ನಮ್ಮಲ್ಲೇ ನಾವು ಮಾತಾಡಿಕೊಳ್ಳೋಣ; ನಮ್ಮಲ್ಲೇನಿದೆ ಖುದ್ದು ನೋಡಿಕೊಳ್ಳೋಣ..

Celebrity Corner
Published on
ಹಿತವಚನ ಹೇಳುವುದು ತುಂಬ ಕಷ್ಟದ ಕೆಲಸ. ಏಕೆಂದರೆ, ಹಿತ ಎನ್ನುವುದು ಹಿತವಚನ ಹೇಳುವವನಲ್ಲಿ ಇರ್ತದಾ, ಇಲ್ಲ ಕೇಳುವವನಿಗೆ ಆ ಹಿತ ಸಿಗ್ತದಾ ಅಂತ ಸರಿಯಾಗಿ ಗೊತ್ತಾಗುವುದಿಲ್ಲ. ಎಲ್ಲರೂ ಹಿತಹೀನ ಸ್ಥಿತಿಯಲ್ಲಿರುವ ಕಾಲ ಬಂದಿರುವ ಸಾಧ್ಯತೆ ಇದೆ. ಆದ್ದರಿಂದ, ಒಂದೇ ಒಂದು ಹಿತವಚನ ಹೇಳಿ, ಅದರ ಮುಖಾಂತರ ನಾನೂ ಕೂಡಾ ಏನನ್ನೋ ಕಲಿಯಲು ವಿನಮ್ರನಾಗಿ ಯತ್ನಿಸುವೆ.

ಅದೇನೆಂದರೆ, ದಿನವೂ ಬೆಳಿಗ್ಗೆ ಹಾಗೂ ರಾತ್ರಿ ಎರಡರಿಂದ ನಾಲ್ಕು ಗಂಟೆಗಳ ಕಾಲ ಈ ಮೊಬೈಲ್​ನಿಂದ ದೂರ ಉಳಿಯುವುದನ್ನು ಕಲಿತರೆ, ನಮಗೆ ದಿವ್ಯವಾದ ಪ್ರಾಕೃತಿಕ ಹಿತ ಸಿಗುವ ಸಾಧ್ಯತೆ ಇದೆ. ಆ ನಾಲ್ಕಾರು ಗಂಟೆಗಳ ಕಾಲ ನಮ್ಮ ಬಗ್ಗೆ ನಾವು ಏನೋ ಒಂದು ಸತ್ಯ ತಿಳಿಯುವ ಸಾಧ್ಯತೆ ಇರುತ್ತದೆ ಎಂದು ನನ್ನ ದೃಢ ಭಾವನೆ.

ಪ್ರಕೃತಿ ಕೊಟ್ಟ ಗಾಳಿ, ಬೆಳಕು, ನೀರು ಇತ್ಯಾದಿ ಪಂಚಭೂತಗಳ ಜತೆಗೆ ಆರನೇ ಭೂತವಾಗಿ ನಾವು ಮೊಬೈಲನ್ನು ಸ್ವೀಕರಿಸಿ, ಅಸಾಧ್ಯ ತಪ್ಪು ಮಾಡಿದ್ದೇವೆಂದು ನನ್ನ ಭಾವನೆ. ಪ್ರಪಂಚದ ಜತೆಗೆ ಸಂವಹನ ಮಾಡಲು ಮಾನವನೇ ಕಂಡುಹಿಡಿದ ಅಂತರ್ಜಾಲ ಮಾನವನನ್ನು ಮಾನವನನ್ನಾಗಿ ಇರಲು ಬಿಡುತ್ತಿಲ್ಲ. ಈ ಮೊಬೈಲು ಸರಿಯಿಲ್ಲ ಎಂಬ ಸತ್ಯವನ್ನು ನಾವು ಮೊಬೈಲ್​ನಲ್ಲೇ ನೋಡುವ ಕಾಲ ಬಂದಿದೆ. ನೂರು ಸುದ್ದಿ, ಕೋಟಿ ಒಪಿನಿಯನ್​ಗಳು, ಚಿಲ್ಲರೆ ಜಗಳಗಳು, ಮಾಹಿತಿ ಕ್ರಾಂತಿಯ ಕೃತಕ ಜ್ಞಾನ, ಖೊಟ್ಟಿ ಅನುಭವಗಳು, ಮೈದಾನ ಇಲ್ಲದ ಆಟಗಳು, ಯಾರೊ ಏನೋ ಅಂದಿದ್ದಕ್ಕೆ ನಾವೇನು ಅನ್ನುವ ಕಾಯಿಲೆ, ಯಾರೂ ಕೇಳದೆ ನಾವ್ಯಾರೆಂದು ನಾವು ನಾವೇ ಕೂಗುವ ಅರಣ್ಯರೋದನಗಳು, ನಮ್ಮದೇ ಸಮಸ್ಯೆಗಳು, ನಮ್ಮದೇ ಪರಿಹಾರಗಳು... ಇಂತಹ ರೋಡ್​ನಲ್ಲಿದ್ದ ನೂರೆಂಟು ರಗಳೆಗಳನ್ನು ಎಳೆದು ಸೀದಾ ಮನದಲ್ಲಿ ಬಿಟ್ಟುಕೊಂಡಿದ್ದೇವೆ. ಸ್ವಲ್ಪ ಯೋಚನೆ ಮಾಡಿ. ಬದುಕುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ಲೋಕದ ಬಗ್ಗೆ ತುಂಬ ಯೋಚನೆ ಮಾಡಲು ಯಾರು ಹೇಳಿದರೆಂದು ಯಾರಿಗೂ ಗೊತ್ತಾಗುತ್ತಿಲ್ಲ.

