

28 ವರ್ಷಗಳ ಹಿಂದೆ ಘಟಿಸಿದ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ಬಗ್ಗೆ 27 ವರ್ಷಗಳ ಹಿಂದೆ ಆರಂಭವಾದ ನ್ಯಾಯಿಕ ಪ್ರಕ್ರಿಯೆ ಸೆ.30ರಂದು ಪೂರ್ಣವಾಗಿ ಅಂತ್ಯಗೊಳ್ಳದಿದ್ದರೂ ಒಂದು ಹಂತ ತಲುಪಿದೆ. ಈ ತೀರ್ಪು ಮುಖ್ಯವೆನಿಸುವುದು ಅದು ಬಿಜೆಪಿಯ ಒಂದುಕಾಲದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ಲಾಲಕೃಷ್ಣ ಆಡ್ವಾಣಿಯವರೂ ಸೇರಿ ಕೆಲವು ವರಿಷ್ಠ ನಾಯಕರಿಗೆ ಸಂಬಂಧಿಸಿದೆ ಎನ್ನುವ ಕಾರಣದಿಂದ. ಈ ನಾಯಕರ ರಾಜಕೀಯ ಬದುಕು ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಇದು ಬೀರಬಹುದಾದ ಪರಿಣಾಮಗಳು ಸಹಜವಾಗಿಯೇ ಕುತೂಹಲ ಕೆರಳಿಸುತ್ತವೆ.
ಆಡ್ವಾಣಿಯವರ ರಾಜಕೀಯ ಬದುಕನ್ನೇ ತೆಗೆದುಕೊಂಡು ಈ ತೀರ್ಪನ್ನು ಅವಲೋಕಿಸುವುದಾದರೆ ‘Justice delayed is justice denied ಎಂಬ ಉಕ್ತಿಗೆ ಹೊಂದಿಕೆಯಾಗುತ್ತದೆ. ಅಯೋಧ್ಯಾದಲ್ಲಿ ರಾಮಮಂದಿರ ನಿರ್ವಣವಾಗಬೇಕೆಂದು ಆಗ್ರಹಿಸಿ 1980ರ ಉತ್ತರಾರ್ಧದಲ್ಲಿ ಅದಕ್ಕಾಗಿ ರಥಯಾತ್ರೆ ಆರಂಭಿಸಿದ್ದೇ ಆಡ್ವಾಣಿ. ಇದು ರಾಮಜನ್ಮಭೂಮಿ ಬಗ್ಗೆ ರಾಷ್ಟ್ರಾದ್ಯಂತ ಜನಜಾಗೃತಿ ಮೂಡಿಸಿದ್ದಷ್ಟೇ ಅಲ್ಲ, 1984ರ ಲೋಕಸಭಾ ಚುನಾವಣೆಗಳಲ್ಲಿ 2 ಸ್ಥಾನಗಳನ್ನಷ್ಟೇ ಗಳಿಸಿದ್ದ ಬಿಜಿಪಿಯ ರಾಜಕೀಯ ಉತ್ಕರ್ಷಕ್ಕೂ ದಾರಿ ಮಾಡಿಕೊಟ್ಟಿತು. ಪರಿಣಾಮವಾಗಿ 1989ರ ಚುನಾವಣೆಗಳಲ್ಲಿ ಬಿಜೆಪಿ 85 ಸ್ಥಾನಗಳನ್ನು ಗಳಿಸಿ ಮೂರನೆಯ ದೊಡ್ದ ಪಕ್ಷವಾಗಿ ಹೊರಹೊಮ್ಮಿ ವಿ.ಪಿ.ಸಿಂಗ್ ನೇತೃತ್ವದ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಹಾಯಕವಾಯಿತು. ಮುಂದಿನ ಒಂದೂವರೆ ವರ್ಷಗಳಲ್ಲಿ ಆಡ್ವಾಣಿಯವರ ಚಾಣಾಕ್ಷ್ಯ ನಡೆಗಳು ಬಿಜೆಪಿಯನ್ನು ಜನತೆಗೆ ಮತ್ತಷ್ಟು ಹತ್ತಿರವಾಗಿಸಿದವು. 1991ರ ಚುನಾವಣೆಗಳ ಪ್ರಚಾರದ ಸಮಯದಲ್ಲಿ ಆಡ್ವಾಣಿಯವರೇ ಮುಂದಿನ ಪ್ರಧಾನಿ ಎಂದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ ಚುನಾವಣೆಗಳ ನಡುವೆ ಘಟಿಸಿದ ರಾಜೀವ್ ಗಾಂಧಿ ಹತ್ಯೆ ಬಿಜೆಪಿಗೆ ಬಹುಮತ ಅಥವಾ ಅತಿ ದೊಡ್ಡ ಪಕ್ಷದ ಸ್ಥಾನ ಕೈತಪ್ಪಿಹೋಗುವಂತೆ ಮಾಡಿತು.
