ನಿಸ್ವಾರ್ಥದಿಂದ ಬಾಳು ಬಂಗಾರ: ಮನೋಲ್ಲಾಸ

Age Old
Published on
| ಭಾರತಿ ಎ. ಕೊಪ್ಪ

ಆ ಊರಿನಲ್ಲೊಂದು ದೇವಾಲಯವಿತ್ತು. ಆ ದೇವರ ವಿಶೇಷ ಕೃಪೆ ದೊರೆಯಲು ಪರಿಶುದ್ಧವಾದ ಪ್ರೀತಿ ಇರಬೇಕು; ಮಾನವೀಯ ಮೌಲ್ಯಗಳೇ ಇರಲಿ, ದಾನವಿರಲಿ, ಕರ್ತವ್ಯಪ್ರೀತಿ ಇರಲಿ ಅದು ಪರಿಶುದ್ಧವಾಗಿರಬೇಕೆಂದು ಅಲಿಖಿತ ನಿಯಮವಾಗಿತ್ತು. ನಿಜವಾದ ಪ್ರೀತಿ ಇದ್ದವರು ದೇಗುಲದ ಪೂಜೆಯ ಹರಿವಾಣವನ್ನು ಮುಟ್ಟಿದರೆ ಅದು ಚಿನ್ನವಾಗುತ್ತದೆ ಎಂದು ಒಮ್ಮೆ ಪ್ರಚಾರವಾಯಿತು. ಜನರು ತಮ್ಮ ಪ್ರೀತಿಯನ್ನು ಬೇರೆ ಬೇರೆ ಕೆಲಸಗಳಲ್ಲಿ ತೋರಿಸಿ, ಆ ಹರಿವಾಣ ಮುಟ್ಟಲು ತವಕಿಸಿದರು. ಕೆಲವರು ಅನ್ನದಾನ ಮಾಡಿದರೆ, ಕೆಲವರು ವಸ್ತ್ರದಾನ ಮಾಡಿದರು. ಇನ್ನೂ ಕೆಲವರು ಬಡವರಿಗೆ, ಭಿಕ್ಷುಕರಿಗೆ ಕೈತುಂಬಾ ನಾಣ್ಯಗಳನ್ನು ಹಂಚಿದರು. ತಾವು ಮಾಡಿದ ದಾನ, ಬಡವರಿಗೆ ತೋರಿದ ಪ್ರೀತಿಯಿಂದ ದೇಗುಲದ ಹರಿವಾಣ ಚಿನ್ನವಾಗುತ್ತದೆಂಬ ವಿಶ್ವಾಸದಿಂದ ಆ ಹರಿವಾಣವನ್ನು ಮುಟ್ಟಿದರು. ಆದರೆ ಅದು ಚಿನ್ನವಾಗಲೇ ಇಲ್ಲ!