ಯಾರೂ ಬಂದು ಲೋಕವನ್ನು ಸರಿಮಾಡಿ ಎಂದು ನಮಗೆ ಹೇಳದೇ ಹೋದರೂ, ಬೆಳಿಗ್ಗೆ ಎದ್ದು ಸಮರಕ್ಕೆ ತಯಾರಾಗುತ್ತಿದ್ದೇವೆ. ನಮ್ಮ ವೈರಿ ಯಾರು ಎಂದು ಯಾರಿಗೂ ಸರಿಯಾಗಿ ತಿಳಿಯದೇ, ವಾರಕ್ಕೊಬ್ಬ, ದಿನಕ್ಕೊಬ್ಬ ವೈರಿಗಳನ್ನು ನಾವೇ ಊಹಿಸಿಕೊಂಡು ರೆಡಿ ಮಾಡಿಕೊಡುತ್ತಿದ್ದೇವೋ ಏನೋ? ಚೂರೇಚೂರು ಮೊಬೈಲು ಬಿಸಾಕಿ, ನಮ್ಮ ಜತೆಗೆ ನಾವು ಮಾತನಾಡಿದಲ್ಲಿ, ಬೇರೆಯವರಿಗಲ್ಲ, ನಮಗೇ ಒಳಿತಾಗುವ ಕಡುಸಾಧ್ಯತೆಗಳಿವೆ. ನಾವು ತೆಗೆಯುವ ನಮ್ಮ ಪಿಕ್ ಬೇರೆಯವರು ನೋಡಬೇಕು. ನಮ್ಮ ಸುಖವನ್ನು ಬೇರೆಯವರಿಗೆ ತೋರಿಸಬೇಕು. ನಾವೆಷ್ಟು ಸಂತಸದಿಂದ ಇದ್ದೇವೆ ಎಂದು ಬೇರೆಯವರನ್ನು ನಂಬಿಸಬೇಕು. ನಾನೆಂಥಾ ಜ್ಞಾನಿ ಎಂಬುದನ್ನು ತೋರಿಸಿ ಇತರರಿಗೆ ಕೀಳರಿಮೆ ಬರಿಸಬೇಕೆಂಬ ಪರಮಗಾಂಚಲಿಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುತ್ತಾ ಒದ್ದಾಡುವ ಬದಲು, ನಮ್ಮಲ್ಲಿ ನಾವೇ ಮಾತಾಡಿಕೊಂಡು ನೆಮ್ಮದಿಪಡುವುದು ಎಷ್ಟೋ ವಾಸಿ.

ನಿಮಿಷಕ್ಕೆ 20 ಬಾರಿ ಮೊಬೈಲು ನೋಡುವ ಹವ್ಯಾಸ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎಂಬುದರ ಬಗ್ಗೆ ಬೇರೆಯವರನ್ನಲ್ಲ, ನಮ್ಮನ್ನು ನಾವೇ ಕೇಳಿಕೊಳ್ಳುವುದು ಒಳಿತಲ್ಲವೇ? ಇಷ್ಟೆಲ್ಲ ಹಿತವಚನ ಹೇಳುವ ನಾನು, ಇದೆಲ್ಲ ಬರೆಯುವಾಗ ಅದೆಷ್ಟು ಬಾರಿ ಮೊಬೈಲ್ ನೋಡಿದೆನೆಂದು ಹೇಳುವುದಕ್ಕೆ ಸಾಧ್ಯವೇ? ಇದೆಲ್ಲ ಓದುವ ನೀವು, ಅದೆಷ್ಟು ಬಾರಿ ಏನೇನೋ ಕಾರಣಕ್ಕೆ ಮೊಬೈಲು ನೋಡಿದಿರೆಂದು ನಾನು ತಿಳಿಯಲು ಸಾಧ್ಯವೇ? ಪ್ರೀತಿಯನ್ನಾಗಲೀ, ಹಿತವನ್ನಾಗಲೀ ನಾವು ಬೇರೆಯವರಲ್ಲಿ ಅಥವಾ ರಸ್ತೆಯಲ್ಲಿ ಹುಡುಕಲು ಸಾಧ್ಯವಿಲ್ಲ. ಅದು ನಮ್ಮಲ್ಲೇ ಇರುತ್ತದೆ ಅಥವಾ ಇರುವುದೇ ಇಲ್ಲ. ಬನ್ನಿ, ಒಂಚೂರು ನಮ್ಮಲ್ಲೇನಿದೆ ಎಂದು ಖುದ್ದಾಗಿ ನೋಡಿಕೊಳ್ಳೋಣ.

(ಲೇಖಕರು ನಟ-ನಿರ್ದೇಶಕ-ಗೀತರಚನೆಕಾರ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net