ತುರ್ತುಸ್ಥಿತಿಗೆ ಮೂಲ ಸರ್ವಾಧಿಕಾರಿ ಮನೋಭಾವ: ಅಮಿತ್ ಷಾ ಅಂಕಣ ಬರಹ

Column lead
Published on
ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಗಳ ಕಣವಲ್ಲ. ಅದು ಒಳಗೊಳ್ಳುವಿಕೆಯ ಅಭಿವೃದ್ಧಿ, ಎಲ್ಲರಿಗೂ ಭದ್ರತೆ, ಸಮಾನ ಅವಕಾಶ ಹಾಗೂ ಸಮಾನ ಹಕ್ಕುಗಳನ್ನು ಒಳಗೊಂಡ ವಿಶಾಲವಾದ ಹಾಗೂ ಆಳವಾದ ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ.

ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ 46 ವರ್ಷಗಳ ಹಿಂದೆ ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವೊಂದು ಬರೆಯಲ್ಪಟ್ಟಿತು. ಸರ್ವಾಧಿಕಾರದ ದರ್ಪ ಮತ್ತು ದೇಶದ ಶತಮಾನಗಳಷ್ಟು ಹಳೆಯ ಪ್ರಜಾತಾಂತ್ರಿಕ ಪರಂಪರೆಯ ಅಣಕಕ್ಕೆ ಅದು ಕಾರಣವಾಯಿತು. ಜೀವಿಸುವ ಹಕ್ಕನ್ನು ಕೂಡ ರದ್ದು ಮಾಡಿದ, ಸಂಸತ್ತು, ನ್ಯಾಯಾಂಗ ಮತ್ತು ಮಾಧ್ಯಮವನ್ನು ಒಬ್ಬ ನಾಯಕಿಯ ಸರ್ವಾಧಿಕಾರಿ ಬಯಕೆಗಳಿಗೆ ಅಡಿಯಾಳಾಗುವಂತೆ ಮಾಡಿದ ಈ ನಡೆಯು ಒಂದು ವಿಪಥನವೇ ಅಥವಾ ಕಾಂಗ್ರೆಸ್​ನ ವಂಶಪಾರಂಪರ್ಯ ರಾಜಕೀಯದ ಸಹಜ ಪ್ರವೃತ್ತಿಯ ಪ್ರತಿನಿಧಿಯೋ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕಾಂಬೋಜ, ಕಳಿಂಗ, ಲಿಚ್ಚವಿ ಸಾಮ್ರಾಜ್ಯ ಮುಂತಾದ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯ ಉದಾಹರಣೆಗಳು ಭಾರತದ ಪ್ರಾಚೀನ ಇತಿಹಾಸದಲ್ಲಿ ಹೇರಳವಾಗಿ ಸಿಗುತ್ತವೆ. ಋಗ್ವೇದದಂಥ ಪ್ರಾಚೀನ ಸಾಹಿತ್ಯಗಳಲ್ಲಿ ಕೂಡ ಪ್ರಜಾಸತ್ತಾತ್ಮಕ ಆಚರಣೆಯ ಉದಾಹರಣೆಗಳು ಕಂಡುಬರುತ್ತವೆ. ಸಾಮ್ರಾಟರ ಕಾಲದಲ್ಲಿ ಕೂಡ ಆಚರಣೆಯಲ್ಲಿದ್ದ ಪ್ರಜಾಪ್ರಭುತ್ವ ಮೌಲ್ಯಗಳು ವಿದೇಶಿ ಆಕ್ರಮಣಕಾರರ ದಾಳಿ, ಲೂಟಿಯ ನಂತರ ಹಾಗೂ ಅವರು ಬಹಳಷ್ಟು ಭಾಗಗಳಲ್ಲಿ ತಮ್ಮ ಆಡಳಿತ ಸ್ಥಾಪಿಸಿದ ನಂತರ ಹಿನ್ನೆಲೆಗೆ ಸರಿಯತೊಡಗಿದವು.

