

ಹಾಗಾದರೆ ವಿಶ್ವ ಆರೋಗ್ಯ ಸಂಸ್ಥೆಯ ಉದ್ದೇಶದಲ್ಲೇ ಏನಾದರೂ ದೋಷವಿದೆಯೇ, ಎಡವಿದ್ದಾದರೂ ಎಲ್ಲಿ ಎಂಬೆಲ್ಲಾ ವಾಸ್ತವ ವಿಚಾರಗಳ ಕುರಿತು ಆಲೋಚಿಸಬೇಕಾದ ಹೊತ್ತಿದು. ಯಾವುದೇ ಕಾರ್ಯ ಮಾಡುವಾಗಲೂ ಗುರಿಯು ಪೂರ್ಣತೆಯತ್ತ ನೆಟ್ಟಿರಬೇಕು. ಆಗ ಪರಿಪೂರ್ಣತೆಯ ಸನಿಹದಲ್ಲಿರಲಾದರೂ ಸಾಧ್ಯವಾಗುತ್ತದೆ. ಗಮ್ಯವನ್ನೇ ಅರ್ಧಕ್ಕಿಟ್ಟುಕೊಂಡರೆ ಕೆಲಸ ಬಹುತೇಕ ಕೈಕೊಟ್ಟಿತೆಂದೇ ಅರ್ಥ. ಏಕೆಂದರೆ ನುಡಿದಂತೆ ನಡೆಯುವುದು ಪ್ರತಿಯೊಬ್ಬರಿಗೂ ಪ್ರತಿಯೊಂದು ವಿಷಯದಲ್ಲೂ ಸಾಧ್ಯವಾಗು ವುದಿಲ್ಲ. ಕನಸು ನನಸಾಗುವುದು ಎಂಬುದಕ್ಕೆ ಮಹತ್ವ ಬಂದಿರುವುದೇ ಈ ಕಾರಣದಿಂದ. ಆರೋಗ್ಯದ ವಿಚಾರದಲ್ಲಿ ಇಲ್ಲಿ ನಡೆದಿರುವುದೂ ಹೀಗೆಯೇ. ವಿಶ್ವದ ಎಲ್ಲರಿಗೂ ಆರೋಗ್ಯ ಎಂಬ ಘೊಷಣೆಯನ್ನು ನಿಜಗೊಳಿಸಲು ಹಿಡಿದ ಹಾದಿಯಲ್ಲಿ ದೂರದೃಷ್ಟಿ ಇರಲಿಲ್ಲ ಎಂಬುದೀಗ ಅರ್ಥವಾಗುತ್ತಿದೆ. ವಿಶ್ವದ ಅನೇಕ ಭಾಗಗಳಲ್ಲಿ ಔಷಧ, ವೈದ್ಯರು, ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲ, ಚಿಕಿತ್ಸೆಗೆ ಇವು ಮೂರನ್ನು ಪೂರೈಸಿದರೆ ಎಲ್ಲರಿಗೂ ಆರೋಗ್ಯ ಲಭಿಸಬಹುದೆಂಬ ಚಿಂತನೆಯಲ್ಲಿರುವ ಬಹುದೊಡ್ಡ ಲೋಪ ಕಣ್ಣಿಗೆ ಕಾಣಿಸಲೇ ಇಲ್ಲ! ಏಕೆಂದರೆ ಎಲ್ಲೆಡೆಗೆ ಔಷಧ, ವೈದ್ಯರು, ಚಿಕಿತ್ಸಾ ಸೌಲಭ್ಯಗಳನ್ನು ತಲುಪಿಸಿದರೆ ಆರೋಗ್ಯ ಸ್ಥಾಪಿಸಬಹುದು ಎನ್ನುವುದು ಕೇವಲ ಭ್ರಮೆ. ಆಯುರ್ವೆದ, ಅಲೋಪಥಿ, ಹೋಮಿಯೋಪಥಿ, ನ್ಯಾಚುರೋಪಥಿ, ಚೈನೀಸ್ ಮೆಡಿಸಿನ್, ಯುನಾನಿ ಅದ್ಯಾವುದೇ ಪದ್ಧತಿಗಳಿರಲಿ ಔಷಧಗಳನ್ನು ಪ್ರಪಂಚದ ಮೂಲೆ ಮೂಲೆಗಳಲ್ಲಿ ಲಭ್ಯವಾಗಿಸಿದರೆ ಅದು ಹೇಗೆ ಜನರೆಲ್ಲ ಸ್ವಸ್ಥರಾಗುತ್ತಾರೆ? ಎಲ್ಲರಿಗೂ ತಲುಪಬೇಕಾದುದು ಔಷಧ ಗಳಲ್ಲ, ಸ್ವಾಸ್ಥ್ಯಕರ ತತ್ತ್ವ ಸಿದ್ಧಾಂತಗಳು! ಔಷಧಗಳನ್ನು ಎಲ್ಲೆಡೆ ಸಿಗುವಂತೆ ಮಾಡಿದರೆ ರೋಗವಿರದ ಬಹುಪಾಲು ಜನರಿಗೆ ಅದರಿಂದೇನು ಲಾಭವಿದೆ? ಗುರಿಯಲ್ಲಿನ ಸಣ್ಣತನ ಇಲ್ಲಿಂದಲೇ ಪ್ರದರ್ಶಿತವಾಯಿತು. ರೋಗವಿಲ್ಲದವರಿಗೆ ಬೇಕಾದುದು ಅವರ ಸ್ವಾಸ್ಥ್ಯರಕ್ಷಣೆಗೆ ಬೇಕಾದ ವಿಭಿನ್ನ ಕ್ರಮಗಳು. ಇವು ಎಲ್ಲಿ ಹೇಳಲ್ಪಟ್ಟಿವೆ ಎಂಬ ಪ್ರಶ್ನೆಗೆ ಸ್ವಸ್ಥರ ಸ್ವಾಸ್ಥ್ಯ ರಕ್ಷಣೆಗೆ ಆಯುರ್ವೆದ ಹೇಳಿರುವ ದಿನಚರ್ಯು, ರಾತ್ರಿಚರ್ಯು, ಋತುಚರ್ಯು, ಸದ್ವೃತ್ತ, ಸ್ವಸ್ಥವೃತ್ತಗಳೇ ಇದಕ್ಕಿರುವ ನೇರ ಹಾಗೂ ಅಂತಿಮ ಉತ್ತರ. ಈ ಕುರಿತು ತಾಳಿದ ನಿರ್ಲಕ್ಷ್ಯವೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.
