ಆಷಾಢ ಶುಕ್ರವಾರದ ಮಹತ್ವ: ಲಕ್ಷ್ಮೀಪೂಜೆಯಿಂದ ಸಕಲ ಸಂಪತ್ತು ಭಾಗ್ಯ

lakshmi
Published on

|ಮಂಡಗದ್ದೆ ಪ್ರಕಾಶ್​ಬಾಬು

ಜೀವನಕ್ಕೆ ಧನವೇ ಮೂಲವೆಂದು ಭಾವಿಸುತ್ತೇವೆ. ಅಂತಹ ಧನಕ್ಕೆ ಮೂಲ ‘ಲಕ್ಷ್ಮೀ’ದೇವಿ. ಲಕ್ಷ್ಮೀ ಎಂಬ ಪದ ಕಿವಿಗೆ ಬಿದ್ದಾಗ ಏನೋ ಶುಭಕರವಾದ ಮಾಂಗಲ್ಯಮಯವಾದ ಭಾವನೆ ಮನದಲ್ಲಿ ಮೂಡುತ್ತದೆ. ಮಾತಿಗೆ ನಿಲುಕದ ಸುಂದರ ಕಲ್ಪನೆ ಹೆಣೆದುಕೊಳ್ಳುತ್ತದೆ. ಆಷಾಢ ಮಾಸ ಶುರುವಾಗಿದ್ದು, ಜು. 16ರಂದು ಮೊದಲ ‘ಆಷಾಢ ಶುಕ್ರವಾರ’. ತಿಂಗಳುದ್ದಕ್ಕೂ ಪ್ರತಿ ಶುಕ್ರವಾರ ಲಕ್ಷ್ಮೀಪೂಜೆ ನೆರವೇರಿಸುವುದು ಸಾಮಾನ್ಯ.

ಹಿಂದೂ ಪುರಾಣಗಳಲ್ಲಿ ತಂತ್ರಶಾಸ್ತ್ರಗಳಲ್ಲಿ ಶಕ್ತಿಯನ್ನು ‘ಸ್ತ್ರೀ’ ರೂಪವಾಗಿ, ದೇವಿಯಾಗಿ, ಪುರುಷ ದೇವತೆಯ ಸಂಗಾತಿಯಾಗಿ ತೋರಿಸಿದ್ದಾರೆ. ತ್ರಿಮೂರ್ತಿಗಳಲ್ಲಿ ಪ್ರತಿಯೊಬ್ಬರೂ ಈ ಶಕ್ತಿ ಅಥವಾ ದೇವಿಯನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಬ್ರಹ್ಮನಿಗೆ ಸರಸ್ವತಿ, ವಿಷ್ಣುವಿಗೆ ಲಕ್ಷ್ಮೀ ಹಾಗೂ ಶಿವನಿಗೆ ಪಾರ್ವತಿ. ಜಗತ್ಪಾಲಕನಾದ ಮಹಾವಿಷ್ಣುವಿನ ಹೃದಯೇಶ್ವರಿಯಾಗಿರುವ ಲಕ್ಷ್ಮಿಯನ್ನು ಜಗತ್ ಪೋಷಣೆಗೆ ಅವಶ್ಯವಾದ ವೃದ್ಧಿ-ಸಮೃದ್ಧಿಗಳ ಸಕಲ ಭಾಗ್ಯಗಳಾಗಿ ಪೂಜಿಸಲಾಗುತ್ತದೆ. ಶ್ರೀ ಎಂದರೆ ಲಕ್ಷ್ಮೀ ಎಂದರ್ಥ. ಲಕ್ಷ್ಮಿಯನ್ನು ವೇದಗಳಲ್ಲಿ ಹಾಡಿಹೊಗಳಿದ್ದಾರೆ. ವೇದಪೂರ್ವದಲ್ಲಿದ್ದ ದೇವತೆ ಹಾಗೂ ಫಲಶಕ್ತಿ, ಜಲ ಮತ್ತು ಕೃಷಿಗಳಿಗೆ ಸಂಬಂಧಪಟ್ಟ ದೇವತೆಯೇ ಶ್ರೀ. ಕಾಲಕ್ರಮದಲ್ಲಿ ಈ ವೇದಪೂರ್ವ ದೇವತೆ, ವೇದದಲ್ಲಿನ ನಿರುಪಮ ಸೌಂದರ್ಯವತಿ ಲಕ್ಷ್ಮಿಯೊಡನೆ ಒಂದಾದಳು. ಪ್ರತಿ ವರ್ಷ ಆಷಾಢ ಮಾಸದಲ್ಲಿ ಬರುವ ಶುಕ್ರವಾರಗಳಂದು ಲಕ್ಷ್ಮಿಯನ್ನು ಪೂಜಿಸುವುದರಿಂದ ಸಕಲ ಸಂಪತ್ತು ಐಶ್ವರ್ಯ ಹಾಗೂ ಆರೋಗ್ಯ ಲಭಿಸುತ್ತದೆ. ಆಷಾಢಮಾಸದ ಎರಡನೇ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದೇವಿಯ ವರ್ಧಂತಿ ಜರುಗುತ್ತದೆ. ಆ ಸಮಯದಲ್ಲಿ ಸಾವಿರಾರು ಜನರು ದೇವಿಯ ದರ್ಶನ ಪಡೆಯುತ್ತಾರೆ. ತಮ್ಮ ತಮ್ಮ ಊರಿನಲ್ಲಿರುವ ದೇವಿಯ ದೇವಾಲಯಗಳಿಗೆ ಹೋಗಿ ದರ್ಶನ ಪಡೆಯುತ್ತಾರೆ.