ಸ್ವಾತಂತ್ರಾ್ಯನಂತರ ಭಾರತವು ಒಂದು ಆಧುನಿಕ, ಪ್ರಗತಿಪರ, ಪ್ರಜಾಸತ್ತಾತ್ಮಕ ರಾಷ್ಟ್ರವಾಗುವ ಸಂಕಲ್ಪದೊಂದಿಗೆ ದೊಡ್ಡ ಹೆಜ್ಜೆಯಿಟ್ಟಿತು. ಎಲ್ಲಕ್ಕಿಂತ ಮುಖ್ಯವಾಗಿ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಮೂಲಕ ಕನಸು ಮತ್ತು ಆದರ್ಶಗಳನ್ನು ನನಸು ಮಾಡಲು ಮುಂದಿನ ಸರ್ಕಾರಗಳು ಪ್ರಯತ್ನಿಸಬಹುದು ಎಂಬುದು ಸಂವಿಧಾನ ರಚನಾಕರ್ತರ ಆಶಯವಾಗಿತ್ತು.

ಆದರೆ, ಸ್ವಾತಂತ್ರ್ಯ ಹೋರಾಟದ ಗರ್ಭದಿಂದ ಮೂಡಿಬಂದ ಕಾಂಗ್ರೆಸ್ ಪಕ್ಷ, ದೇಶಕ್ಕೆ ಸೇವೆ ಮಾಡುವ ಮೊದಲ ಅವಕಾಶ ಪಡೆದರೂ ಜವಾಹರಲಾಲ್ ನೆಹರೂ ಆಡಳಿತದಡಿಯಲ್ಲಿ ಆರಂಭದಲ್ಲೇ ಎಡವಿತು. ಗಾಂಧಿ ಹತ್ಯೆಗೆ ಕಾರಣವೆಂಬ ಸುಳ್ಳು ಆರೋಪದಡಿ ಆರ್​ಎಸ್​ಎಸ್ ಮತ್ತು ಅದರ ಮುಖವಾಣಿ ‘ಪಾಂಚಜನ್ಯ’ವನ್ನು ನಿಷೇಧಿಸುವ ಮೂಲಕ ಅದು ತಪ್ಪೆಸಗಿತು. ಭಿನ್ನಾಭಿಪ್ರಾಯವನ್ನು ಹೊಸಕಿ ಹಾಕಲು ‘ನಿಷೇಧ’ವನ್ನು ಒಂದು ಅಸ್ತ್ರವಾಗಿ ಬಳಸಿದ ಮೊದಲ ದೃಷ್ಟಾಂತ ಇದಾಗಿದೆ.

ತಮ್ಮ ಆಡಳಿತ ಮತ್ತು ನೀತಿಯ ಬಗೆಗಿನ ಟೀಕೆಗಳಿಂದ ವಿಚಲಿತರಾಗಿದ್ದ ನೆಹರೂ, ಸಂವಿಧಾನ ಅಂಗೀಕಾರವಾದ ಕೇವಲ ಒಂದು ವರ್ಷದ ನಂತರ, 1951-52ರಲ್ಲಿ ವಾಕ್ ಸ್ವಾತಂತ್ರ್ಯವನ್ನು ಮಟ್ಟ ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತರಲು ತಮಗಿದ್ದ ಸ್ಪಷ್ಟ ಬಹುಮತವನ್ನು ಬಳಸಿಕೊಂಡರು. ಭಾರತೀಯ ಜನಸಂಘದ ಸ್ಥಾಪಕರಾದ ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ದೃಢ ವಿರೋಧವನ್ನೂ ಲೆಕ್ಕಿಸದೇ ಅವರು ಹೀಗೆ ಮಾಡಿದರು.

