ಪ್ರಕೃತಿ ಸೊಬಗಿನ ಪುಟ್ಟ ರಾಷ್ಟ್ರ ಅಜೆರ್ಬೆಜಾನ್

vi
Published on

ಅಜೆರ್ಬೆಜಾನ್​ನಲ್ಲಿ ಶಿಸ್ತು ಬಹಳಷ್ಟಿದೆ. ವಾಹನ ಸಂಚಾರದಲ್ಲಿ ಸಂಚಾರಿ ನಿಯಮ ಉಲಂಘನೆ ಕಡಿಮೆ, ಸ್ವಚ್ಛತೆಯಲ್ಲಿ ಕೊರತೆಯಿಲ್ಲ. ಅಲ್ಲಿಯ ಜನರು ಸ್ವಚ್ಛತೆಗೆ ಬಹಳ ಪ್ರಾಧಾನ್ಯ ಕೊಡುತ್ತಾರೆ. ಕುಟುಂಬ ವ್ಯವಸ್ಥೆಯೂ ಬಹಳ ಶಿಸ್ತಿನಿಂದ ಕೂಡಿದೆ. ದೇಶ ಪುಟ್ಟದಾದರೂ ಅಲ್ಲಿಯವರು ಅವರ ದೇಶದ ಮೇಲೆ ಬಹಳ ಹೆಮ್ಮೆ ಪಡುತ್ತಾರೆ.

 ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ. ನವೋಲ್ಲಾಸ, ಹೊಸ ಅನುಭವಗಳನ್ನು ಒದಗಿಸುತ್ತದೆ. ಆ ಅನುಭವಗಳಿಂದ ಹೊಸ ಆಲೋಚನೆ ಸೃಜಿಸುತ್ತದೆ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎನ್ನುವ ಹಿರಿಯರ ಮಾತು ಅನುಭವ ವೇದ್ಯವಾಗಿದೆ. ಪ್ರವಾಸದಿಂದ ಮತ್ತು ಕೋಶ ಓದುವುದರಿಂದ ಹೊಸ ಕಲಿಕೆಯಾಗುತ್ತದೆ, ಹೊಸ ದೃಷ್ಟಿಕೋನ ತೆರೆದಿಡುತ್ತದೆ. ವಿವಿಧ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸುತ್ತದೆ. ಅವುಗಳನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಶಾಲ ದೃಷ್ಟಿಕೋನ ಬೆಳೆಯುತ್ತದೆ. ಪ್ರವಾಸ ನಮ್ಮ ಜ್ಞಾನದೀವಿಗೆಯನ್ನು ಉದ್ದೀಪನಗೊಳಿಸುತ್ತದೆ ಮಾತ್ರವಲ್ಲದೆ ನಮ್ಮ ಆರೋಗ್ಯದಲ್ಲೂ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಪ್ರವಾಸ ಕೈಗೊಳ್ಳುವ ಪರಿಪಾಠವನ್ನು ಹೆಚ್ಚಿನವರು ಬೆಳೆಸಿಕೊಂಡಿರುತ್ತಾರೆ.

ವರುಷಕ್ಕೊಂದು ಬಾರಿ ಬಿಡುವು ಮಾಡಿಕೊಂಡು ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುವ ಹವ್ಯಾಸವನ್ನು ನಾವು ಬೆಳೆಸಿಕೊಂಡಿದ್ದು ಈ ಬಾರಿಯೂ ಪ್ರವಾಸ ಮಾಡುವ ಕುರಿತು ಚಿಂತನೆ ನಡೆಸಿದಾಗ ಎಲ್ಲರೂ ಪುಟ್ಟ ರಾಷ್ಟ್ರವಾದ ಅಜೆರ್ಬೆಜಾನ್​ಗೆ ಹೋಗುವ ಬಗ್ಗೆ ಉತ್ಸಾಹ ತೋರಿಸಿದರು. ಅದರಂತೆ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್​ಗಳ ಸಮ್ಮಿಲನದ ಜಾಗದಲ್ಲಿ ಇರುವ ಅಜೆರ್ಬೆಜಾನ್ ದೇಶಕ್ಕೆ ತೆರಳಿದೆವು.

