ಕರೊನಾ ಕರಾಳ ಕತ್ತಲಿನಲ್ಲಿ ಕೊನೆಗೂ ಕೋಲ್ಮಿಂಚು

Column F
Published on
ಮಾನವಕುಲ ಕರೊನಾ ಮಹಾಮಾರಿಯೊಂದಿಗೆ ಸೆಣಸುತ್ತ ಬದುಕಲಾರಂಭಿಸಿ ಎರಡು ವರ್ಷಗಳಾದುವು. ಅದು ಈಗಾಗಲೇ ಐವತ್ತೆರಡು ಲಕ್ಷ ಜೀವಗಳನ್ನು ಬಲಿತೆಗೆದುಕೊಂಡಿದೆ, 2.67 ಕೋಟಿ ಜನರು ಈಗಲೂ ಅದರ ನಖಗಳಿಗೆ ಸಿಲುಕಿ ನರಳುತ್ತಿದ್ದಾರೆ. ನಮ್ಮ ಪುರಾಣಕಥೆಗಳಲ್ಲಿ ಬರುವ ಮಾಯಾವಿ ರಾಕ್ಷಸರಂತೆ ಮತ್ತೆಮತ್ತೆ ರೂಪ ಬದಲಿಸಿ ಹೆದರಿಸುತ್ತಿರುವ ಈ ವೈರಸ್ ಜತೆ ಇನ್ನೆಷ್ಟು ವರ್ಷಗಳು ಹೀಗೆ ಗುದ್ದಾಡುವುದು ಅಂತ ನಿಖರವಾಗಿ ಹೇಳಲಾಗುತ್ತಿಲ್ಲ. ಆದರೆ ವೈರಸ್​ನ ರೂಪಾಂತರಿಗಳು ಪ್ರದರ್ಶಿಸುತ್ತಿರುವ ಗುಣಲಕ್ಷಣಗಳು ಮತ್ತು ಅವುಗಳಿಗೆ ವೈದ್ಯಕೀಯವಾಗಿ ಜಗತ್ತು ಪ್ರತಿಕ್ರಿಯಿಸುತ್ತಿರುವ ಬಗೆಯ ಆಧಾರಗಳ ಮೇಲೆ ಮುಂದಿನ ವರ್ಷ ಮಹಾಮಾರಿ ಹೇಗಿರಬಹುದೆಂಬ ಒಂದು ಸ್ಥೂಲ ಚಿತ್ರಣ ಕಟ್ಟಿಕೊಳ್ಳಲು ನಮಗೀಗ ಸಾಧ್ಯವಿದೆ. ಬನ್ನಿ, ಆ ಪ್ರಯತ್ನವನ್ನೀಗ ಮಾಡೋಣ.

ಮೊದಲಿಗೆ ಒಂದಿಷ್ಟು ಸಂಕ್ಷಿಪ್ತ ಇತಿಹಾಸ. ಬಾವಲಿ ಕರೊನಾವೈರಸ್ ಈ ಜಗತ್ತಿನಲ್ಲಿ ಕೊನೇಪಕ್ಷ ಹತ್ತು ಲಕ್ಷ ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಆದರೆ ಅದು ಮನುಕುಲಕ್ಕೆ ಮಾರಕವಾಗುವ ಅವತಾರವೆತ್ತಿದ್ದು ಇತ್ತೀಚೆಗೆ. ಅದಾದದ್ದು ಹೇಗೆ ಎಂದು ‘ಕಂಡುಹಿಡಿದು’ ನಮಗೆ ಹೇಳಬಲ್ಲ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಓ) ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ, ಮಾಡುತ್ತಲೂ ಇಲ್ಲ. ಇಂತಹ ಸ್ಥಿತಿಯಲ್ಲಿ ನಮಗಿರುವ ಮಾರ್ಗವೆಂದರೆ ಲಭ್ಯವಿರುವ ಕೆಲವು ಸಾಂರ್ದಭಿಕ ಸಾಕ್ಷ್ಯಗಳ ಮೂಲಕ ಒಂದು ಅಸ್ಪಷ್ಟ ಚಿತ್ರವನ್ನಾದರೂ ಕಟ್ಟಿಕೊಳ್ಳುವುದು.

