ಅತ್ತೂರಿನ ಅಕ್ಕರೆ; ಸಂತ ಲಾರೆನ್ಸ್​ ಪುಣ್ಯಕ್ಷೇತ್ರ ಬೆಸಿಲಿಕ

Atturu 25 Jan 20
Published on

ಕ್ರಿಸ್ತಶಕ ಮೂರನೇ ಶತಮಾನದ ಸಂತರಾದ ಲಾರೆನ್ಸರ ಹೆಸರಿನಲ್ಲಿ ಕರಾವಳಿ ಕರ್ನಾಟಕದ ಕಾರ್ಕಳದ ಅತ್ತೂರಿನಲ್ಲಿರುವ ಪವಿತ್ರ ದೇವಾಲಯ ವಿವಿಧ ಕಾರಣಗಳಿಗೆ ಪ್ರಸಿದ್ಧವಾಗಿದೆ. ಸರ್ವ ಜನಾಂಗದವರಿಂದ ಗೌರವಿಸಲ್ಪಡುವ ಸಂತ ಲಾರೆನ್ಸರ ಇಗರ್ಜಿಗೆ ಬಹುದೊಡ್ಡ ಇತಿಹಾಸವಿದೆ. ಪ್ರಸಿದ್ಧವಾದ ಅತ್ತೂರು ಜಾತ್ರೆಯ ಸಮಯದಲ್ಲಂತೂ ಲಕ್ಷಗಟ್ಟಲೆ ಭಕ್ತಾದಿಗಳು ದೇಶ ವಿದೇಶಗಳಿಂದ ಭೇಟಿ ನೀಡುತ್ತಾರೆ.

ತುಳುನಾಡಿನ ಜನತೆ ಅಭಿಮಾನ, ಅಕ್ಕರೆಯಿಂದ ‘ಕಾರ್ಲದ ದೇವೆರ್’ ಎಂದು ಕರೆಯುವ ಅತ್ತೂರಿನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಜಾತ್ರೆಯು ವರ್ಷಂಪ್ರತಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಆ ಕುರಿತು ಜನಜನಿತ ಐತಿಹ್ಯವೊಂದಿದೆ. ಟಿಪ್ಪು ಸುಲ್ತಾನನ ಆಡಳಿತದಲ್ಲಿ ಶ್ರೀರಂಗಪಟ್ಟಣದಲ್ಲಿ ಕೈದಿಗಳಾಗಿ ಕಷ್ಟಪಟ್ಟ ಅನೇಕ ಕ್ರೈಸ್ತ ಧರ್ಮೀಯರು ಆತನ ಮರಣದ ತರುವಾಯ ಬಿಡುಗಡೆಗೊಂಡು ತಮ್ಮಊರಿಗೆ ಬಂದಾಗ ಅವರ ಆಸ್ತಿಪಾಸ್ತಿಯನ್ನು ಪರರು ಅಪಹರಿಸಿದ್ದರಿಂದ ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಅವರಿಗೆ ತಮ್ಮದೆಂಬುದು ಏನೂ ಉಳಿದಿರಲಿಲ್ಲ. ಆಗ ನಕ್ರೆ ಎಂಬ ಸ್ಥಳದಲ್ಲಿ ದೇವರ ಪೂಜೆಗೆ ಮಣ್ಣಿನ ಗೋಡೆಯ ಪುಟ್ಟ ಗುಡಿಯನ್ನು ಕಟ್ಟಿಕೊಂಡರು. ಅದು ಶಿಥಿಲವಾದಾಗ ಅಲ್ಲಿದ್ದ ಸಂತ ಲಾರೆನ್ಸರ ಒಂದು ಅಡಿ ಎತ್ತರದ ಸ್ವರೂಪ ಸಮೇತ ಹೊಸ ಇಗರ್ಜಿ ಕಟ್ಟುವುದಕ್ಕೆ ಸೂಕ್ತ ಜಾಗವನ್ನು ಅನ್ವೇಷಿಸಲು ಹೊರಟರು. ಪ್ರಯಾಣದ ಮಧ್ಯೆ ದಣಿವಾರಿಸಿಕೊಳ್ಳಲು ಪರ್ಪಲೆ ಗುಡ್ಡದ ತಪ್ಪಲಲ್ಲಿ ಸ್ವರೂಪವನ್ನು ಇರಿಸಿ ಅಲ್ಲಿ ಹರಿಯುತ್ತಿದ್ದ ಒರತೆಯ ನೀರನ್ನು ಕುಡಿದರು. ಬಳಿಕ ಪ್ರಯಾಣ ಮುಂದುವರಿಸಲೆಂದು ಕೆಳಗಿರಿಸಿದ್ದ ಸ್ವರೂಪವನ್ನು ಎತ್ತಲು ಪ್ರಯತ್ನಿಸಿದರೆ ಅದು ಮೇಲಕ್ಕೆ ಬರಲಿಲ್ಲ! ಈ ಪವಾಡವನ್ನು ವೀಕ್ಷಿಸಿದ ಧರ್ಮಗುರುಗಳು, ‘ಓ ಸಂತ ಲಾರೆನ್ಸರೇ, ಈ ಜಾಗವೇ ಸೂಕ್ತವೆಂದು ತಮಗೆ ಅನ್ನಿಸಿದರೆ ಇಲ್ಲಿಯೇ ಇಗರ್ಜಿಯನ್ನು ಕಟ್ಟುತ್ತೇವೆ’ ಎಂದು ವಾಗ್ದಾನವಿತ್ತ ಬಳಿಕ ಸ್ವರೂಪವನ್ನು ಮೇಲಕ್ಕೆತ್ತಲು ಸಾಧ್ಯವಾಯಿತು!