ಅಜೆರ್ಬೆಜಾನ್ ದೇಶದ ಹೆಸರನ್ನು ನೆನಪಿಟ್ಟುಕೊಳ್ಳಲು ನನ್ನ ತಮ್ಮ ಸುರೇಂದ್ರನಿಗೆ ತುಸು ಕಷ್ಟವೇ ಆಗುತ್ತಿತ್ತು. ಹಾಗಾಗಿ ನಮ್ಮ ದೇಶದ ಮಾಜಿ ಕ್ರಿಕೆಟಿಗ ಅಜರುದ್ದೀನ್ ಹೆಸರು ನೆನಪು ಮಾಡಿಕೊಂಡು ಅಜರ್ ಭಾಯ್ಜಾನ್ (ಅಜೆರ್ಬೆಜಾನ್) ಹೆಸರನ್ನು ನೆನಪಿಟ್ಟುಕೊಂಡೆವು. ಯುರೋಪ್​ನಲ್ಲಿ ಇರುವ ಅಜೆರ್ಬೆಜಾನ್ ದೇಶ ಈ ಹಿಂದೆ ಸೋವಿಯತ್ ರಷ್ಯಾ ಆಡಳಿತಕ್ಕೆ ಒಳಪಟ್ಟು ಅದರ ಆಶ್ರಯದಲ್ಲಿತ್ತು. 1991ರಲ್ಲಿ ಸ್ವತಂತ್ರವಾಯಿತು. ಪೂರ್ವಕ್ಕೆ ಕ್ಯಾಸ್ಪಿಯನ್ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್​ಗಳೊಂದಿಗೆ ಗಡಿಯನ್ನು ಹೊಂದಿದೆ. ಪ್ರಕೃತಿಯ ಸೊಬಗನ್ನು ಹೊಂದಿರುವ ಈ ದೇಶ ಪ್ರವಾಸಿಗರ ತಾಣವಾಗಿ ಪ್ರಖ್ಯಾತಿ ಪಡೆಯುತ್ತಿದೆ. ರಷ್ಯಾ ಆಡಳಿತಕ್ಕೆ ಒಳಪಟ್ಟಿದ್ದರಿಂದ ಅವರ ಪ್ರಭಾವದಿಂದ ಅನೇಕ ಕಟ್ಟಡಗಳು ರಷ್ಯಾ ನಿರ್ವಿುತವಾಗಿವೆ.

ಅರೆ ಮರುಭೂಮಿಯಂತಿರುವ ಅಜೆರ್ಬೆಜಾನ್ ಸಂಪತ್ಭರಿತ ತೈಲ ರಾಷ್ಟ್ರ. ತೈಲ ರಫ್ತು ಈ ದೇಶದ ಪ್ರಮುಖ ವ್ಯವಹಾರ. ಖಾಸಗಿಯಾಗಿಯೂ ಇಲ್ಲಿನ ಜನರು ಸಣ್ಣ ಯಂತ್ರಗಳನ್ನು ಇಟ್ಟುಕೊಂಡು ಭೂಮಿಯಿಂದ ತೈಲವನ್ನು ತೆಗೆಯುತ್ತಾರೆ. ಆದರೆ ಇತ್ತೀಚೆಗೆ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದು ಭಯ ಸಣ್ಣದಾಗಿ ಆವರಿಸಿದೆ. ವಿದ್ಯುತ್ ಚಾಲಿತ ವಾಹನಗಳ ಆಗಮನದಿಂದ ತೈಲಗಳಿಗೆ ಬೇಡಿಕೆ ಕಡಿಮೆಯಾಗಿ ದೇಶದ ಆರ್ಥಿಕತೆ ಕುಸಿಯಬಹುದು. ದೇಶದ ಅಭಿವೃದ್ಧಿಗೆ ಕುತ್ತು ಬರಬಹುದು ಎಂಬ ಆತಂಕದಿಂದ ದೇಶವನ್ನು ಪ್ರವಾಸಿತಾಣವನ್ನಾಗಿ ಬದಲಾಯಿಸಿಕೊಳ್ಳುತ್ತಿದ್ದಾರೆ. ಪ್ರವಾಸಿಗರ ಆಕರ್ಷಣೆಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಅಜೆರ್ಬೆಜಾನ್ ದೇಶವೂ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಪ್ರವಾಸಿಗರ ಸ್ವರ್ಗವಾಗಿ ತನ್ನನ್ನು ಬಿಂಬಿಸಿಕೊಳ್ಳುತ್ತ, ಜಗತ್ತಿಗೆ ತೆರೆದುಕೊಳ್ಳುವಲ್ಲಿ ಪ್ರಯತ್ನಿಸುತ್ತಿದೆ.