ಚೀನಾ ಹೇಳಿದ್ದು ಕರೊನಾವೈರಸ್​ನ ಮೊದಲ ರೋಗಿ ವೂಹಾನ್ ನಗರದ ಆಸ್ಪತ್ರೆಯಲ್ಲಿ ಪತ್ತೆಯಾದದ್ದು 2019 ನವೆಂಬರ್ 17ರಂದು, ವೈರಸ್ ಉಗಮಿಸಿದ್ದು ಅದೇ ನಗರದ (ಸಜೀವ) ಮಾಂಸ ಮಾರುಕಟ್ಟೆಯಿಂದ ಅಂತ. ಅದಾವುದೂ ನಂಬಲರ್ಹವೆನಿಸುತ್ತಿಲ್ಲ. ಚೀನೀ ಕಮ್ಯೂನಿಸ್ಟ್ ಸರ್ಕಾರದ ಅಸಹಕಾರ, ಡಬ್ಲು್ಯಎಚ್​ಓದ ಅಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತ ರಾಷ್ಟ್ರಗಳ ಸ್ವಾರ್ಥಪರ ನಿರ್ವೀರ್ಯತೆಯಿಂದಾಗಿ ‘ಅಧಿಕೃತ ತನಿಖೆ’ ಸಾಧ್ಯವಿಲ್ಲದ ಕಾರಣ ಕೆಲವು ‘ಅನಧಿಕೃತ’ ತನಿಖಾವರದಿಗಳ ಆಧಾರದ ಮೇಲೆ ನಾವೆಲ್ ಕರೊನಾವೈರಸ್​ನ ಜಾತಕವನ್ನು ಗುರುತಿಸಹೊರಟರೆ ಅನಾವರಣಗೊಳ್ಳುವ ವಿವರಗಳು ನಮ್ಮನ್ನು ಗಾಬರಿಗೊಳಿಸುತ್ತವೆ. 2011-12ರ ಸಮಯದಲ್ಲಿ ದಕ್ಷಿಣ ಚೀನಾದ ಯುನಾನ್ ಪ್ರಾಂತ್ಯದ ಆಳ ಕಲ್ಲಿದ್ದಲು ಗಣಿಯೊಂದರಲ್ಲಿ ಐದಾರು ಗಣಿ ಕಾರ್ವಿುಕರು ‘ಗುರುತಿಸಲಾಗದ ರೋಗಲಕ್ಷಣ’ಗಳಿಂದಾಗಿ ಮರಣ ಹೊಂದಿದಾಗ ಅವರ ಶ್ವಾಸಾಂಗಗಳನ್ನು ಪರೀಕ್ಷಿಸಿದ ಚೀನೀ ವೈದ್ಯರಿಗೆ ಸಿಕ್ಕಿದ್ದು ಮನುಷ್ಯನಿಗೆ ಮಾರಕವಾಗಿ ರೂಪಾಂತರಗೊಂಡಿದ್ದ ಕರೊನಾವೈರಸ್. ನಂತರ ಅದರ ಬಗ್ಗೆ ಚೀನೀ ಕಮ್ಯೂನಿಸ್ಟ್ ಪಕ್ಷದ (ಸಿಸಿಪಿ) ಸರ್ಕಾರ ಮತ್ತದರ ಅಂಗ ಪೀಪಲ್ಸ್ ಲಿಬರೇಷನ್ ಆರ್ವಿುಯ (ಪಿಎಲ್​ಓ) ಆದೇಶಗಳ ಮೇಲೆ ವೂಹಾನ್ ನಗರದಲ್ಲಿನ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯ ಪಿ-4 ಲ್ಯಾಬ್​ನಲ್ಲಿ ಪ್ರಯೋಗಗಳನ್ನು ಕೈಗೊಂಡದ್ದು ಬಾವಲಿ ಕರೊನಾವೈರಸ್ ವಿಷಯದಲ್ಲಿ ಹೆಸರು ಮಾಡಿರುವ ಮತ್ತು ಅದರಿಂದಾಗಿಯೇ ‘ಬ್ಯಾಟ್​ವುಮನ್’ ಎಂದು ಕರೆಯಲ್ಪಡುವ ಡಾ. ಶಿ ಜೆಂಗ್​ಲಿ ಮತ್ತಾಕೆಯ ನೇತೃತ್ವದ ಸಂಶೋಧಕರ ತಂಡ. ಇದು ಸೂಚಿಸುವುದು ಗಣಿಕಾರ್ವಿುಕರನ್ನು ಬಲಿ ತೆಗೆದುಕೊಂಡ ವೈರಸ್ ಅನ್ನು ಇತರ ದೇಶಗಳ (ಅಂದರೆ ಮುಖ್ಯವಾಗಿ ಭಾರತ, ಜಪಾನ್ ಮತ್ತು ಅಮೆರಿಕ) ವಿರುದ್ಧ ಜೈವಿಕ ಅಸ್ತ್ರವಾಗಿ ಬಳಸಬಹುದಾದ ಸಾಧ್ಯತೆಯನ್ನು ಚೀನೀ ಕಮ್ಯೂನಿಸ್ಟ್ ಸರ್ಕಾರ ಹುಡುಕತೊಡಗಿತು ಎಂದರ್ಥ. ಅದರ ಕರಾಳ ಅಭೀಷ್ಟೆ ಮತ್ತು ‘ವಿಜ್ಞಾನಿ’ (?) ಶಿ ಜೆಂಗ್​ಲಿಯ ಸಂಶೋಧನೆ ಫಲಕಾರಿಯಾದದ್ದು 2019ರಲ್ಲಿ.