ಅದೇ ಜಾಗದಲ್ಲಿ 1839ರಲ್ಲಿ ಇಂದಿನ ಪ್ರಸಿದ್ಧವಾದ ಇಗರ್ಜಿ ನಿರ್ವಣವಾಯಿತು. ಕೆಲವೇ ವರ್ಷಗಳಲ್ಲಿ ಅದೊಂದು ಪವಿತ್ರ ಕ್ಷೇತ್ರವಾಗಿ ಭಕ್ತರನ್ನು ಆಕರ್ಷಿಸತೊಡಗಿತು. ಭಕ್ತರು ತಮ್ಮ ಹರಕೆಗಳನ್ನು ಈಡೇರಿಸಿಕೊಳ್ಳತೊಡಗಿದರು. ಆ ಇಗರ್ಜಿಯನ್ನು ಕಾಲಕ್ರಮದಲ್ಲಿ ಪುಣ್ಯಕ್ಷೇತ್ರವೆಂದು ಘೊಷಿಸಲಾಯಿತು. ದೇವರ ಸಮರ್ಥ ಮಧ್ಯಸ್ಥನೆಂಬುದಾಗಿ ಪರಿಗಣಿಸಲ್ಪಟ್ಟ ಸಂತ ಲಾರೆನ್ಸರು ಭಕ್ತರ ಆಶೋತ್ತರಗಳನ್ನು ಈಡೇರಿಸತೊಡಗಿದರು. ವರ್ಷಪೂರ್ತಿ ಭಕ್ತರು ಜಾತಿ-ಮತಭೇದವಿಲ್ಲದೆ ಈ ಪವಿತ್ರ ಯಾತ್ರಾಸ್ಥಳಕ್ಕೆ ಆಗಮಿಸತೊಡಗಿದರು.

ಸಾಮರಸ್ಯಕ್ಕೆ ಇನ್ನೊಂದು ಹೆಸರು: 1994 ಹಾಗೂ 97ರಲ್ಲಿ ಪರ್ಪಲೆ ಗುಡ್ಡದ ಪರಿಸರದಲ್ಲಿ ಎರಡು ಬಾರಿ ಭೂಕುಸಿತ ಸಂಭವಿಸಿತು. ಹಳೆ ಇಗರ್ಜಿಯ ಮುಂದಿನ ಲೋಹದ ಚಪ್ಪರ ಮುರಿದು ಸಾಕಷ್ಟು ನಷ್ಟವುಂಟಾಯಿತು. ಆ ಸಂದರ್ಭದಲ್ಲಿ ಕಾರ್ಕಳ, ಅತ್ತೂರಿನ ಜನರು ಜಾತಿ, ಮತ ಭೇದವಿಲ್ಲದೆ ಎಲ್ಲರೊಂದಾಗಿ ಶ್ರಮದಾನ ನಡೆಸಿ ಸಕಲ ಸಂಕಷ್ಟಗಳನ್ನು ನೀಗಿಸಿಕೊಟ್ಟರು.