ಪ್ರವಾಸದ ವೇಳೆ ಆ ದೇಶದ, ಊರಿನ ಬಗ್ಗೆ ತಿಳಿಸುವ ಸಲುವಾಗಿ ಆರಿಫ್ ಎಂಬ ಒಬ್ಬ ಗೈಡ್ ನಮ್ಮೊಂದಿಗಿದ್ದ. ನಾವು ಪ್ರವಾಸಿಸ್ಥಳಗಳ ವೀಕ್ಷಣೆಗೆ ಹೋಗುತ್ತಿದ್ದಾಗ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಏನು ಹೀಗೆ, ಯಾಕೆ ನಿರ್ಬಂಧ ಎಂದು ಗೈಡ್ ಬಳಿ ಕೇಳಿದಾಗ ಆತ ಹೇಳಿದಂತೆ ಪ್ರತಿ ವರ್ಷ ಆಗಸ್ಟ್-ಸೆಪ್ಟೆಂಬರ್​ನಲ್ಲಿ ‘ಫಾಮ್ಯರ್ುಲಾ-01 ರೇಸ್’ ಅಲ್ಲಿ ಆಯೋಜನೆಗೊಳ್ಳುತ್ತದೆಯಂತೆ. ಜಗತ್ತಿನ ಅತ್ಯುತ್ತಮ ರೇಸರ್ಸ್ ಬಂದು ಅಲ್ಲಿಯ ರಸ್ತೆಗಳಲ್ಲಿ ರೇಸಿಂಗ್ ಮಾಡುತ್ತಾರೆ. ಫಾಮ್ಯರ್ುಲಾ-1 ರೇಸ್​ನ ಒಂದು ತಿಂಗಳ ಮುಂಚಿತವಾಗಿ ರಸ್ತೆಯ ಸ್ವಚ್ಛತೆ ಮತ್ತು ರಕ್ಷಣೆಗಾಗಿ ಮುಚ್ಚಲಾಗುತ್ತದೆಯಂತೆ. ರೇಸ್ ಮುಗಿದ ಬಳಿಕ ಒಂದು ವಾರ ರಸ್ತೆ ಸ್ವಚ್ಛತೆಯ ಬಳಿಕ ವಾಹನ ಸಂಚಾರಕ್ಕೆ ತೆರೆಯುತ್ತಾರೆ ಎಂದು ತಿಳಿದುಬಂತು. ಮೋಟಾರು ರೇಸ್ ಬಗ್ಗೆ ಅಲ್ಲಿಯ ಜನರಿಗೆ ಅಷ್ಟಾಗಿ ಆಸಕ್ತಿ ಇಲ್ಲದಿದ್ದರೂ ದೇಶಕ್ಕೆ ಆರ್ಥಿಕ ಸಂಪತ್ತನ್ನು ಒದಗಿಸುತ್ತದೆ ಎಂಬ ಕಾರಣಕ್ಕೆ ಸರ್ಕಾರ ಪ್ರತಿ ವರ್ಷ ರೇಸ್ ಆಯೋಜನೆ ಮಾಡುತ್ತದೆ ಎಂದು ಆತ ತಿಳಿಸಿದ.