ಆ ವರ್ಷದ ಅಕ್ಟೋಬರ್ 6ರ ಸಂಜೆಯಿಂದ 11ರ ಸಂಜೆಯವರೆಗೆ ವೂಹಾನ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಯ ಸುತ್ತಲೂ ಜನ ಮತ್ತು ವಾಹನ ಸಂಚಾರ ಸಂಪೂರ್ಣವಾಗಿ ಮಾಯವಾದದ್ದು ಉಪಗ್ರಹಗಳ ಚಿತ್ರಗಳಲ್ಲಿ ದಾಖಲಾಗಿರುವುದರಿಂದ ಅಕ್ಟೋಬರ್ 6ರಂದು ಅಲ್ಲೇನೋ ಅನಾಹುತ ಘಟಿಸಿದೆ ಎಂಬ ಊಹೆಗೆ ಅವಕಾಶವಾಗುತ್ತದೆ. ಅದು ಲ್ಯಾಬ್​ನಿಂದ ಕರೊನಾವೈರಸ್ ಆಕಸ್ಮಿಕವಾಗಿ ಹೊರಬಿದ್ದದ್ದೇ ಇರಬೇಕು. ಹೀಗಾಗಿಯೇ ಅದು ಜನರಿಗೆ ಹರಡಬಾರದೆಂದು ಸಂಸ್ಥೆಯ ಸುತ್ತಲಿನ ಪ್ರದೇಶವನ್ನು ಸಾರ್ವಜನಿಕರಿಂದ ಮುಕ್ತಗೊಳಿಸಲಾಗಿದ್ದಿರಬೇಕು. ಸಾರ್ಸ್ ವೈರಸ್ 2003ರಲ್ಲಿ ರಾಜಧಾನಿ ಬೀಜಿಂಗ್​ನಲ್ಲೇ ಇರುವ ಲ್ಯಾಬ್ ಒಂದರಿಂದ ಹೊರಬಿದ್ದ ಉದಾಹರಣೆ ಜಗತ್ತಿನ ಮುಂದಿರುವುದರಿಂದ ಚೀನಾದ ಇತರೆಡೆಗಳಲ್ಲಿನ ಮುಖ್ಯವಾಗಿ ವೂಹಾನ್ ನಗರದ ಲ್ಯಾಬ್​ಗಳಿಂದಲೂ ಅಂತಹ ಮಾರಕ ವೈರಸ್​ಗಳು ಹೊರಬರುವ ಸಾಧ್ಯತೆ ಇದ್ದೇ ಇತ್ತು. (ಇನ್ನು ಮುಂದೆಯೂ ಇರುತ್ತದೆ!) ಇಷ್ಟಾಗಿಯೂ, ನಾವೆಲ್ ಕರೊನಾವೈರಸ್​ನ ಉಗಮವನ್ನು ಕನಿಷ್ಟ ನಾಲ್ಕು ತಿಂಗಳಷ್ಟು ಹಿಂದಕ್ಕೆ ಕೊಂಡೊಯ್ಯಲೂ ಅವಕಾಶವಿದೆ. ಆ ವರ್ಷದ ಬೇಸಿಗೆಯಲ್ಲಿ ವೂಹಾನ್ ನಗರದ ಆಸ್ಪತ್ರೆಗಳು ಅಸಹಜ ಎನಿಸುವಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್​ಗಳನ್ನು ಪಡೆದುಕೊಳ್ಳತೊಡಗಿದ್ದವು! ಅಂದರೆ ಆಗಲೇ ‘ಏನೋ’ ಆಗತೊಡಗಿತ್ತು!

ಆಮೇಲೆ ವೂಹಾನ್ ನಗರದ ಹಸಿ ಮಾರುಕಟ್ಟೆಯಿಂದ ವೈರಸ್ ಬಂತು ಎಂದು ಚೀನೀ ಸರ್ಕಾರ ಹೇಳಿದರೂ, ‘ನಿಜವಾದ’ ಮೊದಲ ರೋಗಿ ಡಾ ಶಿ ಜೆಂಗ್​ಲಿಯವರ ಸಹಾಯಕಿ ಇಪ್ಪತ್ತಾರು ವರ್ಷಗಳ ಹುವಾಂಗ್ ಯಾಂಗ್​ಲಿಂಗ್ ಎಂಬಾಕೆ ಎನ್ನುವುದು ಬಹುತೇಕ ಸಿದ್ಧವಾಗಿಹೋಗಿರುವ ವಿಷಯ. ಕರೊನಾವೈರಸ್ ಜನರಿಂದ ಜನರಿಗೆ ಹರಡುತ್ತದೆ ಎಂಬ ಘಾತಕ ಮಾಹಿತಿ ಅಧ್ಯಕ್ಷ ಷಿ ಜಿನ್​ಪಿಂಗ್​ಗೆ 2020ರ ಜನವರಿ 7ರಂದೇ ತಲುಪಿದರೂ ಅದನ್ನವರು ಎರಡು ವಾರಗಳ ಕಾಲ ಜಗತ್ತಿನಿಂದ ಮುಚ್ಚಿಟ್ಟದ್ದು, ಕೊನೆಗೆ ಹೇಳದೇ ಇರಲಾಗದ ಸ್ಥಿತಿ ಬಂದಾಗ ಜನವರಿ 21ರಂದು ಹೇಳಿ, ಮುಂದಿನ ಎರಡೇ ದಿನಗಳಲ್ಲಿ ವೂಹಾನ್ ನಗರವೂ ಸೇರಿದಂತೆ ಇಡೀ ಹುಬೈ ಪ್ರಾಂತ್ಯವನ್ನು ಲಾಕ್​ಡೌನ್​ಗೊಳಪಡಿಸಿದ್ದು, ವೂಹಾನ್ ನಗರದಿಂದ ದೇಶದ ಇತರ ಭಾಗಗಳಿಗೆ ಎಲ್ಲ ಬಗೆಯ ಸಂಪರ್ಕವನ್ನು ಕತ್ತರಿಸುತ್ತಲೇ ಜಗತ್ತಿನ ವಿವಿಧ ನಗರಗಳ ಜತೆ ವಿಮಾನ ಸಂಪರ್ಕ ಜಾರಿಯಲ್ಲಿರುವಂತೆ ನೋಡಿಕೊಂಡು ಇಡೀ ಜಗತ್ತಿಗೆ ವೈರಸ್ ಹರಡುವಂತೆ ‘ವ್ಯವಸ್ಥೆ’ ಮಾಡಿದ್ದು, ಮಹಾಮಾರಿಯ ವಿರುದ್ಧ ತರಾತುರಿಯಲ್ಲಿ ಸೆಣಸತೊಡಗಿದ ದೇಶಗಳಿಗೆ ಕಳಪೆ ಹಾಗೂ ಸೋಂಕುಪೂರಿತ ವೈದ್ಯಕೀಯ ಸರಂಜಾಮುಗಳನ್ನು ರಫ್ತುಮಾಡಿ ಸೋಂಕುಪ್ರಸರಣ ತಡೆಯುವಲ್ಲಿ ಜಗತ್ತು ವಿಫಲವಾಗುವಂತೆ ಮಾಡಿದ್ದು- ಇದೆಲ್ಲವೂ ನಮಗೆ ಗೊತ್ತೇ ಇವೆ. ಈ ಬಗ್ಗೆ ಪೂರ್ಣ ತನಿಖೆಯಾಗಿ, ಚೀನೀ ಕಮ್ಯೂನಿಸ್ಟ್ ಸರ್ಕಾರ ಮುಖ್ಯವಾಗಿ ಅದರ ಅಧ್ಯಕ್ಷನ ವಿರುದ್ಧ ನಾಜಿ ನರಹಂತಕರ ವಿರುದ್ಧ ಆದಂತಹ ನ್ಯೂರೆಂಬರ್ಗ್ ಮಾದರಿಯ ವಿಚಾರಣೆ ನಡೆದರೆ ಇನ್ನೆಷ್ಟು ಭಯಾನಕ ವಿಷಯಗಳು ಹೊರಬರುತ್ತವೋ!

