

ಸ್ವತಂತ್ರ ಭಾರತದಲ್ಲಿ ದೀನ ದಮನಿತರ ದನಿಯಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದ ಆಧುನಿಕ ಭಾರತದ ನಿರ್ವತೃಗಳಲ್ಲಿ ಡಾ. ಬಾಬು ಜಗಜೀವನರಾಂ ಅವರದ್ದು ಮರೆಯಲಾಗದ ವ್ಯಕ್ತಿತ್ವ.
1908ರ ಏಪ್ರಿಲ್ 5ರಂದು ಬಿಹಾರದ ಭೋಜಪುರ ಜಿಲ್ಲೆಯ ಚಾಂದ್ವಾ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ತಂದೆ ಶೋಭಿರಾಮ. ತಾಯಿ ವಾಸಂತಿದೇವಿ. ಬಾಬು ಜಗಜೀವನರಾಂ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಬೆಳೆದರು. ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಕಾಲರ್ಶಿಪ್ ಪಡೆಯದೆ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಮೆರಿಟ್ ಮೇರೆಗೆ ಸ್ಕಾಲರ್ಶಿಪ್ ಪಡೆದರು. ಹಿಂದಿ, ಇಂಗ್ಲಿಷ್, ಬಂಗಾಳಿ, ಭೋಜಪುರಿ, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದರು. ಅಂದಿನ ಪ್ರತಿಷ್ಠಿತ ಪತ್ರಿಕೆಯಾದ ‘ದಿ ಸ್ಟೇಟ್ಸ್ಮನ್’ ಓದಲು ಅರಹ ರೈಲ್ವೆ ನಿಲ್ದಾಣಕ್ಕೆ ದಿನನಿತ್ಯ 3 ಕಿ.ಮೀ. ನಡೆದುಹೋಗುತ್ತಿದ್ದುದು ಬಾಬೂಜಿಯವರ ಪುಸ್ತಕ ಪ್ರೇಮಕ್ಕೆ, ಜ್ಞಾನಮುಖಿ ವ್ಯಕ್ತಿತ್ವಕ್ಕೆ ಸಾಕ್ಷಿ.
ಒಮ್ಮೆ ರಾಷ್ಟ್ರಭಕ್ತ ಮದನ ಮೋಹನ ಮಾಳವೀಯರು ಬಾಬೂಜಿ ಓದುತ್ತಿದ್ದ ಶಾಲೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಬಾಲಕ ಬಾಬೂಜಿ ಸ್ವಾಗತ ಭಾಷಣ ಮಾಡಿದರು. ಅವರ ವಾಗ್ಝರಿಗೆ ಮನಸೋತ ಮಾಳವೀಯರು ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದರು. ಅದೇ ವೇಳೆ ಚಾಂದ್ವಾದ ಕ್ರೖೆಸ್ತ ಮಿಷನರಿಯೂ ಇಂತಹ ಪ್ರಬುದ್ಧ ಚಿಂತನೆಯ ಬಾಲಕನ ಜವಾಬ್ದಾರಿಯನ್ನು ಹೊರಲು ಆಸಕ್ತಿ ತೋರಿತು. ಲಖನೌದಲ್ಲಿ ವಿದ್ಯಾಭ್ಯಾಸ ಕೊಡಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಕಳಿಸುವುದಾಗಿ ಹೇಳಿತು. ಆದರೆ ತಾಯಿಯ ಒತ್ತಾಸೆಯಂತೆ ಬನಾರಸ್ ವಿವಿಗೆ ಸೇರಿದ ಬಾಬೂಜಿ, ಅಲ್ಲಿ ಜಾತಿ ಆಧಾರಿತ ಶೋಷಣೆಗೆ ಒಳಗಾದರೂ ದೃಢಚಿತ್ತರಾಗಿದ್ದುಕೊಂಡು ಇಂಟರ್ವಿುೕಡಿಯೆಟ್ ಪಾಸಾದರು. ಬಳಿಕ ಕಲ್ಕತ್ತಾ ವಿವಿಯಲ್ಲಿ ಅತ್ಯುನ್ನತ ಶ್ರೇಣಿಯೊಂದಿಗೆ ಬಿಎಸ್ಸಿ ಪದವಿ ಪಡೆದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವತಂತ್ರ ಮನೋಭಾವ, ಸಂಘಟನಾ ಚತುರತೆ ಹೊಂದಿದ್ದ ಬಾಬೂಜಿ ಬೃಹತ್ ಸಭೆಗಳನ್ನು ಸಂಘಟಿಸುತ್ತಿದ್ದರು. ಇದು ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್ ಮೊದಲಾದವರ ನಿಕಟವರ್ತಿಯಾಗುವಂತೆ ಮಾಡಿತು. ಕಾರ್ಲ್ವಾರ್ಕ್ಸ್ನ ಕ್ರಾಂತಿಕಾರಿ ವಿಷಯಗಳನ್ನು ಅಭ್ಯಾಸ ಮಾಡಿದ ಬಾಬೂಜಿ ಜಾತಿ-ವರ್ಗರಹಿತ ಸಮಸಮಾಜ ನಿರ್ವಣದ ಕನಸು ಕಂಡರು. ವಿಜ್ಞಾನ ವಿಚಾರದಲ್ಲಿ ಅಪಾರ ಆಸಕ್ತಿವುಳ್ಳ ಬಾಬೂಜಿಗೆ ವಿಜ್ಞಾನಿಯಾಗುವ ಕನಸಿತ್ತು. ಆದರೆ ಶೋಷಿತ ಸಮುದಾಯದ ಹೋರಾಟಗಳು, ಭಾರತದ ಸಾಮಾಜಿಕ ಅಸ್ಥಿರತೆ, ಸ್ವಾತಂತ್ರ್ಯ ಚಳವಳಿ ಅವರನ್ನು ಹೋರಾಟದ ಹಾದಿಗೆ ಕರೆತಂದವು.
ಗಾಂಧೀಜಿ ಅವರ ನಿಕಟ ಸಂಪರ್ಕಕ್ಕೆ ಬಂದ ಬಾಬೂಜಿ ಕೃಷಿ-ಕೈಗಾರಿಕಾ ಕಾರ್ವಿುಕರು, ದಮನಿತ ವರ್ಗಗಳ ಹಿತರಕ್ಷಣೆಗಾಗಿ 1930ರಲ್ಲಿ ಖೇತಿಹಾರ್ ಮಜ್ದೂರ್ ಸಭಾ ಮತ್ತು ಅಖಿಲ ಭಾರತ ಶೋಷಿತ ವರ್ಗಗಳ ಒಕ್ಕೂಟ ಸ್ಥಾಪಿಸಿದರು. ಹೋರಾಟಕ್ಕೆ ಜನರನ್ನು ಪ್ರೇರೇಪಿಸಿದರು. ಆಗಿನ ಕಾಲದ ಕಾನ್ಪುರದ ಸಮಾಜ ಸೇವಕ, ಪ್ರಖ್ಯಾತ ವೈದ್ಯ ಬೀರಬಲ್ ಅವರ ಮಗಳು, ಶಿಕ್ಷಕಿ ಇಂದ್ರಾಣಿದೇವಿ ಜತೆ 1935ರಲ್ಲಿ ಬಾಬೂಜಿ ವಿವಾಹವಾಯಿತು. ಸುರೇಶ್ ಹಾಗೂ ಮೀರಾ ಎಂಬ ಇಬ್ಬರು ಮಕ್ಕಳು ಜನಿಸಿದರು. (ಮುಂದೆ ಡಾ. ಮೀರಾಕುಮಾರ್ ಭಾರತದ ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಆದರು. ರಾಷ್ಟ್ರ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡು ಇಂದಿಗೂ ಚೈತನ್ಯದ ಚಿಲುಮೆಯಾಗಿದ್ದಾರೆ.)
ಬಾಬೂಜಿ ಸಾಮಾಜಿಕ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿದರು. ತಮ್ಮ 28ನೇ ವಯಸ್ಸಿನಲ್ಲಿ (1936) ಬಿಹಾರ ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶಿತರಾದರು. ಬ್ರಿಟಿಷ್ ಸರ್ಕಾರ ಇವರನ್ನು ಸೆಳೆಯಲು ಆಸೆ ಆಮಿಷ ಒಡ್ಡಿ ತಂತ್ರಗಾರಿಕೆ ಮಾಡಿತು. ಬಾಬೂಜಿ ಅಚಲಚಿತ್ತರಾಗಿದ್ದರು. ಅವರ ಹೋರಾಟವನ್ನು ಗಾಂಧೀಜಿಯೂ ಗುರುತಿಸಿ ಪ್ರಶಂಸಿಸಿದರು. 1940ರಲ್ಲಿ ನಡೆದ ಕಾನೂನುಭಂಗ ಚಳವಳಿಯಲ್ಲಿ ಪಾಲ್ಗೊಂಡ ಬಾಬೂಜಿ ಜೈಲು ವಾಸ ಅನುಭವಿಸಿದರು.
ಶೋಷಿತ ಸಮುದಾಯದ ಮತದಾನದ ಹಕ್ಕುಗಳು, ಸಮಾನ ಅವಕಾಶಗಳಿಗಾಗಿ ದುಡಿದ ಬಾಬೂಜಿ 1946ರ ಸೆಪ್ಟೆಂಬರ್ 2ರಂದು ರಚನೆಯಾದ ಭಾರತದ ಮಧ್ಯಂತರ ಸರ್ಕಾರದಲ್ಲಿ ದಲಿತ ಸಮುದಾಯದ ಪ್ರತಿನಿಧಿಯಾಗಿ ಸೇರ್ಪಡೆಗೊಂಡು ಕಾರ್ವಿುಕ ಸಚಿವರಾದರು. ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ವಿುಕ ಸಮ್ಮೇಳನ(ಐಎಲ್ಒ)ದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡರು. ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರೂ ಆದರು. 1946ರಿಂದ 1952ರವರೆಗೆ ಕಾರ್ವಿುಕ ಸಚಿವರಾಗಿದ್ದ ಬಾಬೂಜಿ, ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ದೇಶದ ಕಾರ್ವಿುಕರ ಕಾಯ್ದೆಗಳ ಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾದರು.
ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸಸರಾಂ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾದರು. 1952ರಿಂದ 1956ರವರೆಗೆ ಸಂಪರ್ಕ ಖಾತೆ ಸಚಿವರಾಗಿದ್ದ ಅವರು ಖಾಸಗಿ ವಲಯದಲ್ಲಿದ್ದ ವಿಮಾನಯಾನವನ್ನು ರಾಷ್ಟ್ರೀಕರಣ ಮಾಡಿದರು. ಅಂಚೆ ಸೇವೆಯನ್ನು ಕುಗ್ರಾಮಗಳಿಗೆ ತಲುಪಿಸಿ, ದೇಶದ ಸಂಪರ್ಕ ಜಾಲ ವೈಜ್ಞಾನಿಕವಾಗಿ ಅಭಿವೃದ್ಧಿಗೊಳ್ಳಲು ಕಾರಣೀಭೂತರಾದರು. 1957ರಿಂದ 1962ರವರೆಗೆ ರೈಲ್ವೆ ಸಚಿವರಾಗಿದ್ದರು. 1962-63ರಲ್ಲಿ ಸಾರಿಗೆ ಮತ್ತು ಸಂಪರ್ಕ ಖಾತೆ ನಿರ್ವಹಿಸಿದರು. 1967ರಿಂದ 1970ರವರೆಗಿನ ಅವಧಿಯಲ್ಲಿ ಭಾರತ ಭೀಕರ ಬರಗಾಲಕ್ಕೆ ತುತ್ತಾದಾಗ ಕೃಷಿ ಸಚಿವರಾಗಿದ್ದ ಬಾಬೂಜಿ, ದೇಶವು ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಕಾರ್ಯಕ್ರಮಗಳನ್ನು ರೂಪಿಸಿ ‘ಹಸಿರು ಕ್ರಾಂತಿಯ ಹರಿಕಾರ’ರೆಂದು ಕರೆಸಿಕೊಂಡರು.
ಉಪಪ್ರಧಾನಿಯಾಗಿಯೂ ಆ ಹುದ್ದೆಗೆ ಘನತೆ ತಂದು ಕೊಟ್ಟವರು ಬಾಬೂಜಿ. 1936ರಿಂದ 1986ರವರೆಗೆ ಸುದೀರ್ಘ ಅರ್ಧ ಶತಮಾನ ಕಾಲ ದೇಶದ ಸರ್ವತೋಮುಖ ಏಳಿಗೆಗೆ ತಮ್ಮ ಜೀವನವನ್ನು ಮುಡುಪಿಟ್ಟ ಬಾಬೂಜಿ 1986ರ ಜುಲೈ 6ರಂದು ನಿಧನರಾದರು. ಬಾಬೂಜಿ ಜನ್ಮದಿನವನ್ನೀಗ ‘ಸಮತಾ ದಿನ’ವಾಗಿ ಆಚರಿಸಲಾಗುತ್ತಿದೆ. (ಲೇಖಕರು ವ್ಯವಸ್ಥಾಪಕ ನಿರ್ದೇಶಕರು, ಲಿಡ್ಕರ್, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ)