

‘ನಾನು ಎಂಬುದು ಮುಖ್ಯ. ನೀನು ಏನು ಅಂತ ಅರ್ಥ ಮಾಡಿಕೋ. ಅದೇ ಅತ್ಯುತ್ತಮ ಅರಿವು’. ಅಂತ ಅದ್ಯಾವ ಅರ್ಥದಲ್ಲಿ ನಮ್ಮ ಸಂತರು ಹೇಳಿದ್ದಾರೋ, ಅವರಿಗೆ ಒಳ್ಳೆಯದಾಗಲಿ. ಆದರೆ ನನ್ನ ದೃಷ್ಟಿಯಲ್ಲಿ ‘ನಾನು’ ಕೊಂಚ ವಿಭಿನ್ನ. ಏಕೆಂದರೆ, ಬದುಕಿನಲ್ಲಿ ಫೇಲಾಗಿರುವವನು ನಾನು. ಅತ್ಯುತ್ತಮ ಊಟ ಉಂಡದ್ದು ನಾನು. ಸ್ವಚ್ಛಂದ ಕೇಳಿ ಅನುಭವಿಸಿದವನು ನಾನು. ಒಂದೇ ಒಂದು ಹೆಜ್ಜೆ ಮುಂದಿಡಲಿಕ್ಕಾಗದೆ ನಿಂತಲ್ಲೇ ಕತ್ತರಿಸಿ ಕುಪ್ಪೆಯಾದಂತೆ ಕುಡಿದು ಬಿದ್ದವನು ನಾನು. ಎಲ್ಲರೂ ನೆಮ್ಮದಿಯ ನಿದ್ರೆಯನ್ನು ಅವಚಿಕೊಂಡು ಮಲಗಿದ್ದಾಗ, ಮಡಚುಗಾಲಲ್ಲಿ ಗೋಡೆಗೊರಗಿ ಕುಳಿತು ಬಿಕ್ಕಳಿಸಿದವನು ನಾನು. ಇಡೀ ರಾತ್ರಿಯ ಕತ್ತಲ ಕೊನೆಯಲ್ಲಿ ಸುಪ್ರಭಾತದ ಮೊದಲ ಕಿರಣ ಕಂಡವನು ನಾನು. ಕ್ರಮಿಸಲೇ ಬೇಕಾದ ಹಾದಿಯನ್ನು ಕ್ರಮಿಸಲು ನಿರ್ಧರಿಸಿ ಮೊದಲ ಹೆಜ್ಜೆ ಎತ್ತಿಟ್ಟವನು ನಾನು. ಗಾವುದ ಗಾವುದ ನಡೆದು ಹಿಂತಿರುಗಿ ನೋಡಿದರೆ, ಅರೇ- ನಡೆದವನೇ ನಾನು. ನಿನ್ನನ್ನು ಬಿಟ್ಟು ಹೋದವನು ನಾನು. ನೀನು ಬಿಟ್ಟು ಹೋದಾಗ ಉಳಿದದ್ದು ನಾನು. ಎಲ್ಲರೂ ನಕ್ಕಾಗ ಸುಮ್ಮನಿದ್ದವನು ನಾನು. ಯಾರದೋ ದುಃಖಕ್ಕೆ ಕಣ್ಣೀರಾದವನು ನಾನು. ನಿನ್ನೆ ಕಾಯಿಲೆ ಬಿದ್ದವನು ನಾನು. ಇವತ್ತು ಎದ್ದು ಕುಳಿತ ಆರೋಗ್ಯ ನಾನು. ಮೊದಲಿಂದ ನನ್ನೊಂದಿಗಿದ್ದವನು ನಾನು. ಕೊನೆತನಕ ಹೆಜ್ಜೆ ಹಾಕುವವನೂ ನಾನು.