ಲಕ್ಷ್ಮಿ ಎಲ್ಲಿದ್ದಾಳೆ?

ಶ್ರೀದೇವಿಯನ್ನು ಭೂದೇವಿಯಲ್ಲಿ ಕಾಣಬೇಕು. ಖನಿಜ, ಸಸ್ಯ, ರತ್ನಾದಿಗಳು, ಲೋಹ, ಧಾನ್ಯ, ಪ್ರಾಣಿಸಂಕುಲ ಇತ್ಯಾದಿಗಳಲ್ಲಿ ಲಕ್ಷ್ಮಿ ಇದ್ದಾಳೆ. ಅವಳನ್ನು ಪ್ರಪಂಚವೇ ಬಯಸುತ್ತದೆ. ಆದರೆ ಅವಳು ಮಾತ್ರ ಬಯಸಿದವರಿಗೆಲ್ಲ ಸಿಗುವುದಿಲ್ಲ. ಹಣ ಗಳಿಸುವ ಮಾರ್ಗ ವಾಮಮಾರ್ಗ ಆಗಬಾರದು. ಜೀವನದಲ್ಲಿ ಲಕ್ಷ್ಮಿ ಬೇಕು ನಿಜ. ಆದರೆ ಎಷ್ಟು ಬೇಕೋ ಅಷ್ಟೇ ಇದ್ದರೆ ಒಳ್ಳೆಯದು. ಲಕ್ಷ್ಮಿ ಹೆಚ್ಚಾದಷ್ಟು ತೊಂದರೆಗಳು ಹೆಚ್ಚು. ಈ ಲಕ್ಷ್ಮಿ ಹರಿಯುವ ನದಿಯ ಹಾಗೆ ಇರಬೇಕು. ಹರಿಯುವ ನೀರಿಗೆ ಶುದ್ಧತೆ, ಪಾವಿತ್ರ್ಯ ಹೆಚ್ಚು. ನಿಂತ ನೀರಿನಲ್ಲಿ ದೋಷಗಳು ಹೆಚ್ಚು. ಹಣ ಒಂದೆಡೆ ನಿಂತರೆ ತೊಂದರೆ ಹೆಚ್ಚು. ಈ ಉದ್ದೇಶಕ್ಕಾಗಿಯೇ ಎಲ್ಲ ಯುಗಗಳಲ್ಲಿ ದಾನ ಧರ್ಮಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದು.

