ಕಾಂಕ್ರೀಟ್ ಕಾಡಿನ ಮಕ್ಕಳನ್ನು ಕಾಡುತ್ತಿದೆ ಪರಿಸರ ನ್ಯೂನತೆ

Column f2
Published on
ಅದೊಂದು ಮಹಾನಗರ. ಅಲ್ಲೊಂದು ಪ್ರತಿಷ್ಠಿತ ಶಾಲೆ. ಒಂದು ದಿನ ಆ ಶಾಲೆಯಲ್ಲಿ ಅಧ್ಯಾಪಕರು ಮಗುವಿಗೆ ಪ್ರಶ್ನೆ ಕೇಳಿದರು. ‘ಹಸು ಏನನ್ನು ತಿನ್ನುತ್ತದೆ?’ ಅನ್ನುವುದೇ ಆ ಪ್ರಶ್ನೆ. ‘ಅರೇ... ನಗರದ ಪ್ರತಿಷ್ಠಿತ ಶಾಲೆಯಲ್ಲಿ ಕನ್ನಡದಲ್ಲಿ ಪ್ರಶ್ನೆಯೇ?’ ಎಂದು ನಿಮಗೆ ಆಶ್ಚರ್ಯವಾಗಬಹುದು. ಹಾಗೇನಿಲ್ಲ. ಅವರು ಪ್ರಶ್ನೆ ಕೇಳಿದ್ದು ಇಂಗ್ಲಿಷ್​ನಲ್ಲಿಯೇ. ಅದಕ್ಕೆ ಆ ಮಗು ತಕ್ಷಣ ‘ಹಸು ಪ್ಲಾಸ್ಟಿಕ್ ತಿನ್ನುತ್ತದೆ’ ಎಂದು ಉತ್ತರಿಸಿತು. ಮೇಲ್ನೋಟಕ್ಕೆ ಸಾಮಾನ್ಯ ಜ್ಞಾನದ ಕೊರತೆಯಿಂದ ಮಗು ಹಾಗೆ ಉತ್ತರಿಸಿದೆ ಎಂದು ಅನ್ನಿಸಬಹುದು. ಆದರೆ ನಿಜವಿಷಯ ಬೇರೆಯೇ ಇದೆ. ಆ ಮಗು ಸರಿಯಾಗಿಯೇ ಉತ್ತರಿಸಿತ್ತು. ಕಾರಣ, ಹುಟ್ಟಿನಿಂದ ಮಣ್ಣಿನಲ್ಲಿ ಕೈಯಾಡಿಸದ, ಸಹಜ ಪರಿಸರದ ಸೊಗಡಿನ ಪರಿಚಯವಿಲ್ಲದ, ಹವಾನಿಯಂತ್ರಿತ ಕಾರಿನಲ್ಲಿಯೇ ಶಾಲೆಗೆ ಹೋಗಿ, ಹವಾನಿಯಂತ್ರಿತ ಕೊಠಡಿಯಲ್ಲಿಯೇ ಕುಳಿತು ಪಾಠ ಕೇಳಿದ ಆ ಮಗು ಶಾಲೆ ಬಿಟ್ಟು ಮನೆಗೆ ಬಂದು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗಲೆಲ್ಲ ಕಾಣುತ್ತಿದ್ದ ಸಂಗತಿ ಒಂದೇ. ಅದು ಹುಲ್ಲು ಮೊಳೆಯದ ಕಾಂಕ್ರೀಟ್ ಕಾಡಿನಲ್ಲಿ ಕಸದ ರಾಶಿಯ ಮಧ್ಯೆ ನಿಂತು ಪ್ಲಾಸ್ಟಿಕ್ ತಿನ್ನುತ್ತಿದ್ದ ಹಸು. ಹೀಗಾಗಿ ಮಗುವಿನ ತಿಳಿವಳಿಕೆ ಪ್ರಕಾರ ಹಸು ಪ್ಲಾಸ್ಟಿಕ್ ತಿನ್ನುವುದು ಸಾಮಾನ್ಯ ವಿಷಯವೇ ಆಗಿತ್ತು.

50-60ರ ದಶಕದವರಲ್ಲಿ ‘ನಿಮ್ಮ ಬಾಲ್ಯದ ಬಗ್ಗೆ ಹೇಳಿ’ ಎಂದಾಗ ಗಂಟೆಗಟ್ಟಲೆ ತಮ್ಮ ಬಾಲ್ಯವನ್ನು ಅವರು ವರ್ಣಿಸುತ್ತ ಹೋಗಬಹುದು. ಅವರ ಬಾಲ್ಯದ ಬಹುಪಾಲು ಪ್ರಕೃತಿಯ ಮಧ್ಯೆಯೇ ಕಳೆದಿದ್ದರಿಂದ ಆ ನೆನಪು ಅವರ ಜೀವನದುದ್ದಕ್ಕೂ ಹಸಿರಾಗಿರುತ್ತದೆ. ತಮ್ಮ ಹಳ್ಳಿಯ ಶಾಲೆ, ಗೆಳೆಯರ ಕೂಟ, ಅವರೊಂದಿಗೆ ಮಣ್ಣಿನಲ್ಲಿ ಆಟ, ಮರ-ಗಿಡಗಳ ಮಧ್ಯೆ ಓಡಾಟ... ಹೀಗೆ ಅಗಣಿತ ನೆನಪುಗಳ ಚಿಲುಮೆ ಉಕ್ಕುತ್ತದೆ. ತಾವು ಹಣ್ಣು ಕಿತ್ತು ತಿಂದ ಪ್ರತಿಯೊಂದು ಮರ-ಗಿಡ-ಬಳ್ಳಿಗಳ ಪರಿಚಯ, ಈಜು ಕಲಿತು ಬೀಗಿದ ಕೆರೆ-ತೊರೆಗಳು ಅವರ ಜೀವನವನ್ನು ರಸವತ್ತಾಗಿಸಿರುತ್ತವೆ. ಈ ಆಟ-ಪಾಠಗಳ ಮಧ್ಯೆ ಸಹಜವಾಗಿ ದೊರೆಯುತ್ತಿದ್ದ ಪ್ರಕೃತಿಯ ಸಂಪರ್ಕ ಅವರನ್ನು ಮತ್ತಷ್ಟು ತೀಕ್ಷ್ಣಮತಿಗಳನ್ನಾಗಿಸುತ್ತಿತ್ತು.

ಒಂದು ಮಗು ಸಂಜೆ ಮನೆಯಿಂದ ಹೊರಹೋಗಿ ಗೆಳೆಯರೊಂದಿಗೆ ಬೆರೆತು ಆಡದಿದ್ದರೆ ಆ ಮಗುವಿಗೆ ಏನೋ ಸಮಸ್ಯೆಯಾಗಿದೆ ಎಂದು ಮನೆಯವರು ಭಾವಿಸುತ್ತಿದ್ದ ಸುಂದರ ದಿನಗಳವು. ಆದರೆ ಇಂದು ಮನೆಯಿಂದ ಹೊರಹೋಗುವುದು, ಓರಗೆಯ ಮಕ್ಕಳೊಂದಿಗೆ ಬೆರೆತು ಆಡುವುದು ಇವೆಲ್ಲವೂ ಮಗುವಿನ ಬುದ್ಧಿಮತ್ತೆ ಮೇಲೆ ದುಷ್ಪರಿಣಾಮ ಬೀರುವ ಅಸಹಜ ಪ್ರಕ್ರಿಯೆ ಎಂದು ಭಾವಿಸುವ ಪಾಲಕ ವರ್ಗ ತಮಗರಿವಿಲ್ಲದೆಯೆ ಮಕ್ಕಳ ತಿಳಿವಳಿಕೆ, ಸಾಮಾನ್ಯ ಜ್ಞಾನಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಮಕ್ಕಳನ್ನು ಬುದ್ಧಿವಂತರನ್ನಾಗಿಸುವ ಪಣದಲ್ಲಿ ಮಕ್ಕಳ ವಿಕಾಸವನ್ನು ಮನೆಯೊಳಗೆಯೇ ಬಂಧಿಸಿಡುತ್ತಿದೆ.