ಚೀನೀ ಕಮ್ಯೂನಿಸ್ಟ್ ಸರ್ಕಾರದ ಅಮಾನವೀಯ ಕುತಂತ್ರಗಳೇನೇ ಇರಲಿ, ಜಗತ್ತು ಕರೊನಾವೈರಸ್ ವಿರುದ್ಧ ಹೋರಾಡುವುದನ್ನು ಜೀವನ್ಮರಣದ ಪ್ರಶ್ನೆಯಾಗಿ ತೆಗೆದುಕೊಂಡಿತು, ಜಯಿಸಲೇಬೇಕೆಂಬ ಛಲವನ್ನು ಮೂಡಿಸಿಕೊಂಡಿತು. ಪರಿಣಾಮ ಅತ್ಯದ್ಭುತ ಹಾಗೂ ಅಭೂತಪೂರ್ವ. ಇದು ಅರಿವಾಗಬೇಕಾದರೆ ಇತರ ಸಾಂಕ್ರಾಮಿಕ ರೋಗಗಳ ಬಗೆಗಿನ ನಮ್ಮ ‘ಯುದ್ಧ’ದ ಫಲಿತಾಂಶಗಳ ಸೂಕ್ಷ್ಮ ಪರಿಚಯ ಅಗತ್ಯ.

ನಾಲ್ಕು ದಶಕಗಳ ಹಿಂದೆಯೇ ಬಂದ ಏಯ್್ಡ ್ಸ ರೋಗಕ್ಕೆ ಮದ್ದು ಕಂಡುಹಿಡಿಯುವುದು ನಮಗಿನ್ನೂ ಸಾಧ್ಯವಾಗಿಲ್ಲ. ಅದರ ವಿಷಯದಲ್ಲಿ ಸದ್ಯಕ್ಕಿನ್ನೂ ನಮಗಿರುವ ಏಕೈಕ ಮಾರ್ಗ ‘ಎಚ್ಚರಿಕೆ ತಗೊಂಡು, ಹೇಗೋ ಅಡ್ಜಸ್ಟ್ ಮಾಡಿಕೊಂಡು ಅದರ ಜತೆ ಬದುಕುವುದು’ ಅಷ್ಟೇ. 2003ರಲ್ಲಿ ಬಂದ ಸಾರ್ಸ್ ವೈರಸ್​ಗೆ ಲಸಿಕೆ ಕಂಡುಹಿಡಿಯಲಾಗಿಲ್ಲ. ಅದೆಲ್ಲ ಇರಲಿ, ಸಿಡುಬಿನ ಲಸಿಕೆಯ ಹೊರತಾಗಿ ಇನ್ನಾವ ಸಾಂಕ್ರಾಮಿಕ ರೋಗಕ್ಕೂ ನಾವು ಲಸಿಕೆ ಕಂಡುಹಿಡಿಯಲಾಗಿಲ್ಲ. ಅವುಗಳ ಜತೆ ಎಚ್ಚರಿಕೆಯಿಂದ ಬದುಕುವುದನ್ನು ನಾವು ಕಲಿತುಕೊಂಡಿದ್ದೇವೆ. ಆದರೆ ನಾವೆಲ್ ಕರೊನಾವೈರಸ್ ನಾವು ನಮ್ಮ ಪಾಡಿಗೆ ‘ಸುಮ್ಮನಿದ್ದರೂ’ ಬಂದು ಅಮರಿಕೊಳ್ಳುತ್ತದೆ. ಸಾರ್ಸ್, ಎಬೋಲಾ, ಎಚ್1ಎನ್1 ಮುಂತಾದ ಹಲವು ಹತ್ತು ವೈರಸ್​ಗಳು ಒಂದಷ್ಟು