

ಭಾರತದ ಪ್ರಾಚೀನ ವೈದ್ಯಶಾಸ್ತ್ರದ ಪಿತಾಮಹರು ಔಷಧ ತಯಾರಿಗೆ ಸಂಬಂಧಿಸಿದಂತೆ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳಲ್ಲೂ ತಮ್ಮದೇ ಆದ ತಜ್ಞತೆಯ ಉತ್ತುಂಗವನ್ನು ಮೆರೆದಿದ್ದಾರೆ. ಔಷಧ ದ್ರವ್ಯವನ್ನು ಭೂಮಿಯಿಂದ ಸಂಗ್ರಹಿಸುವಾಗ ಎರಡು ವಿಚಾರಗಳು ಪ್ರಮುಖವಾಗುತ್ತದೆ. ಯಾವ ಸ್ಥಳದಿಂದ ಆರಿಸಿದ ಔಷಧ, ಯಾವ ಕಾಲದಲ್ಲಿ ಸಂಗ್ರಹಿಸಿದ ಔಷಧ ಎನ್ನುವುದು ಔಷಧದ ಗುಣಧರ್ಮದಲ್ಲಿ ವ್ಯತ್ಯಾಸವನ್ನು ಉಂಟುಮಾಡುತ್ತದೆ. ದ್ರವ್ಯವನ್ನು ಸಂಗ್ರಹಿಸುವ ವ್ಯಕ್ತಿಯು ದೈಹಿಕವಾಗಿ ಪರಿಶುದ್ಧನಾಗಿ, ಅಪ್ಪಟ ಮನಸ್ಸಿನೊಂದಿಗೆ, ಮೌನಿಯಾಗಿದ್ದುಕೊಂಡು, ಶಿವನಿಗೆ ನಮಸ್ಕರಿಸಿ ಪ್ರಾತಃಕಾಲದಲ್ಲಿ ಸೂರ್ಯನ ಬೆಳಕು ಇರುವಾಗ ಉತ್ತರದಿಕ್ಕಿನ ಸಾಧಾರಣ ಪ್ರದೇಶದಿಂದ ಔಷಧ ದ್ರವ್ಯವನ್ನು ಸಂಗ್ರಹಿಸಬೇಕು ಎಂದು ಆಯುರ್ವೆದದ ಶಾšರ್Yಧರ ಸಂಹಿತೆಯಲ್ಲಿ ನಿರ್ದೇಶನವಿದೆ. ಭೂಮಿಯು ಸಮತಟ್ಟಾಗಿದ್ದು, ದೊಡ್ಡ ಕಂದಕಗಳು, ಬಂಡೆಗಳು, ಮಣ್ಣಿನ ಹುತ್ತಗಳು ಇರದ ಭೂಮಿಯಾಗಿರಬೇಕು. ಸ್ಮಶಾನ, ಪೂಜಾಸ್ಥಾನ, ಮರಳುಭೂಮಿ, ಜಂತುಗಳು, ಬೆಂಕಿ, ಹಿಮಗಳಿಂದ ದೂರದಲ್ಲಿರಬೇಕು. ಭೂಪ್ರದೇಶವನ್ನು ಆಯುರ್ವೆದವು ಮೂರು ರೀತಿಯಲ್ಲಿ ವಿಭಜಿಸಿ ಹೇಳಿದ್ದು ಬೆಟ್ಟ, ಕಾಡು ಪ್ರದೇಶಗಳಿರುವ ಸದಾ ಹೆಚ್ಚಿನ ನೀರಿನ ಸಹಜವಾದ ಲಭ್ಯತೆಯಿರುವ ಮಲೆನಾಡಿನಂತಹ ಪ್ರದೇಶಕ್ಕೆ ಅನೂಪ ಪ್ರದೇಶ ಎನ್ನಲಾಗಿದ್ದು ಕಫದ ಆಧಿಕ್ಯತೆಯನ್ನು ಹೊಂದಿರುತ್ತದೆ. ಬಯಲುಸೀಮೆ, ಚಿಕ್ಕಪುಟ್ಟ ಮರಗಿಡಗಳಷ್ಟೇ ಇರುವ ಒಣಭೂಮಿಗೆ ಜಾಂಗಲ ಭೂಮಿ ಎಂಬ ಹೆಸರಿದ್ದು ವಾತದ ಬಾಹುಳ್ಯವಿರುತ್ತದೆ. ಇವೆರಡರ ಮಧ್ಯದ ಪ್ರದೇಶವೇ ಪಿತ್ತದ ಅಂಶದಿಂದ ಕೂಡಿದ ಸಾಧಾರಣ ಭೂಮಿ. ಇದಲ್ಲದೆ ಪಂಚಮಹಾಭೂತಗಳ ಪ್ರಾಧಾನ್ಯತೆಯೊಂದಿಗೆ ಪಾರ್ಥಿವ, ಆಪ್ಯ, ಆಗ್ನೇಯ, ವಾಯವೀಯ ಹಾಗೂ ಆಕಾಶೀಯ ಎಂಬ ಐದು ವಿಧವಾದ ಪಾಂಚಭೌತಿಕ ಭೂಮಿಯ ಲಕ್ಷಣಗಳನ್ನೂ ಆಯುರ್ವೆದದಲ್ಲಿ ವಿವರಿಸಲಾಗಿದೆ. ಯಾವ ಗುಣದ ಔಷಧ ಬೇಕು ಎಂಬುದರ ಆಧಾರದಲ್ಲಿ ಅದಕ್ಕೆ ಅನುಗುಣವಾದ ಭೂಮಿಯಿಂದ ಔಷಧವನ್ನು ಸಂಗ್ರಹಿಸಬೇಕು.