ರವೀಂದ್ರನಾಥ ಟ್ಯಾಗೋರ್ ತಮ್ಮ ಆತ್ಮಕಥನ ‘ಮೈ ಲೈಫ್ ಇನ್ ಮೈ ವರ್ಡ್ಸ್’ ನಲ್ಲಿ ಹೀಗೆ ಬರೆದಿದ್ದಾರೆ. ‘ನನ್ನ ದಿನದ ಬಹುಪಾಲು ಸುಂದರ ಕ್ಷಣಗಳನ್ನು ಶಾಲೆ ಕಸಿಯುತ್ತಿತ್ತು. ಆದರೆ ಬೆಳಗ್ಗೆ ಮತ್ತು ಸಂಜೆ ಸಿಕ್ಕಿದ ಉಳಿದ ಸಮಯವನ್ನು ನಾನು ಮನೆಯಿಂದ ಹೊರಗೆ ಪ್ರಕೃತಿಯಲ್ಲಿ ಕಳೆದು ಪರಮಾನಂದವನ್ನು ಪಡೆಯುತ್ತಿದ್ದೆ’ ಎಂದಿದ್ದಾರೆ ಈ ನೊಬೆಲ್ ಪುರಸ್ಕೃತ ಕವಿ. ಬಹುಶಃ ಅವರ ಆ ಮಟ್ಟದ ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಕೃತಿ ಬಹುದೊಡ್ಡ ಪ್ರೇರಣೆ ನೀಡಿರಬಹುದು. ಈ ಮಾತನ್ನು ಗಮನಿಸಿದರೆ ಇಂದು ಬುದ್ಧಿವಂತರನ್ನಾಗಿಸುವ ಭರದಲ್ಲಿ ನಾವು ಯಾವ ರೀತಿ ನಮಗೇ ತಿಳಿಯದೆ ಮಕ್ಕಳನ್ನು ಪ್ರಕೃತಿಯಿಂದ ದೂರ ಸರಿಸುತ್ತಾ ಇದ್ದೇವೆ, ಕುಬ್ಜರನ್ನಾಗಿಸುತ್ತಿದ್ದೇವೆ, ಚಿಂತನಾ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತಿದ್ದೇವೆ ಅನ್ನುವುದು ಅರಿವಾಗುತ್ತದೆ. ಒಂದು ಮಗು ಪ್ರಕೃತಿಯೊಂದಿಗೆ ಹೇಗೆ ಸಹಜವಾಗಿ ಬೆರೆಯುತ್ತದೆ ಎಂಬುದು ಪ್ರಾಯಶಃ ಇಂದಿನವರಿಗೆ ಅರಿವೇ ಇಲ್ಲ. ಈಗ ತಾನೇ ಹುಟ್ಟಿದ ಕರು, ಮನೆಯಲ್ಲಿರುವ ಸಾಕುಪ್ರಾಣಿಗಳು, ಪರಿಸರ ನೋಡುವ ಮೂಲಕ, ಹಾದಿಯುದ್ದಕ್ಕೂ ಹಕ್ಕಿಗಳ ಚಿಲಿ-ಪಿಲಿ ನಾದ ಆಲಿಸುವ ಮೂಲಕ, ತೊರೆಯ ಝುುಳು-ಝುುಳು ನಿನಾದ ವನ್ನು ಕೇಳುತ್ತ, ಬಣ್ಣ-ಬಣ್ಣದ ಚಿಟ್ಟೆಗಳನ್ನು ನೋಡುತ್ತ, ಅವುಗಳ ಹಿಂದೆ ಓಡುತ್ತ ಪಡೆಯುವ ಅನು ಭವವೇ ಬೇರೆ. ಈ ಒಡನಾಟ ಮಗುವಿನ ಮನಸ್ಸನ್ನು ವಿಕಸನಗೊಳಿಸುವ ದೊಡ್ಡ ಶಕ್ತಿಯಾಗಿ ಮಕ್ಕಳನ್ನು ಬೆಳೆಸುತ್ತಿತ್ತು.