ಬಾಕು ಪಟ್ಟಣ ಅಜೆರ್ಬೆಜಾನ್ ದೇಶದ ರಾಜಧಾನಿ. ಅಲ್ಲಿ ರಷ್ಯಾ ನಿರ್ವಿುತ ಕಟ್ಟಡಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಪ್ರಾಚೀನ ನಗರದಂತೆ ಭಾಸವಾಗುವ ಬಾಕುವಿನಲ್ಲಿ ಆಧುನೀಕರಿಸಿದ ‘ಹೈದರ್ ಅಲಿಯೆವ್ ಸಾಂಸ್ಕೃತಿಕ ಕೇಂದ್ರ’ ಎಂಬ ಮ್ಯೂಸಿಯಂ ಇದೆ. ಅದನ್ನು ಇರಾಕಿ-ಬ್ರಿಟಿಷ್ ವಾಸ್ತುಶಿಲ್ಪಿ ಜಹಾ ಹದಿದ್ ಎಂಬ ಮಹಿಳೆ ನಿರ್ವಿುಸಿದ್ದು, ತನ್ನ ವಿಶಿಷ್ಟ ಮತ್ತು ಆಕರ್ಷಕ ವಿನ್ಯಾಸದಿಂದಲೇ ಈ ಮ್ಯೂಸಿಯಂ ಬಾಕು ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಪ್ರಸಿದ್ಧವಾಗಿದ್ದು, ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಆ ಮ್ಯೂಸಿಯಂನಲ್ಲಿ ದೇಶದ ಸಂಸ್ಕೃತಿ ಸಾರುವ ಪ್ರಾಚೀನ ವಸ್ತುಗಳಿವೆ. ಸಂಗೀತಕ್ಕೆ ಸಂಬಂಧಿಸಿದ ಜಾನಪದೀಯ ಹಾಡುಗಳನ್ನು ಹಾಡಲು ಬಳಸುತ್ತಿದ್ದ ತಂಬೂರಿ, ಡೋಲಕ್, ಮೃದಂಗ, ಊದು ವಾದ್ಯಗಳು, ಕಲ್ಲಿಗೆ ಹೊಡೆದು ನಾದ ಹೊಮ್ಮಿಸುವ ಪರಿಕರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಸುಮಾರು 250 ವರ್ಷಗಳ ಹಿಂದೆ ಆ ದೇಶದ ಜನರು ಯಾವ ವೇಷಭೂಷಣ, ಉಡುಗೆಯನ್ನು ತೊಡುತ್ತಿದ್ದರು? ಯಾವ ವಾದ್ಯ ಬಳಸುತ್ತಿದ್ದರು ಎಂದು ಅಲ್ಲಿ ಪ್ರದರ್ಶಿಸಲಾಗಿದೆ. ಅಲ್ಲಿಯ ವಿಶೇಷತೆ ಏನೆಂದರೆ ಪ್ರತಿಯೊಂದು ವಾದ್ಯ ಪರಿಕರದ ಮುಂದೆ ಒಂದು ಕೆಂಪು ಕಾರ್ಪೆಟ್ ಹಾಕಲಾಗಿದೆ. ಆ ಕಾರ್ಪೆಟ್​ನ ಮೇಲೆ ನಿಂತರೆ ಆ ವಾದ್ಯದ ಸಂಗೀತ ನಮಗೆ ಕೇಳುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಕಾರ್ ಮ್ಯೂಸಿಯಂ ಕೂಡ ಇದ್ದು ವಿವಿಧ ವಿನ್ಯಾಸದ ಕಾರುಗಳನ್ನು ನೋಡಬಹುದಾಗಿದೆ.

