

ಕೇಂದ್ರ ವಿತ್ತ ಸಚಿವರು ಈ ಸಲದ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದ ಬ್ಯಾಡ್ ಬ್ಯಾಂಕ್ ಶೀಘ್ರವೇ ಕಾರ್ಯಾಚರಣೆ ಶುರು ಮಾಡಲಿದೆ. ಕೆಟ್ಟ ಸಾಲ ವಸೂಲಿಗೆ ನ್ಯಾಯಾಲಯ, ಸಾಲ ವಸೂಲಾತಿ ನ್ಯಾಯಮಂಡಲಿ, ಲೋಕ ಅದಾಲತ್, ಸರ್ಫೆಸಿ ಆಕ್ಟ್ (Securitisation Reconstruction Of Financial Assets Enforcement of Securities Act 2002 SARFAESI) ಮತ್ತು ಐಬಿಸಿ (Insolvency Bankruptcy Code-IBC) ಕಾನೂನುಗಳ ನಂತರ ಬ್ಯಾಡ್ ಬ್ಯಾಂಕ್ ಪರಿಕಲ್ಪನೆ ಬ್ಯಾಂಕಿಂಗ್ ಉದ್ಯಮದಲ್ಲಿ ಜೀವ ಪಡೆಯಲು ಶುರುವಾಗಿದೆ.
| ಬಿ. ರಮಾನಂದ ಶರ್ಮಾ
ಬ್ಯಾಡ್ ಬ್ಯಾಂಕ್ ಹೊಸ ಪರಿಕಲ್ಪನೆ ಏನೂ ಅಲ್ಲ. ಈಗಾಗಲೇ ಇದು ಜಪಾನ್, ಚೀನಾ ಮತ್ತು ಕೆಲವು ಯುರೋಪ್ ರಾಷ್ಟ್ರಗಳಲ್ಲಿ ಇದೆ. ಬ್ಯಾಂಕುಗಳಲ್ಲಿ ಇರುವ ಅನುತ್ಪಾದಕ ಸಾಲ(ನಾನ್ ಪರ್ಫಾರ್ವಿುಂಗ್ ಅಸೆಟ್ಸ್- ಎನ್ಪಿಎ)ಗಳನ್ನು ಗುರುತಿಸಿ, ಅವುಗಳನ್ನು ಸದೃಢ ಸಾಲಗಳಿಂದ ಬೇರ್ಪಡಿಸಿ ಪ್ರತ್ಯೇಕ ಬ್ಯಾಂಕುಗಳಲ್ಲಿ ಇಡುತ್ತಿದ್ದು, ಈ ಹೊಸ ಬ್ಯಾಂಕನ್ನು ಬ್ಯಾಡ್ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಈ ಬ್ಯಾಂಕ್ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎನ್ನುವ ಬಗ್ಗೆ ಇನ್ನೂ ವಿಸõತ ಮಾಹಿತಿ ಬಹಿರಂಗವಾಗಿಲ್ಲ. ಈ ಬ್ಯಾಂಕ್ ದೇಶಕ್ಕೆ ಒಂದೋ, ರಾಜ್ಯ, ವಲಯ ಮತ್ತು ಬ್ಯಾಂಕಿಗೆ ಒಂದೋ ಎನ್ನುವುದೂ ತಿಳಿಯದು. ಆದರೆ, ಇತರ ಬ್ಯಾಂಕ್ಗಳಂತೆ ಶಾಖಾ ಜಾಲಗಳು ಇದಕ್ಕೆ ಇರುವುದಿಲ್ಲ. ನಿತ್ಯದ ಬ್ಯಾಂಕಿಂಗ್ ವ್ಯವಹಾರಗಳು ಕೂಡ ಇಲ್ಲಿ ನಡೆಯುವುದಿಲ್ಲ. ಈ ಬ್ಯಾಂಕಿಗೆ ಸಾಲ ವರ್ಗಾಯಿಸಿದ ಬ್ಯಾಂಕುಗಳು ಬ್ಯಾಡ್ ಬ್ಯಾಂಕಿನ ಗ್ರಾಹಕರು. ಸಂಬಂಧಪಟ್ಟ ಸಾಲಗಾರರನ್ನು ಇಲ್ಲಿ ಸಮಾಲೋಚನೆಗಾಗಿ ಕರೆಯಬಹುದು.