ಪರಿಸರ ನ್ಯೂನತೆ: ನಾವು ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದಾಗುವ ನ್ಯೂನತೆ, ಏಕಾಗ್ರತೆ ಕೊರತೆಯಿಂದ ಅವರ ಬೆಳವಣಿಗೆಯಲ್ಲಾಗುವ ನ್ಯೂನತೆ ಇತ್ಯಾದಿಗಳ ಬಗ್ಗೆ ಕೇಳಿದ್ದೇವೆ. ಈಗ ಆ ಸಾಲಿಗೆ ಮತ್ತೊಂದು ಬಹುದೊಡ್ಡ ನ್ಯೂನತೆ ಸೇರಿಕೊಂಡಿದೆ. ಅದೇ ‘ಪರಿಸರ ನ್ಯೂನತೆ’. ಇಂದಿನ ಮಕ್ಕಳು ಒಂದರ್ಥದಲ್ಲಿ ಉದ್ಯಾನದ ಹೂವುಗಳು. ಬೇಲಿಯಿಂದಾಚೆಗಿನ ಪ್ರಪಂಚದ ಅರಿವಿಲ್ಲದ ಜೀವಗಳು. ನಗರದ ಅಪಾರ್ಟ್​ವೆುಂಟ್​ಗಳೆಂಬ ಸಣ್ಣ-ಸಣ್ಣ ಮನೆಗಳಲ್ಲಿ, ಶಾಲೆಯ ಗೋಡೆಗಳ ಮಧ್ಯದಲ್ಲಿ, ವಾಹನದಟ್ಟಣೆ ಮಧ್ಯೆ ಸಿಕ್ಕಿಹಾಕಿಕೊಂಡ ಕಾರಿನಲ್ಲಿ... ಇಂತಹದ್ದೇ ಗೊಂದಲಮಯ ವಾತಾವರಣದಲ್ಲಿ ಕಳೆದುಹೋಗಿರುವ ಮಕ್ಕಳಿಗೆ ಪ್ರಕೃತಿಯೊಂದಿಗಿನ ಸಂಪರ್ಕ ಅಸಾಧ್ಯದ ಮಾತು. ಇವೆಲ್ಲದರಿಂದ ಸೃಷ್ಟಿಯಾಗುವ ಪರಿಸರ ನ್ಯೂನತೆ ಅವರ ಬಾಲ್ಯ ಮಾತ್ರವಲ್ಲ, ಬದುಕಿನುದ್ದಕ್ಕೂ ಅವರ ನಡವಳಿಕೆಯನ್ನು ಸಂಪೂರ್ಣವಾಗಿ ಬದಲಿಸಬಹುದು. ಹಾಗೆ ನೋಡಿದರೆ ಕುಟುಂಬದಲ್ಲಿ ಒಂಟಿಯಾಗಿ ಏಕತಾನತೆ ಅನುಭವಿಸುವ ಮಕ್ಕಳ ಮನಸ್ಥಿತಿ ಬಗ್ಗೆ ಸಾಕಷ್ಟು ಮನಃಶಾಸ್ತ್ರೀಯ ಅಧ್ಯಯನಗಳಾಗಿವೆ. ಆದರೆ ಪ್ರಕೃತಿಯಿಂದ ಪ್ರತ್ಯೇಕವಾದ ಮಕ್ಕಳ ಮನಸ್ಥಿತಿ, ಅವುಗಳಿಂದ ಅವರ ವಿಕಸನದ ಮೇಲಾದ ಪ್ರಭಾವಗಳ ಬಗ್ಗೆ ನಡೆದ ಅಧ್ಯಯನಗಳ ಸಂಖ್ಯೆ ಸಾಕಷ್ಟು ಕಡಿಮೆಯಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಮಕ್ಕಳ ನಡುವಿನ ಸಂಪರ್ಕದ ಕುರಿತು ಅಧ್ಯಯನ ಮಾಡುವ ಉದ್ದೇಶ ಹೊಂದಿರುವ ‘ಪರಿಸರ ಮನಃಶಾಸ್ತ್ರ’ (ಇಕೋ ಸೈಕಾಲಜಿ) ಎಂಬ ಹೊಸ ಅಧ್ಯಯನ ವಿಷಯ ಇಂದು ಪ್ರಚಲಿತವಾಗುತ್ತಿದೆ.