ಸಂಗ್ರಹ ಕಾಲಕ್ಕೆ ಸಂಬಂಧಿಸಿದಂತೆ ಬೇರುಗಳನ್ನು ಗ್ರೀಷ್ಮ, ಶಿಶಿರ ಋತುಗಳಲ್ಲಿ, ಎಲೆಗಳನ್ನು ವರ್ಷಾ, ವಸಂತ, ಶಿಶಿರಗಳಲ್ಲಿ, ಕೊಂಬೆಗಳನ್ನು ವರ್ಷಾ, ವಸಂತಗಳಲ್ಲಿ, ಹೂವುಗಳನ್ನು ವರ್ಷಾ, ವಸಂತಗಳಲ್ಲಿ, ಫಲವನ್ನು ಆಯಾ ಮರಗಿಡಗಳು ಹಣ್ಣು ಬಿಡುವ ಕಾಲದಲ್ಲಿ, ಅದರಲ್ಲೂ ಗ್ರೀಷ್ಮ ಹಾಗೂ ವಸಂತಗಳು ಹೆಚ್ಚು ಪ್ರಶಸ್ತ, ಸಾರವನ್ನು ಹೇಮಂತ, ವಸಂತ ಋತುಗಳಲಿ, ಗಡ್ಡೆ ಹಾಗೂ ಸಸ್ಯದ ಹಾಲನ್ನು ಶರತ್, ಹೇಮಂತಗಳಲ್ಲಿ, ಪಂಚಾಂಗವನ್ನು ಶರತ್ ಋತುವಿನಲ್ಲಿ, ಉಷ್ಣವೀರ್ಯ ದ್ರವ್ಯಗಳನ್ನು ಗ್ರೀಷ್ಮ ಅರ್ಥಾತ್ ಬೇಸಿಗೆಯಲ್ಲಿ, ಶೀತಲದ್ರವ್ಯಗಳನ್ನು ಶಿಶಿರ ಕಾಲದಲ್ಲಿ, ವಾಂತಿ, ಭೇದಿ ಮಾಡಿಸಲು ಬೇಕಾದ ಔಷಧವನ್ನು ವಸಂತ ಋತುವಿನಲ್ಲಿ, ಬಸ್ತಿ, ನಸ್ಯ ಕ್ರಿಯೆಗಳಿಗೆ ಬೇಕಾಗುವ ದ್ರವ್ಯವನ್ನು ಶರದ್ ಋತುವಿನಲ್ಲಿ ಸಂಗ್ರಹಿಸುವುದು ಪ್ರಶಸ್ತ ಎಂಬುದಾಗಿ ಚರಕ ಸಂಹಿತಾ, ಸುಶ್ರುತ ಸಂಹಿತಾ, ರಾಜ ನಿಘಂಟು ಮೊದಲಾದ ಗ್ರಂಥಗಳು ವ್ಯಾಖ್ಯಾನಿಸಿವೆ. ಹಣ್ಣುಗಳು ಪೂರ್ತಿ ಬೆಳೆದು ಹಣ್ಣಾಗದೆ ಇದ್ದಾಗ, ಬೀಜಗಳು ಪೂರ್ತಿಯಾಗಿ ಬೆಳವಣಿಗೆ ಆಗಿದ್ದಾಗ, ಎಲೆಗಳನ್ನು ಹೂ ಬಿಟ್ಟು ಹಣ್ಣಾಗುವ ಮಧ್ಯದ ಸಮಯದಲ್ಲಿ ಸಂಗ್ರಹಿಸಬೇಕು ಮುಂತಾದ ಮಾರ್ಗದರ್ಶನವಿದೆ. ಆಯುರ್ವೆದದ ಈ ಎಲ್ಲ ಚಿಂತನೆಗಳು ಔಷಧ ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿನ ಪರಿಪೂರ್ಣತೆಗೆ ದಾರಿದೀಪವಾಗಿದೆ.