

ಸಮಾವೇಶ ಆಯೋಜಿಸಿದ ಬಗೆ, ಅದಕ್ಕಾಗಿ ಮಾಡಿದ ವ್ಯಾಪಕ ತಯಾರಿ, ತೊಡಕುಗಳನ್ನು ನಿವಾರಿಸಿಕೊಂಡು ಎಲ್ಲ ಭಾಗಿದಾರ ದೇಶಗಳ ಸಹಮತದೊಂದಿಗೆ 115 ವಿಷಯಗಳನ್ನೊಳಗೊಂಡ, 83 ಪ್ಯಾರಾಗ್ರಾಪ್ಗಳ, 37 ಪುಟಗಳ ಇದುವರೆಗಿನ ಅತ್ಯಂತ ವಿಸõತ ನವದೆಹಲಿ ಜಿ20 ನಾಯಕರ ಘೊಷಣೆಯನ್ನು ಸಿದ್ಧಪಡಿಸಿ ಅದು ಸರ್ವಸಮ್ಮತಿಯಿಂದ ಅಂಗೀಕೃತಗೊಳಿಸಿದ ರಾಜತಾಂತ್ರಿಕ ಚಾಕಚಕ್ಯತೆ.. ಎಲ್ಲವೂ ಜಿ20 ನಾಯಕರ ಶ್ಲಾಘನೆಗೆ ಪಾತ್ರವಾಗಿವೆ. ಜಾಗತಿಕ ಸಮಾವೇಶ ಆಯೋಜಿಸುವ, ಅದನ್ನು ಯಶಸ್ವಿಯಾಗಿ ನಡೆಸುವ ಹೊಸ ಉನ್ನತ ಮಟ್ಟವೊಂದರ ಪರಿಚಯವನ್ನು ಭಾರತ ಮಾಡಿಕೊಟ್ಟಿದೆ ಎನ್ನುವುದು ಹಲವು ಗಣ್ಯರ ಅಭಿಪ್ರಾಯವಾಗಿದೆ. ಹಾಗೆ ನೋಡಿದರೆ ಕಳೆದ ಡಿಸೆಂಬರ್ನಲ್ಲಿ ಜಿ20 ಅಧ್ಯಕ್ಷ ಸ್ಥಾನ ದೊರೆತಂದಿನಿಂದ ಅಂತಿಮ ಶಿಖರ ಸಮಾವೇಶದವರೆಗೆ ಭಾರತ ಈ ಸಂಘಟನೆಗೆ ಸಂಬಂಧಿಸಿದಂತೆ ತನ್ನ 60 ನಗರಗಳಲ್ಲಿ 220 ಕಾರ್ಯಕ್ರಮಗಳು ಹಾಗೂ ಚರ್ಚಾಕೂಟಗಳನ್ನು ಏರ್ಪಡಿಸಿದೆ. ಇವುಗಳಲ್ಲಿ ಭಾಗಿಯಾದ ರಾಜಕೀಯ, ರಾಜತಾಂತ್ರಿಕ, ಆರ್ಥಿಕ, ವೈಜ್ಞಾನಿಕ, ಕಾರ್ವಿುಕ, ಮಹಿಳಾ, ಯುವಜನ ನಾಯಕರು ಮತ್ತವರ ಪ್ರತಿನಿಧಿಗಳನ್ನು ಹೊರತುಪಡಿಸಿ ಸಹಾಯಕ ವರ್ಗ, ಸಾರಿಗೆ ಸಿಬ್ಬಂದಿ, ಊಟೋಪಚಾರ ಸಿಬ್ಬಂದಿ, ಸಾಂಸ್ಕೃತಿಕ ತಂಡಗಳು, ಮಾಧ್ಯಮ ಪ್ರತಿನಿಧಿಗಳು, ಚರ್ಚಾಕೂಟಗಳಲ್ಲಿ ಭಾಗಿಯಾದ ಜನಪ್ರತಿನಿಧಿಗಳು ಮತ್ತಿತರರು ಸೇರಿದಂತೆ ಸುಮಾರು ಒಂದೂವರೆ ಕೋಟಿ ಭಾರತೀಯರು ಭಾಗವಹಿಸಿದ್ದಾರಂತೆ! ಹೀಗಾಗಿಯೇ, ನವದೆಹಲಿ ಸಮಾವೇಶ ಜನತೆಯನ್ನು ಒಳಗೊಂಡ ರಾಜತಂತ್ರಕ್ಕೊಂದು ಉತ್ತಮ ಉದಾಹರಣೆಯಾಗಿದೆ ಮತ್ತು ಈ ಮೂಲಕ ಭಾರತ ಮೇಲ್ಪಂಕ್ತಿ ಹಾಕಿದೆ. ಎಂದು ಜಿ20 ಕೂಟದ ಹೊಸ ಅಧ್ಯಕ್ಷರಾದ ಬ್ರೆಝಿಲ್ನ ಅಧ್ಯಕ್ಷ ಲೂಲಾ ಡ ಸಿಲ್ವಾ ವರ್ಣಿಸಿದ್ದು