ಮಕ್ಕಳಿಗೆ ಪ್ರಕೃತಿಯೊಂದಿಗೆ ಮತ್ತೆ ಸಂಪರ್ಕ ಏರ್ಪಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆಯೇ? ಮತ್ತೆ ಅವರೊಳಗಿನ ಮಣ್ಣಿನ ನಂಟು ಜಾಗೃತವಾಗುತ್ತದೆಯೇ? ಎಂಬ ಪ್ರಶ್ನೆ ಮೂಡಬಹುದು. ಆದರೆ ಪ್ರಕೃತಿಯೊಂದಿಗಿನ ಸಂಪರ್ಕ ಎಂದರೆ ಕೇವಲ ಕಾಡು, ಗಿಡ-ಮರ-ಬಳ್ಳಿ, ಬೆಟ್ಟ-ಗುಡ್ಡಗಳನ್ನು ನೋಡುವುದಷ್ಟೇ ಅಲ್ಲ. ಪ್ರಕೃತಿಯ ರಮಣೀಯ ನೋಟದೊಂದಿಗೆ ಅಲ್ಲಿಯ ಗಾಳಿಯಲ್ಲಿ ಬೆರೆತಿರುವ ಆಹ್ಲಾದಕರ ಸುವಾಸನೆ, ವಿವಿಧ ಜೀವ-ಜಂತುಗಳ ಸದ್ದು, ಸಹಜವಾಗಿ ಬೆಳೆದ ಹಣ್ಣಿನ ರುಚಿ, ಅದರ ಸ್ಪರ್ಶದ ಸಿಹಿ ಅನುಭವ ಇವೆಲ್ಲವನ್ನೂ ಅನುಭವಿಸುವ ಪ್ರಶಾಂತ ಮನಸ್ಥಿತಿಯನ್ನು ಸಾಧಿಸಿದಾಗಲಷ್ಟೇ ಪ್ರಕೃತಿಯ ಪರಿಪೂರ್ಣ ಆನಂದ ಸಿಗಲು ಸಾಧ್ಯ. ಆಗ ಮಾತ್ರ ಎಲ್ಲೋ ಮನಸ್ಸಿನ ಮೂಲೆಯಲ್ಲೆಲ್ಲೋ ಹುದುಗಿಹೋಗಿ ಜೀರ್ಣಾವಸ್ಥೆಯಲ್ಲಿರುವ ಪ್ರಕೃತಿಯ ನಂಟಿನ ಪ್ರಜ್ಞೆ ಮತ್ತೆ ಜಾಗೃತವಾಗಿ ಪರಮಾನಂದ ಪಡೆಯಲು ಸಾಧ್ಯ.