ಇದು ಇಂದಿರಾ ಗಾಂಧಿ 1975 ಜೂನ್ 25ರ ಮಧ್ಯರಾತ್ರಿ ಹೇರಿದ ತುರ್ತು ಪರಿಸ್ಥಿತಿಯ ಅಡಿಪಾಯವಾಗಿತ್ತು. ಆ ಮೂಲಕ ಇಡೀ ದೇಶವನ್ನು ಒಂದು ಸೆರೆಮನೆಯಾಗಿ ಪರಿವರ್ತಿಸಲಾಯಿತು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅಲ್ಲದೆ ಪ್ರತಿಪಕ್ಷಗಳ ಪ್ರಮುಖ ಮುಖಂಡರಾದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಮೊದಲಾದವರನ್ನು ಜೈಲಿಗೆ ಅಟ್ಟಲಾಯಿತು. ಇದಕ್ಕೆ ಪ್ರತಿರೋಧದ ಚಳವಳಿ ಕಟ್ಟುವ ಸಲುವಾಗಿ ನಾನಾಜಿ ದೇಶ್​ವುುಖ್ ಮತ್ತು ಜಾರ್ಜ್ ಫರ್ನಾಂಡೀಸ್ ಮೊದಲಾದ ನಾಯಕರು ಭೂಗತರಾದರು. ಹಲವಾರು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಆರ್​ಎಸ್​ಎಸ್ ಅನ್ನು ನಿಷೇಧಿಸಲಾಯಿತು. ಮಾಧ್ಯಮಗಳನ್ನು ಸೆನ್ಸಾರ್​ಶಿಪ್​ಗೆ ಒಳಪಡಿಸಲಾಯಿತು. ಆದರೆ ಬೇಸರದ ಸಂಗತಿಯೆಂದರೆ, ಬಹುತೇಕ ಪತ್ರಿಕೆಗಳು ಕಾಂಗ್ರೆಸ್ ಪಕ್ಷದ ಮುಖವಾಣಿಗಳಂತೆ ಕೆಲಸ ಮಾಡಿದವು. ‘ಮಾಧ್ಯಮಗಳು ಬಗ್ಗು ಎಂದರೆ ತೆವಳಿದವು’ ಎಂದು ಆಡ್ವಾಣಿ ಹೇಳಿದ್ದು ಈ ಕಾರಣಕ್ಕಾಗಿಯೇ.

ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಎಸಗಲು ಇಂದಿರಾ ಗಾಂಧಿಗೆ ಪ್ರೇರಣೆಯಾದ ಕೆಲವು ಅಂಶಗಳ ಬಗ್ಗೆ ಕೆಲವರು ಊಹಾಪೋಹ ಮಾಡುತ್ತಾರೆ. ಆದರೆ ಅದೊಂದೇ ಘಟನೆ ಕಾರಣವಲ್ಲ. ಕಾಂಗ್ರೆಸ್ ನಾಯಕತ್ವದ ಸರ್ವಾಧಿಕಾರಿ ಧೋರಣೆಯೇ ಇದಕ್ಕೆ ಮೂಲಹೇತುವಾಗಿದೆ. ಆ ಧೋರಣೆಯಿಂದಾಗಿಯೇ ಇಂದಿರಾ ಗಾಂಧಿ ತಮ್ಮ ಆಯ್ಕೆಯನ್ನು ಅಕ್ರಮ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿದರು.