ಮೇಲಿನ ಪ್ಯಾರಾದಲ್ಲಿ ಎಷ್ಟು ‘ನಾನು’ಗಳಿವೆ ಎಣಿಸಿ ನೋಡಿ! ನಿಮ್ಮ ಇವಿಷ್ಟೂ ವರ್ಷಗಳ ಬದುಕಿನಲ್ಲಿ ಅದೆಷ್ಟು ಗಾಢವಾಗಿ ಪ್ರತಿಕ್ಷಣದಲ್ಲೂ ನಿಮ್ಮಲ್ಲಿ ನೀವಿದ್ದೀರೋ ನೋಡಿ? ಮಾತೆತ್ತಿದರೆ ಸಾಕು, ‘ನಂಗೆ ಹಸಿವಾಗಿದೆ. ನಂಗೆ ಅದು ಬೇಕು. ಅವಳು ನಂಗಿಷ್ಟ. ನನ್ನನ್ನ ಏನಂತ ತಿಳ್ಕಂಡಿದೀಯ, ನಾನು ಕಣ್ರೀ ಮಾತಾಡ್ತಿರೋದು, ಐ ಲವ್ ಯೂ, ಐ ಡೋಂಟ್ ಮೈಂಡ್... ನಾನು ಬಿಡ್ತೀನಾ ಅವನನ್ನ? ನಾನಿರುವುದೆ ನಿಮಗಾಗಿ!’ ನೋಡಿ, ಅವೆಷ್ಟು ನಾನುಗಳು?
ಆದರೆ ಬದುಕಿನ ಅತಿ ದೊಡ್ಡ ಸಮಸ್ಯೆ ಅಂದರೆ ನಾನೇನು ಅಂತ ನನಗೇ (ನಮಗೇ) ತಿಳಿದಿರುವುದಿಲ್ಲ. I am fit for What? ಅಂತ ನಮ್ಮನ್ನೇ ಕೇಳಿಕೊಂಡಿರುವುದಿಲ್ಲ. ಇದೊಂದು ಪ್ರಶ್ನೆಗೆ ಉತ್ತರ ದೊರೆತರೆ, ಬದುಕಿನಲ್ಲಿ ದೊಡ್ಡ ಮಟ್ಟದ ಸೋಲುಗಳು ಇರುವುದೇ ಇಲ್ಲ. ನೀವು ಪರೀಕ್ಷಿಸಿ ನೋಡಿ: ಅತ್ಯಂತ ಬುದ್ಧಿವಂತ ಇತಿಹಾಸತಜ್ಞನಾಗಬಹುದಾದ ಬುದ್ಧಿಯಿರುವ ಹುಡುಗನೊಬ್ಬ ಡಾಕ್ಟರನಾಗಲು ಐದು ವರ್ಷ ‘ಗೊಳೋ’ ಅಂತ ಹೆಣಗುತ್ತಿರುತ್ತಾನೆ. ಒಬ್ಬ ಯಶಸ್ವೀ ವ್ಯಾಪಾರಿಯಾಗಬಹುದಾದವನು ರಾಜಕಾರಣಿಯಾಗಲು ತಿಪ್ಪರಲಾಗ ಹಾಕುತ್ತಿರುತ್ತಾನೆ. ಶುದ್ಧಾಂಗ ಸಬ್ಇನ್ಸ್ಪೆಕ್ಟರ್ ಆಗಬಹುದಾದವನು ಕವಿಯಾಗಲು ಚಡಪಡಿಸುತ್ತಿರುತ್ತಾನೆ. ನಾಗರಹೊಳೆ ಕಾಡಿನಲ್ಲಿ ಓಡಾಡಿ ಹಕ್ಕಿಗಳ ವಲಸೆ ಕುರಿತು ಅಧ್ಯಯನ ಮಾಡಬಹುದಾದ ಚೈತನ್ಯವಿರುವಾತ ನಾಗಮಂಗಲದಲ್ಲಿ ಎಲೆಕ್ಷನ್ನಿಗೆ ನಿಂತು ಗೋತಾ ಹೊಡೆಯುತ್ತಿರುತ್ತಾನೆ.