ಕಾಲ ಸಣ್ಣದಾಗಿ ಆರ್ಭಟಿಸಿ ತಣ್ಣಗಾಗಿಹೋಗಿವೆ. ಆದರೆ ಈ ನಾವೆಲ್ ಕರೊನಾವೈರಸ್ ದಾಹವನ್ನು ತಣಿಸಿಕೊಳ್ಳಲೇ ಇಲ್ಲ. ಹೀಗಾಗಿ ಇದನ್ನು ‘ಸುಮ್ಮನೆ ಬಿಡುವುದು’ ಸಾಧ್ಯವೇ ಇಲ್ಲ ಎಂದು ನಿರ್ಧರಿಸಿದ ಜಗತ್ತು ಪರಿಹಾರಗಳನ್ನು ಮಾನವಕುಲ ಹಿಂದೆಂದೂ ಕಂಡರಿಯದ ಮಟ್ಟದಲ್ಲಿ ಹುಡುಕತೊಡಗಿತು. ಪರಿಣಾಮವಾಗಿ ಇಂದು ಏಳು ಲಸಿಕೆಗಳು ನಮಗೆ ಲಭ್ಯವಿವೆ, ಇನ್ನೂ ಐದು ಸದ್ಯದಲ್ಲೇ ಸಿಗಲಿವೆ. ಪೋಲಿಯೋ ಲಸಿಕೆ ತಯಾರಾಗಲು ಇಪ್ಪತ್ತು ವರ್ಷಗಳು ಹಿಡಿದಿತ್ತು.

ಈವರೆಗೆ ಮೂವತ್ತಾರು ದೇಶಗಳು ತಮ್ಮ ಜನರಿಗೆ ಬೂಸ್ಟರ್ ಡೋಸ್​ಗಳನ್ನೂ ನೀಡತೊಡಗಿವೆ! ಈಗ ತಿಂಗಳಿಗೆ 150 ಕೋಟಿಯಷ್ಟಿರುವ ವ್ಯಾಕ್ಸಿನ್ ಉತ್ಪಾದನೆ 2022ರಲ್ಲಿ 450 ಕೋಟಿಗೇರಲಿದೆ. ಇದರರ್ಥ ಮುಂದಿನ ವರ್ಷಾಂತ್ಯಕ್ಕೆ ಮೊದಲೇ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಲಸಿಕೆಗಳು ನಮ್ಮಲ್ಲಿರುತ್ತವೆ. ಜತೆಗೆ ಕೋವಿಡ್ ಲಕ್ಷಣಗಳ ವಿರುದ್ಧ ಹೋರಾಡಲು ನಮಗೆ ಗುಳಿಗೆಗಳೂ ಸಿಗಲಿವೆ. ಅಂತಹ ಒಂದು ಗುಳಿಗೆಯಾದ ‘ಮೋಲ್​ನ್ಯೂಪೈರಾವಿರ್’ನ ಬಳಕೆಗೆ ಈಗಾಗಲೇ ಕೆಲವು ದೇಶಗಳು ಅನುಮತಿ ನೀಡಿವೆ. ಈ ತಿಂಗಳ ಅಂತ್ಯಕ್ಕೇ ಒಂದು ಕೋಟಿಯಷ್ಟು ಈ ಗುಳಿಗೆಗಳು ಜಾಗತಿಕವಾಗಿ ಮಾರುಕಟ್ಟೆಗೆ ಬರಲಿವೆಯಂತೆ.