ಇಲ್ಲಿನ ಪ್ರಮುಖ ಕಟ್ಟಡಗಳಲ್ಲಿ ‘ಫ್ಲೇಮ್ ಟವರ್’ ಕೂಡ ಒಂದು. ಇದು ಸುಮಾರು 30 ಮಹಡಿಗಳನ್ನು ಹೊಂದಿದ್ದು, ಬೆಂಕಿಯ ಕೆನ್ನಾಲಿಗೆಯನ್ನು ಹೊರಚಾಚುವಂತೆ ವಿಶಿಷ್ಟವಾಗಿ ವಿನ್ಯಾಸ ಮಾಡಲಾಗಿದ್ದು, ಅತ್ಯಾಕರ್ಷಕವಾಗಿದೆ.

ಅಜೆರ್ಬೆಜಾನ್ ಅಂದರೆ ‘ಬೆಂಕಿಯ ಭೂಮಿ’ ಎಂದರ್ಥ. ಹಿಂದಿನ ಕಾಲದಲ್ಲಿ ಈ ಭೂಮಿಯಲ್ಲಿ ಕಚ್ಚಾತೈಲದ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೈಸರ್ಗಿಕ ಅನಿಲವಿತ್ತು. ಹಾಗಾಗಿ ಮಿಂಚು-ಸಿಡಿಲು ಬಂದಾಗ ನೈಸರ್ಗಿಕ ಅನಿಲಕ್ಕೆ ಬೆಂಕಿ ಸ್ಪರ್ಶವಾಗಿ ಭೂಮಿಯಿಂದ ತನ್ನಿಂದ ತಾನೇ ಬೆಂಕಿ ಬರುತ್ತಿತ್ತು. ಇದನ್ನು ಕಂಡ ಆಗಿನ ಕಾಲದ ಜನರು ಇದೊಂದು ವಿಸ್ಮಯವೆಂದು ನಂಬಿದ್ದರು. ಆ ನೆನಪಿಗಾಗಿ ‘ಫ್ಲೇಮ್ ಟವರ್’ನ್ನು ನಿರ್ವಿುಸಲಾಗಿದ್ದು, ನಗರ ಬೇರೆ ಬೇರೆ ಕಡೆಗೆ ಹೋದಾಗಲೂ ದೂರದಿಂದ ಅದರ ಆಕರ್ಷಣೆಯನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ.