5 ವರ್ಷಗಳ ನಂತರ ಬಿಜೆಪಿ ಅಧಿಕಾರದ ಹತ್ತಿರಕ್ಕೆ ಸರಿಯುವ ಹೊತ್ತಿಗೆ ಆಡ್ವಾಣಿಯವರಿಗೆ ಬಾಬ್ರಿ ಮಸೀದಿ ಧ್ವಂಸದ ಕಳಂಕ ಹತ್ತಿಕೊಂಡಾಗಿತ್ತು. ಹೀಗಾಗಿ ಯಾವ ಪಕ್ಷವನ್ನು ತಾವು ಕಟ್ಟಿ ರಾಷ್ಟ್ರಿಯ ರಾಜಕಾರಣದಲ್ಲಿ ಮುಂಚೂಣಿಗೆ ತಂದಿದ್ದರೋ ಆ ಪಕ್ಷ ಅಧಿಕಾರಕ್ಕೇರುವಂತಾದಾಗ ಆಡ್ವಾಣಿ ಪ್ರಧಾನಮಂತ್ರಿಯಾಗುವ ಗೌರವದಿಂದ ವಂಚಿತರಾಗಿ ಹಿಂದೆ ಸರಿಯಬೇಕಾಯಿತು. ನ್ಯಾಯಾಲಯ ಈಗ ಅವರನ್ನು ದೋಷಮುಕ್ತರನ್ನಾಗಿಸಿದೆ. ಆದರೆ ಆರೋಪದಿಂದ, ನ್ಯಾಯನಿರ್ಣಯದಲ್ಲಾದ ವಿಳಂಬದಿಂದ ಆಡ್ವಾಣಿ ಕಳೆದುಕೊಂಡದ್ದನ್ನು ಯಾವ ನ್ಯಾಯಾಲಯವೂ ಅವರಿಗೆ ನೀಡಲಾರದು.
ಹಾಗೆಯೇ, ಈ ತೀರ್ಪು ಆಡ್ವಾಣಿ ಹಾಗೂ ಜೋಷಿಯವರ ರಾಜಕೀಯ ಬದುಕನ್ನು ಮುಂದೆ ಬೆಳಗುವ ಸಾಧ್ಯತೆಯೂ ಇಲ್ಲ. ಬಿಜೆಪಿ ಹಾಗೂ ರಾಷ್ಟ್ರ ರಾಜಕಾರಣ ಆ ಇಬ್ಬರು ಹಿರಿಯ ನಾಯಕರನ್ನು ಹಿಂದಿರಿಸಿ ಅದೆಷ್ಟೋ ಮುಂದೆ ಹೋಗಿಬಿಟ್ಟಿವೆ. ಈ ಬೆಳವಣಿಗೆಗಳಿಗೆ ಅವರಿಬ್ಬರೇ ಮುಖ್ಯವಾಗಿ ಹೊಣೆಯಾಗುತ್ತಾರೆ ಎನ್ನುವುದು ವಿಚಿತ್ರವಾದರೂ ಸತ್ಯ. ಯಪಿಎ ಆಳ್ವಿಕೆಯಲ್ಲಿ ಸೋನಿಯಾ ಗಾಂಧಿಯವರಿಗೆ ಹತ್ತಿರವಾದ ಕಾರಣ ಮತ್ತು ಆ ಕಾಂಗ್ರೆಸ್ ನಾಯಕಿಯ ವಿರುದ್ಧ ಬಿಜೆಪಿ ನಾಯಕರುಗಳು ಮಾಡಿದ ಭ್ರಷ್ಟಾಚಾರದ ಆರೋಪಗಳಲ್ಲ ಸತ್ಯದೂರ ಎಂದವರು 2011ರಲ್ಲಿ ನೀಡಿದ ಸಾರ್ವಜನಿಕ ಹೇಳಿಕೆ 2014ರ ಚುನಾವಣೆಗಳಲ್ಲಿ ಬಿಜೆಪಿಯ ವರಿಷ್ಠ ನಾಯಕರಲ್ಲೊಬ್ಬರಾಗಿ ಕಣಕ್ಕಿಳಿಯುವ ಅವಕಾಶವನ್ನೇ ಅವರಿಂದ ಕಿತ್ತುಕೊಂಡಿತು. ಆಮೇಲೆ ಅವರು ತಮ್ಮದೇ ಪಕ್ಷದಲ್ಲಿ ಮೂಲೆಗುಂಪಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಬಿಜೆಪಿಯ ಅಸಂತುಷ್ಟ ನಾಯಕರ ಗುಂಪಿಗೆ ವಲಸೆಹೋದ ಜೋಶಿಯವರದೂ ಅದೇ ಸ್ಥಿತಿ. 90 ದಾಟಿದ ಆಡ್ವಾಣಿ, 80 ದಾಟಿದ ಜೋಷಿ ಮತ್ತು ಕಲ್ಯಾಣ ಸಿಂಗ್ರಿಗೆ ಬೇರಾವುದೇ ಬಗೆಯ ರಾಜಕೀಯ ಪುನರುತ್ಥಾನದ ಕನಸೂ ನನಸಾಗದಿರಲು ವಯಸ್ಸೂ ಅಡ್ಡವಾಗಿ ನಿಂತಿದೆ.
ಸಿಬಿಐ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅಪೀಲ್ ಹೋಗುವುದಾಗಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಕಾರ್ಯದರ್ಶಿ ಝಾಫ್ರಿಯಾಬ್ ಜಿಲಾನಿ ಹೇಳಿಕೆ ನೀಡಿದ್ದಾರೆ. ಅವರಾಗಲೀ, ಇನ್ನಾರೇ ಸಂಬಂಧಿತ ಸಂಸ್ಥೆಗಳು ಹಾಗೆ ಮಾಡಿದ್ದೇ ಆದರೆ ಪ್ರಕರಣ ಅನಿರ್ದಿಷ್ಟ ಕಾಲದವರೆಗೆ ಮುಂದುವರಿಯುತ್ತದೆ. ಇನ್ನು ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಗೆ ಈ ತೀರ್ಪು ಮುಖ್ಯವಾಗದು. ಈ ನಾಯಕರನ್ನೆಲ್ಲ ಬಿಜೆಪಿ ಈಗಾಗಲೇ ‘ಕೊಡವಿಕೊಂಡಾಗಿದೆ’.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)