ಅನ್ವರ್ಥವಾಗಿಯೇ ಇದೆ. ಇಷ್ಟೆಲ್ಲಾ ಶುಭಾಶಯಗಳು, ನಗೆಗಳು, ಹಸ್ತಲಾಘವ-ನಮಸ್ತೆ-ಆಲಿಂಗನಗಳು, ಮಾತುಗಳು, ಚರ್ಚೆಗಳು, ನಿರ್ಣಯಗಳು ಹಾಗೂ ಸ್ನೇಹಯುತ ವಿದಾಯಗಳೊಂದಿಗೆ ಭಾರತ ತನಗಾಗಿ, ತನ್ನ ಹಿತಾಸಕ್ತಿಗಳಿಗಾಗಿ ಸಾಧಿಸಿಕೊಂಡದ್ದೇನು? ಎನ್ನುವುದನ್ನಿಲ್ಲಿ ಅವಲೋಕಿಸೋಣ. ಇದನ್ನು ಭಾರತ ಶ್ರಮವಹಿಸಿ ಆಫ್ರಿಕನ್ ಯೂನಿಯನ್ ಅನ್ನು ಜಿ20 ಕೂಟದ ಅಧಿಕೃತ ಸದಸ್ಯನನ್ನಾಗಿಸಿದ ಬಗೆಯಿಂದಲೇ ಆರಂಭಿಸೋಣ.
ಆಫ್ರಿಕಾ ಖಂಡ ಬಗೆಬಗೆಯ ಸಂಪನ್ಮೂಲಗಳ ಅಗಾಧ ಅಗರ. ಆದರೆ ಅವುಗಳು ಅಲ್ಲಿನ ಜನಜೀವನಮಟ್ಟ ಸುಧಾರಣೆಗಾಗಿ ಬಳಕೆಯಾಗುತ್ತಿರುವುದು ತೀರಾ ಕಡಿಮೆ. ಇದಕ್ಕೆ ಬಂಡವಾಳ ಹಾಗೂ ತಾಂತ್ರಿಕತೆಯ ಕೊರತೆ, ಅಸ್ಥಿರ ರಾಜಕೀಯ ವ್ಯವಸ್ಥೆಗಳು ಸ್ಥಳೀಯ ಕಾರಣಗಳಾದರೆ ಶ್ರೀಮಂತ ರಾಷ್ಟ್ರಗಳ ಅಲಕ್ಷ್ಯ ಮತ್ತೊಂದು ಕಾರಣ. ಇದನ್ನು ದುರುಪಯೋಗಪಡಿಸಿಕೊಳ್ಳ ಹೊರಟ ಚೀನಾದ ಕಮ್ಯುನಿಸ್ಟ್ ಸರ್ಕಾರ ಆಫ್ರಿಕಾದ ಹಲವಾರು ದೇಶಗಳನ್ನು ತನ್ನ ಸಾಲಸಂಕೋಲೆಯೊಳಗೆ ಸೆಳೆದುಕೊಂಡು ಹಿಂಡತೊಡಗಿದ್ದು ಕಳೆದ ದಶಕದ ಜಾಗತಿಕ ದುರಂತಗಳಲ್ಲೊಂದು. ಬಂಡವಾಳದ ದೃಷ್ಟಿಯಿಂದ ಅಸಹಾಯಕವಾಗಿರುವ ದೇಶಗಳ ಮೇಲೆ ಅವು ನಿಭಾಯಿಸಲಾಗದ ಮಟ್ಟದ ಯೋಜನೆಗಳನ್ನು ಹೇರಿ, ಅದಕ್ಕಾಗಿ ಹೆಚ್ಚಿನ ಬಡ್ಡಿದರದಲ್ಲಿ ಅಗಾಧ ಮೊತ್ತದ ಸಾಲ ನೀಡಿ, ಆ ದೇಶಗಳೂ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ತಾನು ಆರಂಭಿಸಿರುವ ಬೃಹತ್ ಯೋಜನೆಗಳನ್ನೇ ತನ್ನ ಕೈವಶ ಮಾಡಿಕೊಂಡು ಆ ಮೂಲಕ ಆಫ್ರಿಕಾದ ನೈಸರ್ಗಿಕ ಸಂಪನ್ನೂಲಗಳನ್ನು ಲೂಟಿ ಹೊಡೆಯುವುದು ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ರ ಕುಖ್ಯಾತ ಬೆಲ್ಟ್ ಅಂಡ್ ರೊಡ್ ಇನಿಷಿಯೇಟಿವ್ (ಬಿಆರ್ಐ) ಯೋಜನೆಯ ತಿರುಳು.
