

ದೇಶವು 1950ರ ಜನವರಿ 26ರಂದು ಸಂವಿಧಾನವನ್ನು ಅಳವಡಿಸಿಕೊಂಡಿತು. ಇದಕ್ಕೆ ಒಂದು ದಿನ ಮೊದಲು, ಅಂದರೆ 1950ರ ಜನವರಿ 25ರಂದು ಭಾರತೀಯ ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು. ಆ ದಿನವನ್ನು ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಇನ್ನಿತರೆ ಚುನಾವಣೆಗಳನ್ನು ನಡೆಸುವ ಹೊಣೆಯನ್ನು ಕೇಂದ್ರ ಚುನಾವಣಾ ಆಯೋಗ ನಡೆಸಿಕೊಂಡು ಬಂದಿದೆ. ಉದಾ- 2019ರ ಮೇ 23ರಂದು ಲೋಕಸಭೆ ಚುನಾವಣೆಗಳ ಫಲಿತಾಂಶ ಘೊಷಣೆಯಾಗಿ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಸರ್ಕಾರ ಅಭೂತಪೂರ್ವ ಗೆಲುವು ಕಂಡಿತು. ಸಂವಿಧಾನ ತಿಳಿಸಿರುವಂತೆ, ಅಂದಿನಿಂದ 5 ವರ್ಷದೊಳಗೆ ಚುನಾವಣೆ ನಡೆಸಿ ಹೊಸ ಸರ್ಕಾರ ರಚಿಸಬೇಕೆಂದು ಚುನಾವಣಾ ಆಯೋಗ ಮಾನಸಿಕವಾಗಿ ಸಿದ್ಧವಾಗುತ್ತದೆ. ದೇಶದ ಎಲ್ಲ ರಾಜಕೀಯ ಪಕ್ಷಗಳೂ ಇನ್ನು ಐದು ವರ್ಷದೊಳಗೆ ಚುನಾವಣೆ ನಡೆದೇ ತೀರುತ್ತದೆ ಎಂಬ ಖಾತ್ರಿ ಹೊಂದಿರುತ್ತವೆ. ಒಂದೊಮ್ಮೆ 542 ಲೋಕಸಭಾ ಸದಸ್ಯರಲ್ಲಿ ಮೂರನೇ ಒಂದು ಭಾಗ ಅಂದರೆ 362 ಸಂಸದರು ಜಯಿಸಿದ್ದರೆ? ಅಥವಾ 542ರಲ್ಲಿ ಎಲ್ಲರೂ ಬಿಜೆಪಿ ಅಥವಾ ಎನ್ಡಿಎ ಸಂಸದರೇ ಜಯಿಸಿದ್ದರೆ? ಆಗಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಅನೇಕ ದೇಶಗಳಲ್ಲಿ ಚುನಾವಣೆ ಕುರಿತು ಇಷ್ಟು ಸ್ಪಷ್ಟ ನಿಲುವುಗಳಿಲ್ಲ. ಮ್ಯಾನ್ಮಾರ್ನಲ್ಲಿ ಚುನಾಯಿತ ಸರ್ಕಾರವನ್ನು ಪತನಗೊಳಿಸಿ, ಜನರಿಂದ ಆಯ್ಕೆಯಾದವರನ್ನು ಜೈಲಿಗಟ್ಟಿದ ಸೇನೆಯ ನಡೆಯನ್ನು ಇತ್ತೀಚೆಗಷ್ಟೆ ಕಂಡಿದ್ದೇವೆ. ನೆರೆಯ ಪಾಕಿಸ್ತಾನದಲ್ಲಿ ಅನೇಕ ಬಾರಿ ಚುನಾಯಿತ ಸರ್ಕಾರವನ್ನು ಸೇನೆ ಪದಚ್ಯುತಗೊಳಿಸಿ ಅಧಿಕಾರ ಹಿಡಿದಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ಕಳೆದುಕೊಂಡ ನಂತರ ನಡೆದ ಘಟನೆ ಇನ್ನೂ ಹಚ್ಚ ಹಸಿರಾಗಿದೆ. ಭಾರತದಲ್ಲೂ ಆಗೊಮ್ಮೆ ಈಗೊಮ್ಮೆ ಅಂತಹ ಪ್ರಯತ್ನಗಳು ನಡೆದಿಲ್ಲ ಎಂದಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಾವು ಚುನಾವಣೆಯಲ್ಲಿ ಸೋಲುಂಡ ಕಾರಣಕ್ಕೆ 1975ರಲ್ಲಿ ದೇಶವನ್ನು ತುರ್ತಸ್ಥಿತಿಯ ದವಡೆಗೆ ತಳ್ಳಿದ್ದರು. 1971ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಜಯಿಸಿದ ಇಂದಿರಾ ಗಾಂಧಿಯವರು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಪ್ರತಿಸ್ಪರ್ಧಿ ರಾಜನಾರಾಯಣ್ ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದರು. ನ್ಯಾಯಾಲಯ ಇಂದಿರಾ ಆಯ್ಕೆಯನ್ನು ಅಸಿಂಧುಗೊಳಿಸಿತು, ಮುಂದಿನ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಿತು. ಈ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ. ನ್ಯಾಯಾಂಗದ ಆದೇಶವನ್ನು ಪಾಲಿಸಲು ಇಂದಿರಾ ಹಿಂದೇಟು ಹಾಕಿದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಎರಡನೇ ಸ್ವಾತಂತ್ರ್ಯ ಹೋರಾಟವೇ ನಡೆಯಿತು. ನಂತರ ನಡೆದ ಚುನಾವಣೆಯಲ್ಲಿ, 352 ಸ್ಥಾನ ಹೊಂದಿದ್ದ ಕಾಂಗ್ರೆಸ್ ಕೇವಲ 154ಕ್ಕೆ ಕುಸಿಯಿತು. ಜನತಾ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತು. ಜನತಾ ಸರ್ಕಾರವು ಆಡಳಿತ ನಡೆಸಿಕೊಂಡು ಹೋಗುವುದರಲ್ಲಿ ವಿಫಲವಾಗಿ 1980ರಲ್ಲಿ ಅವಧಿಪೂರ್ವ ಚುನಾವಣೆ ನಡೆಯಿತು. ಆಗ ಇಂದಿರಾ ಗಾಂಧಿ 353 ಸ್ಥಾನಗಳನ್ನು ಜಯಿಸಿ ಮತ್ತೆ ಪ್ರಧಾನಿಯಾದರು. ತುರ್ತು ಪರಿಸ್ಥಿತಿಯ ಹಿಂಬಾಗಿಲ ಮೂಲಕ ಅಧಿಕಾರ ಅನುಭವಿಸಬಹುದೆಂದು ಭಾವಿಸಿದ್ದ ಇಂದಿರಾ ಗಾಂಧಿಯವರೂ ಮತ್ತೊಮ್ಮೆ ಚುನಾವಣೆ ಮೂಲಕವೇ ಆಯ್ಕೆಯಾಗುವ ಅನಿವಾರ್ಯತೆಯನ್ನು ಭಾರತೀಯರು ಸೃಷ್ಟಿಸಿದರು.