ವಿಷ್ಣುಪುರಾಣದಲ್ಲಿ ಲಕ್ಷ್ಮಿ

ಭೃಗುಮಹರ್ಷಿ ಮತ್ತವರ ಪತ್ನಿ ‘ಖ್ಯಾತಿ’ಗೆ ಗಂಡುಮಕ್ಕಳು ಮಾತ್ರ ಇದ್ದರು. ಅವರಿಗೆ ಹೆಣ್ಣ್ಣು ಮಕ್ಕಳನ್ನು ಪಡೆಯಬೇಕು ಎಂಬ ಆಸೆ ಉಂಟಾಯಿತು. ಅವಳು ಪತಿಯ ಅನುಮತಿ ಪಡೆದು ದೇವಿಯನ್ನು ಕುರಿತು ತಪಸ್ಸು ಮಾಡಿದಳು. ತಪಸ್ಸಿಗೆ ಮೆಚ್ಚಿ ಜಗನ್ಮಾತೆಯು ಪುತ್ರಿಯನ್ನು ಕರುಣಿಸಿದಳು. ಆಕೆಗೆ ‘ಲಕ್ಷ್ಮೀ’ ಎಂದು ಹೆಸರಿಟ್ಟರು. ಲಕ್ಷ್ಮೀ ಚಿಕ್ಕಂದಿನಲ್ಲೇ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು. ಅವಳ ತಪಸ್ಸಿಗೆ ಮೆಚ್ಚಿದ ವಿಷ್ಣುವು ನಾರಾಯಣನ ರೂಪದಲ್ಲಿ ಪ್ರತ್ಯಕ್ಷನಾಗಿ ‘ವರ ಬೇಡು’ ಎನ್ನಲು. ‘ಸ್ವಾಮೀ, ನಿಮ್ಮ ವಿಶ್ವರೂಪವನ್ನು ತೋರಿದರೆ ನಾನು ನಂಬುವೆನು. ಆನಂತರ ನನ್ನನ್ನು ವಿವಾಹ ಮಾಡಿಕೊಳ್ಳಿರಿ’ ಎಂದು ಬೇಡಿದಳು. ವಿಷ್ಣು ವಿಶ್ವರೂಪವನ್ನು ತೋರಿಸಿ ಲಕ್ಷ್ಮಿಯನ್ನು ವಿವಾಹವಾದನು. ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ ಆದಳು ಎನ್ನುತ್ತದೆ ವಿಷ್ಣುಪುರಾಣ. ಈ ಲಕ್ಷ್ಮಿಯೇ ಕ್ಷೀರಾಬ್ಧಿಯಿಂದ ಉದ್ಭವಿಸಿದಳು. ನಂತರ ವಿಷ್ಣುವಿನ ಪತ್ನಿಯಾದಳು. ವಾಮನಾವತಾರದಲ್ಲಿ ಪದ್ಮಳಾಗಿ, ಪರಶುರಾಮಾವತಾರದಲ್ಲಿ ಧರಣಿಯಾಗಿ, ರಾಮಾವತಾರದಲ್ಲಿ ಸೀತೆಯಾಗಿ, ಕೃಷ್ಣಾವತಾರದಲ್ಲಿ ರುಕ್ಮಿಣಿಯಾಗಿ ಅವತರಿಸಿದಳು.

ಭಗವದ್ಗೀತೆಯಲ್ಲಿ ಹೇಳಿದ್ದು...

ಕೃಷ್ಣನು ಗೀತೆಯಲ್ಲಿ ಹಣದ ಬಗ್ಗೆ ಈ ರೀತಿ ಹೇಳಿದ್ದಾನೆ- ‘ಈ ಸಂಪತ್ತು ನಿನ್ನೆ ಯಾರದ್ದೋ ಆಗಿತ್ತು. ಈ ದಿನ ನಿನ್ನದಾಗಿದೆ. ನಾಳೆ ಅದು ಬೇರೆಯವರದ್ದಾಗಿರುತ್ತದೆ. ಕಳೆದುಕೊಂಡೆ ಎಂದು ಏಕೆ ಚಿಂತಿಸುತ್ತೀ? ಕಳೆದುಕೊಳ್ಳಲು ನೀನು ಏನನ್ನು ತಂದಿರುವುದು? ಬರುವಾಗ ಏನನ್ನೂ ತರಲಿಲ್ಲ, ಹೋಗುವಾಗಲೂ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಇಲ್ಲಿ ನಿನ್ನದು ಎಂಬುದು ಏನೂ ಇಲ್ಲ.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net