2001ರಲ್ಲಿ ಪುಣ್ಯಕ್ಷೇತ್ರದ ದ್ವಿಶತಮಾನೋತ್ಸವ ವರ್ಷದ ನೆನಪಿಗಾಗಿ ಹೊಸ ಇಗರ್ಜಿಯನ್ನು ಕಟ್ಟಲಾಯಿತು. ಆಗ 90 ಅಡಿ ಎತ್ತರದ ಗೋಪುರವನ್ನು ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಶಿಲ್ಪವಿನ್ಯಾಸಗಳನ್ನು ಬಳಸಿ ಕಟ್ಟಲಾಯಿತು. ಎಲ್ಲ ಭಕ್ತರಿಗೆ ಅದೊಂದು ಆಕರ್ಷಣೆಯ ತಾಣವೂ ಆಯಿತು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಎಲ್ಲ ಧರ್ಮಗಳ ವಿಶ್ವಾಸಿಗಳನ್ನು ಒಂದೆಡೆ ಸೇರಿಸುವ, ಅವರಿಂದ ಉಪನ್ಯಾಸಗಳನ್ನು ಏರ್ಪಡಿಸುವ ಸಂಪ್ರದಾಯ ನಿರಂತರವಾಗಿ ನಡೆದುಕೊಂಡು ಬಂದಿದೆ. ಅತ್ತೂರು ರ್ಚಚಿನ ಕುರಿತಾದ ಗ್ರಂಥಗಳು, ಸ್ಮರಣಿಕೆಗಳು, ಪುಸ್ತಕಗಳು, ಸಿ.ಡಿ., ವೀಡಿಯೋಗಳೆಲ್ಲ ಕೇಂದ್ರದಲ್ಲಿಯೇ ವಿತರಣೆಗೆ ಸಿಗುತ್ತಿದ್ದು ಸ್ಥಳ ಮಾಹಿತಿ, ಐತಿಹ್ಯಾದಿಗಳ ಬಗ್ಗೆ ತಿಳಿದುಕೊಳ್ಳಲು ಎಲ್ಲ ಏರ್ಪಾಡುಗಳನ್ನು ಮಾಡಲಾಗಿದೆ. ವಾರ್ಷಿಕ ಮಹೋತ್ಸವದ ಐದೂ ದಿನಗಳಲ್ಲಿ ಭಕ್ತಾದಿಗಳು ನೀಡಿದ ಕಾಣಿಕೆಯನ್ನು ಇಡೀ ವರ್ಷ ಅರ್ಹರಿಗೆ ಅಗತ್ಯಕ್ಕೆ ತಕ್ಕಂತೆ ಆರ್ಥಿಕ ಸಹಾಯವನ್ನು ನೀಡಲು ವಿನಿಯೋಗಿಸಲಾಗುತ್ತಿದೆ. ರ್ಚಚಿನ ಆದಾಯದಿಂದ ಜಾತಿಮತ ಭೇದವಿಲ್ಲದೆ ಬಡವರಿಗೆ ಆರ್ಥಿಕ ಸಹಾಯ ನೀಡುವುದು, ಮನೆ ಕಟ್ಟಿಸಿಕೊಡುವುದು, ವೈದ್ಯಕೀಯ ಸವಲತ್ತು, ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಇತ್ಯಾದಿ ಹಲವು ಲೋಕ ಕಲ್ಯಾಣ ಕೆಲಸಗಳನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭೂತಪೂರ್ವ ರೀತಿಯಲ್ಲಿ ಸಾರ್ವಜನಿಕ ಲೋಕಕ್ಕೆ ತೆರೆದುಕೊಳ್ಳುವ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಸಿಲಿಕದ ಹಿರಿಮೆ: ಸಂತ ಲಾರೆನ್ಸರ ಪವಿತ್ರಾಲಯವು 2012ರ ಜುಲೈ 16ರತನಕ ಮಂಗಳೂರು ಧರ್ಮಕ್ಷೇತ್ರದ ಆಡಳಿತಕ್ಕೆ ಒಳಪಟ್ಟಿತ್ತು. ಬಳಿಕ ಉಡುಪಿ ಧರ್ಮಕ್ಷೇತ್ರ ಆಸ್ತಿತ್ವಕ್ಕೆ ಬಂದಾಗ ಅದರ ಆಡಳಿತಕ್ಕೆ ಒಳಪಟ್ಟಿತು. ಅತ್ತೂರಿನ ಇಗರ್ಜಿಯ ಪ್ರಸಿದ್ಧಿ ದಿನೇ ದಿನೇ ಹೆಚ್ಚುತ್ತಿದ್ದು ಅದನ್ನು ವ್ಯಾಟಿಕನ್ ಕೂಡ ಅನುಮೋದಿಸಿದ್ದರ ಸಂಕೇತವಾಗಿ 2016ರ ಏಪ್ರಿಲ್ 26ರಂದು ಪೋಪ್ ಫ್ರಾನ್ಸಿಸ್ ಅದನ್ನು ಕಿರಿಯ ಬೆಸಿಲಿಕದ ಉನ್ನತಿಗೆ ಏರಿಸಿ ಘೊಷಣೆ ಹೊರಡಿಸಿದರು. 2016ರ ಆಗಸ್ಟ್ 1ರಿಂದ ಇದು ಸಂತ ಲಾರೆನ್ಸ್ ಪುಣ್ಯಕ್ಷೇತ್ರ ಬೆಸಿಲಿಕ ಎಂದು ಪ್ರಸಿದ್ಧಿ ಪಡೆದಿದೆ. ಇದೀಗ ಈ ಇಗರ್ಜಿ ಕೀರ್ತಿ, ಜವಾಬ್ದಾರಿ ಹಾಗೂ ಸವಲತ್ತುಗಳಿಗೆ ಪಾತ್ರವಾಗಿದೆ. ಪಾವನ ಕ್ಷೇತ್ರವಾಗಿಯೂ ಶಾಂತಿ ಸಮಾಧಾನಕ್ಕೆ ಹೆಸರಾಗಿದೆ. ಸಮುದಾಯ ಸೌಹಾರ್ದದ ಕೇಂದ್ರವಾಗಿದೆ. ಶ್ರೀಸಾಮಾನ್ಯರ ಆಶಾಕೇಂದ್ರವಾಗಿಯೂ ಹೊರಹೊಮ್ಮಿದೆ.