ಸರ್ವಾಧಿಕಾರ ಮತ್ತು ಅಸಹನೆ ಕಾಂಗ್ರೆಸ್ ಪಕ್ಷದ ಗುಣದಲ್ಲೇ ಅಂತರ್ಗತವಾಗಿದೆ. ಹೀಗಾಗಿಯೇ 1977ರ ಪರಾಭವದಿಂದ ಪಾಠ ಕಲಿಯುವ ಬದಲು ಮರಳಿ ಅಧಿಕಾರಕ್ಕೆ ಬಂದ ನಂತರ ಮತ್ತೆ ಪ್ರಜಾಪ್ರಭುತ್ವ-ವಿರೋಧಿ ಮಾರ್ಗಕ್ಕೇ ಇಳಿಯಿತು. ರಾಜೀವ್ ಗಾಂಧಿಯವರಿಗೆ ಬೇಟನ್ ಅನ್ನು ಹಸ್ತಾಂತರಿಸಲಾಯಿತು. ಈಗ ವಾಕ್ ಸ್ವಾತಂತ್ರ್ಯದ ಚಾಂಪಿಯನ್ ಎಂದು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಿರುವ ಕಾಂಗ್ರೆಸ್, ಮಾನಹಾನಿ-ವಿರೋಧಿ ಮಸೂದೆ ಎಂಬ ಹೆಸರಿನಲ್ಲಿ ಸೆನ್ಸಾರ್​ಶಿಪ್ ಕಾನೂನು ತರಲು ಹೊರಟಿತ್ತು. ಪ್ರತಿರೋಧದಿಂದಾಗಿ ಅದರ ಕುತ್ಸಿತ ಉದ್ದೇಶ ಸಫಲವಾಗಲಿಲ್ಲ. ಆದರೂ ಮಾಧ್ಯಮದ ಕತ್ತು ಹಿಸುಕುವ ಇನ್ನೊಂದು ಪ್ರಯತ್ನದಿಂದ ಪ್ರಜಾಸತ್ತಾತ್ಮಕ ಸಿದ್ಧಾಂತಗಳ ಬಗ್ಗೆ ಕಾಂಗ್ರೆಸ್ ಹೊಂದಿದ್ದ ಗೌರವ ಏನೆಂಬುದು ಗೊತ್ತಾಗುತ್ತದೆ.

ಒಂದು ಕುಟುಂಬದ ಅಡ್ಡೆಯಾದ ಹಾಗೂ ಪಕ್ಷದೊಳಗೆ ಪ್ರಜಾಪ್ರಭುತ್ವ ಪಾಲಿಸದ ಒಂದು ಪಕ್ಷವು ಜನತಾಂತ್ರಿಕ ಸಿದ್ಧಾಂತಗಳನ್ನು ಸಂರಕ್ಷಿಸುತ್ತದೆ ಎಂದು ನಿರೀಕ್ಷಿಸಲಾಗದು. ವಂಶಾಡಳಿತ ರಾಜಕಾರಣದ ತತ್ತ್ವವೇ ಕಾಂಗ್ರೆಸ್​ನ ಆಧಾರಸ್ತಂಭ. ‘ಕುಟುಂಬ ಮೊದಲು’ ಎಂಬ ಬೇರುಬಿಟ್ಟ ಮನೋಭಾವವೇ ಅದರ ಸರ್ವಾಧಿಕಾರತ್ವದ ಮೂಲವಾಗಿದ್ದು ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯು ವಂಶಾಡಳಿತ ಪಕ್ಷಗಳ ಕಾರ್ಯತಂತ್ರಕ್ಕೆ ತಡೆಯೊಡ್ಡುವಲ್ಲಿ ಸಫಲವಾಗಿದೆ.

 ಆ ಕರಾಳದಿನಗಳನ್ನು ಮರೆಯಲಾಗದು


ದೇಶದಲ್ಲಿ 1975-77ರ ನಡುವಿನ 21 ತಿಂಗಳ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ವ್ಯವಸ್ಥಿತ ನಾಶವನ್ನು ಕಂಡವು. ಇಂತಹ ತುರ್ತುಪರಿಸ್ಥಿತಿಯ ಕರಾಳದಿನಗಳನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತುರ್ತಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.


ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಂಗ್ರೆಸ್ ಹಾಳುಗೆಡವಿದ್ದು ಹೀಗೆ. ತುರ್ತಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲ ಗಣ್ಯರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ. ನಾವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಅಗತ್ಯವಾದ ಎಲ್ಲ ಕೆಲಸಗಳನ್ನು ಮಾಡುವ ಪಣ ತೊಡೋಣ. ನಮ್ಮ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಎಲ್ಲ ಮೌಲ್ಯಗಳನ್ನು ಗೌರವಿಸುತ್ತ ಬದುಕು ಸಾಗಿಸೋಣ ಎಂದು ಟ್ವೀಟ್ ಮಾಡಿದ್ದಾರೆ. ತುರ್ತಪರಿಸ್ಥಿತಿ ಕಾಲದ ಹಲವು ಫೋಟೋಗಳನ್ನು ಬಿಜೆಪಿ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.

