು ಚ್ಯುತಿಗೊಳಿಸುತ್ತದೆ. ವ್ಯಾಪಾರೋದ್ಯಮದ ಮೂಲಭೂತ ಹಕ್ಕನ್ನು ಸಂವಿಧಾನದ ಮೂರನೇ ಅಧ್ಯಾಯದಲ್ಲಿ ಖಚಿತಗೊಳಿಸಲಾಗಿದೆ, ನಾಲ್ಕನೆಯ ಅಧ್ಯಾಯದಲ್ಲಿನ ನಿರ್ದೇಶನ ಆ ಮೂಲಭೂತ ಹಕ್ಕಿಗೆ ಒಳಪಟ್ಟು ಇರಬೇಕೇ ಹೊರತು ಅದನ್ನು ನಿರಾಕರಿಸುವ ನಿಟ್ಟಿನಲ್ಲಿ ಅಲ್ಲ ಎಂದು ಅಭಿಪ್ರಾಯಪಟ್ಟಿತ್ತು. 1958ರಿಂದ ಜಾರಿಯಲ್ಲಿದ್ದ ನ್ಯಾಯಾಲಯದ ಈ ಅಂಶದ ಬಗೆಗಿನ ಘೋಷಣೆಯನ್ನು 2005ರಲ್ಲಿ ಏಳು ನ್ಯಾಯಾಧೀಶರ ವಿಸõತ ನ್ಯಾಯಪೀಠದಲ್ಲಿ ವ್ಯತಿರಿಕ್ತಗೊಳಿಸಲಾಗಿದೆ.
1994ರಲ್ಲಿ ಜನತಾದಳ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಗುಜರಾತ್ನಲ್ಲಿ ರೂಪಗೊಂಡಿತ್ತು. ಗುಜರಾತ್ಗೆ ಅನ್ವಯವಾಗುತ್ತಿದ್ದ ‘ಮುಂಬೈ ಜಾನುವಾರು ರಕ್ಷಣಾ ಕಾಯ್ದೆ’ಯನ್ನು ಪರಿಷ್ಕರಿಸಿ ಗೋವು ಮತ್ತು ಗೋವಂಶದ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿತ್ತು. ಕಾನೂನುಬಾಹಿರವಾಗಿ ಗೋಹತ್ಯೆ ಮಾಡಿದವರಿಗೆ ಕನಿಷ್ಠ 3 ವರ್ಷ ಹಾಗೂ ಗರಿಷ್ಠ 7 ವರ್ಷಗಳ ಜೈಲುವಾಸ ಮತ್ತು 50 ಸಾವಿರ ರೂಪಾಯಿಗಳ ಜುಲ್ಮಾನೆಯಿತ್ತು. ‘ಮಿರ್ಜಾಪೂರ್ ಮೋಟಿ ಖುರೇಶಿ ಕಸಾಬ್ ಜಮಾತ್’ ಎಂಬ ಸಂಸ್ಥೆ ಗುಜರಾತ್ ಹೈಕೋರ್ಟ್ನಲ್ಲಿ ಈ ಕಾನೂನನ್ನು ಪ್ರಶ್ನಿಸಿತು. ಗೋವುಗಳ ವಯಸ್ಸು ಮತ್ತು ಉಪಯುಕ್ತತೆಯ ವಿಚಾರ ಮಾಡದೆ ಸಂಪೂರ್ಣವಾಗಿ ನಿಷೇಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ತೀರ್ಪು ಕೊಟ್ಟಿತು. ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. 7 ಜನ ನ್ಯಾಯಾಧೀಶರನ್ನು ಒಳಗೊಂಡ ವಿಸ್ತೃತ ಪೀಠ 2005ರಲ್ಲಿ ಗುಜರಾತ್ ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿತು. ಸಂವಿಧಾನದ 48ನೇ ಅನುಚ್ಛೇದದಲ್ಲಿನ ನಿರ್ದೇಶನದ ಹಿಂದಿರುವ ಘನವಾದ ಉದ್ದೇಶ, ಮಹತ್ವ ಮತ್ತು ಮೂಲಭೂತ ಹಕ್ಕುಗಳನ್ನು ಈ ನಿರ್ದೇಶನಗಳ ಜೊತೆ ಹೇಗೆ ಸಮತೋಲಿತವಾಗಿ ಅರ್ಥೈಸಬೇಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಪೀಠ ಸವಿಸ್ತಾರವಾಗಿ ವಿಶ್ಲೇಷಿಸಿದೆ. 