ಇದೊಂದು ಉದಾಹರಣೆ ಹೊರತುಪಡಿಸಿದರೆ ದೇಶದ ಯಾವುದೇ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಸೋಲುಂಡ ಅಧಿಕಾರಾರೂಢ ಪಕ್ಷ ಕೆಳಗಿಳಿಯುವುದಿಲ್ಲ ಎಂದು ಹಠ ಹಿಡಿದಿಲ್ಲ. ಹೆಚ್ಚೆಂದರೆ, ಮತ್ತೊಬ್ಬರಿಗೆ ಅಧಿಕಾರ ನೀಡಿ ನಂತರ ನ್ಯಾಯಾಲಯದ ಕದ ತಟ್ಟಿದ ಉದಾಹರಣೆಗಳನ್ನು ಕಾಣಬಹುದು. ಇನ್ನು, ಚುನಾಯಿತ ಸರ್ಕಾರವನ್ನು ಪತನಗೊಳಿಸಿ ಸೇನೆ ಅಧಿಕಾರ ನಡೆಸುವುದನ್ನು ಭಾರತೀಯರು ಊಹಿಸಲೂ ಸಾಧ್ಯವಿಲ್ಲ. ಭಾರತೀಯರು ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಲು ಅರ್ಹರಲ್ಲ ಎಂಬ ಪಾಶ್ಚಾತ್ಯರ ನಂಬಿಕೆಯನ್ನೇನೊ ಮೇಲ್ನೋಟಕ್ಕೆ ಸುಳ್ಳಾಗಿಸಿದ್ದೇವೆ. 1951-52ರ ಮೊದಲ ಚುನಾವಣೆಯಲ್ಲಿ ಶೇಕಡಾ 45 ಮತದಾರರು ಹಕ್ಕನ್ನು ಚಲಾಯಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಇದು ಶೇಕಡಾ 65ಕ್ಕೆ ಹೆಚ್ಚಳವಾಯಿತು. ಮತದಾನ ಪ್ರಕ್ರಿಯೆಯಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಳ ಮಾತ್ರ ಸಾಕೆ? ಪ್ರತಿ ಚುನಾವಣೆಯಲ್ಲೂ ಕಾನೂನು ಮೀರಿ ಮತಗಳನ್ನು ಪಡೆಯಲು ಪ್ರಯತ್ನಗಳು ನಡೆದೇ ಇವೆ. ಕುಟುಂಬ ರಾಜಕಾರಣ ಇನ್ನೂ ಇದೆ. ಕಣ್ಣೆದುರಿಗಿನ ಉತ್ತಮ ವ್ಯಕ್ತಿಗಳನ್ನು ಹೊರತುಪಡಿಸಿ, ಕಾಸು ಕೊಟ್ಟವರಿಗೆ, ಭ್ರಷ್ಟರಿಗೆ ಟಿಕೆಟ್ ನೀಡುವುದನ್ನು ನೋಡುತ್ತಲೇ ಇದ್ದೇವೆ. ಇದೆಲ್ಲದರಿಂದಾಗಿ ಶಿಕ್ಷಿತರು, ನಗರವಾಸಿಗಳು ಚುನಾವಣಾ ವ್ಯವಸ್ಥೆಯಿಂದಲೇ ದೂರ ಉಳಿಯುತ್ತಿದ್ದಾರೆ.
ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಕೆಲವು ಪ್ರಶ್ನೆಗಳಿವೆ. ಒಂದೇ ಸಮಯದಲ್ಲಿ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ನಡೆದರೆ ದೇಶದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿಯುತ್ತದೆ ಎಂದು ಅನೇಕರು ಹೇಳುತ್ತಾರೆ. ಉದಾಹರಣೆಗೆ, 2023ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತದೆ. ಅದಾಗಿ ಒಂದೇ ವರ್ಷದಲ್ಲಿ ಲೋಕಸಭೆ ಚುನಾವಣೆಗಳು ಎದುರಾಗುತ್ತವೆ. ಎರಡು ಬಾರಿ ಸರ್ಕಾರಿ ಯಂತ್ರ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಬದಲಿಗೆ, ವೆಚ್ಚ ಮಾಡುವ ಬದಲಿಗೆ ಒಂದೇ ಬಾರಿ ನಡೆದರೆ ಉಳಿತಾಯ ಎನ್ನುವುದು ಅವರ ವಾದ. ಆದರೆ ಇದಕ್ಕೆ ವ್ಯತಿರಿಕ್ತ ವಾದಗಳೂ ಅಷ್ಟೇ ಬಲವಾಗಿವೆ. ಹಣದ ವೆಚ್ಚ ತಗ್ಗುತ್ತದೆ ಎನ್ನುವುದೊಂದೇ ಮಾನದಂಡವಾಗಬೇಕೆ? ಎನ್ನುವುದು. ಇದೇ ಮಾತನ್ನು ಸ್ವಲ್ಪ ವಿಸ್ತರಿಸಿದರೆ, ದೇಶದಲ್ಲಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ ಎಂದು ಅದನ್ನು ತೆಗೆಯಬಹುದೇ? ಜನರು ಸ್ವರಕ್ಷಣೆ ಮಾಡಿಕೊಳ್ಳಬೇಕೆ ಹೊರತು ಇಷ್ಟು ವೆಚ್ಚ ಮಾಡಿ ಪೊಲೀಸರನ್ನು ನೇಮಿಸಿಕೊಳ್ಳುವ ಅಗತ್ಯವೇನು ಎಂದು ಪೊಲೀಸ್ ವ್ಯವಸ್ಥೆಯನ್ನೇ ತೆಗೆದುಹಾಕಬಹುದೆ? ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಹಣದ ವಿಚಾರ ಅಡ್ಡಿಯಾಗಬಾರದು ಎನ್ನುವ ವಾದವನ್ನು ಬಹುತೇಕರು ಒಪ್ಪುತ್ತಾರೆ. ಹಾಗಾಗಿ ಒಂದು ರಾಷ್ಟ್ರ-ಒಂದು ಚುನಾವಣೆಗೆ ಹಣದ ಕಾರಣ ಅತ್ಯಂತ ದುರ್ಬಲವಾದದ್ದು.