ಇದಕ್ಕೆ ಮುಖ್ಯ ಕಾರಣವೇನೆಂದರೆ ಅವರ್ಯಾರಿಗೂ ‘ನಾನು’ (ಅವರು) ಅರ್ಥವಾಗಿರುವುದಿಲ್ಲ. ಅದೊಂದೇ ಒಂದು ಸತ್ಯ ಅರ್ಥವಾಗಿಬಿಟ್ಟರೆ ಅವರು ಅಂಥದ್ಯಾವುದನ್ನೂ ಮಾಡಲು ಮುಂದಾಗುತ್ತಿರಲಿಲ್ಲ. ನಮಗೆ ಅಲ್ಲದ್ದನ್ನ, ನಮಗೆ ಒಲ್ಲದ್ದನ್ನ ಮಾಡಲು ಹೋಗಿಯೇ ನಮ್ಮಲ್ಲಿ ಅರ್ಧ ಜನರ ಬದುಕುಗಳು ಬಂಜರಾಗಿ ಹೋಗಿರುತ್ತವೆ. ದೇಹಗಳು ವೇಸ್ಟು ಬಾಡಿಗಳಾಗಿ ಬಿಟ್ಟಿರುತ್ತವೆ. ‘ನಾನು ಯಾವುದಕ್ಕೆ ಅರ್ಹ’ ಎಂಬ ಪ್ರಶ್ನೆಯನ್ನು first of all, ನಾವು ಕೇಳಿಕೊಂಡೇ ಇರುವುದಿಲ್ಲ. ‘ಇಂಥದಕ್ಕೆ ನಾನು ಅರ್ಹನಾಗಬೇಕು’ ಅಂತ ನಿಶ್ಚಯಿಸಿಕೊಂಡು ಹೊರಟು ಬಿಡುತ್ತೇವೆ. ಹೀಗಾಗಿಯೇ ನಿಮಗೆ ಸುತ್ತಮುತ್ತಲೂ They were fit for those jobs. ಸೋತ ರಾಜಕಾರಣಿಗಳು, ಕೆಟ್ಟ ಕವಿಗಳು, ದಡ್ಡ ಡಾಕ್ಟರುಗಳು, ಪೆದ್ದ ಪತ್ರಕರ್ತರು ಸಿಗುತ್ತಾರೆ. ಅವರಿಗೆಲ್ಲ ನಟ, ರಾಜಕಾರಣಿ, ಕವಿ, ಪತ್ರಕರ್ತ ಇತ್ಯಾದಿ ಆಗಬೇಕೆಂಬ ಡಿಸೈರ್ ಖಂಡಿತ ಇರುತ್ತದೆ. ಆದರೆ ಆ ವೃತ್ತಿಗೆ ಅವರು ಡಿಸರ್ವ್ ಆಗಿರುವುದಿಲ್ಲ. ‘ಮನಸಿದ್ದರೆ ಮಾರ್ಗ’, ಪ್ರಯತ್ನಿಸಿದರೆ ಯಾರು ಏನು ಬೇಕಾದರೂ ಆಗಬಹುದು-ಮುಂತಾದವೆಲ್ಲ ಸಾಮಾನ್ಯ ಹೇಳಿಕೆಗಳೇ ಹೊರತು, ನಮ್ಮ ವೃತ್ತಿಗಳು ಒಂದು ನಿಶ್ಚಿತವಾದ ಅರ್ಹತೆಯನ್ನು ಬೇಡುತ್ತವೆ. ‘ಅರ್ಹತೆ’ ಅಂತ ಇದ್ದರೆ ಮಾತ್ರ-ಆನಂತರದ ಮನಸು-ಮಾರ್ಗ-ಪ್ರಯತ್ನ ಇತ್ಯಾದಿ.