ಅಲ್ಲಿಂದ ನಾವು ಬಾಕುವಿನ ಪ್ರಾಚೀನ ಕೋಟೆಯೊಂದಕ್ಕೆ ತೆರಳಿದೆವು. ಕೋಟೆಯ ಗೋಡೆಯ ನಡುವೆ ಪ್ರಾಚೀನ ಕಾಲದ ಕಟ್ಟಡಗಳು, ಸ್ಮಾರಕಗಳು, ಮನೆಗಳು ಹಾಗೂ ಸ್ನಾನದ ಹಮಾಮ್ಳು ಇವೆ. ಅನೇಕ ಕಟ್ಟಡಗಳನ್ನು ಈಗ ಪ್ರವಾಸಿಗರ ಅನುಕೂಲಕ್ಕಾಗಿ ಹೋಟೆಲ್, ಅಂಗಡಿಗಳನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿಂದ ಗಬಾಲ ಎನ್ನುವ ಇನ್ನೊಂದು ಊರಿಗೆ ಹೋದೆವು. ದಾರಿಯಲ್ಲಿ 7 ರಿಂದ 8 ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಅಟಚ್ಚಚ (ದಕ್ಷಿಣ ಅಮೆರಿಕದಲ್ಲಿ ಕಂಡು ಬರುವ ಒಂಟೆ)ಗಳನ್ನು ಬೃಹತ್ ಸಂಖ್ಯೆಯಲ್ಲಿ ಸಾಕುವ ಫಾಮರ್್​ಗಳಿತ್ತು. ಅಲ್ಲಿಗೂ ಭೇಟಿ ನೀಡಿದೆವು. ಫಾಮ್ರ್ ಮಾಲಿಕರು ಅಲ್ಪಕಾಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುವು ಮಾಡಿಕೊಡುತ್ತಾರೆ. ಸಾಮಾನ್ಯವಾಗಿ ಒಂಟೆಗಳು ಬಹಳ ಎತ್ತರ ಬೆಳೆಯುತ್ತವೆ. ಆದರೆ ಈ ಅಲ್ಪಕಾಗಳು ಬಹಳ ಎತ್ತರ ಬೆಳೆಯೋದಿಲ್ಲ. 5 ಅಡಿಯಿಂದ 6 ಅಡಿ ಬೆಳವಣಿಗೆ. ಕುತ್ತಿಗೆ ಮೂರು ಅಡಿ ಇರಬಹುದು. ಒಟ್ಟು ಎತ್ತರ 8 ಅಡಿ ಇರಬಹುದು. ಇತ್ತೀಚೆಗೆ ‘ತರಂಗ’ ಪತ್ರಿಕೆಯಲ್ಲಿ ಈ ಅಲ್ಪಕಾಗಳ ಬಗ್ಗೆ ವರದಿಯಾಗಿತ್ತು. ಹಣ ಕೊಟ್ಟು ಟಿಕೆಟ್ ಪಡೆದುಕೊಂಡವರಿಗೆ ಅಲ್ಪಕಾಗಳನ್ನು ರ್ಸ³ಸುವುದಕ್ಕೆ, ಆಹಾರ ನೀಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅವುಗಳ ವೀಕ್ಷಣೆಗೆ ತೆರಳುವಾಗ ನಮ್ಮ ಗೈಡ್ ಇದರ ಬಗ್ಗೆ ತಿಳಿಸುತ್ತ, ‘ಅವುಗಳಿಗೆ ಸಿಟ್ಟು ಬರುವಂತೆ ವರ್ತಿಸಬಾರದು. ಸಿಟ್ಟು ಬಂದರೆ ಉಗುಳುತ್ತವೆ’ ಎಂದು ತಿಳಿಸಿದ್ದ. ಹಾಗಾಗಿ ನಾವು ಎಲ್ಲರೂ ಬಹಳ ಪ್ರೀತಿಯಿಂದ ಅದಕ್ಕೆ ತಿಂಡಿಯನ್ನು ಕೊಟ್ಟು ಕೆಲ ಹೊತ್ತು ಅವುಗಳೊಂದಿಗೆ ಆಟವಾಡಿ ಹೊರಬಂದೆವು.

ಗಬಾಲ ಎಂದರೆ ನಮ್ಮ ಕೊಡಗು, ಚಿಕ್ಕಮಗಳೂರಿ ನಲ್ಲಿ ಇರುವಂತೆ ಬೆಟ್ಟ-ಗುಡ್ಡಗಳು ಇರುವ ಪರ್ವತ ಪ್ರದೇಶ. ಅದು ಅಲ್ಲಿಯ ಮಲೆನಾಡು ಪ್ರದೇಶ. ವನರಾಶಿಯಿಂದ ಕಂಗೊಳಿಸುತ್ತಿತ್ತು. ನಾವು ಹೋದ ಹಿಂದಿನ ದಿನವೇ ಅಲ್ಲಿ ಮಳೆಯಾಗಿದ್ದರಿಂದ ಪ್ರಕೃತಿಯ ಸೊಬಗು ಇಮ್ಮಡಿಯಾಗಿತ್ತು. ನಮ್ಮಲ್ಲಿರುವಂತೆ ಅಲ್ಲಿ ಕೆಂಪುಮಣ್ಣು ಇರಲಿಲ್ಲ. ಅಲ್ಲಿಯ ಮಣ್ಣು ಕಪ್ಪಾಗಿತ್ತು. ಹಾಗಾಗಿ ಅಲ್ಲಿ ಹರಿಯುವ ನೀರು ಕಪ್ಪಾಗಿ ಕಾಣುತ್ತಿತ್ತು. ಇಲ್ಲಿ ಮಳೆ ಪ್ರಮಾಣ ಕಡಿಮೆ. ಆದರೆ ನವೆಂಬರ್-ಡಿಸೆಂಬರ್ ಕಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಿಮ ಬೀಳುತ್ತದೆ. ಬೇಸಿಗೆ ಕಾಲದಲ್ಲಿ ನಿಧಾನವಾಗಿ ಕರಗುವ ಮಂಜುಗಡ್ಡೆಯ ನೀರು ನದಿಯ ಮೂಲಕ ಹರಿಯುವುದರಿಂದ ಅಲ್ಲಿನ ಜನಜೀವನಕ್ಕೆ ವರ್ಷಪೂರ್ತಿ ನೀರು ಲಭ್ಯವಾಗುತ್ತದೆ.