ಯಾಕೆ ಈ ಬ್ಯಾಂಕ್?
ಬ್ಯಾಂಕುಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಸುಮಾರು 11 ಲಕ್ಷ ಕೋಟಿ ರೂ. ಆಗಿದ್ದು, ವಸೂಲಿ ಪ್ರಮಾಣ ನಿರೀಕ್ಷೆಯಷ್ಟು ಇಲ್ಲ. ಈ ರೀತಿಯ ಸಾಲದ ಪ್ರಮಾಣ ಏರುತ್ತಲೇ ಇದೆ. ಇದು ಒಟ್ಟು ಸಾಲ ನೀಡಿಕೆಯ ಶೇಕಡ 11ರಷ್ಟಿದೆ ಎನ್ನಲಾಗುತ್ತದೆ. ಸಾಲ ವಸೂಲಾತಿ ಕ್ರಮಗಳು ಹಲವು ಅಡೆ ತಡೆಗಳನ್ನು ಎದುರಿಸುತ್ತಿದ್ದು ನಿರೀಕ್ಷಿತ ಫಲ ನೀಡುತ್ತಿಲ್ಲ. ಬ್ಯಾಂಕುಗಳು ತಮ್ಮ ಲಾಭದಲ್ಲಿ ಪ್ರತಿ ವರ್ಷ ಗಣನೀಯ ಪ್ರಮಾಣವನ್ನು ಈ ಅನುತ್ಪಾದಕ ಸಾಲಕ್ಕೆ ವರ್ಗಾಯಿಸುವುದರಿಂದ ಬ್ಯಾಂಕುಗಳ ನಿವ್ವಳ ಲಾಭದಲ್ಲಿ ಕಡಿತವಾಗುತ್ತದೆ. ಕೆಲವು ಬಾರಿ ಬ್ಯಾಂಕುಗಳು ನಷ್ಟ ಹೊಂದುತ್ತವೆ. ಕೆಟ್ಟ ಸಾಲ ಹೆಚ್ಚಾದಷ್ಟೂ ಅವು ಸರ್ಕಾರದಿಂದ ಪಡೆಯುವ ಕ್ಯಾಪಿಟಲ್ ಕಡಿಮೆಯಾಗುತ್ತಾ ಹೋಗುತ್ತದೆ. ಅಂತೆಯೇ ಸರ್ಕಾರದಿಂದ ಬರುವ ಕ್ಯಾಪಿಟಲ್ ಕಡಿಮೆಯಾಗದಿರಲು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಅನುತ್ಪಾದಕ ಸಾಲದಿಂದ ಮುಕ್ತವಾಗಿ ಇರಿಸಬೇಕಾಗುತ್ತದೆ ಅಥವಾ ಗಣನೀಯವಾಗಿ ಅದನ್ನು ನಿಯಂತ್ರಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಕ್ಲೀನ್ಸಿಂಗ್ ಆಫ್ ಬ್ಯಾಲೆನ್ಸ್ ಶೀಟ್ ಎನ್ನುತ್ತಾರೆ. ನಾರ್ಮಲ್ ವಸೂಲಿ ಪ್ರಕ್ರಿಯೆಯಲ್ಲಿ ಇದಕ್ಕೆ ಸಮಯ ಹಿಡಿಯುವುದರಿಂದ ಬ್ಯಾಂಕಿಂಗ್ ಪರಿಣಿತರು ಮತ್ತು ಆರ್ಥಿಕ ತಜ್ಞರು ಹೊಸ ಆವಿಷ್ಕಾರ ಮಾಡಿದ್ದು, ಇದರ ಫಲಶ್ರುತಿಯೆ ಈ ಬ್ಯಾಡ್ ಬ್ಯಾಂಕ್. ಸಾಲ ವಸೂಲಾತಿಯಲ್ಲಿ ಮೂಲ ಬಾಂಕಿನಷ್ಟೇ ಬ್ಯಾಡ್ ಬ್ಯಾಂಕ್ ಗಂಭೀರತೆ ತೋರಿಸಬಹುದೇ ಎನ್ನುವುದು ಚರ್ಚಾಸ್ಪದವಾಗಿದೆ.