ಆಫ್ರಿಕನ್ ದೇಶಗಳನ್ನು ಹೀಗೆ ತನ್ನ ಸಾಲ ಸಂಕೋಲೆಯಲ್ಲಿ ಸಿಲುಕಿಸಿಕೊಳ್ಳುವ ತನ್ನ ನವವಸಾಹತುಶಾಹಿ ಯೋಜನೆಗಾಗಿ ಚೀನಾ ಬಳಸಿರುವ ಹಣ ಇನ್ನೂರು ಬಿಲಿಯನ್ ಡಾಲರ್ಗಳು! ಬೀಜಿಂಗ್ನ ಈ ಹುನ್ನಾರಕ್ಕೆ ಇತರ ಆರ್ಥಿಕ ಶಕ್ತಿಗಳು ಪ್ರತಿಕ್ರಿಯಿಸಿದ್ದು ತಡವಾಗಿ. ಮೊದಲ ಪ್ರಯತ್ನವಾಗಿ ಅಮೆರಿಕ ಇದೇ ಬೇಸಗೆಯಲ್ಲಿ ಆಫ್ರಿಕನ್ ರಾಷ್ಟ್ರಗಳ ಸಮ್ಮೇಳನವೊಂದನ್ನು ಆಯೋಜಿಸಿತ್ತು. ಮತ್ತು ಅದರಲ್ಲಿ ಐವತ್ತು ಆಫ್ರಿಕನ್ ದೇಶಗಳು ಭಾಗವಹಿಸಿದ್ದವು. ಆ ದೇಶಗಳ ಜನರ ಬದುಕನ್ನು ನಿಜವಾಗಿಯೂ ಸುಧಾರಿಸುವ ಉದ್ದೇಶಗಳಿಗಾಗಿ ನೆರವು ಅಥವಾ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಅಮೆರಿಕದ ಪ್ರಸ್ತಾಪ ನಿಜಕ್ಕೂ ಸ್ವಾಗತಾರ್ಹ. ಇದು ಸೂಕ್ತ ಬಗೆಯಲ್ಲಿ ಕಾರ್ಯಗತಗೊಂಡರೆ ಆಫ್ರಿಕಾದ ದೇಶಗಳನ್ನು ಚೀನಾದ ಸಾಲಸಂಕೋಲೆಯಿಂದ ಹೊರತರಲು ಸಾಧ್ಯವಾಗಬಹುದು. ಅಮೆರಿಕದ ಮಾದರಿಯನ್ನೇ ಅನುಸರಿಸಿ ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇದೇ ಆಗಸ್ಟ್ನಲ್ಲಿ ರಶಿಯಾ-ಆಫ್ರಿಕಾ ಸಮಾವೇಶವನ್ನು ಕರೆದರು. ಹಾಜರಾದದ್ದು ಕೇವಲ ಹತ್ತೊಂಬತ್ತು ಆಫ್ರಿಕನ್ ದೇಶಗಳು. ಆದಾಗ್ಯೂ ಆ ದೇಶಗಳಿಗೆ ನೀಡಿರುವ 28 ಬಿಲಿಯನ್ ಡಾಲರ್ ಸಾಲವನ್ನು ಮನ್ನಾ ಮಾಡುವುದಾಗಿ ಮತ್ತು ಆ ದೇಶಗಳ ಅಭಿವೃದ್ಧಿಗಾಗಿ ಇನ್ನೂ 10 ಬಿಲಿಯನ್ ಡಾಲರ್ಗಳ ನೆರವು ಒದಗಿಸುವುದಾಗಿ ಅಧ್ಯಕ್ಷ ಪುತಿನ್ ಘೊಷಿಸಿದ್ದೂ ಸ್ವಾಗತಾರ್ಹ ಕ್ರಮವೇ ಆಗಿದೆ.