ಬಿಜೆಪಿ ಪ್ರಸಕ್ತ ಭಾರತದಲ್ಲಿ ನ್ಯಾಯ, ಸಮಾನತೆ ಹಾಗೂ ಪಕ್ಷದ ಆಂತರಿಕ ಕಾರ್ಯಚಟುವಟಿಕೆಯಲ್ಲಿ ಸಮಾನ ಅವಕಾಶದ ತತ್ವಗಳನ್ನು ಆಚರಿಸುವ ಏಕೈಕ ಪಕ್ಷವಾಗಿದೆ. ಅವಕಾಶ ವಂಚಿತರ ಮನೆ ಬಾಗಿಲಿಗೆ ಅದರ ಫಲಗಳನ್ನು ತಲುಪಿಸುವ ಮೂಲಕ ಪಕ್ಷದ ನೀತಿಗಳು ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿವೆ.

ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಹಾಗೂ ರಾಜಕೀಯ ಚಟುವಟಿಕೆಗಳ ಕಣವಲ್ಲ. ಅದು ಒಳಗೊಳ್ಳುವಿಕೆಯ ಅಭಿವೃದ್ಧಿ, ಎಲ್ಲರಿಗೂ ಭದ್ರತೆ, ಸಮಾನ ಅವಕಾಶ ಹಾಗೂ ಸಮಾನ ಹಕ್ಕುಗಳನ್ನು ಒಳಗೊಂಡ ವಿಶಾಲವಾದ ಹಾಗೂ ಆಳವಾದ ಸಾಂಸ್ಕೃತಿಕ ಪರಿಕಲ್ಪನೆಯಾಗಿದೆ.

ಇವುಗಳನ್ನು ಎತ್ತಿಹಿಡಿಯಲು ಎನ್​ಡಿಎ ಸರ್ಕಾರ ಕಳೆದ ಏಳು ವರ್ಷಗಳಿಂದ ದಣಿವರಿಯದೆ ದುಡಿಯುತ್ತಿದೆ. ಇಂದು ಪ್ರಜಾಪ್ರಭುತ್ವದ ಎಲ್ಲ ಘಟಕಗಳು ಸಹಕಾರ, ಸಮನ್ವಯ ಮತ್ತು ಸಮತೋಲನದಿಂದ ಕಾರ್ಯನಿರ್ವಹಿಸುತ್ತಿವೆ. ನ್ಯಾಯಾಂಗವನ್ನು ಕಾರ್ಯಾಂಗದ ಅಧೀನಗೊಳಿಸಲು ಕಾಂಗ್ರೆಸ್ ಯತ್ನಿಸಿತ್ತು. ಅದಕ್ಕೆ ಬದಲಾಗಿ ಇಂದು ನ್ಯಾಯಾಂಗ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುತ್ತಿದೆ. ಅಗತ್ಯ ಬಿದ್ದಾಗಲೆಲ್ಲ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಿದೆ. ಮಾಧ್ಯಮ ತನ್ನ ಕಾರ್ಯ ನಿರ್ವಹಿಸಲು ಸರ್ವತಂತ್ರ ಸ್ವತಂತ್ರವಾಗಿದೆ. ಕಳೆದ ಏಳು ವರ್ಷಗಳಲ್ಲಿ ಭಾರತದ ಸಂಸದೀಯ ವ್ಯವಸ್ಥೆ ತುಂಬಾ ಪ್ರಬಲವಾಗಿ ಬೆಳೆದಿದೆ. ರಾಜಕೀಯ ಪ್ರಜಾಪ್ರಭುತ್ವವು ಯಶಸ್ವಿಯಾಗಬೇಕಾದರೆ ಸಾಮಾಜಿಕ ಕ್ಷೇತ್ರದಲ್ಲೂ ಪ್ರಜಾಪ್ರಭುತ್ವ ಹಾಸುಹೊಕ್ಕಾಗಿ ಅದಕ್ಕೆ ಪೂರಕವಾಗಿರಬೇಕು ಎಂದು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಸಂವಿಧಾನ ರಚನಾ ಸಭೆಯ ಕೊನೆಯ ಭಾಷಣದಲ್ಲಿ ಪ್ರತಿಪಾದಿಸಿದ್ದರು. ಪ್ರಧಾನಿ ಮೋದಿ ಕಳೆದ ಏಳು ವರ್ಷಗಳಿಂದ ಈ ಆದರ್ಶವನ್ನು ಅನುಷ್ಠಾನಗೊಳಿಸಿದ್ದಾರೆ. ತೀರಾ ತುಳಿತಕ್ಕೊಳಗಾದ ಜನರ ಸಬಲೀಕರಣದ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಮಾನ ರಾಷ್ಟ್ರ ಹಾಗೂ ನ್ಯಾಯಸಮ್ಮತ ಸಮಾಜ ನಿರ್ವಣಕ್ಕೆ ಸರ್ಕಾರ ಸತತವಾಗಿ ಪ್ರಯತ್ನಿಸುತ್ತಿದೆ.

ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ರಚನೆ ಮತ್ತು ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕುವಂಥ ನಾಗರಿಕರ ಹಕ್ಕುಗಳಿಗೆ ಸಂಬಂಧಿಸಿದ ಹಲವು ಕಾನೂನುಗಳ ರಚನೆ ಮಾಡಲು ಭಾರತಕ್ಕೆ ಸಾಧ್ಯವಾಗಿರುವುದು ಪ್ರಧಾನಿ ಮೋದಿ ಹೊಂದಿರುವ ಬೆಂಬಲದ ಫಲವಾಗಿದೆ. ನಾಗರಿಕರ ಸಬಲೀಕರಣ ಮತ್ತು ಅವರಿಗೆ ನ್ಯಾಯ ಒದಗಿಸುವ ಕುರಿತಾದ ಈ ಕಾನೂನುಗಳನ್ನು ಕಾಂಗ್ರೆಸ್ ಸಂಕುಚಿತ ದೃಷ್ಟಿಯಿಂದ ವಿರೋಧಿಸಿದೆ. ಇದಕ್ಕಾಗಿ ಅದು ಪ್ರಜಾಪ್ರಭುತ್ವದ ಗುರಾಣಿ ಬಳಸುತ್ತಿರುವುದು ಒಂದು ದೊಡ್ಡ ವಂಚನೆಯಾಗಿದೆ. ಅದರ ಸರ್ವಾಧಿಕಾರಿ ಪ್ರವೃತ್ತಿ ಇನ್ನೂ ಬಲವಾಗಿಯೇ ಇದೆ. ಸಂಸತ್ತಿನ ಬಾಗಿಲುಗಳನ್ನು ಮುಚ್ಚಿ ಆಂಧ್ರ ಪ್ರದೇಶವನ್ನು ವಿಭಜಿಸುವ ಮಸೂದೆ ಅಂಗೀಕರಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ.

ಆದರೆ, ಈಗ ಪ್ರಜೆಗಳು ಜಾಗೃತರಾಗಿದ್ದಾರೆ. ಬೆಳೆಯುತ್ತಿರುವ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಹೆಮ್ಮೆಯೊಂದಿಗೆ ಯುವಜನರಲ್ಲಿ ಸುಭದ್ರತೆ ಹಾಗೂ ಸಬಲೀಕರಣದ ಭಾವನೆ ಮೊಳೆಯುತ್ತಿದೆ. ಭವಿಷ್ಯದಲ್ಲಿ ಯಾವುದೇ ಪಕ್ಷ ಅಥವಾ ನಾಯಕರು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಮೂಗುತೂರಿಸುವ ಮತ್ತು ತುರ್ತಪರಿಸ್ಥಿತಿಯಂಥ ಸನ್ನಿವೇಶ ನಿರ್ವಿುಸುವ ದುಸ್ಸಾಹಸಕ್ಕೆ ಕೈ ಹಾಕಲಾರರು ಎಂಬ ದೃಢ ವಿಶ್ವಾಸ ನನ್ನದು.

(ಲೇಖಕರು ಕೇಂದ್ರ ಗೃಹ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net