ಈ ಹೆಸರು ಯಾಕೆ ಬಂತು?
ಈ ಬ್ಯಾಂಕ್ನಲ್ಲಿ ಇರುವ ಸಾಲಗಳೆಲ್ಲಾ ಅನುತ್ಪಾದಕ ಸಾಲಗಳಾಗಿರುವುದರಿಂದ ಈ ಬ್ಯಾಂಕನ್ನು ಬ್ಯಾಡ್ ಬ್ಯಾಂಕ್ ಎಂದು ಹೆಸರಿಸಲಾಗಿದೆ. ಮೂಲ ಬ್ಯಾಂಕುಗಳಿಂದ ಅನುತ್ಪಾದಕ ಸಾಲಗಳನ್ನು ಬ್ಯಾಡ್ ಬ್ಯಾಂಕ್ಗೆ ವರ್ಗಾಯಿಸಿದ ತಕ್ಷಣ, ಸಾಲ ವಸೂಲಾತಿ ನಿಟ್ಟಿನಲ್ಲಿ ಈ ಬ್ಯಾಂಕ್ ‘in the shoes of lende’ನಂತೆ ಇದ್ದು ಮೂಲ ಬ್ಯಾಂಕಿನಂತೆ ಸಾಲ ವಸೂಲಿಯ ಎಲ್ಲ ಕ್ರಮಗಳನ್ನು ಮುಂದುವರಿಸುತ್ತದೆ. ಇದು ಸಾಲ ಮನ್ನಾ ಅಥವಾ ರೈಟ್ ಆಫ್ ಆಗಿರದೇ ಬೇರೆ ಪುಸ್ತಕಕ್ಕೆ ಬದಲಾಗುತ್ತದೆ ಅಷ್ಟೆ. ಮೂಲ ಬ್ಯಾಂಕು ಕೆಟ್ಟ ಸಾಲದಿಂದ ಮುಕ್ತಿಗೊಂಡು ಸದೃಢವಾಗಿ ಕಾಣುತ್ತದೆ. ಈ ಬ್ಯಾಡ್ ಬ್ಯಾಂಕನ್ನು ಈಗ ಇರುವ Asset Reconstruction Company ಮತ್ತು ಅಠಠಛಿಠಿ Asset Management Company ರಿಫೈನ್ಡ್ ವರ್ಷನ್ ಎಂದೂ ಹೇಳುತ್ತಾರೆ.
ಕೇಂದ್ರ ಸರ್ಕಾರದ ಪಾತ್ರ ಏನು?
ಸರ್ಕಾರ ಈ ಬ್ಯಾಂಕ್ಗಳಲ್ಲಿ ಕ್ಯಾಪಿಟಲ್ ಹೂಡುವುದಿಲ್ಲ. ಆದರೆ, ಐದು ವರ್ಷಗಳವರೆಗೆ 30,600 ಕೋಟಿ ರೂಪಾಯಿ sovereign guarantee ನೀಡುತ್ತದೆ. ಇದನ್ನು ಬ್ಯಾಡ್ ಬ್ಯಾಂಕ್ಗಳು ಸಾಲ ವರ್ಗಾಯಿಸುವ ಬ್ಯಾಂಕುಗಳಿಗೆ ಸೆಕ್ಯುರಿಟಿ ರಸೀತಿ ನೀಡಲು ಬಳಸುತ್ತವೆ. ಒಂಬತ್ತು ಬ್ಯಾಂಕುಗಳು ಮತ್ತು 2 ಬ್ಯಾಂಕೇತರ ಸಂಸ್ಥೆಗಳು 7,000 ಕೋಟಿ ರೂಪಾಯಿ ಆರಂಭಿಕ ಕ್ಯಾಪಿಟಲ್ ಅನ್ನು ಈ ಬ್ಯಾಂಕಿಗೆ ಪೂರೈಸುತ್ತವೆ. ಈ ಬ್ಯಾಂಕಿನ authorised capital 100 ಕೋಟಿ ರೂ. ಆಗಿದ್ದು, 74.60 ಕೋಟಿ ರೂ. paid up capital ಆಗಿರುತ್ತದೆ. ಒಟ್ಟು 2.25 ಲಕ್ಷ ಕೋಟಿ ರೂ. ಅನುತ್ಪಾದಕ ಸಾಲ ಈ ಬ್ಯಾಂಕಿಗೆ ವರ್ಗಾವಣೆ ಆಗಲಿದೆ.