ಮಾನವಕುಲದ ಸಂಘಟಿತ ಹೋರಾಟದ ಜತೆಗೆ ಪ್ರಕೃತಿಸಹಜ ಪ್ರಕ್ರಿಯೆಯಾಗಿ ಮನುಷ್ಯರಲ್ಲಿ ವೇಗವಾಗಿ ವೃದ್ಧಿಸುತ್ತಿರುವ ಪ್ರತಿರೋಧಕ ಶಕ್ತಿ ಕರೊನಾಮಾರಿಯನ್ನು ತಣ್ಣಗಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇನ್ನೊಂದು ಸಹಜ ಪ್ರಕ್ರಿಯೆಯಾಗಿ ವೈರಸ್​ನ ಬದಲಾಗುತ್ತಿರುವ ಸ್ವಭಾವವೂ ಆಶಾಭಾವನೆ ಉಂಟುಮಾಡುತ್ತಿದೆ. ಎಲ್ಲ ವೈರಸ್​ಗಳೂ ನಿಧಾನವಾಗಿ ಮಾರಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತ ಹೋಗುತ್ತವೆ. ಅಂದರೆ ಅವು ನಮಗಂಟಿದರೂ ಸಣ್ಣಪ್ರಮಾಣದ ಅಸ್ವಸ್ಥತೆಯನ್ನುಂಟುಮಾಡಿ ನಮ್ಮನ್ನು ಒಂದೆರಡು ದಿನ ಮನೆಯಲ್ಲೇ ಕೂರಿಸುವುದಕ್ಕಿಂತ ಹೆಚ್ಚಿನ ಹಾನಿಯನ್ನೇನೂ ಮಾಡಲಾರವು. ಈ ಪ್ರಕ್ರಿಯೆಯಿಂದ ನಾವೆಲ್ ಕರೊನಾವೈರಸ್ ಸಹ ತಪ್ಪಿಸಿಕೊಳ್ಳಲಾರದು. ಆದರೆ ಇತರ ವೈರಸ್​ಗಳಿಗಿಂತ ಈ ವೈರಸ್​ನಲ್ಲಿ ಈ ಪ್ರಕ್ರಿಯೆ ನಿಧಾನವಾಗಿರುವುದು ಇದು ನೈಸರ್ಗಿಕವಾಗಿ ಸೃಷ್ಟಿಯಾಗದೇ ಮನುಷ್ಯನ ಕೈವಾಡದಿಂದ ಲ್ಯಾಬ್​ನಲ್ಲಿ ಉತ್ಪತ್ತಿಯಾಗಿರುವುದರಿಂದಾಗಿ. ಆದಾಗ್ಯೂ, ಡೆಲ್ಟಾ ರೂಪಾಂತರದಲ್ಲಿ ಮಾರಕ ಶಕ್ತಿಯ ಉತ್ತುಂಗವನ್ನು ತಲುಪಿದ ವೈರಸ್​ನ ರಣದಾಹವನ್ನು ಎರಡನೆಯ ಅಲೆಯಲ್ಲಿ ನಮ್ಮ ದೇಶದಲ್ಲೇ ಕಂಡಿದ್ದೇವೆ. ಆದರೆ ಪ್ರಸಕ್ತ ಒಮಿಕ್ರಾನ್ ರೂಪಾಂತರದಲ್ಲಿ ವೈರಸ್ ತನ್ನ ಶಕ್ತಿಯಲ್ಲಿ ಗಣನೀಯ ಇಳಿಮುಖ ಕಾಣುತ್ತಿದೆ.

ಡೆಲ್ಟಾಗಿಂತಲೂ ಐದು ಪಟ್ಟು ವೇಗವಾಗಿ ಹರಡಬಲ್ಲುದಾದರೂ ಒಮಿಕ್ರಾನ್​ನ ಮಾರಕಶಕ್ತಿ ಬಹಳ ಕಡಿಮೆ. ಡೆಲ್ಟಾ ಅಥವಾ ಇತರ ಹಿಂದಿನ ರೂಪಾಂತರಗಳಂತೆ ಇದು ರುಚಿಗ್ರಹಣಕ್ಕೆ ಅಡ್ಡಿಯಾಗುವುದಿಲ್ಲ, ಮುಖ್ಯವಾಗಿ ಶ್ವಾಸವ್ಯವಸ್ಥೆಗೆ ಮಾರಕ ಹಾನಿಯೆಸಗುವುದಿಲ್ಲ ಮತ್ತು ಆಮ್ಲಜನಕ ಮಟ್ಟವನ್ನೂ ಅಪಾಯಕಾರಿ ಮಟ್ಟಕ್ಕೆ ಕುಗ್ಗಿಸುವುದಿಲ್ಲ. ತಲೆ ಮತ್ತು ಮೈಕೈ ನೋವಾಗುತ್ತದಷ್ಟೇ. ಅಂದರೆ ಕೋವಿಡ್-19 ಈಗ ನೆಗಡಿಯ ಹಂತಕ್ಕಿಳಿಯತೊಡಗಿದೆ!