48ನೇ ಅನುಚ್ಛೇದದ ಜೊತೆಗೆ 48-ಅ ಅನುಚ್ಛೇದ ಹಾಗೂ 51-ಅ (ಜ) ಅನುಚ್ಛೇದದ ಪ್ರಸ್ತಾಪ ಮಾಡಿದೆ. ಎಲ್ಲ ಜೀವಿಗಳ ಬಗ್ಗೆ ಅನುಕಂಪ ಹೊಂದುವುದು ಮೂಲಭೂತ ಕರ್ತವ್ಯಗಳಲ್ಲೊಂದು. ಗೋವು ಮತ್ತು ಗೋವಂಶ ಹಾಲು ಕೊಡುವುದಕ್ಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಅನುಕೂಲವಾಗುವವರೆಗೂ ಮಾತ್ರವೇ ಅವಶ್ಯ ಎನ್ನುವುದು ಸತ್ಯಕ್ಕೆ ದೂರವಾದದ್ದು. ವಯಸ್ಸಾದ ಮಾತ್ರಕ್ಕೆ ಗೋವು ಮತ್ತು ಗೋವಂಶವನ್ನು ನಿರ್ಲಕ್ಷಿಸಿ ಅವನ್ನು ಕಸಾಯಿಖಾನೆಗೆ ಕಳಿಸುವುದು ಅಕ್ಷಮ್ಯ ಅಪರಾಧ ಎಂದು ಪ್ರಖರವಾಗಿ ತಿಳಿಸಿದೆ. ಪಶುಸಂಗೋಪನೆ ಹಾಗೂ ಪಶುವೈದ್ಯ ವಿಷಯಗಳಲ್ಲಿ ಸಾಕಷ್ಟು ಆಧುನಿಕ ಬೆಳವಣಿಗೆಗಳು ಆಗಿದ್ದು, ಗೋವುಗಳನ್ನು ಸಂರಕ್ಷಿಸಿ ಅವುಗಳನ್ನು ಉಪಯುಕ್ತವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಇರುವುದನ್ನು ನ್ಯಾಯಾಲಯ ಮನಗಂಡಿದೆ. ಅವುಗಳಿಂದ ಸಿಗುವ ಸಗಣಿ, ಗೋಮೂತ್ರ ಉಪಯುಕ್ತವಾಗಿದ್ದು ಕೃಷಿ, ಔಷಧೀಯ ಉದ್ದೇಶಗಳಿಗೂ ಬಳಸಲಾಗುತ್ತದೆ. ಈ ಎಲ್ಲ ವಿಷಯಗಳನ್ನು ವಿಮರ್ಶೆ ಮಾಡಿ ಗೋವು ಮತ್ತು ಗೋವಂಶದ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಕಾನೂನನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ವ್ಯಾಪಾರೋದ್ಯಮದ ಹಕ್ಕು ಸಂವಿಧಾನದಲ್ಲಿ ಖಚಿತವಾಗಿದ್ದರೂ, ಆಡಳಿತದಲ್ಲಿ ಮೂಲಭೂತವಾದ ಅಂಶಗಳನ್ನು ತಿಳಿಸುವ ಸಂವಿಧಾನದ ನಾಲ್ಕನೇ ಅಧ್ಯಾಯದ ಸೂತ್ರಗಳನ್ನು ಸಮಂಜಸವಾಗಿ ಅಳವಡಿಸಿಕೊಂಡು ಮಾಡುವ ಕಾನೂನಿನಿಂದ ಯಾವುದೇ ಮೂಲಭೂತ ಹಕ್ಕಿನ ಚ್ಯುತಿ ಆಗುವುದಿಲ್ಲ ಎಂದು ನ್ಯಾಯಾಲಯ ತೀರ್ಪಿತ್ತಿದೆ.