ಹೆಚ್ಚು ಮರುಭೂಮಿ ಪ್ರದೇಶವಾದ್ದರಿಂದ ಅಲ್ಲಿ ತರಕಾರಿ, ಹಣ್ಣು-ಹಂಪಲುಗಳ ಬೆಳೆ ಕಡಿಮೆ. ಹೆಚ್ಚಾಗಿ ಮಾಂಸಾಹಾರ ಬಳಕೆ ಮಾಡುತ್ತಾರೆ. ಜೊತೆಗೆ ಅಲ್ಲಿನ ಬಹುತೇಕ ಆಹಾರಗಳು ನಮ್ಮ ದೇಶದ ಪಲಾವ್ ಮುಂತಾದ ತಿನಸುಗಳ ಸಾಮ್ಯತೆ ಹೊಂದಿವೆ. ಆಹಾರ ವಸ್ತು ಎಲ್ಲವನ್ನೂ ಆಮದು ಮಾಡಿಕೊಳ್ಳುತ್ತಾರೆ. ಹಾಗಾಗಿ ಹಣ್ಣು-ಹಂಪಲು, ತರಕಾರಿಗಳನ್ನು ಖರೀದಿಸಲು ಅಂಗಡಿಗಳಿಗೆ ಹೋಗಬೇಕಾಗುತ್ತದೆ. ಅಲ್ಲಿ ಎಲ್ಲ ರೀತಿಯ ದಿನಬಳಕೆ ವಸ್ತುಗಳು, ಆಹಾರ ದಿನಸಿ ಪದಾರ್ಥ, ಉತ್ತಮ ಗುಣಮಟ್ಟದ ಅಕ್ಕಿ ಸೇರಿದಂತೆ ಇನ್ನಿತರ ವಸ್ತುಗಳು ದೊರೆಯುತ್ತವೆ.

ಆ ದೇಶದಲ್ಲಿ ಶಿಸ್ತು ಬಹಳಷ್ಟಿದೆ. ವಾಹನ ಸಂಚಾರದಲ್ಲಿ ಸಂಚಾರಿ ನಿಯಮ ಉಲಂಘನೆ ಕಡಿಮೆ, ಸ್ವಚ್ಛತೆಯಲ್ಲಿ ಕೊರತೆಯಿಲ್ಲ. ಅಲ್ಲಿಯ ಜನರು ಸ್ವಚ್ಛತೆಗೆ ಬಹಳ ಪ್ರಾಧಾನ್ಯ ಕೊಡುತ್ತಾರೆ. ಅಲ್ಲಿಯ ಕುಟುಂಬ ವ್ಯವಸ್ಥೆಯೂ ಶಿಸ್ತಿನಿಂದ ಕೂಡಿದೆ ಎಂದು ನಮ್ಮ ಗೈಡ್ ವಿವರಿಸಿದ. ಅಲ್ಲಿ ಗಂಡು-ಹೆಣ್ಣನ್ನು ಭೇಟಿ ಮಾಡಿಸುತ್ತಾರೆ. ಹೆಣ್ಣು ಒಪ್ಪಿಗೆ ಆಗಿದ್ದಲ್ಲಿ ಸಣ್ಣ ಮೊತ್ತವನ್ನು ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಗೆ ಕೊಟ್ಟು ನಿಶ್ಚಯ ಮಾಡುತ್ತಾರೆ. ಮುಂದೆ ಮೂರು-ನಾಲ್ಕು ತಿಂಗಳಿನಲ್ಲಿ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ವಿವಾಹ ಕಾರ್ಯಕ್ರಮದಲ್ಲಿ ವರದಕ್ಷಿಣೆ ಎನ್ನುವ ಸಂಪ್ರದಾಯ ಅಲ್ಲಿಲ್ಲ. ಆದರೆ ಮೋಜು-ಮಸ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರಂತೆ. ಆದರೆ ಆ ಕಾರ್ಯಕ್ರಮಗಳಲ್ಲಿ ಮದ್ಯಪಾನ ಇರುವುದಿಲ್ಲ. ತಂದೆ-ತಾಯಿ, ಮಕ್ಕಳು ಒಗ್ಗಟ್ಟಾಗಿ ಇರುತ್ತಾರೆ ಎಂದು ಗೈಡ್ ತಿಳಿಸಿದ.