ಒಂದು ದಿನ ಬಡ ಭಕ್ತನೊಬ್ಬ ಬಂದ. ಆತ ದೇವರ ಮುಂದೆ ಕುಳಿತು ಕಣ್ಣೀರು ಸುರಿಸುತ್ತಾ ಮನದಲ್ಲೇ ಏನನ್ನೋ ಬೇಡಿಕೊಳ್ಳುತ್ತಿದ್ದ. ಭಕ್ತರೊಬ್ಬರು ಹರಿವಾಣದ ಬಗೆಗೆ ಹೇಳಿದರು. ಭಕ್ತ ಮುಟ್ಟಿದಾಗ ಅದು ಚಿನ್ನದ ಹರಿವಾಣವಾಯಿತು. ಅಂದರೆ ಆತನದು ನಿಸ್ವಾರ್ಥ, ಪರಿಶುದ್ಧ ಪ್ರೀತಿ ಎಂಬುದು ಸರ್ವವೇದ್ಯವಾಯಿತು. ಜನರೆಲ್ಲರೂ ಅಚ್ಚರಿಯಿಂದ ಆತನಿಗೆ ನೀನೇನು ಮಹತ್ತರವಾದ ಪ್ರೀತಿ ತುಂಬಿದ ನಿಸ್ವಾರ್ಥ ಕೆಲಸ ಮಾಡಿರುವೆ? ಎಂದು ಪ್ರಶ್ನಿಸಲಾರಂಭಿಸಿದರು. ಆತ ‘ನಾನೊಬ್ಬ ಬಲಹೀನ ಕಾಲುಗಳನ್ನು ಹೊಂದಿದ ಬಡ ವ್ಯಕ್ತಿ. ಆದರೂ ಇತರರಿಗೆ ಹೊರೆಯಾಗದೆ ನನ್ನದೇ ಪುಟ್ಟ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಅಂಗಡಿಯಲ್ಲಿ ಬಂದ ಲಾಭದ ಹಣದಲ್ಲಿ ನಮ್ಮೂರಿನ ಬಡ ಮಕ್ಕಳಿಗೆ ಆಗಾಗ ಸಿಹಿ ಊಟ ಹಾಕಿಸುತ್ತೇನೆ. ನಮ್ಮೂರಿನ ಕೆಲವು ವೃದ್ಧ ಹಿರಿಯರನ್ನು ಅವರ ಮಕ್ಕಳು ದೂರ ಮಾಡಿದ್ದಾರೆ. ಅಂತಹ ಹಿರಿಯರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಮನಸ್ಸಿಗೊಂದಿಷ್ಟು ನೆಮ್ಮದಿ ನೀಡುತ್ತೇನೆ. ಈಗ ಕೂಡ ಮಾರ್ಗದಲ್ಲಿ ಒಬ್ಬ ರೋಗಿ ಚಳಿಯಲ್ಲಿ ನಡುಗುತ್ತಾ ಮಲಗಿದ್ದ. ಆತನಿಗೆ ನನ್ನದೇ ಶಾಲು ಹೊದಿಸಿ ಬಂದು, ಆತನ ಕುಟುಂಬದವರು ಬೇಗನೆ ಕರೆದುಕೊಂಡು ಹೋಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದೆ’ ಎಂದ. ಇದನ್ನು ಕೇಳಿ ಹರಿವಾಣವನ್ನು ಚಿನ್ನ ಮಾಡಲು ತೋರಿಕೆಯ ಪ್ರೀತಿ, ದಾನಗಳನ್ನು ಮಾಡಿದ ಜನರಿಗೆ ನಿಷ್ಕಲ್ಮಶ ಪ್ರೀತಿ ಮತ್ತು ನಿಸ್ವಾರ್ಥ ದಾನದ ಮಹತ್ವ ಮನದಟ್ಟಾಗತೊಡಗಿತು.

ಅಂತೆಯೇ ನಾವೆಲ್ಲ ಕೆಲಸದಲ್ಲಿ, ನೀಡುವ ದಾನದಲ್ಲಿ, ಪ್ರೀತಿಯಲ್ಲಿ ಎಲ್ಲದರಲ್ಲೂ ಪರಿಶುದ್ಧತೆ, ನಿಸ್ವಾರ್ಥತೆ ಬಹಳ ಕಡಿಮೆ ಎಂಬಂತೆ ಜೀವನ ನಡೆಸುತ್ತಿದ್ದೇವೆ. ‘ಮೊದಲು ಮನುಷ್ಯನಾಗು, ಆಗ ಹಣ, ಹೆಸರು, ಕೀರ್ತಿ ಹಾಗೂ ಇನ್ನುಳಿದವು ತಾವೇ ತಾವಾಗಿ ನಿನ್ನನ್ನು ಹಿಂಬಾಲಿಸುತ್ತವೆ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ, ಪ್ರೀತಿ, ನಿಸ್ವಾರ್ಥ, ಅನುಕಂಪದಂತಹ ಗುಣಗಳನ್ನು ನಮ್ಮದಾಗಿಸಿಕೊಂಡಾಗ ಬಾಳು ಬಂಗಾರವಾಗುತ್ತದೆ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net