ರಮ್ಯಮನೋಹರ ತಾಣ

ಎಲ್ಲಕಾಲಕ್ಕೂ ನೀರಿನಿಂದ ತುಂಬಿರುವ ಪುಷ್ಕರಣಿ ಇಲ್ಲಿದೆ. ವಿವಿಧ ಕಡೆಗಳಿಂದ ಬರುವ ಭಕ್ತರು ಅದರ ನೀರನ್ನು ರ್ಸ³ಸಿ, ತಲೆ ಮೇಲೆ ಸಿಂಪಡಿಸಿಕೊಳ್ಳುತ್ತಾರೆ. ಮನೆಗೂ ಒಯ್ಯುತ್ತಾರೆ. ತಪಸ್ಸಿನ ಕಾಲದಲ್ಲಿ ಕ್ರೈಸ್ತ ಭಕ್ತರು ಪವಿತ್ರಾಲಯದ ಪಕ್ಕದಲ್ಲಿರುವ ಪರ್ಪಲೆ ಗುಡ್ಡದ ಮೇಲಿರುವ ಶಿಲುಬೆಯನ್ನು ಸಂದರ್ಶಿಸುತ್ತಾರೆ. ಕೆಳಗಡೆ ಟಿಪ್ಪೂ ಕಾಲದ ಎರಡು ಗುಹೆಗಳಿವೆ. ಸುಮಾರು ಒಂದು ಎಕರೆ ವಿಸ್ತೀರ್ಣದಲ್ಲಿ ನೆಲೆಗೊಂಡಿರುವ ಈ ದೇಗುಲವು ಪ್ರಕೃತಿದತ್ತವಾದ ರಮ್ಯ ಮನೋಹರ ತಾಣ.