ಒಂದು ರಾಷ್ಟ್ರ-ಒಂದು ಚುನಾವಣೆ ನಡೆಯಬೇಕೆಂಬುದಕ್ಕೆ ಬಲವಾದ ಕಾರಣವೆಂದರೆ, ಪದೇಪದೆ ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯದಲ್ಲಾಗುವ ಹಿನ್ನಡೆ. ಒಂದು ರಾಜ್ಯದ ಮಟ್ಟದಲ್ಲಿ ನಿಂತು ನೋಡಿದರೆ ಹೆಚ್ಚು ಸಮಸ್ಯೆ ಕಾಣಿಸದು. ಆದರೆ ದೇಶದ ಮಟ್ಟದಲ್ಲಿ ಸಮಗ್ರವಾಗಿ ನೋಡಿದರೆ ನೋಟ ಸ್ಪಷ್ಟವಾಗುತ್ತದೆ. ಪ್ರತಿ ವರ್ಷ ಮೂರ್ನಾಲ್ಕು ರಾಜ್ಯಗಳ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಚುನಾವಣೆ ಘೊಷಣೆಯಾದ ನಂತರ ನೀತಿಸಂಹಿತೆ ಜಾರಿಯಾಗಿ, ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಘೊಷಣೆ ಮಾಡುವಂತಿಲ್ಲ. ಇದರಿಂದ ದೇಶದ ಇತರೆ ಪ್ರದೇಶಗಳಿಗೂ ಯೋಜನೆಯ ಫಲ ಸಿಕ್ಕದಂತಾಗುತ್ತದೆ. ರಾಜಕೀಯ ಪಕ್ಷಗಳಿಗೆ, ಅವುಗಳ ನಾಯಕರಿಗಂತೂ ಚುನಾವಣೆ ಎದುರಿಸುವುದೇ ಒಂದು ಉದ್ಯೋಗವಾಗಿಬಿಡುತ್ತದೆ. ಒಟ್ಟಾರೆ ಪ್ರತಿವರ್ಷ ಅನೇಕ ತಿಂಗಳು ಅಭಿವೃದ್ಧಿ ಕಾರ್ಯಗಳಿಗೆ ಅಕ್ಷರಶಃ ಬ್ರೇಕ್ ಬೀಳುತ್ತದೆ.
ಈ ಕುರಿತು ಆತಂಕಗಳೂ ಇಲ್ಲದಿಲ್ಲ. ಮುಖ್ಯವಾಗಿ, ರಾಜ್ಯಗಳ ಅಧಿಕಾರವನ್ನು ಇದು ಕಸಿಯುತ್ತದೆ ಎನ್ನುವುದು. ಭಾರತವು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಅಡಿಯಾಳು ಎಂಬಂತೆ ಇಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ವಿರೋಧಾಭಾಸವಿಲ್ಲದೆ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಲು ಕಾರ್ಯವನ್ನು ಸ್ಪಷ್ಟವಾಗಿ ವಿಭಜನೆ ಮಾಡಲಾಗಿದೆ. ರಾಜ್ಯವೊಂದರಲ್ಲಿ ಸರ್ಕಾರವು ಭ್ರಷ್ಟವಾಗಿದೆ ಎಂದು ಅಲ್ಲಿನ ಮತದಾರರು ಪ್ರತಿಭಟನೆಗಳನ್ನು ನಡೆಸಿದರೆಂದು ಭಾವಿಸೋಣ. ಆಗ ಅಲ್ಲಿನ ಸರ್ಕಾರ ಪತನವಾಗುತ್ತದೆ. ಆದರೆ ಕೇಂದ್ರದ ಸರ್ಕಾರದ ಅಧಿಕಾರಾವಧಿ ಮುಕ್ತಾಯವಾಗುವವರೆಗೂ ಈ ರಾಜ್ಯದ ಜನರು ಚುನಾಯಿತವಲ್ಲದ ಒಂದು ವ್ಯವಸ್ಥೆಯನ್ನು ಒಪ್ಪಿಕೊಂಡಿರಬೇಕೆ? ಎನ್ನುವುದು. ಇದೇ ರೀತಿ, ಕೇಂದ್ರದಲ್ಲಿ ಸರ್ಕಾರವೊಂದು ಅವಧಿಪೂರ್ವ ಪತನವಾಯಿತೆಂದು ಎಲ್ಲ ರಾಜ್ಯಗಳಲ್ಲೂ ಚುನಾವಣೆ ನಡೆಸಬೇಕೆ? ಎಂಬುದು ಅನೇಕರಲ್ಲಿನ ಪ್ರಶ್ನೆ.
ಇನ್ನೊಂದು ಆತಂಕವೆಂದರೆ, ರಾಷ್ಟ್ರೀಯ ಪಕ್ಷಗಳ ಕೈ ಮೇಲಾಗುತ್ತದೆ, ಪ್ರಾದೇಶಿಕ ಪಕ್ಷಗಳು ನೆಲ ಕಚ್ಚುತ್ತವೆ, ಪ್ರಾದೇಶಿಕ ವಿಚಾರಗಳು ಹಿನ್ನೆಲೆಗೆ ಸರಿಯುತ್ತವೆ ಎನ್ನುವುದು. ರಾಷ್ಟ್ರೀಯ ಪಕ್ಷಗಳು ಮಾಡುವಷ್ಟು ಚುನಾವಣಾ ವೆಚ್ಚ ಹಾಗೂ ಚುನಾವಣಾ ತಂತ್ರವನ್ನು ಮಾಡಲು ಶಕ್ತವಲ್ಲದ ಕಾರಣಕ್ಕೆ ಅಸಮತೋಲನ ಪೈಪೋಟಿ ಆಗುತ್ತದೆ. ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಾಗಿ ಸ್ಥಳೀಯ ವಿಚಾರಗಳೇ ಮುನ್ನೆಲೆಯಲ್ಲಿರುತ್ತವೆ. ಆದರೆ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರಗಳು ಪ್ರಮುಖವಾಗುತ್ತವೆ. ಲೋಕಸಭೆಯೊಟ್ಟಿಗೇ ವಿಧಾನಸಭೆಗೂ ಚುನಾವಣೆ ನಡೆದರೆ ರಾಷ್ಟ್ರೀಯ ವಿಚಾರಗಳೇ ಚರ್ಚೆಯಾಗಿ ಪ್ರಾದೇಶಿಕ ಅಂಶಗಳು ನಗಣ್ಯವಾಗುತ್ತವೆ ಎಂಬ ಅನುಮಾನವನ್ನೂ ಅನೇಕರು ಹೊರಹಾಕಿದ್ದಾರೆ.
ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಕಳೆದ ದಶಕದಿಂದಲೂ ರ್ಚಚಿಸುತ್ತಿರುವವರು ಪ್ರಧಾನಿ ನರೇಂದ್ರ ಮೋದಿ. ಪದೇಪದೆ ಚುನಾವಣೆಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ. ಈ ಕುರಿತು ದೇಶದಲ್ಲಿ ವಿಸ್ತತ ಚರ್ಚೆಯಾಗಬೇಕು. ಈ ಚರ್ಚೆಯಲ್ಲಿ ಆಡಳಿತ, ವಿರೋಧ ಪಕ್ಷಗಳು, ಚಿಂತಕರು ಭಾಗಿಯಾಗಿ ಮಂಥನ ನಡೆಯಬೇಕು, ಆಗಲೇ ಅಮೃತ ಹೊರಬರುತ್ತದೆ ಎಂದು ಅವರು ತಿಳಿಸುತ್ತಿರುತ್ತಾರೆ. ಮುಂದಿನ ಹಂತದಲ್ಲಿ, ಚುನಾವಣಾ ಸುಧಾರಣೆ ಕುರಿತೂ ವಿಸೃ್ತ ಚರ್ಚೆ ನಡೆಯುವ ಅವಶ್ಯಕತೆಯಿದೆ. ಪ್ರಧಾನಿ ಮೋದಿಯವರು ತಿಳಿಸಿರುವಂತೆ, ಲೋಕಸಭೆ, ವಿಧಾನಸಭೆಯಿಂದ ಗ್ರಾಮ ಪಂಚಾಯಿತಿ ಚುನಾವಣೆವರೆಗೆ ಒಂದೇ ಮತದಾರರ ಪಟ್ಟಿಯನ್ನು ಹೊಂದುವುದು ಇನ್ನೊಂದು ಸುಧಾರಣೆ. ಮತದಾರರ ಮಾಹಿತಿಯನ್ನು ಆಧಾರ್ ಜತೆಗೆ ಜೋಡಣೆ ಮಾಡಿ ಶುದ್ಧೀಕರಿಸುವುದು, ಆನ್ಲೈನ್ ಮತದಾನ ವ್ಯವಸ್ಥೆ, ಮತದಾನವನ್ನು ಕಡ್ಡಾಯಗೊಳಿಸುವುದು, ಮತದಾನ ಮಾಡದವರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವುದು- ಇತ್ಯಾದಿ ಬಗ್ಗೆಯೂ ಚಿಂತನ ಮಂಥನ ನಡೆಯಬೇಕು.
ಇಂದು ದುಂಡುಮೇಜಿನ ಸಭೆ: ಭಾರತೀಯ ವಿಕಾಸ ವೇದಿಕೆ-ಕರ್ನಾಟಕದ ವತಿಯಿಂದ ಬೆಂಗಳೂರಿನ ಕುಮಾರ ಪಾರ್ಕ್ನಲ್ಲಿರುವ ಗಾಂಧಿ ಭವನದಲ್ಲಿ ಫೆಬ್ರವರಿ 22ರಂದು ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ದುಂಡುಮೇಜಿನ ಸಭೆ ಆಯೋಜಿಸಲಾಗಿದೆ. ಪಕ್ಷಭೇದವಿಲ್ಲದೆ ಅನೇಕ ಕ್ಷೇತ್ರಗಳ ತಜ್ಞರು, ಅನುಭವಿಗಳು ವಿಚಾರ ಮಂಡನೆ ಮಾಡಲಿದ್ದಾರೆ. ದೇಶದ ಚುನಾವಣೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ನಡೆಯಲು ಇಂತಹ ಸಂವಾದಗಳು, ಸಭೆಗಳು ನಿರಂತರ ನಡೆಯುತ್ತಿರಬೇಕು. ನಗರಗಳಲ್ಲಷ್ಟೆ ಅಲ್ಲದೆ ಗ್ರಾಮೀಣ ಪ್ರಜೆಗಳೂ ಭಾಗವಹಿಸಿ ಮನದಿಂಗಿತವನ್ನು ಹಂಚಿಕೊಳ್ಳಬೇಕು. ಆ ಮೂಲಕ ಭಾರತದ ಪ್ರಜಾಪ್ರಭುತ್ವ ನೈಜ ಅರ್ಥದಲ್ಲಿ ಸದೃಢವಾಗುತ್ತದೆ ಎಂಬ ಆಶಯ ನಮ್ಮದು.
(ಲೇಖಕರು ಬಿಎಂಟಿಸಿ ಉಪಾಧ್ಯಕ್ಷರು)