2022ರ ಸೆಪ್ಟೆಂಬರ್ 4ರಂದು ಕ್ಯೂರಸ್ನಲ್ಲಿ ಪ್ರಕಟವಾಗಿರುವ ಆರೋಗ್ಯದ ಟ್ವಿಟರ್ ಸಮೀಕ್ಷೆಯ ಫಲಿತಾಂಶ ಕುತೂಹಲಕಾರಿಯಾಗಿದೆ. ಜಗತ್ತಿನ 37.5 ಪ್ರತಿಶತ ಜನರು ಸಾಮಾನ್ಯ ಕಾಯಿಲೆಗಳಿಗೆ ಸಾಂಪ್ರದಾಯಿಕ ಪದ್ಧತಿಯೇ ಪ್ರಥಮ ಆಯ್ಕೆ ಎಂದಿದ್ದು ಅದು ಮುಂಚೂಣಿಯಲ್ಲಿ ನಿಂತಿದೆ! ದೀರ್ಘಕಾಲೀನ ಕಾಯಿಲೆಗಳಿಗೆ ಸಾಂಪ್ರದಾಯಿಕ ಪದ್ಧತಿ ಹಾಗೂ ಆಧುನಿಕ ಪದ್ಧತಿ ಎರಡನ್ನೂ ಒಟ್ಟಿಗೇ ಬಳಸುವುದಕ್ಕೆ ಆದ್ಯತೆ ನೀಡುತ್ತೇವೆ ಎಂದಿದ್ದಾರೆ! ಆಯುರ್ವೆದ ಎಂದಾಕ್ಷಣ ದೇಶದ ರಾಜ್ಯಗಳ ಪೈಕಿ ಮೊದಲು ನೆನಪಾಗುವುದು ಕೇರಳ. ಇಂದಿಗೂ ಆಯುರ್ವೆದ ಹೆಚ್ಚಾಗಿ ಕಾಣಸಿಗುವುದೂ, ಬಳಸಲ್ಪಡುತ್ತಿರುವುದೂ ಕೇರಳದಲ್ಲೇ. ದೇಶವಾಸಿ ಸ್ತ್ರೀಯರ ಸರಾಸರಿ ವಯೋಮಾನ 70.7 ವರ್ಷಗಳಿದ್ದರೆ ಕೇರಳದಲ್ಲಿ ಅತಿಹೆಚ್ಚು 77.9 ವರ್ಷಗಳಿವೆ. ದೇಶದಲ್ಲಿ ಪುರುಷರ ಸರಾಸರಿ ಆಯುಸ್ಸು 68.15 ವರ್ಷಗಳು. ಅದೇ ಕೇರಳದಲ್ಲಿ ದೇಶದಲ್ಲೇ ಅತಿಹೆಚ್ಚು 72.5 ವರ್ಷಗಳು. ಆಯುರ್ವೆದವು ಎಲ್ಲಿದೆಯೋ ಅಲ್ಲಿನ ಜನರ ವಯೋಮಾನ ಅತಿಹೆಚ್ಚಾಗಿ ಕಂಡುಬಂದಿರುವುದೂ ಗಣನೀಯ. ಜನರಿಗೆ ಆರೋಗ್ಯ ಕ್ಷೇತ್ರದ ಬೆಳವಣಿಗೆಗಳೆಲ್ಲವೂ ಕಾಣುತ್ತಿದೆ, ಅರ್ಥವಾಗುತ್ತಿದೆ. ಇದೀಗ ಭಾರತ ಸರ್ಕಾರ 2022ರಿಂದ 2047ನೇ ಇಸವಿಯ ತನಕದ 25 ವರ್ಷಗಳನ್ನು ‘ಆಯುರ್ವೆದದ ಅಮೃತ ಕಾಲ’ ಎಂದು ಘೊಷಿಸಿದೆ. ಆಯುರ್ವೆದ ಜನರೆಲ್ಲರಿಗೆ ತಲುಪಿದರೆ ಸ್ವಾಸ್ಥ್ಯಪೂರ್ಣ ಸಮಾಜ ಸಮೀಪವಾಗುತ್ತದೆ. ನಿಜಾರ್ಥದಲ್ಲಿ ಆಯುರ್ವೆದಕ್ಕಿಂತ ಹೆಚ್ಚಾಗಿ ಮುಂದಿನದು ಭಾರತೀಯರ ಅಮೃತ ಕಾಲ!