ಉತ್ಸವದ ಸಮಯ

ಟಿಪ್ಪೂವಿನ ಆಕ್ರಮಣದ ಬಳಿಕ ಮರಳಿ ಬಂದ ಕ್ರೈಸ್ತ ಸಮುದಾಯದವರಿಗೆ ಉಂಡುಟ್ಟು ಬಾಳಲು ಸ್ವಂತವಾದ ನೆಲೆ ಇಲ್ಲದೆ ಹೋದಾಗ ಅವರಲ್ಲಿ ಅನೇಕರು ಕೆಲಸ ಹುಡುಕುತ್ತಾ ಪಶ್ಚಿಮಘಟ್ಟಗಳ ಕಡೆ ಹೋದರು. ಕಾಫಿ ತೋಟಗಳಲ್ಲೋ ಇತರೆಡೆಗಳಲ್ಲೋ ಬದುಕು ಕಂಡುಕೊಂಡ ಅವರಿಗೆ ಸಂತ ಲಾರೆನ್ಸರ ದರ್ಶನದ ನೆಪದಲ್ಲಿ ವರ್ಷಕ್ಕೊಮ್ಮೆಯಾದರೂ ಊರಿಗೆ ಬರುವ ಅವಕಾಶ ಬೇಕಾಗಿತ್ತು. ಬಂಧುಬಳಗವನ್ನೆಲ್ಲ ಭೇಟಿಯಾಗುವುದು ಒಂದು ನೆಪವಾದರೆ ಸಂತ ಲಾರೆನ್ಸರ ದರ್ಶನ ಇನ್ನೊಂದು ಉದ್ದೇಶ. ವಾರ್ಷಿಕ ಜಾತ್ರೆಯು ಎಲ್ಲರಿಗೂ ಊರಿಗೆ ಬರುವುದಕ್ಕೆ ಅನುಕೂಲಕರವಾದ ಸಮಯವಾಗಿರಬೇಕು ಎಂಬ ಉದ್ದೇಶದಿಂದ ಜನವರಿ ಕೊನೆಯ ಮಂಗಳವಾರ, ಬುಧವಾರ ಹಾಗೂ ಗುರುವಾರದಂದು ಜಾತ್ರೆಯ ದಿನ ನಿಗದಿಪಡಿಸಲಾಯಿತು. ಅತ್ತೂರು ಕ್ಷೇತ್ರವು ಉಡುಪಿ ಧರ್ಮಕ್ಷೇತ್ರದ ಆಡಳಿತಕ್ಕೆ ಒಳಪಟ್ಟನಂತರ ಮೂರು ದಿನಗಳ ಜಾತ್ರೆಯನ್ನು ಐದು ದಿನಗಳಿಗೆ ವಿಸ್ತರಿಸಲಾಯಿತು. ಈಗ ಜಾತ್ರಾ ಮಹೋತ್ಸವವು ಭಾನುವಾರ ಆರಂಭವಾಗಿ ಗುರುವಾರ ಸಂಪನ್ನಗೊಳ್ಳುತ್ತದೆ. ಅತ್ತೂರು ಜಾತ್ರೆಗೆ ದೇಶವಿದೇಶಗಳಿಂದ ಲಕ್ಷಗಟ್ಟಲೆ ಭಕ್ತರು ಬಂದು, ಪವಿತ್ರ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಪಶ್ಚಾತ್ತಾಪಗೈವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾರೆ. ಕ್ಯಾಂಡಲ್ ಉರಿಸಿ ಭಕ್ತಿನಿರ್ಭರತೆಯಿಂದ ಪ್ರಾರ್ಥಿಸುತ್ತಾರೆ.

| ಫಾದರ್ ಚೇತನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net