ಮೈಸೂರು ರಾಜ್ಯದಲ್ಲಿ 1948ರಿಂದಲೇ ಗೋಹತ್ಯಾನಿಷೇಧ ಕಾನೂನು ಜಾರಿಯಲ್ಲಿತ್ತು. 1964ರಲ್ಲಿ ಕರ್ನಾಟಕದಲ್ಲಿ ‘ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ’ಯನ್ನು ಜಾರಿಗೊಳಿಸಲಾಯಿತು. ಮೊಹಮ್ಮದ್ ಹನೀಫ್ ಖುರೇಷಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿ ಕಾನೂನು ಮಾಡಲಾಗಿತ್ತು. ಇದೀಗ ಆ ತೀರ್ಪು ಜಾರಿಯಲ್ಲಿಲ್ಲ. 2005ರ ವಿಸ್ತೃತ ನ್ಯಾಯಪೀಠದ ತೀರ್ಪಿನಂತೆ ಗೋವು ಹಾಗೂ ಗೋವಂಶ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಅಡಚಣೆಗಳಿಲ್ಲ. ಹೀಗೆ ನಿಷೇಧ ಮಾಡುವುದು ಸಂವಿಧಾನದ ಪ್ರಕಾರ ಸರ್ಕಾರದ ಕರ್ತವ್ಯವಾಗಿರುತ್ತದೆ. ಕರ್ನಾಟಕದಲ್ಲಿ ಗೋವು ಹಾಗೂ ಗೋವಂಶ ಹತ್ಯೆಯನ್ನು ನಿಷೇಧಿಸಿ ಕಾಯ್ದೆ ಜಾರಿಯಲ್ಲಿದ್ದರೂ, ಅದರಲ್ಲಿ ಪ್ರಸ್ತಾಪಿಸಿರುವ ಕ್ರಮ ಹಾಗೂ ಶಿಕ್ಷೆ ಮೃದುವಾದದ್ದು. ಕಾನೂನುಬಾಹಿರವಾಗಿ ಗೋಹತ್ಯೆ ಮಾಡಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿ, ತಪ್ಪಿತಸ್ಥನೆಂದು ಘೊಷಿತನಾದರೆ 6 ತಿಂಗಳುಗಳವರೆಗೆ ಜೈಲು ಅಥವಾ 1 ಸಾವಿರ ರೂ.ವರೆಗಿನ ಜುಲ್ಮಾನೆ ಅಥವಾ ಎರಡೂ ಶಿಕ್ಷೆಗಳು ಅನ್ವಯವಾಗುತ್ತವೆ. ಗುಜರಾತ್ ಮಾದರಿಯಲ್ಲಿ ಕಠಿಣವಾದ ಶಿಕ್ಷೆ ಜಾರಿಗೊಳಿಸದಿದ್ದಲ್ಲಿ ಈ ಕಾಯ್ದೆ ಅನುಪಯುಕ್ತ.
2010ರಲ್ಲಿ ಈ ಕಾಯ್ದೆಯ ಪರಿಷ್ಕರಣೆ ಮಾಡಿ, ಸದನದಲ್ಲಿ ಅನುಮೋದನೆಗೊಂಡರೂ ರಾಷ್ಟ್ರಪತಿಗಳ ಅಂಕಿತವಾಗಲಿಲ್ಲ. ನಂತರ ಅಧಿಕಾರಕ್ಕೆ ಬಂದ ಸರ್ಕಾರ 2013ರಲ್ಲಿ ಈ ಪರಿಷ್ಕರಣೆಯನ್ನು ಹಿಂತೆಗೆದುಕೊಂಡಿತ್ತು. ಸಂವಿಧಾನದ ನಿರ್ದೇಶನ ಹಾಗೂ ನ್ಯಾಯಾಲಯದ ವಿಶ್ಲೇಷಣೆಯಂತೆ ಕರ್ನಾಟಕದಲ್ಲಿಯೂ ಪ್ರಬಲ ಕಾಯ್ದೆ ರೂಪಿಸಲು ಕಾಲ ಪ್ರಶಸ್ತವಾಗಿದೆ. ಗೋಹತ್ಯಾ ನಿಷೇಧವನ್ನು ಅನಗತ್ಯವಾಗಿ ಧಾರ್ವಿುಕ ನಂಬಿಕೆಗಳ ಜೊತೆ ಮಿಶ್ರಣ ಮಾಡುವುದು ಅಕ್ಷಮ್ಯ. ಸಂವಿಧಾನವೇ ಪರಮಧರ್ಮ. ರಾಜಕೀಯ ಲಾಭಗಳಿಗೋಸ್ಕರ ಧಾರ್ವಿುಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳದೇ ಸಾಂವಿಧಾನಿಕ ಧರ್ಮವನ್ನು ಅನುಸರಿಸುವುದೇ ನಿಜವಾದ ‘ಸೆಕ್ಯುಲರಿಸಂ’ ಎನ್ನುವುದನ್ನು ಮನಗಾಣೋಣ.
(ಲೇಖಕರು ಸುಪ್ರೀಂ ಕೋರ್ಟ್ ವಕೀಲರು)