ಈ ಹಿನ್ನೆಲೆಯಲ್ಲಿ, ಹಲವು ವಿಧಗಳಲ್ಲಿ ಆಫ್ರಿಕನ್ ದೇಶಗಳಂತಹದೇ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತ ತನ್ನ ಸಾಧನೆಯ ಮಾರ್ಗದಲ್ಲಿ ಆಫ್ರಿಕಾವನ್ನು ಸಹಭಾಗಿಯಾಗಿಸಿಕೊಳ್ಳಲು ಯೋಚಿಸಿದ್ದು ಸಹಜವೇ. ಆಫ್ರಿಕಾದಲ್ಲಿ ಮುಖ್ಯವಾಗಿ ಬಡತನ ನಿಮೂಲನ, ವ್ಯವಸಾಯೋತ್ಪನ್ನಗಳ ವೃಧಿ್ಧು ಮೂಲಕ ಆಹಾರದ ಕೊರತೆಯ ನಿವಾರಣೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗಳ ಮೂಲಕ ಆಫ್ರಿಕನ್ನರ ಆಯಸ್ಸುವೃದ್ಧಿಯ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ 2017ರಿಂದಲೇ ಆರಂಭಿಸಿದ್ದಾರೆ. ಇಷ್ಟಾಗಿಯೂ, ಭಾರತಕ್ಕಿಂತಲೂ ಐದು ಪಟ್ಟು ದೊಡ್ಡದಾದ ಅರ್ಥವ್ಯವಸ್ಥೆಯನ್ನು ಹೊಂದಿರುವ ಚೀನಾ ತೊಡಗಿಸಬಹುದಾದಷ್ಟು ಧನರಾಶಿಯನ್ನು ಆಫ್ರಿಕಾದಲ್ಲಿ ತೊಡಗಿಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದು ವಾಸ್ತವ. ಆದರೆ ತಾನು ಎಷ್ಟು ತೊಡಗಿಸಿದರೂ ಅದು ಆಫ್ರಿಕನ್ನರ ಹಿತಕ್ಕಾಗಿ ಮಾತ್ರ, ಇದರಲ್ಲಿ ಭಾರತದ ಸ್ವಾರ್ಥವಿಲ್ಲ ಎನ್ನುವುದನ್ನು ಅಲ್ಲಿನ ದೇಶಗಳಿಗೆ ಮನವರಿಕೆ ಮಾಡಿಕೊಡುವುದನ್ನೂ ಮೋದಿ ನೇತೃತ್ವದ ಭಾರತ ಸರ್ಕಾರ ಮಾಡುತ್ತಲೇ ಇದೆ. ಈ ಕುರಿತಾಗಿ ಆಫ್ರಿಕನ್ ದೇಶಗಳ ವಿಶ್ವಾಸ ಗಳಿಸುವ ಉದ್ದೇಶದಿಂದ ಅವುಗಳನ್ನು ವಿವಿಧ ಅಂತಾರಾಷ್ಟ್ರಿಯ ಆರ್ಥಿಕ ಸಂಘಟನೆಗಲ್ಲಿ ಪಾಲುದಾರರನ್ನಾಗಿಸುವುದು ಭಾರತ ಹಮ್ಮಿಕೊಂಡ ಮಾರ್ಗ. ಆ ಉದ್ದೇಶದಿಂದಲೇ ಭಾರತ ಈ ಬಾರಿಯ ಸಮಾವೇಶಕ್ಕೆ ಈಜಿಪ್ಟ್ ಮತ್ತು ನೈಜೀರಿಯಾಗಳನ್ನು ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿತು. ಜತೆಗೆ ಆಫ್ರಿಕನ್ ದೇಶಗಳ ಒಕ್ಕೂಟವಾದ ಆಫ್ರಿಕನ್ ಯೂನಿಯನ್ ಅನ್ನು ಯೂರೋಪಿಯನ್ ಯೂನಿಯನ್ನಂತೇ ಜಿ20 ಕೂಟದ ಸ್ಥಾಯಿ ಸದಸ್ಯನನ್ನಾಗಿ ಮಾಡುವುದರತ್ತ ಭಾರತ ಕಳೆದ ಒಂಬತ್ತು ತಿಂಗಳುಗಳಲ್ಲಿ ಮಹತ್ವದ ರಾಜತಾಂತ್ರಿಕ ನಡೆಗಳನ್ನು ಮಾಡಿದೆ. ಅದೆಲ್ಲವೂ ಯಶಸ್ವಿಯಾಗಿ ನವದೆಹಲಿಯಲ್ಲಿ ಆಫ್ರಿಕನ್ ಯೂನಿಯನ್ ಜಿ20 ಕೂಟದ ಸದಸ್ಯನಾಯಿತು. ಭಾರತದ ಈ ಎಲ್ಲ ಕೃತ್ಯಗಳು ಚೀನಾ ಮತ್ತು ಭಾರತಗಳಲ್ಲಿ ಯಾರು ಹಿತವರು ನಮಗೆ? ಎಂದು ಆಫ್ರಿಕನ್ ನೇತಾರರನ್ನು ಕಾಡುತ್ತಿದ್ದ ಪ್ರಶ್ನಗೆ ಉತ್ತರವನ್ನೊದಗಿಸಿವೆ. ಭಾರತ ಆಫ್ರಿಕನ್ ಜನತೆಯ ನಿಜವಾದ ಮಿತ್ರ ಎನ್ನುವುದು ಆಫ್ರಿಕನ್ ಯೂನಿಯನ್ನ ಅಧ್ಯಕ್ಷ ಅಝೆೊಲಿ ಅಸೂಮಾನಿ ಸೇರಿದಂತೆ ಹಲವರು ಆಫ್ರಿಕನ್ ನಾಯಕರಿಂದ ವ್ಯಕ್ತವಾಗುತ್ತಿದೆ. ಇದು ಭಾರತ-ಆಫ್ರಿಕಾ ಸಹಯೋಗದ ಹಾದಿಯ ಮೊದಲ ದೊಡ್ಡ ಹೆಜ್ಜೆ. ಅಷ್ಟೇ ಅಲ್ಲ, ಚೀನಾದ ವಿರುದ್ಧ ಭಾರತ ಗಳಿಸಿರುವ ಗೆಲುವು ಕೂಡ.
ನಾವಿಂದು ಅತಿಯಾಗಿ ವಿಘಟನೆಗೊಂಡ ಜಗತ್ತಿನಲ್ಲಿದ್ದೇವೆ. ತೈವಾನ್ ಮತ್ತು ಆರ್ಥಿಕ ಕಾರಣಗಳೂ ಚೀನಾ ಮತ್ತು ಅಮೆರಿಕವನ್ನು ಎದುರುಬದುರಾಗಿ ನಿಲ್ಲಿಸಿವೆ, ಚೀನಾ ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಹೋಗಿ ಆಗ್ನೇಯ ಏಶಿಯಾದ ಬಹುತೇಕ ಎಲ್ಲ ದೇಶಗಳ ಸಾರ್ವಭೌಮತ್ವಕ್ಕೆ ಸವಾಲೊಡ್ಡುತ್ತಿದೆ, ಭಾರತ ಮತ್ತು ಚೀನೀ ಸೇನೆಗಳು ಗಡಿಯಲ್ಲಿ ಎದುರುಬದುರಾಗಿ ನಿಂತಿವೆ, ಫುಕುಶಿಮಾ ನೀರು ಜಪಾನ್ ಮತ್ತು ಚೀನಾಗಳ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ, ಎಲ್ಲಕ್ಕಿಂತ ಮುಖ್ಯವಾಗಿ ಯೂಕ್ರೇನ್ ಸಮರದಿಂದಾಗಿ ಅಮೆರಿಕ ಮತ್ತು ಯೂರೋಪ್ ಒಟ್ಟುಗೂಡಿ ರಶಿಯಾ ವಿರುದ್ಧ ನಿಂತಿವೆ, ರಶಿಯಾ ಅಣ್ವಸ್ತ್ರದ ಬೆದರಿಕೆ ಒಡ್ಡುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಎಲ್ಲ ಸದಸ್ಯರಾಷ್ಟ್ರಗಳಿಗೂ ಸಮ್ಮತವೆನಿಸುವ ಘೊಷಣೆಯನ್ನು ರೂಪಿಸುವುದು ಭಾರತಕ್ಕೆ ಕಷ್ಟಕರವಾಗಿತ್ತು. ಸಮಾವೇಶದ ಘೊಷಣೆಯಲ್ಲಿ ಯೂಕ್ರೇನ್ ಯುದ್ಧಕ್ಕಾಗಿ ರಶಿಯಾವನ್ನು ಹೆಸರಿಡಿದು ಖಂಡಿಸಬೇಕು ಎನ್ನುವುದು ಪಶ್ಚಿಮದ ದೇಶಗಳ ಒತ್ತಾಯವಾದರೆ, ಅದಾಗದು, ಜಿ20 ಒಂದು ಜಾಗತಿಕ ಆರ್ಥಿಕ ಹಾಗೂ ಸಾಮಾಜಿಕ ಕೂಟ, ಇಲ್ಲಿ ದ್ವಿಪಕ್ಷೀಯ ವೈಮನಸ್ಯಗಳು ಹಾಗೂ ಭೂ-ರಾಜಕೀಯ ಮುನ್ನೆಲೆಗೆ ಬರುವಂತಿಲ್ಲ ಎನ್ನುವುದು ಭಾರತದ ನಿಲುವು. ಈ ಭಿನ್ನಾಭಿಪ್ರಾಯ ಭಾರತ ಅಧ್ಯಕ್ಷಸ್ಥಾನ ವಹಿಸಿಕೊಂಡ ಮೊದಲ ದಿನದಿಂದಲೇ ಕಾಣಿಸಿಕೊಂಡಿತು. ಹೀಗಾಗಿ ಇಲ್ಲಿ ನಡೆದ ಜಿ20 ವಿದೇಶಾಂಗ, ಅರ್ಥ, ವಾಣಿಜ್ಯ ಮಂತ್ರಿಗಳ ಸಮಾವೇಶಗಳಲ್ಲಿ ಜಂಟಿ ಘೊಷಣಾ ಪತ್ರ ಜಾರಿಯಾಗಲೇ ಇಲ್ಲ. ಭಿನ್ನಾಭಿಪ್ರಾಯ ಮುಂದುವರೆದು ಅಂತಿಮ ಶಿಖರ ಸಮಾವೇಶದಲ್ಲೂ ಜಂಟಿ ಘೊಷಣಾ ಪತ್ರ ಜಾರಿಯಾಗುವುದಿಲ್ಲ ಎಂಬ ಆತಂಕ ಸಮಾವೇಶದ ಎರಡನೆಯ ದಿನದ ಮಧ್ಯಾಹ್ನದವರೆಗೂ ದಟ್ಟವಾಗಿಯೇ ಇತ್ತು. ಕಳೆದ ವರ್ಷ ಬಾಲಿಯಲ್ಲಿ ನಡೆದ ಸಮಾವೇಶದಲ್ಲಿ ಪಶ್ಚಿಮ ದೇಶಗಳು ಅತಿಥೇಯ ಇಂಡೋನೇಶಿಯಾದ ಮೇಲೆ ಒತ್ತಡ ಹೇರಿ ತಮಗೆ ಬೇಕಾದಂತೆ ಜಂಟಿ ಘೊಷಣೆಯನ್ನು ರೂಪಿಸಿಕೊಂಡಿದ್ದು ಎಲ್ಲರ ನೆನಪಿನಲ್ಲೂ ಇದೆ. ಅದರಲ್ಲಿ ರಶಿಯಾವನ್ನು ಹೆಸರಿಸಿ ಖಂಡಿಸಲಾಗಿತ್ತು ಮತ್ತು ರಶಿಯಾ ತನ್ನ ಆಕ್ರಮಣವನ್ನು ತೆರವುಗೊಳಿಸಬೇಕೆಂದು ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯವನ್ನೂ ಸೇರಿಸಲಾಗಿತ್ತು! ನವದೆಹಲಿಯಲ್ಲೂ ಅದೇ ಪುನರಾವರ್ತನೆಯಾಗುತ್ತದೆ ಎಂಬುದು ಬಹುತೇಕರ ನಂಬಿಕೆಯಾಗಿತ್ತು. ಒಂದುವೇಳೆ ಭಾರತ ಬಾಗದಿದ್ದರೆ ನವದೆಹಲಿ ಸಮಾವೇಶ ಜಂಟಿ ಘೊಷಣೆ ಹೊರಡದ ಮೊದಲ ಜಿ20 ಸಮಾವೇಶವಾಗುತ್ತದೆ ಎಂಬ ಅಪಾಯವೂ ಇತ್ತು. ಒಟ್ಟಿನಲ್ಲಿ ಭಾರತದ ಅಧ್ಯಕ್ಷತೆಗೆ ಮಸಿ ಹತ್ತುವ ಸ್ಥಿತಿ ಇತ್ತು. ಆದರೆ ಅಂತಿಮವಾಗಿ ಆದದ್ದೇ ಬೇರೆ.ತನ್ನ ನಿಲುವನ್ನು ಇತರೆಲ್ಲರೂ ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ಭಾರತ ಯಶಸ್ವಿಯಾಯಿತು. ಜಿ20 ರಾಷ್ಟ್ರಗಳು ಅಂಗೀಕರಿಸಿದ ನವದೆಹಲಿ ಜಿ20 ನಾಯಕರ ಘೊಷಣೆಯಲ್ಲಿ ಇದು ಯುದ್ದಕ್ಕೆ ಸಯಯವಲ್ಲ ಎಂದು ಮೋದಿಯವರು ವರ್ಷದ ಹಿಂದೆಯೇ ಪುತಿನ್ರಿಗೆ ಹೇಳಿದ್ದ ಮಾತು ಉಲ್ಲೇಖಗೊಂಡಿತೇ ವಿನಃ ರಶಿಯಾವನ್ನು ಹೆಸರಿಸಿ ಖಂಡಿಸುವ ಮಾತೇ ಇಲ್ಲ! ಇದು ಇಂದಿನ ಭಾರತದ ರಾಜತಾಂತ್ರಿಕ ಶಕ್ತಿ. ಹಿಂದಿನ ಸಮಾವೇಶಕ್ಕೂ ಈಗಿನ ಸಮಾವೇಶಕ್ಕೂ ಇರುವ ಈ ವ್ಯತ್ಯಾಸದ ಬಗ್ಗೆ ಪ್ರಶ್ನೆ ಬಂದಾಗ ವಿದೇಶಮಂತ್ರಿ ಎಸ್. ಜೈಶಂಕರ್ ಉತ್ತರಿಸಿದ್ದು ಹೀಗೆ: ಬಾಲಿ ಬಾಲಿಯೇ. ನವದೆಹಲಿ ನವದೆಹಲಿಯೇ!
ಇದೆಲ್ಲದರ ಜತೆಗೆ ಭಾರತದ ಅತಿ ಮುಖ್ಯವಾದ ದೂರಗಾಮಿ ಸಾಧನೆ ಸಮಾವೇಶದ ಹೊರಗೆ. ಚೀನಾದ ಕುಖ್ಯಾತ ಬಿಆರ್ಐ ಯೊಜನೆಗೆ ವಿರುದ್ಧವಾಗಿ ಭಾರತ ವೆಸ್ಟ್ ಏಶಿಯಾ ಯೂರೋಪ್ ಇಕನಾಮಿಕ್ ಕಾರಿಡಾರ್ ಅಥವಾ ಆಧುನಿಕ ಸಾಂಬಾರ ಪದಾರ್ಥ ಮಾರ್ಗ ಸ್ಥಾಪಿಸಲು ಸಂಬಂಧಿತ ದೇಶಗಳು ನವದೆಹಲಿಯಲ್ಲಿ ನಿರ್ಣಯಿಸಿದವು ಮತ್ತು ಇದಕ್ಕೆ ಸಹಕಾರ ನೀಡಲು ಅಮೆರಿಕಾ ಮುಂದೆ ಬಂತು. ಇದನ್ನು ಮುಂದೆ ಪ್ರತ್ಯೇಕವಾಗಿ ವಿಸ್ತಾರವಾಗಿ ವಿಶ್ಲೇಷಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)