ಮೂಲ ಬ್ಯಾಂಕ್ಗಳಿಗೆ ಏನು ಪ್ರಯೋಜನ?
ಅನುತ್ಪಾದಕ ಸಾಲಗಳ ವರ್ಗಾವಣೆಯಿಂದ ಮೂಲ ಬ್ಯಾಂಕುಗಳು ಅವುಗಳ ನಿರ್ವಹಣೆ ಸಮಯ ಮತ್ತು ಮಾನವ ಸಂಪನ್ಮೂಲವನ್ನು ಬ್ಯಾಂಕಿನ ವ್ಯವಹಾರವನ್ನು ವೃದ್ಧಿಸಲು ಬಳಸಬಹುದು. ಸರ್ಕಾರದಿಂದ ಹೆಚ್ಚಿಗೆ ಕ್ಯಾಪಿಟಲ್ ಪಡೆದು ಅದನ್ನು ಸಾಲ ನೀಡಲು ಬಳಸಬಹುದು. ಬ್ಯಾಲೆನ್ಸ್ ಶೀಟ್ ಕ್ಲೀನ್ ಆಗುವುದರಿಂದ ಬ್ಯಾಂಕುಗಳು ಹೆಚ್ಚಿನ ಕ್ಯಾಪಿಟಲ್ ಅನ್ನು ಆಕರ್ಷಿಸಬಹುದು. ಆರಂಭದಲ್ಲಿ ಮೂಲ ಬ್ಯಾಂಕುಗಳಿಗೆ ಯಾವುದೇ ಹಣ ದೊರಕುವುದಿಲ್ಲ. ಇದು ಕೇವಲ ವರ್ಗಾವಣೆ ಪ್ರಕ್ರಿಯೆ ಮಾತ್ರ. ಈ ಸಾಲಗಳಿಗೆ ಬ್ಯಾಡ್ ಬ್ಯಾಂಕುಗಳಲ್ಲಿ ಬಿಡ್ಡಿಂಗ್ ಆರಂಭವಾದಾಗ ಸಾಲದ ಮೊತ್ತ ಹರಿಯಲು ಆರಂಭವಾಗುತ್ತದೆ. ಸಾಲದ ಬಾಕಿ ಪೂರ್ಣ ದೊರೆಯದೆ ಡಿಸ್ಕೌಂಟ್ ಆಗಿ ದೊರೆಯುವ ಸಂಭವ ಹೆಚ್ಚು.
ಹಂತಹಂತವಾಗಿ ಕಾರ್ಯನಿರ್ವಹಣೆ
ಮೊದಲ ಹಂತದಲ್ಲಿ 22 ಪ್ರಕರಣಗಳ 83,000 ಕೋಟಿ ರೂ. ಸಾಲ ವರ್ಗಾವಣೆಯಾಗುತ್ತದೆ. ಸುಮಾರು 500 ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಇರುವ 102 ಪ್ರಕರಣಗಳ 2 ಲಕ್ಷ ಕೋಟಿ ರೂಪಾಯಿ ಸಾಲವನ್ನು ಈ ಬ್ಯಾಂಕ್ಗೆ ವರ್ಗಾಯಿಸಲು ಗುರುತಿಸಲಾಗಿದೆ. ವಂಚನೆಗೆ ಒಳಗಾದ ಮತ್ತು ಬ್ಯಾಂಕ್ ದಿವಾಳಿ ಕಾನೂನಿನ ಇತ್ಯರ್ಥಕ್ಕೆ ರೆಫರ್ ಆದ ಪ್ರಕರಣಗಳನ್ನು ಈ ಬ್ಯಾಂಕಿಗೆ ವರ್ಗಾಯಿಸುವುದಿಲ್ಲ.
ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