ಅಂಥದೊಂದು ಅರ್ಹತೆ ನಮಗೆ ಯಾವ ರಂಗದಲ್ಲಿ ಇದೆ ಎಂಬುದನ್ನು ಕಂಡುಕೊಳ್ಳುವುದೇ ‘ನಾನು ಎಂದರೆ ಏನು?’ ಎಂಬ ತಿಳಿವಳಿಕೆ. ಇದು ನನ್ನ ಸಿದ್ಧಾಂತ. ನೀವು ಒಪ್ಪಬಹುದು, ಬಿಡಬಹುದು. ನಾನು ಬದುಕಲಿಕ್ಕಾಗಿ ಏನೇನು ಸಾಧ್ಯವೋ ಎಲ್ಲವನ್ನೂ ಮಾಡಿದೆ. ಹೋಟೆಲುಗಳಲ್ಲಿ ದುಡಿದೆ, ಹಾಲು ಮಾರಿದೆ, ದನ ಮೇಯಿಸಿದೆ, ಪಾಠ ಹೇಳಿದೆ, ಮೆಡಿಕಲ್ ರೆಪ್ರಸೆಂಟೆಟಿವ್ ಆದೆ, ಪ್ರಿಂಟಿಂಗ್ ಪ್ರೆಸ್ ಇಟ್ಟೆ-ಉಹುಂ, ಎಲ್ಲದರಲ್ಲೂ ಸೋತೆ. ನನಗಿಂತ ಒಳ್ಳೆಯ ಗೌಳಿ, ಮಾಣಿ, ಮೇಷ್ಟ್ರು, ಪ್ರಿಂಟರು, ರೆಪ್ಪು-ದಿನ ಬೆಳಗಾದರೆ ಅವರನ್ನು ನೋಡುತ್ತಿದ್ದೆ. ಅವರೆಲ್ಲ ಎಷ್ಟು ಚುರುಕಾಗಿ, ನನಗಿಂತ ಚೆನ್ನಾಗಿ ಕೆಲಸ ಮಾಡುತ್ತಿದ್ದರು ಗೊತ್ತಾ? They were fit for those jobs. ಆ ವೃತ್ತಿಗಳು ನನ್ನಿಂದ ಆಗುವಂಥವಲ್ಲ ಅನ್ನಿಸಿ ಬಿಟ್ಟುಬಿಟ್ಟೆ. ಆದರೆ ಯಾಕೋ ಗೊತ್ತಿಲ್ಲ: 1980ರಿಂದಲೂ ನಾನೊಬ್ಬ ಬರಹಗಾರ ಎಂಬುದು ಮನವರಿಕೆಯಾಗಿ ಬಿಟ್ಟಿತ್ತು. ಏನು ಬಿಟ್ಟರೂ, ನಾನು ಪೆನ್ನು ಬಿಡಲಿಲ್ಲ. ಮೇಷ್ಟ್ರಾದಾಗಲೂ ಬರೆದೆ, ದನ ಮೇಯಿಸುತ್ತಿದ್ದಾಗಲೂ ಬರೆದೆ. ಈ ಬರವಣಿಗೆ ಫಲಕೊಡಲಿಕ್ಕೆ ಐದಾರು ವರ್ಷ ಹಿಡಿಯಿತು.
ನಾನೊಬ್ಬ ಕತೆಗಾರ ಅಂತ ಜನ ಗುರುತಿಸಿದರು. ಗುರುತಿಸಲಿ ಅಂತಲೇ ಬರೆದೆ. ಕಡೆಗೆ ಇದು ಕಲ್ಪವೃಕ್ಷದಂತೆ ಬೆಳೆದು ಕನಕವೃಷ್ಟಿ ಸುರಿಸಲು ಹದಿನಾರು ವರ್ಷಗಳೇ ಹಿಡಿದವು ಅನ್ನಿ.