ಪ್ರಕೃತಿ ಚತುರತೆ: ನಮ್ಮ ಪಂಚೇಂದ್ರಿಯಗಳು ವಿಶೇಷ ಸಾಮರ್ಥ್ಯ ಪಡೆದಿರುವಂಥದ್ದು. ಆದರೆ ಇಂದು ಇವುಗಳೂ ತಮ್ಮ ಸಂವೇದನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ. ಹೋವರ್ಡ್ ಗಾರ್ಡನರ್ 1983ರಲ್ಲಿ ‘ಮಲ್ಟಿಪಲ್ ಇಂಟೆಲಿಜೆನ್ಸ್ ಥಿಯರಿ’ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅದುವರೆಗೂ ಪ್ರಚಲಿತದಲ್ಲಿದ್ದ ಕೇವಲ ಐ.ಕ್ಯು ಆಧಾರದಲ್ಲಿ ಮಗುವಿನ ಬುದ್ಧಿವಂತಿಕೆ ಅಳೆಯುವ ವಿಧಾನ ಪರಿಪೂರ್ಣವಲ್ಲ ಎಂಬುದು ಅವರ ಪ್ರತಿಪಾದನೆ. ಅದಕ್ಕಾಗಿ ಅವರು ಬುದ್ಧಿಮತ್ತೆಯನ್ನು ಅಳೆಯುವ 7 ಪ್ರತ್ಯೇಕವಾದಂಥ ಮಾನದಂಡಗಳನ್ನು ಸೂಚಿಸಿದರು. ಶಬ್ದ ಚತುರತೆ (ವರ್ಡ್ ಸ್ಮಾರ್ಟ್), ದೃಶ್ಯ ಚತುರತೆ (ಪಿಕ್ಚರ್ ಸ್ಮಾರ್ಟ್), ಅಂಕ ಚತುರತೆ (ನಂಬರ್ ಸ್ಮಾರ್ಟ್), ಸಂಗೀತ ಚತುರತೆ (ಮ್ಯೂಸಿಕ್ ಸ್ಮಾರ್ಟ್), ವ್ಯಕ್ತಿ ಚತುರತೆ (ಪೀಪಲ್ ಸ್ಮಾರ್ಟ್) ಇತ್ಯಾದಿ. ಇತ್ತೀಚೆಗೆ ಇವರು ಹೊಸದೊಂದು ಮಾನದಂಡ ಸೇರಿಸಿದ್ದಾರೆ. ಅದೇ ಪ್ರಕೃತಿ ಚತುರತೆ (ನೇಚರ್ ಸ್ಮಾರ್ಟ್). ಒಂದು ಮಗು ಎಷ್ಟರ ಮಟ್ಟಿಗೆ ತನ್ನ ಸುತ್ತಲಿನ ಪರಿಸರ, ಅದರಲ್ಲಿನ ಪ್ರಾಣಿ, ಪಕ್ಷಿ, ಮೋಡ, ಕಲ್ಲು ಇಂಥ ಅನೇಕ ಪ್ರಕೃತಿಯ ಭಾಗಗಳನ್ನು ಗುರುತಿಸಬಹುದು ಎನ್ನುವಂಥದ್ದು ಆ ಮಗುನಿನ ಬೌದ್ಧಿಕ ಸಾಮರ್ಥ್ಯ ವನ್ನು ನಿರೂಪಿಸುತ್ತದೆ ಎನ್ನುವುದು ಪ್ರಕೃತಿ ಚತುರತೆಯ ಮಾಪನ ವಿಧಾನ.

ಒಂದು ಚದರಡಿಯ ತೋಟ (Square foot garden): ನಮ್ಮಲ್ಲಿ ಯಾವುದಕ್ಕೂ ಸಮಯವಿಲ್ಲ. ಹಿಂದೆಲ್ಲ ಮನೆಯ ಹಿಂದೆ-ಮುಂದೆ ಹೀಗೆ ಎಲ್ಲೇ ಕೊಂಚ ಸ್ಥಳ ಸಿಕ್ಕಿದರೂ ಸಣ್ಣ ಹೂದೋಟ, ಮನೆಬಳಕೆಗೆ ತಕ್ಕ ತರಕಾರಿಗಳನ್ನು ಬೆಳೆಯುವ ಪರಿಪಾಠವಿತ್ತು. ದೊಡ್ಡವರ ಈ ಕೈತೋಟದಲ್ಲಿ ಚಿಕ್ಕವರೂ ಪ್ರಕೃತಿಯನ್ನು ಅರಿಯುತ್ತಿದ್ದರು. ಆದರೆ ನಗರವಾಸಿಗಳಿಗೆ ಸ್ಥಳದ ಕೊರತೆಯ ಕಾರಣ ಈ ಅವಕಾಶವಿಲ್ಲ. ಆದರೆ ಮಕ್ಕಳಿಗೆ ಗಿಡ ಬೆಳೆಯುವ, ಹೂವು ಅರಳಿ ಕಾಯಿ ಕಟ್ಟಿ, ಅದು ಹಣ್ಣಾಗುವ ಪ್ರಕ್ರಿಯೆಯ ಪರಿಚಯ ಮಾಡಿಸಲು ಅಪಾರ್ಟ್ ಮೆಂಟ್​ಗಳಲ್ಲಿ ಇರುವ ಸಣ್ಣ ಜಾಗಗಳಲ್ಲೇ ಹೂವಿನ ಕುಂಡಗಳಲ್ಲಿ ಗಿಡ ಬೆಳೆಸಿ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಗಿಡದ ಬೆಳವಣಿಗೆಯ ಪ್ರತಿಯೊಂದು ಹಂತಗಳನ್ನೂ ಗುರುತಿಸುವಂಥ ಚಟುವಟಿಕೆಗಳನ್ನು ನೀಡಬಹುದು. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಒಂದು ಚದರಡಿಯ ತೋಟ ಮೇಲೆ ಹೇಳಿದ ವಿಧಾನಕ್ಕೆ ಪೂರಕವಾದಂಥ ಉತ್ತಮ ಪರಿಕಲ್ಪನೆ.

ಮನೆಯ ಸಮೀಪದಲ್ಲೆಲ್ಲಾದರೂ ಲಭ್ಯವಿರುವ ಒಂದು ಸಣ್ಣ ಜಾಗದಲ್ಲಿ ಒಂದು ಅಡಿ ಉದ್ದ, ಒಂದು ಅಡಿ ಅಗಲದ ಮರದ ಚೌಕಟ್ಟೊಂದನ್ನು ನಿರ್ವಿುಸಿ ಅದರೊಳಗೆ ಮಣ್ಣು ಸುರಿದು, ಮೇಲೆ ಸ್ವಲ್ಪ ತರಗೆಲೆಗಳನ್ನು, ಮರದ ಸಣ್ಣ ಸಣ್ಣ ತುಣುಕುಗಳನ್ನು ಹಾಕಿ ಇಟ್ಟರೆ ಒಂದು ಚದರಡಿಯ ತೋಟ ಸಿದ್ಧವಾಗುತ್ತದೆ. ಯಾವುದೇ ಆರೈಕೆ ಮಾಡದೆ, ನೀರು ಹಾಕದೆ ಆ ಒಂದು ಚದರ ಅಡಿ ಸ್ಥಳದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎನ್ನುವುದನ್ನು ಗುರುತಿಸುವ ಚಟುವಟಿಕೆ ಮಕ್ಕಳಿಗೆ ನೀಡಿದರೆ ಅದರಿಂದ ಅವರಿಗೆ ಪ್ರಕೃತಿಯನ್ನು ಅರಿಯಲು ಸಾಧ್ಯವಾಗುತ್ತದೆ. ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ಹೀಗೆ ತರಗತಿಗಳಿಂದ ಹೊರಬಂದು ಅಧ್ಯಯನ ಮಾಡುವಂಥ ಅವಕಾಶವನ್ನು ಹೆಚ್ಚಾಗಿ ಕಲ್ಪಿಸಿಕೊಟ್ಟರೆ ಅವರು ಮತ್ತಷು ್ಟ ತೀಕ್ಷ್ಣಮತಿಗಳಾಗುತ್ತಾರೆ.

(ಲೇಖಕರು ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net