ದೇಶ ಪುಟ್ಟದಾದರೂ ಅಲ್ಲಿಯವರು ಅವರ ದೇಶದ ಮೇಲೆ ಬಹಳ ಹೆಮ್ಮೆ ಪಡುತ್ತಾರೆ. ಸ್ವತಂತ್ರ ರಾಷ್ಟ್ರವಾಗಿರುವ ಅಜೆರ್ಬೆಜಾನ್​ನಲ್ಲಿ ರಾಷ್ಟ್ರಾಧ್ಯಕ್ಷರಿದ್ದಾರೆ. ಚುನಾವಣೆಗಳು ನಡೆದು ಆಯ್ಕೆಯಾದ ವ್ಯಕ್ತಿ ರಾಷ್ಟ್ರಾಧ್ಯಕ್ಷರಾಗುತ್ತಾರೆ. ಇಸ್ಲಾಂ ಧರ್ಮ ಇದ್ದರೂ ಇಲ್ಲಿ ಕಟ್ಟರ್ ಇಸ್ಲಾಂ ಸಂಪ್ರದಾಯದ ಪ್ರತಿಪಾದನೆ ಇಲ್ಲ. ಮುಕ್ತತೆ ಇದೆ. ನಮಾಜ್, ಬುರ್ಖಾ ಧರಿಸುವುದು, ಇತ್ಯಾದಿ ವಿಚಾರಗಳಲ್ಲಿ ಯಾವುದೂ ಕಡ್ಡಾಯವಲ್ಲ. ಅವರವರ ಆಯ್ಕೆ, ಸ್ವ-ಇಚ್ಛೆಗೆ ಬಿಡಲಾಗಿದೆ ಎಂದು ಅಲ್ಲಿಯ ಸಂಪ್ರದಾಯದ ಬಗ್ಗೆ ಗೈಡ್​ಆರೀಫ್ ತಿಳಿಸಿದ.

ಕಾಲಮಾನದ ಬಗ್ಗೆ ಹೇಳುವುದಾದರೆ ನಮ್ಮ ಕಾಲಮಾನಕ್ಕಿಂತ ಒಂದೂವರೆ ತಾಸು ಅವರು ಹಿಂದೆ ಇದ್ದಾರೆ. ಇಲ್ಲಿ ಬೆಳಗ್ಗೆ ಒಂಬತ್ತು ಗಂಟೆಯಾದರೆ ಅಲ್ಲಿ ಬೆಳಗ್ಗೆ 7.30 ಆಗಿರುತ್ತದೆ. ಇತ್ತೀಚೆಗೆ ಪರಿಚಯವಾದ ಈ ಸುಂದರ ರಾಷ್ಟ್ರ ಉತ್ತಮ ಪ್ರವಾಸಿತಾಣವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಪ್ರವಾಸಿಗರು ಇಲ್ಲಿಗೆ ಖಂಡಿತ ಪ್ರವಾಸ ಮಾಡಬಹುದು. ಯಾವುದೇ ಭಯದ ವಾತಾವರಣ ಇಲ್ಲ. ಪ್ರಕೃತಿ ಹಾಗೂ ಹೊಸ ರಾಷ್ಟ್ರವನ್ನು ನೋಡಿ ಪರಿಚಯಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿಗೆ ತೆರಳಬಹುದು.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net