ಅದರ ಮೂಲವಿದ್ದುದು ಮಾತ್ರ ‘ನಾನು ಬರಹಗಾರನಾಗಲಿಕ್ಕೆ ಲಾಯಕ್ಕು’ ಅಂತ ತೀರ್ವನಿಸಿದ್ದು! ಆನಂತರ ಗೆಳೆಯರು ಕರೆದು ‘ನಟಿಸು ಅಂದರು’ ನಟಿಸಿದೆ. ಆದರೆ ನಟನಾದೆನಾ? Not My Cup Of Tea. ನಟನಾಗಬೇಕೆಂದರೆ ನನ್ನನ್ನು ನಾನು ತುಂಬ ಶಿಸ್ತಾಗಿ, ಸುಂದರವಾಗಿ ಇಟ್ಟುಕೊಳ್ಳಬೇಕು. ನನ್ನಿಂದ ಅದು ಅಸಾಧ್ಯ. ನನ್ನ ಶಿಸ್ತು ಚಿಂತನೆಗೆ ಸಂಬಂಧಿಸಿದ್ದು. ನನ್ನ ಸೌಂದರ್ಯ ಓದಿಗೆ, ಹಾಡಿಗೆ, ಭಾವುಕತೆಗೆ ಸಂಬಂಧಿಸಿದ್ದು. ನಟನೆ ಬೇಡ ಅಂದೆ. ‘ಹಾಗಾದರೆ ಟೀವಿ ಕಾರ್ಯಕ್ರಮ ಮಾಡು’ ಅಂದರು. ಆದರೆ ಟೀವಿ ಕಾರ್ಯಕ್ರಮವೆಂದರೂ, ಅದು ನನ್ನ ಕಥೆ ಹೇಳುವಿಕೆಯೇ. ಕಥೆ ಹೇಳುವುದೆಂದರೆ, ಕತೆ ಬರೆಯುವಿಕೆಯೇ. ಅಲ್ಲಿ ಕೂಡ ನಾನು ಪೆನ್ನಿನಿಂದ ದೂರವಾಗಲಿಲ್ಲ. ‘ಪ್ರಾರ್ಥನಾ’ದಂತಹ ಬೃಹತ್ ಶಾಲೆ ಕಟ್ಟಿದಾಗಲೂ, ಆ ಕಟ್ಟುವಿಕೆಯ ಹಿಂದಿದ್ದುದು-ಅಕ್ಷರ.
ನನ್ನನ್ನೇ ಹೊಗಳಿಕೊಳ್ಳಬೇಕೂಂತ ಇದನ್ನೆಲ್ಲ ಬರೆಯಲಿಲ್ಲ. ಹೊಗಳಿಕೊಳ್ಳುವಂಥದ್ದೇನನ್ನೂ ನಾನು ಮಾಡಿಲ್ಲ. ಮಾಡಿದ ಒಂದೇ ಕೆಲಸವೆಂದರೆ ‘ನಾನು ಯಾವುದಕ್ಕೆ ಅರ್ಹ’ ಎಂಬುದನ್ನು ತೀರ್ವನಿಸಿದ್ದು. ಹಾಗೆ ಒಮ್ಮೆ ತೀರ್ವನಿಸಿದ ಮೇಲೆ, ಆ ರಂಗದಲ್ಲಿ 'Sky is limit' ಅಂತ ಭಾವಿಸಿ, ಆಕಾಶದೆತ್ತರಕ್ಕೆ ಬೆಳೆಯಲು ಪ್ರಯತ್ನಿಸಿ. ಅತ್ಯುತ್ತಮ ಮಾಣಿ, ಅತ್ಯುತ್ತಮ ಅಡುಗೆಯವ, ಅತ್ಯುತ್ತಮ ರಾಜಕಾರಣಿ, ಅತ್ಯುತ್ತಮ ಪತ್ರಕರ್ತಹೀಗೆ ಆಗಲು ನಿರ್ಧರಿಸಿ ಬಿಡಬೇಕು ಮತ್ತು ಆಗಬೇಕು. ‘ನಾನು’ ಹೋದರೆ, ಸ್ವರ್ಗಕ್ಕೆ ಹೋಗುತ್ತೇನೆ ಎಂಬುದು ವೇದಾಂತಿಗಳ ಮಾತು. ‘ನಾನು ಎಲ್ಲಿಗೆ ಹೋಗಬಲ್ಲೆ’ ಅಂತ ಗೊತ್ತುಮಾಡಿಕೊಂಡರೆ, ನಮಗೇ ಅಂತ ಒಂದು ಸ್ವರ್ಗ ಖಂಡಿತ ಸೃಷ್ಟಿಯಾಗುತ್ತದೆ!
(ಲೇಖಕರು ಹಿರಿಯ ಪತ್ರಕರ್ತರು)