

ಬೆಂಗಳೂರು: ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಆದ್ದರಿಂದ ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ 75ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜನರ ಆಶಿರ್ವಾದ ಇರುವ ತನಕ ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿರುವುದನ್ನು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದು ಹೇಳಿದರು.
ವಿಶ್ವದಲ್ಲಿ ಅತೀ ದೀರ್ಘಕಾಲ ಜಾರಿಯಲ್ಲಿರುವ ಸಂವಿಧಾನ ನಮ್ಮದಾಗಿದೆ. ಎಷ್ಟೇ ಒಳ್ಳೆಯ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ ಆರ್‌ಎಸ್‌ಎಸ್ ಕೂಡ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು ಎಂದರು.
ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ಧ ಕರೆ ನೀಡಿದ್ದರು. ಆದರೆ ಇವತ್ತಿಗೂ ಜಾತಿ ಹೋಗಿಲ್ಲ. ಆರ್ಥಿಕ, ಸಾಮಾಜಿಕ ಸಮಾನತೆ ಬರದೆ ಜಾತಿ ವ್ಯವಸ್ಥೆ ಹೋಗಲು ಸಾಧ್ಯವಿಲ್ಲ. ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಜಾತ್ಯತೀತರಾಗಿ ಮಕ್ಕಳನ್ನು ಬೆಳೆಸುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ಅತ್ಯುನ್ನತ ಗೌರವ ಎಂದರು.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ, ಸಂವಿಧಾನ ನಮ್ಮ ದೇಶದ 140 ಕೋಟಿ ಜನರ ರಕ್ಷಣೆ ಮಾಡುತ್ತಿದೆ. ದೇಶದ ಎಲ್ಲ ಧರ್ಮಗಳಿಗೆ ರಕ್ಷಣೆ ನೀಡುತ್ತಿದೆ. ಧರ್ಮ ಗ್ರಂಥಗಳನ್ನು ಆಯಾಯ ಧರ್ಮದವರು ಪವಿತ್ರವೆಂದು ಹೇಳಿದರೆ ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ ಎಂದು ಹೇಳಿದರು.
ನಮ್ಮ ರಾಜಕೀಯ ಆಯಸ್ಸು ಇನ್ನು 10- 15 ವರ್ಷ. ವಿದ್ಯಾರ್ಥಿಗಳು ಮುಂದಿನ 60- 70 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸುವವರು. ಅವರಿಗೆ ಸಂವಿಧಾನದ ಬಗ್ಗೆ ಅಡಿಪಾಯ ಹಾಕಬೇಕು ಎನ್ನುವ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು, ರಾಜ್ಯದಲ್ಲಿ ಸಂವಿಧಾನ ಪೀಠಿಕೆ ಓದುವ ಅಭಿಯಾನ ಕೈಗೊಂಡಿದ್ದರಿಂದ ಇಡೀ ದೇಶದಲ್ಲಿ ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಪೃವೃತ್ತಿ ಬೆಳೆಯಿತು. ಇದರಿಂದ ಸಂವಿಧಾನವನ್ನು ವಿರೋಧಿಸುವ, ಬದಲಾಯಿಸುವ ಚಿಂತನೆಯಲ್ಲಿದ್ದವರಿಗೆ ಬಿಸಿ ಮುಟ್ಟಿತ್ತು. ಈಗ ಅವರು ಸಂವಿಧಾನವನ್ನು ಹಿಡಿದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಎಲ್ಲ ದೇಶಗಳ ಹೋರಾಟಗಳ ಹೂರಣವನ್ನು ಅಡಕವಾಗಿಸಿ, ಜನರ ಐಕ್ಯತೆ, ಅಭಿವೃದ್ಧಿ, ದೇಶದ ಸಮಗ್ರತೆ, ನಮ್ಮ ಚರಿತ್ರೆ ಮತ್ತು ಪರಂಪರೆ, ಮೌಲ್ಯಗಳನ್ನು ಸೇರಿಸಿ ನಮ್ಮ ಸಂವಿಧಾನವನ್ನು ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ್ದಾರೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಕ್ರೈಸ್‌ನ ಹಳೆ ವಿದ್ಯಾರ್ಥಿಗಳ ವೆಬ್‌ಸೈಟ್ ಬಿಡುಗಡೆ ಮಾಡಲಾಯಿತು. ಹಾಗೆಯೇ ಕ್ರೈಸ್‌ಗೆ ಸಿಎಸ್‌ಆರ್ ನಿಧಿಯ ಕೊಡುಗೆಯ ಬಗ್ಗೆಗಿನ ಕೈಪಿಡಿ ಬಿಡುಗಡೆ ಮಾಡಲಾಯಿತು. ಹಾಗೆಯೇ ಪ್ರಜಾಪ್ರಭುತ್ವ ದಿನದ ಅಂಗವಾಗಿ ಇಲಾಖೆ ಕೈಗೊಂಡಿದ್ದ ಹಲವು ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆಗೈದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಮೋದಿ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದ ಅನಂತ ಕುಮಾರ ಹೆಗ್ಡೆ ಅವರು, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಲ. ಅಂದರೆ, ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.