ನೆಗಡಿಯ ವೈರಸ್ ಸಹ ಪುರಾತನ ಕಾಲದಲ್ಲಿ ಮೊದಲಬಾರಿಗೆ ಮನುಷ್ಯನಿಗೆ ಬಂದಾಗ ಚೆಂಗೀಜ್ಖಾನ್​ನ ಸೇನೆಯಂತೆ ಸಿಕ್ಕಿದವರನ್ನೆಲ್ಲ ಕೊಂದಿರಬಹುದು. ಆದರೆ ಅದೂ ಬಲಹೀನಗೊಳ್ಳುತ್ತ ಬಂದು ಇಂದು ಯಾವ ಸ್ಥಿತಿ ತಲುಪಿದೆಯೆಂದು ನಿಮಗೇ ವರ್ಷಕ್ಕೊಮ್ಮೆಯಾದರೂ ಅನುಭವವಾಗುತ್ತಿದೆ. ಈಗ ನೆಗಡಿಯ ಇನ್ನೂರಕ್ಕಿಂತಲೂ ಹೆಚ್ಚು ವೈರಸ್​ಗಳಿದ್ದರೂ ಅವ್ಯಾವುವೂ ನಮ್ಮ ಪ್ರಾಣದ ಬಲಿ ಕೇಳುವುದಿಲ್ಲ. ಹಾಗೆಯೇ ನಾವೆಲ್ ಕರೊನಾವೈರಸ್ ಸಹ ನೆಗಡಿಯಂತೇ ‘ಔಷಧ ತಗೋಳದೇ ಇದ್ದರೆ ಏಳು ದಿನ ಕಾಡುತ್ತೆ, ಔಷಧ ತಗೊಂಡರೆ ಒಂದೇ ವಾರದಲ್ಲಿ ಬಿಟ್ಟು ಓಡುತ್ತೆ’ ಎಂದು ನಾವು ನೆಮ್ಮದಿಯಾಗಿರುವ ದಿನ ಬರುತ್ತದೆ.

ಆದರೆ ಅಂತಹ ದಿನ ನಾಳೆಯೇ ಬರುವುದಿಲ್ಲ. ಇದು ಹಂತಹಂತವಾಗಿ ಜರುಗುವ ಪ್ರಕ್ರಿಯೆ. ಇನ್ನೂ ಪೈ, ರ್ಹೋ, ಸಿಗ್ಮಾ, ಟಾವ್... ಒಮೆಗಾ ರೂಪಾಂತರಗಳು ಬಂದು ನಂತರದವಕ್ಕೆ ನಾಮಕರಣ ಮಾಡಲು ನಾವು ಗ್ರೀಕ್ ಅಕ್ಷರಮಾಲೆಯಿಂದಾಚೆಗೂ ಹೋಗಬೇಕಾಗಬಹುದು. ಅದಾಗಲು ಇನ್ನು ಎರಡುಮೂರು ವರ್ಷಗಳಾದರೂ ಬೇಕಾಗುತ್ತವೆ. ಅಲ್ಲಿಯವರೆಗೆ ಮರೆಯದಿರಿ- ದೋ ಗಜ್ ಕೀ ದೂರಿ, ಮಾಸ್ಕ್ ಹೈ ಜರೂರಿ.

ಕೊನೆಯ ಮಾತು: ವೂಹಾನ್ ಲ್ಯಾಬ್​ನಲ್ಲಿ 1,500ಕ್ಕಿಂತಲೂ ಹೆಚ್ಚಿನ ಮಾರಕ ವೈರಸ್​ಗಳ ಸಂಗ್ರಹವಿದೆ. ಅವೆಲ್ಲವನ್ನೂ ಒಂದೊಂದಾಗಿ ಹೊರಬಿಡದಂತೆ ದುರುಳ ಚೀನೀ ಕಮ್ಯೂನಿಸ್ಟ್ ಸರ್ಕಾರದ ಕೈಗಳನ್ನು ಕಟ್ಟಿಹಾಕುವ ಜವಾಬ್ದಾರಿ ನಾಗರಿಕ ಜಗತ್ತಿನದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net